ಹೂವಿನ ಹೆಸರಿನ ಹುಡುಗಿ [ಷಿಲ್ಲಾಂಗ್ ಪತ್ರ ೪]

ಮನಸಲ್ಲಿ ಆಗುತ್ತಿರುವುದನ್ನೆಲ್ಲಾ ನಿಮಗೆ ಹೇಗೆ ಬರೆದು ತಿಳಿಸಲಿ? ನನ್ನ ಬಾಲ್ಯಕಾಲದ ಬೆಳದಿಂಗಳಿನಂತಹ ಬಿಸಿಲು ಇಲ್ಲಿ ಈಗ ಮರುಕಳಿಸುತ್ತಿದ್ದೆ. ಬಿಸಲಿಗೆ ಮತ್ತು ಬೀಸುವ ಗಾಳಿಗೆ ಇಷ್ಟು ಸುಖವಿದೆ ಎಂದು ಈಗ ಮತ್ತೆ ಗೊತ್ತಾಗುತ್ತಿದೆ270px-shillong_golf_course2.jpgಮಕ್ಕಳು ಬೆಳಗ್ಗಿನಿಂದ ಸೂರ್ಯಕಂತುವವರೆಗೆ ಬಯಲಲ್ಲಿ ಯಾವ ಆಯಾಸವೂ ಇಲ್ಲದೆ ಇಲ್ಲಿ ಆಡುತ್ತಿರುತ್ತಾರೆ. ಬೀಸುವಗಾಳಿಗೆ ಮೈ ಒಡ್ಡಿ ನಡೆಯುವ ಮುಗುದೆಯರು. ನಾವು ಎಂತಹ ಚಂದದ ಭೂಮಿಯಲ್ಲಿ ಬದುಕಿದ್ದೇವೆ ಎಂದು ಗೊತ್ತಾಗಿ ಮನಸ್ಸು ತುಂಬಿಕೊಳ್ಳುತ್ತಿದ್ದೆ. ಸುಮ್ಮನೇ ಒಬ್ಬನೇ ಇಲ್ಲಿಯ ವಾರ್ಡ್ ಲೇಕ್ ನಲ್ಲಿ ನಡು ಮಧ್ಯಾಹ್ನ ನಡೆಯುತ್ತಿದ್ದೆ. ಸೂರ್ಯನ ಬೆಳಕು ಎಲೆಗಳ ಮೇಲೆ ಕೆರೆಯ ನೀರಿನ ಮೇಲೆ ತನ್ನ ಎಲ್ಲಾ ಪ್ರೀತಿಯನ್ನು ಸುರಿಯುತ್ತಿತ್ತು. ಯಾವ ಕೇಡೂ ಇಲ್ಲದ ಸ್ವಚ್ಛಗಾಳಿ ಪುಪ್ಪುಸದೊಳಕ್ಕೆ ತುಂಬಿಕೊಳ್ಳುತ್ತಿತ್ತು. ಆಮೇಲೆ ಮನೆಗೆ ಬಂದು ಏನೋ ಓದುತ್ತಾ ಕುಳಿತ್ತಿದ್ದೆ. ಸರೀ ಮೂರೂವರೆಯ ಹೊತ್ತಿಗೆ ಭೂಮಿ ಒಮ್ಮೆಗೆ ಸಣ್ಣಗೆ ಅಲುಗಿತು. ಯಾರೋ ಹಿಂದಿನಿಂದ ಮೆಲ್ಲಗೆ ಮೊಣಕೈಯಿಂದ ಅಲುಗಿಸಿದಂತೆ ಸಣ್ಣಗೆ ಭೂಕಂಪವಾಯಿತು. ಗಾಳಿ ಹಾಗೇ ಬೀಸುತ್ತಿತ್ತು. ಮಕ್ಕಳು ಆಡುತ್ತಿದ್ದರು. ಯಾಕೋ ದುಗುಡ ತುಂಬಿಕೊಂಡು ಬಿಟ್ಟಿತು.

ಯಾಕೆ ಗೊತ್ತಿಲ್ಲ. ನನ್ನನ್ನು ಎಲ್ಲದರಿಂದ ಎಲ್ಲರಿಂದ ಕಳಚಿಬಿಡುವ ಈ ದುಗುಡಕ್ಕೆ ಯಾವ ಮದ್ದಿದೆ ಹೇಳುತ್ತೀರಾ? ನೀವು ನನ್ನ ಯಾವ ಕಾಗದಕ್ಕೂ ಉತ್ತರ ಬರೆಯುವುದಿಲ್ಲ ಯಾಕೆ? ದಯವಿಟ್ಟು ಈ ದುಗುಡಕ್ಕೆ ಏನು ಮದ್ದು ಅಂತ ಬರೆಯಿರಿ. ಈ ದುಗುಡದ ವಿಷಯ ಹೋಗಲಿ ಬಿಡಿ. ಇಲ್ಲಿಯ ಒಬ್ಬಳು ಕಾಸಿ ಹೆಣ್ಣು ಮಗಳ ಕತೆ ಹೇಳುತ್ತೇನೆ. ಈಕೆಗೆ ಒಂದು ಹೂವಿನ ಹೆಸರಿದೆ. ಇವಳು ಸುಮಾರು ಹತ್ತು ವರ್ಷದ ಹಿಂದೆ ಶಿಲ್ಲಾಂಗಿನಿಂದ ಡೆಲ್ಲಿಗೆ ಓದಲು ಹೋದಳು. ಹೋದವಳು ಅಲ್ಲಿಗೆ ಇರಾಕಿನಿಂದ ಓದಲು ಬಂದಿದ್ದ ವಯಸ್ಸಲ್ಲಿ ಹಿರಿಯನಾದ ಮುಸ್ಲಿಂ ಯುವಕನ ಪ್ರೇಮದಲ್ಲಿ ಬಿದ್ದಳು. ಆತ ಈಕೆಯನ್ನು ಬಾಗ್ದಾದ್ ಗೆ ಕರೆದುಕೊಂಡು ಹೋಗಿ ಮದುವೆಯಾದ. ಅಲ್ಲೇ ಇದ್ದಳು. ಅಷ್ಟು ಹೊತ್ತಿಗೆ ಇರಾಕ್ ಕುವೈತ್ ಯುದ್ಧ ಶುರುವಾಯಿತು. ಗಾಬರಿಯಾಗಿ ಗಂಡನಿಂದ ತಲಾಕ್ ಹೇಳಿಸಿಕೊಂಡು ವಿಮಾನ ಹತ್ತಿ ಓಡಿಬಂದು ಬಿಟ್ಟಳು. ಈಗ ಇಲ್ಲೇ ತನ್ನ ಬಾಲ್ಯಕಾಲದ ಗೆಳೆಯನನ್ನು ಮದುವೆಯಾಗಿದ್ದಾಳೆ. ಆರುವರ್ಷದ ಮುದ್ದಾದ ಮಗನಿದ್ದಾನೆ ಮೊದಲನೆಯ ಮದುವೆ ಕೇವಲ infatuation ಈಗಿನ ಮದುವೆ ಕೇವಲ ಸಂಸಾರ ಅಂತ ನಗುತ್ತಾಳೆ. ಇಲ್ಲಿ ಹೆಣ್ಣು ಮನೆಯ ಒಡತಿ. ಗಂಡಸರು ಮಕ್ಕಳನ್ನು ಶಾಲೆಗೆ ಬಿಡುವುದು, ಬಿಸಿಲು ಕಾಯಿಸುವುದು ಇತ್ಯಾದಿ ಮಾಡುತ್ತಿರುತ್ತಾರೆ. ಇಲ್ಲಿಯ ಹಿಂಸೆ, ಕ್ಷೋಭೆಗಳಿಗೆ ಇದೂ ಕಾರಣ ಇರಬಹುದು ಅಂತ ಅನ್ನಿಸುತ್ತದೆ.

ಇಲ್ಲಿಂದ ಭೂತಾನ, ನೇಪಾಲ ತುಂಬಾ ಹತ್ತಿರವಿದೆ. ಯಾವ ರಹದಾರಿಯೂ  ಇಲ್ಲಿಗೆ ಹೋಗಿ ಬರಬಹುದು. ಮುಂದಿನ ತಿಂಗಳು ಸಿಕ್ಕಿಂನಲ್ಲಿ ತಿರುಗಾಡಿ ಬರಬೇಕು ಅಂತ ಅಂದುಕೊಂಡಿರುವೆ. ಅರುಣಾಚಲಕ್ಕೆ ಹೋದರೆ ಹಿಮಾಲಯದ ಇನ್ನೊಂದು ಮಗ್ಗುಲನ್ನು ನೋಡಬಹುದು.
ಕಾಗದ ಬರೆಯಿರಿ .

Advertisements