ಮಾಸ್ಕೋದಿಂದ ಪ್ರೀತಿ ಪೂರ್ವಕ-ಒಂದು ಬಹಳ ಹಳೆಯ ನೆನಪು

ಸಂಪಾಜೆಯ ಬಳಿಯ ಕೊಯನಾಡಿನ  ಅಂದುಕಾಕನ ಮಸಿ ಹಿಡಿದ ಹೋಟೆಲಿನ ಅಡ್ಡಾದಿಡ್ಡಿ ಬೆಂಚುಗಳಲ್ಲಿ ಕೂತ ನಾವು ತಿಂಡಿ ಕಪಾಟಿನ ಮೇಲಿಟ್ಟಿದ್ದ ಹೊಗೆ ಬಣ್ಣದ ರೇಡಿಯೋ ಒಂದರಿಂದ ವಿಚಿತ್ರ ಸ್ವರದ ರಷ್ಯನ್ ಹೆಂಗಸಿನ ಗಂಟಲಿನಿಂದ ನಮ್ಮ ಹೆಸರುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. radio11.jpgಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ ಗಡ್ಡ ಕೆರೆಯುತ್ತಾ ಕೂತು ಒಂದು ಬೀಡಿ ಹಚ್ಚಿ ಗಂಟಲಿನ ಒಂದು ನಾಳದಿಂದ ಹೊಗೆ ತೆಗೆದುಕೊಂಡು ಇನ್ನೊಂದು ನಾಳದ ಮೂಲಕ ಹೊಗೆ ಮೇಲಕ್ಕೆ ತಂದು ಮೂಗಿನ ಒಂದೇ ಹೊಳ್ಳೆಯ ಮೂಲಕ ಹೊರಗೆ ಬಿಡಲು ನೋಡುತ್ತಿದ್ದರು.

ನಮಗೆ ನಗು ಬರುತ್ತಿತ್ತು. ಆಕಾಶದಲ್ಲಿ ರಷ್ಯಾದಿಂದ ರೇಡಿಯೋ ಮಾಸ್ಕೋ ಮೂಲಕ ಕೇಳಿ ಬರುತ್ತಿರುವ ಈ ಪುಡಿ ಹುಡುಗರ ಹೆಸರುಗಳನ್ನು ಕೇಳಿ ಸಹಿಸಲಾಗದೆ ಅಂದು ಕಾಕ ಬೀಡಿಯ ಹೊಗೆಯ ಜೊತೆ ಪ್ರಾಣಾಯಮ ನಡೆಸಲು ಹೋಗಿ ಆಗದೆ ಗಡ್ಡ ಕೆರೆದುಕೊಂಡು ನಮ್ಮನ್ನೇ ನೋಡುತ್ತಿದ್ದರು. ರೇಡಿಯೋ ಮಾಸ್ಕೋದಲ್ಲಿ ನಮ್ಮ ಹೆಸರು ಹೇಳಿ ಮುಗಿಸಿದ ಆ ರಷ್ಯನ್ ಹೆಂಗಸು ಇನ್ನು ಯಾವುದೇ ಊರಿನ ಇನ್ನು ಯಾರದೋ ಹೆಸರುಗಳನ್ನು ಹೇಳಲು ತೊಡಗುತ್ತಿದ್ದಳು. ನಾವು ಅರ್ಥಗರ್ಬಿತವಾಗಿ ಒಬ್ಬರನೊಬ್ಬರು ನೋಡಿ ನಕ್ಕು ಹೊರಗೆ ಬರುತ್ತಿದ್ದೆವು. ಅಂದು ಕಾಕ ಎದ್ದು ರೇಡಿಯೋವನ್ನು ಸಿಲೋನಿಗೆ ತಿರುಗಿಸಿ ತಮಿಳು ಹಾಡು ಹಾಕುತ್ತಿದ್ದರು. ಹೋಟೆಲಿನೊಳಗೆ ಪೊರಾಟ, ಚಾಪೀಸಿನ ಪರಿಮಳ ಹೊಗೆಯ ಜೊತೆ ಹೋರಾಡಲು ಶುರು ಮಾಡುತ್ತಿತ್ತು.

ಈ ಅಂದುಕಾಕನ ಹೋಟೆಲಿನ ಹೊಗೆ, ಒಂದೆರಡು ಅಂಗಡಿಗಳ ಬೆಲ್ಲದ, ಮೀನಿನ ವಾಸನೆ, ನಮ್ಮ ಮನೆಗಳಲ್ಲಿ ತುಂಬಿಕೊಂಡಿರುತ್ತಿದ್ದ ಹೊಗೆ ಮತ್ತು ಹೋರಾಟ ಇವುಗಳು ಬಿಟ್ಟರೆ ನಮ್ಮ ಊರು ನಮಗೆ ಸ್ವರ್ಗದ ಹಾಗೇ ಇತ್ತು. ಆ ಊರಿನ ಹೊರಗೆ ಇರುವ ಹುಲ್ಲುಗಾವಲುಗಳಂತೂ  ಸ್ವರ್ಗತೋಪಿನ ಹಾಗೇ ಇತ್ತು. ಆ ಊರ ಎಡಗಡೆಗೆ ಕಪ್ಪು ಹಲಗೆಯ ಹಾಗೆ ಎತ್ತರಕ್ಕೆ ಎದ್ದು ನಿಂತಿರುವ ಕರಿಯ ಮಲೆಯ ಮೇಲೆ ಸೀಮೆಸುಣ್ಣದಿಂದ ಉದ್ದಕ್ಕೆ ಗೆರೆ ಎಳೆದಿರುವ ಹಾಗೆ ಕಾಣಿಸುವ ಒಂದು ಜಲಪಾತ ಯಾವಾಗಲೂ ಹೊಳೆಯುತ್ತಲೇ ಇರುತ್ತಿತ್ತು. ಊರಿನ ಹೊರಗೇ ಹರಿಯುವ ಒಂದು ನದಿ.dsc04475.jpg ಹಠಾತ್ತನೆ ಒಂದು ಮರ ಮುರಿದು ಬಿದ್ದಂತೆ ಕಾಣಿಸುವ ಹಾಗೆ ಬ್ರಿಟೀಷರ ಕಾಲದ ಒಂದು ಹಳೆಯಗಾರೆಯ ಸೇತುವೆ ಇತ್ತು. ಆ ಸೇತುವೆಗೆ ಅಂಟಿಕೊಂಡೇ ಒಂದು ಗಣಪತಿಯ ಗುಡಿ. ಗುಡಿಯ ಕೆಳಗೆ ಹೊಳೆಯ ಬದಿಯಲ್ಲಿ ದೇವರ ಗುಂಡಿ. ಬೇರೆ ಎಲ್ಲಿ ಮೀನು ಹಿಡಿದರೂ ನಾವು ದೇವರ ಮೇಲಿನ ಪ್ರೀತಿಯಿಂದ ಅಲ್ಲಿ ಮೀನು ಹಿಡಿಯುತ್ತಿರಲಿಲ್ಲ. ಯಾರೂ ಹಿಡಿಯುತ್ತಿರಲಿಲ್ಲ. ಆ ಸೇತುವೆಯ ಈಚೆ ಕಡೆ ಅಡಿಕೆ ತೋಟದ ನಡುವೆ ದೊಡ್ಡ ಹಳೆಯ ಮನೆಯ ಹಾಗೆ ಕಾಣಿಸುವ ಮಸೀದಿ ಇತ್ತು. ಅಡಿಕೆಯ ಹಾಳೆಗಳು ಮಸೀದಿಗೆ ಹೋಗುವ ಕಾಲುಯಹಾದಿಯ ಮೇಲೆ ಉದುರಿ ಬಿದ್ದಿರುತ್ತಿದ್ದವು. ಮಸೀದಿಯೊಳಗೆ ನಮ್ಮ ಪ್ರೀತಿಯ ಮುಲ್ಲಾಕ ಇರುತ್ತಿದ್ದರು. ಅವರು ಎತ್ತರಕ್ಕೆ ಬೆಳ್ಳಗೆ ಗಡ್ಡ ನೀವಿಕೊಂಡು ನಮ್ಮನ್ನು ಪ್ರೀತಿಯಿಂದ ನೋಡುತ್ತಿದ್ದರು. ನಾವು ಹೋದಾಗಲೆಲ್ಲ ಮಸೀದಿಯ ಮುಂದೆ ಇರುವ ತಾವರೆಯ ಕೊಳದಲ್ಲಿ ಈಸಾಡುವ ಮೀನುಗಳನ್ನೂ ಸ್ಫಟಿಕದಂತೆ ಕಾಣಿಸುವ ಅದರ ನೀಲ ತಳವನ್ನೂ ನೋಡಿಕೊಂಡು ಕೂತುಬಿಡುತ್ತಿದ್ದೆವು. ನಮ್ಮನ್ನು ಯಾರಾದರೂ ಬೈದು ಮಸೀದಿಯ  ಒಳಕ್ಕೆ ಓಡಿಸುವವರೆಗೂ ಕೂತೇ ಇರುತ್ತಿದ್ದೆವು.

ಮಸೀದಿಯ ಕೊಳ ಬಿಟ್ಟರೆ ನಾವು ಹೋಗಿ ಕೂತಿರುತ್ತಿದ್ದುದು ಗಣಪತಿ ಗುಡಿಯ ಬಳಿಯ ದೇವರ ಗುಂಡಿಯ ಕಲ್ಲು ಪಾರೆಯ ಮೇಲೆ. ದೇವರ ಮುಂದೆ ಮೈಬಾಗಿಸಿ ಮಲಗಿದಂತಿರುವ ಆ ಬಂಡೆಯ ಮೇಲೆ ಕೂತುಕೊಂಡ ನಾವು ಬಗ್ಗಿ ಹೊಳೆಯ ತಳವನ್ನು ನೋಡುತ್ತಿದ್ದೆವು. ಯಾವ ಹೆದರಿಕೆಯೂ ಇಲ್ಲದೆ ನೀರ ಬಳಿಗೆ ಈಸಾಡಿಕೊಂಡು ಪರಸ್ಪರ ಮಾತಾಡಿಕೊಂಡು ಓಡಾಡುತ್ತಿರುವ ಅಲ್ಲಿಯ ಮೀನುಗಳಲ್ಲಿ ಕೆಲವಕ್ಕೆ ಮೂಗುತಿಗಳಿರುವಂತೆ ಕಾಣಿಸುತ್ತಿತ್ತು. ದೇವರ ಹೆಸರಿನಲ್ಲಿ ಕೆಲವು ಮೀನುಗಳಿಗೆ ಮೂಗುತಿ ಚುಚ್ಚಿರುವರು ಅಂತ ಕೆಲವರು ಹೇಳುತ್ತಿದ್ದರು. ಅವುಗಳು ದೇವರಿಗೆ ಬಿಟ್ಟ ಮೀನುಗಳೆಂದು ನಾವು ಭಯ ಭಕ್ತಿಯಿಂದ ನೋಡುತ್ತಿದ್ದೆವು.

ಈ ಮಸೀದಿಯ ಕೊಳ ಮತ್ತು ದೇವರ ಗುಂಡಿಗಳನ್ನು ಬಿಟ್ಟರೆ ನಾವು ಹೋಗುತ್ತಿದ್ದುದು ಹಂಸ ಎಂಬುವನ ಸೆಲೂನಿಗೆ. ಹಂಸ ಈ ಸೆಲೂನಿನ ತುಂಬ ಹಸಿರು ಬಣ್ಣ ಹೊಡೆಸಿ, ಸಿಕ್ಕಿದ ಕಡೆಗಳಲ್ಲಿ ಕನ್ನಡಿಗಳನ್ನು ಹಾಕಿಸಿ, ಉಳಿದ ಕಡೆಗಳಲ್ಲಿ ಬಣ್ಣ ಬಣ್ಣದ ಕ್ಯಾಲೆಂಡರುಗಳನ್ನೂ ಸ್ವರ್ಗ ನರಕಗಳ ಫೊಟೋ ನೇತಾಡಿಸಿಕೊಂಡು ನಮ್ಮನ್ನು ಕಾದುಕೊಂಡು ಕೂರುತ್ತಿದ್ದ. ಅವನು ನಮ್ಮನ್ನು ಕಾಯುತ್ತಿದ್ದದು ಒಂದೋ ತಲೆಬೋಳಿಸಲಿಕ್ಕೆ- ಇಲ್ಲಾ ಕಥೆ ಹೇಳಲಿಕ್ಕೆ. ಅವನು ಆ ಕನ್ನಡಿಗಳ ಅರಮನೆಯಂತಿರುವ ಬಣ್ಣ ಬಣ್ಣದ ಸಲೂನಿನಲ್ಲಿ ನಮ್ಮನ್ನು ಕೂರಿಸಿಕೊಂಡು ವಿಚಿತ್ರವಾದ ಕತೆಗಳನ್ನು ಹೇಳುತ್ತಿದ್ದ. ವಿಚಿತ್ರ ಹಿಂಸೆ ಮಾಡುತ್ತಿದ್ದ. ಅವನಿಗೆ ಎಲ್ಲ ಹುಡುಗರ ಕಥೆಗಳು ಗೊತ್ತಿತ್ತು. ಅವನು ನಮ್ಮೆಲ್ಲರನ್ನೂ ಬಾಲ್ಯದಿಂದಲೇ ಕಂಡಿದ್ದ. ಅವನ ತಾಯಿ ವಸಾತಿತಾತ ನಮ್ಮ ತಾಯಂದಿರ ಹೆರಿಗೆ ಕೆಲಸ ಮಾಡುವ ಹೆಂಗಸಾಗಿದ್ದಳು. ನಮ್ಮಲ್ಲಿ ಬಹುತೇಕ ಹುಡುಗರ ಹೊಕ್ಕುಳ ಬಳ್ಳಿಯನ್ನು ಅವಳೇ ಕತ್ತರಿಸುತ್ತಿದ್ದಳು. ನೋಡಲು ತಾಯಿಯ ಹಾಗೇ ಇರುವ ಈ ಹಂಸ ಎಂಬ ಕ್ಷೌರಿಕ ಯಾವಾಗಲೂ ತಾಯಿ ಹಾಗೇ ಬಾಯಿಯ ತುಂಬ ತಾಂಬೂಲ ತುಂಬಿಕೊಂಡು ಆಗಾಗ ಉಗುಳುತ್ತಾ ನಮಗೆ ಕಥೆ ಹೇಳುತ್ತಿದ್ದ. ಹಾಗೆ ಹೇಳಬೇಕಾದರೆ ಪುಟ್ಟ ಹುಡುಗರಾಗಿದ್ದಾಗ ನಮ್ಮ ಸುನ್ನತ್ ಎಂಬ  ಮುಂದೊಗಲನ್ನು ಕತ್ತರಿಸುವ ಮುಂಜಿ ಮದುವೆಯನ್ನು ಮಾಡಿದಾತನೂ ಈ ಹಂಸನೇ ಆಗಿದ್ದ. ಹಾಗಾಗಿ ಅವನಿಗೆ ಎಲ್ಲ ತಿಳಿದಿತ್ತು. ಅದನ್ನು ತಿಳಿದ ಅವನೂ ನಮಗೆ ಏನು ಬೇಕಾದರೂ ಹೇಳುತ್ತಿದ್ದ. ಈ ಹಂಸನಿಗೆ ಹುಡುಗರ ಹುಚ್ಚೂ ಇದೆ ಎಂದು ಬೆಳೆದು ದೊಡ್ಡವರಾದ ಹುಡುಗರು ನಮ್ಮನ್ನು ಹೆದರಿಸುತ್ತಿದ್ದರು. ಹಾಗಾಗಿ ಮಾತನಾಡಲು ಹೋಗಿ ಸಿಕ್ಕಿ ಹಾಕಿಕೊಂಡು ನಾವು ಹಂಸ ತಾಂಬೂಲ ಉಗಿಯಲು ತಲೆ ಹಾಕಿದಂತೆ ತಪ್ಪಿಸಿಕೊಂಡು ಹೊರಗೆ ಹಾರಿ ಬಿಡುತ್ತಿದ್ದೆವು.

ಈ ಹಂಸನ ಕೂದಲು ತೆಗೆಯುವ ಅಂಗಡಿ ಬಿಟ್ಟರೆ ನಾವು ಹೋಗಿ ಕೂರುತ್ತಿದ್ದುದು ಅಂದುಕಾಕನ ಹೊಗೆ ತುಂಬಿದ ಹೋಟೆಲ್ಲಿನಲ್ಲಿ. ಅಲ್ಲಿ ನಾವು ಹಾಯಾಗಿ ಕುಳಿತುಕೊಂಡಿರುತ್ತಿದ್ದೆವು ಮತ್ತು ಸರಿಯಾಗಿ ಸಂಜೆ ಐದೂವರೆಗೆ ಶುರುವಾಗುವ ರೇಡಿಯೋ ಮಾಸ್ಕೋ ಕೇಳುತ್ತಿದ್ದೆವು.200px-radio_moscow_logo.png ರೇಡಿಯೋ ಮಾಸ್ಕೋದಲ್ಲಿ ಆ ರಷ್ಯಾದ ಹೆಂಗಸು ದೇವತೆಯ ಹಾಗೆ ನಮ್ಮ ಹೆಸರುಗಳನ್ನೂ, ನಾವು ಮಾಡಿರುವ ಕಾರುಬಾರುಗಳನ್ನೂ ದೇವಲೋಕದ ಕನ್ನಡದ ಹಾಗೆ ಕೇಳಿಸುವ ಭಾಷೆಯಲ್ಲಿ ಹೇಳುತ್ತಾ ಕಷ್ಟಪಟ್ಟು ಉಸಿರಾಡುತ್ತಿದ್ದಳು. ನಾವು ಒಳಗೊಳಗೆ ನಗು ಬಂದರೂ ಹೊರಗೆ ತೋರಿಸಿಕೊಳ್ಳದೆ ಅರ್ಧಕಣ್ಣು ಮುಚ್ಚಿಕೊಂಡು ನಮ್ಮ ಹೆಸರುಗಳನ್ನು ಕೇಳಿಸಿಕೊಂಡು ಹೊರಗೆ ಬರುವ ಹೊತ್ತಿಗೆ ಸರಿಯಾಗಿ ಕತ್ತಲಾಗಿ ಬಿಡುತ್ತಿತ್ತು. ನಾವು ಮನೆ ಸೇರುತ್ತಿದ್ದೆವು.

ಸ್ವರ್ಗದ ಹಾಗೆ ಇರುವ ಸಂಪಾಜೆ ಎಂಬ ಊರಿನ ಹುಡುಗರಾದ ನಮಗೆ ಈ ರೇಡಿಯೋ ಮಾಸ್ಕೋದ ಹುಚ್ಚು ಹಿಡಿಸಿದ್ದು ನಮ್ಮಲ್ಲೇ ಹಿರಿಯನಾಗಿದ್ದ ಒಬ್ಬ ಬುದ್ಧಿವಂತ ಹುಡುಗ. ಎಷ್ಟು ಬುದ್ಧಿವಂತ ಎಂದರೆ ಆತ ಈಗ ಮಂಗಳೂರಿನಲ್ಲಿ ದೊಡ್ಡ ಡಾಕ್ಟರೇ ಆಗಿದ್ದಾನೆ. ಆತ ಹತ್ತನೇ ತರಗತಿ ಮುಗಿಸಿ ಹೋಗುವಾಗ ತಾನು ರಷ್ಯಾಕ್ಕೆ ಹೋಗಿ ದೊಡ್ಡ ಡಾಕ್ಟರಾಗಿ ಕ್ಯಾನ್ಸರ್ಗೆ ಮದ್ದು ಹುಡುಕಿಕೊಂಡು ಬರುವದಾಗಿ ಭಾಷಣ ಮಾಡಿದ್ದ. ರಷ್ಯಾ ಮತ್ತು ಕ್ಯಾನ್ಸರ್ ಎರಡೂ ಗೊತ್ತಿರದಿದ್ದ ನಮ್ಮನ್ನು ಕರೆದು, ನೀವು ಬುಧಿವಂತರಾಗಬೇಕು ಎಂದು ಹೇಳಿ ನಮಗೆ ಕೆಲವು ಗುಟ್ಟುಗಳನ್ನು ಕೆಲವು ವಸ್ತುಗಳನ್ನು ಕೊಟ್ಟು ಹೋಗಿದ್ದ. ಆಗಲೇ ನಾವು ರೇಡಿಯೋ ಮಾಸ್ಕೋದ ಸಂಗತಿ ತಿಳಿದಿದ್ದು. ಆತ ನಿಧಾನಕ್ಕೆ ಪ್ಲಾಸ್ಟಿಕ್ಕಿನ ತೊಟ್ಟೆಯೊಂದನ್ನು ಬಿಚ್ಚಿ ಅದರೊಳಗಿಂದ ಒಂದು ಮೊಹರು, ಕೆಲವು ಕಾಗದಗಳು, ಒಂದು ನೋಟು ಪುಸ್ತಕ ಹಾಗೂ ಒಂದು ವಿಳಾಸವನ್ನು ನೀಡಿದ. ಅಲ್ಲಿಯವರೆಗೆ ನಮಗೆ ಗೊತ್ತೇ ಇರದ ಒಬ್ಬ ಭಯಂಕರ ಬುದ್ಧಿಜೀವಿಯಂತೆ ಆತ ಕೆಲವು ಸಂಗತಿಗಳನ್ನು ಹೇಳಿದ. ಆತ ನಮ್ಮ ಊರಿನ ರೇಡಿಯೋ ಮಾಸ್ಕೋ ಕೇಳುಗರ ಬಳಗದ ಅಧ್ಯಕ್ಷನಾಗಿದ್ದ. ನಮಗೇ ಗೊತ್ತಿಲ್ಲದೆ ನಾವು ಆ ಬಳಗದ ಉಪಾಧ್ಯಕ್ಷರೂ, ಜಂಟಿ ಕಾರ್ಯದರ್ಶಿಗಳೂ, ಖಜಾಂಜಿಯೂ ಆಗಿದ್ದೆವು. ಆತ ನಮಗೆ ಕೊಟ್ಟ ಮೊಹರಿಗೆ ಎಂಜಲು  ಉಜ್ಜಿ ಹಸ್ತಕ್ಕೆ ಒತ್ತಿ ನೋಡಿದೆವು. ಅಲ್ಲಿ ರೇಡಿಯೋ ಮಾಸ್ಕೋ ಗೆಳೆಯರ ಬಳಗ, ಸಂಪಾಜೆ ಎಂದು ಅಕ್ಷರಗಳು ಮೂಡಿದವು. ಅಚ್ಚರಿಗೊಂಡ ನಮ್ಮನ್ನು ಆತ ಒಂದು ದಿನ ಸಂಜೆ ಹಳೆಯ ಕಾಲದ ವಾಲ್ಟ್ ರೇಡಿಯೋ ಒಂದರ ಮುಂದೆ ಕೂರಿಸಿ ಕಿವಿ ನಿಮಿರಿಸಿ ಕೇಳಲು ಹೇಳಿದ. ನಾವೆಲ್ಲರೂ ಕೇಳಿದೆವು, ರಷ್ಯಾದ ಆ ಹೆಂಗಸು ಆತನ ಹೆಸರನ್ನು ದೇವಗನ್ನಡದಲ್ಲಿ ಉಲಿಯುತ್ತಿದ್ದಳು. ಆಕೆ ಹೇಳುತ್ತಾ ಸಂಪಾಜೆಯ ಕೇಳುಗರ ಬಳಗದ ಹಾಲೀ ಅಧ್ಯಕ್ಷರು ಉನ್ನತ ಶಿಕ್ಷಣಕ್ಕಾಗಿ ಉನ್ನತವಾದ ಊರೊಂದಕ್ಕೆ ಹೋಗುತ್ತಿರುವರೆಂದೂ ಅವರಿಗೆ ಶುಭ ಹಾರೈಕೆಗಳೆಂದೂ, ಖಾಲಿ ಆಗುತ್ತಿರುವ ಆ ಸ್ಥಾನಕ್ಕೆ ಅವರಷ್ಟೇ ಸಮರ್ಥರಾದ ಇನ್ನೊಬ್ಬ ಕೇಳುಗರು ಆಯ್ಕೆಯಾದರೆಂದೂ ನಮ್ಮ ದೇವಪ್ಪ ಮಾಸ್ಟರ ಮಗ ನಾಗರಾಜನನ್ನು ಮುಂದಿನ ಅಧ್ಯಕ್ಷನೆಂದು ಹೇಳಿಯೇ ಬಿಟ್ಟಳು. ನಾವೆಲ್ಲ ಅಚ್ಚರಿಯಿಂದ ನಡುಗುತ್ತಾ ಖುಷಿಗೆ ಕಂಪಿಸುತ್ತಾ ಈ ಮಹಾ ಬುದ್ಧಿವಂತನ ಮುಖ ನೋಡುತ್ತಾ ಕಂಗಾಲಾಗಿ ಕುಳಿತೆವು. ಆ ದಿನದಿಂದ ರೇಡಿಯೋ ಮಾಸ್ಕೋದ ಆ ಹೆಂಗಸಿನ ಸ್ವರ ನಮ್ಮ ಸಂಜೆಯ ಜೊತೆ ಸೇರಿತು. ನಾವೂ ಬುದ್ಧಿವಂತರಾದೆವು.

ಎಷ್ಟು ಬುದ್ಧಿವಂತರಾದೆವು ಅಂದರೆ ನಾವು ನಮ್ಮ ಹಿರಿಯ ಬುದ್ಧಿವಂತ ಗೆಳೆಯ ಹೆತ್ತ ಆ ಕೇಳುಗರ ಬಳಗವನ್ನು ಆತನಿಗಿಂತ ಮಿಗಿಲಾಗಿ ನಡೆಸಿದೆವು. ಸಂಗತಿ ತುಂಬಾ ಸುಲಭದ್ದಾಗಿತ್ತು. ನಾವು ನಮ್ಮ ಮೊಹರನ್ನು ಉಪಯೋಗಿಸಿಕೊಂಡು ವರದಿಗಳನ್ನು ಬರೆಯುತ್ತಿದ್ದೆವು. ಆ ವರದಿಗಳಲ್ಲಿ ಮಹಾ ಸುಳ್ಳುಗಳನ್ನು- ಅತ್ಯಂತ ಸುಂದರ ಸರಳ ಸಮಂಜಸ ವಾಕ್ಯಗಳಾಗಿ ಬರೆಯುತ್ತಿದ್ದೆವು. ಆ ವರದಿಗಳಲ್ಲಿ ನಾವು ಅಂದುಕಾಕನ ಹೋಟೆಲನ್ನು ನಮ್ಮ ಕೇಂದ್ರವೆಂದು ಬರೆದೆವು. ಕೂದಲು ತೆಗೆಯುವ ಅಂಗಡಿಯ ಹಂಸ ನಮ್ಮ ಗೌರವ ಸಲಹೆಗಾರರೆಂದೂ, ಹೋಟೆಲಿನ ಅಂದುಕಾಕ ಗೌರವ ಅಧ್ಯಕ್ಷರೆಂದೂ ನಮೂದಿಸಿದ್ದೆವು. ನಮ್ಮ ಕಾರ್ಯಕಚಟುವಟಿಕೆಗಳನ್ನು ವಿವರಿಸುತ್ತಾ ನಾವು ಇಂತಹ ಸ್ಥಳದಲ್ಲಿ ರಷ್ಯಾದ ಮಹಾಕ್ರಾಂತಿಯ ಕುರಿತ ಉಪನ್ಯಾಸ ಏರ್ಪಡಿಸಿದೆವೆಂದೂ, ಇಂತಹ ಕಡೆ ರಷ್ಯಾದ ಅಂಚೆ ಚೀಟಿಗಳ ಪ್ರದರ್ಶನ ಏರ್ಪಡಿಸಿದ್ದೇವೆ ಎಂದೂ ನುಗ್ಗಿ ಬರುವ ನಗುವನ್ನು ತಡೆದುಕೊಂಡು ಬರೆದು ಕಳುಹಿಸುತ್ತಿದ್ದೆವು. ನಮ್ಮ ಪ್ರದರ್ಶನಕ್ಕೆ ರಷ್ಯಾದ ಅಂಚೆಚೀಟಿಗಳು ಬೇಕೆಂದೂ, ಜನರಿಗೆ ತೋರಿಸಲು ಸೋವಿಯತ್ ರಷ್ಯಾದ ಚಿತ್ರಪಟಗಳು ಬೇಕೆಂದೂ ಕಾರ್ಯಕಾರಿ ಮಂಡಲಿಯ ಸವರ್ಾನುಮತದ ಬೇಡಿಕೆಯನ್ನು ಬರೆದು ಅಂಚೆಗೆ ಹಾಕುತ್ತಿದ್ದೆವು. ಅದರ ಜೊತೆಗೆ ಲೆನಿನ್ನರ ಕುರಿತು ನಮಗೆ ತಿಳಿಸಬೇಕೆಂದೂ, ಅಕ್ಟೋಬರ್ ಮಹಾ ಕ್ರಾಂತಿಯ ಕುರಿತ ಪುಸ್ತಕಗಳು ಬೇಕೆಂದೂ ವಿನಂತಿಸುತ್ತಿದ್ದೆವು. ಜೊತೆಗೆ ರಷ್ಯಾ ದೇಶದ ನಮ್ಮ ಗೆಳೆಯರಿಗೆ ಪ್ರೀತಿಯಿಂದ ಭಾರತದ ಅಂಚೆ ಚೀಟಿಗಳನ್ನೂ, ಬೇಲೂರ ಶಿಲಾಬಾಲಿಕೆಯರ ಚಿತ್ರವನ್ನು, ಮೈಸೂರಿನ ಚಾಮುಂಡಿ ಬೆಟ್ಟದ ಮಹಿಷಾಸುರನ ಪಿಕ್ಚ್ರ್ ಕಾರ್ಡನ್ನು ಕಳುಹಿಸುತ್ತಿದ್ದೆವು. ದೆಹಲಿಯ ವಸಂತ್ ವಿಹಾರ್ನಲ್ಲಿರುವ ರೇಡಿಯೋ ಮಾಸ್ಕೋ ಕಛೇರಿಗೆ ನಮ್ಮ ಬಾಲ್ಯಕಾಲದ ಸುಳ್ಳುಗಳೂ ಚಿತ್ರಗಳೂ ಪತ್ರಗಳೂ ಹೋಗುತ್ತಿದ್ದವು. ಮಾಸ್ಕೋದಿಂದ ನೇರವಾಗಿ ಪ್ರೀತಿ ಪೂರ್ವಕವಾಗಿ ನಮಗೆ ಪತ್ರಗಳೂ, ಪುಸ್ತಕಗಳೂ, ಅಂಚೆ ಚೀಟಿಗಳೂ, ರಷ್ಯಾದ ಸುಂದರಿಯರ ಚಿತ್ರಪಟಗಳೂ ಬರುತ್ತಿದ್ದವು.800px-soviet_union-1961-stamp-0_10__40_years_of_soviet_stamp.jpg ನಾವು ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮತ್ತು ಖಜಾಂಚಿ ನಮ್ಮ ಬುದ್ಧಿವಂತಿಕೆಗೆ ಅನುಗುಣವಾಗಿ ಅವುಗಳನ್ನು ಹಂಚಿಕೊಳ್ಳುತ್ತಿದ್ದೆವು. ಮತ್ತು ಅಂದುಕಾಕನ ರೇಡಿಯೋದಲ್ಲಿ ನಲಿದು ಬರುವ ನಮ್ಮ ಹೆಸರುಗಳನ್ನೂ ನಮ್ಮ ಕಾರುಬಾರುಗಳನ್ನೂ ಆಲಿಸುತ್ತಾ ಆರಾಮವಾಗಿ ಮೈಮುರಿಯುತ್ತಿದ್ದೆವು. ನಾವು ಕಳುಹಿಸಿದ ಚಿತ್ರಗಳನ್ನು ಪತ್ರಗಳನ್ನು ಸ್ವೀಕರಿಸುತ್ತಿರುವ ರಷ್ಯಾದ ಆ ಹೆಂಗಸನ್ನು ಯೋಚಿಸುತ್ತಾ ಸಣ್ಣಗೆ ನಾಚುತ್ತಿದ್ದೆವು. ನಮ್ಮ ಅಂದುಕಾಕ ಮತ್ತು ಹಂಸ ಕಂಗಾಲಾಗಿ ಈ ಪುಡಿ ಹುಡುಗರ ರಷ್ಯಾ ಸಹವಾಸ ಕಂಡು ಏನೂ ಅರ್ಥವಾಗದೆ ಪಿಳಿ ಪಿಳಿ ನೋಡುತ್ತಿದ್ದರು.

ಸಂಪಾಜೆಗೆ ಆ ಹೆಸರು ಬಂದಿದ್ದು ಸಂಪಾತಿ ಎಂಬ ಪಕ್ಷಿಯಿಂದ. ರಾವಣ ಸೀತೆಯನ್ನು ಅಪಹರಿಸಿ ಪುಷ್ಪಕ ವಿಮಾನದಲ್ಲಿ ಹಾರಿಸಿಕೊಂಡು ಹೋಗುವಾಗ ಸಂಪಾತಿ ಎಂಬ ವಯೋವೃದ್ಧ ಪಕ್ಷಿಯೊಂದು ಆತನೊಡನೆ ಕಾದಾಡಿ, ರೆಕ್ಕೆ ಕತ್ತರಿಸಿಕೊಂಡು ನೆತ್ತರು ಸುರಿಸಿ ಸಂಪಾಜೆಯ ಹುಲ್ಲುಗಾವಲಿನ ನಡುವೆ ಬಿದ್ದು ತೀರಿಹೋಯಿತಂತೆ. ಈಗಲೂ ರಾತ್ರಿ ಬಸ್ಸಿನಲ್ಲಿ ತೂಕಡಿಸುತ್ತಾ ಸಂಪಾಜೆಯ ದಾರಿಯಲ್ಲಿ ಬೆಳದಿಂಗಳಲ್ಲಿ ಹೋಗಿ ಬರುವಾಗ ಈ ಸಂಪಾತಿ ಪಕ್ಷಿ ಅಲ್ಲೇ ಎಲ್ಲೋ ಬಿದ್ದಿರುವಂತೆ ಅನಿಸುತ್ತದೆ. ಅದೇ ಕಲ್ಲಾಳ ಮಲೆ, ಅದೇ ಪಯಸ್ವಿನಿ ನದಿ, ಅದೇ ಹಳೆಯ ಗಾರೆಯ ಸೇತುವೆ ಹಾಗೇ ಇದೆ. ಅಂದುಕಾಕ ಮತ್ತು ಹಂಸ ಇದ್ದಾರ ಗೊತ್ತಿಲ್ಲ. ನಮ್ಮ ದೇವಪ್ಪ ಮಾಸ್ಟರ ಮಗ ನಾಗರಾಜ ಕಾಣೆಯಾಗಿದ್ದಾನೆ, ಅಥವಾ ಇದ್ದರೂ ಇರಬಹುದು. ನನಗೆ ರೇಡಿಯೋ ಮಾಸ್ಕೋದ ಆ ಹೆಂಗಸಿನ ದೇವಕನ್ನಡ ನೆನಪಾಗುತ್ತದೆ. ಹಾಗೇ ಮಸೀದಿಯ ಕೊಳ ಮತ್ತು ದೇವರ ಗುಂಡಿಯ ಸ್ಫಟಿಕದಂತಹ ಮೀನುಗಳು.

ಈಗ ರೇಡಿಯೋ ಮಾಸ್ಕೋದಲ್ಲಿ ದೇವ ಕನ್ನಡ ಕೇಳಿಸುತ್ತಿಲ್ಲ. ರಷ್ಯಾದಲ್ಲೂ ಲಕ್ಷಾಂತರ ಕೋಟ್ಯಾಂತರ ಅಂದುಕಾಕ, ಹಂಸ ಇದ್ದಾರೆ ಅಂತ ಗೊತ್ತಾಗುತ್ತಿದೆ.ನಾವು ಬರೆದು ಕಳುಹಿಸುತ್ತಿದ್ದ ಸುಳ್ಳುಗಳ ಹಾಗೇ ಅವರೂ ನಮಗೆ ಮಾಸ್ಕೋದಿಂದ ಸುಳ್ಳು ಸುಳ್ಳು ಚಿತ್ರಗಳನ್ನೂ ಪತ್ರಗಳನ್ನೂ ಕಳುಹಿಸುತ್ತಿದ್ದರು ಅಂತ ಗೊತ್ತಾಗುತ್ತಿದೆ. ಅಲ್ಲಿನವರೆಲ್ಲಾ ಸದಾ ಕೆಂಪು ಗುಲಾಬಿ ಹಿಡಿದುಕೊಂಡು, ಸದಾ ನಗುತ್ತಾ, ಸುಂದರವಾದ ಬ್ಯಾಲೆ ನೃತ್ಯ ಮಾಡುತ್ತಾ ಅಚ್ಚುಕಟ್ಟಾದ ಕಾಖರ್ಾನೆಯಲ್ಲಿ ಶಿಸ್ತಿನಿಂದ ದುಡಿಯುತ್ತಾ ಅಲ್ಲಿನ ಮಕ್ಕಳೆಲ್ಲರೂ ಸ್ವರ್ಗದಲ್ಲಿರುವ ಮಕ್ಕಳ ಹಾಗೆ ಸದಾ ನಲಿಯುತ್ತಾ ಇರುತ್ತಿದ್ದರು ಎಂಬುದು ನಮ್ಮ ಸುಳ್ಳಿಗೆ ಅವರು ಅಲ್ಲಿಂದ ಹೇಳುತ್ತಿದ್ದ ಪ್ರತಿ ಸುಳ್ಳು ಎಂದು ಗೊತ್ತಾಗಿ ಸಮಾಧಾನವಾಗುತ್ತದೆ.ಆದರೂ ಸಂಪಾಜೆ ಎಂಬುದು ಈಗಲೂ ಹಾಗೆಯೇ ಸ್ವರ್ಗದ ಹಾಗೆಯೇ ಇದೆ ಎಂದು ಬೆಳದಿಂಗಳ ರಾತ್ರಿಗಳಲ್ಲಿ ಬಸ್ಸಿನಲ್ಲಿ ಓಡಾಡುವಾಗ ಕನಸಿನಂತೆ ಕಂಡು ಮರೆಯಾಗುತ್ತದೆ.

6 thoughts on “ಮಾಸ್ಕೋದಿಂದ ಪ್ರೀತಿ ಪೂರ್ವಕ-ಒಂದು ಬಹಳ ಹಳೆಯ ನೆನಪು

  1. ನಿಮ್ಮ ತುಂಟತನದ ಕಥೆ ಸಖತ್ತಾಗಿದೆ… ಚಿಕ್ಕಂದಿನಲ್ಲಿ ಮಧ್ಯಾಹ್ನ ರೇಡಿಯೋ ಸಿಲೋನ್, ರಾತ್ರಿ ವಿವಿಧಭಾರತಿ ಕೇಳದ ದಿನವೇ ಇರುತ್ತಿರಲಿಲ್ಲ, ಅದೆಲ್ಲ ನೆನ್ಪಾಗಿ ಬೇಜಾರಾಯ್ತು. ಈಗ ರೇಡಿಯೋ ಮೂಲೆಗೆ ಬಿದ್ದಿದೆ…

    ದೇವಕನ್ನಡ ಅಂದ್ರೆ ? ಅವಳು ದೇವತೆಗಳು ಕನ್ನಡ ಮಾತಾಡುವ ಹಾಗೆ ಮಾತಾಡ್ತಿದ್ಲಾ?

  2. ಪ್ರಿಯ ರಶೀದ್,

    ನಿಮ್ಮ ತುಂಟತನದಲ್ಲೂ ಹಂಸ ಮತ್ತು ಅಂದುಕಾಕರ ಗಲಿಬಿಲಿಯನ್ನ ಗಮನಿಸಿದ ಸೂಕ್ಷ್ಮತೆಗೆ, ದೇವಸ್ಥಾನದ ಮುಂದಿನ ಪಾಗಾರದಲ್ಲಿ ಕೂತು ಮೀನು ಕಾದ ಮುಗ್ಧತೆಗೆ,ಒಂದು ಕೆಂಪು ಗುಲಾಬಿ ಲೋಕದ ಪ್ರೀತಿಯ ರೇಡಿಯೋ ಮಾತು ಕೇಳಲು ಬರೆದ ನಿರಪಾಯ ಸುಳ್ಳುಗಳಿಗೆ, ಮತ್ತೆ ನೆನಪಿಸಿಕೊಂಡು ಬರೆದ ಸಂಪಾತಿಯ ಸಂಪಾಜೆಗೆ ಮಾರುಹೋಗಿದ್ದೇನೆ.

    ಕಂಡು ಮರೆಯಾದರೂ ಸರಿ ಕನಸಿನಲ್ಲಿ ಬರುತ್ತದಲ್ಲ, ಸಮಾಧಾನದ ವಿಷಯ ಅದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s