ಶಾಲೆಯೆಂಬ ಲೋಕದ ಎಳೆಯರಾದ ನಾಯಕರು

 

dsc_0046-2.jpgಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ ನಾಯಕರುಗಳಾಗಿದ್ದರು. ಹುಟ್ಟಿ ಹತ್ತೋ ಹದಿನಾರೋ ವರ್ಷಗಳಾಗಿರುವ ಈ ಹುಡುಗರು ಶಾಲಾ ನಾಯಕರುಗಳಾಗಿರುವುದು ಖುಷಿಯ ವಿಷಯವಾದರೂ ಇವರ ಚಿತ್ರಗಳು ಸಾಧಾರಣವಾಗಿ ನಾಯಕ ಮಣಿಗಳೂ. ತೀರಿ ಹೋದವರೂ ಆಗಿರುವವರ ಚಿತ್ರಗಳ ಜೊತೆ ಕಂಗೊಳಿಸುತ್ತಿರುವುದು ಕೊಂಚ ಹೆದರಿಕೆಯ ಅದಕ್ಕಿಂತಲೂ ತೀರಾ ಮುಜುಗರದ ಸಂಗತಿಯಾಗಿ ಕಂಡಿತು.

ಪ್ರಪಂಚ ಬದಲಾಗುತ್ತಿರುವುದು ನಿಜವಾದರೂ, ಈ ನಿಮಿಷದ ಸಂಗತಿಗಳು ಇನ್ನೊಂದು ನಿಮಿಷಕ್ಕೆ ಅಸಂಗತವಾಗುವಷ್ಟು  ಪ್ರಪಂಚ ಬೆಳೆಯುತ್ತಿರುವುದು ಸತ್ಯವಾದರೂ, ನಿನ್ನೆ ಮೊನ್ನೆಯಷ್ಟೇ ಶಾಲೆಯ ಸಾಲು ಬೆಂಚುಗಳಲ್ಲಿ ಕೂತು ನಮ್ಮ ಟೀಚರುಗಳನ್ನೂ, ಅವರು ಹೇಳುತ್ತಿರುವ ಸಂಗತಿಗಳನ್ನೂ ದೊಡ್ಡ ಕಣ್ಣು ದೊಡ್ಡ ಕಿವಿಗಳಿಂದ ಕೇಳುತ್ತಿದ್ದಂತೆ ಈಗಲೂ ಅನಿಸುತ್ತಿರುವ ನನಗೆ ಈ ಹುಡುಗರು ಶಾಲ ನಾಯಕರುಗಳಾದುದನ್ನು ಡಂಗುರ ಬಾರಿಸಿ ಸಾರುತ್ತಿರುವ ಈ ಚಿತ್ರಗಳು ಕೊಂಚ ಅಸಹಜವಾಗಿಯೂ, ಅತಿರೇಕವಾಗಿಯೂ ಕಂಡು ದುಃಖವೆನಿಸಿತು. ಶಾಲೆಯೆಂಬ ಪುಟ್ಟ ಜಗತ್ತಿನೊಳಗೆ ನಾಯಕರಾಗಿಯೂ, ಮಂತ್ರಿಗಳಾಗಿಯೂ ಖುಷಿ ಮುಜುಗರದಿಂದ ಓಡಾಡುವ ಈ ಹುಡುಗರ ಚಿತ್ರಗಳು ಅಧಿಕಾರ, ಪ್ರಚಾರ, ಆಮಿಷಗಳಿಂದ ಕೂಡಿದ ದೊಡ್ಡವರ ಪ್ರಪಂಚದಲ್ಲಿ ಹೀಗೆ ಅನಾಯಾಸವಾಗಿ ಅಚ್ಚಾಗಿರುವುದು ಕಂಡು ನಗುವೂ ಬಂತು.

ಈ ಹುಡುಗರ ಜಾಹಿರಾತುಗಳನ್ನು ನೋಡಿ ನನಗೆ ಯಾಕೆ ಖೇದವಾಗಬೇಕು? ಬರಲಾರದೆ ಹೊರಟು ಹೋದ ನನ್ನ ಶಾಲೆಯ ದಿನಗಳು. ಆಲ್ಲಿಯ ಚುನಾವಣೆಗಳ, ಅಲ್ಲಿಯ ಸೋಲು ಗೆಲುವುಗಳ ಕುರಿತ ಸಂಕಟವೂ ಈ ಖೇದಕ್ಕೆ ಕಾರಣವಿರಬಹದು. ನಾಯಕರೂ, ಮಂತ್ರಿಗಳೂ ಆಗಿ ಮೆರೆದಿದ್ದ ನಮ್ಮ ಚಿತ್ರಗಳು ಆ ಕಾಲದಲ್ಲಿ ಪತ್ರಿಕೆಯಲ್ಲಿ ಬಂದಿದ್ದರೆ ನಮಗೆ ಏನನಿಸುತ್ತಿತ್ತು? ನಮ್ಮ ಅಪ್ಪ ಅಮ್ಮಂದಿರಿಗೆ ಏನನಿಸುತ್ತಿತ್ತು? ನಮ್ಮ ಗುರುಗಳು ಏನೆಂದುಕೊಳ್ಳುತ್ತಿದ್ದರು? 

ಮನೆಯಲ್ಲಿ ಬೈಯಸಿಕೊಂಡೂ, ಕಿವಿ ಹಿಂಡಿಸಿಕೊಂಡೂ ಓಡಾಡುತ್ತಿದ್ದ ಪಡ್ಡೆ ಹುಡುಗರಾಗಿದ್ದ ನಾವು ಶಾಲೆಗಳಲ್ಲಿ ನಾಯಕರೂ ಮಂತ್ರಿಗಳೂ ಆಗಿದ್ದೆವು. ಶಾಲೆಯ ನಾಯಕರಾಗಿದ್ದ ನಮ್ಮನ್ನು ಮನೆಯಲ್ಲಿ ಕ್ಯಾರೇ ಅನ್ನುತ್ತಿರಲಿಲ್ಲ. ಮಗ ಶಾಲೆಯಲ್ಲಿ ಮಂತ್ರಿಯಾದರೂ ತಾಯಿ ಒಂದು ದೋಸೆಯೂ ಹೆಚ್ಚು ಹಾಕುತ್ತಿರಲಿಲ್ಲ. ಏಕೆಂದರೆ ಅವರಿಗೆ ಯಾರಿಗೂ ಈ ಶಾಲೆಗಳೂ, ಚುನಾವಣೆಗಳೂ, ನಾಯಕರೂ ಗೊತ್ತೇ ಇರಲಿಲ್ಲ. ಗದ್ದೆಗಳು ಕಳೆದು ಕಾಡುಗಳು ಕಳೆದು ಗುಡ್ಡದ ತುದಿಯಲ್ಲಿದ್ದ ನಮ್ಮ ಶಾಲೆಯನ್ನು ತಲುಪಲು ನಾವು ಹುಡುಗ ಹುಡುಗಿಯರು ನದಿಯ ಬದಿಯ ಕಾಲು ಹಾದಿಯನ್ನು ಹಿಡಿದು  ಹೋಗಬೇಕಿತ್ತು. ನದಿಯನ್ನೂ, ನದಿಯ ನೀರನ್ನೂ, ಮುಳಗೇಳುತ್ತಿದ್ದ ಮೀನುಗಳನ್ನೂ, ಈಜುತ್ತಿದ್ದ ಹುಡುಗರನ್ನೂ ನೋಡಿಕೊಂಡು, ಗಿಡಮರ ಮುಳ್ಳು ಬಳ್ಳಿಗಳನ್ನು ಸವರಿಕೊಂಡು ಮನೆಯಿಂದ ಕಟ್ಟಿ ಕೊಟ್ಟ ಬುತ್ತಿಯನ್ನು ಕರವಸ್ತ್ರದಲ್ಲಿ ಕಟ್ಟಿಕೊಂಡು ನಡೆಯುತ್ತಿದ್ದ ನಮ್ಮ ಎಣ್ಣೆಮೆತ್ತಿದ ತಲೆಗಳು ಬೆಳಗಿನ ಬಿಸಿಲಿಗೆ ಹೊಳೆಯುತ್ತಿದ್ದವು. ನಾವು ನಮ್ಮ ಮನೆಯವರನ್ನೂ, ನೆರೆಹೊರೆಯವರನ್ನೂ ನೆನೆದುಕೊಂಡು, ಶಾಲೆಗೆ ಬಾರದೆ ಆಡು ಮೇಯಿಸುವ ನಮ್ಮ ಗೆಳೆಯರ ಯೋಚಿಸಿಕೊಂಡು ,ಶಾಲೆಯಿರುವ ಗುಡ್ಡ ಹತ್ತಿರವಾಗುತ್ತ ನಾವು ಮನೆಯನ್ನು ಮರೆತು ನೆರೆಕೆರೆಯವರನ್ನೂ ಮರೆತು ಶಾಲೆಯೆಂಬ ಲೋಕದ ಒಳಕ್ಕೆ ಹೊಕ್ಕುಬಿಡುತ್ತಿದ್ದೆವು. ಆ ಶಾಲೆಯ ಮಹಾಬೇಲಿಗಳನ್ನೂ ಮಹಾ ಕಟ್ಟಡಗಳನ್ನೂ ಅಲ್ಲಿಯ ಪುಸ್ತಕಗಳನ್ನೂ ಎಲ್ಲವನ್ನು ತಿಳಿದುಕೊಂಡಂತಿರುವ ನಮ್ಮ ಗುರುಗಳನ್ನೂ ಯೋಚಿಸುತ್ತಿದ್ದಂತೆ ನಾವು ಅಧೀರರಾಗುತ್ತಿದ್ದೆವು. ನಮಗೆ ಹೆದರಿಕೆಯಾಗುತ್ತಿತ್ತು. ಅದೂ ಅಲ್ಲದೆ ನಮ್ಮಲ್ಲಿ ಕೆಲವರು ಆ ಶಾಲೆ ಎಂಬ ಲೋಕದ ಎಳೆಯರಾದ ನಾಯಕರಾಗಿದ್ದೆವು.ಸಾಲು ಸಾಲಾಗಿ ಕಾಡುಹಾದಿಯಲ್ಲಿ ನಡೆದು ಬರುತ್ತಿರುವ ನಮ್ಮಲ್ಲಿ ಒಬ್ಬ ಶಾಲಾ ನಾಯಕರನೂ, ಹಲವರು ಶಾಲಾ ಮಂತ್ರಿಗಳೂ, ಇನ್ನೊಬ್ಬನು ಶಾಲೆಯ ಸಂಸತ್ತಿನ ಸ್ಪೀಕರನೂ ಆಗಿದ್ದನು. ಒಬ್ಬಳು ಹುಡುಗಿ ವಾರ್ತಾ ಮಂತ್ರಿಯಾಗಿದ್ದಳು. ಅವಳ ಮನೆಗೆ ಮಾತ್ರ  ಬೆಳಗಿನ ಪತ್ರಿಕೆ ಬರುತ್ತಿದ್ದುದರಿಂದ ಆ ಹುಡುಗಿಯು ಪತ್ರಿಕೆಯ ಸುದ್ದಿಗಳನ್ನು ನೋಟುಬುಕ್ಕಿನಲ್ಲಿ ಬರೆದು ತಂದು ಬೆಳಿಗ್ಗೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥನೆ ಸಲ್ಲಿಸಿದ ನಂತರ ಆಕೆ ನಡುಗುತ್ತಲೂ ಉಗ್ಗುತ್ತಲೂ ವಾರ್ತೆಗಳನ್ನು ಓದುತ್ತಿದ್ದಳು. ಆ ಹುಡುಗಿಯ ಬಾಯಿಯಿಂದ ಕಂಪಿಸುತ್ತ ಹೊರಟ ಆ ಸಾಲುಗಳು ಲೋಕದ ಮಹಾ ಸಂಗತಿಗಳನ್ನು ನಮ್ಮ ಪುಟ್ಟ ಪ್ರಪಂಚಕ್ಕೆ ತಂದು ಬಿಡುತ್ತಿದ್ದವು. ಭೂಕಂಪ, ಬಿರುಗಾಳಿ, ವಿಮಾನ ಪತನ, ಕ್ರಾಂತಿ, ಕ್ಷಾಮ, ನೆರೆ, ಕ್ಷೊಭೆ, ಜಯ, ಸೋಲು ಇತ್ಯಾದಿ ಮಹಾ ಸಂಗತಿಗಳು ನಿಧಾನಕ್ಕೆ ಮಂಜು ಮಂಜಾಗಿ ತಲೆಯಿಡೀ ಎಣ್ಣೆ ಮೆತ್ತಿಕೊಂಡಿರುತ್ತಿದ್ದ ನಮ್ಮ ಪುಟ್ಟ ಬುರುಡೆಗಳೊಳಕ್ಕೆ ಇಳಿಯುತ್ತಿದ್ದವು. ನಾವು ಸಾಕ್ಷಾತ್ ಸರಸ್ವತಿಯೇ ಈ ವಾರ್ತಾ ಮಂತ್ರಿಯಾಗಿರುವ ಈ ಹುಡುಗಿಯ ರೂಪದಲ್ಲಿ ಬಂದು ನಮಗೆ ಉಲಿಯುತ್ತಿರುವಳೆಂದು ತಿಳಿದು ಪಾವನವಾಗುತ್ತಿದ್ದೆವು. ಅನಂತರ ಶಾಲಾ ನಾಯಕರಾದ ಮುಖ್ಯಮಂತ್ರಿಯೂ ಮುಖ್ಯೋಪಾಧ್ಯಾಯರಿಗೆ ಸಲ್ಯೂಟ್ ಸಲ್ಲಿಸಿ ಆ ದಿನದ ಬೆಳಗಿನ ಅಸೆಂಬ್ಲಿಯ ವಿಸರ್ಜನೆಗೊಂಡು ನಾವು ಗುಸು ಗುಸುಗುಟ್ಟುತ್ತ ತರಗತಿಗಳಿಗೆ ನಡೆಯುತ್ತಿದ್ದೆವು.

ತರಗತಿಯೊಳಗೆ ಉಪಾಧ್ಯಾಯರು ಆಗಮಿಸುವ ತನಕ ಶಾಲೆಯ ವಠಾರದಲ್ಲಿ ಗುಲ್ಲಾಗದಂತೆ ಜಾಗ್ರತೆವಹಿಸಲು ಗೃಹಮಂತ್ರಿ ಅರ್ಥಾತ್  ಶಿಸ್ತು ಮಂತ್ರಿಯಿದ್ದನು. ಹಾಗೆಯೇ ಶಾಲಾ ಪರಿಸರದಲ್ಲಿ ಕಸಹೆಕ್ಕಿಸಲು, ಗಾಯವಾದ ಹುಡುಗರಿಗೆ ಮದ್ದು ತರಲು ಆರೋಗ್ಯ ಮಂತ್ರಿಯೂ, ಸರಸ್ವತಿ ಪೂಜೆಯನ್ನು, ಶಾಲೆಯ ಗ್ರಂಥಾಲಯವನ್ನು ನಡೆಸಲು ವಿದ್ಯಾಮಂತ್ರಿಯೂ, ಕಾಯಿಪಲ್ಲೆ ಬೆಳೆಸಲು ಕೃಷಿ ಮಂತ್ರಿಯೂ,  ಸ್ಕೂಲ್ ಡೇ ಇತ್ಯಾದಿಗಳಿಗೆ ಹಣ ಸಂಗ್ರಹಿಸಿ ಲೆಕ್ಕಾಚಾರ ನೋಡಿಕೊಳ್ಳಲು ಅರ್ಥ ಮಂತ್ರಿಯೂ ಮಂತ್ರಿಯೊಬ್ಬ ರಜೆ ಹಾಕಿದಾಗ ಅವರ ಕೆಲಸ ನೋಡಿಕೊಳ್ಳಲು ಖಾತಾರಹಿತ ಮಂತ್ರಿಯೂ ಇರುತ್ತಿದ್ದರು. ಇವರ ಜೊತೆಯಲ್ಲಿ ಚುನಾವನೆಯಲ್ಲಿ ಸೋತ ಅಭ್ಯರ್ಥಿಯುವಿರೋಧ ಪಕ್ಷಗಳ ನಾಯಕರಾಗಿಯೂ ಬುದ್ಧಿ ಸಂಪನ್ನನಾದ ವಿದ್ಯಾರ್ಥಿಯೊಬ್ಬ ತಿಂಗಳಿಗೊಂದು ಬಾರಿ ನಡೆಯುವ ಶಾಲಾ ಸಂಸತ್ತಿನ ಸ್ಪೀಕರನಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಈ ನಾಯಕರೂ, ಈ ಮಂತ್ರಿಗಳು ಈ ವಿರೋಧೀ ನಾಯಕರು, ಈ ಸ್ಪೀಕರರು ಇವರೆಲ್ಲರೂ ಶಾಲೆಯೆಂಬ ನಮ್ಮ ಎಳೆಯ ಲೋಕದಲ್ಲಿ ತಲೆಯೆತ್ತಿ ನಡೆಯುತ್ತ ಆಡಳಿತ ನಡೆಸುತ್ತ ನಾವೂ ನಮ್ಮ ಈ ಎಳೆಯ ನಾಯಕರಿಗೆ ಗೌರವ ನೀಡಿ ಹಾಗೆ ಕಿಚಾಯಿಸಿ, ಹಾಗೇ ಜಗಳವಾಡಿ ಆದರು ಅವರ ಮಾತು ಮೀರಿ ನಡೆಯದೆ ಗಿಜಿ ಗಿಜಿ ಗುಡುತ್ತ ಸತ್ಪ್ರಜೆಗಳಾಗಿ ಬಾಳುತ್ತಿದ್ದೆವು. ನಮ್ಮ ಮುಖ್ಯೋಪಾಧ್ಯಾರೂ, ಗುರುಗಳೂ ಈ ಮರಿ ಮಂತ್ರಿಗಳನ್ನೂ ದೂರದಿಂದಲೇ ಮೆಚ್ಚುತ್ತ, ಅವರು ತಪ್ಪಿದರೆ ಕಿವಿಹಿಡಿದು ಹಿಂಡುತ್ತ ಒಟ್ಟು ವ್ಯವಸ್ಥೆಯನ್ನು ಪರಿಪಾಲಿಸುತ್ತಿದ್ದರು. ನಾವು ಕಸ ಹೆಕ್ಕುವ ಸಾಲುಗಳಲ್ಲಿ, ಕಾಯಿ ಪಲ್ಲೆ ನೆಡುವ ತಂಡಗಳಲ್ಲಿ ಸೇರಿಕೊಂಡು ಈ ನಾಯಕ ಮರಿಗಳನ್ನು ಅನುಸರಿಸುತ್ತಿದ್ದೆವು. ನಾವೂ ದೊಡ್ಡ ತರಗತಿಗಳಿಗೆ ಹೋಗಿ ಅವರ ಹಾಗೇ ನಾಯಕರಾಗುವ ಮಂತ್ರಿಗಳಾಗುವ ಕನಸು ಕಾಣುತ್ತ ಮನೆಗೆ ಮರಳುತ್ತಿದ್ದೆವು.

ಸಂಜೆಯ ಸೂರ್ಯ ನಮ್ಮ ಮುಖದ ಮುಂದೆ ಮುಳುಗುತ್ತ ನಮ್ಮ ನದಿಯ ಬದಿಯ ಕಾಲು ಹಾದಿ ಕೆಂಪಗೆ ಕಂಗೊಳಿಸುತ್ತ ನಾವು ಕತ್ತಲಾಗುತ್ತಿದ್ದಂತೆ ಮನೆಯನ್ನು ಸೇರಿ ಈ ಶಾಲೆಯನ್ನು, ಮಂತ್ರಿಗಳನ್ನೂ ಮರೆಯಲಾಗದೆ, ಮರೆಯದೆ ಇರಲಾಗದೆ ರಾತ್ರಿ ಕತ್ತಲಲ್ಲಿ ಹಾದು ಬರುವ ಹಲವು ಸದ್ದುಗಳಿಗೆ ಕಿವಿಕೊಟ್ಟುಕೊಂಡು ನಿದ್ದೆ ಹೋಗಲು ನೋಡುತ್ತಿದ್ದೆವು. ನಮ್ಮ ಕನಸುಗಳಲ್ಲಿ ಮನೆಯೂ, ಶಾಲೆಯೂ, ನದಿಯೂ ಎಲ್ಲವೂ ಕಲಸಿ ಹೋಗಿ ನಾವು ಬೆಳೆಗೆ, ಎದ್ದು ನೋಡಿದರೆ ಶಾಲೆಗೆ ಹೋಗುವ ಹೊತ್ತಾಗಿ ಬಿಟ್ಟಿರುತ್ತಿತ್ತು. ನಮ್ಮ ಚೀಲವನ್ನು ಪುಸ್ತಕಗಳಿಂದ ತುಂಬಿಸಿ ನಮ್ಮ ಬುತ್ತಿಗಳಿಗೆ ಅನ್ನ ತುಂಬಿಟ್ಟು ಕಾಯುತ್ತಿರುವ ನಮ್ಮ ಮನೆಯವರಿಗೆ ನಾವು ಶಾಲೆಗೆ ಹೋಗಿ ಮಂತ್ರಿಗಳಾಗುವುದು, ಗೆಲ್ಲುವುದು, ಸೋಲುವುದು ಒಂದೂ ಗೊತ್ತಿರಲಿಲ್ಲ. ಗೊತ್ತಾದರೂ ಗೊತ್ತಿರುವಂತೆ ತೋರಿಸುತ್ತಿರಲಿಲ್ಲ. ಅವರ ಲೋಕ ನಮಗೆ ಗೊತ್ತಿಲ್ಲವೆಂದು ನಾವು ಹೇಗೆ ಭಾವಿಸಿಕೊಂಡು ಶಾಲೆಗೆ ಹೋಗುತ್ತಿದ್ದೆವೋ ಹಾಗೇ ನಮ್ಮ ಎಳೆಯ ಲೋಕ ಮರೆತು ಹೋದ ಹಾಗೆ ಅವರೂ ತೋರಿಸಿಕೊಳ್ಳುತ್ತಿದ್ದರು. ಒಂದು ರೀತಿಯ ಕಣ್ಣುಮುಚ್ಚಾಲೆಯಂತಹ ಆಟ ಈ ಎಳೆಯರ ಮತ್ತು ಬೆಳೆದವರ ಲೋಕದ ನಡುವೆ ನಡೆಯುತ್ತಿತ್ತು. ಮತ್ತು ಈ ಆಟ ಸುಮದುರವಾಗಿಯೇ ಇತ್ತು.

*         *         *
ಬಾಲಕರ, ನಾಯಕರ, ಮಂತ್ರಿಗಳ ಪುಟ್ಟ ಲೋಕದಲ್ಲಿ ಎಷ್ಟೊಂದು ಕಾರ್ಯಗಳು, ತಮಾಷೆಗಳು, ನಡೆಯುತ್ತಿದ್ದವು. ಒಂದು ಸಲ ನಮ್ಮ ಶಾಲೆಯ ಆಹಾರ ಮಂತ್ರಿಯು ಅವನಿಗಿಂತ ದೊಡ್ಡದಾದ ಹಂಡೆಯಲ್ಲಿ ಕಡಲೆ ಎಣ್ಣೆ ಸುರಿದು ಬೆಂಕಿಯಲ್ಲಿ ಕಾಯಿಸುತ್ತಾ ಎಣ್ಣೆ ಕುದಿಯಲು ಅದರಲ್ಲಿ ಹಸಿಮೆಣಸು ಕರಿದು ಯಾರೂ ಕಾಣದ ಹಾಗೆ ಅದನ್ನು ತಿನ್ನುತ್ತಿರುವಾಗ ಅಲ್ಲೇ ಹೋಗುತ್ತಿದ್ದ ನಮ್ಮ ವಿರೋಧ ಪಕ್ಷದ ನಾಯಕರು ಅದನ್ನು ಕಂಡು ಆ ತಿಂಗಳ ಸಂಸತ್ತಿನ ಶೂನ್ಯ ವೇಳೆಯಲ್ಲಿ ಆಹಾರ ಮಂತ್ರಿಗಳು ಹಸಿ ಮೆಣಸಿನ ಕಾಯಿ ಕರಿದು ತಿಂದಿದ್ದರ ಔಚಿತ್ಯವನ್ನು ಪ್ರಶ್ನಿಸಿಯೇ ಬಿಟ್ಟನು. ಆತನ ಪಕ್ಕದ ಸಾಲಿನಲ್ಲಿ ಕುಳಿತಿದ್ದ ಶಾಲಾ ನಾಯಕನೂ, ಆಹಾರ ಮಂತ್ರಿಯೂ ತಬ್ಬಿಬ್ಬಾಗಿ ಅವರ ಕಣ್ಣುಗಳಲ್ಲಿ ನೀರು ತುಂಬಿ ಸಂಸತ್ತಿನ ತುಂಬ ನಗೆಯ, ಅಪನಂಬಿಕೆಯ ಅಲೆ ಎದ್ದು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನಮ್ಮ ಮುಖ್ಯೋಪಾಧ್ಯಾಯರೂ ಅಚ್ಚರಿಗೊಂಡು ಕೂತಿರುವಾಗ ಇದ್ದಕ್ಕಿದ್ದಂತೆ ಕೆರಳಿದ ನಮ್ಮ ಕನ್ನಡದ ಟೀಚರು `ಅದೇನು ಅಚ್ಯುತಾ? ಹಸಿಮೆನಸಿನಕಾಯಿ ತಿಂದೆಯಾ? ಹೊರಕಡೆ ಕೂರಲು ನಿನಗೆ ಮುಕುಳಿ ಉರಿಯಲಿಲ್ಲವಾ? ‘ಅಂತ ಗದರಿಸಿ ಆಹಾರ ಮಂತ್ರಿಯಾಗಿದ್ದ ಅಚ್ಚುತನ ಅಲ್ಲಿಂದಲೇ ಹೆದರಿಸಿಬಿಟ್ಟರು. ಅಚ್ಚುತ ಮುಖ ಮುಚ್ಚಿ ಅಳಲು ತೊಡಗಿದ್ದ.

ಆರನೇ ತರಗತಿಯಲ್ಲಿರುವಾಗ ವಿದ್ಯಾಮಂತ್ರಿಯಾಗಿದ್ದ ನಾನೂ, ನನ್ನ ಜೊತೆ ಕೂತುಕೊಳ್ಳುತ್ತಿದ್ದ ಭಟ್ಟರ ಮಗನೂ ಪ್ರತಿ ಶುಕ್ರವಾರದ ಸರಸ್ವತಿ ಪೂಜೆಯ ಮುಖ್ಯ ವಕ್ತಾರರಗಾಗಿದ್ದೆವು. ಭಟ್ಟರ ಮಗ ಶ್ಲೋಕ ಹೇಳುತ್ತಾ ಆರತಿ ಬೆಳಗುತ್ತಿರುವಾಗ ವಿದ್ಯಾ ಮಂತ್ರಿಯಾಗಿದ್ದ ನಾನು ಗಂಟೆ ಬಾರಿಸುತ್ತಿದ್ದೆ. ಆಹಾರ ಮಂತ್ರಿ ಅಚ್ಚುತ ಪ್ರಸಾದ ಹಂಚುತ್ತಿದ್ದ. ವಾರ್ತಾ ಮಂತ್ರಿಯಾಗಿದ್ದವಳು ದೂರದಿಂದ ಎಲ್ಲವನ್ನೂ ನೋಡುತ್ತಿದ್ದಳು. ಶಿಸ್ತು ಮಂತ್ರಿಯು ಅವಲಕ್ಕಿ ಪ್ರಸಾದದ ಹಾಳೆಯನ್ನು ಯಾರೂ ಬಿಸಾಡಬಾರದೆಂದೂ, ಕಸದ ಬುಟ್ಟಿಗೇ ಹಾಕಬೇಕೆಂದೂ ಅತ್ತಿಂದಿತ್ತ ಓಡಾಡುತ್ತಿದ್ದ. ಶಾಲೆಯೆಂಬ ಲೋಕ ನಡೆಯುತ್ತಿತ್ತು. ಯಾರಿಗೂ ಗೊತ್ತಿಲ್ಲದ ಹಾಗೆ ದೂರದಲ್ಲಿ ನದಿ ಹರಿಯುತ್ತಿತ್ತು. ಸೂರ್ಯ ಶಾಲೆ ಬಿಟ್ಟ ಮೇಲೆ ಮುಳುಗಲು ಕಾಯುತ್ತಿದ್ದ.

Advertisements