ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತುವೂ

[೨೪ ವರ್ಷಗಳ ಹಿಂದಿನ ನನ್ನ ಮೊದಲ ಕಥೆ-ಬರೆದದ್ದು ಯೋಚಿಸಿದರೆ ಜುಂ ಎನ್ನುತ್ತೆ]

 

drwng-a-31.jpg

                                                                         [ಚಿತ್ರಗಳು-ಚರಿತಾ]

ರುಣಾನಿಧಿಯೂ, ಕಾರುಣ್ಯಮಯನೂ ಆದ ಅಲ್ಲಾಹುವು ಮೊತ್ತ ಮೊದಲು ಆದಂಪಾಪಾ ಮತ್ತು ಅವ್ವಾಬೀಬಿ ಎಂಬ ಗಂಡು ಹೆಣ್ಣುಗಳನ್ನು ಸೃಷ್ಟಿಸಿದನು. ಆಮೇಲೆ ಅವರಿಗಾಗಿ ಭೂಮಿಯ ಮೇಲಿನ ಸಕಲ ಚರಾಚರ, ಜೀವಜಂತುಗಳನ್ನೂ, ಪಶುಪಕ್ಷಿಗಳನ್ನೂ, ಗಿಡಮರಗಳನ್ನೂ ಉಂಟು ಮಾಡಿದನು. ಆದರೆ ಹಾರುವ ಈ ಕೆಂಪು ಹೆಲಿಪೆಟ್ಟರನ್ನು ಆತನೇ ಉಂಟು ಮಾಡಿದನೇ…. ಆತ ಎಲ್ಲವನ್ನು ಕಾಣುವವನೂ, ಕೇಳುವವನೂ ಆಗಿದ್ದಾನೆ…. ಹಾಗಾದರೆ ಆ ಸರ್ವಶಕ್ತಿನಿಗೆ ಮೈನಾಡಿನ ರಬ್ಬರ್ ತೋಟದ ಮೇಲೆ ಭರ್ರ್ ಎಂದು ಹಾರಾಡುತ್ತಾ, ತಟಕ್ಕನೇ ತಿರುಗುತ್ತಾ, ಸೂರ್ಯನ ಬೆಳಕಿನಲ್ಲಿ ಮಳೆಬಿಲ್ಲಿನಂತಹ ನೀಲಿ ನೀರನ್ನು ಮರಗಳ ಮೇಲೆ ಬಿಡುತ್ತಿರುವ ಈ ವಿಚಿತ್ರ ಜಂತುವಿನ ವಿಷಯ ಗೊತ್ತೇ ಎಂದು ಆಮಿನಾಬೀಬಿಗೆ ಸಂಶಯ ಉಂಟಾಯಿತು.
ತನ್ನ ಬಾಪಾನಿಗೆ ಶುಕ್ರವಾರದ ಜುಮ್ಮಾನಮಾಜಿಗೆ ಹಾಕಲು ಬೇಕೇ ಬೇಕಾದ ಅವರ ಉದ್ದನೆಯ ನಿಲುವಂಗಿ, ಬಿಳಿಯ ಡಬಲ್ ವೇಸ್ಟಿ ಪಂಚೆ, ಅವರ ರುಮಾಲು, ಒಳಗೆ ಹಾಕುವ ಬಿಳಿಬಿಳಿಯ ಪಟ್ಟೆಯ ಅಂಡರ್ವೇರ್ ಇತ್ಯಾದಿಗಳನ್ನು ಕುಕ್ಕೆಯಲ್ಲಿ ತುಂಬಿಕೊಂಡು ಬಂದು ಮೈನಾಡಿನಲ್ಲಿ ಹರಿಯುವ ಹೊಳೆಯ ಒಂದು ಮೂಲೆಯ ಕಲ್ಲಿನಲ್ಲಿ ಹಾಕಿ ಸೋಪು ಉಜ್ಜುತ್ತಾ ತಟ್ಟನೇ ತನ್ನ ತಲೆಯ ಮೇಲಿಂದಲೇ ಹಾರಿದ ಆ ಕೆಂಪು ಹೆಲಿಪೆಟ್ಟರನ್ನು ಕಂಡು ಬಿಟ್ಟ ಕಣ್ಣು ಬಿಟ್ಟುಕೊಂಡೇ ಯೋಚಿಸತೊಡಗಿದವಳಿಗೆ ತನ್ನ ಬಾಪಾನ ಬಿಳಿ ಬಿಳಿ ವಸ್ತ್ರಗಳ ಮೇಲೆ ಯಾಕೋ ಕೋಪ ಬರತೊಡಗಿ ಬಾಪಾನ ಬಿಳಿಯ ನಿಲುವಂಗಿಯನ್ನು ಕಲ್ಲಿನ ಮೇಲೆ ಕುಕ್ಕಿಬಿಟ್ಟಳು.
‘ಬಾಪಾ, ಬಾಪಾ, ನಾನೂ ಆ ಹೆಲಿಪೆಟ್ಟರನ್ನು ನೋಡಲು ಹೋಗಬಹುದಾ…..’ ಎಂದು ತುಂಬಾ ಚೆನ್ನಾಗಿ ಹೊಕ್ಕುಳ ಬಂದ ರೊಟ್ಟಿಯೊಂದನ್ನು ಬಾಪಾನ ತಟ್ಟೆಗಿಡುತ್ತಾ ಕೇಳಿದಳಿಗೆ ಬಾಪಾ ಅಂದದ್ದೇನು?…. ಆಮಿನಾಳ ಕಣ್ಣುಗಳಲ್ಲಿ ನೀರು ತುಂಬತೊಡಗಿತು.
‘ನೀನು ಮೈಲಿಯಾರರ ಮಗಳು ಮೋಳೇ, ಹಾಗೆಲ್ಲಾ ಹೊಳೆದಾಟಿ ಹೋಗಬಾರದು. ಅಲ್ಲಿ ಕಾಫಿರ ಗಂಡಸರು ಹೆಂಗಸರು ಇರುತ್ತಾರೆ. ಈ ಮೂಸಾಮೊಲಿಯಾರರ ಮುದ್ದಿನ ಮಗಳು ಆಮಿನಾ ಬೀಬಿಯ ಮೇಲೆ ಕಾಫಿರರ ಕಣ್ಣು ಬೀಳಬಾರದು ಮೋಳೇ’ಎನ್ನುತ್ತಾ ಬಾಪಾ ರೊಟ್ಟಿ ತಿಂದು ಮಾಮೂಲಿನಂತೆ ತೇಗಿ ವರಾಂಡದ ಒರಗು ಕುಚರ್ಿಗೆ ಒರಗಲು ಹೋದ ಮೇಲೆ ಆಮಿನಾಳಿಗೆ ಎಲ್ಲಿಲ್ಲದ ಕೋಪ ಬಂದು ಅಲ್ಲೇ ಇದ್ದ ತನ್ನ ಮುದ್ದು ಬೆಕ್ಕು ಪೂಚೆಕುಟ್ಟಿಯ ಬೆನ್ನಿಗೆ ಬಲವಾಗಿ ಮೊಟಕಿದ್ದಳು.drwng-a-4.jpg ಮರುಕ್ಷಣವೇ ನೋವಿನಿಂದ ಕಿರುಚಿದ ಪೂಚೆಕುಟ್ಟಿಯನನು ಎತ್ತಿ ಮುತ್ತುಕೊಟ್ಟು ‘ನೋಡು ನೀನು ಮೂಸಾ ಮೊಲಿಯಾರರ ಮುದ್ದಿನ ಮಗಳು ಆಮಿನಾಬೀಬಿಯ ಮುದ್ದಿನ ಪೂಚೆಕುಟ್ಟಿ ಆಗಿದ್ದೀಯಲ್ಲಾ ಅದಕ್ಕೇ ಹೊಡೆದೆ’ ಎನ್ನುತ್ತಾ ಅದರ ನೋವುಂಡ ಬೆನ್ನನ್ನು ತಡವತೊಡಗಿದವಳಿಗೆ ತನ್ನ ಹಿಂಗೈಗೆ ಏನೋ ಬಿಸಿ ಬಿಸಿ ಬಿದ್ದಂತಾಗಿ ಅದು ತನ್ನ ಕಣ್ಣಿನಿಂದ ಬಿದ್ದ ನೀರು ಎಂದು ತಿಳಿದು ಸಂಕೋಚವಾಗಿತ್ತು.
‘ಛೆ, ಆಮಿನಾಬೀಬಿ ಅಳುವುದೇ? ಸೃಷ್ಟಿಸಿದವನ ಪರಮ ಸತ್ಯ ವಿಶ್ವಾಸಿ ಮೂಸಾಮೊಲಿಯಾರರ ಮುದ್ದಿನ ಮಗಳ ಕಣ್ಣಿನಿಂದ ನೀರೇ?….’ ತಟ್ಟದ ತುದಿಯಿಂದ ಕಣ್ಣೀರನ್ನು ಒರೆಸಿಕೊಂಡು ತನಗಾಗಿ ತಟ್ಟಿದ್ದ ರೊಟ್ಟಿಗಳನ್ನು ಪಾತ್ರೆಯಲ್ಲಿ ಹಾಕಿ ಮುಚ್ಚಿ ಒಲೆಯ ಮೇಲೆ ಇಟ್ಟು ಬೆಕ್ಕನ್ನೆತ್ತಿಕೊಂಡು ವರಾಂಡಕ್ಕೆ ಬಂದು ಬಾಗಿಲ ಬಳಿ ಹೊಳೆಯ ಆಚೆಯ ಬದಿಯ ಸದ್ದನ್ನು ಕೇಳುತ್ತಾ ನಿಂತಿದ್ದಳು…..
ಆಮಿನಾ ತನ್ನೆರಡೂ ಕಾಲುಗಳನ್ನು ನೀರಿನಲ್ಲಿ ಇಳಿಬಿಟ್ಟು ತನ್ನ ಕೈಗಳ ಸೆರೆಯಲ್ಲಿ ಜಾರುತ್ತಿದ್ದ ಸೋಪಿನ ನೊರೆಯಿಂದ ಗುಳ್ಳೆಗಳನ್ನು ಊದಿ ಗಾಳಿಗೆ ಬಿಡುತ್ತಾ ಮೇಲೆ ಹಾರುತ್ತಿದ್ದ ಹೆಲಿಕಾಪ್ಟರಿನ ಕಡೆಗೆ ನೋಡತೊಡಗಿದಳು. ಅದು ಹಾರುತ್ತಿತ್ತು. ಮೊನ್ನೆ ಮೊನ್ನೆ ತನ್ನ ಸ್ವಂತ ಕೋಳಿಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿದ್ದ ಎರಡು ಬೆಳ್ಳಗಿನ ಕೋಳಿ ಮರಿಗಳನ್ನು ಬುರ್ರನೆ ಎತ್ತಿಕೊಂಡು ಹೋದ ಗಿಡುಗ ಕೂಡಾ ಇದೇ ರೀತಿ ಹಾರುತ್ತಿತ್ತು. ಎರಡೂ ರೆಕ್ಕೆಗಳನ್ನು ಒಂದು ಚೂರೂ ಬೀಸದೆಯೇ ಹಾಗೆಯೇ ಕೆಳಗೆ ಕೆಳಗೆ ಇಳಿದು ಬಂದ ಗಿಡುಗ ತನ್ನ ಕಣ್ಣ ಮುಂದೆಯೇ ಎರಡೂ ಹೂಮರಿಗಳನ್ನು ಎತ್ತಿಕೊಂಡು ಹೋಗಿರಲಿಲ್ಲವೇ.. ಆಮಿನಾಳಿಗೆ ಒಂದು ಕ್ಷಣ ಭಯವಾಯಿತು.
 `ಕೋಳಿಮರಿಗಳನ್ನು ತನ್ನ ವಿಶ್ವಾಸಿಗಳಿಗಾಗಿ ಉಂಟುಮಾಡಿದ ಅಲ್ಲಾ ಗಿಡುಗನನ್ನು ಯಾರಿಗಾಗಿ ಉಂಟುಮಾಡಿರಬಹುದು.. ಅಥವಾ ಇಬಿಲೀಸ್ ಎಂಬ ದುಷ್ಟ, ಸತ್ಯ ವಿಶ್ವಾಸಿಗಳ ವಿಶ್ವಾಸವನ್ನು ಹಾಳುಮಾಡಲಿಕ್ಕಾಗಿ ಗಿಡುಗನನ್ನೂ ಹುಟ್ಟಿಸಿರಬಹುದೇ? ಹಾಗಾದರೆ ಆ ಗಿಡುಗನಿಗಿಂತಲೂ ದೊಡ್ಡದಾದ ಈ ಹೆಲಿಪೆಟ್ಟರೂ ಆತನೇ ಉಂಟುಮಾಡಿದ್ದಾ…..’
 ಹೀಗೆ ಮೇಲೆ ಆಕಾಶದಲ್ಲಿ ಹೆಲಿಕಾಪ್ಟರ್ ಎಂಬ ಕೆಂಪು ವಸ್ತುವೊಂದು ರಬ್ಬರ್ ಮರಗಳ ಮೇಲೆ ಮದ್ದುಬಿಡುತ್ತಾ ಹಾರುತ್ತಿದ್ದರೆ ಇತ್ತ ಆಮಿನಾಳ ತಲೆಯಲ್ಲಿ ನಾನಾ ಅನುಮಾನ ಆಲೋಚನೆಗಳು ಉಂಟಾಗತೊಡಗಿ ಅವಳಿಗೆ ದಿಕ್ಕೇ ತೋಚದಂತಾಯ್ತು. `ಅನುಮಾನಪಡುವುದು ಅಸತ್ಯ ವಿಶ್ವಾಸಿಗಳ ಕೆಲಸ. ಸೈತಾನ ಯಾರ ತಲೆಯೊಳಗೆ ಇರುತ್ತಾನೋ ಅವರ ತಲೆಯಲ್ಲಿ ಈ ಥರದ ಪ್ರಶ್ನೆಗಳು ಬರುತ್ತದೆ’ ಎಂದು ತನ್ನ ಪ್ರೀತಿಯ ಬಾಪಾ ಅಂದಿದ್ದರು. ಆಮಿನಾ ತನ್ನ ತಲೆಯಿಂದ ಜಾರತೊಡಗಿದ್ದ ತಟ್ಟವನ್ನು ಬಿಗಿಯಾಗಿ ಕಟ್ಟಿಕೊಂಡು ಕೂತಿದ್ದ ಕಲ್ಲಿನಿಂದ ತಟ್ಟನೇ ಕೆಳಗಿಳಿದು ಬಾಯಿಂದ ‘ಉಸ್ಸ್’ ಎಂಬ ಶಬ್ದವನ್ನು ಹೊರಡಿಸಿ ಲಗುಬಗೆಯಿಂದ ತನ್ನ ಬಾಪಾನ ನಮಾಜಿನ ಬಟ್ಟೆಗಳನ್ನು ಒಗೆಯತೊಡಗಿದಳು. ಆ ಇಬಿಲೀಸ್ಗೆ ಹುಟ್ಟಿದಂತಿದ್ದ ಆ ಕೆಂಪು ಹೆಲಿಪೆಟ್ಟರಿನ ಸದ್ದು ತಲೆಯೊಳಗಿನ ಆಲೋಚನೆಗಳನ್ನ ಮತ್ತಷ್ಟು ಉರಿಯುವಂತೆ ಮಾಡಿದ್ದರಿಂದ ಆಮಿನಾಬೀಬಿ ಸೋಪು ಹಚ್ಚಿದ್ದನ್ನೂ, ಹಚ್ಚದ್ದನ್ನೂ ಎಲ್ಲವನ್ನೂ ನೀರಲ್ಲಿ ಬೇಗಬೇಗನೆ ಜಾಲಾಡಿಸಿ ಮುಖವನ್ನು ಒಂದು ಥರಾ ಗಂಟುಮಾಡಿ ಅವನ್ನು ಹಿಂಡಿ ಕುಕ್ಕೆಯಲ್ಲಿ ಹಾಕಿ ಮನೆಯ ಕಡೆಗೆ ಮೆಲ್ಲಗೆ ಓಡುವಂತೆ ನಡೆಯತೊಡಗಿದಳು.
ಹೊಳೆಯ ಮರಳನ್ನು ದಾಟಿ, ತೆಂಗಿನ ತೋಟವನ್ನು ದಾಟಿ ಮನೆಯ ಮುಂದಿನ ಬಿದಿರು ಗಳವನ್ನು ಸರಿಸಿ ತಲೆಯ ಮೇಲಿನ ಕುಕ್ಕೆಯನ್ನು ಕೆಳಗಿಟ್ಟು ಒಂದೊಂದೇ ವಸ್ತ್ರಗಳನ್ನು ಕೊಡವುತ್ತಾ ತಂತಿಯಲ್ಲಿ ತೂಗಿಸುತ್ತಿದ್ದರೂ ಆಮಿನಾಬೀಬಿಯ ತಲೆಯ ಮೇಲೆ ಹಾರುತ್ತಿದ್ದ ಆ ಹೆಲಿಪೆಟ್ಟರ್ನ ಸದ್ದು ಅವಳನ್ನು ಬಿಟ್ಟಿರಲಿಲ್ಲ. ಬಹಳ ಹಿಂದೆ ಮಕ್ಕಾ ಎಂಬ ಪಟ್ಟಣದಲ್ಲಿ ಇಬ್ರಾಹಿಂ ಎಂಬ ಪ್ರವಾದಿ ತನ್ನ ಮುದ್ದು ಮಗನಾದ ಇಸ್ಮಾಯಿಲ್ರನ್ನು ಅಲ್ಲಾಹುವಿನ ಅಪ್ಪಣೆಯ ಮೇರೆಗೆ ಬಲಿಕೊಡಲು ಹೊರಟಾಗ ಇದೇ ರೀತಿ ಇಬಿಲೀಸ್ ಎಂಬ ಆ ದುಷ್ಟ ನಾನಾ ರೀತಿಯ ಅಡೆತಡೆಗಳನ್ನು ಉಂಟು ಮಾಡಿದನಂತೆ. ಆದರೆ ಅವೆಲ್ಲವನ್ನೂ ಸಹಿಸಿದ ಇಬ್ರಾಹಿಂ ಎಂಬ ನೆಬಿ ಕೊನೆಗೆ ಚಪ್ಪಲಿಯಿಂದ ಹೊಡೆದಾಗ ಇಬಿಲೀಸ್ ಎಂಬ ಆ ದುಷ್ಟ ಪರಾರಿಯಾದನಂತೆ… ಆಮಿನಾಬೀಬಿ ಆಕಾಶಕ್ಕೆ ತಲೆ ಎತ್ತಬೇಕೆಂದು ಕೊಂಡವಳು ಉರಿಯುವ ಸೂರ್ಯ ಕಣ್ಣಿಗೆ ಚುಚ್ಚಿದಂತಾಗಿ ಕಣ್ಣು ಕೆಳಕ್ಕೆ ಹಾಕಿದಳು.
 ‘ಎಲಾ, ಹೆಲಿಪೆಟ್ಟರ್ ಎಂಬ ಇಬಿಲೀಸೇ, ಎಂದು ಅಚ್ಚರಿಪಟ್ಟು ಖಾಲಿ ಕುಕ್ಕೆಯನ್ನು ಹೊತ್ತುಕೊಂಡು ಹಿಂಬಾಗಿಲಿನಿಂದ ಅಡಿಗೆ ಕೋಣೆಯೊಳಗೆ ಪ್ರವೇಶಿಸಿದಾಗ ಘಮ್ಮೆಂದು ಮೂಗಿಗೆ ಹೊಡೆದ ಹಸಿ ಮೀನಿನ ವಾಸನೆಯಿಂದ ಮತ್ತೂ ಅಚ್ಚರಿಪಟ್ಟಳು. ಅಷ್ಟರಲ್ಲಿ ಮನೆಯೊಳಗಿನಿಂದ ತನ್ನ ಬಾಪಾನ ಧ್ವನಿಯೂ ಜೊತೆಗೆ ಅದೇ ಆ ಇಬಿಲೀಸ್ನಂತಹ ಆಮದ್ಕುಟ್ಟಿ ಎಂಬ ಗಂಡಸಿನ ಧ್ವನಿಯೂ ಕೇಳಿಸಿ ಇದು ಮೀನು ತಂದಿರುವುದು ಅವನದೇ ಕೆಲಸ ಎಂದು ಒಳಗೊಳಗೇ ನಾಚಿ ತಾನು ರೊಟ್ಟಿ ಮುಚ್ಚಿಟ್ಟಿದ್ದ ಪಾತ್ರೆ ತೆರೆದು ನೋಡಿದಾಗ ಅದರೊಳಗೆ ತನ್ನ ರೊಟ್ಟಿಯ ಬದಲು, ಆಗತಾನೇ ನೀರಿನಿಂದ ತೆಗೆದ ತರತರದ ಸಣ್ಣ ಮೀನುಗಳೂ, ಮೊರಂಟೆ, ಮೊಡಂಜಿ, ಕೊಂತಿ ಇತ್ಯಾದಿ ದೊಡ್ಡ ಮೀನುಗಳೂ ಗೋಚರಿಸಿ ಆಮದ್ಕುಟ್ಟಿಯ ಬಗ್ಗೆ ಕೆಟ್ಟದ್ದು ಅಂದುಕೊಂಡದ್ದಕ್ಕೆ ಬೇಸರಪಟ್ಟುಕೊಂಡು ಅಲ್ಲೇ ಮೀನಿನ ಪಾತ್ರೆಗಳ ಸುತ್ತುಹಾಕುತ್ತಿದ್ದ ತನ್ನ ಪೂಚೆಕುಟ್ಟಿಯನ್ನು ಎತ್ತಿಕೊಂಡು ಹಜಾರದ ಬಳಿ ಬಂದು ಬಾಗಿಲ ಸಂದಿಯಿಂದ ಇಣುಕಿ ತನಗಾಗಿ ಇಟ್ಟಿದ್ದ ರೊಟ್ಟಿಯನ್ನು ಮುರಿದು ತಿನ್ನುತ್ತಿದ್ದ ಆಮದ್ಕುಟ್ಟಿ ಮತ್ತು ಬಾಪಾ ಒರಗು ಕುಚರ್ಿಯಲ್ಲಿ ಕೂತು ಮಾತಾಡುತ್ತಿದ್ದುದನ್ನು ಕದ್ದು ಕೇಳತೊಡಗಿದಳು.
‘ಅದೆಂತಹ ಮೊಲಿಯಾರ್ರೇ, ಕುದರತ್ ಅಂದರ ಹಾಗಿರಬೇಕು. ರಬ್ಬರ್ ಮರಕ್ಕೆ ಹೊಡೆಯುವ ಮದ್ದು ಮೀನುಗಳನ್ನು ಕೊಲ್ಲುವುದುಂಟಾ’ ಆಮದ್ಕುಟ್ಟಿ ರೊಟ್ಟಿ ಮುರಿಯುತ್ತಾ ನಡುನಡುವೆ ಬಾಗಿಲ ಕಡೆಗೆ ತನ್ನನ್ನು ಓರೆಯಾಗಿ ನೋಡುತ್ತಾ ವಿವರಿಸುತ್ತಿದ್ದ.chitra-c-better1.jpg
‘ನಾ ಬೆಳಿಗ್ಗೆ ಎದ್ದು ಆ ಕುದರತ್ತಿನಂತಹಾ ಎಲಿಕಾಪ್ಟರನ್ನು ನೋಡಲು ಹೋದೆನಾ….? ಅದೆಂತು ಮೊಲಿಯಾರ್ರೇ, ನೋಡಿಯೇ ಸಾಕಾಗಬೇಕು. ಎಷ್ಟು ಜನ ಮದ್ದು ಕಲಸೋದು… ಎಷ್ಟು ಜನ ಆ ಕುದರತ್ತಿನ ಗುಡಾಣದೊಳಕ್ಕೆ ಅದನ್ನು ಹೊಯ್ಯೋದು… ಆ ಎಲಿಕಾಪ್ಟರ್ನ್ನು ಉಜ್ಜಲಿಕ್ಕೇ ಮೂರು ಜನ ಇದ್ದಾರೆ ಮೊಲಿಯಾರ್ರೇ….’
ಆಮಿನಾಳಿಗೆ ಖಿಯಾವತ್ ಎಂಬ ಅಂತಿಮ ದಿನ ಬಂದಷ್ಟು ಬೆರಗಾಯಿತು. ಖಿಯಾಮತ್ತಿನ ದಿನ ಒಂದು ಹುಂಜ ಒಂದು ದೊಡ್ಡ ಮೊಟ್ಟೆ ಹಾಕುತ್ತದೆಯಂತೆ, ಆ ಮೊಟ್ಟೆ ಉರುಳಿಯುರುಳಿ ಎಲ್ಲಾ ಬೆಟ್ಟಗುಡ್ಡಗಳನ್ನೂ, ಮನೆ ಮರ ಸಕಲ ಚರಾಚರಗಳನ್ನೂ ನೆಲಸಮಮಾಡುತ್ತಾ ಹೋಗುತ್ತದೆಯಂತೆ. ಆಮಿನಾ ಆಮದ್ನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಆತನನ್ನೇ ಹೆದರಿಕೆ ಗೌರವದಿಂದ ನೋಡತೊಡಗಿದಳು. ಆಮದ್ ಅಂದ ಒಂದು ಮಾತು ಅವಳ ಕೆಲಸವನ್ನೂ ಬೆರಗುಮಾಡಿಬಿಟ್ಟಿತು.
‘ಅದಕ್ಕೂ ಒಬ್ಬ ಡ್ರೈವರ್ ಅಂತ ಇದಾನೆ ಮೊಲಿಯಾರ್ರೇ, ಒಳ್ಳೇ ಬೆಳ್ಳಕ್ಕಾರನ ಹಾಗೆ ಇದಾನೆ. ಕೆಂಪು ಕೆಂಪು ಟೊಮೊಟೋ ಉಂಟಲ್ಲಾ ಅದರ ಹಾಗೂ ಅಲ್ಲ ಅವನು. ಅವನ ಗತ್ತೇನು,  ಅವನ ಡ್ರೆಸ್ಸೇನು ನೋಡಬೇಕು ಮೊಲಿಯಾರ್ರೇ, ನೀವು ಹೇಳುತ್ತಿದ್ದೀರಲ್ಲಾ ಅದೇನೋ ಜಿನ್ನ್ಗಳು ಅಂತ. ಅದೇ ಆಗಿರಬೇಕು. ಮೊಲಿಯಾರ್ರೇ ಅವರು ಅದನ್ನು ಬಿಡೋದು ನೋಡಬೇಕು..’
ಆಮದ್ಕುಟ್ಟಿ ವಿವರಿಸುತ್ತಿದ್ದಂತೆ ಮೂಸಾ ಮೊಲಿಯಾರರು ತನ್ನ ಮುಂಡಾಸು ಕನ್ನಡಕಗಳನ್ನು ಬಿಚ್ಚಿಟ್ಟು ‘ಯಾ ಪಡಚ್ಚೋನೇ’ ಎಂದು ಬೆಕ್ಕಸಬೆರಗಾಗಿ ನೋಡುತ್ತಿದ್ದಂತೆ ಅವರ ಮಗಳು ಆಮಿನಾಬೀಬಿ ಆಶ್ಚರ್ಯದಿಂದ ಕೈಯಲ್ಲಿದ್ದ ಪೂಚೆ ಕುಟ್ಟಿಯನ್ನು ಎತ್ತಿ ಕೆಳಕ್ಕೆ ಹಾಕಿ ಗಲ್ಲಕ್ಕೆ ಕೈಹಚ್ಚಿ ನಿಂತಲ್ಲೇ ಕಂಬಂದಂತಾಗಿಬಿಟ್ಟಳು.
‘ಜಿನ್ನ್’! ಅವುಗಳು ಅಲ್ಲಾನದೇ ಇನ್ನೊಂದು ಲೋಕದ ಜೀವಿಗಳಂತೆ. ಮನುಷ್ಯರು ಎಂಬ ನಾವು ಅಲ್ಲಾಹನದೇ ಸೃಷ್ಟಿಗಳಾದರೂ ಜಿನ್ನ್ಗಳಷ್ಟು ದೊಡ್ಡವರಲ್ಲವಂತೆ. ಜಿನ್ನ್ಗಳಿಗೆ ಬೇಕೆಂದಾಗ ಬೇಕೆಂದಲ್ಲಿಗೆ ಬಂದು ಬೇಕೆಂದದ್ದನ್ನು ಪಡೆಯುವ ತಾಕತ್ತನ್ನು ಅಲ್ಲಾ ಕೊಟ್ಟಿದ್ದಾನಂತೆ. ಆಮಿನಾ ಜಿನ್ನ್ಗಳ ರಾಜ್ಯದಲ್ಲಿ ಕಂಪಿಸತೊಡಗಿದಳು. ಅವಳ ಎದುರಿಗಿದ್ದ ಅವಳ ಬಾಪಾ ಮೂಸಾ ಮೊಲಿಯಾರರೂ, ಅವಳನ್ನು ಯಾವಾಗಲೂ ಒಂದು ಥರಾ ನೋಡುವ ಆಮದ್ಕುಟ್ಟಿಯೂ ಕೇವಲ ಮನುಷ್ಯರಾಗಿ ತೋರಿ ಆಮಿನಾಳ ಮೈಯಲ್ಲಿ ಆ ಹೆಲಿಪೆಟ್ಟರೆಂಬ ಕುದರತ್ತನ್ನು ಆಕಾಶದಲ್ಲಿ ನಡೆಸುವ ಆ ಜಿನ್ನ್ ಎಂಬ ಕೆಂಪು ಮುಖದ ಬೆಳ್ಳಕ್ಕಾರನ್ನು ತುಂಬಿಕೊಂಡನು. ಅವನು ಹೆಲಿಪೆಟ್ಟರ್ ಎಂಬ ಆಕಾಶಕುದುರೆಯನ್ನು ಹಾರಿಸುತ್ತಾ ತನ್ನ ಬಳಿ ಬಂದು ತನ್ನನ್ನು ಗಿಡುಗ ಎತ್ತಿಕೊಂಡಂತೆ ಎತ್ತಿಕೊಂಡು ಆ ಕುದುರೆಯಲ್ಲಿ ಕೂರಿಸಿಕೊಂಡು ಭುರ್ರನೆ  ಮೇಲಕ್ಕೆ ಹಾರಿ, ಮೇಲೆ ಇನ್ನೂ ಮೇಲೆ ಆ ಕಲ್ಲಾಳ ಬೆಟ್ಟ, ಎಲಿಮಲೆಗಳನ್ನೂ ದಾಟಿ ಮೇಲೆ ಮೇಲೆ  ಕರೆದುಕೊಂಡು ಹೋದಂತೆ ಭಾಸವಾಗಿ ಅವಳು ತಟ್ಟನೆ ಒಂದು ರೀತಿಯ ಗಾಂಭೀರ್ಯದಿಂದ ಕೂಡಿದ ನಾಚಿಕೆಯಿಂದ ನಿಂತಲ್ಲಿಯೇ ತನ್ನ ತಟ್ಟದಿಂದ ಮುಖ ಮರೆಸಿಕೊಂಡು ಅಡಿಗೆ ಕೋಣೆಗೆ ಹೋಗಿ ಮತ್ತೆ ಅಲ್ಲಿ ಮೀನಿನ ಸುತ್ತ ಮಿಯಾಂ ಅನ್ನುತ್ತಿದ್ದ ಪೂಚೆಕುಟ್ಟಿಯನ್ನು ಅಪ್ಪಿಕೊಂಡಳು. ಪೂಚೆಕುಟ್ಟಿಯ ಬೆಳ್ಳಗಿನ ರೋಮಗಳೂ, ಅದರ ಹೊಟ್ಟೆಯಿಂದ ಹೊರಡುವ ಗುರ್ರ್ ಎಂಬ ಶಬ್ದವೂ ಸೇರಿ ಅವಳು ಆ ಜಿನ್ನಿನಂತಹಾ ಬೆಳ್ಳಕ್ಕಾರನನ್ನೂ ಅವನ ಕುದರತ್ತಿನಿಂತಹ ಹೆಲಿಪೆಟ್ಟರನ್ನು ನೋಡಿಯೇ ತೀರಬೇಕೆಂದು ಹಿಂದೆ ಸಿರಿಯ ಎಂಬ ದೇಶದಲ್ಲಿ ಜುಲೈಕಾ ಎಂಬ ಸುಂದರಿ ರಾಜಕುಮಾರಿ ಮೂಸುಫ್ ಎಂಬ ಸುಂದರನನ್ನು ಸೇರಲೇಬೇಕೆಂದು ಹಠ ಮಾಡಿಕೊಂಡಂತೆ ತಾನೂ ಗಟ್ಟಿ ಮಾಡಿಕೊಂಡಳು. ಅದು ಯಾಕೋ ಏನೋ ಇದುವರೆವಿಗೂ ಎಂದೂ ಕೇಳಿಯೇ ಇರದ ರಾಗದ ಹಾಡೊಂದು ಅವಳ ಬಾಯಿಯಿಂದ ಹೊರಡತೊಡಗಿತು. ಅವಳು ಏನೋ ನೆನೆಸಿಕೊಂಡು ಕಿಸಕ್ಕನೆ ತುಟಿಯಲ್ಲಿ ಬೆರಳಿಟ್ಟು ನಕ್ಕುಬಿಟ್ಟಳು.chitra-c-better.jpg
ತನ್ನ ಮುದ್ದಿನ ಪೂಚೆಕುಟ್ಟಿಯನ್ನು ಅಪ್ಪಿಕೊಂಡು ಜಿನ್ನ್ ಎಂಬ ಆ ಹೆಲಿಪೆಟ್ಟರಿನ ಡ್ರೈವರಿನ ಬಿಳಿ ಬಿಳಿ ಕೆಂಪು ಮುಖವನ್ನು ಬಿಡಿಸುತ್ತಿದ್ದ ಆಮಿನಾಳ ಕಣ್ಣಿಗೆ ಆಮದ್ಕುಟ್ಟಿಯು ತಂದಿದ್ದ ಮೀನುಗಳ ನೆನಪು ಆಗಿರಲೇ ಇಲ್ಲ. ಅಷ್ಟು ಹೊತ್ತಿಗೆ ಅಲ್ಲಿಗೆ ರೊಟ್ಟಿ ತಿಂದ ಖಾಲಿ ಪಾತ್ರೆ ಎತ್ತಿಕೊಂಡು ಬಂದ ಆಮದ್ಕುಟ್ಟಿಯು ತೇಗುತ್ತಾ ಬಂದು ಆಮಿನಾಳನ್ನೂ ಅವಳ ತೆಕ್ಕೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಪೂಚೆಕುಟ್ಟಿಯನ್ನೂ ಕಂಡು ಮೆಲ್ಲಗೆ ಕಂಪಿಸತೊಡಗಿದನು. ಆಮದ್ನ ಕೈಯಲ್ಲಿದ್ದ ಆಲ್ಯೂಮಿನಿಯಂನ ಪಾತ್ರೆ ಥರಥರ ಕಂಪಿಸುತ್ತಿರುವುದನ್ನು ಕಂಡು ಅಮಿನಾಬೀಬಿಗೆ ಏನೇನೋ ಆಗಿ ತಟಕ್ಕನೆ ಅವನ ಕೈಯಿಂದ ಪಾತ್ರೆ ಇಸಕೊಳ್ಳಬೇಕೆಂದವಳು ಅವನ ತುಂಟ ನಗುನಗುತ್ತಿದ್ದ ಕಣ್ಣುಗಳನ್ನೇ ನೋಡುತ್ತಾ ಬೆವರತೊಡಗಿದಳು. ಆಮದನು ಇನ್ನಷ್ಟು ಕೆಂಪೇರಿದವನಾಗಿ ಆಮಿನಾಳ ಕೈಯನ್ನು ತಟಕ್ಕನೆ ಅಮುಕಿ ಹಿಡಿದನು. ಮೇಲಕ್ಕೆ ಕೆಳಕ್ಕೆ ವಿಪರೀತವಾಗಿ ಏರಿಳಿಯುತ್ತಿದ್ದ ಅವಳ ಮೊಲೆಗಳೆಂಬ ಜಾಗವನ್ನು ನೋಡುತ್ತಾ ತಡೆಯಲಾರದವನಾಗಿಬಟ್ಟಿನು. ಮೂಸಾ ಮೊಲಿಯಾರರ ಮಗಳು ಆಮಿನಾಬೀಬಿ ತನ್ನ ಎದೆ, ಕೈಕಾಲು, ತಲೆಯಲ್ಲಿ ಆಗುತ್ತಿದ್ದ ಈ ಹೊಸರೀತಿಯ ಬಿಸಿ ಹರಿದಾಟದಿಂದಾಗಿ ದಿಕ್ಕು ತೋಚದಂತವಳಾಗಿ ‘ಯಾ ಅಲ್ಲಾ’ ಎಂದು ಕೂಗಿಕೊಂಡೇ ಆಮದನ ಕೈಗಳನ್ನು ಬಲವಾಗಿ ಕಚ್ಚಿಬಿಟ್ಟಳು. ತಮ್ಮ ಮುದ್ದು ಮಗಳ ಬಾಯಿಯಿಂದ ‘ಯಾ ಅಲ್ಲಾ’ ಎಂದು ಕೂಗು ಕೇಳಿಬರಲು ಒರಗು ಕುಚರ್ಿಯಲ್ಲಿ ತೂಕಡಿಸುತ್ತಿದ್ದ ಮೂಸಾ ಮೊಲಿಯಾರರು ದಡಕ್ಕನೆ ಎಚ್ಚೆತ್ತುಕೊಂಡು ‘ಏನಾಯ್ತು ಮೋಳೇ’ ಎನ್ನುತ್ತಾ ಅಡಿಗೆ ಕೋಣೆಗೆ ನುಗ್ಗುವುದಕ್ಕೂ ಕೈ ಕಡಿಸಿಕೊಂಡ ಆಮದ್ಕುಟ್ಟಿಯು ‘ಪೂಚೆಕುಟ್ಟಿ…. ಪೂಚೆಕುಟ್ಟಿ’ ಎನ್ನುತ್ತಾ ಕಿರುಚಿ ಕೆಂಪಗಿನ ರಕ್ತ ಜಿನುಗುತ್ತಿದ್ದ ತನ್ನ ಮಣಿಗಂಟನ್ನು ಒತ್ತಿ ಹಿಡಿಯುವುದಕ್ಕೂ ಸರಿ ಆಯಿತು.
ತನ್ನ ಮೇಲೆಕೆಳಗೆ ಆಡುತ್ತಿದ್ದ ಎದೆಯನ್ನು ಇನ್ನೂ ನಿಲ್ಲಿಸಲು ಆಗದಿದ್ದ ಆಮಿನಾಳಿಗೆ ಏನು ಮಾಡಲೂ ತೋಚದೆ ತನ್ನ ಏನೂ ಅರಿಯದ ಪೂಚೆಕುಟ್ಟಿಯನ್ನು ಅಟ್ಟಿಸುವವಳಂತೆ ಹಿಂಬಾಗಿಲಿನಿಂದ ಸರಕ್ಕನೆ ಹಿತ್ತಲ ಕಡೆಗೆ ಓಡಿಬಿಟ್ಟಳು. ಅಲ್ಲಿ ಹಿತ್ತಲಲ್ಲಿ ತನ್ನ ಕೈಯಾರೆ ನೆಟ್ಟು ಬೆಳೆಸಿದ್ದ ತೊಂಡೇ ಚಪ್ಪರದ ಅಡಿಯಲ್ಲಿ ಕುಳಿತುಕೊಂಡು ತನ್ನ ಎದೆಯ ಕಡೆಯಿಂದ ಇನ್ನೂ ಕೇಳಿಸುತ್ತಿದ್ದ ಡಬ್ ಡಬ್ ಎಂಬ ಶಬ್ದವನ್ನು ಅದುಮಿಟ್ಟುಕೊಳ್ಳಲು ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡತೊಡಗಿದಂತೆ ಅತ್ತ ಹೊಳೆಯ ಆಚೆ ರಬ್ಬರ್ ತೋಟದಿಂದ ಮದ್ದು ತುಂಬಿಕೊಂಡ ಆ ಕೆಂಪು ಹೆಲಿಪೆಟ್ಟರ್ ಎಂಬ ಜಿನ್ನ್ನ ಕುದುರೆ ‘ಭರ್ರ್’ ಎಂದು ಆಕಾಶವನ್ನೇರಿ ತನ್ನ ಕಡೆಗೇ ನುಗ್ಗುತ್ತಾ ಬರತೊಡಗಿದಂತೆ ಆಗಿ ಅಮಿನಾಬೀಬಿ ‘….. ಛೀ….. ಹೋಗಪ್ಪಾ..’ ಎನ್ನುತ್ತಾ ನಾಚಿಕೊಂಡು ಮತ್ತೆ ಅಡಿಗೆ ಕೋಣೆಯೊಳಕ್ಕೆ ಬಂದಳು. ತನ್ನಿಂದ ಕಡಿಸಿಕೊಂಡ ಆಮ್ನ ಮೊಣಗಂಟಿಗೆ ತನ್ನ ಬಾಪಾ ಆದ ಮೂಸಾ ಮೊಲಿಯಾರರು ಯಾವುದೋ ತೈಲವೊಂದನ್ನು ಹಚ್ಚಿ ತನ್ನ ಹಳೆಯ ತಟ್ಟದ ತುಂಡಿನಿಂದ ಬಿಗಿಯಾಗಿ ಕಟ್ಟುತ್ತಿರುವುದನ್ನು ಕಂಡ ಆಮಿನಾಳಿಗೆ ತುಂಬಾ ಕೆಟ್ಟದೆನಿಸಿತು. ಏನೋ ಕಳ್ಳ ಕೆಲಸ ಮಾಡಿದವಳಂತೆ ಆಮದ್ನ ಮುಂದೆ ತಲೆ ತಗ್ಗಿಸಿ ನಿಂತುಕೊಂಡವಳು ಮತ್ತೆ ಏನೋ ನೆನಪಾಗಿ ಈ ಆಮದನು ಪಾಪವೆನಿಸಿ ಅವನು ತಂದುಕೊಟ್ಟಿದ್ದ ಮೀನುಗಳನ್ನು ಇಟ್ಟಿದ್ದ ಪಾತ್ರೆಯನ್ನು ಅವನ ಮುಂದಿನಿಂದಲೇ ಎತ್ತಿ ತಂದು ಹಿತ್ತಲಿನ ಬೂದಿ ರಾಶಿಯ ಬಳಿ ಬಂದು ಕತ್ತಿಯೊಡನೆ ಕುಳಿತುಕೊಂಡು ನೀರಿನಿಂದ ತೆಗೆದ ಮೀನುಗಳನ್ನು ಒಂದೊಂದಾಗಿ ಬೂದಿಯಲ್ಲಿ ಅದ್ದಿ ತನ್ನ ಕತ್ತಿಯಿಂದ ಒಂದೊಂದನ್ನೇ ಸವರಿ ರೆಕ್ಕೆಗಳನ್ನು ಕತ್ತರಿಸಿ ಹೊಟ್ಟೆಯನ್ನು ಸೀಳಿ ತನ್ನ ಬೆರಳುಗಳಿಂದ ಕರುಳುಗಳನ್ನು ಎಳೆಯತೊಡಗಿದಳು.
 ಈ ಕರುಳುಗಳೊಳಗೆ ಹೆಲಿಪೆಟ್ಟರಿನ ಮದ್ದಿನ ಹನಿಗಳಿರಬಹುದು ಎಂದು ನೆನಪಾಗಿ ಭಯಪಟ್ಟಳು… ಹಾಗಾದರೆ ಈ ಮೊರಂಟೆ, ಮೊಡಂಜಿ ಮೀನುಗಳಿಂದ ಹಿಡಿದು ಈ ಚೆರು ಮೀನಿನವರೆಗೆ ಎಲ್ಲವೂ ಹೆಲಿಪೆಟ್ಟರಿನ ವಿಷ ಎಂಬ ನೀರನ್ನು ಕುಡಿದು ಸತ್ತ ಮೀನುಗಳು… ‘ಎಲಾ, ಹೆಲಿಪೆಟ್ಟರೇ, ರಬ್ಬರ್ ಎಂಬ ಮರಗಳಿಗೆ ಮದ್ದು ಹೊಡೆಯಲು ಬಂದಿರುವ ನೀನು ಹೊಳೆಯ ಮೀನುಗಳನ್ನೂ ಕೊಲ್ಲುತ್ತಿದ್ದೀಯಲ್ಲಾ. ಹಾಗಾದರೆ ಈ ಮೀನುಗಳನ್ನು ತಿನ್ನುವ ಈ ಆಮಿನಾಳನ್ನು ಕೊಲ್ಲುವ ತಾಕತ್ತು ನಿನಗುಂಟೋ ಎಂದು ಹೆಮ್ಮೆಪಟ್ಟುಕೊಂಡಳು… ಮೀನು ತಿಂದು ಸತ್ತ ವಿಷ ಮೀನಿನ ಕರುಳಿನಲ್ಲಿರುತ್ತದೆ. ಆದರೆ ಆಮಿನಾ ಎಂಬ ಈ ಜಾಣೆ ಮೀನಿನ ಕರುಳುಗಳನ್ನು ಬೆರಳು ಹಾಕಿ ತೆಗೆದು ನೀರಿನಲ್ಲಿ ಮೂರು ಸಾರಿ ತೊಳೆದು ಸಾರು ಮಾಡುವುದಲ್ಲವಾ ಎಂದು ಮೇಲೆ ಹಾರುತ್ತಿದ್ದ ಹೆಲಿಪೆಟ್ಟರಿನ ಸದ್ದಿಗೆ ಅಣಕಿಸಿ ಮೀನು ತೊಳೆದ ನೀರನ್ನು ಕರುಳುಗಳೊಡನೆ ಬಸಳೆಯ ಚಪ್ಪರದಡಿಗೆ ಸುರುವಿದ ಕೂಡಲೇ ಅದೆಲ್ಲಿಂದಲೋ ಬಂದ ಅವಳ ಪೂಚೆಕುಟ್ಟಿ ಗಬಕ್ಕನೆ ಬಾಯಿಹಾಕಿ ಒಂದು ದೊಡ್ಡ ಕರುಳಿನ ಮಾಲೆಯೊಂದನ್ನು ಎತ್ತಿಕೊಂಡು ಬರೆ ಹತ್ತಿಕೊಂಡು ಓಡಿಹೋಯಿತ.
‘ಯಾ ಬುದ್ಧಿಯಿಲ್ಲದ ಜಂತುವೇ, ಮೀನುಗಳನ್ನು ಕೊಂದ ವಿಷ ಕರುಳಿನಲ್ಲಿರುವುದು ಎಂದು ಗೊತ್ತಿದ್ದು ಗೊತ್ತಿದ್ದೂ ಎತ್ತಿಕೊಂಡು ಹೋದೆಯಲ್ಲಾ’ ಎನ್ನುತ್ತಾ ತನ್ನ ಪೂಚೆಕುಟ್ಟಿ ಸತ್ತೇಹೋಗುವುದು ಎಂದು ಗಾಬರಿಗೊಂಡ ಆಮಿನಾಬೀಬಿ ಏನು ಮಾಡಲೂ ಅರಿಯದಾಗಿ ಒಂದು ಕೈಯಲ್ಲಿ ಮೀನಿನ ಪಾತ್ರೆ ಮತ್ತೊಂದು ಕೈಯಲ್ಲಿ ಕತ್ತಿ ಹಿಡಕೊಂಡು ನಿಂತಿರಲು ಇನ್ನೂ ನಡುಕ ನಿಂತಿರದ ಆಮದ್ಕುಟ್ಟಿಯು ಅವರ ಮುಂದಿನಿಂದಲೇ ತನ್ನ ಗಾಯಗೊಂಡ ಮಣಿಗಂಟನ್ನು ಎತ್ತಿಹಿಡಿದು ಕೆಮ್ಮುತ್ತಾ ಬಿದಿರಿನ ಗೇಟುಸರಿಸಿ ಮತ್ತೆ ಮತ್ತೆ ತಿರುಗಿ ನೋಡುತ್ತಾ ಮರೆಯಾಗಲು ಆಮಿನಾ ನಿಂತುಕೊಂಡಿದ್ದಲ್ಲಿಂದಲೇ ಹೆದರಿಕೊಂಡು ಭಯಂಕರವಾಗಿ ಹೆದರುತ್ತಾ ತನ್ನ ಪೂಚೆಕುಟ್ಟಿಯನ್ನೂ ಕೊಂದುಬಿಡಬಲ್ಲ ಆ ಹೆಲಿಪೆಟ್ಟರ್ ಎಂಬ ಮಹಾಕೌತುಕದ ಬಗ್ಗೆ ಯೋಚಿಸಲಾರದವಳಂತಾದಳು.
ಮೊಡಂಜಿ ಎಂಬ ನೀರನ್ನು ತುಂಡು ತುಂಡುಗಳಾಗಿ ಕತ್ತರಿಸಿ ಒಣಮೆಣಸು, ಕೊತ್ತಂಬರಿ, ಹುಳಿ ಉಪ್ಪು ಅರೆದ ಕೆಂಪು ಕಾರದಲ್ಲಿ ಮುಳುಗಿಸಿ ಒಲೆಯ ಮೇಲಿದ್ದ ಪಾತ್ರೆಯಲ್ಲಿ ಎಣ್ಣೆ ಹುಯ್ದು ಎಣ್ಣೆಕಾದ ಸದ್ದು ಮಾಡಲು ಒಂದೊಂದೇ ತುಂಡುಗಳನ್ನು ‘ಚುಂಯ್’ ಎಂಬ ಸದ್ದಿನೊಡನೆ ಪಾತ್ರೆಯೊಳಕ್ಕೆ ಜೋಡಿಸಿದಂತೆ ಹುಯ್ದು ಆಮೇಲೆ ಪಾತ್ರೆಯ ಮೇಲೊಂದು ಟಿನ್ನಿನ ಮುಚ್ಚಳವನ್ನು ಮುಚ್ಚಿ ಮೇಲೆ ಕೆಳಗೆ ಎರಡೂ ಕಡೆಯಿಂದಲೂ ಕೆಂಪಗಿನ ಕೆಂಡಗಳನ್ನು ಒಡ್ಡಿಕೆಂಪಗೆ ಕಾಯಲು ಬಿಟ್ಟ ಆಮಿನಾ ಹಬೆಯಾಡುತ್ತಿದ್ದ ಗಂಜಿಯನ್ನು ಅಗಲದ ತಟ್ಟೆಗೆ ಸುರುವಿ ತಣಿಯಲೆಂದು ಇಟ್ಟು ಲಗುಬಗೆಯಿಂದ ಹಿತ್ತಲಿಗೆ ಬಂದು ತನ್ನ ಜಡೆಯನ್ನು ಹರವಿಕೊಂಡು ಬಾಚತೊಡಗಿದಳು.
 ತನ್ನ ಮೊಣಕಾಲಿನವರೆಗಿನ ಕೂದಲನ್ನು ಉದ್ದವಾಗಿ ಬಾಚಿಕೊಂಡು ಬಾಚಣಿಗೆ ಸಂಧಿನಲ್ಲಿ ಹೊರಳಾಡುತ್ತಾ ಸಿಕ್ಕಿಹಾಕಿಕೊಂಡ ಹೇನು ಎಂಬ ಜಂತುಗಳನ್ನು ಉಸ್ ಎಂಬ ಶಬ್ದದೊಂದಿಗೆ ತನ್ನ ಎರಡೂ ಹೆಬ್ಬೆರಳ ಉಗುರಿನ ಸಂಧಿಯಲ್ಲಿ ಸ್ಫೋಟಿಸುತ್ತಾ ಒಂದೊಂದು ಜಂತು ಸತ್ತಾಗಲೂ ಹತ್ತರಷ್ಟು ಆನಂದಿಸುತ್ತಾ ಹಿಗ್ಗುತ್ತಿದ್ದ ಆಮಿನಾಳ ಮೂಗು ಅಡಿಗೆ ಮನೆಯಿಂದ ನಿಧಾನವಾಗಿ ಎದ್ದು ಬಂದ ಮೀನಿನ ಸುವಾಸನೆಯಿಂದ ಜಾಗೃತವಾಯಿತು. ಬೇಗ ಬೇಗ ಬಾಚಿಕೊಂಡು ತನ್ನ ಹಾವಿನಂತೆ ಉದ್ದವಿದ್ದ ಜಡೆಯನ್ನು ಹೆಣೆದುಕೊಂಡು ಅದರ ಚೂಪಗಿನ ತುದಿಯನ್ನು ಕೈಯಲ್ಲಿ ತಿರುವುತ್ತಾ ಯಾವುದೋ ಒಂದು ಹಾಡನ್ನು ಗುಣುಗುಡುತ್ತಾ ಅಡಿಗೆ ಕೋಣೆಯೊಳಕ್ಕೆ ಬಂದು ಮೀನು ಕಾದದ್ದು ಸೀದು ಹೋಯಿತೇ ಎಂದು ಹೆದರಿಕೆಯಾದರೂ ನಾಲಗೆಗೇ ಬಡಿಯುತ್ತಿದ್ದ ಅದರ ವಾಸನೆಗೆ ಖುಷಿಪಟ್ಟುಕೊಂಡು ಮಸಿ ಹಿಡಿದಿದ್ದ ಕೈ ಬಟ್ಟೆಯಿಂದ ಅದನ್ನು ಒಲೆಯಿಂದ ಇಳಿಸಿ ನೆಲದ ಮೇಲಿಟ್ಟು ಟಿನ್ನಿನ ಮುಚ್ಚಳವನ್ನು ಸರಿಸಿ ನೋಡಿ ಅತ್ಯಾನಂದಿತಳಾದಳು. ಮೊಡಂಜಿ ಎಂಬ ಮೀನಿನ ತುಂಡುಗಳು ಖಾರ ಮಸಾಲೆ ಬೆರೆತು ಕೆಂಪು ಕೆಂಪಗೆ ಉಬ್ಬಿಕೊಂಡು ಬಿಟ್ಟಿತ್ತು. ತನಗೆ ಮತ್ತು ತನ್ನ ಬಾಪಾನಿಗೆ ಮಧ್ಯಾಹ್ನದದ ಗಂಜಿಗೆ ನಂಜಿಕೊಳ್ಳಲು ಮೊಡಂಜಿಯಂತಹಾ ಮೀನಿನ ತುಂಡುಗಳನ್ನು ಕೊಟ್ಟ ಆ ಹೆಲಿಪೆಟ್ಟರ್ ಎಂಬ ಕುದರತ್ತಿಗೆ ಮದ್ದನ್ನು ನೀರಿಗೆ ಬಿಟ್ಟ ಅದರ ಜಿನ್ನಿನಂತಹಾ ಡ್ರೈವರನ್ನು ನೋಡದಿದ್ದರೆ ತಾನು ಮೂಸಾ ಮೊಲಿಯಾರರ ಮಗಳು ಆಮೀನಾಬೀಬಿಯೇ ಅಲ್ಲ ಎಂದು ಗಟ್ಟಿ ಮಾಡಿಕೊಂಡುಬಿಟ್ಟಿಳು.
ಕೆಂಪು ಕೆಂಪಗೆ ಊದಿಕೊಂಡಿದ್ದ ಮೊಡಂಜಿ ಮೀನಿನ ಕರಿದ ತುಂಡುಗಳನ್ನು ತನ್ನ ಬಾಪಾನ ತಟ್ಟೆಗೆ ಒಂದೊಂದಾಗಿ ಸರಿಸಿ ಅವರ ಬಾಯಿಯಿಂದ ಡರ್ರ್ ಎಂಬ ತೇಗಿನೊಡನೆ ಬಂದ ‘ಅಲ್ಹಂದುಲಿಲ್ಲಾ’ ಎಂಬ ವಾಕ್ಯವನ್ನು ಕೇಳಿ ಮೊಡಂಜಿ ತುಂಡಿನ ಮಹಿಮೆಯನ್ನು ಮನಸ್ಸಿನಲ್ಲೇ ಕೊಂಡಾಡತೊಡಗಿದಳು. ಸಕಲ ಜೀವರಾಶಿಗಳನ್ನು, ಹೊಳೆ ಕಡಲುಗಳ ಜಲಚರಗಳನ್ನೂ ಉಂಟುಮಾಡುವ ಅಲ್ಲಾಹು ಎಂಬ ಸರ್ವಶಕ್ತನಿಗೂ ಈ ರೀತಿ ಹೆಲಿಪೆಟ್ಟರ್ ಎಂಬ ಕುದರತ್ತಿನ ಮದ್ದಿನಿಂದ ಮೀನಿನ ಕರುಳುಗಳನ್ನು ಮಾತ್ರ ಕೊಂದು, ತಿಂದ ತನ್ನ ಬಾಪಾನ ಬಾಯಿಯಿಂದ ‘ಅಲ್ಹಂದುಲಿಲ್ಲಾ’ ಎಂಬ ಶಬ್ದವನ್ನು ಉಂಟುಮಾಡುವ ತಾಕತ್ತು ಇದೆಯೇ ಎಂದು ಸಂದೇಹಪಟ್ಟಳು. ಯಾಕೋ ತಳಮಳವಾಗಿ ಬೇಗ ತಾನೂ ಒಂದೆರಡು ತುಂಡುಗಳನ್ನು ತನ್ನ ಗಂಜಿಗೆ ಹಾಕಿಕೊಂಡು ಮುಳ್ಳುಗಳನ್ನು ಮತ್ತು ಮಾಂಸವನ್ನು ಬೇರೆ ಬೇರೆ ಮಾಡಿಕೊಂಡು ತಿನ್ನತೊಡಗಿದಂತೆ ಅವಳ ನಾಲಗೆ, ಹೊಟ್ಟೆ, ತಲೆಗಳೊಳಗೆ ವಿಚಿತ್ರವೂ, ಹೇಳಿ ತೀರಿಸಲಾಗದಂತಹದೂ ಆದ ಅನುಭವಗಳು ಹರಿದಾಡತೊಡಗಿದವು.
****************
ಸಂಜೆಯ ಸೂರ್ಯ ಪಡುವಣದ ಕಡೆಯ ಎಲಿಮಲೆಯ ಅಂಚಲ್ಲಿ ಮುಳುಗತೊಡಗಿದಂತೆ ಇತ್ತ ಆಮಿನಾಬೀಬಿಯು ತನ್ನ ಹಿತ್ತಲಲ್ಲಿ ತಾನೇ ದಿನಕ್ಕೆರಡು ಬಾರಿ ಎರಡೆರಡು ಕೊಡ ನೀರು ಹೊಯ್ದ ಬೆಳೆಸಿದ್ದ ಮಲ್ಲಿಗೆ ಎಂಬ ಹೂಬಳ್ಳಿಯಿಂದ ಬಿರಿಯಲು ಕಾದು ನಿಂತಿದ್ದ ಮೊಗ್ಗುಗಳನ್ನು ಮಾಲೆಯಾಗಿ ಪೋಣಿಸಿದಳು. ತನ್ನ ಕಾಲಿನ ಬೆಳ್ಳಿಯ ಚೈನು, ತಲೆಯ ಕನ್ನಾಡಿ ಮಾಳಿಗೆ ಎಂಬ ಮಿನುಗುವ ಲೇಸನ್ನೂ ಚೀಟಿಯ ರವಿಕೆಯನ್ನೂ ತನ್ನ ಪೆಟ್ಟಿಗೆಯಿಂದ ತೆಗೆದಿಟ್ಟುಕೊಂಡು ಒಂದೊಂದಾಗಿ ಹಳೆಯದನ್ನು ಕಳಚಿಟ್ಟು ಹೊಸ ಪೆಟ್ಟಿಗೆಯ ಕಪರ್ೂರ ಸೂಸುತ್ತಿದ್ದ ವಸ್ತ್ರಗಳನ್ನು ತೊಟ್ಟುಕೊಂಡು, ಕಾಲಿಗೆ ಬೆಳ್ಳಿಯ ಚೈನನ್ನು ಎಚ್ಚರಿಕೆಯಿಂದ ಸಿಕ್ಕಿಸಿಕೊಂಡಳು. ತನಗೇ ಬಹು ಮುದ್ದು ಮುದ್ದಾಗಿ ತೀರಾ ಪರಿಚಯವಿಲ್ಲದಂತೆ ಕಂಡ ತನ್ನ ತಾವರೆ ಹೂವಿನಂತಹಾ ಮುಖವನ್ನು ಕನ್ನಡಿಯಲ್ಲಿ ಎರಡೆರಡು ಬಾರಿ ನೋಡಿಕೊಂಡು, ಕನ್ನಾಡಿಮಾಳಿಗೆ ಎಂಬ ತಲೆಗೆ ಕಟ್ಟುವ ವಸ್ತ್ರವನ್ನು ಬಿಗಿಯಾಗಿ ಕಟ್ಟಿಕೊಂಡು ಚಿರಿಚಿರಿ ಎಂದು ನಗುವ ಚಪ್ಪಲಿಯನ್ನು ಮೆಟ್ಟಿಕೊಂಡಳು. ತನ್ನ ಬಾಪಾ ಆದ ಮೂಸಾ ಮೊಲಿಯಾರರು ಸಂಜೆಯ ಅಸರ್ ನಮಾಜಿಗೆ ಹೋದವರು ಮಸೀದಿಯಲ್ಲಿ ಅದೂ ಇದೂ ಮಾತಾಡುತ್ತಾ ರಾತ್ರಿಯ ಏಸಾ ಎಂಬ ನಮಾಜನ್ನೂ ಮುಗಿಸಿಕೊಂಡು ದೀಪ ಆರಿಸುವ ಹೊತ್ತಲ್ಲಿ ಬರುತಾರೆ ಎಂದು ಆಮಿನಾಳಿಗೆ ಗೊತ್ತಿತ್ತು. ಅಷ್ಟರೊಳಗೆ ತನ್ನ ಜೀವಮಾನದ ಏಕೈಕ ಆಸೆಯೂ, ತನ್ನ ಮುಖ ಮನಸ್ಸುಗಳಲ್ಲಿ ಉಂಟಾಗುತ್ತಿದ್ದ ಎಲ್ಲ ಅಲ್ಲೋಲಕಲ್ಲೋಲಗಳಿಗೆ ಕಾರಣವೂ ಆದ ಆ ಹೆಲಿಪೆಟ್ಟರ್ ಎಂಬ ಕುದರತ್ತನ್ನೂ ಮತ್ತು ಅದರ ಡ್ರೈವರ್ ಎಂಬ ಜಿನ್ನಿನಂತಹ ಬೆಳ್ಳೆಕ್ಕಾರನನ್ನು ನೋಡಿಯೇ ತೀರಬೇಕೆಂಬ ಹಂಬಲದಿಂದ ಸವರ್ಾಂಗ ಸುಂದರಳಾಗಿ ಮನೆಯ ಬಾಗಿಲನ್ನು ಓರೆಮಾಡಿಕೊಂಡು ಮೈನಾಡಿನ ಹೊಳೆ ಕರೆಗೆ ಇಳಿದಳು. ಹೊಳೆಯ ಮರಳಲ್ಲಿ ತನ್ನ ಚಿರಿಚಿರಿ ಎನ್ನುವ ಚಪ್ಪಲು ಹೂತುಹೋದಂತೆ ಅನುಭವವಾಗಿ ಆಮಿನಾಳಿಗೆ ಆ ಕವಿಯುತ್ತಿರುವ ಕತ್ತಲಿನಲ್ಲಿ ತನ್ನ ಬಾಪಾ ಮೂಸಾ ಮೊಲಿಯಾರರು ತನ್ನ ಹಿಂದೆಯೇ ನಾಗರಬೆತ್ತವೆಂಬ ಬಾರುಕೋಲನ್ನು ಎತ್ತಿಕೊಂಡು ಓಡಿಸುತ್ತಿರುವಂತೆ ಭಾಸವಾಗಿ ವೇಗವೇಗವಾಗಿ ಹೊಳೆಯ ನೀರಿಗೆ ಇಳಿದಳು.drwng-a-5.jpg
ತನ್ನ ಮೊಣ ಕಾಲಿನವರೆಗಿನ ಹೊಳೆಯ ನೀರಲ್ಲಿ ತನ್ನ ಬಿಳಿಯ ಉಡುವಸ್ತ್ರ ಚಂಡಿಯಾಗದಂತೆ ಏರಿಸಿ ಕೈಯಲ್ಲಿ ಮುದ್ದೆಮಾಡಿ   ಹಿಡಿದುಕೊಂಡು ತನ್ನ ಕಾಲುಗಳ ನಡುವೆ ಸರಿದಾಡುವ ತಣ್ಣಗಿನ ನೀರಿನಂತಹ ಅನುಭವ, ಸಣ್ಣ ಸಣ್ಣ ಮೀನುಗಳು ಮುತ್ತಿಕ್ಕುವ     ಆನಂದದಿಂದ ತನ್ಮಯಳಾಗಿ ಹೊಳೆಯನ್ನು ದಾಟಿ ರಬ್ಬರ್ ತೋಟದ ಗೇಟಿನೊಳಕ್ಕೆ ಹೊಕ್ಕಳು.
ರಬ್ಬರ್ ಮರಗಳ ತರಗೆಲೆಗಳ ಮೇಲೆ ಚಿರಿಚಿರಿ ಎನ್ನುವ ಆಮಿನಾಬೀಬಿಯ ಚಪ್ಪಲುಗಳು ಓಡತೊಡಗಿಂತೆ  ಸಂಜೆ ರಾತ್ರಿಯೊಡನೆ ಕೂಡುತ್ತಿರುವ ಆ ನಟ್ಟ ಇರುಳಿನಲ್ಲಿ ಕರಿಯ ರಬ್ಬರ್ ಮರಗಳು ಸಾಲು ಸಾಲು ಸೈತಾನುಗಳಂತೆ ತನ್ನನ್ನು ತಬ್ಬಿಕೊಳ್ಳಲು ಬರುವಂತೆ ತೋರಿ ಹೆದರಿಕೆಯಾಗಿ ಆಮಿನಾ ತನ್ನ ಏಕೈಕ ಆಸರೆಯಾದ ಆ ಬೆಳ್ಳೆಕ್ಕಾರನೆಂಬ ಜಿನ್ನಿನ ಹೆಲಿಪೆಟ್ಟರ್ ಎಂಬ ಕುದರೆ ನಿಂತಿರುವಲ್ಲಿಗೆ ಬೆದರುತ್ತಾ ಓಡಿ ನಿಂತುಬಿಟ್ಟಳು.
ಆಮೀನಾಬೀಬಿ ದಡಕ್ಕೆಂದು ನಿಂತುಬಿಟ್ಟಳು. ಮುಸ್ಸಂಜೆಯ ಮಸುಕು ಮಸುಕು ಬೆಳಕಿನಲ್ಲಿ ರಬ್ಬರ್ ಮರಗಳ ಕಪ್ಪು ನೆರಳುಗಳ ಮೈದಾನದಲ್ಲಿ ನಿಶ್ಚಲವಾಗಿ ನಿಂತುಕೊಂಡಿರುವ ತನ್ನ ಹೆಲಿಪೆಟ್ಟರ್ ಎಂಬ ಕೌತುಕವನ್ನು ಕಂಡ ಅವಳ ಬಾಯಿ ಸುಮ್ಮಗಾಯಿತು. ಜೀರುಂಡೆಯಂತಹಾ ಉರೂಟು ತಲೆಯ ಅದರ ಕನ್ನಡಿ, ಮೇಲೆ ಸುಮ್ಮನೆ ನಿಂತಿರುವ ರೆಕ್ಕೆಗಳು, ಗುಡಾಣದಂತಹ ಹೊಟ್ಟೆ. ನೋಡುತ್ತಾ ನೋಡುತ್ತಾ ಪರವಶಳಾದ ಆಮಿನಾಬೀಬಿಯು ಅದರ ಜಿನ್ನಿನಂತಹಾ ಡ್ರೈವರನನ್ನು ಯೋಚಿಸಲೂ ಆಗದೆ ಕಂಪಿಸುತ್ತಾ ಕಂಪಿಸುತ್ತಾ ತನ್ನ ಪುಟ್ಟ ಕೈಗಳನ್ನು ಅದರ ಮುಖದ ಕಡೆಗೆ ಚಾಚಿ ಮುಟ್ಟಿದಳೋ ಇಲ್ಲವೋ ಅಷ್ಟರಲ್ಲಿ ಹಿಂದಿನಿಂದ ಚಾಚಿ ಬಂದ ಕೈಯೊಂದು     ‘ಯಾ, ನನ್ನ ಆಮಿನಾ’ ಎಂದು ತಬ್ಬಿಕೊಳ್ಳಲು ಮೂಸಾ ಮೊಲಿಯಾರರ ಮುದ್ದಿನ ಮಗಳು ಆಮಿನಾಬೀಬಿಯ ಸವರ್ಾಂಗವೂ ಬೆವರಿಕೊಂಡು ‘ಯಾ, ನನ್ನ ಜಿನ್ನೇ’ ಎಂದು ತನ್ನನ್ನು ತಬ್ಬಿ ಹಿಡಿದವನ ಎದೆಯ ಮೇಲೆ ಒರಗಿ ಒಂದು ರೀತಿಯ ನಿದ್ದೆಗಿಂತಲೂ ಮಿಗಿಲಾದ ಮತ್ತಿನಲ್ಲಿ ಬೆವರತೊಡಗಿದಳು.
**********************
‘ಬಾಪಾ ನಾನು ಮದುವೆ ಆಗಬೇಕು’ ತನ್ನ ಮುದ್ದು ಮಗಳು ಆಮಿನಾಬೀಬಿಯ ಬಾಯಿಯಿಂದ ಸಿಡಿದ ಈ ಬಿರುಸಿಡಿಲಿನಂತಹಾ ಮಾತು ಕೇಳಿ ಏಸಾ ನಮಾಜನ್ನು ಮುಗಿಸಿ ಊಟಕ್ಕೆ ಕುಳಿತಿದ್ದ ಮೊಲಿಯಾರರ ಬಾಯಲ್ಲಿದ್ದ ತುತ್ತು ನೆತ್ತಿ ಹತ್ತುವಂತಾಯಿತು. ಎರಡೂ ಕಣ್ಣುಗಳನ್ನು ಬಿಟ್ಟು ಸಿಡಿಲಿನಂತಹಾ ಮಾತು ಹೊರಬಂದ ಅವಳ ಬಾಯಿಯನ್ನೇ ನೋಡುತ್ತಾ ಕುಳಿತುಬಿಟ್ಟ ಮೊಲಿಯಾರರಿಗೆ ‘ಬಾಪಾ, ನಾನು ಮದುವೆ ಆಗಲೇಬೇಕು’ ಎರಡನೇ ಸಲವೂ ಅದೇ ಮಾತು ಕೇಳಿ ಖಿಯಾಮತ್ ಎಂಬ ಜಗತ್ತಿನ ಅಂತಿಮ ದಿನದ ನೆನಪಾಗಿ ಥರಥರ ತತ್ತರಿಸತೊಡಗಿದರು. ಮೊಲಿಯಾರರ ಹಣೆಯಲ್ಲಿ ಬೆವರುಹನಿ ಬರತೊಡಗಿ ತಟ್ಟನೇ ಏನೋ ಊಹಿಸಿಕೊಂಡು ನಡುಗಿಬಿಟ್ಟರು.
ಮುದ್ದಿನ ಮಗಳು ಆಮಿನಾಬೀಬಿಯ ಹೊಚ್ಚ ಹೊಸ ಪಾವಾಡೆ ಬೆವೆತಿತ್ತು, ಅವಳು ಉಟ್ಟುಕೊಂಡಿರುವ ಪಟ್ಟೆ ಎಂಬ ಬಟ್ಟೆಯ ಬೆಳ್ಳಗಿನ ಕಾಚಿಯಲ್ಲಿ ನುಗ್ಗುಗಳೆಂಬ ಮುಳ್ಳುಗಳು ಸಿಕ್ಕಿಕೊಂಡಿತ್ತು, ಅವಳ ಕನ್ನಾಡಿಮಾಳಿಗೆ ಎಂಬ ತಲೆಯ ತಟ್ಟ ಸರಿದು ಅದರೊಳಗಿಂದ ಮಲ್ಲಿಗೆಗಳು ಚದುರಿದ್ದವು. ಮೊಲಿಯಾರರ ನರನಾಡಿಗಳು ಬಿಳಿಚಿಕೊಂಡು ‘ಯಾ ಮೋಳೇ’ ಎಂದು ಚೀತ್ಕರಿಸುತ್ತಾ ಮಗಳನ್ನು ಅಪ್ಪಿಕೊಳ್ಳುವಂತೆ ಅವರು ಮುಂದೆ ಬರುವುದಕ್ಕೂ ಆಮಿನಾಬೀಬಿಯು ‘ಬಾಪಾ’ ಎಂದು ತನ್ನ ತಂದೆಯ ಕಾಲಡಿಯಲ್ಲಿ ಕುಸಿಯುವುದಕ್ಕೂ ಸರಿಹೋಯಿತು.
‘ಏನಾಯ್ತು ಮೋಳೇ, ಎನ್ನುತ್ತಾ ತನ್ನ ಕಾಲಡಿಯಿಂದ ಮಗಳು ಆಮಿನಾಬೀಬಿಯನ್ನು ಎತ್ತಿಹಿಡಿದ ಮೊಲಿಯಾರರಿಗೆ, ‘ಬಾಪಾ, ಹೆಲಿಪೆಟ್ಟರಿನ ಬೆಳ್ಳೆಕ್ಕಾರನನ್ನು ಮದುವೆ ಆಗುತ್ತೀನಿ ಬಾಪಾ’ ಎಂದು ತನ್ನ ಮಗಳು ಬೋರಿಡುವುದು ಕೇಳಿಸಿ ಮೊಲಿಯಾರರು ತಮ್ಮ ಸ್ವರ್ಗದಲ್ಲಿರುವ ಹೆಂಡತಿಯನ್ನು ನೆನೆದುಕೊಂಡು ಅಳತೊಡಗಿದರು.
ರಾತ್ರಿಯೆಲ್ಲಾ ಆಮಿನಾಬೀಬಿಯು ತನ್ನ ನಿದ್ದೆಬಾರದ ಕಣ್ಣುಗಳಲ್ಲಿ ಆ ಹೆಲಿಪೆಟ್ಟರೆಂಬ ಕುದುರೆಯನ್ನೇರಿ ಬಂದು ತನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಹೋದ ಜಿನ್ನಿನಂತಹಾ ಬೆಳ್ಳೆಕಾರನ ಕನಸಿನಲ್ಲೇ ರಾತ್ರಿ ಮುಗಿಸಿ ಬೆಳಗೆ ಅರೆಯುವ  ಸದ್ದಿನಲ್ಲಿ ಹೆಲಿಪೆಟ್ಟರ್ ಎಂಬ ಕುದುರೆಯ ಕನಸು ಕಾಣುತ್ತಿದ್ದ ಆಮಿನಾಬೀಬಿಯು ತಟ್ಟನೆ ತನ್ನ ಬಾಪಾ ಮುಂಡಾಸು ಕೊಡವಿ ಹಾರಿಕೊಂಡು ಹೋದದ್ದನ್ನು ಕಂಡು ಹೆದರಿಕೊಂಡು ತನ್ನ ಬಲಗೈಯ ಸಣ್ಣ ಬೆರಳನ್ನು ಕಲ್ಲಿನೊಳಗೆ ಗರ್ ಎಂದು ತಿರುಗಿಸಿ ಬೆರಳು ಅಪ್ಪಚ್ಚಿಗೊಂಡು ನೋವಿನಿಂದ ತಟ್ಟನೆ ಅನ್ನು ಬಾಯೊಳಗಿಟ್ಟುಕೊಂಡು ಚೀಪತೊಡಗಿದಂತೆ ಅತ್ತ ಬಚ್ಚಲಿನಲ್ಲಿ ಮೂಸಾ ಮೊಲಿಯಾರರು ತಮ್ಮ ತಲೆಯೊಳಗೆ ಗಟ್ಟಿಯಾಗುತ್ತಾ ಬಂದ ಉಪಾಯಕ್ಕೆ ಖುಷಿಪಟ್ಟುಕೊಂಡು ತಮ್ಮ ದಾಡಿಯನ್ನೂ ಕೈಕಾಲು ಮುಖಗಳನ್ನೂ ಓರಣವಾಗಿ ತೊಳೆದು ಬಾಯಿ ಮುಕ್ಕಳಿಸಿ ಕ್ಯಾಕೆಂದು ತುಪ್ಪಿ ಆಮದ್ಕುಟ್ಟಿಯನ್ನು ಈಗ ಎಲ್ಲಿ ಹುಡುಕಬಹುದು ಎಂಬ ಯೋಚನೆಯಿಂದ ಒಂದು ಬೀಡಿಯನ್ನು ಕಟ್ಟಿನಿಂದ ತೆಗೆದು ಹೊರಕ್ಕೆ ನಡೆದರು.
***************
ಮೈನಾಡನ್ನು ಬಳಸಿಕೊಂಡು ಹರಿಯುವ ನದಿಯ ಅತ್ಯಂತ ಆಳವೂ ವಿಶಾಲವೂ ಆದ ದೇವರ ಗುಂಡಿಯ ಬಂಡೆಯ ಮೇಲೆ ತನ್ನ ಅಂಗಿ ಲುಂಗಿಯನ್ನು ಬಿಚ್ಚಿಟ್ಟ ಆಮದ್ಕುಟ್ಟಿಯು ಬುಳಕ್ಕೆಂದು ನೀರೊಳಕ್ಕೆ ಪಲ್ಟಿ ಹೊಡೆದು ಆಳಕ್ಕೆ ಈಜಿಕೊಂಡು ಹೋದನು. ಆತನು ಹಾರಿದ ಜಾಗದಲ್ಲಿ ಸುತ್ತುಸುತ್ತಾಗಿ ಮೇಲಕ್ಕೆದ್ದ ಅಲೆಗಳ ವೃತ್ತ ಆಗತಾನೇ ಮೂಡಣದ ಹುಲಿಮಲೆಯಿಂದ ಎದ್ದ ಕೆಂಪು ಸೂರ್ಯನ ಕಿರಣಗಳಿಗೆ ಹೊಳೆಯುತ್ತಾ ಆಮದ್ಕುಟ್ಟಿಯ ಮನಸ್ಸಿನೊಳಗೆ ಉಂಟಾಗುತ್ತಿರುವ ಖುಷಿ, ಆನಂದಗಳ ಸಂಕೇತಗಳಾಗಿ ಮಿನುಗತೊಡಗಿದವು. ದೇವರ ಗುಂಡಿಯ ತಳವನ್ನು ಸವರುತ್ತಾ, ಕೈಕಾಲುಗಳನ್ನು ಆಡಿಸುತ್ತಾ ಖುಷಿಯಲ್ಲಿದ್ದ ಆಮದನ್ನು ತಡೆಯಲಾಗದೆ ಬುಳಕ್ಕೆಂದು ನೀರ ಮೇಲೆ ಬಂದು ‘ಯಾ ಆಮಿನಾ’ ಎಂದು ಕೂಗಿಕೊಂಡು ಮರಳಿನಲ್ಲಿ ಹೊರಳಾಡತೊಡಗಿದನು.
‘…… ಆಮಿನಾಬೀಬಿಯ ಏರಿಳಿಯುವ ಮೊಲೆಗಳೆಂಬ ಜಾಗವನನು ನೋಡಿ ತಡೆದುಕೊಳ್ಳಲಾರದವನಾಗಿ ಹೋಗಿದ್ದ ಆಮದ್ಕುಟ್ಟಿಯು ಅವಳ ಕೈಹಿಡಿಯಲು ಹೋಗಿ ಬಲವಾಗಿ ಕಚ್ಚಿಸಿಕೊಂಡವನು ನಿರಾಶೆಯಿಂದಲೂ, ಅವಮಾನ ನಾಚಿಕೆಯಿಂದಲೂ ತನ್ನ ಮಣಿಗಂಟಿನ ಗಾಯಕ್ಕೆ ಮೊಲಿಯಾರರು ಕಟ್ಟಿದ ಬಟ್ಟೆ ತುಂಡನ್ನು ಒತ್ತಿ ಹಿಡಿದು ಹೊಳೆಯ ಪಾರೆ ಕಲ್ಲೊಂದರಲ್ಲಿ ದಿಙ್ಮೂಢನಾಗಿ ಕುಳಿತು, ಹೊಳೆಯ ಮರಳಿನಲ್ಲಿ ತನ್ನ ಕಾಲ ಬೆರಳಿನಿಂದ ಆಳವಾದ ಗುಳಿಗಳನ್ನು ತೋಡುತ್ತಾ, ಅನ್ಯಮನಸ್ಕನಾಗುತ್ತಾ ತಾನು ಹಿಡಿದು ಕೊಟ್ಟ ಮೊಡಂಜಿ, ಮೊರಂಟೆ ಇತ್ಯಾದಿ ಮೀನುಗಳು ತುಂಡು ತುಂಡುಗಳಾಗಿ ಆಮಿನಾಬೀಬಿಯ ಪಾತ್ರೆಯೊಳಗೆ ಬೇಯುತ್ತಿರುವುದನ್ನು ಊಹಿಸುತ್ತಾ ಅಳು ಬಂದಂತಾಗಿ ತಳಮಳಿಸುತ್ತಿರಲು ಮೈನಾಡಿನ ಪಡುವಣದ ಎಲಿಮಲೆಯ ಅಂಚಲ್ಲಿ ಸೂರ್ಯ ಮೆಲ್ಲಮೆಲ್ಲಗೆ ಸರಿಯುತ್ತಾ ಹೊಳೆಯ ಹೊಯ್ಗೆಯ ಮೇಲೆ ಪಾರೆಕಲ್ಲುಗಳ ದಟ್ಟ ನೆರಳು ಆವರಿಸತೊಡಗಿತ್ತು. ಆಮದ್ಕುಟ್ಟಿಯು ಪಾರೆಕಲ್ಲಿನ ಮೇಲೆ ಕಪ್ಪು ನೆರಳಿನಂತೆ ಕುಳಿತು ಬಣ್ಣ ಕಳೆದುಕೊಳ್ಳುತ್ತಿದ್ದ ಹೊಳೆಯ ನೀರಂಚನ್ನೇ ದಿಟ್ಟಿಸುತ್ತಾ ಕುಳಿತಿದ್ದವನು ಜಲ್ ಜಲ್ ಎಂಬ ಕಾಲುಗೆಜ್ಜೆಯ ಸದ್ದಿಗೆ ಬೆಚ್ಚಿಬಿದ್ದು ತಲೆ ಎತ್ತಿದಾಗ ಕಂಡ ನೋಟದಿಂದ ದಂಗುಬಡಿದು ಕುತೂಹಲದಿಂದ ಆ ನೆರಳಿನಂತಹಾ ಹೆಣ್ಣನ್ನೇ ಹಿಂಬಾಲಿಸಿಕೊಂಡು ಹೊಳೆಯನ್ನೂ ದಾಟಿ ಅವಳ ಹಿಂದೆಯೇ ರಬ್ಬರ್ ತೋಟವನ್ನು ಹೊಕ್ಕು ತನ್ನ ನಡಿಗೆಯನ್ನು ಚುರುಕುಗೊಳಿಸುತ್ತಾ ಕಳ್ಳಬೆಕ್ಕಿನಂತೆ ಹಿಂಬಾಲಿಸಿದ್ದನು. ಕೊನೆಗೆ ಆ ಹೆಲಿಕಾಪ್ಟರ್ ಎಂಬ ಕೌತುಕದ ಬಳಿ ಆ ಕಾಲುಗೆಜ್ಜೆಯ ಹೆಣ್ಣು ನಿಂತುಕೊಂಡು ಅದರ ಕನ್ನಡಿಗಳನ್ನು ತಡವಿದಾಗ ಆ ಕನ್ನಡಿಯ ಪ್ರತಿಫಲನದಲ್ಲಿ ತನ್ನ ಆಮಿನಾಳ ಮುಖವನ್ನು ಕಂಡುಕೊಂಡು ‘ಯಾ ನನ್ನ ಆಮಿನಾ’ ಎಂದು ಅವಳನ್ನು ಹಿಂದಿನಿಂದ ತಬ್ಬಿಕೊಂಡವನು ‘ಯಾ ನನ್ನಜಿನ್ನೇ’ ಎನ್ನುತ್ತ ತನ್ನೆದೆಯ ಮೇಲೊರಗಿದ ಆಕೆಯ ಭಾರದಿಂದ ಕುಸಿದರೂ ಸವರಿಸಿಕೊಂಡು ನಿಧಾನವಾಗಿ ಆಕೆಯನ್ನು ರಬ್ಬರ್ ಮರಗಳ ತರಗೆಲೆಗಳ ಮೇಲೆ ಒರಗಿಸಿ ತನ್ನನ್ನು ತಾನೇ ಮರೆತುಬಿಟ್ಟಿದ್ದನು.’
ಮರಳಲ್ಲಿ ಅಂಗಾತ ಕವುಚಿದ್ದ ಆಮದ್ಕುಟ್ಟಿಯ ನರನರಗಳಲ್ಲಿ ಆಮಿನಾಬೀಬಿಯ ಮೆತ್ತಗಿನ ಮೈಯ ಬಿಸಿ ಹರಿದಾಡಿ ಹಾಯೆಂದು ಮರಳನ್ನು ಮೈಮೇಲೆ ಎರಚಿಕೊಳ್ಳುತ್ತಾ ಇರುವ ಹೊತ್ತಲ್ಲಿ ತಮ್ಮ ಭಾರವಾದ ಕಾಲುಗಳನ್ನು ಎಳೆದುಕೊಳ್ಳುತ್ತಾ ಬಂದ ಮೂಸಾ ಮೊಲಿಯಾರರು ಆಮದ್ಕುಟ್ಟಿಯು ಮರಳು ಎರಚಿಕೊಳ್ಳುತ್ತಿರುವ ಆನಂದವನ್ನು ಅನುಭವಿಸುತ್ತಾ ಹುಸಿಯಾದ ಕೆಮ್ಮೊಂದನ್ನು ಕೆಮ್ಮಿ ತಮ್ಮ ಭಾವೀ ಅಳಿಯನ ನಾನಾ ವಿನೋದಗಳನ್ನು ಕಂಡು ಖುಷಿ ಪಟ್ಟುಕೊಳ್ಳುತ್ತಿರಲು ಇತ್ತ ಮೂಸಾ ಮೊಲಿಯಾರರ ಮುದ್ದಿನ ಮಗಳು ಆಮಿನಾಬೀಬಿಯು ತಾನು ಅರೆಯುತ್ತಿರುವ ಕಲ್ಲಿನಿಂದ ಹೆದರಿಕೊಂಡು ಎದ್ದು ಹಿತ್ತಲಿನ ಕಡೆ ತನ್ನ ತೊಂಡೆ ಚಪ್ಪರದ ಅಡಿಗೆ ಬಂದವಳು ತಾನು ಕಂಡ ದೃಶ್ಯದಿಂದ ಚಿಟ್ಟನೇ ಚೀರಿ ಕೆಳಕ್ಕೆ ಉರುಳಿದಳು.
ಮೂಸಾ ಮೊಲಿಯಾರರ ಮುದ್ದಿನ ಮಗಳು ಆಮಿನಾಬೀಬಿಯ ಮುದ್ದಿನ ಪೂಚೆಕುಟ್ಟಿಯು ಹೆಲಿಪೆಟ್ಟರ್ ಎಂಬ ಜಂತುವಿನ ವಿಷ ಕುಡಿದು ಸತ್ತ ಮೊಡಂಜಿ ಎಂಬ ಮೀನಿನ ವಿಷದಿಂದ ಕೂಡಿದ ಕರುಳನ್ನು ತಿಂದು ತಾನೂ ಎರಡು ಕಣ್ಣುಗಳನ್ನು ಹೊರಗೆ ಮಾಡಿಕೊಂಡು ಚಪ್ಪರದಡಿಯಲ್ಲಿ ಸತ್ತುಬಿದ್ದಿತು.
——————-

Advertisements