ರಾಬಿಯಾಳಿಗೆ ಮದುವೆಯಾದ ಪ್ರಸಂಗ

dsc04458.jpg

`ಈ ಹಿಂದೆ ಕುಂಞಮ್ಮದನ ಮದುವೆಯ ಅಲ್ಲೋಲ ಕಲ್ಲೋಲದ ಕುರಿತು ಏನನ್ನೂ ಹೇಳದೆ  ನೀನು ಬಚಾವಾದೆ.ಈ ವಾರವೂ ನೀನು ಅದನ್ನು ಬರೆಯದೆ ಬೇರೆ ಏನಾದರೂ ಲಡಾಸು ಬರೆಯಲು ಹೋದರೆ ನಿನ್ನ ತಲೆಯ ಜೊತೆ ನನ್ನ ತಲೆಯೂ ಸಹಸ್ರ ಹೋಳಾಗುವುದು.ಆ ಕತೆ ಹೇಳಿ ಮುಗಿಸು ಮಾರಾಯ. ನಿನ್ನ ಜೊತೆ ನಾನೂ ಬದುಕಿಕೊಳ್ಳುತ್ತೇನೆ’ ಎಂದು ಆತ ಅಕ್ಕರೆಯಿಂದ ಕೇಳಿಕೊಳ್ಳುತ್ತಿದ್ದ.ನಾನು ಮನಸಿನ ಒಳಗೊಳಗೆ ಮುಸಿಮುಸಿ ನಗು ಬಂದರೂ ತೋರಿಸಿಕೊಳ್ಳದೆ ಸುಮ್ಮಗೆ ಕೇಳಿಸಿಕೊಳ್ಳುತ್ತಿದ್ದೆ.

 ‘ಆ ಕೋಲಾಹಲದ ಮದುವೆಯ ಕುರಿತು ಈಗ ಏನು ಬರೆಯುವುದು?ಅದು ಸಂಭವಿಸಿ ಹತ್ತುಮೂವತ್ತು ವರ್ಷಗಳು ಕಳೆದಿದೆ.ಆಗ ನಾನಿನ್ನೂ ಹತ್ತು ವರ್ಷದ ಬಾಲಕ.ಕುಂಞಮ್ಮದನ ಮದುವೆಯ ನಿಶ್ಚಿತಾರ್ಥಕ್ಕೂ ಆಮೇಲೆ ನಡೆದ ವಿವಾಹ ಸಮಾರಂಭಕ್ಕೂ ನಾನು ಸಾಕ್ಷಿಯಾಗಿದ್ದೆ.ಮದುವೆಯ ರಾತ್ರಿ ನಡೆದ ಹೊಡೆದಾಟದ ನಂತರ ದೋಣಿ ಹತ್ತಿ ಪರಾರಿಯಾದವರಲ್ಲಿ ನಾನೂ ಒಬ್ಬನಾಗಿದ್ದೆ.ಈಗ ಅದೆಲ್ಲಾ ಯಾವುದೋ ಗ್ರೀಕ್ ಮಹಾಕಾವ್ಯವೊಂದರ ಒಂದು ಪುಟ್ಟ ಘಟನೆಯಂತೆ ಭಾಸವಾಗುತ್ತಿದೆ.ಈಗ ಅದನ್ನೆಲ್ಲಾ ನೆನಪು ಮಾಡಿಕೊಳ್ಳುವುದಕ್ಕಿಂತ ಬೇರೆ ಏನಾದರೂ ಚಂಗೂಲಿ ಕೆಲಸ ವಹಿಸಿಕೊಂಡು ಅದನ್ನು ಪೂರೈಸುವುದು ಸುಲಭ.ಅದು ಬಿಟ್ಟು ಅರ್ದಕ್ಕೆ ನಿಲ್ಲಿಸಿದ ಕತೆಯನ್ನು ಪೂರ್ತಿಗೊಳಿಸು ಅಂದರೆ ಅದು ಮಹಾ ತಾಪತ್ರಯವಾಗುತ್ತದೆ ದಯವಿಟ್ಟು ಮನ್ನಿಸು ಮಹಾಪ್ರಭುವೆ’ಎಂದು ಆತನಲ್ಲಿ ಬೇಡಿಕೊಂಡೆ.

 ನಾನು ಈತರಹ ಬೇಡಿಕೊಂಡರೆ ಅದರ ಅರ್ಥ ಕಥೆ ಹೇಳಲು ನನಗೇ ಆಸೆ ಇದೆ ಅಂತ.ಅದು ಆತನಿಗೂ ಗೊತ್ತು. ‘ಸುಮ್ಮನೆ ಬರೆದು ಮುಗಿಸು ಚೆನ್ನಾಗಿರುತ್ತದೆ’ಎಂದು ಚುಟುಕಾಗಿ  ಸೂಚಿಸಿದ.ಹಾಗಾಗಿ ಸುಮ್ಮನೇ ಆ ಕಥೆಯನ್ನು ಹೇಳಿ ಮುಗಿಸುತ್ತೇನೆ.

 ಕುಂಞಮ್ಮದ್ ಹಲಸಿನ ಮರದಿಂದ ಬಿದ್ದು ಜಖಂಗೊಳ್ಳದೇ ಎದ್ದವನು ಹೇಳದೇ ಕೇಳದೇ ಊರು ಬಿಟ್ಟು ಬೊಂಬಾಯಿ ಸೇರಿಕೊಂಡವನು ಆಗಾಗ ಯಾರಿಂದಾದರೂ ಪತ್ರಬರೆಸುತ್ತಿದ್ದ.ಅದನ್ನು ನಾನೇ ಎಲ್ಲರಿಗೂ ಓದಿ ಹೇಳಬೇಕಾಗುತ್ತಿತ್ತು. ಆ ಪತ್ರಗಳ ಅರ್ದಕ್ಕಿಂತಲೂ ಹೆಚ್ಚು ಭಾಗ ಬರಿಯ ಶಿಷ್ಟಾಚಾರದಿಂದಲೇ ತುಂಬಿದ್ದರೂ ಉಳಿದ ವಿಷಯಗಳು ಆಸಕ್ತಿದಾಯಕವಾಗಿರುತ್ತಿತ್ತು.dsc04461.jpgಅದರಲ್ಲಿಯೂ ಆತ ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳುವ ಪರಿಯಂತೂ ಎಂತವರ ಕಣ್ಣುಗಳೂ ತೇವವಾಗು ವಂತೆ ಇರುತ್ತಿದ್ದವು.ಆತ ಕಾಫಿ ತೋಟದಲ್ಲಿ ಮೇಯಿಸುತ್ತಿದ್ದ ದನಗಳ ವಿಷಯ,ಅವುಗಳ ಪ್ರತ್ಯೇಕ ಸ್ವಭಾವ,ಅವುಗಳ ಹಠ, ಸಿಟ್ಟು, ಕೊಂಡಾಟ,ಕೀಟಲೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನೆನಪು ಮಾಡಿಕೊಳ್ಳುತ್ತಿದ್ದ. ಅದು ಬಿಟ್ಟರೆ ಆತನ ಪತ್ರದಲ್ಲಿ ನನಗೆ ಮುಜುಗರವಾಗುವಂತಹ ಬಹಳ ವಿಷಯಗಳಿರುತ್ತಿದ್ದವು.ಅದೆಲ್ಲಾ ನಾನು ಮತ್ತು ಆತ ಜಂಟಿಯಾಗಿ ನಡೆಸಿದ ಕೆಲವು ಸಾಹಸ ಕಾರ್ಯಗಳ ಕುರಿತಾಗಿ ಇರುತ್ತಿದ್ದವು.ನಾನು ಅವುಗಳನ್ನು ಓದದೇ `ಇತಿ ,ಅಸ್ಸಲಾಮು ಅಲೈಕುಂ ಎಂದು ಚುಟುಕಾಗಿ ಮುಗಿಸಿ ಬಿಡುತ್ತಿದ್ದೆ. ಎಲ್ಲಕ್ಕಿಂತ ನನಗೆ ಸಿಟ್ಟು ಬರುತ್ತಿದ್ದುದು ಆತ ಪ್ರತೀ ಪತ್ರದಲ್ಲೂ ರಾಬಿಯಾ ಎಂಬ ಕಾಫಿ ತೋಟದ ಆ ಹುಡುಗಿಯನ್ನು ವಿಚಾರಿಸಿಕೊಳ್ಳುತ್ತಿದ್ದ ರೀತಿ.

ಅದು ನನಗೆ ಒಂದಿಷ್ಟೂ ಇಷ್ಟವಾಗುತ್ತಿರಲಿಲ್ಲ. ಏಕೆಂದರೆ ಕುಂಞಮ್ಮದ್ ಬೊಂಬಾಯಿಗೆ ಓಡಿಹೋದ ಮೇಲೆ ನಾನೇ ಆಕೆಯನ್ನು ಮನಸಿನಲ್ಲಿ ಪ್ರೀತಿಸುತ್ತಿದ್ದೆ. ಅದು ಆಕೆಗಾಗಲೀ ಬೇರೆ ಯಾರಿಗಾಗಲೀ ಗೊತ್ತಿರಲಿಲ್ಲ.

 ರಾಬಿಯಾ ನೋಡಲು ಸುಂದರಿಯಾಗಿಯೇನೂ ಇರಲಿಲ್ಲ.ಅವಳಿಗೆ ಹಲ್ಲು ಕೊಂಚ ಉಬ್ಬಿತ್ತು.ಆದರೆ ಗಾಂದಾರಿ ಮೆಣಸಿನ ಹಾಗೆ ಚುರುಕಾಗಿದ್ದಳು.ಕುಂಞಮ್ಮದ್ ಬೊಂಬಾಯಿಗೆ ಓಡಿಹೋದ ಮೇಲೆ ಅವಳೇ ಮರಹತ್ತುವುದರಲ್ಲಿ ಹೆಸರು ಪಡೆದಿದ್ದಳು. ಮರಹತ್ತುವುದನ್ನು ಹೇಗೆ ಕಲಿತೆ ಎಂದು ಕೇಳಿದರೆ ಕುಂಞಮ್ಮದನ ಹೆಸರು ಹೇಳಿದ್ದಳು.ಆಗಲೇ ನನಗೆ ಅನುಮಾನ ಶುರುವಾಗಿತ್ತು.ಬೊಂಬಾಯಿಯಿಂದ ಆತನ ಪತ್ರಗಳು ಬರಲು ತೊಡಗಿದಮೇಲೆ ಒಂದೊಂದೇ ಅರ್ಥವಾಗಲು ಶುರುವಾಯಿತು. ಆತ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರದಲ್ಲಿ ಸಿನೆಮಾ ನೋಡಿಬಂದು ನನಗೆ ಹೇಳುತ್ತಿದ್ದ ಎಂ.ಜಿ.ಆರ್-ಜಯಲಲಿತಾ,ರಾಜಕುಮಾರ್-ಜಯಂತಿಯರ ಸಾಹಸ ಕಥೆಗಳು ನಿಜಕ್ಕೂ ನಡೆದಿರುವುದು ನಮ್ಮ ಕಾಫೀ ತೋಟದಲ್ಲಿಯೇ ಎಂದು ಅರಿವಾಗಿ ಎದೆಯೊಳಗೆ ನೋವು ಕಾಣಿಸಿಕೊಂಡಿತ್ತು.

 ಆದರೆ ಬೊಂಬಾಯಿಯಿಂದ ರಜೆಮಾಡಿಕೊಂಡು ಮದುವೆಮಾಡಿಕೊಂಡು ಹೋಗಲು ಬಂದ ಕುಂಞಮ್ಮದ್ ರಾಬಿಯಾಳ ವಿಷಯವನ್ನೇ ತೆಗೆಯಲಿಲ್ಲ.ಆತನಿಗೆ ಕಾಫಿತೋಟದಲ್ಲಿ ಮೆಣಸಿನಕಾಯಿಯಂತೆ ಓಡಾಡಿಕೊಂಡಿದ್ದ ರಾಬಿಯಾ ಬೇಕಾಗಿರಲಿಲ್ಲ.ಕಾಸರಗೋಡಿನ ಅಡೂರಿನ ಸುಂದರಿ ಹುಡುಗಿಯೊಬ್ಬಳ ಜೊತೆ ನಿಶ್ಚಿತಾರ್ಥ ಎಂದು ನಿಶ್ಚಯಿಸಿ ನಮ್ಮೆಲ್ಲರನ್ನೂ ತೋಟದ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ.

 ತೋಟದ ಸಾಹುಕಾರರು ಕುಂಞಮ್ಮದನನ್ನು ಕ್ಷಮಿಸಿದ್ದರು.ಏಕೆಂದರೆ ಅವರೂ ಈಗ ಇಂದಿರಾ ಗಾಂಧಿಯ ಪಕ್ಷಕ್ಕೆ ಸೇರಿಕೊಂಡಿದ್ದರು.ಆದರೆ ಅವರಿಗೆ ಮದುವೆಯ ನಿಶ್ಚಿತಾರ್ಥಕ್ಕೆ ಬರಲಾಗುವುದಿಲ್ಲವೆಂದು ಅವರ ಪರವಾಗಿ ತೋಟದ ರೈಟರಾಗಿದ್ದ ನಮ್ಮ ತಂದೆಯನ್ನು ನಿಯೋಜಿಸಿದ್ದರು.ನಮ್ಮ ತಂದೆ ಆರೋಗ್ಯದ ಕಾರಣದಿಂದಾಗಿ ಅವರ ಪರವಾಗಿ ನನ್ನನ್ನು ನಿಯೋಜಿಸಿದ್ದರು.

  ನಾನು ಹೊಳೆಯನ್ನು ನೋಡಿದ್ದು ಮತ್ತು ದೋಣಿಯಲ್ಲಿ ಅದನ್ನು ದಾಟಿದ್ದು ಜೀವನ ದಲ್ಲಿ ಅದೇ ಮೊದಲು. ಆದರೆ ನಾವು ದೋಣಿಯಲ್ಲಿ ದಾಟುವಾಗ ಬೇಸಿಗೆಕಾಲವಾದ್ದರಿಂದ ಚಂದ್ರಗಿರಿ ನದಿಯಲ್ಲಿ ನೀರಿಲ್ಲದೆ ಕೆಲವು ಕಡೆ ದೋಣಿಯನ್ನು ಮರಳಿನ ಮೇಲೆ ಎಳೆದುಕೊಂಡು ಕೆಲವೊಮ್ಮೆ ನಾವು ದೋಣಿ ಇಳಿದು ಮರಳಲ್ಲಿದೂಡಿಕೊಂಡು ಹೋಗಿ ಹುಡುಗಿಯ ಮನೆ ಸೇರಿದ್ದೆವು.

 ಈಗ ನನಗೆ ಆ ನಿಶ್ಚತಾರ್ಥದ ನೆನಪಾಗುವುದು ಆ ದೋಣಿಯನ್ನು ಮರಳಲ್ಲಿ ದೂಡಿದ ವಿಷಯಕ್ಕಾಗಿ ಮತ್ತು ಅಲ್ಲಿ ಸಿಕ್ಕಾಪಟ್ಟೆ ತಿಂದುದಕ್ಕಾಗಿ ಮತ್ತು ಹುಡುಗಿಯನ್ನು ನೋಡಿದ ಕುಂಞಮ್ಮದ್ ಮದುವೆಯ ದಿನದವರೆಗೆ ಆಕೆಯ ಸೌಂದರ್ಯವನ್ನು ಹಗಲಿರುಳು ವರ್ಣಿಸುತ್ತಿದ್ದ ರೀತಿಗಾಗಿ.ಮತ್ತು ರಾಬಿಯಾ ತನ್ನ ಮುಖವನ್ನು ಇನ್ನಷ್ಟು ಸಿಡಿಮಿಡಿಮಾಡಿಕೊಂಡು ಗೊಣಗುತ್ತಾ ಓಡಾಡುತ್ತಿದ್ದುದಕ್ಕಾಗಿ.  

 ಆದರೆ ಆತನ ಮದುವೆ ಮಾತ್ರ ಕೋಲಾಹಲದಲ್ಲಿ ಕೊನೆಯಾಗಿತ್ತು.ಆಗ ಮಳೆಗಾಲ ಬೇರೆ ಶುರುವಾಗಿತ್ತು.ಚಂದ್ರಗಿರಿ ತುಂಬಿ ರಾಡಿಯಾಗಿ ಹರಿಯುತ್ತಿತ್ತು.ಎಷ್ಟು ಬೇಡವೆಂದರೂ ಕೇಳದೆ ನಾನೂ ಹುಡುಗನ ಕಡೆಯವರೊಂದಿಗೆ ಹೊರಟಿದ್ದೆ.ನದಿ ಹರಿಯುವುದು ನೋಡಿದರೆ ತಲೆ ತಿರುಗುತ್ತಿತ್ತು.

ಕಥೆ ಹೇಳಿ ಮುಗಿಸುತ್ತೇನೆ. ನಿಖಾಮುಗಿಸಿ ಊಟಮುಗಿಸಿ ಹುಡುಗಿಯ ಅಂತಃಪುರ ಸೇರಿದ ಕುಂಞಮ್ಮದ್ ಕಿರುಚಿಕೊಂಡು ಹೊರಗೆ ಓಡಿಬಂದಿದ್ದ.ಇವಳು ನಾನು ನೋಢಿದ ಹುಡುಗಿಯೇ ಅಲ್ಲ. ಇವಳು ನನಗೆ ತಾಯಿ ಸಮಾನ ಎಂದು ಕಿರಿಚಾಡುತ್ತಿದ್ದ.ನಾನು ಇವಳನ್ನು ಹೇಗೆ ಸೇರಲಿ ಎಂದು ಅಳುತ್ತಿದ್ದ.

 ವಿಷಯವೇನೆಂದರೆ ಅಡೂರಿನ ಹುಡುಗಿಯ ಕಡೆಯವರು ಕುಂಞಮ್ಮದನಿಗೆ ಮೋಸ ಮಾಡಿದ್ದರು.ನಿಶ್ಚಿತಾರ್ಥಕ್ಕೆ ಸುಂದರಿಯೊಬ್ಬಳನ್ನು ಅವನಿಗೆ ತೋರಿಸಿ ವಯಸ್ಸಾದ ಚನ್ನಾಗಿಲ್ಲದ ಹೆಂಗಸೊಬ್ಬಳ ಜೊತೆ ನಿಖಾ ಮಾಡಿಸಿಬಿಟ್ಟಿದ್ದರು.ಆ ಮದುವೆಯ ರಾತ್ರಿ ಅಲ್ಲಿ ಹೊಡೆದಾಟವೇ ನಡೆದು ನಾವೆಲ್ಲ ಹೇಗೋ ತಪ್ಪಿಸಿಕೊಂಡು ಮದುವೆ ಹುಡುಗಿಯನ್ನು ಅಲ್ಲೇ ಬಿಟ್ಟು ತೋಟ ಸೇರಿದ್ದೆವು.

  ರಾಬಿಯಾ ಇದು ಏನೂ ಗೊತ್ತಿಲ್ಲದೆ ಆ ರಾತ್ರಿ ತೋಟದ ಲೈನು ಮನೆಯಲ್ಲಿ ಮಲಗಿದ್ದಳು.ಮಲಗಿದ್ದ ಅವಳನ್ನು ಎಬ್ಬಿಸಿ ಕುಂಞಮ್ಮದನ ಜೊತೆ ಅದೇ ನಡು ರಾತ್ರಿ ಮದುವೆ ಮಾಡಿಸಿ ಬಿಟ್ಟಿದ್ದರು.

  ಆಮೇಲೆ ಏನಾಯ್ತು ಎಂದು ನೀವು ಕೇಳಬಹುದು.

 ಅದು ಬೇರೆಯೇ ಕಥೆ. ಕುಂಞಮ್ಮದ್ ರಾಬಿಯಾಳನ್ನೂ ದಾಟಿ ಭಾರತ ದೇಶವನ್ನೂ ದಾಟಿ ಅದು ಯಾವುದೋ ಅರಬಿ ದೇಶದಲ್ಲಿ ಏನೋ ಚಾಕರಿಯಲ್ಲಿದ್ದಾನೆ.ರಾಬಿಯಾ ಕೊಡಗಿನಲ್ಲಿ ಎಲ್ಲೋ ಒಂದು ಕಡೆ ಯಾವುದೋ ಕಾಫಿ ತೋಟದಲ್ಲಿ ಕಚ್ಚರೆ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಮುಖ ದುಮುದುಮು ಮಾಡಿಕೊಂಡು ಓಡಾಡುತ್ತಿರಬಹುದು.
 ಒಂದು ಕಾಲದಲ್ಲಿ ಆಕೆಯನ್ನು ನಾನು ಮನಸಿನಲ್ಲಿಯೇ ಪ್ರೀತಿಸಿದ್ದು ಆಕೆಗೆ ಇನ್ನೂ ಗೊತ್ತಿಲ್ಲ. ಇನ್ನು ಗೊತ್ತಾಗಿಯೂ ಏನೂ ನಿರ್ವಾಹವಿಲ್ಲ.ಅವಳ ವಿಷಯ ನಾನು ಕಥೆ ಬರೆದಿರುವುದು ಗೊತ್ತಾದರೆ ಆಕೆ ಕತ್ತಿಹಿಡಿದುಕೊಂಡು ದೊಡ್ಡ ರೌಡಿಯ ತರಹ ನನ್ನ ಅಟ್ಟಾಡಿಸಬಹುದು.ಬಹುಶಃ ಆಕೆಗೆ ಅದೂ ಗೊತ್ತಾಗಲಿಕ್ಕಿಲ್ಲ.
ನನಗಂತೂ ಏನೂ ತೋಚುತ್ತಿಲ್ಲ.

Advertisements