ಷಿಲ್ಲಾಂಗ್ ಪತ್ರ-೩

ಮಗುವೊಂದರ ಜೊತೆ

ಪ್ರೀತಿಯ ಲಂಕೇಶ್‌ರಿಗ,dsc_0089.jpg

ಮರಳಿ ಶಿಲ್ಲಾಂಗ್ ತಲುಪುವ ತನಕ ನಿಮಗೆ ಬರೆಯಲೇಬಾರದು ಅಂದುಕೊಂಡಿದ್ದೆ. ಆದರೆ ಯಾಕೋ ಈಗ ಈ ರಾತ್ರಿಯಲ್ಲಿ ಆಗುಂಬೆ ಘಾಟಿಯ ಕೆಳಗಿನ ಸೀತಾನದಿಯ ತಟದ ಈ ಜಾಗದಲ್ಲಿ ಕುಳಿತು ನಿಮಗೆ ಬರೆಯಬೇಕು ಅನ್ನಿಸುತ್ತದೆ. ಕೊಡಗು, ಬೆಂಗಳೂರು, ಮೈಸೂರು ಕೇರಳದ ವಯನಾಡು ಮಂಗಳೂರು ಎಲ್ಲ ಕಡೆ ಬಿಸಿಲಲ್ಲಿ ನಾಯಿ ಅಲೆದಂತೆ ಅಲೆದು ಈಗ ಮೂರು ನಾಲ್ಕುದಿನದಿಂದ ಎಲ್ಲೂ ಹೋಗದೆ ಏನೂ ಮಾಡದೆ ಇಲ್ಲಿ ಸುಮ್ಮನೆ ಕುಳಿತಿದ್ದೇನೆ. ಈ ಸೀತಾನದಿ ತಣ್ಣಗೆ, ಕಾಡೊಳಗೆ ಸದ್ದಿಲ್ಲದೆ ಮಡುಗಟ್ಟಿಕೊಂಡು ಕಪ್ಪಗೆ ಹರಿಯುತ್ತಿದೆ. ಸಂಜೆಯ ಹೊತ್ತು ಎಲ್ಲಿಗೋ ಹೋಗಿ ಸೇರುತ್ತಿರುವ ಬೆಳ್ಳಕ್ಕಿಗಳ ಹಿಂಡನ್ನು ಕತ್ತಿನ ತನಕ ನೀರಲ್ಲಿ ಮುಳುಗಿಕೊಂಡು ನಿಟ್ಟಿಸಿ ನೋಡುತ್ತಿರುವೆ. ನಿನ್ನೆ ಸಂಜೆ ಹೀಗೆ ಮುಳುಗಿಕೊಂಡಿರುವಾಗ ನವಿಲೊಂದು ನದಿಯನ್ನು ಹಾರಿಕೊಂಡು ದಾಟಿ ಕಾಡಿನೊಳಗೆ ಮಾಯವಾಯಿತು. ಆನಂತರ ತುಂಬಾ ಹೊತ್ತು ನವಿಲುಗಳು ಕೇಕೆ ಹಾಕುವ ಸದ್ದು ಕಾಡೊಳಗಿಂದ ಕೇಳಿಸುತ್ತಲೇ ಇತ್ತು. ಕಾಡೊಳಗೆ ಹೊಕ್ಕು ನವಿಲುಗಳು ಕುಣಿಯುವುದ ನೋಡಬೇಕು ಅನ್ನಿಸಲೇ ಇಲ್ಲ. 

                 ಯಾಕೋ ನನ್ನೊಳಗೇ ನಾನು ಹೀಗೆ ಬಲವಂತವಾಗಿ ಗಡಿಗಳನ್ನು ಹಾಕಿಕೊಂಡು ಸುಮ್ಮನೆ ಅದುಮಿಕೊಂಡು ಕುಳಿತಿರುವೆ. ಮನುಷ್ಯರು ಕಡಿಮೆ ಇರುವ, ಬರಿಯ ನದಿಯೊಂದು ಹರಿಯುವ ನೆಪದಿಂದ ಉಂಟಾಗಿರುವ ಈ ಜಾಗದಲ್ಲಿ ಮಗುವೊಂದರ ಜೊತೆ ಆಟವಾಡುತ್ತಾ ಕುಳಿತಿರುವೆ. ಈವತ್ತು ಸಂಜೆ ಮಗುವೂ ನಮ್ಮ ಜೊತೆ ನದಿಯಲ್ಲಿ ಆಟವಾಡಲು ಬಂದಿತ್ತು.

 ಈ ಮಗು ನನ್ನ ತಂಗಿಯ ಮಗು. ಈ ನನ್ನ ಮುದ್ದಿನ ತಂಗಿ ಮದುವೆಯಾಗಿರುವುದು ಬಿಜಾಪುರದ ಹುಡುಗನನ್ನು, ಈ ಹುಡುಗ ತುಂಬ ನಂಬುಗೆಯ ಒಳ್ಳೆಯ ಹುಡುಗ. ಎರಡು ವರ್ಷದ ಹಿಂದೆ ಇದೇ ನದಿಯ ತೀರದಲ್ಲಿ ಕುಳಿತು ಈ ಹುಡುಗನಿಗೆ ಬುದ್ಧಿವಾದ ಹೇಳಿದ್ದೆ. ನನ್ನ ತಂಗಿಯನ್ನು ಪ್ರೀತಿಸುತ್ತಿರುವ ಈತನಿಗೆ ಹಾಗೆ ಮಾಡಬೇಡವೆಂದೂ, ಹಾಗೇ ಮಾಡಿದರೆ ಆಗಬಹುದಾದ ಅನಾಹುತಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಹೇಳಿದ್ದೆ. ಅವರಿಬ್ಬರೂ ನನ್ನ ಮಾತೂ ಕೇಳದೆ ಮದುವೆಯಾಗಿ, ಈಗ ನೋಡಿದರೆ ಅವರ ಮಗುವಿಗೆ ಹಲ್ಲುಗಳೂ ಬಂದು, ನಡೆಯಲೂ ಕಲಿತು, ನದಿಯಲ್ಲಿ ಈಜಿಸಬೇಕೆಂದು ನನ್ನನ್ನು ಕೇಳುತ್ತಿದ್ದೆ. ಏನು ಹೇಳಬೇಕೆಂದು ಗೊತ್ತಾಗದೆ ಮಗುವಿನ ಜೊತೆಯಲ್ಲಿ ನದಿಯಲ್ಲಿ ಆಟವಾಡಿಕೊಂಡು ಬಂದೆ. ಇದನ್ನೆಲ್ಲಾ ಯಾರ ಬಳಿಯೂ ಹೇಳುವ ಹಾಗಿಲ್ಲ. ಹೇಳಿದರೆ ಊರಲ್ಲಿರುವ ನನ್ನ ಉಮ್ಮ ಅಳುತ್ತಾಳೆ. ಇದಕ್ಕೆಲ್ಲಾ ನೀವು ಏನು ಹೇಳುತ್ತೀರಾ? ನನಗೆ ಯಾಕೋ ನಗು ಬರುತ್ತದೆ. ಈ ನಗುವನ್ನು ನೀವೂ, ನನ್ನ ಉಮ್ಮನೂ, ಈ ಮಗುವೂ ಮತ್ತು ಪ್ರಪಂಚದ ಎಲ್ಲರೂ ಕೇಳಿಸಿಕೊಳ್ಳಲಿ ಎಂದು ಒಮ್ಮೆ ಜೋರಾಗಿ ಸದ್ದಾಗುವಂತೆ ನಕ್ಕು ಬಿಡುತ್ತೇನೆ.

[ಮೇಲಿನ ಚಿತ್ರದಲ್ಲಿರುವುದು ಈಗ ದೊಡ್ಡವನಾಗಿರುವ ಆ ಮಗು – ಅನನ್ಯ]

ಇನ್ನೊಂದು ವಿಷಯ, ಈ ಊರಿನ, ಕಾಳನಾಯಕ ಎಂಬ ಎಂಬತ್ತು ವರ್ಷದ ಮುದುಕನಿದ್ದು, ಒಂದು ಕಾಲದಲ್ಲಿ ಈ ಕಾಳನಾಯಕನಿಗೆ ಹೆದರಿ ಈ ಕಾಡಿರುವ ಜಾಗದಳೊಗೆ ಯಾರೂ ಕಾಲು ಇಡುತ್ತಿರಲಿಲ್ಲವಂತೆ. ಈಗ ಈ ಕಾಳನಾಯಕ ಇಲ್ಲಿ ಕಟ್ಟಡಗಳಿಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದಾನೆ. ನಿನ್ನೆ ಸಂಜೆ ಈ ಕಾಳನಾಯಕನಿಗೆ ಪೂಸಿ ಹೊಡೆದು ಮೀನು ಹಿಡಿದು ಕೊಡಲು ಕರಕೊಂಡು ಹೋಗಿದ್ದೆವು. ಈ ಮುದುಕ ಸಂಜೆ ಕತ್ತಲಾಗುವ ಹೊತ್ತಲ್ಲಿ ನದಿಯ ಕಲ್ಲಲ್ಲಿ ಕುಳಿತು ಬೀಡಿ ಕಚ್ಚಿಕೊಂಡು ನಮಗೆ ಹಾವು ಮೀನೊಂದನ್ನು ಹಿಡಿದುಕೊಟ್ಟ. ಆತ ಕಣ್ಣು ಮಿಟುಕಿಸುವಷ್ಟರಲ್ಲಿ ಕಪ್ಪೆಯೊಂದನ್ನು ಹಿಡಿದು, ಅದರ ಕಾಲುಗಳನ್ನು ಕಿತ್ತು ಬಿಸಾಕಿ ಗಾಳಕ್ಕೆ ಸಿಗಿಸಿ ನದಿಗೆ ಎಸೆದು ಧ್ಯಾನ ಮಾಡುತ್ತಾ ಕೂತ. ನಾನು ಸಿಗರೇಟು ಮುಗಿಸುವಷ್ಟರಲ್ಲಿ ಆ ಗಾಳಕ್ಕೆ ಹಾವು ಮೀನೊಂದು ಕಚ್ಚಿ, ಅದನ್ನು ಆತ ತೀರಕ್ಕೆ ಎಳೆದರೂ ಆಗಿತ್ತು. ಅದು ನಾನು ಜೀವಮಾನದಲ್ಲೇ ನೋಡಿರದಷ್ಟು ದೊಡ್ಡ ಹಮ್ಮಲು ಎಂಬ ಹಾವು ಮೀನು. ಆರೇಳು ಕೇಜಿ ತೂಕವಿತ್ತು. ಅದನ್ನು ಕೊಯ್ದರೆ ಅದರ ಹೊಟ್ಟೆಯೊಳಗಡೆ ಹೃದಯ, ಶ್ವಾಶಕೋಶ, ಪಿತ್ತಕೋಶ ಚರ್ಬಿ ಎಲ್ಲಾ ಇತ್ತು. ಅದು ಹಾವು ಅಂತ ಯಾರೂ ತಿನ್ನಲಿಲ್ಲ. ನನಗೂ ತಿನ್ನಲಾಗಲಿಲ್ಲ. ಅದನ್ನು ಕೊಂದ ಪಾಪ ನನ್ನಿಂದ ಇನ್ನೂ ಬಿಟ್ಟು ಹೋಗಲಿಲ್ಲ. ಅದು ಹಾವು, ಮೀನೋ, ಮೀನು ಹಾವೋ, ಎಂದು ಈಗಲೂ ಗುನುಗಿಕೊಂಡು ಕುಳಿತಿರುವೆ.

ಬೇರೆ ಏನು ಬರೆಯಲಿ? ಶಿಲ್ಲಾಂಗಿನಿಂದ ಬಂದು ಕನ್ನಡನಾಡಿನಲ್ಲಿ ಓಡಾಡುವಾಗ ಎಲ್ಲವೂ ಮೊದಲಿನ ಹಾಗೇ ಇದೆ ಎನ್ನಿಸುತ್ತಿದೆ. ಮೋಡಗಳು ಇನ್ನೂ ಕೆಳಗೆ ಇವೆ. ಆದರೆ ಗಂಡಸರು ಯಾಕೋ ಚಿನ್ನ ಹಾಕಿಕೊಳ್ಳುವುದು ಅತಿಯಾಗುತ್ತಿದೆ ಎನ್ನಿಸುತ್ತಿದೆ. ಮೊನ್ನೆ ಮಂಗಳೂರಿನಿಂದ ಕಾರ್ಕಳಕ್ಕೆ ಬರುವಾಗ ಗಂಡಸೊಬ್ಬ ಸುಮಾರು ೫ ಪವನಿನ ಚಿನ್ನದ ಸರ ಹಾಕಿಕೊಂಡಿದ್ದ. ಇನ್ನೊಬ್ಬ ಕೈಗೆ ಎರಡು ಚಿನ್ನದ ಕಡಗಗಳನ್ನು ಧರಿಸಿದ್ದ. ಇನ್ನೇನೂ ಬರೆಯುವುದಿಲ್ಲ. ಮೂರುನಾಲ್ಕು ದಿನದಲ್ಲಿ ತಿರುಗಿ ಹೋಗುತ್ತೇನೆ.
ಸಾಧ್ಯ ಆದರೆ ದಾರಿಯಲ್ಲಿ ಇಲ್ಲವಾದರೆ ಅಲ್ಲಿ ತಲುಪಿದ ಮೇಲೆ ಬರೆಯುತ್ತೇನೆ.

ಇತಿ

ರಶೀದ್

 

Advertisements