ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ

poetry11.jpg
  ‘ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’

ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ.

ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ.

‘ಅಲ್ಲ  ಸಾರ್ ಸಮಾಜದಲ್ಲಿ ಕವಿಗಳ ಪಾತ್ರ ಏನು ಸಾರ್?’ಆತ ಪುನಃ ಶುರು ಮಾಡಿದ.

  ‘ಅಲ್ಲ ಮಾರಾಯ ಕವಿಗಳಿಗೂ ಸಮಾಜಕ್ಕೂ ಅಂತಹ ಒಳ್ಳೆಯ ಸಂಬಂಧವೇನೂ ಇಲ್ಲ.ಹಾಗೆ ನೋಡಿದರೆ ಕವಿತೆ ಬರೆಯುವುದು ಒಂದು ರೀತಿಯಲ್ಲಿ ಸಮಾಜಬಾಹಿರ ಕೃತ್ಯ.ನಾನು ಮೊದಲ ಕವಿತೆ ಬರೆದದ್ದು ಒಂದು ಸಣ್ಣ ಚೀಟಿಯಲ್ಲಿ.ಆ ಚೀಟಿಯನ್ನು ಆ ಕಡೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಗೆ ದಾಟಿಸಲು ಹೆಣಗಾಡುತ್ತಿದ್ದೆ.ಅದು ನಮ್ಮ ಸಮಾಜ ಶಾಸ್ತ್ರದ ಮೇಷ್ಟರ ಕೈಗೆ ಸಿಕ್ಕಿ ಅವರು ಸಮಾಜ ಪಾಠ ಮಾಡುವುದನ್ನು ನಿಲ್ಲಿಸಿ ನೀತಿ ಪಾಠ ಮಾಡಲು ಶುರುಮಾಡಿದರು.ಅದರಿಂದಾಗಿ ನನ್ನನ್ನು ಆ ವರ್ಷದ ಶಾಲಾ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಲಾಯಿತು.ಇನ್ನೊಂದು ಕವಿತೆ ಆ ಹುಡುಗಿಯ ಅಪ್ಪನ ಕೈಗೆ ಸಿಕ್ಕಿಹಾಕಿಕೊಂಡು ಅವರು ಕೋವಿ ಹಿಡಿದುಕೊಂಡು ಊರೆಲ್ಲಾ ನನಗಾಗಿ ಹುಡುಕಾಡಿದ್ದರು.ನಾನು ನಮ್ಮ ಪ್ರಿನ್ಸಿಪಾಲರಿಗೆ ಕ್ಷಮಾಪಣಾ ಪತ್ರವನ್ನು ಬರೆದು ಕೊಡಬೇಕಾಯಿತು.ಹಾಗಾಗಿ ಸಮಾಜದ ಕುರಿತು ನನಗೆ ಕೊಂಚ ಹೆದರಿಕೆ ಬಿಟ್ಟರೆ ಬೇರೆ ಬದ್ಧತೆಯೇನೂ ಇಲ್ಲ’ಅಂದೆ.

‘ಇಲ್ಲ ನೀವು ಯಾಕೋ ಕೊಂಚ ಗೇಲಿ ಮಾಡಿ ಮಜಾ ತೆಗೆದು ಕೊಳ್ಳುತ್ತಿದ್ದೀರಿ.ನಾನು ನೀವು ಓದಿದ ಕಾಲೇಜಲ್ಲೇ  ಓದುತ್ತಿರುವೆ.ನಿಮ್ಮ ಹಾಗೇ ಬರೆಯುತ್ತಿರುವೆ . ನೀವು ಸೀರಿಯಸ್ಸಾಗಿ ಹೇಳಿ poetryಗೂ society ಗೂ ಏನು ಸಂಬಂಧ ಅಂತ ಹೇಳಿ’

– ಆತ ತಲೆಯೊಳಗೆ ಇಂತಹದೇ ನೂರಾರು ಪ್ರಶ್ನೆಗಳನ್ನು ಇಟ್ಟುಕೊಂಡು ನರಳುತ್ತಿರುವಂತೆ ಕಂಡಿತು.

  ‘ಯಾವ ಸೊಸೈಟಿ ಮಾರಾಯ.ಹಾಲಿನ ಸೊಸೈಟಿ ಗೊತ್ತು.ರಬ್ಬರ್ ಕೃಷಿಕರ ಸೊಸೈಟಿ ಗೊತ್ತು,ಆಮೇಲೆ ಕವಿಗಳದೇ ಒಂದು ಸಮಾಜ ಇದೆ ಸವಿತಾ ಸಮಾಜದ ತರ. ಅದು ಬಿಟ್ಟರೆ ಎಮಿಲಿ ಡಿಕಿನ್ಸನ್ ಅಂತ ಇಂಗ್ಲಿಷ್ ಕವಯಿತ್ರಿ ಹೇಳಿದ್ದಾಳೆ the soul selects her own society and shuts the door ಅಂತ. ಹಾಗಾಗಿ ನಮ್ಮಂತಹವರು ಸುಮ್ಮನೆ ಮುಚ್ಚಿಕೊಂಡು ಬರೆದರೆ ಅದೇ ಮಹಾದೊಡ್ಡ ಉಪಕಾರ.ಸುಮ್ಮನೆ ಬರೆ ಮಾರಾಯ’ ಅಂತ ಎದ್ದು ಹೊರಡಲು ನೋಡಿದೆ.ಆಗಲಿಲ್ಲ .

ಆ ಹುಡುಗ ತುಂಬ ಒಳ್ಳೆಯವನಂತೆ ಕಾಣಿಸುತ್ತಿದ್ದ.ನನ್ನ ಮಾತುಗಳ ಬಿಸಿ ಆತನನ್ನು ಯಾವುದೋ ನರಕಕ್ಕೆ ದೂಡುತ್ತಿರುವಂತೆ ಅನಿಸಿತು.ಹೀಗೆ ಮಾತಾಡಿ ಎದ್ದು ಹೋದರೆ ಆತ ಎರಡು ದಿನ ಊಟ ಬಿಡಬಲ್ಲ ಅನಿಸಿತು. 

 ‘ಬಾ ಮಾರಾಯ ಈ ಬಿಸಿಲಲ್ಲಿ ಏನು ಮಾತು ನೆರಳಲ್ಲಿ ಕೂರೋಣ’ಅಂದೆ.

ಮರದ ನೆರಳಲ್ಲಿ ಹುಲ್ಲಿನ ಮೇಲೆ ಪದ್ಮಾಸನ ಹಾಕಿ ಕುಳಿತಿದ್ದ ಆತನ ನೋಡುತ್ತಿದ್ದಂತೆ ನನ್ನನ್ನೇ ಪುನಃ ನೋಡುತ್ತಿರುವಂತೆ ಅನಿಸುತ್ತಿತ್ತು. ತಲೆ ಕೂದಲು ಕೆದರಿದ್ದರೂ ಶರಟಿನ ಒಳಗೆ ನೀಟಾಗಿ ಒಗೆದು ನೀಲಿ ಹಾಕಿದ್ದ ಬೆಳ್ಳನೆಯ ಬನಿಯನ್ನು,ಅದರೊಳಗಿಂದ ಮುಗ್ಧವಾಗಿ ಇಣುಕಿನೋಡುತ್ತಿದ್ದ  ನೂಲು,ಆತನ ಕಣ್ಣುಗಳಲ್ಲಿದ್ದ ಗೊಂದಲ ತುಂಬಿದ ನಾಚಿಕೆ ಮತ್ತು ಏನನ್ನೋ ಸಾದಿಸಿಯೇ ತೀರುತ್ತೇನೆನ್ನುವ ಒಂದು ರೀತಿಯ ಹಠ.ಎಲ್ಲವೂ ಈ ನಿಮಿಷದಲ್ಲಿ ಚೆನ್ನಾಗಿಯೇ ಇದೆ ಎನಿಸಿದರೂ ಆತ ಕೇಳುತ್ತಿದ್ದ ಪ್ರಶ್ನೆಗಳಿಂದಾಗಿ ಎಲ್ಲವೂ ಸರಿಯಾಗಿಲ್ಲಅನಿಸಿತು.ಮತ್ತು ಈತನಿಗೆ ಕರಾರುವಕ್ಕಾಗಿ ಉತ್ತರ ಹೇಳುವ ಮತ್ತುಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ಪಾಠ ಮಾಡುವ ಮಾರ್ಗದರ್ಶಿಯೊಬ್ಬ ಸಿಕ್ಕಿದರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎನಿಸಿತು.

ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ ಇದೇ ಹುಡುಗನ ಹಾಗೆ ನಾನೂ ಕಾಮ್ರೇಡ್ ಒಬ್ಬರಿಂದ ಸಮಾಜದ ಕುರಿತು ಕಾವ್ಯದ ಕುರಿತು ಪಾಠ ಹೇಳಿಸಿಕೊಂಡಿದ್ದೆ.ನನಗಾದರೋ ಇಂತಹ ಗಹನ ಸಂಶಯಗಳೇನೂ ಇರಲಿಲ್ಲ.ತೀ.ನಂ.ಶ್ರೀ ಯವರ ಭಾರತೀಯ ಕಾವ್ಯ ಮೀಮಾಂಸೆ ಅಲ್ಲಲ್ಲಿ ಅರ್ಥವಾಗುವಷ್ಟು ಓದಿಕೊಂಡು,ಇದರ ತಿಳಿವು ನನಗೆ ಅನಾವಶ್ಯಕ ಎಂದು ಕವಿ ತಿರಸ್ಕರಿಸಬೇಕಾದ ವಿಷಯವೇ ಜಗತ್ತಿನಲ್ಲಿಲ್ಲ ಎಂದು ತಿಳಿದುಕೊಂಡು ಕಂಡಾಪಟ್ಟೆ ತಿರುಗುತ್ತಿದ್ದೆ. ‘ಲೋಕಾಚಾರ ಪರಿಜ್ನಾನಂ,ಇತಿಹಾಸಾನುಸರಣಂ,ಚಾರು ಚಿತ್ರ  ನಿರೀಕ್ಷಣಂ,ಜನಸಂಘಾಭಿಗಮನಂ,ವೀರಯುದ್ಧಾವಲೋಕನಂ’ ಎಂದು ಶಿಷ್ಟಾಚಾರ ಪರಿಜ್ನಾನವಿಲ್ಲದೆ ಪೋಲಿ ಅಲೆಯುತ್ತಿದ್ದೆ.

 ಅಂತಹ ಸಂಕ್ರಮಣ ಕಾಲಘಟ್ಟದಲ್ಲಿ ನನಗೆ ಸಿಕ್ಕಿದ ಕಾಮ್ರೇಡ್ ಒಬ್ಬರು ಯಾವುದೇ ಸಂಶಯಕ್ಕೆ ಎಡೆಯಿಲ್ಲದ ಹಾಗೆ ನನ್ನನ್ನು ನೀಟಾಗಿ ಇಸ್ತ್ರಿ ಮಾಡುವಂತೆ ಸ್ವಚ್ಛಗೊಳಿಸಲು ನೋಡಿದ್ದರು.ನಾನು ಹೀಗೆ ಕೇವಲ ಕವಿಯಾಗಿದ್ದರೆ ಸಾಲದೆಂತಲೂ ಸಮಾಜಕ್ಕೆ ಕವಿ ಇಂಜೆಕ್ಷನ್ ನಂತೆ ಇರಬೇಕೆಂತಲೂ ಮಾವೋತ್ಸೆ ತುಂಗನೂ ಕವಿಯಾಗಿದ್ದನೆಂದೂ ಹೇಳಿ ಮಾವೋ ಕವಿತೆಯಕುರಿತು ಮಾಡಿದ್ದ ಭಾಷಣ ಗಳ ಪುಸ್ತಕವನ್ನೂ ಓದಿಸಿದ್ದರು.

ಈಗ ಈ ಹುಡುಗ ನನ್ನೆದುರು ಕುಳಿತು ಮುಗ್ಧನಾಗಿಯೋ ಜಾಣನಾಗಿಯೋ ಇದೇ ಮಾತುಗಳನ್ನ ಪುನಃ ನನ್ನ ಬಾಯಿಯಿಂದ ಹೇಳಿಸಿಕೊಳ್ಳಲು ಹೆಣಗುತ್ತಿರುವುದನ್ನು ನೋಡಿ ರೇಜಿಗೆಯೂ ಬೇಸರವೂ ಆಗುತ್ತಿದೆ.ನನಗೆ ಕ್ರಾಂತಿಯ ಪಾಠ ಹೇಳಲು ಹೋಗಿ,ಹಾಳಾಗಿದ್ದ ನನ್ನನ್ನು ಒಳ್ಳೆಯವನನ್ನಾಗಿ ಮಾಡಲು ಹೋಗಿ ಎರಡೂ ಆಗದೆ ನನ್ನನ್ನು ನನ್ನ ಪಾಡಿಗೆ ಬಿಟ್ಟು ಹೋಗಿದ್ದ ಕಾಮ್ರೇಡ್ ಗೆಳೆಯನ ತಲೆ ಮಿದುಳಿನ ಚಿತ್ರ ಪತ್ರಿಕೆಗಳಲ್ಲಿ ಟಿವಿ ಪರದೆ ಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ.ಎಲ್ಲರೂ ಕ್ರೈಂ ಸೀರಿಯಲ್‌ನ ಒಂದು ಕಂತು ಇಷ್ಟು ರೋಚಕವಾಗಿದ್ದಕ್ಕೆ ರೋಮಾಂಚಿತರಾಗಿದ್ದಾರೆ.

‘ಕವಿತೆ ಮತ್ತು ಬಡವರು ಈ ಎರಡರ ಕುರಿತು ಸಾಧಾರಣವಾಗಿ ಶ್ರೀಮಂತರಿಗೂ ಕ್ರಾಂತಿಕಾರಿಗಳಿಗೂ ಒಂದೇ ನಿಲುವಿದೆ.ಅವರಿಬ್ಬರೂ ಈ ಎರಡೂ ವಿಷಯಗಳು ತಮ್ಮ ಕೈ ಕೆಳಗೇ ಇರಬೇಕೆಂದು ಬಯಸುತ್ತಾರೆ.ತಮ್ಮ ಸುಖೀ ರಾಜ್ಯಕ್ಕಾಗಿ ಬಡವರೂ ಕವಿಗಳೂ ಶ್ರಮಿಸಬೇಕೆಂದು ಆಸೆ ಪಡುತ್ತಾರೆ… ನಿನ್ನ ನೋಡಿದರೆ ನೀನು ಏಕ ಕಾಲಕ್ಕೆ ಬಡವನೂ ಕವಿಯೂ ಆಗಿರುವಂತೆ ಕಾಣಿಸುತ್ತಿರುವೆ.ಹಾಗಾಗಿ ಸಿರಿವಂತರಿಂದಲೂ ಕ್ರಾಂತಿಕಾರಿಗಳಿಂದಲೂ ತುಂಬಿರುವ ಈ ಸಮಾಜ ನಮ್ಮಂತವರಿಂದ ಓವರ್ ಟೈಂ ದುಡಿಸಿಕೊಳ್ಳುವ ಸಾಧ್ಯತೆ ಇದೆ.ಹಾಗಾಗಿ ನಾವು ಬೇಗ ಇಲ್ಲಿಂದ ಪಾರಾಗಿ ಯಾವುದಾದರೂ ಡಬ್ಬಿ ಅಂಗಡಿಯಲ್ಲಿ ಬೈಟು ಟೀ ಕುಡಿದು ಚದುರಿ ಬಿಡೋಣ’

ಹುಚ್ಚನಂತೆ ಗೊಣಗುತ್ತಿದ್ದೆ.

ಆತ ಪ್ಯಾಂಟಿಗೆ ಅಂಟಿಕೊ೦ಡಿದ್ದ ಹುಲ್ಲು ಕಡ್ಡಿಕೊಡವಿಕೊಳ್ಳುತ್ತ ಸಾರ್ ನಾನು ಟೀ ಕಾಫಿ ಕುಡಿಯೋದಿಲ್ಲ,ಯಾವುದಾದರೂ ಪುಸ್ತಕ ಇದ್ರೆ ಕೊಡಿಸಾರ್ ಅಂತ ಕೇಳುತ್ತಿದ್ದ.ಅಲ್ಲ ಮಾರಾಯ ಇತ್ತೀಚೆಗೆ ಯಾವ ಪುಸ್ತಕ ಓದಿದೆ ಅಂತ ಕೇಳಿದೆ

ಯಂಡಮೂರಿ ಅವರ ದುಡ್ಡು ದುಡ್ಡು ಮತ್ತೆ ಹಿಮಾಲಯದ ಸನ್ನಿಧಿಯಲ್ಲಿ ಮತ್ತೆ ಸ್ನೇಹಿತರನ್ನು
ಸಂಪಾದಿಸುವುದು ಹೇಗೆ..ಹೀಗೆ ಪುಸ್ತಕಗಳ ಹೆಸರು ಹೇಳುತ್ತಾ ನಡೆಯ ತೊಡಗಿದ.
 

Advertisements