ಷಿಲ್ಲಾಂಗ್ ಪತ್ರ-೨: ತುರಾ ಎಂಬ ಊರು

 meghalaya-map.gif

ಪ್ರೀತಿಯ ಲಂಕೇಶರಿಗೆ,

ಇಲ್ಲಿ ಈಗ ಹೊರಗೆ ಪೂರ್ತಿ ಚಂದಿರನ ಬೆಳಕು. ಮನಸಲ್ಲಿ ಏನೂ ಇಟ್ಟುಕೊಳ್ಳದೆ ನಿಮಗೆ ಬರೆಯುತ್ತಿರುವೆ. ಈ ಚಂದಿರನ ಬೆಳಕಲ್ಲಿ ಮಂಗಳೂರಿನ ಕಡಲು ಹೇಗೆ ಇರಬಹುದು, ಕೊಡಗಿನ ಕೋಟೆ ಬೆಟ್ಟ ಹೇಗೆ ಹೊಳೆಯುತ್ತಿರಬಹುದು, ಹಗಲೆಲ್ಲಾ ರಾಜಕಾರಣದ ಕುರಿತು ಬರೆದು ಇರುಳಲ್ಲಿ ನೀವು ಏನು ಯೋಚಿಸುತ್ತಿರಬಹುದು ಎಂದೆಲ್ಲಾ ಯೋಚಿಸುತ್ತಾ ಕುಳಿತಿರುವೆ.

 ಮೊನ್ನೆ ಇಲ್ಲಿಯ ಚುನಾವಣೆಯ ಕುರಿತು ಸಮೀಕ್ಷೆ ಬರೆಯಲು ತುರಾ ಎಂಬ ಊರಿಗೆ ಹೋಗಿ ಬಂದೆ. ತುಂಬಾ ಚಂದದ ಊರು. ಗುಡ್ಡವೊಂದರ ಇಳಿಜಾರಿನ ತುಂಬಾ ಹರಡಿಕೊಂಡು ಮಲಗಿದೆ. ತೆಂಗು, ಕಂಗು, ಬಾಳೆ, ಹಲಸು ಮತ್ತು ಸ್ವಚ್ಛವಾಗಿ ಹರಿಯುವ ತೊರೆಗಳು. ಇದು ಪಿ.ಎ.ಸಂಗ್ಮಾರ ಊರು. ಗಾರೋ ಎಂಬ ಗುಡ್ಡಗಾಡು ಜನರ ಊರು. ಹೆಣ್ಣು ಮಕ್ಕಳು ತುಂಬಾ ಮುದ್ದಾಗಿದ್ದಾರೆ. ಸಂಜೆ ತುರಾ ಸೇರುವ ದಾರಿಯಲ್ಲಿ ಸೂರ್ಯಮುಳಗಿ ಮಂಕು ಮಂಕು ಬೆಳಕಿನಲ್ಲಿ ಕಂಡೂ ಕಾಣಿಸದಂತೆ ನದೀ ತೀರದಲ್ಲಿ ಮೀಯುತ್ತಿರುವ ಸುಂದರಿಯರು. ಕಂದಮ್ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುವ ತಾಯಂದಿರು. ಇಲ್ಲಿ ಮದುವೆಯಾಗಿ ಮಕ್ಕಳಿರುವ ಗಂಡಸರನ್ನು ಅವರ ಹೆಸರಿನಿಂದ ಕರೆಯುವುದಿಲ್ಲ. ದೊಡ್ಡ ಮಗನ ಅಥವಾ ಮಗಳ ಹೆಸರಿನಿಂದ ಕರೆಯುತ್ತಾರೆ. ಉದಾಹರಣೆಗೆ ಬೇಂದ್ರೆಯವರನ್ನು ವಾಮನರ ಅಪ್ಪ ಇತ್ಯಾದಿಯಾಗಿ. ಇರಲಿ ಬಿಡಿ. ಈ ರಾಜ್ಯದ ಸೌಂದರ್ಯ ಮತ್ತು ಗೋಳು.

ಶಿಲ್ಲಾಂಗಿನಿಂದ ತುರಾಗೆ ಹೋಗಬೇಕಾದರೆ 13 ಗಂಟೆ ಬಸ್ಸಲ್ಲಿ ಕೂತು ಇನ್ನೊಂದು ರಾಜ್ಯ ಅಸ್ಸಾಮಿನ ರಾಜಧಾನಿ ಗುವಾಹತಿಯ ಮೂಲಕ ಹೋಗಬೇಕು. ಬೆಂಗಳೂರಿನಿಂದ ಮಂಗಳೂರಿಗೆ ಕೊಯಂಬತ್ತುರಿನಿಂದ ಹೋದ ಹಾಗೆ. ರಾತ್ರಿ ಬಸ್ಸುಗಳ ಎರಡೂ ಬದಿ ಪೋಲಿಸರ escort. ನಾನು ಹೋದ ಒಂದುವಾರ ಮೊದಲು ಖಜಾನೆಯ ಹಣ ಸಾಗಿಸುತ್ತಿದ್ದ ವಾಹನದಿಂದ 86 ಲಕ್ಷ ರೂಪಾಯಿಯನ್ನು ಉಗ್ರಗಾಮಿಗಳು ಕೊಳ್ಳೆ ಹೊಡೆದಿದ್ದರು. ತುರಾದಲ್ಲಿ ಒಂದು ಬೆಂಗಾಲಿ restaurant ನಲ್ಲಿ ಚಾ ಕುಡಿಯುತ್ತಾ ಕುಳಿತಿದ್ದೆ. ಇಬ್ಬರು ಮೂವರು ಹುಡುಗರು ಬೈಕಲ್ಲಿ ಬಂದು protection ಹಣ ಕೇಳಿದರು. ಬೆಂಗಾಲಿ ಮುದುಕ ಹೆದರುತ್ತಾ 30 ರೂಪಾಯಿ ಕೊಟ್ಟ. ನಾನು ಮಾತಿಲ್ಲದೇ ಕೂತಿದ್ದೆ.

 ಹಿಂದೆ ಒಂದು ಸಲ ಹಣ ಮಾಡಿ ಕೊಡದಿದ್ದಕ್ಕೆ ನೂರು ರುಪಾಯಿ ಬೆಲೆಯ sweet ಕಟ್ಟಿಸಿ ಕೊಂಡು ಹಣ ಕೊಡದೆ ಹೋಗಿದ್ದರಂತೆ. ಹಣ ಸಂಪಾದಿಸಲು ಬಂದ ಈ ಬೆಂಗಾಲಿಗಳು, ಬಿಹಾರಿಗಳು, ಈಗ ಹೆದರಿಕೊಂಡು ಕೂತಿದ್ದಾರೆ. ಹಾಗೆ ನೋಡಿದರೆ ನಮ್ಮ ಕನ್ನಡನಾಡಲ್ಲೇ ನೆಮ್ಮದಿ ಇದೆ. ಹೋಗಲಿ ಬಿಡಿ. ಈಗಲಂತೂ ಮಧ್ಯರಾತ್ರಿ. ಹೊರಗಿನ ಚಂದಿರನ ಬೆಳಕನ್ನು ಊಹಿಸಿಕೊಂಡು ಪೂರ್ಣ ಮತ್ತಾಗಿ ಕುಳಿತಿರುವೆ. ಹುಣ್ಣಿಮೆಯ ಬೆಳಕು, ಕಾವಳ, ಚಳಿ, ಚುನಾವಣೆ, ಗುಡ್ಡಗಾಡು ಜನರು, ದೂರದ ಕನ್ನಡನಾಡು!

 ನೀವು ಅಪ್ಪನ ಜೊತೆ ಏಕಾಂಗಿಯಾಗಿ ಕೆರೆಯ ಏರಿಯ ಮೇಲೆ ಹೆದರುತ್ತಾ ಹೋಗಿದ್ದು, ಆಗುಂಬೆಯ ಹುಡುಗಿಯ ಪ್ರೇಮವನ್ನು ಊಹಿಸಿಕೊಂಡು ಅರ್ಧದಾರಿಯ್ಲಿ ಬಸ್ಸು ಇಳಿದು ಅವಳ ಮನೆಯ ಸೇರಿದ್ದು, ಇಡೀ ಪ್ರಪಂಚವೇ ಒಂದು ದೊಡ್ಡ ಹುಡುಗಾಟದಂತೆ ಕಾಣಿಸುತ್ತದೆ.

Advertisements