ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ

 ಇಪ್ಪತ್ತು ವರ್ಷಗಳಹಿಂದೆ ಒಂದುದಿನ ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ ಬಹುಶಃ ಆತ ಈ ದಿನಗಳಲ್ಲಿ ಒಂದು ದಿನ ಪೋಲೀಸರ ಗುಂಡಿಗೆ ಬಲಿಯಾಗುತ್ತಿದ್ದ ಅನಿಸುತ್ತಿದೆ.767897.jpg ಆತನ ಅಕ್ಕ ಹಸಿಹಸಿ ರೊಮಾಂಟಿಕ್ ಕವಿತೆ ಗಳನ್ನೂ ಕಡುಬಡವರ ಕುರಿತು ಲೇಖನಗಳನ್ನೂ ಬರೆಯುತ್ತಿದ್ದವಳು ಹೆಸರು ಮೀನಾಕ್ಷಿ ಅಂತ ಇಟ್ಟುಕೊಳ್ಳಿ ಆಂದ್ರದ ಪೋಲೀಸರ ಗುಂಡಿಗೆ ಈಗಾಗಲೇ ಆಹುತಿಯಾಗಿ ವರ್ಷಗಳೇ ಕಳೆದಿವೆ. ಮೀನಾಕ್ಷಿಯನ್ನು ಮದುವೆಯಾಗಿದ್ದ  ಕಾಮ್ರೇಡ್ ಕೂಡಾ ಇತ್ತೀಚೆಗಷ್ಟೇ ಪೋಲೀಸರ ಗುಂಡಿಗೆ ಬಲಿಯಾದ.

ಆದರೆ ಅದೃಷ್ಟವಶಾತ್ ಇಪ್ಪತ್ತು ವರ್ಷಗಳ ಹಿಂದೆ ಒಂದು ದಿನ ಒಂದು ಹಾಡಿಯಲ್ಲಿ ಬಡವರು ವಿಶ್ವನಾಥನ ಹೊಸಾ ಚಪ್ಪಲಿಯನ್ನು ಕದ್ದದ್ದರಿಂದ ಆತ ಪೋಲೀಸರ ಗುಂಡಿನಿಂದ ಬಚಾವಾದ.ಅದಕ್ಕಾಗಿ ಆ ಹಾಡಿಯ ಬಡಗಿರಿಜನರಿಗೆ ನಾನು ಈ ಮೂಲಕ ಕೃತಜ್ನತೆಗಳನ್ನು ಸಲ್ಲಿಸುತ್ತಿದ್ದೇನೆ.

 ವಿಶ್ವನಾಥ ಮೈಸೂರಿನ ಸರಸ್ವತಿಪುರಂ ನಂತಹ ಮದ್ಯಮ ವರ್ಗದ ಬಹುತೇಕ ಒಳ್ಳೆಯ ಆಸೆಗಳನ್ನೇ ಇಟ್ಟುಕೊಂಡಿರುವ ಜನರಿಂದ ತುಂಬಿಕೊಂಡಿರುವ ಬಡಾವಣೆಯಂತಹ ಬಡಾವಣೆಯ ಹುಡುಗ.ಆತನ ಅಪ್ಪ ಮೈಸೂರಿನ ಸರಕಾರೀ ಮುದ್ರಣಾಲಯದಲ್ಲಿ ಅಚ್ಚು ಜೋಡಿಸುತ್ತಾ ಇದ್ದ ಮಾಮೂಲೀ  ಮನುಷ್ಯನಂತಿದ್ದ ಅಪ್ಪ. ಅಮ್ಮ ವಿಶಾಲಾಕ್ಷಮ್ಮ ಎಂಬ ಹಾಗೇ ಕೇಳಿಸುತ್ತಿದ್ದ ಹೆಸರಿನ ಹೆಂಗಸು. ಮನೆ ತುಂಬಾ ದೇವರ ಪಟಗಳನ್ನು ಇಟ್ಟುಕೊಂಡಿದ್ದರು.ಅವರು ಬಹುಷಃ ತಿರುಪತಿ ಒಕ್ಕಲು ಅಂತ ಕೇಳಿದ ನೆನಪು. ಆದರೆ ಅವರು ನೋಡಲು ತುಂಬಾ  ಮುಂದುವರಿದ ಜಾತಿಗೆ ಸೇರಿದವರು ಇದ್ದ ಹಾಗೆ ಇದ್ದರು.

 ಹಾಗೆ ನೋಡಿದರೆ ವಿಶ್ವನಾಥನಿಗೆ ಸರಸ್ವತಿಪುರಂ ಪಕ್ಕದಲ್ಲೇ ಇದ್ದ  ಕುಕ್ಕರಹಳ್ಳಿಯ ಹುಡುಗರ ಜೊತೆಗೂ ಸರಸ್ವತಿ ಪುರಂ ಒಂದನೇ ಮೈನ್ ನಲ್ಲಿದ್ದ ಮುಸ್ಲಿಂ ಹಾಸ್ಟೆಲಲ್ಲಿ ತಿಂದುಂಡು ಚೆನ್ನಾಗಿ ಬೆಳೆಯುತ್ತಿದ್ದ ನನ್ನ ಜೊತೆಗೂ ಅವಿನಾಭಾವ ಸಂಬಂಧ  ಕೂಡಿ ಬಂದಿದ್ದು ಕ್ರಾಂತಿಯ ಪಾಠ ಹೇಳಿಕೊಡುತ್ತಿದ್ದ ಕಾಮ್ರೆಡ್ ನಿಂದಾಗಿ. 

 ಒಂಟಿಕೊಪ್ಪಲಲ್ಲಿದ್ದ ನಿವೃತ್ತ ಸೇನಾದಿಕಾರಿಯೊಬ್ಬರ ಮಗನಾಗಿದ್ದ ಕಾಮ್ರೇಡ್ ಸಿಕ್ಕಾಪಟ್ಟೆ ಒಳ್ಳೆ ಮನುಷ್ಯ.ಆದರೆ ಸಶಸ್ತ್ರ  ಕ್ರಾಂತಿಯ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಿನ ಮನುಷ್ಯ.ಬಡವರ ಕಷ್ಟದ ಬಗ್ಗೆ ಆತನಿಗೆ ಸಣ್ಣದಿರುವಾಗಲೇ ಎಷ್ಟು ಕಾಳಜಿ ಇತ್ತು ಅಂದರೆ ಮನೆಕೆಲಸದವಳು ಒಗೆದು ಒಗೆದು ಸೊರಗಬಾರದು ಎಂದು ಎರಡೇ ಜೊತೆ ಬಟ್ಟೆ ಇಟ್ಟುಕೊಂಡು ತಾನೇ ಅಪ್ಪನ ಕಣ್ಣು ತಪ್ಪಿಸಿ ಒಗೆಯುತ್ತಿದ್ದ.ಅಮ್ಮನಿಗೆ ಕಷ್ಟವಾಗದಿರಲಿ ಎಂದು ಅಮ್ಮ ದೋಸೆಗೆ ಅರೆಯುತ್ತಿದ್ದರೆ ತಾನು ತರಕಾರಿ ಹಚ್ಚಿಕೊಡುತ್ತಿದ್ದ.ಇದನ್ನೆಲ್ಲ ನನಗೆ ಹೇಳಿದ್ದು ಕಾಮ್ರೇಡ್ ಗುಂಡಿಗೆ ಬಲಿಯಾಗಿ ೨೪ ಗಂಟೆ ಕಳೆದ ಮೇಲೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದ ಆತನ ಅಮ್ಮ.

 ಅದೆಲ್ಲ ಇರಲಿ ನಾನು ಈಗ ವಿಶ್ವನಾಥನ ವಿಷಯ ಹೇಳುತ್ತೇನೆ. ಈತ ರಸ್ತೆಯಲ್ಲಿ ಬಿದ್ದ ಕಲ್ಲುಗಳನ್ನು ಕಾಲಿನಿಂದ ಬಾಲಿನಂತೆ ಒದೆಯುತ್ತಾ ಅದಾಗ ಮುಖದ ತುಂಬ ಹರಡಿಬಿಟ್ಟಿದ್ದ ಮೊಡವೆಗಳನ್ನು ಚಿವುಟುತ್ತ ಓಡಾಡುವ ನವಯುವಕನಂತಿದ್ದ ಹುಡುಗ. ಅದು ಹೇಗೋ ಅಕ್ಕನಿಂದ ಕಾಮ್ರೇಡನ ಪರಿಚಯವಾಗಿ ಕಾಮ್ರೇಡನಿಂದ ನನ್ನ ಪರಿಚಯವಾಗಿ, ಕುಕ್ಕರಹಳ್ಳಿಯ ಹುಡುಗರ ಪರಿಚಯವಾಗಿ ನಾವು ಎಲ್ಲ ಸೇರಿ ಹಾಡು ಹಾಡುತ್ತ ತಮಟೆ ಬಡಿಯುತ್ತಾ ಬಡವರು ಅದಕ್ಕಿಂತ ಹೆಚ್ಚಾಗಿ ಕೂಲಿ ಕಾರ್ಮಿಕರಿರುವ ಕಡೆ ಹೋಗಿ ಭಾಷಣ ಮಾಡಿ ಬರುತ್ತಿದ್ದೆವು.ವಿಶ್ವನಾಥ ನಮ್ಮ ಜೊತೆಗೇ ಇರುತ್ತಿದ್ದ.ಆದರೆ ಯಾವಾಗಲೂ ತನ್ನ ಹೊಸ ಚಪ್ಪಲಿ ಕೆಸರಲ್ಲಿ ಹೂತು ಹೋಗಬಾರದು ಮಳೆಯಲ್ಲಿ ನೆನೆಯಬಾರದು ಬಿಸಿಲಲ್ಲಿ ಮಂಕಾಗಬಾರದು ಎಂದು ಜಾಗರೂಕನಾಗಿರುತ್ತಿದ್ದ.ನಾನಾದರೋ ಕಾಫಿ ತೋಟದಲ್ಲಿ ನನ್ನ ಅಪ್ಪ ಹಾಕಿ ಹಳೆಯದಾಗಿದ್ದ ಗಂಬೂಟುಗಳನ್ನು ದರಿಸಿಕೊಂಡು ಓಡಾಡುತ್ತಿದ್ದುದರಿಂದ ಮತ್ತು ತಮಟೆ ಬಡಿಯಲು ಹೊಸದಾಗಿ ಕಲಿತ್ತಿದ್ದರಿಂದ ಆ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದೆ.ಅದರ ಹೊರತಾಗಿ ನಾನು ಏನು ಮಾತನಾಡಿದೆ ಎಂಬುದರ ಕುರಿತು ನನಗೆ ಹೆಚ್ಚಿನದೇನೂ ಪಾಂಡಿತ್ಯವಿರಲಿಲ್ಲ.ಒಮ್ಮೊಮ್ಮೆ ಭೂಕ್ರಾಂತಿ ಅನ್ನು ವಲ್ಲಿ ಬ್ರೂಕ್ರಾಂತಿಯೆಂದೂ ಬಂಡವಾಳಶಾಹಿ ಅನ್ನಬೇಕಾದ ಕಡೆ ಸಾಮ್ರಾಜ್ಯಶಾಹಿ ಎಂತಲೂ ಅಂದು ಆಮೇಲೆ ತಪ್ಪುಗೊತ್ತಾಗಿ ನಾಲಿಗೆ ಕಚ್ಚಿಕೊಂಡು ಮನಸ್ಸಲ್ಲೇ ಆ ಪದಗಳನ್ನು ಸರಿ ಮಾಡಿಕೊಂಡು ಓಡಾಡುತ್ತಿದ್ದೆ.ಆ ಕಾಲದಲ್ಲಿ ಯಾವಾಗಲೂ ನನ್ನ ಮುಖ ಓರ್ವ ತಪ್ಪಿತಸ್ತನ ಮುಖದಂತೆ ಕಾಣಿಸುತ್ತಿತ್ತು.

 ಊರಿಗೆ ಹೋದಾಗಲೆಲ್ಲಾ ನನ್ನ ಅಮ್ಮ ನೀನು ಏನೋ ತಪ್ಪು ಮಾಡಿದ್ದೀಯಾ ಎನ್ನುವ ಹಾಗೆ ನೋಡುತ್ತಿದ್ದಳು. ನಾನು ಇಲ್ಲಾ ನಾವು ಬಡವರ ಪರವಾಗಿ ಹಾಡು ಹೇಳುತ್ತಾ ತಿರುಗುತ್ತಿದ್ದೇವೆ.ಬಡವರಿಗೆ ಸಹಾಯ ಮಾಡುತ್ತಿದ್ದೇವೆ.ಆಗ ಆಕೆ `ಸರಿ ಬಡವರಿಗೆ ಏನು ಬೇಕಾದರೂ ಸಹಾಯ ಮಾಡು.ಆದರೆ ಏನೂ ತಪ್ಪು ಮಾಡಬೇಡ ‘ಅನ್ನುತ್ತಿದ್ದಳು.ತಪ್ಪು ಅಂದರೆ ಆಕೆಯ ಪ್ರಕಾರ ನಿಷಿದ್ಧವಾದ ಮಾಂಸವನ್ನು ತಿನ್ನುವುದು.ನಿಷಿದ್ಧ ಅಂದರೆ ಪಡೆದವನ ಹೆಸರಲ್ಲಿ ವಧಿಸದೇ ಇರುವ ಪ್ರಾಣಿಗಳ ಮಾಂಸ. ಅದಕ್ಕಿಂತ ಬೇರೆ ತಪ್ಪುಗಳ ಹೆಸರು ಹೇಳಲೂ ಅವಳು ಹೆದರುತ್ತಿದ್ದಳು. ನಾನು ಹೇಳಿಕೊಳ್ಳಲು ಅಂಜುತ್ತಿದ್ದೆ.

 ಅದೆಲ್ಲಾ ಇರಲಿ. ನಾನು ವಿಶ್ವನಾಥನ ವಿಷಯಕ್ಕೆ ಬರುತ್ತೇನೆ. ನನಗೆ ವಿಶ್ವನಾಥನ ಮುಖ ಕಣ್ಣ ಮುಂದೆ ಬಂದದ್ದು ಮೊನ್ನೆ  ಪೋಲೀಸರ ಗುಂಡಿಗೆ ಹತನಾದ ಯುವಕನೊಬ್ಬನ ಹತದೇಹದ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದಾಗ.ಅದರಲ್ಲೂ ಆತ ದರಿಸಿದ್ದ ಹೊಸತಾದ ಚಪ್ಪಲಿಯನ್ನು ನೋಡಿದಾಗ. ಆ ಹುಡುಗ ಆ ಹೊಸ ಚಪ್ಪಲಿ ದರಿಸಿಕೊಂಡು ಯಾವ ಪರಿವೆಯೂ ಇಲ್ಲದೆ ಆ ಇಂಬಳ ತುಂಬಿದ ಕಾಡಿನಲ್ಲಿ ಬಂದೂಕು ಹಿಡಿದುಕೊಂಡು ಶಸಸ್ತ್ರ ಕ್ರಾಂತಿಯ ಕನಸು ಕಾಣುತ್ತಾ ನಿದ್ದೆಯಲ್ಲಿ ನಡೆಯುವವನಂತೆ ನಡೆಯುತ್ತಾ ಒಮ್ಮೆಗೆ ಚೀರಿ ಪ್ರಾಣ ಬಿಟ್ಟಿರುವನು ಎಂದು ಯೋಚಿಸುವಾಗಲೆಲ್ಲ ನನಗೆ ವಿಶ್ವನಾಥನ ನೆನಪಾಗುತ್ತದೆ.ಜೊತೆಗೆ ಆತನ ಚಪ್ಪಲಿಯನ್ನು ಕೊಳ್ಳೇಗಾಲದ ಬಳಿಯ ರಾಮಾಪುರ ಹೋಬಳಿಯ ಹಾಡಿಯೊಂದರ ಬಡಗಿರಿಜನರು ಎಗರಿಸಿದ್ದರಿಂದಾಗಿ ಆತ ಉಳಿದು ಕೊಂಡಾ ಎಂದೂ ಅನಿಸುತ್ತದೆ. 

 ಅದು ೧೩ ವರ್ಷಗಳ ಹಿಂದೆ . ಮಂಗಳವಾರ. ನಾವು ನಡೆಯುತ್ತ ನಡೆಯುತ್ತ ಚಂಗಡಿ ತಲುಪುವಾಗ ಸಂಜೆಯಾಗಿತ್ತು.ಸಿಕ್ಕಾಪಟ್ಟೆ ಹಸಿವಾಗುತ್ತಿತ್ತು.ನಮಗೆ  ಯಾರೂ ಅನ್ನ ಹಾಕಿರಲಿಲ್ಲ.ಬಡವರ ಮನೆಯಲ್ಲಿ ಮಾತ್ರ ಉಣ್ಣಬೇಕೆಂದು ನಿಯಮವಿತ್ತು.ಆದರೆ ಆ ಊರಿನಲ್ಲಿ ಶ್ರೀಮಂತರಿಗೂ ಉಣ್ಣಲು ಏನೂ ಇರಲಿಲ್ಲ.ಅವರಿಗೆ ಬಡವರ ಪರವಾಗಿ ಹಾಡಲು ಬಂದ ನಾವೇ ಶ್ರೀಮಂತ ಶೋಕಿ ಹುಡುಗರಂತೆ ಕಾಣಿಸುತ್ತಿದ್ದೆವು.ಆ ಸಮಯದಲ್ಲಿ ವೀರಪ್ಪನ್ ಕೂಡಾ ಆ ಅರಣ್ಯದಲ್ಲಿ ಬಡವರ ಬಂಧುವಿನಂತೆ ಓಡಾಡುತ್ತಿದ್ದುದುದರಿಂದ ಆ ಹಾಡಿಯ ಮಂದಿ ನಮ್ಮನ್ನು ಗುಮಾನಿಯಿಂದಲೇ ನೋಡಿದ್ದರು.ಯಾರೂ ಹಸಿವೆಯಾಗಿದೆಯೇ ಎಂದೂ ಕೇಳಲಿಲ್ಲ.ತಿನ್ನುವುದಕ್ಕಾಗಿಯೇ ಬದುಕಿಕೊಂಡಿದ್ದ ನನಗೆ ಅಳುವೇ ಬಂದಿತ್ತು.ವಿಶ್ವನಾಥ ಬಡವರಿಗೆ ಒಂಚೂರೂ ಮ್ಯಾನರ್ಸ್ ಇಲ್ಲ ಎಂದು ಗೊಣಗುತ್ತಿದ್ದ.ಅದು ಬೇರೆ ಆ ಊರಿನಲ್ಲಿ ಕಿರುಬವೊಂದು ಕುರಿಯೊಂದನ್ನು  ಎತ್ತಿಕೊಂಡು ಹೋಗಿ ಆ ಊರಿನ ಕ್ರಾಂತಿಕಾರಿಗಳಾಗಬೇಕು ಎಂದು ನಾವು ಆಶೆ ಪಟ್ಟಿದ್ದ ತರುಣರೆಲ್ಲ ಕಿರುಬನನ್ನು ಅಟ್ಟಿಸಿಕೊಂಡು ಹೋಗಿ ನಾವು ಯಾರಿಗೆ ಕ್ರಾಂತಿಗೀತೆ ಹಾಡಬೇಕೆಂದು ಗೊತ್ತಾಗದೆ ಕಂಗಾಲಾಗಿಬಿಟ್ಟಿದ್ದೆವು.ಹಸಿವು ಬೇರೆ ನಮ್ಮನ್ನು ಅಸಾಧ್ಯವಾಗಿ ತಿನ್ನುತ್ತಿತ್ತು.ನಾವು ಕತ್ತಲಲ್ಲಿ ನಿದ್ದೆ ತೂಗುತ್ತಾ ಯಾವುದೋ ಮೂಲೆಯಲ್ಲಿ ಬಿದ್ದುಕೊಂಡಿದ್ದವರನ್ನು ಅವರು ನಡುರಾತ್ರಿಯಲ್ಲಿ ಎಬ್ಬಿಸಿ ಕಿರುಬ ತಿಂದು ಉಳಿದಿದ್ದ ಕುರಿಯಮಾಂಸದ ಸಾರಿಗೆ ಅದ್ದಿಕೊಂಡು ತಿನ್ನಲು ಜೋಳದ ಮುದ್ದೆಯನ್ನು ಕೊಟ್ಟಿದ್ದರು.ನಾವು ಆ ಶ್ರೀಮಂತ ಮುದ್ದೆಯನ್ನು ಮುಖಕಿವಿಚುತ್ತಾ ಆ ನಡು ರಾತ್ರಿಯಲ್ಲಿ ಗಂಟಲಿಗೆ ಇಳಿಸಿದ್ದವು. ನನಗೂ ವಿಶ್ವನಾಥನಿಗೂ ಮುದ್ದೆಯನ್ನು ಬಡವರು ಸಾರಿಗೆ ಅದ್ದಿ ತಿನ್ನುತ್ತಾರೆ ಎಂದು ಗೊತ್ತಿರಲಿಲ್ಲ.ಕಚ್ಚಿ ತಿನ್ನಲು ಹೋಗಿ ಹಲ್ಲಿಗೆಲ್ಲಾ ಅಂಟಿಸಿಕೊಂಡು ನಮಗೆ ಸಿಟ್ಟು ಸಂಕಟ ಹಸಿವು ಅವಮಾನ ಎಲ್ಲಾ ಆಗಿ ಹೇಗೋ ಬೆಳಗಾಗಿತ್ತು.

 ಬೆಳಗ್ಗೆ ಎದ್ದರೆ ವಿಶ್ವನಾಥನ ಹೊಸ ಚಪ್ಪಲಿ ಕಾಣಿಸುತ್ತಿರಲಿಲ್ಲ. ಅದನ್ನ ಯಾವುದೋ ನಾಯಿಯೋ ಮಿಗವೋ ಕಾಡಿಗೆ ಹೊತ್ತೊಯ್ದಿರಬೇಕೆಂದು ನಾವು ಎಷ್ಟು ಹೇಳಿಕೊಂಡರೂ ಆತನಿಗೆ ಬಡವರ ಬಗ್ಗೆ ಒಂದಿಷ್ಟು ಕನಿಕರ ಅನಿಸಲಿಲ್ಲ.ಬದಲು ಅವರನ್ನೆಲ್ಲ ದ್ವೇಷಿಸಲು ಶುರು ಮಾಡಿದ. ತನ್ನ ಹೊಸ ಚಪ್ಪಲು ಯಾಮಾರಿಸಿದ ಬಡವರಿಗೆ ಕ್ರಾಂತಿ ಬೇಡವೇ ಬೇಡ ಅದಕ್ಕೆ ಅವರು ಯಾರೂ ಅರ್ಹರಲ್ಲ.ತನ್ನ ಕೈಯ್ಯಿಂದ ಕ್ರಾಂತಿಯ ಕೆಲಸ ಸಾಧ್ಯವೇ ಇಲ್ಲ ಎಂದು ಸಿಟ್ಟು ಮಾಡಿ ಹೊರಟವನು ಆ ಮೇಲೆ ಇದುವರೆಗೂ ನನಗೆ ಕಾಣಿಸಿಯೇ ಇಲ್ಲ.

 ಮೊನ್ನೆ ಪತ್ರಿಕೆಗಳಲ್ಲಿ ಹೊಸ ಚಪ್ಪಲಿ ಹಾಕಿಕೊಂಡು ಪೋಲೀಸರ ಗುಂಡಿಗೆ ಬಲಿಯಾದ ಮೂಡಿಗೆರೆಯ ಯುವಕನ ಚಿತ್ರ ನೋಡಿ ನನಗೆ ಯಾಕೋ ಆತನ ನೆನಪಾಯಿತು.ಇನ್ನು ಏನೇನೋ ನೆನಪುಗಳು.ಸಿಟ್ಟು,ಸಂಕಟ,ಹತಾಶೆ.ಅವಮಾನ.ನನ್ನ ಅಮ್ಮ.ಕಾಮ್ರೇಡನ ಅಮ್ಮ.ವಿಶ್ವನಾಥನ ಅಕ್ಕ ಇನ್ನೂ ಏನೇನೆಲ್ಲಾ..

  ಅಕಸ್ಮಾತ್ ವಿಶ್ವನಾಥ ಇದನ್ನು ಓದಿದರೆ ಚಪ್ಪಲಿ ಕದ್ದು ತನ್ನ ಪ್ರಾಣ ಉಳಿಸಿದ ಬಡವರ ಪರವಾಗಿರಲಿ ಎಂದು ಬೇಡಿಕೊಳ್ಳುತ್ತೇನೆ.

Advertisements