ಒಂದು ಶುಕ್ರವಾರದ ಬೆಳಗು

ಶುಕ್ರವಾರದ ಬೆಳಗು ಹೂವಂತೆ ಹಗುರಾಗಿದೆ.ರಾತ್ರಿ ಹಾಜರಾಗಿ ಅತ್ತು  ಹಂಗಿಸಿ ಕಿರಿಕಿರಿ ಮಾಡಿ ನಾನು ಬದುಕಿರುವುದೇ ತಪ್ಪು ಎನ್ನುವಂತೆ ಶಪಿಸಿ ನಟಿಕೆ ಮುರಿದು ಕೊನೆಗೆ ಹೋಗುವಾಗ ಕರುಣೆಯಿಂದ ಒಮ್ಮೆ ನೋಡಿ
ನಕ್ಕು ಹೋದ ಪ್ರತಿಮೆಗಳಂತಹ ಕಥಾ ಪಾತ್ರಗಳು ಈ ಬೆಳ್ಳನೆಯ ಬೆಳಗಿನಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ನಾಚಿಕೊಂಡು ಸುಮ್ಮಗಿವೆ.ನಾನಾದರೋ ಹಿಂದೆ ಎಂದೂ ಇಲ್ಲದ ಹಾಗೆ ಇಂದು ಆಹ್ಲಾದಕರವಾಗಿರಬೇಕು ಎಂದುಕೊಂಡು ಕನಸು ಕಾಣುತ್ತಿದ್ದೇನೆ.ನಖಗಳನ್ನು ಕಡಿಯುತ್ತಿದ್ದೇನೆ.waiting.jpg ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಅಲ್ಲೇ ಹೊರಳಾಡುತ್ತಾ,ಚಲಿಸುವ ಕಣ್ಣುಗಳಿಂದಲೇ ಸಮಸ್ತ ಮನೆಯನ್ನೂ, ಮಕ್ಕಳನ್ನೂ, ಆಗಾಗ ಕೊಕ್ಕರಿಸುತ್ತ ಒಳಬಂದು ಹಿಕ್ಕೆ ಹಾಕಿ ಹೋಗುವ ಕೋಳಿ ಸಂಸಾರವನ್ನೂ ಕಂಟ್ರೋಲ್ ಮಾಡುತ್ತಾ,ಟೀವಿ ನೋಡುತ್ತಾ,ರೇಡಿಯೋ ಕೇಳುತ್ತಾ,ಕನ್ನಡ ಮಲಯಾಳಂ ಪತ್ರಿಕೆಗಳನ್ನು ಓದುತ್ತಾ ಮುಂದಿನ ಪೂಜ್ಯ ಪೋಪ್ ಯಾರಾಗಬಹುದೆಂದು ಊಹಿಸಿಕೊಂಡು ಈಗಿನ ಪೂಜ್ಯ ಪೋಪ್ ನಿಜವಾಗಿಯೂ ತೀರಿ ಹೋಗುವರಾ ಎಂದು ಹೆದರಿಕೊಂಡು ಒಂದು ಕಾಲನ್ನು ಮೆಲ್ಲಗೆ ಎತ್ತಿ ಎತ್ತಲಾಗದ ಇನ್ನೊಂದು ಕಾಲಿನ ಮೇಲೆ ಮೆತ್ತಗೆ ಇಡುತ್ತಾಳೆ.

 ಈ ಬಲಗಾಲಿಗೆ ಇನ್ನೆಂದೂ ಜೀವ ಬರಲಿಕ್ಕಿಲ್ಲ ಅನ್ನಿಸುತ್ತದೆ.ತೀರ ಸಣ್ಣವಳಾಗಿದ್ದ ಸದಾ ಜೊತೆಯಲ್ಲೇ ಮಲಗುತ್ತೇನೆ ಎಂದು ಹಠ ಹಿಡಿದು ರಗಳೆ ಮಾಡುತ್ತಿದ್ದ ಮಗಳು ಈಗ ದೊಡ್ಡವಳಂತೆ ಲೋಟದಲ್ಲಿ ತಾನು ಕುಡಿಯಲಾರದೆ ಉಳಿಸಿದ್ದ ಹಾಲಿಲ್ಲದ ಕಾಪಿಯನ್ನ ಪೂರ್ತಿ ಕುಡಿದು ಮುಗಿಸುವಂತೆ ಕಣ್ಣಲ್ಲೇ ಒತ್ತಾಯಿಸಿ ಹೋಗಿದ್ದಾಳೆ.

‘ಯಾವುದನ್ನೂ ವ್ಯರ್ಥ ಮಾಡಬಾರದು’ ಎಂದು ತಾನು ಪದೇಪದೇ ಮಕ್ಕಳ ತಲೆ ತಿಂದದ್ದರ ಫಲ ಎಂದು ಮನಸಲ್ಲೆ ನಗುತ್ತಾಳೆ.ದೂರ ದೂರ ಎಲ್ಲೋ ಇರುವ ಅಪ್ಪಚ್ಚಿ ಎಂಬ ತಂದೆಯನ್ನೂ ಅಮ್ಮಚ್ಚಿ ಎಂಬ ತಾಯಿಯನ್ನೂ ನಾಲ್ಕು  ಜನ ಅಕ್ಕಂದಿರನ್ನೂ ಐದು ಮಂದಿ ಅಣ್ಣಂದಿರನ್ನೂ ದುಬಾಯಿ ಯಲ್ಲಿರುವ ಗಂಡನನ್ನೂ ಜೋರಾಗಿ ಕಿರುಚಿ ಕರೆಯಬೇಕು ಅನ್ನಿಸುತ್ತದೆ.ನಗುಬರುತ್ತದೆ.ಮಗ ಜೋಯಿ ಕರಾಟೆ ಪಟುವಿನಂತೆ ಮನೆಯಿಡೀ ಓಡಾಡುತ್ತಿದ್ದಾನೆ.ಅವನಿಗೆ ಜಿಲ್ಲಾ ಮಟ್ಟದಲ್ಲಿ ಕರಾಟೆ ಚಾಂಪಿಯನ್ ಆಗಬೇಕೆಂಬ ಆಸೆ. ಹನ್ನೆರಡರ ಈ ಸಣ್ಣ ವಯಸ್ಸಿನಲ್ಲೇ ದಾಂಡಿಗನಂತೆ ಬೆಳೆದಿದ್ದಾನೆ.ಮುಖ ಮಾತ್ರ ಮಗುವಿನಂತೆಯೇ ಮುದ್ದಾಗಿದೆ.

 ದೊಡ್ಡ ಅಣ್ಣನಾಗಿದ್ದ ಈಗ ಈ ಧರ್ಮಪ್ರಾಂತದ ಬಿಷಪ್ ಆಗಿರುವ  ಇಕ್ಕಿ ಚೇಟಾಯಿ ಈಗ ರೋಮ್ ತಲುಪಿರ ಬಹುದು ಅನಿಸುತ್ತಿದೆ.ಬಜಪೆ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಮೊದಲು ಕಾಲು ಅಲುಗಿಸಲಾಗದೆ ಮಲಗಿರುವ ತನ್ನನ್ನು ನೋಡಲು ಬಂದ ಬಿಷಪ್ ಅಣ್ಣ ಈ ಸಾರಿ ಪೂಜ್ಯ ಪೋಪ್ ಮಾರ್ ಪಾಪ ಬಹುತೇಕ ಉಳಿಯಲಿಕ್ಕಿಲ್ಲ ಅಂದಿದ್ದರು. ಮಾರ್ಚ್ ಕೊನೆಯ ಉರಿ ಮದ್ಯಾಹ್ನದ ಹೊತ್ತು. ಯಾರೂ ಇರಲಿಲ್ಲ,ಅಷ್ಟು ಬಿಸಿಲು ಬಿಟ್ಟರೆ. ಎಂದಿನಂತೆ ವಯಸ್ಸಾದ ಮುದಿ ಹೇಂಟೆ ತನ್ನ ಹತ್ತಿಪ್ಪತ್ತು ಮಕ್ಕಳು ಪಿಳ್ಳೆಗಳೊಡನೆ ಮನೆಯಿಡೀ ಸಂಚರಿಸುತ್ತ ಗಲೀಜು ಮಾಡುತ್ತ ಯಾವುದೇ ಹಂಗಿಲ್ಲದೆ ಓಡಾಡುತ್ತಿತ್ತು.ಅಣ್ಣ ಬಿಷಪ್ ಬಂದರೆ ಎದ್ದು ಕೂರಲೂ ಆಗಲಿಲ್ಲ.ಅವರು ಬಂದವರೇ ಪತ್ರಿಕೆಗಳಿಂದ ತುಂಬಿದ್ದ ಕುರ್ಚಿಯನ್ನು ಖಾಲಿ ಮಾಡಿಸಿ ಕುಳಿತು ಮಾತನಾಡಿ ಆಮೇಲೆ ಎದ್ದು ತಲೆಯ ಹತ್ತಿರ ನಿಂತು ತನಗಾಗಿ ಪ್ರಾರ್ಥಿಸಿದ್ದರು. ಸ್ವತಃ ಬಿಷಪ್ ಮನೆಗೆ ಬಂದು ತನಗಾಗಿ ಪ್ರಾರ್ಥಿಸುವುದನ್ನು ನೆನೆದು ಅಳು ಬಂದಿತ್ತು.ತಕ್ಷಣ ಅಣ್ಣನಲ್ಲವೇ ಎಂದು ಅರಿವಾಗಿ ಪ್ರೀತಿ ಉಕ್ಕಿ ಬಂದಿತ್ತು.ಅಣ್ಣ ಸಣ್ಣವನಾಗಿರುವಾಗ ಮಗ ಜೋಯಿಯ ಹಾಗೇ ಇದ್ದ ಅಂತ ಎಲ್ಲರಿಗೂ ಅನ್ನಿಸುವ ಹಾಗೆ ತನಗೂ ಒಮ್ಮೊಮ್ಮೆ ಅನ್ನಿಸುತ್ತದೆ.

 ಅಣ್ಣ ಶಾಲೆಬಿಟ್ಟು ನೆಲ್ಯಾಡಿಯ ಚಡಾವು ಹತ್ತಿ ಮನೆಗೆ ಬರುವಾಗ ನಾಲ್ಕನೇ ತಿರುವು ಕಳೆದು ಐದನೇ ತಿರುವು ಹತ್ತುವ ಮೊದಲು ದಾರಿ ಬದಿಯಲ್ಲಿ ಉರುಳಿ ಬೀಳುವಂತೆ ನಿಂತಿದ್ದ ಕಲ್ಲು ಹತ್ತಿ ಕೆಳಗೆ ಬೆಳೆದಿದ್ದ ಕಮ್ಯೂನಿಸ್ಟ್ ಗಿಡಗಳ ಮೇಲೆ ಮೂತ್ರ ಮಾಡುತ್ತಿದ್ದುದು!.ಒಂದು ದಿನವೂ ಬಿಡದೆ ಅಲ್ಲೇ ಮೂತ್ರ ಮಾಡುತ್ತಿದ್ದುದು!ಯಾವಾಗಲೂ ಒಳ್ಳೆಯವನಾಗಿ, ಎಲ್ಲರಿಗೂ ಉಪಕಾರ ಮಾಡುತ್ತಾ,ಹಿತವಚನ ಹೇಳುತ್ತಾ,ಒಂದುದಿನವೂ ಜಗಳವಾಡದೆ ಇದ್ದ ಅಣ್ಣ ಸೆಮಿನರಿ ಸೇರಿ ಪಾದ್ರಿಯಾಗಿ  ಥಿಯಾಲಜಿ ಓದಿ ದೊಡ್ಡಪಂಡಿತನಾಗಿ ಕೊನೆಗೆ ಈ ದರ್ಮಪ್ರಾಂತದ ಬಿಷಪ್ ಆಗಿ!

ಈಗಲೂ ತಾನು  ವಯಸ್ಸಾದ ಅಪ್ಪಚ್ಚಿ ಅಮ್ಮಚ್ಚಿ ಯರನ್ನು ನೋಡಲು ನೆಲ್ಯಾಡಿಯಲ್ಲಿ ಬಸ್ಸು ಹಿಡಿದು ಜೀಪು ಹತ್ತಿ ಹೋಗುವಾಗ ನಾಲ್ಕನೇ ತಿರುವು ಕಳೆದು ಐದನೇ ತಿರುವು ಹತ್ತುವ ಮೊದಲು ದಾರಿ ಬದಿಯಲ್ಲಿ ಇನ್ನೂ ಹಾಗೇ ಉರುಳಿ ಬೀಳದೇ ಇರುವ ಕಲ್ಲು!

 ತಾನು ಮಕ್ಕಳಿಗೆ ಅದು ಬಿಷಪ್ ಮೂತ್ರ ಮಾಡುತ್ತಿದ್ದ ಕಲ್ಲು ಎಂದು ವಿವರಿಸಿ ಹೇಳುವುದು. ಅವರು ಕಣ್ಣರಳಿಸಿ ನೋಡುವುದು.ಇದು ಬಾಯಿಂದ ಬಾಯಿಗೆ ಹಬ್ಬಿ ತನ್ನ ಉಳಿದ ನಾಲ್ಕು ಅಣ್ಣಂದಿರ ಮಕ್ಕಳು, ಐದು ಅಕ್ಕಂದಿರ ಮಕ್ಕಳು,ಅವರ ಮಕ್ಕಳು- ಹೀಗೆ ಒಂದು ಮನೆತನವೇ ಆ ಕಲ್ಲನ್ನು ಒಂದು ರೀತಿಯ ಪ್ರೀತಿ ಬೆರೆತ ಗೌರವದಿಂದ ಆ ಕಲ್ಲನ್ನು ಕಾಣುವುದು.

 ಅವಳು ಜೀವವಿದ್ದ ಕಾಲನ್ನು ಮಡಚಿ ಕೂತು ಟೀವಿ ಶುರು ಮಾಡಿದಳು. ಟೀವಿ ಯಲ್ಲಿ ವ್ಯಾಟಿಕನ್ ನಗರವನ್ನು ತೋರಿಸುತ್ತಿದ್ದರು.ಇಡೀ ನಗರವೇ ಒಂದು ದೊಡ್ಡ ಇಗರ್ಜಿಯಂತೆ ಕಾಣಿಸುತ್ತಿತ್ತು.ಎಲ್ಲರೂ ಬಿಷಪ್ ಅಣ್ಣನಂತೆ ಕಾಣಿಸುತ್ತಿದ್ದರು.ಪೂಜ್ಯ ಪೋಪ್ ಕರ್ತಾರನ ಸನಿಹವಾಗಿದ್ದಾರೆ ಎಂದು ಮಾತ್ರ ಪ್ರಕಟಿಸುತ್ತಿದ್ದಾರೆ.ತುಂಬ ವರ್ಷಗಳ ಹಿಂದೆ ಇದೇ ಪೂಜ್ಯ ಪೋಪ್ ಮಂಗಳೂರಿಗೆ ಬಂದಿದ್ದಾಗ ಕೊನೆಯ ಅಣ್ಣನ ಬೆನ್ನ ಮೇಲೆ ಹತ್ತಿ ಅವರನ್ನು ನೋಡಿದ್ದು ನೆನಪಾಗುತ್ತಿದೆ.

  ದುಬಾಯಿಯಲ್ಲಿರುವ ಗಂಡ ತನ್ನ ಯೋಚನೆ ಗಳನ್ನೆಲ್ಲ ಓದುತ್ತಿರುವವನಂತೆ ಅಟ್ಟಹಾಸದಲ್ಲಿ ನಗುತ್ತಿರಬಹುದು ಅನ್ನಿಸುತ್ತದೆ . ಪ್ರೀತಿಸುವುದು,ಸಂಪಾದಿಸುವುದು ಮತ್ತು ಸದಾ ಅಟ್ಟಹಾಸದಲ್ಲಿ ನಗುವುದು ಇಷ್ಟು ಬಿಟ್ಟು ಬೇರೇನೂ ಗೊತ್ತಿಲ್ಲದ ಸುಂದರ ಪುರುಷ . ಅವಳಿಗೆ ಮೈಯಿಡೀ ಮಿಂಚು ಹರಿದಂತಾಗುತ್ತದೆ.ಎರಡು ತಿಂಗಳಿಗೊಮ್ಮೆ ಬಂದು ಎರಡು ವರ್ಷಕ್ಕಾಗುವಷ್ಟು ಸುಖ ಕೊಟ್ಟು ಹೋಗತ್ತಾನೆ.ಬದುಕಿರುವುದೇ ಮೈಥುನಕ್ಕಾಗಿ ಅನ್ನುವ ಹಾಗೆ ಆಡುತಾನ್ತೆ.ಈಗ ಒಂದು ಕಾಲಿಗೆ ಜೀವವಿಲ್ಲದೆ ಮಲಗಿರುವೆ ಎಂದರೆ ಒಂದು ಕಾಲಿನಲ್ಲೇ ಏನೆಲ್ಲಾ ಸರ್ಕಸ್ ಮಾಡಬಹುದು ಎಂದು  ಅಟ್ಟಹಾಸ ದಲ್ಲಿ ನಗುತ್ತಾನೆ. ದೇವರು,ಧರ್ಮ ಒಂದೂ ಬೇಡದ, ನಿಂತಲ್ಲಿ ಒಂದು ನಿಮಿಷವೂ ನಿಲ್ಲದ ಮೀನಿನಂತ ಗಂಡಸು .ರಾತ್ರಿಯಿಡೀ ದುಬಾಯಿ ಯಿಂದ ಫೋನ್ ಹಚ್ಚಿ ಮಾತನಾಡುತ್ತಾನೆ. ‘ಇನ್ನು ಎರಡು ತಿಂಗಳಲ್ಲಿ ಅಲ್ಲಿರುತ್ತೇನೆ’ ಅನ್ನುತ್ತಾನೆ…
**********

 ಇದು ನಾನು ಈ ವತ್ತು ಬರೆಯಬೇಕೆಂದಿದ್ದ ಕತೆ. ಈ ಕತೆಯ ನಾಯಕಿ  ಹೈಸ್ಕೂಲು ಓದುತ್ತಿದ್ದಾಗ ನನ್ನ ಪಕ್ಕದ ಡೆಸ್ಕ್ ನಲ್ಲಿ ಕೂರುತ್ತಿದ್ದ ಮಲಯಾಳಿ ಹುಡುಗಿ.ಆಗ ಆಕೆ ಮಲಯಾಳಿ ಅಂತ ಗೊತ್ತಿರಲಿಲ್ಲ.ಯಾಕೆಂದರೆ ನಾವೆಲ್ಲಾ ತುಳುವಿನಲ್ಲಿ ಮಾತನಾಡುತ್ತಿದ್ದೆವು.ನಾನು ಕ್ಲಾಸ್ ಮಾನಿಟರ್ ಆಗಿದ್ದೆ. ನಮ್ಮ ಕನ್ನಡ ಪಂಡಿತರು ಗಲಾಟೆ ಮಾಡಿದವರ ಹೆಸರನ್ನು ಬೋರ್ಡ್ ನಲ್ಲಿ ಬರೆಯಲು ಹೇಳಿ ಸೊಸೈಟಿಯಿಂದ ಸಕ್ಕರೆ ತರಲು ಹೋಗಿದ್ದರು.

ಯಾರೋ ಹುಡುಗರು ಈ ಹುಡುಗಿ ಯಾವಾಗಲೂ ನಿನ್ನನ್ನೇ ನೋಡುತ್ತಾಳೆ,ಅವಳಿಗೆ ನೀನು ಬೇಕಂತೆ ಎಂದು ಸುಳ್ಳು ಸುದ್ದಿ ಹೇಳಿದ್ದರು. ನನಗೆ ಅಷ್ಟು ಸಣ್ಣ ವಯಸ್ಸಲ್ಲಿ ಹೇಗೆ ಮನೆ ಬಿಟ್ಟು ಇವಳ ಜೊತೆ ಓಡಿ ಹೋಗವುದು ಎಂದು ಹೆದರಿಕೆಯಾಗಿತ್ತು. ಆ ಅವಘಡ ದಿಂದ ತಪ್ಪಿಸಿಕೊಳ್ಳಲು ಮಾತೇ ಆಡದೆ ಮೌನವಾಗಿದ್ದ ಇವಳ ಹೆಸರನ್ನು ಬೋರ್ಡಿನಲ್ಲಿ ಬರೆದಿದ್ದೆ.ಕನ್ನಡ ಪಂಡಿತರು ಮುಗ್ಧಳಾದ ಆಕೆಯ ಮೃದುವಾದ ಅಂಗೈಗಳಿಗೆ ಬೆತ್ತದಲ್ಲಿ ಹೊಡೆದಿದ್ದರು.

ಅಂದಿನಿಂದ ನನ್ನೊಡನೆ ಮಾತು ಬಿಟ್ಟಿದ್ದ ಆಕೆ ಸುಮಾರು ಹದಿನೈದು ವರ್ಷಗಳ ನಂತರ ಮಂಗಳೂರಿನ ಹಂಪನಕಟ್ಟೆಯ  ಸಿಗ್ನಲ್ ಕಾಯುತ್ತಿದ್ದಾಗ ಸಿಕ್ಕಿದ್ದಳು.ಇಬ್ಬರೂ ನಕ್ಕಿದ್ದೆವು.ಅವಳು ಮಗನಿಗೆ ಗಡ್ ಬಡ್ ತಿನ್ನಿಸಲು ಬಂದಿದ್ದಳು. ಕರಾಟೆ ಕ್ಲಾಸ್ ಮುಗಿದ ಮೇಲೆ ಗಡ್ ಬಡ್ ತಿನ್ನದಿದ್ದರೆ ತಂಗಿಗೆ ಕಿಕ್ ಮಾಡ್ತಾನೆ ಅಂದಿದ್ದಳು. ಆವತ್ತು ಅವನಿಗೆ ನಾನು ಗಡ್‌ಬಡ್ ಕೊಡಿಸಿದ್ದೆ

 ಅವಳಿಗೆ ಈಗಲೂ ನನ್ನ ಮೇಲೆ ಸುಮ್ಮನೇ ಹೆಸರು ಬರೆದಿದ್ದಕ್ಕೆ ಸಿಟ್ಟಿದೆ.ಅವಳ ಹಾಗೆಯೇ ಕ್ಯಾಥೋಲಿಕ್ ಮಲಯಾಳಿ ಯಾಗಿರುವ ನನ್ನ ಹೆಂಡತಿಯೊಡನೆ ಗಂಟೆಗಟ್ಟಲೆ ಫೋನ್ ನಲ್ಲಿ ಹರಟುತ್ತಾಳೆ.ಇಬ್ಬರೂ ವಿನಾಕಾರಣ ಪಿಸುಗುಟ್ಟುತ್ತಿರುತ್ತಾರೆ.ಹೆಂಗಸರ ರಹಸಗಳು ಎನ್ನುತ್ತಾರೆ.ನಾನು ಸುಮ್ಮಗಿರುತ್ತೇನೆ.

 ಈವತ್ತು ಕಥೆ ಬರೆಯಲು ಹೊರಟವನು ನಿಜವನ್ನೂ ಬರೆಯದೆ ಕಥೆಯನ್ನೂ ಬರೆಯದೆ ನಿಟ್ಟುಸಿರಿಡುತ್ತಿದ್ದೇನೆ.

Advertisements