ಆಕೆಯ ಬಟ್ಟೆಯ ಅದೇ ಬಣ್ಣ.. ಆಕೆಯ ಅದೇ ಪರಿಮಳ

 

ಆಗಲೇ ಆರೇಳು ಮಕ್ಕಳಿದ್ದ ನಮ್ಮ ಮನೆಗೆ ಅದು ಯಾವುದೋ ಹೊತ್ತಲ್ಲಿ ನಮ್ಮ ಹಾಗೇ ಇದ್ದ ಇನ್ನೊಬ್ಬಳು ಹುಡುಗಿ ಬಂದು ಸೇರಿಕೊಂಡಿದ್ದಳು.dsc04470.jpgಕೇ ಳಿದರೆ ಅದು ಯಾರೋ ಒಬ್ಬ ಒಂದು ಚೀಲ ಗಂಧಶಾಲೆ ಅಕ್ಕಿ ಗೆ ಅವಳನ್ನು ಕೊಟ್ಟು ಹೋದರು ಎಂದು ಕಣ್ಣು ಕಾಣಿಸದ, ಕಿವಿಕೇಳಿಸದ, ತಲೆಸರಿಯಿಲ್ಲದ ನನ್ನ ಅಜ್ಜಿ ಸುಳ್ಳು ಹೇಳಿದ್ದಳು.ಈ ಅಜ್ಜಿಗೆ ಎಷ್ಟು ತಲೆ ಸರಿಯಿರಲಿಲ್ಲ ಅಂದರೆ ನಾನು ಸಣ್ಣ ಮಗುವಾಗಿದ್ದಾಗ ಇಲಿಮರಿಯ ಹಾಗೆ ಇದ್ದೆ ಎಂಬ ಒಂದೇ ಕಾರಣಕ್ಕೆ ಈ ಅಜ್ಜಿ ತಾನು ನಮಾಜ್ ಮಾಡುವಾಗ ಹಾಕುವ ಬೆಳ್ಳನೆಯ ಉಡುಪಿನ ಜೊತೆಯಲ್ಲೇ ನನ್ನನ್ನೂ ಚಾಪೆಯೊಳಗೆ ಸುರುಟಿ  ಒಂದು ಮೂಲೆಯಲ್ಲಿ ಮಡಚಿಟ್ಟಿದ್ದಳು.  ಆಮೇಲೆ ಎಲ್ಲರ ಜೊತೆ ತಾನೂ ಸೇರಿಕೊಂಡು ಕಾಣದ ಮಗುವಿಗಾಗಿ ಮನೆಯಲ್ಲೆಲ್ಲ ಹುಡುಕಾಡಿದ್ದಳು.ನಾನೇ ಹಸಿವಾಗಿ ಮಡಚಿದ ಚಾಪೆಯೊಳಗಿಂದ ಅಳಲು ತೊಡಗಿದ ಮೇಲೆ ಎಲ್ಲರಿಗೂ ಗೊತ್ತಾಗಿ ಅವರು ನನ್ನನ್ನು ಕಂಡು ಹಿಡಿದಿದ್ದರು. ಅಜ್ಜಿ ನನ್ನನ್ನು ಚಾಪೆಯೊಳಗೆ ಮುಚಿದ್ದು ದೊಡ್ಡ ಸಂಗತಿಯೇ ಅಲ್ಲವೆಂಬಂತೆ ಮೂಗು ಮುರಿದಿದ್ದಳಂತೆ.ಇಲಿಯ ಹಾಗಿದ್ದ ನಾನು ಟಗರಿನ ಹಾಗೆ ಬೆಳೆದು ಸಿಕ್ಕ ಸಿಕ್ಕಲ್ಲಿ ಪೋಲಿ ಸುತ್ತಲು ತೊಡಗಿದಾಗ ಇದೇ ಅಜ್ಜಿ ‘ಇವನ ಬಾಯಿಗೆ ಸುಣ್ಣದ ನೀರು ಸುರಿದು ಆಗಲೇ ಸಾಯಿಸಬೇಕಿತ್ತು’ಅಂತ ನನಗೇ ಕೇಳಿಸುವ ಹಾಗೆ ಶಾಪ ಹಾಕುತ್ತಿದ್ದಳು.ಆದರೆ ಆಗ ಅವಳಿಗೆ ಇನ್ನೂ ತಲೆ ಕೆಟ್ಟು ಹೋಗಿತ್ತು.ಜೊತೆಗೆ ಹಲ್ಲೆಲ್ಲಾ ಉದುರಿ ತುಂಬಾ ಕಾಲದ ನಂತರ ಒಂದು ವಕ್ರ ಬೆಕ್ಕಿನ ಹಲ್ಲೂ ಬಂದಿತ್ತು.ಜೊತೆಗೆ ಆಕೆಗೆ ಕಂಡ ಕಂಡ ಮಕ್ಕಳಿಗೆ ಕಥೆ ಹೇಳುವ ಬುದ್ಧಿಯೂ ಶುರುವಾಗಿತ್ತು.
 ಅಂತಹ ಹೊತ್ತಲ್ಲೇ ಒಂದು ಸಂಜೆ ನಮ್ಮ ಹಾಗೆಯೇಇದ್ದ ಈ ಹುಡುಗಿ ಕತ್ತಲಲ್ಲಿ  ಕಾಫಿಕಾಡಿನೊಳಗಿನ ನಮ್ಮ ಬಿಡಾರದೊಳಗೆ ಬಂದು ಸೇರಿಕೊಂಡದ್ದು.ನನಗೆ ಇನ್ನೂ ನೆನಪಿದೆ.ಕಾಫಿ ತೋಟದೊಳಗೆ ಕತ್ತಲು ತುಂಬತೊಡಗಿ, ಬಿಡಾರದ ಎದುರಿನ ಜೋಡಿ ಸೀಬೆ ಮರಗಳು ನಿಟ್ಟುಸಿರು ಬಿಡುವಂತೆ ಅಲ್ಲಾಡಲು ತೊಡಗಿ, ನೀರು ಕಾಯಿಸಲೆಂದು ನಾವು ಕಾಫಿ ಕಾಡಿನಿಂದ ಹೊತ್ತು ತಂದಿದ್ದ ಸಿಲ್ವರ್ ಮರದ ಪುರಳೆಗಳನ್ನು ಒಲೆಗೆ ತುರುಕಿ ಬೆಂಕಿ ಹಚ್ಚಿ,  ಅದರ ಹೊಗೆ ವಿಶ್ವವನ್ನೇ ವ್ಯಾಪಿಸಿದಂತೆ ಆಕಾಶಕ್ಕೆಲ್ಲ ಹಬ್ಬಿ, ಅಡಿಗೆ ಕೋಣೆಯಲ್ಲಿ ಕುದಿಯುತ್ತಿದ್ದ ಬೆಲ್ಲದ ಕಾಫಿಯ ಪರಿಮಳ ನಮ್ಮೆಲ್ಲರ ಜಿಹ್ವೆಯನ್ನು ತುಂಬಿಕೊಂಡು ಇನ್ನು ಇರುವುದು ನಮ್ಮದೆಂಬುದು ಈ ಧಟ್ಟ ಕತ್ತಲಲ್ಲಿ ನಮ್ಮ ಬಿಡಾರ ಮಾತ್ರ ಎಂಬ ಅರಿವಾಗಿ ಅಸಹಾಯಕರಾಗಿ ಒಳಗೆ ತಡವರಿಸಿ ಬಂದಾಗ ಅವಳು ಎಷ್ಟೋ ವರ್ಷಗಳಿಂದ ಅಲ್ಲೇ ಇದ್ದವಳಂತೆ ಅಡಿಗೆ ಕೋಣೆಯ ಮಣೆಯಲ್ಲಿ ಕುಕ್ಕುರು ಕಾಲಲ್ಲಿ ಕೂತು ಬೆಲ್ಲದ ಕಾಫಿ ಕುಡಿಯುತ್ತಿದ್ದಳುhoovinakolli-084.jpg.ತಲೆ ಸರಿಯಿಲ್ಲದ ಅಜ್ಜಿ ಆಕೆಯ ಮುಂದೆ ಅವಲಕ್ಕಿ ಬೆಲ್ಲ ಇಟ್ಟು ಉಪಚರಿಸುತ್ತಿದ್ದಳು.

 ನನಗೆ ಇನ್ನೂ ನೆನಪಿರುವುದು ಎರಡು ಸಂಗತಿಗಳು.ಆಕೆ ತುಂಬಾ ಸುಂದರಿಯಾಗಿದ್ದಳು ಮತ್ತು ಆಕೆ ನಮ್ಮ ಹಾಗೆಯೇ ಇದ್ದಳು. ಅದಾಗಲೇ ಆಕೆಗೆ ಸ್ನಾನ ಮಾಡಿಸಿ ತಲೆ ಬಾಚಿ ಚೆನ್ನಾಗಿದ ಹಳೆಯ ಉಡುಪೊಂದನ್ನು ತೊಡಿಸಿದ್ದರು.
ಅಜ್ಜಿ ಮಡಿಕೆಯ ಅಡಿಯಿಂದ ಕೆರೆದು ತೆಗೆದ ಮಸಿಯನ್ನು ತೆಂಗಿನ ಎಣ್ಣೆಗೆ ಬೆರೆಸಿ ಕಾಡಿಗೆ ಮಾಡಿ ಆ ಹುಡುಗಿಯ ಹುಬ್ಬುಗಳಿಗೆ ಹಚ್ಚಿ ಕೊಂಚ ವಿಚಿತ್ರವಾಗಿ ಕಾಣುವಂತೆ ಮಾಡಿದ್ದರೂ ಆಕೆ ತಾನು ತನ್ನೊಡನೆ ತಂದಿದ್ದ ತಲೆಯ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಂಡು ಸಹಜವಾಗಿರಲು ನೋಡಿದ್ದಳು.ಆಕೆ ನಮಗೆಲ್ಲರಿಗಿಂತಲು ಕೊಂಚ ದೊಡ್ಡವಳಾಗಿದ್ದಳು.

 ಅವಳಿಗೆ ಆಗ ಹತ್ತು ವರ್ಷಗಳಿರಬಹುದು.ಅವಳು ನಮ್ಮನ್ನೆಲ್ಲ ಸಣ್ಣವರಂತೆ ಕಂಡು ಕಾಪಾಡುತ್ತಿದ್ದಳು.ಅವಳು ಶಾಲೆಗೆ ಬರಲಿಲ್ಲ.ಕುರಾನು ಕಲಿಯಲು ಮದರಸಕ್ಕೂ ಬರಲಿಲ್ಲ.ಆದರೆ ನಮ್ಮನ್ನೆಲ್ಲ ಶಾಲೆಗೆ ಹೋಗಲು ಸಂಜೆ ಮದರಸಕ್ಕೆ  ಹೋಗಲು ತಯಾರು ಮಾಡುತ್ತಿದ್ದಳು.ಅವಳಿಗೆ ತುಂಬಾ ಚೆನ್ನಾಗಿ ಬೆಲ್ಲದ ಕಾಫಿ ಮಾಡಲು ಬರುತ್ತಿತ್ತು ಮತ್ತು ಅವಳು ನಮ್ಮೊಡನೆ ಕಾಫಿ ಕಾಡಿನೊಳಗೆ ಅಣಬೆ ಹೆಕ್ಕಲು ಬರುತ್ತಿದ್ದಳು.ಮೊದಲ ಮಳೆಗಿಂತ ಮೊದಲು ಬಡಿಯುವ ಸಿಡಿಲಿಗೆ ಕಾಡಲ್ಲಿ ಕುಂಬಾಗಿ ಸತ್ತು ಬಿದ್ದು ಕೊಂಡಿರುವ ಮರದಲ್ಲಿ ಅಣಬೆಗಳು ಬೆಳೆಯುತ್ತಿದ್ದವು. ಅವುಗಳಲ್ಲಿ ಯಾವುದು ವಿಷವಲ್ಲ ಯಾವುದು ವಿಷ ಎಂಬುದು ಆಕೆಗೆ ಗೊತ್ತಾಗುತ್ತಿತ್ತು.ಮಳೆಗಾಲ ಮುಗಿದು ಆಕೆ ನಮ್ಮನ್ನು ಕಾಡಿನೊಳಗಡೆ ಕಾಗೆ ಸೊಪ್ಪನ್ನು ಹೆಕ್ಕಲು ಕರೆದೊಯ್ಯುತ್ತಿದ್ದಳು.ಕಾಗೆ ಸೊಪ್ಪನ್ನು ಕೊಯ್ಯುತ್ತಾ ಅದರ ಹಣ್ಣನ್ನು ತಿನ್ನುತ್ತಾ ನಾವು ಕಾಲಕಳೆದು ಕತ್ತಲಾಗುವಾಗ ಬಿಡಾರ ತಲುಪುತ್ತಿದ್ದೆವು.

 ತಲೆ ಸರಿಯಿಲ್ಲದ ಅಜ್ಜಿ ಆಕೆಗೆ ನಮಗಿಂತ ಹೆಚ್ಚಾಗಿ ಬಯ್ಯುತಿತ್ತು.ನೀನು ಬಂದಿರುವ ಉದ್ಧೇಶ ಅರಿತುಕೋ ಎಂದು ತಿವಿಯುತ್ತಿತ್ತು.ಮತ್ತು ಅವಳಿಗಾಗಿಯೇ ಎನ್ನುವಂತೆ ರಾತ್ರಿಯಿಡೀ ಕಥೆಗಳನ್ನು ಹೇಳುತ್ತಿತ್ತು.ಅವಳು ಆ ಕಥೆಗಳನ್ನೆಲ್ಲ ಮನನ ಮಾಡಿಕೊಂಡವಳಂತೆ ನಗುತ್ತ ಕೇಳುತ್ತಿದ್ದಳು. ನನಗೆ ಆಗ ಏನೂ ಗೊತ್ತಿರಲಿಲ್ಲ.ಆದರೆ ಇವಳು ಮಾತ್ರ ಸದಾ ನಮ್ಮ ಜೊತೆಗಿರಬೇಕು ಅನ್ನಿಸುತ್ತಿತ್ತು.ಅವಳಿಗಿಂತ ಒಂದೆರಡು ವರ್ಷ ಸಣ್ಣವನಾಗಿದ್ದರೂ ಆಕೆಗಾಗಿ ಮಗುವಿನಂತೆ ರಚ್ಛೆ ಹಿಡಿಯುತ್ತಿದ್ದೆ.ಅವಳು ದೂರಾದರೆ ಸಾಯಬೇಕು ಅನ್ನಿಸುತ್ತಿತ್ತು.ಅವಳು ನಕ್ಕರೆ ಎಂತಹ ಮರವನ್ನಾದರೂ ಹತ್ತುತ್ತಿದ್ದೆ..

 ನನಗೆ ಈಗಲೂ ಆಕೆಯ ಬಟ್ಟೆಯ ಬಣ್ಣ, ಆಕೆಯ ಪರಿಮಳ,ಅವಳು ತಟ್ಟನೆ ತಿರುಗಿದಾಗ ಆಗುತ್ತಿದ್ದ ಸದ್ದು ಮತ್ತು ಆಕೆ ಅಣಬೆ ಹೆಕ್ಕಲು ಬಗ್ಗುತ್ತಿದ್ದಾಗ ಆಕೆಯ ತಲೆಯ ಬಟ್ಟೆಯ ಸಂದಿನಿಂದ ಇಣುಕುತ್ತಿದ್ದ ಆಕೆಯ ಕಿವಿಯ ಮಿಂಚು ಇವೆಲ್ಲ ನೆನಪಿದೆ.

ಮತ್ತು ಒಂದು ಬೆಳಗ್ಗೆ ನಾವೆಲ್ಲ ಎದ್ದಾಗ ಆಕೆ ಹೋಗಿಬಿಟ್ಟಳು ಎಂದು ಅಜ್ಜಿ ಹೇಳಿದ್ದು.ನಾವೆಲ್ಲ ಎದ್ದ ಕಣ್ಣಲ್ಲೇ ಓಡಿ ತೋಟ ದಾಟಿ ಬಸ್ಸು ನಿಲ್ಲುವ ಜಾಗಕ್ಕೆ ಹೋಗಿ ನೋಡಿದರೆ ಆಕೆ ಅದಾಗಲೇ ಹೋಗಿದ್ದಳು ಅನ್ನುವ ಕುರುಹಿಗೆ ಆಕೆಯ ಆ ಪರಿಮಳ ಅಲ್ಲೇ ಸುತ್ತಾಡುತ್ತಿದ್ದುದು ನೆನಪಾಗುತ್ತಿದೆ.ಮತ್ತೆ ಆಕೆ ಮರಳಿ ಬರಲಿ ಎಂದು ನೂರಾರು ಸಂಜೆಗಳ ಕಾಲ  ಬಸ್ಸು ಬಂದು ನಿಲ್ಲುವ  ಜಾಗದಲ್ಲಿ ಕಾಯುತ್ತಿದ್ದುದೂ ನೆನಪಾಗುತ್ತಿದೆ.

 ಈಗ ತಲೆಗೆ ಪೆಟ್ಟುಬಿದ್ದ ಬೆಕ್ಕಿನಂತೆ ಆದ ಗಾಯಗಳನ್ನೆಲ್ಲ ನೆಕ್ಕುತ್ತ ಇನ್ನು ಆಗಲಿರುವುದಕ್ಕೆಲ್ಲ ಸಿದ್ಧನಾಗುತ್ತ ಗಹಗಹಿಸುತ್ತಿರುವಾಗ ಆಕೆಯ ನೆನಪಾಗುತ್ತಿದೆ.ಜೊತೆಗೆ ತಲೆ ಕೆಟ್ಟ ಅಜ್ಜಿ ಸದಾ ಹೇಳುತ್ತಿದ್ದ ಒಂದು ಕಥೆ ಕೂಡಾ.

 ಆ ಅಜ್ಜಿಯ ಕಥೆಯ ಪ್ರಕಾರ ಒಂದು ತಂದೆ ತಾಯಿಗೆ ಇಬ್ಬರು ಮಕ್ಕಳಂತೆ.ಅಣ್ಣ ಮತ್ತು ತಂಗಿ.ಅಣ್ಣನಿಗೆ ತಂಗಿಯ ಕಂಡರೆ ಅಷ್ಟು ಪ್ರೀತಿಯಂತೆ.ಅಣ್ಣ ಕಾಡು ಕಳೆದ ಮೇಲೆ ಸಿಗುವ ಬತ್ತದ ಗದ್ದೆಯಲ್ಲಿ ಉಳಲು ಹೋಗುತ್ತಿದ್ದನಂತೆ.ತಂಗಿ ಆತನಿಗೆ ಮನೆಯಿಂದ ರೊಟ್ಟಿ ಕಟ್ಟಿಕೊಂಡು ಹೋಗುತ್ತಿದ್ದಳಂತೆ.ಹೋಗುವಾಗ ನಡುವಲ್ಲಿ ಸಿಗುವ ಕಾಡಿನಲ್ಲಿ ಒಂದು ಕಪಿ ತಂಗಿಯ ಬಟ್ಟೆ ಹರಿದು ಹಾಳುಮಾಡಿ ರೊಟ್ಟಿ ತಿಂದು ಮುಗಿಸಿತಂತೆ. ಆಕೆ ಅಳುತ್ತಾ ಮನೆಗೆ ಓಡಿ ಬಂದು ಅಣ್ಣನೇ ಬಟ್ಟೆ ಹರಿದು ಹಾಕಿದ ಅಂತ ಸುಳ್ಳು ಹೇಳಿದಳಂತೆ.ಅಪ್ಪ ಸಿಟ್ಟಲ್ಲಿ ಮಗನನ್ನು ಸಿಗಿದು ಹಾಕಿ ಬತ್ತದ ಗದ್ದೆಯ ಬದುವಿನ ಪಕ್ಕದಲ್ಲಿ ಅವನ ಹೆಣವನ್ನು ಹೂತು ಹಾಕಿ ಅದರ ಮೇಲೊಂದು ದಾಸವಾಳದ ಹೂವನ್ನು ನೆಟ್ಟರಂತೆ.

 ಆ ದಾಸವಾಳದ ಗಿಡ ಹೂ ಬಿಟ್ಟು ಯಾರು ಕೊಯ್ಯಲು ಹೋದರೂ ಎಟುಕುತ್ತಿರಲಿಲ್ಲವಂತೆ.ತಂಗಿ ಹೋದಾಗ ದಾಸವಾಳದ ಗಿಡವೇ ಬಾಗಿ ಆಕೆಯ ಕೈಗೆ ಹೂ ಇತ್ತಿತಂತೆ.

 ತಲೆ ಕೆಟ್ಟ ಅಜ್ಜಿ ನಮಗೆ ಅಳುಬರುವಂತೆ ಹೇಳುತ್ತಿದ್ದ ಕಥೆಯನ್ನು ನಿರ್ವಿಕಾರವಾಗಿ ಒಪ್ಪಿಸುತ್ತಿರುವೆ.ಈ ತಲೆ ಕೆಟ್ಟ ಅಜ್ಜಿ ಈಗ ಇಲ್ಲ.ಆ ಅಜ್ಜಿ ಒಲೆ ಊದಲು ಬಳಸುತ್ತಿದ್ದ ಕಬ್ಬಿಣದ ಕೊಳವೆ ಎಷ್ಟೋ ವರ್ಷ ಇತ್ತು. ಈಗ ಅದೂ ಇಲ್ಲ.

 ಇತ್ತೀಚೆಗೆ ಹತ್ತಾರು ವರ್ಷಗಳ ಹಿಂದೆ ಒಂದು ಮದುವೆ ಮನೆಯಲ್ಲಿ ಆಕೆಯನ್ನ ಪರಿಚಯ ಮಾಡಿಕೊಟ್ಟು ಈಕೆ ಯಾರು ಗೊತ್ತಾ ಎಂದು ಕೇಳಿದರು.ಅದೇ ಬಣ್ಣದ ಬಟ್ಟೆ.ಅದೇ ಪರಿಮಳ. ಅವಳು ತುಂಟತನದಲ್ಲಿ ನಗುತ್ತಿದ್ದಳು.ಅದೇ ನಗು.

  ‘ದೊಡ್ಡ ಮಗನಿಗೆ ನಿನ್ನ ಹೆಸರನ್ನೇ ಇಟ್ಟಿದ್ದೇನೆ’ಅಂದಳು. ಮಗಳಿಗೆ ನಿನ್ನ ತಂಗಿಯ ಹೆಸರು ಎಂದು ಹೇಳಿದಳು.ಕೊನೆಯವನಿಗೆ ನಿನ್ನ ತಮ್ಮನ ಹೆಸರು ಅಂದಳು.

ನನಗೆ ಏನೂ ಕೇಳಿಸಿಕೊಳ್ಳಲು ಆಗದ ಹಾಗೆ ಸಿಕ್ಕಾಬಟ್ಟೆ ಸಿಟ್ಟು ಸಂಕಟವಾಗುತ್ತಿತ್ತು.

Advertisements