ಷಿಲ್ಲಾಂಗ್ ಪತ್ರ-೧

[೧೯೯೮-೯೯ ರಲ್ಲಿ ಮೇಘಾಲಯದ ರಾಜಧಾನಿ ಷಿಲ್ಲಾಂಗಿನಿಂದ ನಾನು ಪಿ.ಲಂಕೇಶರಿಗೆ ಬರೆದ ಪತ್ರಗಳನ್ನು ಈಗ ಒಂದೊಂದಾಗಿ ಪೋಸ್ಟ್ ಮಾಡುತ್ತಿರುವೆ . ಓದಿ ಖುಷಿ ಪಡಿ ಎನ್ನದೆ ಇನ್ನೇನು ಹೇಳಲಿ.]

shillong.jpg

ಪ್ರೀತಿಯ ಲಂಕೇಶರಿಗೆ,

ಇಲ್ಲಿ ಈಗ ಫೆಬ್ರವರಿಯ ಗಾಳಿ ಬೀಸಲು ಶುರುವಾಗಿದೆ. ರಾತ್ರಿಯೆಲ್ಲಾ ಪೈನ್ ಮರಗಳ ಎಡೆಯಿಂದ ಬೀಸುವಗಾಳಿ. ಬೆಳಗ್ಗೆ ಏಳುವ ಮೊದಲೇ ಅಷ್ಟು ಎತ್ತರಕ್ಕೆ ಬಂದಿರುವ ಸೂರ್ಯ. ಮುಂಜಾನೆ ಆರು ಆರೂವರೆಯ ಹೊತ್ತಿಗೆ ಇಡೀ ಊರು ಮಂದಹಾಸದಂತಹ ಬಿಸಿಲಿನಲ್ಲಿ ಲಕಲಕ ಹೊಳೆಯುತ್ತಿರುತ್ತದೆ. ಮಧ್ಯಾಹ್ನದ ಹೊತ್ತು ಮಾರುಕಟ್ಟೆಯಲ್ಲಿ ಬಿದಿರುಬುಟ್ಟಿಯ ತುಂಬಾ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡು ಮಾರಲು ಕುಳುತಿರುವ ಹೆಣ್ಣುಮಕ್ಕಳನ್ನು ನೀವು ನೋಡಬೇಕು. ಸೂರ್ಯನ ಹೊಳಪು, ಕಿತ್ತಳೆಯ ಬಣ್ಣ ಮತ್ತು ಅವರ ಕೆನ್ನೆಯ ಗುಲಾಬಿರಂಗು, ಊರಲ್ಲಿ ಯಾರಾದರೂ ಗುಲಾಭಿಯಂತಹ ಕೆನ್ನೆ ಅಂದರೆ ನಗುಬರುತ್ತಿತ್ತು. ಇಲ್ಲಿ ಗುಲಾಬಿ ಕೆನ್ನೆಗಳನ್ನು ಕಂಡು ದುಗುಡವಾಗುತ್ತದೆ.

 ನಿಮಗೆ ಇದೆಲ್ಲಾ ಓದಿ ನಗುಬರಬಹುದು. ಅವತ್ತು ಕಂಡಾಗ ಬರೀ ಭಾವುಕನಾಗಿ ಬರೀತಿಯಾ, ಕೊಂಚ ಕರಾರುವಕ್ಕಾಗಿ ಬರೆಯಲು ಕಲಿ ಅಂತ ಹೇಳಿದ್ದೀರಿ. ನಾನು ಕರಾರುವಕ್ಕಾಗುವುದನ್ನು ಯೋಚಿಸಿ ನನಗೇ ನಗುಬರುತ್ತಿದೆ. ಇರಲಿಬಿಡಿ. ವಿಷಯ ಏನು ಗೊತ್ತಾ? ಇಲ್ಲಿ ಸೌಂದರ್ಯ ಎಷ್ಟೊಂದು ಚಂಚ. ಎಷ್ಟೊಂದು ಹತ್ತಿರ. ಆದರೆ ಅಷ್ಟೇದೂರ. ನೀವು ಮನುಷ್ಯರನ್ನು ಅವರ ಕೆನ್ನೆಯ ಎಲುಬು, ಮೂಗಿನ ಹೊಳ್ಳೆ, ಕಾಲಿನ ಮೀನುಖಂಡಗಳಿಂದ ಗುರುತು ಹಿಡಿಯಬಹುದು. ನಿಮ್ಮ ಮುಖ, ನಿಮ್ಮ ಬುಡಕಟ್ಟನ್ನು  ಹೇಳಿಬಿಡುತ್ತದೆ. ಮಾತುಕತೆ, ಪ್ರೀತಿ, ಪ್ರೇಮ ಇದೆಲ್ಲಾ ನಿಮ್ಮ ಮುಖಲಕ್ಷಣದಿಂದಲೇ ತೀರ್ಮಾನವಾಗುತ್ತದೆ. ಹೊರಗಿನವನು ಗುಂಪಲ್ಲಿ ಎದ್ದು ಕಾಣುತ್ತಾನೆ. ಹಾಗಾಗಿ ಗುಂಪಲ್ಲಿ ಅಜ್ಞಾತವಾಗಿ ತಿರುಗುವುದು ಕಷ್ಟವಾಗುತ್ತದೆ. ಅಲ್ಲಿ ಇರುವಾಗ ಹಾಸನ ಬಸ್ ಸ್ಟಾಂಡಲ್ಲಿ, ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಸುಮ್ಮನೆ ಗಂಟೆಗಟ್ಟಲೆ ಕುಳಿತಿರುತ್ತಿದ್ದೆ. ಇಲ್ಲಿ ಅದೆಲ್ಲಾ ತುಂಬಾ ಕಷ್ಟ ಮತ್ತು ಅಪಾಯಕಾರಿ. ಮೊನ್ನೆ ರಾತ್ರಿ ಸಿಗರೇಟಿಗೆ ಅಂತ ನಾಗಾ ಶಾಲುಹೊದ್ದು ಹೊರಗೆ ಹೋಗಿದ್ದೆ.. ಕತ್ತಲಲ್ಲಿ ಒಬ್ಬಾತ ಕುಡಿದು ಮತ್ತಾಗಿ ಇಬ್ಬರು ಬಿಹಾರಿಯರ ಕಾಲರ್ ಹಿಡಿದು ಕೆನ್ನೆಗೆ ಹೊಡೆಯುತ್ತಿದ್ದ. ಅವರು ಹೊಡೆಸಿಕೊಳ್ಳುತ್ತಿದ್ದರು. ನನಗೂ ಹೊಡೆಯಲು ಬಂದ.

 ಆ ರಾತ್ರಿ ಕತ್ತಲಲ್ಲಿ ಸಾಹಿತ್ಯ, ವಿದ್ಯೆ, ರಾಜಕೀಯ ಎಲ್ಲಾ ತಮಾಷೆಯಾಗಿ ಕಾಣುತ್ತಿತ್ತು. ನಾನು ನಾಗಾ ಶಾಲು ಹೊದ್ದದ್ದರಿಂದ, ಮತ್ತು ಬುಡಕಟ್ಟು ಮನುಷ್ಯನಂತೆ ಆತನನ್ನು ದುರುಗುಟ್ಟಿ ನೋಡಿದ್ದರಿಂದ ಬಚಾವ್ ಆದೆ.

ಯೋಚಿಸುವಾಗ ಈಗಲೂ ಕೆನ್ನೆ ಚುರುಗುಟ್ಟುತ್ತಿದೆ. ಆಮೇಲಿಂದ ಸಿಗರೇಟ್ ತಂದು ಇಟ್ಟುಕೊಳ್ಳುತ್ತಿದ್ದೇನೆ. ಹೋಗಲಿ ಬಿಡಿ, ಆದರೂ ನಾನು ಖುಷಿಯಲ್ಲಿದ್ದೇನೆ. ಹಗಲಲ್ಲಿ ಈ ಊರು ಅಷ್ಟೊಂದು ಚಂದವಾಗಿದೆ. ನಾನಂತೂ ಈಗ ಮನುಷ್ಯರ ಮುಖ ಲಕ್ಷಣದಿಂದಲೇ ಯಾರು ಮಿಜೋ, ಯಾರು ನಾಗಾ, ಯಾರು ಗಾರೋ, ಯಾರು ಬೋಡೋ ಮತ್ತು ಯಾರು ಮಣಿಪುರಿ ಅಂತ ಗುರುತಿಸಬಲ್ಲೆ, ಇಲ್ಲಿಯ ಮೂಲ ನಿವಾಸಿಗಳಾದ ಕಾಸಿ ಜನಾಂಗದವರು ಉಡುಪಿನಲ್ಲಿ ನೋಡಲು ನಮ್ಮ ಕೊಡವ ಜನಾಂಗದಂತಿದ್ದಾರೆ. ಮೂಗು ಸ್ವಲ್ಪ ಸಂಪಿಗೆಯಂತೆ ಇದೆ. ಕಾಲು ಕುಳ್ಳಗೆ ಬಲಿಷ್ಟವಾಗಿದೆ. ಎಲೆಯಡಿಕೆಗೆ ‘ಕ್ವಾಯ್’ ಅನ್ನುತ್ತಾರೆ. ಯಾವತ್ತೂ ಎಲೆಅಡಿಕೆ ಹಾಕುತ್ತಾರೆ. ಕೆಲವು ಹೆಂಗಸರ ತುಟಿಯಂತೂ ಸುಣ್ಣ ಬೆರೆಸಿದ ಎಲೆ ಅಡಿಕೆಯಿಂದಾಗಿ ಬೆಂಕಿಯಲ್ಲಿ ಉರಿದು ಹೋಗುವಂತೆ ಇದೆ. ಹಾಲಿಲ್ಲದ ಕಪ್ಪು ಚಾ ಕುಡಿಯುತ್ತಾರೆ. ನಾನೂ ಅದನ್ನೇ ಕುಡಿಯುತ್ತಾ ನಿಮಗೆ ಬರೆಯುತ್ತಿದ್ದೇನೆ. ನಿಮ್ಮ ಗಾಂಧೀಬಜಾರಿನಲ್ಲಿ ಮಲ್ಲಿಗೆ ಮಾರುವಂತೆ ಇಲ್ಲಿ ಬೀದಿಬೀದಿಯಲ್ಲಿ ಮಾಂಸ ಮಾರುತ್ತಾರೆ. ಶುದ್ಧ ಮಾಂಸಾಹಾರಿಯಾದ ನನಗೇ ತಲೆ ತಿರುಗುವಂತೆ ಕೆಲವೊಮ್ಮೆ ಅನಿಸುತ್ತದೆ. ಹಲಸಿನ ಹಣ್ಣು ಕತ್ತರಿಸಿಟ್ಟಂತೆ ಕಾಣಿಸುವ ಹಂದಿಯ ಮಾಂಸ!.

ಯಾಕೋ ಬರೆಯುತ್ತಾ ನಾನು emotional  ಆಗುತ್ತಿರುವೆ. ಯಾಕೋ ಈ ರಾತ್ರಿ ಹೊತ್ತು ನಿಮಗೆ ಬರೆಯುತ್ತಾ ನನಗೆ ತೀರಿಹೋದ ನನ್ನ ಬಾಪಾನ ನೆನಪಾಗುತ್ತಿದೆ. ನೀವು ಭಾವುಕ ಅಂದುಕೊಂಡರೂ ಪರವಾಗಿಲ್ಲ. ನನ್ನ ಬಾಪಾ ತಿರುಗಿ ಬೇಕು ಅನ್ನಿಸುತ್ತದೆ.

ನಾವು ಸಣ್ಣದಿರುವಾಗ ಬಾಪಾನ ಕೈ ಬೆರಳುಗಳೊಂದಿಗೆ ಆಟವಾಡುತ್ತಿದ್ದೆವು. ನಾವು ನಾಲ್ಕೈದಾರು ಮಕ್ಕಳು ಸೇರಿ ಬಾಪಾನ ಮಡಚಿದ ಕೈ ಬೆರಳುಗಳನ್ನು ಬಿಡಿಸುವ ಆಟ ಆಡುತ್ತಿದ್ದೆವು. ಬಾಪಾ ಕೈಯೊಳಗೆ ಹತ್ತು ಪೈಸೆಯ ನಾಣ್ಯ ಇಟ್ಟುಕೊಂಡು ನಮ್ಮನ್ನು ಆಡಿಸುತ್ತಿದ್ದರು. ನಾವು ಒಂದೊಂದೇ ಬೆರಳುಗಳನ್ನು  ಬಿಡಿಸಿದಂತೆ ಅವರು ಒಂದೊಂದೇ ಬೆರಳುಗಳನ್ನು ಮಡಚಿಕೊಳ್ಳುತ್ತಿದ್ದರು. ನನ್ನ ಬಾಪಾನಿಗೆ ಒಂದು ಸಲ ರೈಲು ಹತ್ತಬೇಕು ಅಂತ ತುಂಬಾ ಆಸೆಯಿತ್ತು. ರೈಲು ಹತ್ತಿ ಮಂಗಳೂರಿನಿಂದ ಸಕಲೇಶಪುರದವರೆಗೆ ಸುರಂಗಗಳ ಒಳಗಿಂದ ಹಾದು ಹೋಗಬೇಕು ಅಂತ ಹೇಳಿಕೊಂಡಿದ್ದರು. ಹೋಗಲಿ ಬಿಡಿ ಅದು ಆಗಲೇ ಇಲ್ಲ.

ಇತಿ ,

ರಶೀದ್
 

Advertisements