ಜಾಗತೀಕರಣ, ಗೊರ್ಬಚೇವ್, ಪೆರಿಸ್ಟ್ರೋಯಿಕಾ ಮತ್ತು ಗ್ಲಾಸ್ನಾಸ್ಟ್

 

ಕಾವಿಗೆ ಕುಂತ ಆಲಸಿ ಹೇಂಟೆಯಂತೆ, ಎಲ್ಲರನ್ನು ಎದುರು ಹಾಕಿಕೊಂಡಿರುವ ಪ್ರೇಮಿಯಂತೆ ಏನೂ ಬರೆಯಲಾಗದೆ ಕಂಪ್ಯೂಟರ್ ಪರದೆಯನ್ನೇ ಆಕಾಶವನ್ನಾಗಿ ಮಾಡಿಕೊಂಡು ದಿಟ್ಟಿಸುತ್ತಿರುವೆ.chat1.jpgಈ ನಡು ಮದ್ಯಾಹ್ನದ ಆಕಾಶಕ್ಕಿಂತ ಬಿಲ್ ಗೇಟ್ಸ್ ಕರುಣಿಸಿರುವ ಈ ನೀಲ ವಿಂಡೋಸ್ ಪರದೆ ಎಷ್ಟೋ ಹಿತವಾಗಿ ಕಾಣಿಸುತ್ತಿದೆ. ಜಾಗತೀಕರಣ ಮತ್ತು ಸಂಸ್ಕೃತಿ, ಜಾಗತೀಕರಣ ಮತ್ತು ಧರ್ಮ,ಜಾಗತೀಕರಣ ಮತ್ತುಕನ್ನಡ ಸಾಹಿತ್ಯ- ವಿತ್ತ ವರ್ಷ ಮುಗಿಯುವ ಮೊದಲೇ ಮುಗಿಸಬೇಕಾಗಿರುವ ವಿಚಾರ ಸಂಕಿರಣಗಳು ಅಚ್ಚರಿಯಾಗುವಂತೆ        ಪ್ರತಿನಿಧಿಗಳಿಂದ ತುಂಬಿಕೊಂಡಿದೆ.ಬಹಳಷ್ಟು ಮಂದಿ ಭಯಬೀತರಾಗಿ ಯಾವ ರೂಪದಲ್ಲಾದರೂ ಎರಗಬಹುದಾದ ಜಾಗತಿಕ ಭೂತದಿಂದ ತಮ್ಮ ಪಿಳ್ಳೆಮರಿಗಳನ್ನು ಹೇಗ ರಕ್ಷಿಸಬಹುದೆಂದು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದರೆ ನಾನಾದರೋ ಜಾಗತೀಕರಣದ ಏಜೆಂಟನಂತೆ ಈ ನೀಲಪರದೆಯ ಮುಂದೆ ಕುಳಿತು ಏನು ಬರೆಯಲಿ ಎಂದು ಮೂಗ ಹೊಳ್ಳೆಯೊಳಗಿಂದ ಘನವಾದದ್ದೇನನ್ನೋ ಹೆಕ್ಕುತ್ತಿದ್ದೇನೆ.

 ಇನ್ನೇನು ಮಾಡಲಿ ಎಂದು ಜಾಗತೀಕರಣದ ಏಜೆಂಟರ ಇನ್ನೊಂದು ಮುಖ್ಯವ್ಯಸನವಾದ ವೆಬ್ ಚಾಟಿಂಗ್ ಶುರುಮಾಡುತ್ತೇನೆ. ವೆಬ್ ಕೋಣೆಯ ಒಳ ಹೊಕ್ಕೊಡನೆ ಯಕ್ಷಯಕ್ಷಿಯರಂತೆ ನೂರಾರು ಗೆಳೆಯ ಗೆಳತಿಯರು,  ಮುದುಕರು ,ಸಲಿಂಗಕಾಮಿಗಳು, ಬರಹಗಾರರು, ಕಲಾವಿದರು ಬರಿಮೈಯನ್ನ ತೋರಿಸಿ ಖುಷಿಪಡುವವರು, ಸ್ವರತಿ ಪ್ರಿಯರು ,ಉದ್ಯೋಗ ಹುಡುಕುತ್ತಿರುವವರು -ಎಲ್ಲರೂ ಮುತ್ತಿಕೊಳ್ಳುತ್ತಾರೆ.ಎಲ್ಲರನ್ನೂ ಮಾತನಾಡಿಸುತ್ತ,ವಿಚಾರಿಸುತ್ತ ಆ ಹಗಲನ್ನೆಲ್ಲ ಕಳೆಯುತ್ತೇನೆ.ಜಾಗತೀಕರಣದ ಅಮಲು ಇಳಿಯುತ್ತಿದ್ದಂತೆ ಮಕ್ಕಳು ಏನು ಆಟವಾಡಿಸದೆ ಏನು ಮಾಡುತ್ತಿದ್ದೀಯಾ ಎಂದು ಸಿಟ್ಟಾಗುತ್ತಾರೆ.ಕಥೆ ಬರೆಯುತ್ತಿದ್ದೇನೆ ಎಂದು ಹೇಳುತ್ತೇನೆ.ನಮಗೆ ಕಥೆ ಹೇಳು ಅನ್ನುತ್ತಾರೆ.ಇಲ್ಲ ಮಕ್ಕಳೇ ಇದು ದೊಡ್ಡವರ ಕಥೆ.ನಿಮ್ಮ ಕಥೆ ರಾತ್ರಿ ಮಲಗುವಾಗ ಹೇಳುತ್ತೇನೆ ಎಂದು ಸುಳ್ಳು ಹೇಳುತ್ತೇನೆ.ರಾತ್ರಿ ಸಿಕ್ಕಾಪಟ್ಟೆ ಬೋರಾಗಿ ನಿದ್ದೆ ಬರುವಂತಹ ನೀಳ್ಗತೆಯೊಂದನ್ನ ಹೇಳಿ ಅವರನ್ನ ಮಲಗಿಸಿ ಮತ್ತೆ ಜಾಗತಿಕ ಭೂತದ ಜೊತೆ  ಕೇಳಿಯಲ್ಲಿ ತೊಡಗುತ್ತೇನೆ.

   ಇರುಳಿನ ಎರಡನೇ ಜಾವದ ಹೊತ್ತಿನಲ್ಲಿ ಈಕೆ ಚಾಟ್ ಕೋಣೆಯ ಬಾಗಿಲು ಬಡಿದು ನಾನು ಬರಲೇ ಅನ್ನುತ್ತಾಳೆ.chat-2.jpgಇಷ್ಟು ಹೊತ್ತಲ್ಲಿ ಏನು ಮಾಡುತ್ತೀಯಾ ಅಂತ ಕೇಳುತ್ತಾಳೆ.ಹಾಗೆ ನೋಡಿದರೆ ಈಕೆ ಗಂಡಾಹೆಣ್ಣಾ ಎಂದೂ ಎನಗೆ ಗೊತ್ತಿಲ್ಲ.ಹೆಣ್ಣು ಅಂದಿದ್ದಾಳೆ.ಅಮೇರಿಕಾದ ಯಾವುದೋ ಏಕತಾನದ ನಗರದಲ್ಲಿದ್ದಾಳೆ.ಈಗ ಅಲ್ಲಿ ನಡುಹಗಲಿನ ಹೊತ್ತಂತೆ.ಗಂಡ ಮನೆಗೆ ಬಂದವನು ಸಣ್ಣ ಪುಟ್ಟದ್ದಕ್ಕೆಲ್ಲ ಹೊಡೆಯುತ್ತಾನಂತೆ.ಅವರು ಆಂದ್ರದ ನಾಯ್ಡುಗಳಂತೆ.ಅವಳಿಗೆ ಸಾಕಾಗಿ ಹೋಗಿದೆಯಂತೆ.ಆದರೆ ಅವನು ಕೋಳಿಸಾರು ತುಂಬಾಚೆನ್ನಾಗಿ ಮಾಡುತ್ತಾನಂತೆ.ಆದರೂ ಅವನನ್ನು ಬಿಟ್ಟು ಓಡಿ ಬರುತ್ತಾಳಂತೆ.೧೮ಕ್ಕೆ ಇಲ್ಲಿರುತ್ತಾಳಂತೆ.ನೀನು ಒಳ್ಳೆಯವನಂತೆ ತೋರುತ್ತೀಯಾ ನಿನ್ನನ್ನು ನೋಡಬಹುದಾ ನಿನ್ನ ಹೆಸರೇನು ಎಂದೆಲ್ಲಾ ಕೇಳುತ್ತಾಳೆ..ನೀನು ಹೆಣ್ಣಾ ಗಂಡಾ ಎಂದು ಖ ಚಿತವಾದರೆ ಹೇಳುತ್ತೇನೆ ಅಲ್ಲಿಯವರೆಗೆ ನನ್ನ ಹೆಸರನ್ನ ಜಗತ್ ವಿಶ್ವನಾಥ್ ಎಂದು ಇಟ್ಟುಕೋ ಎಂದು ಹೇಳುತ್ತೇನೆ.ನೀನು ಏನು ಮಾಡುತ್ತಿದ್ದೀಯಾ ಎಂದು ಕೇಳುತ್ತಾಳೆ.ಜಾಗತೀಕರಣದ ಜೊತೆ ರಾಸಲೀಲೆಯಲ್ಲಿ ತೊಡಗಿದ್ದೇನೆ ಎನ್ನುತ್ತೇನೆ.
  ನಿನ್ನ ಮಕ್ಕಳ ಚಿತ್ರ ಕಳಿಸು ಅನ್ನುತ್ತಾಳೆ.ತುಂಬಾ ಸಿಗರೇಟ್ ಸೇದ ಬೇಡ ಅನ್ನುತ್ತಾಳೆ.ಹೆಂಡತಿಯನ್ನು ನೀನೂ ಹೊಡೆಯುತ್ತೀಯಾ ಎಂದು ಕೇಳುತ್ತಾಳೆ.ಮಕ್ಕಳಾಗಲು ಏನು ಮಾಡಬೇಕು ಎಂದು ಕೇಳುತ್ತಾಳೆ.ಅಮೇರಿಕಾದಿಂದ ಏನು ತರಬೇಕು ಎಂದು ಕೇಳುತ್ತಾಳೆ
  ನಾನು ತಲಾ ಒಂದೊಂದು ಪ್ಲೇಟ್ ಗೊರ್ಬಚೇವ್, ಪೆರಿಸ್ಟ್ರೋಯಿಕಾ ಮತ್ತು ಗ್ಲಾಸ್ನಾಸ್ಟ್ ಕಟ್ಟಿಕೊಂಡು ಬಾ ಎಂದು ಒಂದು ನಗುವಿನ ಚಿಹ್ನೆ ಯನ್ನು ಟೈಪ್ ಮಾಡಿ ಆಕೆಗೆ ದಾಟಿಸುತ್ತೇನೆ.ಆಕೆ ಒಂದು ಪ್ರಶ್ನಾರ್ಥಕ ಚಿ ಹ್ನೆಯನ್ನು ಈ ಕಡೆ ಕಳುಹಿಸಿ ಕಾಯುತ್ತಿದ್ದಾಳೆ.

Advertisements