ಮೈಸೂರಿನ ಮುದುಕನ ಬೆರಳ ಪರಿಮಳ

sabir_small.jpg

 ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ  ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂದುಕೊಂಡರೆ ಆತ ಫೋನ್ ಮಾಡಿ ‘ಎಲ್ಲಿದ್ದೀಯಾ?’ ಎಂದು ಕೇಳುತ್ತಾನೆ.

 ‘ಇಲ್ಲೇ ಕಣೋ ಮುಂಬೈನಲ್ಲಿ’ ಎಂದು   ಸುಳ್ಳು ಹೇಳಿ ಆತನಿಗೆ ಫೋನ್ ನಲ್ಲಿ ಮೈಸೂರು ನಗರದ ನಾನಾ ಸದ್ದುಗಳನ್ನು ಕೇಳಿಸುತ್ತೇನೆ.ಆತ ಇದು ಮುಂಬೈ ಎಂದೇ ತಿಳಿದು ಸಖ ತ್ ಸಂಕಟ ಪಟ್ಟುಕೊಳ್ಳುತ್ತಾನೆ. ‘ನೀನು ಬಿಡು ಮಾರಾಯ ಸಖತ್ ಸುತ್ತುತ್ತೀಯಾ .ನಾನಾದರೋ ನೋಡು ಪಾಠ ಮುಗಿಸಿ ಪರೀಕ್ಷೆ ಮುಗಿಸಿ ಈಗ ಮೌಲ್ಯಮಾಪನ ಮುಗಿಸಿ ಟ್ಯಾಬುಲೇಷನ್ ನಡೆಸುತ್ತಾ ಇರುವೆ . ಇನ್ನು ಬರುವ ವಾರ ಗೃಹ ಪ್ರವೇಶ. ಮನೆಗೆ ಬಾಗಿಲೇ ಆಗಿಲ್ಲ . ಮರ ತರಲಿಕ್ಕೆ ತೀರ್ಥಹಳ್ಳಿಗೆ ಹೋಗಬೇಕು.ತುಂಬಾ ಹಳ್ಳಿ ಮಾದರಿಯಲ್ಲಿ ಕಟ್ಟಿಸ್ತಾ ಇದೀನಿ ಕಣೋ.ನೀನು ಬರಬೇಕು’ ಅನ್ನುತ್ತಾನೆ.

 ‘ಇಲ್ಲ ಮಾರಾಯ ಇಲ್ಲಿ ಮುಂಬೈನಲ್ಲಿ ಇನ್ನು ಏಳು ದಿನ ಸುತ್ತಲಿಕ್ಕಿದೆ.ಆಮೇಲೆ ಹಡಗಿನಲ್ಲಿ ಕುಳಿತು ಗೋವಾಕ್ಕೆ ಬಂದು ನಂತರ ಕೊಂಕಣ ರೈಲಿನಲ್ಲಿ ಮಂಗಳೂರು. ಅಲ್ಲಿ ಫ್ರೆಂಡ್ ಮನೆಯಲ್ಲಿದ್ದು ಆನಂತರ ಮೈಸೂರು’ಎಂದು ಆತನನ್ನು ಇನ್ನಷ್ಟು ಮೈ ಉರಿಸಿ ಮೈಸೂರಿನ ಬೀದಿಗಳನ್ನು ಹೊಕ್ಕು ಬಿಡುತ್ತೇನೆ. ನಿಜಕ್ಕೂ ನಾನೆಲ್ಲಿದ್ದೇನೆ ಎಂದು ನನಗೇ ಗೊತ್ತಾಗುವುದಿಲ್ಲ.

 ಮೊನ್ನೆ ಒಂದು ಇರುಳು ಹೆಂಡತಿ ಮಕ್ಕಳನ್ನು ಮದುವೆ ಮನೆಗೆ ಬಿಟ್ಟು ಮದುವೆ ಮುಗಿಯುವವರೆಗೆ ಏನು ಮಾಡುವುದು ಎಂದು ಗೊತ್ತಾಗದೆ ಮೈಸೂರಿನ ಗಾಂಧಿ ಚೌಕದ ನನ್ನ ನೆಚ್ಚಿನ ಮೂಲೆಯಲ್ಲಿ ನಿಂತಿದ್ದೆ. ಒಂದು ಕೈಯಲ್ಲಿ ಕೊಳೆತ ಸೇಬು ಹಣ್ಣು ಹಿಡಿದು ಇನ್ನೊಂದರಲ್ಲಿ ಯಾರೋ ಬಿಸಾಕಿದ್ದ ಬೀಡಿ ಸೇದುತ್ತಾ ಮುಖವನ್ನು ಬೇಕೆಂತಲೇ ವಕ್ರ ಮಾಡಿಕೊಂಡು,ಉಡುಪನ್ನು ಬೇಕಂತಲೇ ಕೊಳಕು ಮಾಡಿಕೊ೦ಡಿದ್ದ ಮುದುಕನೊಬ್ಬ ಹತ್ತಿರ ಬಂದು ನನ್ನನ್ನು ಕೆಕ್ಕರಿಸಿ ನೋಡಲು ತೊಡಗಿದ. ಅವನಿಗೇನೂ ಕಡಿಮೆಯಿಲ್ಲವೆಂಬಂತೆ ನಾನೂ ಕೆಕ್ಕರಿಸಿ ನೋಡಿದೆ. ಆತ ಹಾಗೇ ವಿಕಾರವಾಗಿ ನೋಡುತ್ತಾ ‘ಏನೋ ದೊಡ್ಡ ಮನುಷ್ಯನಂತೆ ನೋಡುತ್ತಿದ್ದೀಯಾ ನೀನು ಸೇದುತ್ತಿರುವ ಅದೇ ಸಿಗರೇಟು ನನಗೆ ಕೊಡಿಸು’ ಎಂದು ಕೇಳಿದ.ಕೊಡಿಸಿದೆ. ‘ಬೆಂಕಿ ಕಡ್ಡಿಯಿಲ್ಲ’ ಅಂದ . ಹೊತ್ತಿಸಿ ಕೊಟ್ಟೆ. ಕೈಯಲ್ಲಿದ್ದ ಬೀಡಿತುಂಡು ಹೊಸಕಿ ಅಂಗಿ ಜೇಬೊಳಕ್ಕೆ ಇಳಿಸಿ ಕೊಳೆತ ಸೇಬನ್ನ ಚಡ್ಡಿ ಜೇಬೊಳಕ್ಕೆ ಎಸೆದು ‘ಟೀ ಕುಡಿಸು’ ಅಂದ. ಚೋಟಾ ಟೀ ಕುಡಿಸಿದೆ. ಆತ ಇನ್ನೂ ಉಗ್ರನಾಗಿ ‘ತುಂಬಾ ಜೋರಿರುವ ಹಾಗಿದ್ದೀಯ. ಹತ್ತು ನಿಮಿಷ ಇಲ್ಲೇ ಕೂರು ಬರುತ್ತೇನೆ ಮಾತನಾಡುವುದಿದೆ ಇದನ್ನ ನೋಡಿಕೋ’ ಅಂತ ತನ್ನ ಕೊಳಕು ರುಮಾಲನ್ನೂ ಹರಿದ ಚೀಲವನ್ನೂ ನನ್ನ ಕಾಲ ಕೆಳಕ್ಕೆ ಇಟ್ಟು ಮಾಯವಾಗಲು ನೋಡಿದ.

‘ಎಲ್ಲಿಗೆ?’ ಅಂತ ಕೇಳಿದೆ . ನಿನಗೆ ಯಾತಕ್ಕೆ ಅನ್ನುವ ಹಾಗೆ ನಕ್ಕು ಹೊರಡಲನುವಾದ. ‘ಏ ಮುದುಕ , ನಿನಗೆ ಐದು ನಿಮಿಷ ಕೊಡುತ್ತೇನೆ.ಬಂದರೆ ಇರುತ್ತೇನೆ.ಬಾರದಿದ್ದರೆ ನಿನ್ನ ಗಂಟು ಮೂಟೆ ಬಿಟ್ಟು ಹೋಗುತ್ತೇನೆ’ಎಂದು ಹೇಳಿದೆ. ‘ನೀನು ತುಂಬಾ ಜೋರಿರುವೆ.ನನಗೆ ಯಾರೂ ಹೀಗೆ ಅಂದಿರಲಿಲ್ಲ.ಬರುತ್ತೇನೆ ಇರು’ ಎಂದು ಮುದುಕ ಮಾಯವಾದ.ಮತ್ತೆ ಐದೇ ನಿಮಿಷದಲ್ಲಿ ತೂರಾಡುತ್ತಾ ಬಂದ.ಆದರೂ ಆತನ ಮುಖದಲ್ಲಿ ಒಂದು ತುಂಟ ನಗುವಿತ್ತು. ‘ ಬಾ ಮಾತನಾಡುವಾ’ ಎಂದು ಕರೆದ. ‘ಇಲ್ಲ. ನನಗೆ ಹೋಗ ಬೇಕು .ಬಹುಶಃ ಮದುವೆ ಮುಗಿದಿರಬೇಕು.ಹೆಂಡತಿ ಮಕ್ಕಳು ಕಾಯುತ್ತಾರೆ’ಎಂದು ನಡೆಯಲು ನೋಡಿದೆ. ‘ಐದು ನಿಮಿಷ ಕೂರು’ ಎಂದ. ನೀನೂ ನಾನೂ ಒಂದೇ ಹಾದಿಯ ಪಯಣಿಗರು’.ಎಂದು ಉರ್ದುವಿನಲ್ಲಿ ಹೇಳಿದ.

ನಂತರ ‘ನಿನ್ನ ಮನಸ್ಸಿನಲ್ಲಿರುವುದು ನಡೆಯುತ್ತದೆ’ಎಂದು ಹೇಳಿದ. ನನ್ನ ಮನಸ್ಸಿನಲ್ಲಿರುವುದನ್ನ ಊಹಿಸಿ ಅದೆಲ್ಲಾದರೂ ನಡೆದುಬಿಟ್ಟರೆ ಅನಿಸಿ ನಗುಬಂತು. ‘ ಬಹುತೇಕ ಅದು ನಡೆಯದಿರುವುದು ಒಳ್ಳೆಯದು’ ಎಂದು ಗಹಗಹಿಸಿದೆ.  ‘ ಬಹುಶಃ ತಾವು ಯಾರೋ ದೊಡ್ಡ ಸೂಫಿ ಸಂತರಿರಬೇಕು’ ಎಂದು ಲೇವಡಿ ಮಾಡಿದೆ.ಮುದುಕನಿಗೆ ಏನನ್ನಿಸಿತೋ ಗೊತ್ತಿಲ್ಲ.

 ‘ಈ ನನ್ನ ಹೆಬ್ಬೆರಳನ್ನು ಮೂಸಿ ನೋಡು’ ಎಂದು ತನ್ನ ಹೆಬ್ಬೆರಳನ್ನ ನನ್ನ ಮೂಗಿನ ಬಳಿ ತಂದ.ಬಹುಶಃ ನಾನು ನನ್ನ ಜೀವ ಮಾನದಲ್ಲಿ ವಾಸನೆ ಮಾಡಿರದ ಒಂದು ರೀತಿಯ ದಿವ್ಯ ಪರಿಮಳ.ಮುದುಕ ‘ನಾನು ಯಾರು ಈಗಲಾದರೂ ಗೊತ್ತಾಯಿತಾ?’ ಎಂದು ಕೇಳಿದ.ಇನ್ನೂ ಇಲ್ಲವೆಂಬಂತೆ ನೋಡಿದೆ. ‘ಹಾಗಾದರೆ ನಿನ್ನನ್ನು ನನ್ನ ಬಳಿ ಕಳಿಸಿದವನೂ ನಾನೂ ನೀನೂ ಒಂದು ಕಡೆ ಸಂಧಿಸಿದಾಗ ನಿನಗೆ ಅರಿವಾಗುತ್ತದೆ.ಈಗ  ನೀನು ಹೋಗು’ಎಂದು ಹೇಳಿ ಮಾಯವಾದ.

 ನಾನು ಈಗಲೂ ಆ ಮುದುಕನನ್ನೂ ಆತನ ಬಳಿ ನನ್ನನ್ನು ಕಳಿಸಿದ ಇನ್ನೊಬ್ಬ ಅಜ್ನಾತ ಮುದುಕನನ್ನೂ ಒಂದು ರೀತಿಯ ತಮಾಷೆಯಿಂದಲೇ ಹುಡುಕುತ್ತಿರುತ್ತೇನೆ.ಅವರಿನ್ನೂ ಕಾಣಿಸಿ ಕೊಂಡಿಲ್ಲ.ಆದರೆ ಆ ಮುದುಕನ ಹೆಬ್ಬೆರಳಿನ ದಿವ್ಯ ಪರಿಮಳ ನನ್ನ ಮೂಗ ತುದಿಯಲ್ಲಿ ಇನ್ನೂ ಕುಳಿತೇ ಇದೆ.

Advertisements