ಒಂದನೆಯ ತರಗತಿಯಿಂದ ಇಂಗ್ಲಿಷ್: ಒಂದು ಗಂಭೀರ ಚಿಂತನೆ!

     
 
 ‘ನೀನು ಬರೆಯುವುದರಲ್ಲಿ ನನಗೆ ಯಾವ ಪ್ರಯೋಜನವೂ ಕಾಣಿಸುವುದಿಲ್ಲ.ನೀನು ಬರೆಯುವುದು,ಅಲೆಯುವುದು,ಅದರಿಂದ ಸಿಗುವ ಸುಳ್ಳು ಖ್ಯಾತಿ,ಅದರಿಂದ ಉಂಟಾಗುವ ಕಳ್ಳ ಪ್ರಣಯ, ನಿನ್ನ ಈ ಹುಚ್ಚಿನಿಂದಾಗಿ ಆರ್ಥಿಕವಾಗಿಯಾಗಲೀ ಸಾಮಾಜಿಕವಾಗಿಯಾಗಲೀ ನಯಾಪೈಸೆ ಲಾಭವಿಲ್ಲ.bahumed.gifನೀನು ಮುಚ್ಚಿಕೊಂಡು ಸುಮ್ಮನೆ ಕೂತುಕೋ. ಬೀಡಿಸಿಗರೇಟಿಗೆ ಟೀಗೆ ನಾನು ಕೊಡುತ್ತೇನೆ. ಮನೆಗೂ ಸಮಾಜಕ್ಕೂ ಎಲ್ಲರಿಗೂ ಒಳಿತಾಗುತ್ತದೆ’ಎಂದೆಲ್ಲ ಅವಳು ಸಂಕಟದಲ್ಲಿ  ಉಲಿಯುತ್ತಿದ್ದಳು. 

 ನನಗೂ ಅವಳು ಅನ್ನುತ್ತಿರುವುದು ನೂರಕ್ಕೆ ನೂರರಷ್ಟು ಸರಿ ಅನ್ನಿಸುತ್ತಿತ್ತು.

 ಅವಳು ಕೊಟ್ಟ ದುಡ್ಡಲ್ಲಿ ಒಂದು ಗಾಳ ಮತ್ತು ಒಂದು ಕಟ್ಟು ಬೀಡಿ ಕೊಂಡುಕೊಂಡು ಒಂದು ಎರೆಹುಳ ಹಿಡಿದು ಗಾಳಕ್ಕೆ ಸಿಕ್ಕಿಸಿ ಉಟ್ಟ ಪಂಚೆಯನ್ನ ಒದ್ದೆಯಾಗದ ಹಾಗೆ ಪೇಟದಂತೆ ತಲೆಗೆ ಸುತ್ತಿಕೊಂಡು ಕೊಡಗಿನ ನನ್ನ ಬಾಲ್ಯದ ನದೀ ತೀರದಲ್ಲಿ ಮೀನು ಹಿಡಿಯಲು ಕೂತುಬಿಡಬೇಕೆಂದು ಅನ್ನಿಸುತ್ತಿತ್ತು.ಜೊತೆಗೆ ಇವಳೂ ಮೀನು ಹಿಡಿಯಲು ಕೂತು ಬಿಟ್ಟರೆ ನಾನು ಮೀನು ಹಿಡಿಯುವುದನ್ನು ಬಿಟ್ಟು ಇವಳನ್ನೇ ನೋಡುತ್ತಾ ಕೂತು ಬಿಡಬಹುದು ಅಂತಲೂ ಎನ್ನಿಸುತ್ತಿತ್ತು. ಆದರೆ ಇದನ್ನು ಹೇಳುವುದು ಈ ಸಂಕಟದ ಸಮಯದಲ್ಲಿ ಸಮಂಜಸವಲ್ಲ ಎಂದು ಕೊಂಡು ಸುಮ್ಮನೆ ಉಗಿಸಿಕೊಂಡು ಕೂತಿದ್ದೆ.
 ಅವಳು ಸಂಕಟವನ್ನು ಪ್ರೀತಿಯನ್ನಾಗಿ ಪರಿವರ್ತಿಸಲು ಹೆಣಗುತ್ತಿದ್ದಳು. 

 `ಹಾಗೆ ನೋಡಿದರೆ ನೀನು ಬರೆಯುವುದನ್ನು ಏನೋ ಮಹಾ ನನ್ನ ವಿರುದ್ಧ ಮಾಡಬಹುದಾದ conspiracy ಎಂಬಂತೆ ಮಾಡುತ್ತಿರುತ್ತೀಯಾ.ಹಾಗೆ ನೋಡಿದರೆ ನೀನು ಯಾವ ಹೊತ್ತಲ್ಲದ ಹೊತ್ತಲ್ಲಿ ಬರೆಯುತ್ತೀಯಾ ಎಂಬುವುದೂ ನನಗೆ ಗೊತ್ತಿಲ್ಲ.ಇದನ್ನೆಲ್ಲ ಬರೆಯುತ್ತಿರುವುದು ನೀನೇಯೋ ಅಲ್ಲ ಯಾರೋ ಬರೆದು ದುಡ್ಡಿಗಾಗಿ ನಿನ್ನ ಬಳಿ ಅಡವಿಟ್ಟದ್ದನ್ನ ನೀನು ಕಂತು ಕಂತಾಗಿ ಪ್ರಕಟಿಸುತ್ತಿರುವಿಯೋ ಎಂಬುದೂ ಗೊತ್ತಿಲ್ಲ.ಹಾಗೆ ನೋಡಿದರೆ ನೀನು ಬರೆಯುವುದನ್ನ ನಾನು ಒಂದು ಬಾರಿಯೂ ನೋಡಿಲ್ಲ.ಒಟ್ಟಲ್ಲಿ ನಿನ್ನಿಂದ ನನ್ನ ಜೀವಕ್ಕೆ ನೆಮ್ಮದಿಯಿಲ್ಲ’

 ಅವಳು ಮೂಗು ಚೂಪು ಮಾಡಿಕೊಂಡು ಸಿಟ್ಟಲ್ಲಿ ಸಖತ್ ಸುಂದರಿಯಂತೆ ಕಾಣಿಸುತ್ತಿದ್ದಳು.

 `ಬರೆಯುವುದು ಅಂದರೆ ಬೆಕ್ಕುಗಳು ಪ್ರೇಮಿಸಿದಂತೆ. ಯಾವತ್ತಾದರೂ ನೀನು ಬೆಕ್ಕುಗಳು ಪ್ರೇಮಿಸುವುದನ್ನ ನೋಡಿದ್ದೀಯಾ.ಇಲ್ಲ. ಆದರೆ ಅವುಗಳು ಪ್ರೇಮಿಸುತ್ತದೆ.ಆದರೆ ಅದು ನಮಗೆ ನಡುರಾತ್ರಿಯ ಬೀದಿ ಕಾಳಗದಂತೆ ಕಾಣಿಸುತ್ತದೆ.ಬರೆಯುವುದೂ ಹಾಗೆಯೇ.ನೀನು ಎಲ್ಲಾದರೂ ಅತ್ತಿ ಹಣ್ಣಿನ ಹೂ ನೋಡಿದ್ದೀಯಾ.ಇಲ್ಲ.ಬರೆಯುವುದೂ ಹಾಗೆಯೇ. ನೋಡುತ್ತೀಯಾ ಆದರೆ ಕಾಣಿಸುವುದಿಲ್ಲ. ಬರೆಯುವುದು ನನಗೇನೂ ಜೀವನ ಮರಣದ ಪ್ರಶ್ನೆ ಅಲ್ಲ.
ಬರೆಯದಿರುವುದರಿಂದಲೋ ಬರೆಯದಿರುವುದರಿಂದಲೋ ಯಾರದೇನೂ ಮುರಿಯುವುದೂ ಇಲ್ಲ ಹರಿಯುವುದೂ ಇಲ್ಲ ಎಂದಾದರೆ ಇದಾ ಈಗಲೇ ಬರೆಯುವುದನ್ನ ನಿಲ್ಲಿಸಿದೆ. ನನಗೆ ಬೀಡಿ ಸಿಗರೇಟಿಗೆ ಕಾಸು ಕೊಡು .ನಿನ್ನ ಕಾಲಡಿಯಲ್ಲಿ ಬಿದ್ದಿರುತ್ತೇನೆ’

 ಅವಳು ನನ್ನ ನಾಟಕ ನೋಡುತ್ತಾ ಇನ್ನಷ್ಟು ಸಂಕಟ ನಟಿಸುತ್ತಿದ್ದಳು.

ಅಷ್ಟು  ಹೊತ್ತಿಗೆ ಯಾರೋ ಗೆಳೆಯರು ಫೋನ್ ಮಾಡಿ ‘ಗುರುವೇ,ಮಕ್ಕಳಿಗೆ ಎಷ್ಟನೇ ತರಗತಿಯಿಂದ ಇಂಗ್ಲಿಷ್ ಕಲಿಸಬೇಕು?ಈ ಕುರಿತು ನಿನ್ನ ಅಭಿಪ್ರಾಯವೇನು.ನೀನು  ಕನ್ನಡದ ಪರವೋ ಬೂಸಾ ಚಳವಳಿಯ ಪರವೋ.ಹತ್ತು ನಿಮಿಷದಲ್ಲಿ ಉತ್ತರಿಸಬೇಕು’ ಎಂದು ಕೋರಿಬಿಟ್ಟರು.

`ಹತ್ತು ನಿಮಿಷವೇಕೆ ಈಗಲೇ ಉತ್ತರಿಸುವೆ’ ಎಂದು ಗಹಗಹಿಸಿದೆ.

 `ಹಿಂದೆ ಪುರಾಣಗಳ ಕಾಲದಲ್ಲಿ ಸತ್ಪುತ್ರರನ್ನು ಪಡೆಯಲು ಪತಿ ಪತ್ನಿಯರು ಮಿಂದು ಮಡಿಯುಟ್ಟು ಸಂಯೋಗಕ್ಕೆ ಮೊದಲು ದಿವ್ಯ ಮಂತ್ರಗಳನ್ನು ಪಠಿಸುತ್ತಿರಲಿಲ್ಲವೇ..ಅದೇ ರೀತಿ ಈಗಿನ ಪತಿ ಪತ್ನಿಯರು ಇಂಗ್ಲಿಷ್ ವರ್ಣಮಾಲೆಯನ್ನೋ ಕನ್ನಡ ವರ್‍ಣಮಾಲೆಯನ್ನೋ ಪಠಿಸಿದರಾಯಿತು.ಹುಟ್ಟಿದಾಗಲೇ ಭಾಷೆಯೂ ಬರುತ್ತದೆ. ಕಲಿಸುವ ಪ್ರಶ್ನೆಯೇ ಇಲ್ಲ’ ಎಂದೆ.

‘ತಮಾಷೆ ಮಾಡಬೇಡ ಗುರುವೇ ಇನ್ನ ಹತ್ತು ನಿಮಿಷದಲ್ಲಿ ಅಚ್ಚಿಗೆ ಹೋಗಬೇಕು.ನಿನ್ನ ಹೇಳಿಕೆ ಬೇಕು’ಆತ ಮತ್ತೆ ಕೋರುತ್ತಿದ್ದ.

 ‘ಒಂದು ಲೆಕ್ಕದಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸುವುದು ಒಳ್ಳೆಯದು.ಲಂಕೇಶ್ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿತಿದ್ದರೆ ಅವರ ಪತ್ರಿಕೆ ಶುರುವಾಗುವಾಗಲೇ ಈಗ ಬರುತ್ತಿರುವಂತೆ ಬರುತ್ತಿತ್ತು.ಮಹಾದೇವ ಅವರು ಕುಸುಮಬಾಲೆ ಬರೆದು ಇಪ್ಪತ್ತು ವರ್ಷಗಳಾದವು.ಅದು ಇನ್ನೂ ಇಂಗ್ಲಿಷ್ನಲ್ಲಿ ಬರಲು ಒದ್ದಾಡುತ್ತಿದೆ.ಮಹಾದೇವ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿತಿದ್ದರೆ  ಇಂಗ್ಲಿಷಿನಲ್ಲೇ  ಬರುತ್ತಿತ್ತು.ಹಾಗೇ ಬೇಂದ್ರೆ,ಕುವೆಂಪು,ತೇಜಸ್ವಿ.. .. ಕನ್ನಡಕ್ಕೆ ಸಾಲು ಸಾಲಾಗಿ ನೋಬಲ್ ಬಹುಮಾನ ಹೊಡೆಯುತ್ತಿತ್ತು.’

ನನ್ನ ಹೇಳಿಕೆಯನ್ನು ಕೊಡುತ್ತಾ ಈಕೆಯ ಮುಖ ನೋಡಿದೆ.

 ಹಾಗೆ ನೋಡಿದರೆ ಆಕೆಯೂ ಅಚ್ಚ ಕನ್ನಡಿಗಳಲ್ಲ.ನಾನೂ ಅಲ್ಲ.ಆದರೂ ಬೆಕ್ಕುಗಳಂತೆ ಪ್ರೇಮವೋ ಕಾದಾಟವೋ ಎಂದು ಗೊತ್ತಾಗದಂತೆ ಅದಕು ಇದಕು ಮತ್ತು ಎದಕು ಕನ್ನಡವನ್ನೇ ಬಳಸುತ್ತಿರುತ್ತೇವೆ.ನಮ್ಮ ಇಬ್ಬರು ಪುಡಿ ಮಕ್ಕಳು ಕನ್ನಡವನ್ನೂ ಇಂಗ್ಲಿಷನ್ನೂ ಮಲಯಾಳವನ್ನೂ ಜೊತೆಗೆ ನಮ್ಮಿಬ್ಬರ ಕಣ್ಣಭಾಷೆ ಕೈಸನ್ನೆಗಳನ್ನೂ ಅರೆದು ಕುಡಿದವರಂತೆ ಅರ್ಥ ಮಾಡಿಕೊಳ್ಳುವಾಗ ನಾವು ತುಳುವಿನಲ್ಲೋ ಅಥವಾ ನಾವೇ ಹುಟ್ಟು ಹಾಕಿರುವ ತಿರುಗು ಭಾಷೆಯಲ್ಲೋ ಮಾತನಾಡುತ್ತಿರುತ್ತೇವೆ.

ಉದಾಹರಣೆಗೆ ಬೀಡಿಯನ್ನು ಡೀಬಿ ಎಂದು ಹೇಳುತ್ತೇವೆ.

ಆದರೆ ಈ ಪುಡಿಮಕ್ಕಳು ಈಗ ಅದನ್ನೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ.ಹಾಗಾಗಿ ನಾವಿಬ್ಬರು ಇನ್ನೊಂದು ಹೊಸಭಾಷೆಯ ಆವಿಷ್ಕಾರದಲ್ಲಿ ತೊಡಗಿದ್ದೆವು.ಈ ಭಾಷೆಯನ್ನು ಯಾವ ಸರಕಾರವೂ ಯಾವ ಮಕ್ಕಳಿಗೂ ಒಂದನೇ ತರಗತಿಯಿಂದ ಬೋಧಿಸಬಾರದೆಂಬುದು ನಮ್ಮ ಆಸೆಯಾಗಿತ್ತು.

 ಇಂತಹ ಹೊತ್ತಲ್ಲೇ ಈ ಅನಾಹುತವು ಸಂಭವಿಸಿತ್ತು.ನಾನು ಕನ್ನಡದಲ್ಲಿ ಕಥೆಗಳನ್ನೂ ಕವಿತೆಗಳನ್ನೂ ಬರೆಯುತ್ತಾ ಅದನ್ನು ಮೆಚ್ಚಿಕೊಂಡ  ತರುಣಿಯೊಬ್ಬಳು ಅಭಿಮಾನದಲ್ಲಿ ನನಗೆ ಪತ್ರಗಳನ್ನು ಬರೆಯುತ್ತಾ
ಅವಳ ಅಂತಃಕರಣವನ್ನೂ ಅಂದವನ್ನೂ ಮೆಚ್ಚಿಕೊಂಡ ನಾನು ಆ ಕುರಿತು ಕವಿತೆಗಳನ್ನೂ ಬರೆದು ಅದು ಆಕೆಯಲ್ಲಿ ಅನುರಾಗವನ್ನು ಉಂಟುಮಾಡಿ ಆಕೆ ಮಾರುತ್ತರವೆಂಬಂತೆ ಅದನ್ನ ತೋಡಿಕೊಂಡು ಈ ಎಲ್ಲವನ್ನೂ ಕಳ್ಳ ಬೆಕ್ಕಿನಂತೆ ಗಮನಿಸುತ್ತಿದ್ದ ಇವಳು ಅದೆಲ್ಲಿಂದಲೋ ಹಾರಿಬಂದು ಅದನ್ನು ವಶಪಡಿಸಿಕೊಳ್ಳಲು ನೋಡಿದಾಗ ನಾನು ವಾತಾಪಿ ಜೀರ್ಣೋಭವ ಎಂಬಂತೆ ಕನ್ನಡದ ಆ ಪ್ರೇಮ ಲೇಖನವನ್ನು ನುಂಗಿಬಿಟ್ಟಿದ್ದೆ.

 ನಾನು ಶಾಲೆಗೇ ಹೋಗಬಾರದಿತ್ತು.ಹೋದರೂ ಯಾವ ಭಾಷೆಯನ್ನೂ ಕಲಿಯಬಾರದಿತ್ತು.ಕಲಿತರೂ ಯಾವ ಭಾಷೆಯಲ್ಲೂ ಕವಿತೆಯನ್ನೂ ಕಥೆಗಳನ್ನೂ ಬರೆಯಬಾರದಿತ್ತು.ಬರೆದರೂ ಅದನ್ನ ಯಾರೂ ಓದಬಾರದಿತ್ತು.ಓದಿದರೂ ಯಾರೂ ಅವುಗಳಿಗೆ ಮರುಳಾಗಿ ಪ್ರೇಮ ಲೇಖನವನ್ನ ಬರೆಯಬಾರದಾಗಿತ್ತು.ಅಕಸ್ಮಾತ್ ಯಾರಾದರೂ ಬರೆದರೂ ನಾಚಿಕೆಯಿಲ್ಲದೆ ನಾನು ಅದನ್ನು ನುಂಗಬಾರದಿತ್ತು ಎನ್ನುವುದು ಅವಳ ಸಂಕಟದ ತಿರುಳಾಗಿತ್ತು.

 ನಾವು ಹೀಗೆ ಗಹನವಾಗಿ ಚರ್ಚಿಸುತ್ತಿರುವಾಗಲೇ ಒಂದನೆಯ ತರಗತಿಯಿಂದ ಇಂಗ್ಲಿಷ್ ಎಂಬ ಪ್ರಶ್ನೆ ತಲೆಯೆತ್ತಿ ನಮ್ಮ ಸುಂದರವಾದ ಕಾದಾಟವನ್ನ ನಿಲ್ಲಿಸಬೇಕಾಯಿತು.

 

Advertisements