ಮತ ಧರ್ಮಗಳೂ ಮತ್ತು ನರ ಮನುಷ್ಯರೂ

ಉರಿಯುತ್ತಿರುವ ಗುಲ್ಬರ್ಗಾ ಶಹರಿನಲ್ಲಿ ತಣ್ಣಗಿರುವ ಕೆಲವು ನಿಗೂಢ ತಾಣಗಳಿವೆ.wings.jpg ಎಷ್ಟೇ ಉರಿಯಿದ್ದರೂ ಒಳಹೊಕ್ಕೊಡನೆ ಅವ್ಯಕ್ತ ಗಾಳಿಯಾಡಿ, ಎಷ್ಟೋ ಶತಮಾನಗಳಷ್ಟು ಹಳೆಯ ಗುಂಗು ಮೂಡಿಸಿ, ಹಳೆಯ ಪಾರಿವಾಳಗಳು ರೆಕ್ಕೆ ಬಡಿದು ಹಾರಾಡಿ , ಧೂಪ- ಸಾಂಬ್ರಾಣಿ- ಹೊಗೆ- ಸಮಾದಿ- ನಾವು ಇರುವ ಜಾಗ ಯಾವುದು ನಾವು ಎಲ್ಲಿಂದ ಬಂದವರು ಎಂಬುದನ್ನೆಲ್ಲ ಮರೆಯಿಸಿಬಿಡುತ್ತವೆ.

 ನೀವು ಯಾರಾದರೂ  ಶುಕ್ರವಾರದ ಹಿಂದಿನ ರಾತ್ರಿ ಅಥವಾ ಅಮವಾಸ್ಯೆಯ ಹಿಂದಿನ ಸಂಜೆ ಕತ್ತಲಾಗುತ್ತಿದ್ದಂತೆ ಗುಲ್ಬರ್ಗಾ ಶಹರಿನ  ಮದ್ಯದಲ್ಲಿರುವ ಹಝರತ್ ಖ್ವಾಜ ಬಂದೇ ನವಾಜರ ದರ್ಗಾದ ಒಳ ಹೊಕ್ಕು ಈ ಸೂಪಿ ಸಂತನ ಗೋರಿಯನ್ನು ದಾಟಿ ಇನ್ನೂ ಹತ್ತು ಹಲವು ಗೋರಿಗಳನ್ನೂ ಸ್ಮಾರಕಗಳನ್ನೂ ದಾಟಿ ಮೆಟ್ಟಲು ಇಳಿದು ವಿಶಾಲವಾದ ೬೦೦ ವರ್ಷಗಳಷ್ಟು ಹಳೆಯ ಪ್ರಾಂಗಣದೊಳಕ್ಕೆ ಕಾಲಿಟ್ಟರೆ ಒಂದೇ ಕಾಲಕ್ಕೆ   ಹತ್ತಿಪ್ಪತ್ತು ಮಹಿಳೆಯರು ಹತ್ತಾರು ಗಂಡಸರು ಆಕಾಶ ಬಿರಿಯುವಂತೆ ಹುಯ್ಯಲಿಡುವುದು ಕೇಳಿಸುತ್ತದೆ.

 ಹಜರತ್ ಖಾಜ ಬಂದೇ ನವಾಜ ರ ಉರುಸಿನ ಹೊತ್ತಲ್ಲಿ ನೀವು ರಾತ್ರಿ ಹೊತ್ತು ಇಲ್ಲಿಗೇನಾದರೂ ಬಂದರೆ ಇಲ್ಲಿ ಸಾದು ಸಂತರ ಸೂಫಿ ಫಕೀರರ ಸಿದ್ಧ ಬಾಬಾಗಳ ಭಂಗಿ ಸಮಾವೇಶ ನಡೆಯುತ್ತಿರುತ್ತದೆ.ಮಾತು ಮಾತಿಗೂ ಸೂಫಿ ಕಾವ್ಯದ ಸಾಲುಗಳು, ಸವಾಲು ಜವಾಬುಗಳು- ಕೈಕಾಲುಗಳಿಗೆ ಸಂಕೋಲೆ ಸರಪಳಿಗಳನ್ನು ಸಿಕ್ಕಿಸಿಕೊಂಡು ಮುಳ್ಳು ಚುಚ್ಚಿಸಿಕೊಂಡು ಧಾರುಣವಾಗಿ ನಡೆಯುವ ಸೂಫಿ ಯೋಗಿಗಳು ಪ್ರೇಮ ಕವಿತೆಗಳನ್ನು ವಾಚಿಸುತ್ತಾರೆ.
ಇದು ಉರೂಸಿನ ರಾತ್ರಿಗಳ ಸಂಗತಿಯಾದರೆ, ಉಳಿದ ದಿನಗಳಲ್ಲಿ ಶುಕ್ರವಾರದ ಹಿಂದಿನ ರಾತ್ರಿ ಅಥವಾ ಅಮವಾಸ್ಯೆಯ ಹಿಂದಿನ ರಾತ್ರಿಗಳಲ್ಲಿ ಇಲ್ಲಿ ಹೆಂಗಸರು ಗಂಡಸರ ಆರ್ತನಾದ ಕೇಳಿಸುತ್ತದೆ.ತಲೆಗೆ ಹುಚ್ಚು ಹಿಡಿದವರು,ರೋಗಿಷ್ಟರು,ಮಾಟ ಮಾಯ ಮಂತ್ರಕ್ಕೊಳಗಾದವರು,ಭಾನಾಮತಿಯಿಂದ ಊರು ಬಿಟ್ಟು ಓಡಿ ಬಂದವರು,ಪ್ರೇಮಾಘಾತಕ್ಕೆ ಒಳಗಾದವರು,ಯಾರನ್ನಾದರೂ ಕೊಲ್ಲಿಸಿ, ಕೊಂದು ಪಶ್ಚಾತಾಪಕ್ಕೊಳಗಾದವರು,ವಿಷವಿಕ್ಕಿ ಆನಂತರ ಸಂಕಟಪಟ್ಟುಕೊಳ್ಳುವವರು,ಹಾದರಮಾಡಿ ಆನಂತರ ಅಪರಿಮಿತ  ವಿಷಾಧ ಅನುಭವಿಸುತ್ತಿರುವವರು ಇಲ್ಲಿ ಬಂದು ಇದ್ದಕ್ಕಿದ್ದಂತೆ ಅವರ ಮೈಸೆಟಕೊಂಡು ಆವೇಶಕ್ಕೊಳಗಾಗಿ ಅವರ ಬಾಯಿಂದ ಆ ಎಲ್ಲ ವಿವರಗಳೂ ಹೊರಬಂದು ಕೊಂಚ ಹೊತ್ತು ನೆಲದಲ್ಲಿ ಹೊರಳಾಡಿ ಅಲವತ್ತುಕೊಂಡು ಗೋಡೆಗೆ ತಲೆ ಘಟ್ಟಿಸಿಕೊಂಡು ಆಮೇಲೆ ಏನೂ ಆಗಿಯೇ ಇಲ್ಲವೆಂಬಂತೆ ಅವರು ತಣ್ಣಗೆ ಹೊರಟು ಬಿಡುತ್ತಾರೆ.

ಈ ಹೆಂಗಸರೂ,ಗಂಡಸರೂ,ಸೂಫಿಗಳೂ ಯೋಗಿಗಳೂ ಸಿದ್ಧರೂ ಫಕೀರರೂ ಸೇರುವ ಈ ಜಾಗ ದಲ್ಲಿ ಬಂದೇ ನವಾಜರ ಮೊಮ್ಮಗನ ಗದ್ದುಗೆಯಿದೆ ಎಂದು ವಿಕರಾಳವಾಗಿ ಕಾಣುತ್ತಿದ್ದ ಸಿದ್ಧನೊಬ್ಬ ಉರೂಸಿನ ರಾತ್ರಿಯಲ್ಲಿ ನನಗೆ ಹೇಳಿದ.ಮುಂಜಾವದವರೆಗೆ ನಡೆದ ಭಂಗಿ ಫಕೀರರ ಸಮಾವೇಶದ ನಡುವೆ ಒಂದು ಮೂಲೆಯಲ್ಲಿ ಈತ ಕಿವಿಯ ತೂತಕ್ಕೆ ಈಚಲಿನ ಗರಿ ಸಿಕ್ಕಿಸಿಕೊಂಡು ಬುದ್ಧಿಮಾಂಧ್ಯನಂತೆ ಕುಳಿತಿದ್ದ .ನಡು ನಡುವೆ ಅದೇನೋ ಬಬಾನಂದ ಅಂತ ಉದ್ಗರಿಸುತ್ತಿದ್ದ.ಹೈದರಾಬಾದಿನ ಕುರುಚಲು ಬೆಟ್ಟವೊದರಿಂದ ಬಂದಿದ್ದ ಸೂಫಿ ಸಂತರೊಬ್ಬರು ಸಮಾವೇಶದ ನಾಯಕತ್ವ ವಹಿಸಿದ್ದರು.ಮುಂಬಯಿಯಲ್ಲಿ ಜವಳಿ ವ್ಯಾಪಾರಿಯಾಗಿದ್ದುಕೊಂಡು ಆನಂತರ ಭಕ್ತಿಯ ಗೀಳು ಹಚ್ಚಿಸಿಕೊಂಡ ಇನ್ನೊಬ್ಬರು ಸ್ವಲ್ಪ ಜಾಸ್ತಿಯೇ ಕೂಗಾಡುತ್ತಿದ್ದರು.ಉತ್ತರಾಂಚಲದಿಂದ ಬಂದಿದ್ದ ಮೌನಿ ಬಾಬಾ ಒಬ್ಬರು ಸುಮ್ಮನೆ ಎಲ್ಲವನ್ನೂ ಕೇಳಿಸಿ ಕೊಳ್ಳುತ್ತಿದ್ದರು.

ಈ ಗದ್ದುಗೆ ಬಂದೇ ನವಾಜರ ಅಂತರ್ಧಾನನಾದ ಮೊಮ್ಮಗುವಿಗೆ ಸೇರಿದ್ದು.ಈತ ಸುಮಾರು ೬೦೦ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾದ. ಕಾಣೆಯಾದ ಮಗುವನ್ನು ಎಲ್ಲೆಡೆ ಹುಡುಕಿದ ಬಂದೇ ನವಾಜರಿಗೆ ಒಂದು ಶುಕ್ರವಾರ ಜುಮ್ಮಾ ನಮಾಜಿನ ನಂತರ ನೆಲದಡಿಯಿಂದ ಮಗುವಿನ ಕೂಗು ಕೇಳಿಸಿತು. ಆ ಕೂಗು ತಾನು ಅಂತರ್ಧಾನನಾಗಿರುವೆ ತನ್ನನ್ನು ಹುಡುಕಬೇಡಿ ಅಂದಿತು. ಸೂಫಿ ತತ್ವದಂತೆ ‘ಫನಾ’ ಆದ ಆ ಮಗುವಿನ ಕೈಗೆ ಆ ದರ್ಗಾದ ಎಲ್ಲ ಮಾಂತ್ರಿಕ ಅಧಿಕಾರವನ್ನೂ ಕೊಟ್ಟ ಬಂದೇ ನವಾಜರು ಅಲ್ಲೊಂದು ಗದ್ದುಗೆ ಕಟ್ಟಿದರು.

ಅಂತರ್ಧಾನನಾದ ಆ ಮಗು ವಿನ ನೆನಪಿಗೆ ನಾವೆಲ್ಲರೂ ಇಲ್ಲಿ ಸೇರುತ್ತೇವೆ ಎಂದು ಆ ವಿಕಾರಾಳವಾಗಿದ್ದ ಸಿದ್ಧ ನನಗೆ ಕತೆ ಹೇಳಿದ್ದ.ಆನಂತರ ಮಾಯವಾಗಿದ್ದ.ಉರೂಸು ಕಳೆದ ಮೇಲೆ ಎಲ್ಲ ಭಂಗಿ ಬಾಬಾಗಳೂ ಫಕೀರರೂ ಮಾಯವಾಗಿದ್ದರು.ರೂಮಿಯ ಪ್ರೇಮ ಗೀತೆಗಳನ್ನೂ,ಕಬೀರನ ದೋಹಾಗಳನ್ನೂ,ಮೀರಾ ಹಾಡುಗಳನ್ನೂ ಏಕಕಾಲದಲ್ಲಿ ಒಂದೇ ಲಯದಲ್ಲಿ ಹುಚ್ಚು ಹಿಡಿಸಿಕೊಂಡವರಂತೆ ಹಾಡಿ ಕಣ್ಮರೆಯಾದ ಈ ಹಾಡುಗಾರರು ನಾನು ಊರಿಗೆ ರೈಲು ಹತ್ತಿ ಹೊರಟಾಗ ಜನರಲ್ ಬೋಗಿಯಲ್ಲಿ ಒತ್ತೊತ್ತಾಗಿ ಮಲಗಿಕೊಂಡಿದ್ದರು.ಎಲ್ಲರೂ ಅವರನ್ನು ಬಿಕ್ಷುಕರೆಂದು ತಿಳಿದುಕೊಂಡಿದ್ದರು.

ನನಗೆ ಇದೆಲ್ಲಾ ಬರೆಯಬೇಕೆಂದು ಅನಿಸಿದ್ದು ಮೊನ್ನೆ ಗುಲ್ಬರ್ಗಾದಿಂದ ಮೊಯ್ಯುದ್ದೀನ್ ಪಾಶಾ ಫೋನ್ ಮಾಡಿ ಮಹಮ್ಮದಿ ಬೇಗಂ ತೀರಿಕೊಂಡಳು ಎಂದು ಹೇಳಿದಾಗ. ಈ ಮೊಯ್ಯುದ್ದೀನ್ ಪಾಶಾ ಗುಲ್ಬರ್ಗಾದ ದೊಡ್ಡ ಸಂತರೊಬ್ಬರ ಸಂತತಿಗೆ ಸೇರಿದವನು.ಈಗ ಅಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದಾನೆ.ಸ್ವಲ್ಪ ಕಾಲ ಪೋಲೀಸ್ ಕೂಡಾ ಆಗಿದ್ದ. ನೇಮಕಾತಿ ಪ್ರಕ್ರಿಯೆ ಸರಿಯಾಗಿಲ್ಲ ಅನ್ನುವ ಕಾರಣಕ್ಕೆ ಆ ಕೆಲಸ ಕಳಕೊಂಡಿದ್ದ. ‘ನನಗೆ ಇರುವ ಒಂದೇ ಒಂದು ಕೆಟ್ಟ ಚಟ ಅಂದರೆ ರಾತ್ರಿ ಆಟೋ ಓಡಿಸಿ ಕೊನೆಯ ಗಿರಾಕಿಯನ್ನು ಮನೆಗೆ ತಲುಪಿಸಿದ ಮೇಲೆ ಮನೆ ತಲುಪುವ ಮೊದಲು ೬೦ ಎಮ್.ಎಲ್. ಬ್ರಾಂದಿ ಕುಡಿಯುವುದು’ ಅಂದಿದ್ದ.ಅದು ನಿಜ ಕೂಡಾ ಆಗಿತ್ತು.ಹಾಗಾಗಿ ಆತ ಕೊನೆ ಗಿರಾಕಿಯನ್ನು ಮನೆ ತಲುಪಿಸುವವರೆಗೆ ಕಾದು ಆತನೊಡನೆ  ನಾನು ಸುಮ್ಮನೆ ಕುಳಿತುಕೊಳ್ಳುತ್ತಿದ್ದೆ.ಆತ ಕತೆ ಹೇಳುತ್ತಿದ್ದ.

ಈ ಮೊಯ್ಯುದ್ದೀನ್ ಪಾಶಾನನ್ನು ನಾನು ಮೊದಲು ನೋಡಿದ್ದು ಬಂದೇನವಾಜರ ಮೊಮ್ಮಗನ ಗದ್ದುಗೆಯಲ್ಲಿ.ತಲೆಗೊಂದು ಟವೆಲ್ಲು ಸುತ್ತಿಕೊಂಡು ಆರ್ತನಾದ ಹಾಕುತ್ತ ನೆಲದಲ್ಲಿ ಉರುಳಾಡುತ್ತಿದ್ದ ಹೆಂಗಸೊಬ್ಬಳ ಬುರುಖ ಜಾರಿ ಹೋಗದಂತೆ ಸೀರೆ ಯೊಳಗಿಂದ ಆಕೆಯ ಕಾಲುಗಳು ಕಾಣಿಸದಂತೆ ನೋಡಿಕೊಳ್ಳುತ್ತಿದ್ದ. ನಾನಾದರೋ ಬಹುಶಃ ಅವೇಶ ಬಂದ ಹೆಂಡತಿಯ ಆರೈಕೆ ಮಾಡುತ್ತಿದ್ದಾನೆ ಎಂದು ಸುಮ್ಮಗಿದ್ದೆ. ಆದರೆ ಮಹಮ್ಮದಿ ಬೇಗಂ ಆತನ ಹೆಂಡತಿಯಾಗಿರಲಿಲ್ಲ.

ಮೊಯ್ಯುದ್ದೀನ್ ಪಾಶಾ ಹುಡುಗನಾಗಿದ್ದಾಗ  ಮಹಮ್ಮದಿ ಬೇಗಂ ಆತನ ಎದುರು ಮನೆಯಲ್ಲಿದ್ದಳಂತೆ.ತುಂಬಾ ಅಂದರೆ ತುಂಬಾ ಸುಂದರಿಯಾಗಿದ್ದಳಂತೆ.ಎಷ್ಟು ಸುಂದರಿ ಅಂದರೆ ಬಂದೇ ನವಾಜರ ಜಾತ್ರೆಗೆ ಬಂದಿದ್ದ ಅವಳನ್ನು ಮುಂಬಯಿಯಿಂದ ಬಂದಿದ್ದ ಹಿಂದೂ ಸಾಹುಕಾರನೊಬ್ಬ ಹಾರಿಸಿಕೊಂಡು ಹೋದನಂತೆ.ಆಮೇಲೆ ೩೦ ವರ್ಷಗಳ ನಂತರವೇ ಆಕೆಯನ್ನ ಮೊಯ್ಯುದ್ದೀನ್ ಕಂಡಂದ್ದಂತೆ.ಆಕೆ ಮುಂಬೈಯಿಂದ ಬಂದ ಉದ್ಯಾನ್ ನಿಂದ ಇಳಿದಾಗ ಆಕೆಯ ಕೈಯಲ್ಲಿ ಬಳೆಯೂ ಇರಲಿಲ್ಲವಂತೆ.ಈತನೇ ಆಕೆಯನ್ನ ರಿಕ್ಷಾದಲ್ಲಿ ಕೂರಿಸಿ ದರ್ಗಾ ದಲ್ಲಿ ಬಿಟ್ಟದ್ದಂತೆ.

ಮೊಯ್ಯುದ್ದೀನ್ ಕುಡಿದಾಗಲೆಲ್ಲಾ ನನಗೆ ಅವಳ ಕುರಿತೇ ಹೇಳುತ್ತಿದ್ದ. ಮೊನ್ನೆ ಫೋನ್ ಮಾಡಿ ಮಹಮ್ಮದಿ ಬೇಗಂ ತೀರಿ ಹೋದಳು ಅಂತ ಹೇಳಿದ.

***

Advertisements