ಒಂದು ಹಳೆಯ ಪತ್ರ

 

ಪ್ರಿಯ ಸಖ,
ಈ ಕಾಲಂ-ಗೀಲಂ ಎಲ್ಲ ಬಿಟ್ಟು ಸುಮ್ಮನೆ ಒಂದು ಪತ್ರ ಬರೆಯುತ್ತಾ ನಡುನಡುವೆ ನಿಂಬೂ ಟೀ ಹೀರುತ್ತಾ ಆಷಾಡದ ಈ ಜಡಿಮಳೆಯಲ್ಲೂ ಬೆವರುತ್ತಾ ಈ ನಡುವೆ ನಡೆದ ಸುಖ-ಸಂತೋಷಗಳನ್ನು ನೆನೆಸಿಕೊಳ್ಳುವುದು ಎಷ್ಟೊಂದು ಆಹ್ಲಾದದ ಕೆಲಸ ಗೊತ್ತಾ!kaadu-maavina-marada-getu.jpgಯಾಕೋ  ಈಗ ಯಾರಾದರು ಏನಾದರು ಬರೆಯಲು ಹೇಳಿದರೆ ಕೊಲ್ಲಲು ಕರೆದುಕೊಂಡುಹೋಗುವ ಹಾಗೆ ಅನಿಸುತ್ತದೆ.

ಸಣ್ಣದಿರುವಾಗ ಕೊಡಗಿನ ಆ ಚಳಿಯಲ್ಲಿ ಬೆಳಗ್ಗೆ ಎದ್ದು ಅರಬೀ ಮದರ್ರಸಕ್ಕೆ ಕುರಾನ್ ಕಲಿಯಲು ಹೋಗಬೇಕಿತ್ತು.ಆಗಲೂ ಹೀಗೇ ಅನಿಸುತ್ತಿತ್ತು.ಆಗಲಾದರೆ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕನಿಗೆ ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದಿತ್ತು.ಈಗ ನಿಜ ಹೇಳಿದರೂ ಅದನ್ನು ನೀನು ಕಟ್ಟು ಕಥೆಯೆಂದು ಬಗೆದು ಬಿಡುತ್ತೀಯಾ .ಅದಕ್ಕೇ ಸುಮ್ಮನೆ ಒಂದು ಪತ್ರ ಬರೆಯುತ್ತಿದ್ದೇನೆ.  ನಾನು ಕಳೆದ ಹತ್ತು ಹದಿನೈದು ದಿನ ನನ್ನ ಪುಟ್ಟ ಮಗಳ ಜೊತೆ ಕೊಡಗಿನ ನಾಗರಹೊಳೆ ಕಾಡಿನ ಬದಿಯಲ್ಲಿ ಕಾಪಿ ತೋಟದ ನಡುವಲ್ಲಿ ಬೆಳಗೆ ಬಿಸಿಲು ಕಾಯುತ್ತಾ, ಹಗಲೆಲ್ಲ ಅವಳನ್ನು ಹೆಗಲಲ್ಲಿ ತಟ್ಟಿ ಮಲಗಿಸುತ್ತಾ,ಅವಳು ನಿದ್ದೆ ಹೋಗುವುದನ್ನು ಕಾಯುತ್ತಾ, ಅವಳು ನಿದ್ದೆಯಲ್ಲಿಏನೋ ಸುಖವನ್ನು ಉಂಡಂತೆ ನಗುವನ್ನು ಮೆಲುಕುಹಾಕುವುದನ್ನು ಕಂಡು ಕರುಬುತ್ತಾ ಕಳೆದೆ!

ಹೀಗೆ ನಮ್ಮ ಮಾಮೂಲು ಕಾಮ ಕ್ರೋಧ ಮಧ ಮತ್ಸರಗಳನ್ನು ಮರೆತು ಮಗುವೊಂದರ ಸುಖದಲ್ಲಿ ಪಾಲುಗೊಳ್ಳಬಹುದು ಎಂಬ ಕಲ್ಪನೆಯೇ ನನಗಿರಲಿಲ್ಲ.ಈಗಲೂ ಆ ಸುಖದ ಮಂಪರು ನನ್ನನ್ನು ಬಿಡುತ್ತಿಲ್ಲ. ಅದು ಯಾಕೋ ನನ್ನನ್ನು ಆಲಸಿಯನ್ನಾಗಿಸಿಬಿಟ್ಟಿದೆ.ನಿನಗೆ, ನಾವೆಲ್ಲಾ ಓದಿದ lotus eaters ಪದ್ಯ ನೆನಪಾಗುತ್ತಿದೆಯಾ?……...ನನಗೆ ಯಾಕೋ ಅದು ಯಾರು ಬರೆದದ್ದು ಎಂಬುದು ಮಾತ್ರ ಮರೆತು ಹೋಗಿದೆ.ಆದರೆ ಅದರ ಸುಖ ಮಾತ್ರ ಉಳಿದುಬಿಟ್ಟಿದೆ.

 ಎಂತಹ ತಮಾಷೆ ಅಲ್ಲವಾ? ಪ್ರಪಂಚದಲ್ಲಿ ಏನೇನೆಲ್ಲಾ ನಡೆಯುತ್ತಿದೆ.ಯುದ್ಧ, ಕ್ಷಿಪ್ರ ಕ್ರಾಂತಿ, ಪ್ರವಾಹ, ಭೂಕಂಪ, ಮತಾಂತರ, ಮುಂಜಿ, ಮದುವೆ, ಹಾದರ,ಬಸಿರು…

ಇದೆಲ್ಲದರ ನಡುವೆ ಕಾಡಿನ ಒಳಗಡೆ ಬಿಸಿಲು ಕಾಯಿಸಿಕೊಂಡು ನಾನು ಮತ್ತು ಮಗು..ಯಾಕೋ ಈ ಎಲ್ಲ ತೌಲನಿಕ ಅಧ್ಯಯನಗಳು ಗಳು ತುಂಬಾ ಅತಿಯಾಯಿತು ಅಂತ ನನಗೇ ಅನ್ನಿಸುತ್ತಿದೆ..  ಕ್ಷಮಿಸು.

 ನಾನು ಮಗುವಿನ ಜೊತೆ ಇದ್ದದ್ದು ಕರ್ನಾಟಕ-ಕೇರಳ ಗಡಿಯ ನಾಗರಹೊಳೆ ಕಾಡಿನ ದಂಡೆಯಲ್ಲಿ.ಅಲ್ಲಿ ಕೊಡಗಿನ ಕಾಪಿ ತೋಟದ ಬೇಲಿಗಳು ಟಾರು ರಸ್ತೆಯೊಂದನ್ನು ಬಿಟ್ಟು ಬೇರೆ ಏನನ್ನೂ ಮಕ್ಕಳಿಗೆ ಆಡಲು ಆಗದಂತೆ ಸುತ್ತುವರಿದುಕೊಂಡುಬಿಟ್ಟಿದೆ.ಈಗಲೂ ನನಗೆ ಕಣ್ಣುಮುಚ್ಚಿಕೊಂಡು ಕೊಡಗನ್ನು ಕುರಿತು ಯೋಚಿಸಿದರೆ ಕಾಣುವುದು ಬರಿಯ ಹಸಿರು ಬೇಲಿಗಳು ಮತ್ತು ರಸ್ತೆಯಲ್ಲಿ ಆಡುವ ಮಕ್ಕಳು.ಅಲ್ಲಿ ಕಾಪಿ ತೋಟಗಳ ಒಡೆಯರ ಚಂದದ ಬಂಗಲೆಗಳು,ಆಳುಗಳ ಲೈನುಮನೆಗಳು, ಕಾಡುಕುರುಬರ ಹಾಡಿಗಳು,ಮಲೆಯಾಳಿಗಳ ಅಂಗಡಿಗಳು,ಪೋಲೀಸು ಫಾರೆಷ್ಟು ಸಿಬ್ಬಂಧಿಗಳ ಕ್ವಾರ್ಟಸ್ಸುಗಳು ಮತ್ತು ತಮಿಳು ಮಕ್ಕಳ ಒಂದು ಎಲಿಮೆಂಟರಿ ಸ್ಕೂಲು.

 ಆ ಶಾಲೆಯ ಮಕ್ಕಳು ಆಡುತ್ತಿದ್ದುದು ಮತ್ತು ನಾನು ಬಿಸಿಲು ಕಾಯಿಸುತ್ತಿದುದು ಒಂದೇ ಟಾರು ರಸ್ತೆಯಲ್ಲಿ.ಹಾಗಾಗಿ ಆ ಟಾರು ರಸ್ತೆಯಿಂದಾಗಿ ನಾನು,ಮಗು ಮತ್ತು ಆ ತಮಿಳು ಶಾಲೆಯ ಮಕ್ಕಳು ಒಂದೆರೆಡು ದಿನಗಳಲ್ಲಿ ಗೆಳೆಯರಾಗಿಬಿಟ್ಟೆವು.ಎಷ್ಟುಗೆಳೆಯರು ಅಂದರೆ ಆ ಪುಟ್ಟ ಮಕ್ಕಳು ಬೆಳಗೆಯೇ ತಲೆ ಮುಖದ ತುಂಬಾ ಎಣ್ಣೆಹಚ್ಚಿಕೊಂಡು ಬಿಸಿಲಲ್ಲಿ ಮಿರುಮಿರುಗುತ್ತಾ ಬರುವುದನ್ನು ನಾವು ಕಾಯುತ್ತಿದ್ದೆವು.ಅವರು ತಮಿಳಲ್ಲಿ ಕಲರವಗೈಯುತ್ತಾ ಬಂದು ಚೀಲ ತೆಗೆದಿಟ್ಟು ಟಾರು ರಸ್ತೆಯಲ್ಲಿ ಅಂಕಣ ಬಿಡಿಸಿ ಕುಂಟಾಬಿಲ್ಲೆ ಆಡಲು ತೊಡಗುವ ಮೊದಲು ಒಂದು ಸುತ್ತು ನಮ್ಮನ್ನು ಸುತ್ತುವರೆದು ಅದಾಗ ತಾನೇ ಬಿಸಿಯಾಗುತ್ತಿರುವ ಅವರ ನೆತ್ತಿಯ ತೆಂಗಿನ ಎಣ್ಣೆಯ ಪರಿಮಳ ಹಿತವೆನಿಸಿ ಖುಷಿಯಾಗುತ್ತಿತ್ತು.ಹಾಗೆಯೇಪುಟ್ಟಹುಡುಗಿಯರು ತಲೆಗೆ ಮುಡಿದ ನಾನಾಬಗೆಯ ಹೂಗಳು. ಆಮಕ್ಕಳು ನಮ್ಮನ್ನು ನಡುವೆ ಸೇರಿಸಿಕೊಂಡು ಕುಂಟಾಬಿಲ್ಲೆ ಆಡುತ್ತಿದ್ದರು

ನಾನು ಇದನ್ನೆಲ್ಲ ಯಾಕೆ ಬರೆಯುತ್ತಿರುವೆ ಗೊತ್ತಿಲ್ಲ. ಆದರೆ ಅಲ್ಲಿ ಇರುವಷ್ಟು ದಿನವೂ ಆ ಮಕ್ಕಳು ಆಡುವುದು, ಪಾಠ ಓದುವುದು,ಮಗ್ಗಿ ಹೇಳುವುದುಎಲ್ಲವೂ ನನಗೂ ಬಾಯಿಪಾಠವಾಗಿ ನಾನೂ ಆ ಶಾಲೆಯ   ಹುಡುಗ ಅನ್ನಿಸುತ್ತಿತ್ತು.ಎಲ್ಲಕ್ಕಿಂತ ಖುಷಿಯಾಗುತ್ತಿದುದು ಆ ಶಾಲೆಯ ಮುಖ್ಯೋಪಾಧ್ಯಾಯರು ನರ್ತಿಸುತ್ತಾ ಮಕ್ಕಳಿಗೆ ಪದ ಹೇಳುತ್ತಿದುದು! ಶಾಲೆಯ ಮುಖ್ಯೋಪಾಧ್ಯಾಯರು ನರ್ತನ ಮಾಡಿದ್ದನ್ನು ನಾನು ಜೀವನದಲ್ಲಿ ಅದೇ ಮೊದಲ ಬಾರಿ ನೋಡಿದ್ದು!

 ನಾನು ಇನ್ನು ತುಂಬ ಬರೆಯುವುದಿಲ್ಲ.ಆದರೆ ಬರೆಯಲೇ ಬೇಕು ಅಂದು ಕೊಂಡಿದ್ದು ಮರೆತು ಹೋಗುವ ಮೊದಲು ಅದನ್ನು ಬರೆದು ಬಿಡುತ್ತೇನೆ. ಯಾಕೆಂದರೆ ಕನ್ನಡ ಸಾಹಿತ್ಯದ ಈ  ಸಂದರ್ಭದಲ್ಲಿ ನಾನು ಆ ಊರಲ್ಲಿ ಅನುಭವಿಸಿದ ಒಂದು ವ್ಯಥೆಯನ್ನು ಹೇಳದಿದ್ದರೆ ನನಗೆ ಅಜೀರ್ಣ ಸಂಬಂಧೀ ಕಾಯಿಲೆ ಬರುವ ಸಂಭವವಿದೆ!

 ಮೊದಲೇ ಹೇಳಿದ ಹಾಗೆ ಆ ಊರಲ್ಲಿ ಮಕ್ಕಳಿಗೆ ಆಡಲೂ ಜಾಗವಿಲ್ಲ.ಇನ್ನು ಬಡವರಿಗೆ ಪಾಯಿಖಾನೆಗೆ ಹೋಗಲು ಸ್ಥಳವೆಲ್ಲಿದೆ? ಹಾಗಾಗಿ ಹಸಿರಿನಿಂದ ಕಂಗೊಳಿಸುವ ಆ ರಮಣೀಯ ಊರಿನ ರಸ್ತೆಯ ಇಕ್ಕೆಲಗಳಲ್ಲಿ ಕತ್ತಲಾಗುತ್ತಿದ್ದಂತೆ ಹೆಂಗಸರು, ಮಕ್ಕಳು, ಡೊಡ್ಡವರು ಸಾಕಷ್ಟು ಪ್ರಮಾಣದಲ್ಲಿ ಪಾಯಿಖಾನೆ ಮಾಡಿಬಿಡುತ್ತಿದ್ದರು. ಕಾರುಗಳಲ್ಲಿ ಓಡಾಡುವ ಕಾಪಿ ತೋಟದ ಯಜಮಾನರುಗಳಿಗೆ ಇದು ಅರಿವಾಗುತ್ತಿರಲಿಲ್ಲ. ಆದರೆ  ಪೆಟ್ಟಿಭೂರ್ಜ್ವಾನಂತಿರುವ ನನ್ನಂತಹವರಿಗೆ ನಡೆದಾಡಲು ಕಷ್ಟವಾಗುತ್ತಿತ್ತು.ನಾನು ಎಲ್ಲಿಗೂ ಹೋಗದೆ ಮಗುವಿನೊಡನೇ ಕಾಲ ಕಳೆಯುವುದಕ್ಕೆ ಇದೂ ಒಂದು ಕಾರಣವಾಗಿತ್ತು. ಒಂದು ಭಾನುವಾರ ಈ ಬಲವಂತದ ಬಂಧನ ತಡೆಯಲಾಗದೆ ಅದು ಹೇಗೋ ಮೂಗು ಮುಚ್ಚಿಕೊಂಡು ಆಕಾಶನೋಡಿಕೊಂಡು ಆ ಪುಟ್ಟ ಊರಿನ ಅಂಚಿನ ಅಂಗಡಿಯಿಂದ ಕನ್ನಡ ಪತ್ರಿಕೆಯೊಂದನ್ನು ಕೊಂಡು ತಂದೆ. ನೋಡಿದರೆ ಅದರಲ್ಲಿ ಮಲ ಎಂಬ ಕತೆ ಪ್ರಕಟವಾಗಿತ್ತು.  ಕತೆಗಾರರು ಪಾಯಿಖಾನೆಯನ್ನು ನಾನಾ ವಿಧವಾಗಿ ವರ್ಣಿಸಿದ್ದರು.ಈ ಪಾಯಿಖಾನೆ ಎಂಬುದು ರಸ್ತೆಯಲ್ಲೂ ಸಾಹಿತ್ಯದಲ್ಲಿಯೂ ನನ್ನನ್ನು ಬಿಡದೆ ಕಾಡಿಸುತ್ತಿರುವುದನ್ನು ಕಂಡು ಅಚ್ಚರಿಯೂ ವ್ಯಥೆಯೂ ಉಂಟಾಗಿ ಹೊಟ್ಟೆ ಕೆಟ್ಟು ಹೋದಂತಾಯ್ತು.

 ಹೊಸ ತಲೆಮಾರಿನ ಕನ್ನಡ ಕತೆಗಾರರ  ಕತೆಗಳಲ್ಲಿ ಮಣ್ಣಿನ ವಾಸನೆ ಇದ್ದಾಗ ಹೇಗೋ ಸಹಿಸಿಕೊಂಡು ಓದುತ್ತಿದ್ದೆ.ಆದರೆ ಇನ್ನು ಏನು ಮಾಡುವುದು? 

ನಿಲ್ಲಿಸುತ್ತೇನೆ

Advertisements