ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು

 

 ಸಂಜೆ ಉರಿ ಬಿಸಿಲ ಲ್ಲಿ ನಿದ್ದೆ ಅರ್ದಕ್ಕೆ ಬಿಟ್ಟು ಮಕ್ಕಳಿಗೆ ಮುಸಂಬಿ ಸುಲಿಯತ್ತ ಕೂತಿದ್ದೆ 

 ಬೆವರು,ಸಂಕಟ,ಕನಸು,ಎಚ್ಚರ,ನಿದ್ದೆ.  ಉಸ್ತಾದ್  ಅಮೀರ್ ಖಾನ್ ಎಂದಿನಂತೆ ‘ಪಿಯಾ ಪರದೇಶಿ ಪರಮಸುಖ ಚತುರ’ಎಂದು ಮತ್ತೆ ಮತ್ತೆ ಹಾಡುವಂತೆ ಹಾಡನ್ನ ಲೂಪ್ ಮಾಡಿಕೊಂಡಿದ್ದೆ. ನಾವು ಪರದೇಶಿಗಳಾದ ಗೆಳೆಯರು ಸುಖ ಸಂಕಟದ ಹೊತ್ತಲ್ಲಿಮತ್ತೆ ಮತ್ತೆ ಕೇಳುವ ಹಾಡು ಅದು. ಶಾಶ್ತ್ರೀಯವಾಗಿ ಕೇಳುವುದಾದರೆ ಬೆಳಗಿನ ಕೊನೆಯ ಜಾವದಲ್ಲಿ ಕೇಳಬೇಕಾದ ಹಾಡದು. ಪರದೇಶಿಗಳಾದ ಪರಮಸುಖಚತುರರು ಯಾವ ಜಾವದಲ್ಲಾದರೂ ಕೇಳಬಹುದು ಅನ್ನುವಂತೆ ಉಸ್ತಾದ್ ಅಮೀರ್ ಖಾನ್ ಹಾಡುತ್ತಿದ್ದರು. ಮಕ್ಕಳು ಆಸೆಯಿಂದ ಸುಲಿಯುತ್ತಿರುವ ಮುಸಂಬಿಯನ್ನು ನೋಡುತ್ತಿದ್ದರು. ಆ ಉರಿಬಿಸಿಲಿನ ಸುಖಸಂಕಟದ ಹಾಡಿನ ನಡುವೆಯೂ ಮುಸಂಬಿ ಸುಲಿಯವ ಸದ್ದು ಕೇಳಿಸುತ್ತಿತ್ತು.ಒಂದು ಅನಿರ್ವಚನೀಯ ಸದ್ದು. ಇದುವರೆಗೆ ಯಾರೂ ಎಲ್ಲೂ ಕೇಳಿರದ ಶೋಷಣೆಯೊಂದರ ಸದ್ದು. ಯಾವುದನ್ನು ತಿನ್ನಬಹುದು ಯಾವುದನ್ನು ತಿನ್ನಬಾರದು ಎಂದು ಮಕ್ಕಳಿಗೆ ಮದ್ಯಾಹ್ನ ಕಥೆ ಹೇಳಿ ಮಲಗಿಸಲು ನೋಡಿದ್ದೆವು.ಕಟ್ಟಾ ಮುಸಲ್ಮಾನಳಾದ ನನ್ನ ಅಕ್ಕ ಮುಸಲ್ಮಾನರ ಪ್ರಕಾರ ಯಾವುದೆಲ್ಲಾ ಅನುಮತಿಸಲ್ಪಟ್ಟ ಆಹಾರ ಯಾವುದೆಲ್ಲಾ ನಿಷೇಧಿಸಲ್ಪಟ್ಟ ಆಹಾರ ಎಂದು ಹೇಳಿದ್ದರೆ, ಅಧರ್ಮೀಯರಾದ ನಾನು ಮತ್ತು ನನ್ನ ಹೆಂಡತಿ  ಯಾವ ಮಾಂಸಕ್ಕೆ ಏನು ರುಚಿಯಿರುತ್ತದೆ-ಯಾವ ಮೀನಿಗೆ ಎಂತಹ ಮುಳ್ಳಿರುತ್ತದೆ ಯಾವ ತರಕಾರಿಯಲ್ಲಿ ಯಾವ ಹಣ್ಣಿನಲ್ಲಿ ಎಂತೆಂತಹ ಗುಣಗಳಿರುತ್ತವೆ ಎಂದು ಪೆದ್ದು ಪೆದ್ದಾಗಿ ವಿವರಿಸಿ ಸೋತು ಹೋಗಿದ್ದೆವು.ಏನೇ ಆದರೂ ನವಿಲನ್ನೂ ಜಿಂಕೆಯನ್ನೂ ಮೊಲವನ್ನೂ ಅಳಿಲನ್ನೂ ತಿನ್ನಬಾರದೆಂದೂ,ಯಾವುದೇ ಕಾರಣಕ್ಕೂ ಹುಲಿಯನ್ನೂ ಸಿಂಹವನ್ನೂ ನರಿಯನ್ನೂ ರಾಕ್ಷಸರನ್ನೂ ತಿನ್ನದೇ ಇರಬಾರದೆಂದೂ  ಮಕ್ಕಳು ನಮಗೇ ಬುದ್ಧಿಮಾತು ಹೇಳಿ ಮಲಗಿದ್ದರು.ಎದ್ದು ಮುಸಂಬಿ ಸುಲಿಯಲು ಕೂತರೆ ಅದೂ ಸದ್ದುಮಾಡಲು ತೊಡಗಿ ಇದನ್ನು ಹೇಗೆ ತಿನ್ನಿಸುವುದು ಎಂದು  ಸಂಕಟ ಶುರುವಾಯಿತು.

ಈ ಮಕ್ಕಳನ್ನು ಒಮ್ಮೆ ಮೈಸೂರಿನ ಖ್ಯಾತ ಕುರಿಮಾಂಸದ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ ಅವರಿಂದ ಸಿಕ್ಕಾಪಟ್ಟೆ ಬಯ್ಯಿಸಿಕೊಂಡಿದ್ದೆ. ಇಡೀ ನಗರದಲ್ಲೇ ಯಾವುದೇ ಮೋಸವಿಲ್ಲದ ಅತ್ಯಂತ ತಾಜಾ ಮಾಂಸ ಸಿಗುವ ಕುರಿಮಾಂಸದಂಗಡಿ ಎಂದು ಹೆಸರುವಾಸಿಯಾಗಿರುವ ಈ ಅಂಗಡಿಯಲ್ಲಿ ಚರ್ಮಸುಲಿದು ತಲೆಯಿಲ್ಲದೆ ತೂಗುತ್ತಿದ್ದ ಕುರಿಯೊಂದರ ಮೀನಖಂಡದ ಸ್ನಾಯು ಸತ್ತು ಅಷ್ಟು ಹೊತ್ತಾ ಗಿದ್ದರೂ ಇನ್ನೂ ಮಿಡಿಯುತ್ತಿತ್ತು.ಅಂಗಡಿಯ ಮಾಲಕ  ಹೆಮ್ಮೆಯಿಂದ ಅದೇ ಖಂಡದಿಂದ ಒಂದು ಕೆ.ಜಿ.ಕತ್ತರಿಸಿ ‘ಯಾವಾಗ್ಲೂ ಇಲ್ಲೇ ಬನ್ನಿ ಸಾರ್’ಎಂದು ಕೈಗಿಟ್ಟು ಮಕ್ಕಳ ಕೆನ್ನೆ ಮುಟ್ಟಿ  ನಕ್ಕಿದ್ದ.

ದಾರಿಯುದ್ದಕ್ಕೂ ನಾನು ಮಕ್ಕಳಿಗೆ ಅದು ರಾಕ್ಷಸ ಕುರಿಯೆಂದೂ ಚಿಕ್ಕ ಮಕ್ಕಳನ್ನು ಕೊಂಬಿನಿಂದ ತಿವಿಯುತ್ತಿತ್ತೆಂದೂ ಹಾಗಾಗಿ ಆ ಸ್ವಾಮಿ ಪರಮಾತ್ಮ ಅಲ್ಲಾ ಯೇಸುಸ್ವಾಮಿ ಎಲ್ಲರೂ ಸೇರಿ ಆ ರಾಕ್ಷಸ ಕುರಿಯನ್ನು ತಲೆಕಡಿದು ಕೊಂದರೆಂದೂ ಅದಕ್ಕೆ ಹಾಗೇ ಆಗಬೇಕೆಂದೂ ಸುಳ್ಳು ಕಥೆ ಹೇಳಿದ್ದೆ.ಯಾವ ಕಥೆ ಹೇಳಿದರೂ ನಂಬದ ಮಕ್ಕಳು ಅಂದಿನಿಂದ ಇದುವರೆಗೂ ಮಾಂಸವನ್ನೇ ತಿಂದಿರಲಿಲ್ಲ. 

 ನಾನಾದರೋ ಬಾಲ್ಯದಲ್ಲಿ ಆಡು ಕೋಳಿ ಮೊಲ ಹಾವುಮೀನು ಕಾಡುಕೋಣ ಕಾಡಾಡು ಬಾತುಕೋಳಿ ಊರು ಕೋಣ
ಯೌವನದಲ್ಲಿ ಊರುಹಂದಿ ಕಾಡುಹಂದಿ ಮುಳ್ಳುಹಂದಿ ಕೆಂಪಿರುವೆ ಆಮೇಲೆ ಷಿಲ್ಲಾಂಗ್ ನಲ್ಲಿರುವಾಗ ನಾಯಿಮಾಂಸ ತಿನ್ನುತ್ತಿದ್ದವನ ಪಕ್ಕದಲ್ಲಿ ಕೂತು ಊಟ ಮಾಡಿದ್ದೆ.ಊರು ಹಂದಿಯ ಕರುಳು ಮತ್ತು ಮಿದುಳನ್ನ ಪಲ್ಯ ಮಾಡಿ ಅನ್ನದಜೊತೆ ಬೆರೆಸಿ ತಿನ್ನುತ್ತಿದ್ದವನ ಜೊತೆ ಭತ್ತದ ಬಿಯರ್ ಕುಡಿದಿದ್ದೆ. ಮತ್ತೆ ಹಿಂದೊಮ್ಮ ಸ್ವೀಡನ್ ದೇಶದ ಕಾಡಿನ ನಡುವಿನ ಹಳ್ಳಿಯ ಇನ್ ಒಂದರಲ್ಲಿ ಮೂಸ್ ಎಂಬ ಮೃಗದ ಮಾಂಸವನ್ನು ಬ್ರೆಡ್ ತುಂಡಿನಂತೆ ಕತ್ತರಿಸಿ ಕೊಟ್ಟಿದ್ದರು.ಮೊನ್ನೆ ಮೊನ್ನೆ ಐರ್ಲೆಂಡಿನ ಒಂದು ಊರಿನಲ್ಲಿ ಸ್ವದೇಶಿ ಆಹಾರ ಬೇಕು ಎಂದು ಕೇಳಿದಾಗ ಹಂದಿಯ ರಕ್ತವನ್ನ ಹೆಪ್ಪುಗಟ್ಟಿಸಿ ಬೇಯಿಸಿ ಕತ್ತರಿಸಿ ಆಲುಗಡ್ಡೆಯಜೊತೆ ತೆಂಗಿನಕಾಯಿಯ ಹಾಲಿನಲ್ಲಿ ಕುದಿಸಿಕೊಟ್ಟಿದ್ದರು. ಅದು ತಿನ್ನುತ್ತಿರುವಾಗ ಜನ್ಮ ಜನ್ಮಾಂತರದ ನೆನಪುಗಳು ಸಂಸ್ಕಾರ ಎಲ್ಲ ನೆನಪಾಗಿ ನರಕದ ಬೆಂಕಿಯಲ್ಲಿ ಬೆಂದು ಬಂದಿದ್ದೆ.ನಾನು ಕೋಣದ ಮಾಂಸ ತಿಂದಿರುವುದು ಗೊತ್ತಾದರೆ ಹಿಂಧುಗಳಾದ ನನ್ನ ಪ್ರಾಣದ ಗೆಳೆಯ ಗೆಳತಿಯರು ಹೇಗೆ ನನ್ನನ್ನು ಬಹಿಷ್ಕರಿಸಬಹುದೆಂದೂ, ಹಂದಿಯ ಮಾಂಸ ತಿಂದಿರುವುದು ಗೊತ್ತಾದರೆ ಮುಸಲ್ಮಾನರಾಗಿರುವ ನನ್ನ ನೆಂಟರು ಇಷ್ಟರು ಹೇಗೆ ನನ್ನನ್ನು ನರಕದ ಅಗ್ನಿಗೆ ದೂಡಬಹುದೆಂದೂ ನಾನು ಒಮ್ಮೊಮ್ಮೆ ನಿದ್ದೆಯಲ್ಲೂ ಬೆವರಿ ಎದ್ದು ಬಿಡುತ್ತಿದ್ದೆ.

ಈಗ ನೋಡಿದರೆ ಅದೆಲ್ಲಕ್ಕಿಂತಲೂ ಗಂಭೀರವಾಗಿ ನಾನು ಸುಲಿಯುತ್ತಿರುವ ಮುಸಂಬಿಯೂ ಸದ್ದುಮಾಡುತ್ತ ನನ್ನನ್ನು ಸಂಕಟಕ್ಕೆ ದೂಡುತ್ತಿತ್ತು.ಭಗವಂತನ ದಯೆಯಿಂದ ಆ ಸದ್ದು ಮಕ್ಕಳಿಗೆ ಕೇಳಿಸುತ್ತಿರಲ್ಲಿಲ್ಲ.ಕೇಳಿಸಿದ್ದರೆ ನಾನು ಅವರಿಗೆ ಮುಸಂಬಿ ಎಂಬ ರಾಕ್ಷಸನ ಕಥೆ ಹೇಳಬೇಕಿತ್ತು.ಹಾಗಾಗಿ ಆ ಸದ್ದನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಮುಸಂಬಿಯನ್ನು ನಿರ್ಧಯವಾಗಿ ಸುಲಿದು ಮಕ್ಕಳ ಬಾಯಿಗಿಡುತ್ತಿದ್ದೆ.

  ಅಷ್ಟು ಹೊತ್ತಿಗೆ ಬೆಂಗಳೂರಿನ ಗೆಳೆಯ ಕಳವಳದಲ್ಲಿ ಫೋನ್ ಮಾಡಿ ‘  ವಿಷಯ ಗೊತ್ತಾಯ್ತಾ, ಏನಾದ್ರೂ ಮಾಡಬೇಕಲ್ಲಾ..’ಎಂದು ತುಂಬ ಕಳವಳದಲ್ಲಿ ಮಾತನಾಡತೊಡಗಿದ. ನನಗೆ ಬೆಳಗೆಯಿಂದಲೇ ಗೊತ್ತಿದ್ದರೂ ಅರಿತಿಲ್ಲವೆಂಬಂತೆ ಬಿಡು ಮಾರಾಯ ಈ ಕನ್ನಡ ನಾಡಲ್ಲಿ ಕ್ರಾಂತಿಯಾಗೋದಿಲ್ಲ’ಎಂದು ಛೇಡಿಸತೊಡಗಿದೆ.`ಬಿಡಿ ಅಣ್ಣ ನಿಮಗೆ ಯಾವಾಗಲೂ ತಮಾಷೆ.ತಮಾಷೆ ಬಿಟ್ಟು ಏನಾದ್ರೂ ಮಾಡಬೇಕಲ್ಲಾ..’ಎಂದು ಗೆಳೆಯ ಕಳಕಳಿಯಿಂದ ಅನ್ನುತ್ತಿದ್ದ.

 “ಏನು ಮಾಡುವುದು . ನಾವೂ ಬೆತ್ತಲೆಯಾಗಿ ಕೂತು ಬೆತ್ತಲೆ ಮಾಡಿದ ಧರ್ಮಾಂಧರ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆ ಮಾಡೋಣ. ನನ್ನ ಕಡೆಯಿಂದ ಇಷ್ಟು ಜನ” ಅಂತ ಇಂತಿಂತವರ ಹೆಸರು ಹೇಳಿದೆ.ಬೆಂಗಳೂರಿಂದ ಯಾರೆಲ್ಲ ಅಂತ ಲೆಕ್ಕ ಹಾಕಲು ತೊಡಗಿದೆವು.ಯಾರೆಲ್ಲ ಸಕ್ರಿಯವಾಗಿ ಬೆತ್ತಲೆ ಕೂರಬಹುದು, ಯಾರೆಲ್ಲ ಹೊರಗಿನಿಂದ ನೈತಿಕ ಬೆಂಬಲ ನೀಡಬಹುದು ಎಂದೆಲ್ಲ ಲೆಕ್ಕ ಹಾಕುತ್ತ ನಮಗೆ ವಿಷಯದ ಗಂಭೀರತೆ ಮರೆತು ನಗು ಬರಲು ತೊಡಗಿತ್ತು.ಕೊನೆಗೆ ಬೆತ್ತಲೆ ಪ್ರತಿಭಟನೆ ಬಿಟ್ಟು ಬೇರೆ ತರಹ ಅರ್ಥ ಪೂರ್ಣವಾಗಿ ಉಡುಪಿಯಲ್ಲಿ ದನದ ವ್ಯಾಪಾರಿಗಳನ್ನು ಬೆತ್ತಲೆ ಮಾಡಿದ್ದರ ವಿರುದ್ಧ ಪ್ರತಿಭಟನೆ ಮಾಡುವಾ ಎಂದು ತೀರ್ಮಾನಿಸಿದೆವು.

 ಅದರ ಮೊದಲ ಅಂಗವಾಗಿ ಯಾರು ಯಾರು ಏನೇನೆಲ್ಲವನ್ನು ತಿಂದಿದ್ದೇವೆಂದು ಬಹಿರಂಗಗೊಳಿಸ ಬೇಕೆಂದು ತೀರ್ಮಾನಿಸಿದೆವು.ಅದರಲ್ಲೂ ಧರ್ಮಬಾಹಿರವಾಗಿ ತಿಂದಿದ್ದನ್ನು ಮೊದಲು ಹೇಳಬೇಕೆಂದೂ ಸೊಪ್ಪು ತರಕಾರಿ ಗೆಡ್ಡೆ ಗೆಣಸು ಹಾಲು ಮೊಸರು ಇತ್ಯಾದಿ ಸಾತ್ವಿಕ ಆಹಾರವನ್ನು ಹೇಳದಿದ್ದರೂ ನಡೆಯುತ್ತದೆಂದಲೂ ಎಲ್ಲರೂ ತಾವು ತಿಂದಿದ್ದನ್ನು ಬಹಿರಂಗಗೊಳಿಸಿದರೆ ಇನ್ನಷ್ಟು ಬತ್ತಲೆಗೊಳಿಸಿ ಹಲ್ಲೆಮಾಡುವ ಘಟನೆಗಳೂ,ಇನ್ನಷ್ಟು ಬತ್ತಲೆ ಪ್ರತಿಭಟನೆಗಳೂ ನಡೆದು ಸಮಾಜದಲ್ಲಿ ಒಂದು ರೀತಿಯ ಸಂಚಲನವಾಗ ಬಹುದೆಂದು ಅಂದುಕೊಂಡು ಮಾತು ಮುಗಿಸಿದೆವು.

 ಅಷ್ಟು ಹೊತ್ತಿಗೆ ಮುಸಂಬಿ ತಿಂದು ಮುಗಿಸಿದ ಮಕ್ಕಳು ಇನ್ನೇನು ಸಿಗಬಹುದು ಎಂದು ಆಸೆಕಣ್ಣಲ್ಲಿ ನೋಡುತ್ತಿದ್ದರು.ಮಗ ಸಂಜೆ ಕತ್ತಲಿಗೆ ಹಾರಿಬಂದ ಹಾತೆಯೊಂದನ್ನು ತೋರಿಸುತ್ತ `ಬಾಪಾ ಆ ಹುಳವನ್ನು ತಿನ್ನ ಬಹುದಾ?’  ಎಂದು ಕೇಳುತ್ತಿದ್ದ. ಮಗಳು ಆಗಲೇ ಹಾತೆಯ ಪರವಹಿಸಿಕೊಂಡು ‘ಅಮ್ಮ, butterflies ತಿಂದರೆ ಸ್ವಾಮಿದೇವರು ನರಕಕ್ಕೆ ಹಾಕ್ತಾರಲ್ವಾ ಅಮ್ಮಾ’ಎಂದು ಹೇಳುತ್ತಿದ್ದಳು.

Advertisements