ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು

ಮಧ್ಯಾಹ್ನ ಹಠಹಿಡಿದು ಊಟ ಮಾಡದೆ ನಿದ್ದೆ ಹೋಗಿ ಎದ್ದರೆ ಕತ್ತಲಾಗುತ್ತಿತ್ತು. ಮನೆಯೊಳಗೆ ಸಂಜೆಯ ಕೊಂಚ ಬೆಳಕು ಇನ್ನೂ ಉಳಿದು ಅದೂ ಹೊರಟು ಹೋಗಲು ಹವಣಿಸುತ್ತಿತ್ತು. ಈ ಸಂಜೆಯ ಬೆಳಕು ಪ್ರೀತಿಯಂತೆ. ಆದರೆ ಅದೂ ನನ್ನನ್ನು ಬಿಟ್ಟು ಹೋಗಲು ರೆಡಿಯಾಗಿರುವುದನ್ನು ಕಂಡು ಸಂಕಟವಾಗುತ್ತಿತ್ತು. pctheater_35.jpgಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಎಲ್ಲರೂ ಎಲ್ಲರ ಜೊತೆ ಹಠಹಿಡುದು ಕುಂತಿರುವುದು ಕಂಡು, ತಿಂದು ಬಿಡುವಷ್ಟು ಹಠ ಬಂದು ಒಬ್ಬನೇ ತಟ್ಟೆಯಲ್ಲಿರುವುದ ಕಬಳಿಸುತ್ತ ಕೂತಿದ್ದೆ. ಎಲ್ಲರೂ ನೋಡುತ್ತಿದ್ದರು. ಖಾಲಿಯಾಗುತ್ತಿರುವ ತಟ್ಟೆಯ ಮೇಲೆ ರಾತ್ರಿಯ ಕತ್ತಲೆ ಬಂದು ಕೂತುಕೊಳ್ಳಲು ನೋಡುತ್ತಿತ್ತು. ಈ ಕೆಟ್ಟ ಪ್ರಪಂಚ. ಈ ಸಂಸಾರ ಇವೆಲ್ಲವನ್ನೂ ನೀಗಿಕೊಳ್ಳುತ್ತಿರುವನಂತೆ ಒಬ್ಬನೇ ಕೂತು ತಿನ್ನುತ್ತಿರುವ ನಾನು ತಿನ್ನುತ್ತ ತಿನ್ನುತ್ತಾ ಜಠರ ತುಂಬುತ್ತಿದ್ದಂತೆ ಮನಸ್ಸು ಹಾಯಾಗುತ್ತಿರುವಂತೆ ಅನಿಸುತ್ತಿತ್ತು. ನಗು ಬಂತು. ಎಲ್ಲರೂ ಸಿಟ್ಟುಮಾಡಿಕೊಂಡು ದಿನಗಟ್ಟಲೆ ಊಟಮಾಡದೆ ಮೊಂಡು ಹಿಡಿದರೆ ನಾನಾದರೊ ಇಲ್ಲಿ ಅನ್ನದ ಗುಡ್ಡೆಯನ್ನು ಕರಗಿಸಿಕೊಂಡು ತೇಗುತ್ತ ಕೊನೆ ಕೊನೆಯ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನುತ್ತ ಪ್ರಸನ್ನನಾಗಿಬಿಡುತ್ತಿದ್ದೇನೆ. . 

 ನನಗೇ ಅಚ್ಚರಿಯಾಗುವ ಹಾಗೆ ಒಳ್ಳೆಯವನಾಗುತ್ತಿದ್ದೆ. ರಾತ್ರಿಯ ಕತ್ತಲು ಚಂದವಾಗಿ ದೂರದಿಂದ ಕೈಬೀಸುತ್ತಾ ಬರುತ್ತಿತ್ತು. ನನ್ನ ಮನಸ್ಸಿನ ಆಲೋಚನೆಗಳು ಕರಗಿ ಕಿಟಕಿಯಿಂದ ಹೊರಗೆ ಹೋಗುತ್ತಿತ್ತು. ಪ್ರಪಂಚದ ಕುರಿತು ಪ್ರೀತಿ ಬರುತ್ತಿತ್ತು. 

ಕಳೆದ ಆರು ದಿನ ಉಂಡಾಡಿಯ ಹಾಗೆ ಊರೂರು ತಿರುಗಿ ದೇಹ ಬಟ್ಟೆ ಎಲ್ಲವನ್ನೂ ಮಲಿನ ಮಾಡಿಕೊಂಡು ಬಂದು ಕೂತಿರುವ ನಾನು ಎಷ್ಟು ನಾಲಾಯಕ್ಕಾದ ಮನುಷ್ಯ, ಎನಿಸಿತು. ಎಲ ಎಲಾ ಅನಿಸುವ ಹಾಗೆ ಹಸಿವೆಯ ಜೊತೆಗೆ ಹೊರಟು ಹೋದ ನನ್ನ ಎಲ್ಲ ಹಠಮಾರಿತನ! ನಾಚುಗೆಯಾಯಿತು. ಹಾಗೆ ನಾಚಿಕೊಂಡು ಕೂತಿದ್ದೆ. ಇದ್ದಕ್ಕಿದ್ದಂತೆ ಪ್ರಸನ್ನನಾಗಿ ಹೋದ ನನ್ನ ಕಂಡು ಗರಬಡಿದು ಹೋಗಿದ್ದ ಮನೆ ಮತ್ತೆ ಲವಲವಿಕೆಗೆ ಬರುತ್ತಿರುವಂತೆ ಅನಿಸುತ್ತಿತ್ತು. ಎಲ್ಲರೂ ಸರಿ ಇದ್ದಾರೆ. ಸರಿಯಾಗಿ ಮಾತನಾಡುತ್ತಿದ್ದಾರೆ ಎನಿಸಿತು. ಬುದ್ಧ ಹೇಳಿದಂತೆ ದುಃಖಕ್ಕೆ ಆಸೆ ಮೂಲ ಕಾರಣವಲ್ಲ ಹಸಿವು ಮೂಲ ಕಾರಣ ಎಂದು ಕೊಂಡು ಹಾಗೇ ನಿಧಾನಕ್ಕೆ ಮನುಷ್ಯನಂತೆ ಎಲ್ಲರನ್ನೂ ನೋಡುತ್ತಿದ್ದೆ. ಎಲ್ಲರೂ ದೇವತೆಗಳಂತೆ ಕಾಣಿಸುತ್ತಿದ್ದರು.

ಎರಡೇ ದಿನದಲ್ಲಿ ಬಂದುಬಿಡುತ್ತೇನೆ ಎಂದು ಮನೆ ಬಿಟ್ಟು ಹೋದವನು ಇಂದು ಆರನೆಯ ದಿನ ಮಧ್ಯಾಹ್ನದ ಹೊತ್ತಲ್ಲಿ ಮನೆಗೆ ಬಂದಿದ್ದೆ. ರಾತ್ರಿ ರೈಲಿನಲ್ಲಿ ಬರುವಾಗ ಮೀಟರ್ ಗೇಜ್ ಗಾಡಿಯ ಮೂಲೆಯಲ್ಲಿ ಹೊಸತಾಗಿ ಮದುವೆಯಾಗಿದ್ದ ಹುಡುಗ ಹುಡುಗಿಯರಿಬ್ಬರು ಕೂತಿದ್ದರು. ಅವನು ಆಕೆಯನ್ನು ಹೂವಿನಂತೆ ನೋಡುತ್ತಿದ್ದ. ಆತನ ಪ್ರೀತಿಯಿಂದ ಮತ್ತಳಾಗಿದ್ದ ಆಕೆ ಆತನನ್ನು ಹೂದೋಟದ ಕಾವಲುಗಾರನನ್ನು ಗದರಿಸುವಂತೆ ಮೃದುವಾಗಿ ಗದರಿಸುತ್ತ ಎಲ್ಲ ಸೇವೆಗಳನ್ನೂ ಮಾಡಿಸಿಕೊಳ್ಳುತ್ತಿದ್ದಳು. ಭೂಮಿಯಂತೆ ಸಹನೆ ಹೊಂದಿರುವ ಗಂಡಸೊಬ್ಬನನ್ನು ನಾನು ನೋಡುತ್ತಿದ್ದೆ. ಆಕೆ ಸಣ್ಣಗೆ ಜ್ವರದಿಂದ ನರಳಿದಂತೆ ಮಾಡಿದರೆ ಆತ ಆಕೆಯ ಪಾದಗಳನ್ನು ಒತ್ತುತ್ತಿದ್ದ. ಒತ್ತುತ್ತಿದ್ದ ಅಂದರೆ ಆ ರೈಲು ಮೈಸೂರಿನಿಂದ ರಾತ್ರಿ ಹತ್ತಕ್ಕೆ ಹೊರಟು ಮಂಗಳೂರನ್ನು ಬೆಳಿಗ್ಗೆ ಹತ್ತಕ್ಕೆ ತಲುಪುವವರೆಗೆ ನಾನು ಕಣ್ಣುಬಿಟ್ಟು ನೋಡುವಾಗಲೆಲ್ಲ ಪಾದಗಳನ್ನು ಒತ್ತುತ್ತಲೇ ಇದ್ದ. ಆಕೆ ನಿದ್ದೆ ಹೋಗಿದ್ದಳು. ಆತ ನಿದ್ದೆಯಲ್ಲೇ ತೂಕಡಿಸುತ್ತ ಇದ್ದ!ನಾನು ಬೆಳಿಗ್ಗೆ ಆತನಿಗೆ ನಮಸ್ಕಾರ ಮಾಡಿದೆ. ಆತನ ಪ್ರೀತಿಗೆ, ಸಹನೆಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆತನ ಕೈಯ್ಯ ಶಕ್ತಿಗೆ ನಾನು ನಮಸ್ಕಾರ ಮಾಡಿದ್ದೆ. ಅಂತಹ ಒಳ್ಳೆಯ ಗಂಡ ಮತ್ತು ನಮ್ಮಂತಹ ಚಿಲ್ಲರೆ ಗಂಡಂದಿರು! ನಮ್ಮನ್ನೆಲ್ಲ ಪಾಪಿಗಳನ್ನಾಗಿ ಮಾಡುವ ಆತನ ಒಳ್ಳೆಯತನ, ಮಂಗಳೂರು ತಲುಪುತ್ತಿದ್ದಂತೆ ನಿದ್ದೆ ತಡೆಯಲಾಗದೆ ಆತನಿಗೆ ಅಳುವೇ ಬರುತ್ತಿತ್ತು. ಆಕೆ ಇನ್ನೂ ಎದ್ದೇ ಇರಲಿಲ್ಲ.

ಇದ್ದಕ್ಕಿದ್ದ ಹಾಗೆ ನಾನು ಹೇಳಲು ಹೊರಟ ಈ ಲಾರನ್ಸ್ ಮೆನೆಜಸ್ ಮತ್ತು ಗ್ರೇಸಿ ಅಳುತ್ತಾ ಮನೆಯೊಳಕ್ಕೆ ಬಂದರು. old_irish_couple.jpgಇವರಿಬ್ಬರೂ ರಂಗಕ್ಕೆ ಹಠಾತ್ತನೆ ಬಂದ ನಾಯಕ ನಾಯಕಿಯರಂತೆ ಜೋರಾಗಿ ಅಳುತ್ತಾ ನಮ್ಮ ಮುಂದೆ ಬಂದು ನಿಂತರು. ಲಾರೆನ್ಸ್ ಮೆನೆಜಸ್ ! ಯಾವುದೋ ಕಲಾವಿದನಂತೆ ಇದ್ದ ಆತನ ನಿಷ್ಠುರ ಕಣ್ಣುಗಳು! ಆತನ ಹಿಂದೆಯೇ ಬಂದ ಗ್ರೇಸಿ ಎಂಬ ಆತನಿಗಿಂತ ವಯಸ್ಸಾದ ಆತನ ಹೆಂಡತಿ ಆತನ ತಾಯಿಯಂತೆ ಇದ್ದಳು. ಇಬ್ಬರೂ ಅಳುತ್ತಿದ್ದರು. ಚೆನ್ನಾಗಿ ಅಭ್ಯಾಸ ಮಾಡಿದ ನಾಟಕದಂತೆ ಅವರ ಅಳು ಇತ್ತು. ನೋಡಿದರೆ ಹಣ ಕೇಳಲು ಅಪರಿಚಿತವಾದ ನಮ್ಮ ಮನೆಯೊಳಕ್ಕೆ ಬಂದಿದ್ದರು. ಅಳುತ್ತಾ ಅವರ ಕಥೆ ಹೇಳಿದರು, ಆಕೆಗೆ ಹೊಟ್ಟೆಗೆ ಆಪರೇಷನ್ ಆಗಿ ಆಸ್ಪತ್ರೆಯಿಂದ ಹೊರಬಂದಿದ್ದರು, ಊರಿಗೆ ಹೋಗಲು ಹಣವಿರಲಿಲ್ಲ. ಊರು ಮೂಡಿಗೆರೆಯಂತೆ. ಲಾರೆನ್ಸ್ ಮೆನೆಜಸ್‌ಗೆ ವ್ಯಾಪಾರದಲ್ಲಿ ನಷ್ಟವಾಗಿ ಭಿಕಾರಿ ಆಗಿರುವನಂತೆ, ಊರಿಗೆ ಹೋಗುವ ಬಸ್ಸಿನ ಹಣವನ್ನು ನಾವು ಕೊಡಬೇಕಂತೆ, ಊರಿಗೆ ಹೋಗಿ ಕಳಿಸಿಕೊಡುವರಂತೆ, ಲಾರೆನ್ಸ್ ಮೆನೆಜಸ್ ಕುಡಿದಿದ್ದ. ಆತ ಹಿಂದೆ ಬೊಂಬಾಯಿಯಲ್ಲಿ ಯಾವುದೋ ಚೀನೀ ಹೋಟೆಲೆನಿಲ್ಲಿ ಕ್ಯಾಬರೆ ನಡೆಯುವಾಗ ಲೈಟ್ ಬಿಡುವ ಕೆಲಸ ಮಾಡುತ್ತಿದ್ದನಂತೆ ಆ ಮೇಲೆ ವಾಚ್ ರಿಪೇರಿ, ಮರದಕೆಲಸ ಎಲ್ಲವೂ ಮಾಡಿದನಂತೆ.

ಅವರು ಡಾಳಾಗಿ ಎದ್ದು ಕಾಣುವಂತೆ ಸುಳ್ಳು ಹೇಳುತ್ತಿದ್ದರು. ಆದರೂ ಅವರ ಅಭಿನಯಕ್ಕೆ ಖುಷಿ ಆಗುತ್ತಿತ್ತು. ನೀವು ಸುಳ್ಳು ಹೇಳುತ್ತಿದ್ದೀರಿ, ನಿಜ ಹೇಳಿ ಹಣ ಕೊಡುತ್ತೇವೆ ಅಂದೆವು. ಅವರು ನಾಚಿಕೊಂಡು ನಿಜ ಹೇಳಲು ಶುರುಮಾಡಿದರು  ನಂತರ ಹಾಗೇ ತಮಾಷೆ ಮಾಡುತ್ತಾ ಅವರ ಪ್ರೇಮದ ಕಥೆ ಹೇಳಲು ತೊಡಗಿದರು. ಗಂಡಹೆಂಡತಿ ಸಿಟ್ಟಾದರೆ ಹೇಗೆ ರಾಜಿಯಾಗಬೇಕು ಎಂದು ಕೇಳಿದೆ.

ಪ್ರೀತಿ ಮಾಡಬೇಕು ಎಂದು ಲಾರೆನ್ಸ್ ಹೇಳಿದರು. ಹೇಗೆಂದು ಕೇಳಿದೆ . ಗ್ರೇಸಿ ಎಂಬ ಈ ಮುದುಕಿ ಕಣ್ಣು ಮಿಟಿಕಿಸುತ್ತ ಹಳೆಯ ಲತಾ ಮಂಗೇಶ್ಕರಳ ಮುಘಲ್-ಹಿ-ಅಜಂ ಚಿತ್ರದ ಪ್ಯಾರ್‌ಕಿಯಾ ತೋ ಢರ್ ನಾ ಕ್ಯಾ ಹಾಡು ಹೇಳಲು ತೊಡಗಿದಳು. ಆತ ನರ್ತಕಿಯ ಮೇಲೆ ಬೆಳಕು ಬಿಡುವವನಂತೆ ಆಕೆಯನ್ನು ನೋಡಲು ತೊಡಗಿದ.

ನಮಗೆ ಖುಷಿಯಾಗಲು ತೊಡಗಿತು. ಇವರು ಹೇಳಿದ ಸುಳ್ಳುಸಂಕಟ, ನೋವಿನ ಆಪರೇಷನ್, ಬಸ್ಸಿನ ಹಣ, ಬಡತನ ಎಲ್ಲವೂ ಮರೆತು ಇಬ್ಬರೂ ಹಳೇ ಹಿಂದಿ ಸಿನೇಮಾದ ನಾಯಕ ನಾಯಕಿ ಸಾನಿಯರಂತೆ ಕಾಣುತ್ತಿದ್ದರು. ಬಸ್ಸಿಗೂ, ಕುಡಿಯಲೂ ತೆಗೆದುಕೊಳ್ಳಿ ಎಂದು ಕೊಟ್ಟು ಕಳಿಸಿದೆವು. ಚೆನ್ನಾಗಿ ಕೈ ಕುಲುಕಿ ಇಬ್ಬರೂ ಬೀಳ್ಕೊಂಡರು.

ಹಾಗೇ ಯೋಚಿಸುತ್ತಾ ಕುಳಿತೆ. ಇಬ್ಬರೂ ಚೆನ್ನಾಗಿಯೇ ಸುಳ್ಳು ಹೇಳಿದ್ದರು. ಹಾಗೆ ನೋಡಿದರೆ ಯಾವುದು ಸುಳ್ಳು, ಯಾವುದು ನಿಜ, ಎಲ್ಲಿಯ ಹಸಿವು, ಎಲ್ಲಿಯ ಹಠ, ಎಲ್ಲಿಯ ರಾಜಿ ಎಲ್ಲಿಯ ಪ್ರಣಯ, ಎಲ್ಲವೂ ಹೀಗೇ ಅಲ್ಲವೇ? ಆಮೇಲೆ ಯಾರೋ ಹೇಳಿದರು ಈ ಲಾರೆನ್ಸ್ ಮೆನೆಜಸ್ ಈ ಗ್ರೇಸಿ ಎಂಬ ಹೆಂಗಸಿನ ಮೂರನೇ ಪ್ರೇಮಿ, ಈ ಗ್ರೇಸಿ ಸಣ್ಣ ಹುಡುಗಿಯಾಗಿದ್ದಾಗ ತುಂಬಾ ಚೆಂದವಾಗಿ ಹಾಡುತ್ತಿದ್ದಳು ಎಂದೆಲ್ಲಾ ನೆನಪಿಸಿದರು. ಈಗಲೂ ಈ ಇವರಿಬ್ಬರು ಸುಳ್ಳು ಹೇಳುತ್ತಾ, ಅಳು ನಟಿಸುತ್ತಾ ಹಾಯಾಗಿ ಇರಬಹುದು ಅಂತ ಯೋಚಿಸುತ್ತಿದ್ದೇನೆ. ಇವರಿಗೆ ಎಲ್ಲಿಯ ಹಸಿವು?

2 thoughts on “ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು

  1. ಪ್ರಿಯ ರಶೀದ್,

    ಓದುವ ಮೊದಲು ಹಸಿವಾಗಿತ್ತು, ಈಗ ಹೊಟ್ಟೆ ತುಂಬಿದೆ.

    ತಮಾಶೆಯ ಮಾತು ಬಿಡಿ; ಹೀಗೇ ಎಂದು ಹೆಸರಿಸಲಾಗದ, ಮಂತ್ರ ಮತ್ತು ಗೊಣಗುವಿಕೆಗಳ ಕಟ್ಟಲ್ಲಿ ಕಟ್ಟಲಾಗದ, ಪ್ರೀತಿಯ ಬದುಕನ್ನ – ತಮಗೆ ತಿಳಿದಂತೆ ಆಡಿಕೊಂಡು, ಸುಳ್ಳಾಡಿಕೊಂಡು, ನೋಡಿಕೊಂಡು, ನಲಿದುಕೊಂಡು ಇರುವ ಮೆನೆಜಸ್ ಮತ್ತು ಗ್ರೇಸಿಯವರ ಹಣ್ಣು(ಮಾಗಿದ)ಚಿತ್ರವನ್ನ ತುಂಬ ನಿಜವಾಗಿ ನೇಯ್ದಿದ್ದೀರಿ. ಇಲ್ಲೆ ಕಿಟಕಿಯಿಂದ ಬಗ್ಗಿ ನೋಡಿದರೆ ಕಾಣುವಂತ ಭೂಮಿಕೆ.

    ಓದಿ ತುಂಬಿಕೊಂಡಿದೆ – ಹೊಟ್ಟೆ, ಮನಸ್ಸು, ಮತ್ತು ಕಣ್ಣು.

    ಸಿಂಧು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s