ಷಿಲ್ಲಾಂಗ್ ನಿಂದ ಒಂದು pleasing ಪತ್ರ

ಒಂದು ಸುಂದರವಾದ ಉದ್ದವಾದ  ಹಗಲನ್ನು ಸುತ್ತಿ ಮುಗಿಸಿ ಬಂದು ನಿಮಗೆ ಬರೆಯಲು ಕುಳಿತಿದ್ದೇನೆ. ಯಾವ ಹಂಗೂ ಇಲ್ಲದ ಯಾವ ಗ್ರಂಥ, ವಿಚಾರ, ವಿಮರ್ಶೆ, ಚಿಂತನೆ ಏನೂ ಇಲ್ಲದ ಹಗಲು. ಸುಮ್ಮನೆ ಆಕಾಶವನ್ನೇ ನೋಡುತ್ತಿದ್ದೆ. ನಾನು ಎಂದೂ ನೋಡಿರದ ಕಡುನೀಲಿ ಆಕಾಶ. ದೂರದಿಂದ ದಾರಿ ಕೇಳಿಕೊಂಡು ತುಂಬಾ ದೂರದ ನೆಂಟರಂತೆ ಸಂಬಂಧ ಹುಡುಕಿಕೊಂಡು ಬರುತ್ತಿರುವ ಮೋಡಗಳು ಅಲ್ಲೇ ಸಂಕೋಚದಿಂದ ನಿಂತಿವೆ. ಅದರ ಹಿಂದಿರುವ ಮೋಡಗಳ ಗುಂಪು ತಡೆಹಿಡಿಯಲಾಗದೆ ಅಲ್ಲೇ ನಿಂತುಕೊಂಡಲ್ಲೇ ಮಳೆ ಸುರಿಸುತ್ತಿವೆ. ದೂರದಲ್ಲೆಲ್ಲೋ ಸುರಿಯುತ್ತಿರುವ ಮಳೆಯ ಗಾಳಿ ತಣ್ಣಗೆ ಈ ಪಟ್ಟಣವನ್ನು ಹಾದು ಹೋಗುತ್ತಿದೆ.khasi30_m.jpg ನಾನು ಸಣ್ಣಗೆ ಬೆವರಿಕೊಂಡು ಒಂದು ಸಣ್ಣ ಹೋಟೇಲೊಳಕ್ಕೆ ಹೊಕ್ಕು ಕುಳಿತೆ. ಈ ಊರಲ್ಲಿ ಈ ತರಹದ ಸಣ್ಣ ಹೋಟೆಲುಗಳೆಂದರೆ ಪುಟ್ಟಪುಟ್ಟ ತರುಣಿಯರು ನಡೆಸುವ ಹೋಟೆಲ್ಲು. ಹಾಲಿಲ್ಲದ ಕಪ್ಪು ಚಹಾಕ್ಕೆ ‘ಸಾಸೋ’ ಎನ್ನುತ್ತಾರೆ ಮತ್ತೆ ‘ಪತಾರೋ’ ಎಂಬ ಅಕ್ಕಿಯಿಂದ ಅರೆದು ಮಾಡಿದ ಓಡು ದೋಸೆಯಂತಹ ತಿಂಡಿ. ಅದರ ಜೊತೆ ಆಡಿನ ಕರುಳಿನ ಪಲ್ಯ. ಯಾವುದಕ್ಕೂ ಉಪ್ಪು, ಹುಳಿ, ಖಾರ, ಏನೂ ಇಲ್ಲ. ಬೇಕಾದರೆ ಉಪ್ಪನ್ನು ನೆಕ್ಕಿ ಹಸಿ ಮೆಣಸನ್ನು ಅದರ ಜೊತೆ ಕಚ್ಚಿ ತಿನ್ನಬಹುದು. ನಾನು ಒಂದೊಂದೇ ತಿನಿಸಿನ ಹೆಸರು ಕೇಳಿಕೊಂಡು ತಿನ್ನುತ್ತ ಹೋಟೆಲ್ಲಿಗೆ ಹೋಗಿ ಬರುವವರನ್ನು ನೋಡುತ್ತಾ ಕುಳಿತಿದ್ದೆ. ಈ ತರಹ ನನ್ನಂತಹ ಹೊರಗಿನವನು ಇಂತಹ ಹೋಟೆಲ್ಲುಗಳಲ್ಲಿ ಒಬ್ಬನೇ ಕುಳಿತುಕೊಳ್ಳುವುದು ಕೊಂಚ ಅಪಾಯದ ಕೆಲಸ. ಆದರೂ ಕುಳಿತಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಾನು ಎಲ್ಲರನ್ನೂ ನೋಡುತ್ತಿದ್ದೆ. ಹೋಟೆಲ್ಲಿನ ಒಬ್ಬಳು ತರುಣಿ ಆಗ್ಗಿಂದಾಗ್ಗೆ ಸಿಕ್ಕಾಪಟ್ಟೆ ಮೈಯನ್ನೆಲ್ಲಾ ಸಿಕ್ಕಿದಲ್ಲೆಲ್ಲಾ ಕೆರೆದು ಕೊಳ್ಳುತ್ತಿದ್ದಳು. ನಾನು ತುಂಬಾ ಹೊತ್ತು ನೋಡುತ್ತಿದ್ದವನು ಆಮೇಲೆ ತಡೆಯಲಾರದೆ ಏನಾಯಿತು ಅಂತ ಕೇಳಿದೆ. ಆಕೆ ಪಕ್ಕನೆ ನಾಚಿಕೊಂಡವಳು. ಆಮೇಲೆ ಹಾ ಹೋ ಹೀ ಹೀ ಅಂತೆಲ್ಲಾ ಹೇಳತೊಡಗಿದವಳು. ಕೊನೆಗೂ ಕಾರಣ ಹೇಳಲಾಗದೆ ತನ್ನ ಗೆಳತಿಯರ ಕಿವಿಗೆ ನನ್ನ ಪ್ರಶ್ನೆಯನ್ನು ದಾಟಿಸಿಬಿಟ್ಟಳೂ. ಕೊನೆಗೆ ಎಲ್ಲರೂ ಗೊಳ್ಳೆಂದು ನಗಲು ಶುರುಮಾಡಿದರು. ಲಂಕೇಶ್ ಎಷ್ಟು ಚೆನ್ನಾಗಿತ್ತು ಆ ಹೋಟೆಲ್ಲು, ಕೆರೆತ, ಅವಳ ಅವಮಾನ, ನಾಚಿಕೆ, ಕೊನೆಗೆ ಆ ಎಲ್ಲಾ ಸುಂದರಿಯರ ಮುಖದಲ್ಲೂ ಮೂಡಿಬಂದ ನಗು ಮತ್ತು ಅಟ್ಟಹಾಸ. ನಾನಂತೂ ನನ್ನ ಪ್ರಶ್ನೆಗೆ ನಾನೇ ನಾಚಿಕೊಂಡು ಮತ್ತೆ ನಡೆಯಲು ತೊಡಗಿದೆ. ಹೀಗೆಯೇ ಯಾವತ್ತೂ ನಡೆಯುತ್ತಲೇ ಇದ್ದರೆ, ಈ ಸಂಜೆಯೆಂಬುದು ಮುಗಿಯದೇ ಇದ್ದಿದ್ದರೆ, ಈ ಸೂರ್ಯನ ಬೆಳಕಲ್ಲಿ ಇನ್ನಷ್ಟು ಈ ಕೆನ್ನೆಗಳು ಹೀಗೆ ಪ್ರತಿಫಲಿಸುತ್ತಲೇ ಇದ್ದಿದ್ದರೆ….

ನಾನು ಮೊನ್ನೆ ಇಲ್ಲಿ ಗೆಳಯನೊಬ್ಬನ ಹಳ್ಳಿಯ ಮನೆಗೆ ಹೋಗಿಬಂದೆ. ಹಳ್ಳಿಯೆಂದರೆ ಹಳೆಯ ಬೈಬಲ್ ಒಡಂಬಡಿಕೆಯ ದೃಶ್ಯದಂತೆ ಇರುವ ಹಳ್ಳಿ. ಹಳ್ಳಿಯ ದಾರಿಯಲ್ಲೆಲ್ಲಾ ಮಂಜು ಮುಸುಕಿ ಕುರಿ ಕಾಯುವ ಹುಡುಗ ಹುಡುಗಿಯರು ಮೈಯ ತುಂಬಾ ಕಂಬಳೀ ಹೊದ್ದುಕೊಂಡು ಯಾವುದು ಮಂಜು, ಯಾವುದು ಮನುಷ್ಯರು, ಯಾವುದು ಮರ, ಒಂದೂ ಗೊತ್ತಾಗುತ್ತಿರಲಿಲ್ಲ. ಮನೆಗೆ ಹೋದರೆ ಆ ಮನೆಯೂ ಕೂಡ ಮಂಜಿನೊಳಗೆ ಸಿಲುಕಿ ಹಾಕಿಕೊಂಡಿತ್ತು. ಕಾವಿಗೆ ಕೂತ ಕೋಳಿ, ಮರಿಗಳನ್ನು ಹೊಟ್ಟೆಯ ಕೆಳಗೆ ಇಟ್ಟುಕೊಂಡು ಸಲಹುತ್ತಿರುವ ಕೋಳಿ, ರೊಪ್ಪೆಯಲ್ಲಿ ಮುಲುಗುಡುತ್ತಿರುವ ಹಂದಿಗಳ ಸಮೂಹ, ಒಲೆಯಲ್ಲಿ ದೊಡ್ಡ ತಪ್ಪಲೆಯಲ್ಲಿ ಬೇಯುತ್ತಿರುವ ಆಲೂಗಡ್ಡೆಯ ರಾಶಿ. ನನ್ನ ಗೆಳೆಯನ ತಾಯಿ ಬೆಂದ ಆಲೂಗೆಡ್ಡೆಯ ಸಿಪ್ಪೆ ಸುಲಿದು, ನನ್ನ ಮುಂದೆ ಇಟ್ಟು ಇನ್ನೊಂದು ಪಾತ್ರೆಯಲ್ಲಿ ಉಪ್ಪು ಮೆಣಸು ಈರುಳ್ಳಿ ಕಲಸಿ ಇಟ್ಟು ನಾವು ತಿನ್ನುವುದನ್ನೇ ನೋಡುತ್ತಿದ್ದಳು. ಆಕೆಯ ಭಾಷೆ ನನಗೆ ಬರುತ್ತಿರಲಿಲ್ಲ. ನಾನು ಯಾವ ಭಾಷೆಯಲ್ಲಿ ಮಾತನಾಡಿದರೂ ಆಕೆಗೆ ಗೊತ್ತಾಗಲಿಲ್ಲ. ನಾವಿಬ್ಬರೂ ಬಾಯಿಬಾರದ ಪ್ರಾಣಿಗಳಂತೆ ಒಬ್ಬರನ್ನೊಬ್ಬರು ಮನಸ್ಸಿನಲ್ಲಿಯೇ ಮಾತನಾಡಿದೆವು. ಗಾಳಿಗೆ ಅವರ ಮನೆಯ antennae ಬಿದ್ದು ಹೋಗಿತ್ತು. ಆಮೇಲೆ ಹಿತ್ತಲಿನಲ್ಲಿದ್ದ ಬಿದಿರು ಮಳೆಯಿಂದ ಉದ್ದದ ಬಿದಿರೊಂದನ್ನು ಕಡಿದು ಮನೆಯ ಮಾಡಿಗೆ ಹತ್ತಿ antennae ಬಿಗಿದು ಸರಿ ಮಾಡಿಕೊಟ್ಟುಬಂದೆವು. ಬರುವಾಗಲೂ ನಮಗೆ ಮಂಜಿನಲ್ಲಿ ದಾರಿ ಕಾಣಿಸುತ್ತಲೇ ಇರಲಿಲ್ಲ.
ಬೇರೆ ಏನು ಬರೆಯಲಿ? ಮೊನ್ನೆ ಗೆಳೆಯರೊಬ್ಬರು ಮೈಸೂರಿನಿಂದ ಫೋನ್ ಮಾಡಿ ಮಾತನಾಡುತ್ತಾ, ನಡುವಲ್ಲಿ ‘ನೀನು ಯಾಕೋ ಲಂಕೇಶರನ್ನು please ಮಾಡಲು ನೋಡುತ್ತಿದ್ದೀಯ ಹಾಗೆಲ್ಲಾ ಮಾಡಬೇಡ’, ಅಂತ ಬುದ್ಧಿ ಹೇಳಿದರು. ನನಗೆ ಮೊದಲು ಏನೂ ಹೊಳೆಯಲಿಲ್ಲ. ಆಮೇಲೆ ಎಂತಹ pleasing ಮಹರಾಯರೆ, ನಾನು ಬರೆಯುತ್ತಿರುವುದು ಬರಿಯ ಪತ್ರ. ಅದರಲ್ಲಿ pleasing ಇಲ್ಲದಿದ್ದರೆ ಅದು ಮತ್ತೆ ಎಂತಹ ಪತ್ರ ಅಂತ ಏನೇನೋ ಹೇಳಿದೆ. ಅವರಿಗೆ ಗೊತ್ತಾದ ಹಾಗೆ ಕಾಣಲಿಲ್ಲ.

ನಮಗೆ ಮನುಷ್ಯನಲ್ಲಿರುವ ಮಗು ಗೊತ್ತಾಗದೆ ಹೋದರೆ….. ಮತ್ತು ಮಗುವಿನೊಳಗೆ ಬೆಳೆದಿರುವ ಮರದ ಬೇರು ಕಾಣಿಸದೇ ಹೋದರೆ, ಹೀಗೆ ಅಸಹಜವಾದ ತರ್ಕ ಶಾಸ್ತ್ರಗಳು ಬೆಳೆಯುತ್ತಾ ಹೋಗುತ್ತವೆ ಅಂತ ಅನಿಸುತ್ತದೆ. ಇಲ್ಲಿಗೆ ನಿಲ್ಲಿಸುವೆ. ಆದರೆ ಬರುವ ವಾರ ಪತ್ರದಲ್ಲಿ ಒಂದು ಪುಟ್ಟ ಕತೆಯೊಂದನ್ನು ಕಳಿಸುವೆ. ಇದು ಕತೆಯೋ ನಿಜವೋ ಎಂದು ನನಗೆ ಇನ್ನೂ ಗೊತ್ತಾಗುತ್ತಿಲ್ಲ. ಸುಮ್ಮನೆ ಅನುಭವಿಸುತ್ತಿದ್ದೇನೆ.

Advertisements