ತಸ್ಲಿಮಾ ಕುರಿತು-ಹತ್ತು ವರ್ಷದ ಹಿಂದೆ

ಧ್ಯಾನ, ತಪಸ್ಸು, ಪ್ರೀತಿ ಮತ್ತು ಕೊಂಚ ತಮಾಷೆ

ಈ ತಸ್ಲೀಮಾ ಎಂಬ ಡಾಕ್ಟರ್ ಹೆಣ್ಣು ಮಗಳು, ಬೆಂಗಾಲಿ ಬರಹಗಾರ್ತಿ. ಮೊದಲು ಧರ್ಮಭ್ರಷ್ಟಳಾಗಿ ಈಗ ದೇಶಭ್ರಷ್ಟಳಾಗಿ ತಲೆದಂಡ ವಿಧಿಸಿಕೊಂಡು ದೇಶ ವಿದೇಶಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವುದು ಒಂದು ಪೂರ್ವಯೋಜಿತ ಪ್ರಹಸನದಂತೆ ನಡೆದುಹೋಗಿದೆ. ಆಕೆಗೆ ದೂರದ ದೇಶವೊಂದು ಆಶ್ರಯ ಕೊಟ್ಟಿದೆ. ತಲೆದಂಡ ವಿಧಿಸಿದವರು ಹಲ್ಲು ಕಚ್ಚಿ ಸುಮ್ಮನಾಗಿದ್ದಾರೆ. ತಲೆದಂಡದ ವಿರುದ್ಧ ಮಾತನಾಡಿ ಪ್ರಜ್ಞಾವಂತರಾದ, ಬುದ್ಧಿಜೀವಿಗಳಾದ, ಜಾತ್ಯತೀತರಾದ ಜನ ಕೂಡಾ ಸುಮ್ಮನಾಗಿದ್ದಾರೆ. ಆಕೆಯನ್ನು ಬೈದವರು, ಹೊಗಳಿದವರು ಉಪಯೋಗಿಸಿಕೊಂಡವರು ಎಲ್ಲರೂ ಇಂತಹದೇ ಇನ್ನೊಂದು ಪ್ರಹಸನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಜಗತ್ತೂ ಏನೂ ಆಗಿಯೇ ಇಲ್ಲ ಎನ್ನುವ ಹಾಗೆ ನಡೆಯುತ್ತಿದೆ.ಈ ಎಲ್ಲದರ ನಡುವೆ ಒಂದೆರಡು ಚಿತ್ರಗಳು, ಸಂಗತಿಗಳು ಮಾತ್ರ ಹಾಗೇ ಎದೆಯ ಒಳಕ್ಕೆ ನಿಧಾನವಾಗಿ ಅಮರಿಕೊಳ್ಳುತ್ತದೆ. ಎಂದೂ ಮಾದುಹೋಗದ ಹಾಗೆ ಹೊಕ್ಕು ಕೂತಿರುವ ಈ ಚಿತ್ರ ಸಂಗತಿಗಳು ಈ ತಸ್ಮೀಮಾ ಎಂಬ ಹೆಣ್ಣುಮಗಳು ಬರೆದ್ದನ್ನೂ ಮೀರಿ ಆಕೆಯ ಉದ್ಗಾರಗಳನ್ನೂ ಮೀರಿ, ಆಕೆಗೆ ತಲೆದಂಡ ವಿಧಿಸಿದವರ ಅಟ್ಟಹಾಸ, ಆಕೆಯನ್ನು ಹೊಗಳಿ ಹಾಳು ಮಾಡಿದವರ ಅವಿವೇಕವನ್ನೂ ಮೀರಿ ಹಾಗೇ ಉಳಿದುಕೊಳ್ಳುತ್ತವೆ.

ಒಂದನೆಯ ಚಿತ್ರ ತಸ್ಲೀಮಾ ಭೂಗತಳಾಗಿ ತಿರುಗುತ್ತಿರುವಾಗ ಆತಂಕಗೊಂಡು ಅಳುತ್ತಿರುವ ಆಕೆಯ ತಾಯಿಯ ಚಿತ್ರ. ಎರಡನೆಯದು ಸೆರಗು ಹೊದ್ದುಕೊಂಡು ಕೋರ್ಟ್ ನಲ್ಲಿ ಹಾಜರಾದ ತಸ್ಲೀಮಾಳ ಚಿತ್ರ. ಮೂರನೆಯದು ಅಡಗಿದಲ್ಲಿಂದ ಹೊರಬಂದು ತಾಯಿಯನ್ನು ತಬ್ಬಿಕೊಂಡು ಅಳುತ್ತಿರುವ ಇದೇ ಲೇಖಕಿಯ ಚಿತ್ರ. ಕೊನೆಯದ್ದು ಯಾವುದೋ ದೂರದ ಊರಿನಲ್ಲಿ ಆರಾಮವಾಗಿ ಡಾಕ್ಟರ್ ಕೆಲಸ ಮಾಡಿಕೊಂಡಿರುವ ತಸ್ಲೀಮಾಳ ತಂದೆ ತನ್ನ ಚಿಕಿತ್ಸಾಲಯಕ್ಕೆ ಕಲ್ಲು ಹೊಡೆಯಲು ಬಂದವರ ಕುರಿತು ಖೇದದಿಂದ, ಅಷ್ಟೇ ದುಗುಡದಿಂದ ವಿವರಿಸುತ್ತಿರುವ ಚಿತ್ರ.

ಈ ಯಾವ ಚಿತ್ರಗಳೂ ಈ ಯಾವ ಸಂಗತಿಗಳೂ ಬರಿಯ ವಾದ ವಿವಾದಗಳಲ್ಲಿ ಆಸಕ್ತಿ ಹೊಂದಿರುವ, ಕೋಲಾಹಲಗಳನ್ನೇ ಕಾಯುತ್ತಾ ಕೂತಿರುವ ಬೇಣದ ಗೂಡಿಗೆ ಕಲ್ಲು ಹೊಡೆದು ಯಾರಾದರೂ ಆ ಗೂಡಿನ ಕೆಳಗೆ ಹಾದು ಹೋಗಲಿ ಎಂದು ಕಾಯುತ್ತಾ ಕೂರುವ ನಮ್ಮ ಮನಸ್ಸುಗಳಿಗೆ ಹೋಗುವುದಿಲ್ಲ. ಹೊಕ್ಕರೂ ಗೊತ್ತಾಗುವುದಿಲ್ಲ. ಗೊತ್ತಾದರೂ ಗೊತ್ತೇಆಗದಷ್ಟು ಚಿತ್ರವಿಚಿತ್ರ ಸಂಗತಿಗಳೂ, ಗಲಭೆ, ದೊಂಬಿಗಳು ಈ ಚಿಕ್ಕ ಪುಟ್ಟ ಚಿತ್ರಗಳನ್ನು ಅಳಿಸಿಹಾಕುತ್ತಿರುತ್ತವೆ. ವಿವಾದಾತ್ಮಕವಾಗಿಯೇ ಪ್ರಸಿದ್ಧರಾಗಬಯಸುವ ಬರಹಗಾರರ ಲೇಖಕಿಯರ ಗುಂಪೊಂದು ಮತ್ತೆ ತಯಾರಾಗುತ್ತಿರುತ್ತದೆ. ಹಾಗೇ ಅವರನ್ನು ಇಲಿ ಹಿಡಿಯುವಂತೆ ಹಿಡಿದು ಗೋಣಿಯೊಳಕ್ಕೆ ತುರುಕಿ ನೆಲಕ್ಕೆ ಬಡಿದು ಕೊಲ್ಲಲು ತಯಾರಾಗಿ ಧರ್ಮಬೀರುಗಳ ತಂಡವೂ ಸಿದ್ಧವಾಗುತ್ತದೆ. ಬೀದಿಗಳಲ್ಲಿ, ಪತ್ರಿಕೆಗಳಲ್ಲಿ, ವೇದಿಕೆಗಳಲ್ಲಿ ಈ ಇಲಿ ಹಿಡಿಯುವ ಆಟ ಮುಂದುವರಿಯುತ್ತದೆ.

ಎಲ್ಲೋ ಮೂಲೆಯ ಮನೆಗಳಲ್ಲಿ, ತೋಟಗಳಲ್ಲಿ, ಪರದೆಗಳ ಒಳಗಡೆ ಹಲವಾರು ತಾಯಂದಿರು, ಅಪ್ಪಂದಿರು ಮೌನವಾಗಿ ದುಗುಡದಿಂದ ಅಡ್ಡಾಡುತ್ತಿರುತ್ತಾರೆ. ಯಾವ ಮೂಲಭೂತವಾದಿಗಳೂ ಅಲ್ಲದ, ವಿಚಾರವಾದಿಗಳೂ ಅಲ್ಲದ, ಸರಳ ಸಜ್ಜನರಾದ, ಪರಮಾತ್ಮನಲ್ಲಿ ನಿಷ್ಕಾಮ ಪ್ರೀತಿ ಹೊಂದಿದ ಈ ಜೀವಿಗಳು ಸುಮ್ಮನೆ ನೊಂದುಕೊಳ್ಳುತ್ತವೆ. ಯಾವ ಮೂಲಭೂತವಾದಿಗಳಿಗೂ – ವಿಚಾರವಾದಿಗಳಿಗೂ ಈ ಜೀವಿಗಳ ಸರಳ ಧಾರ್ಮಿಕತೆಯ ಹಿಂದಿರುವ ಜಾತ್ಯತೀತತೆ ಅರ್ಥವಾಗುವುದಿಲ್ಲ. ಅವರವರುಗಳು ಅವರವರದೇ ಲಹರಿಗಳಲ್ಲಿ ತೂಗಾಡುತ್ತಿರುತ್ತಾರೆ. ತಸ್ಲೀಮಾ ಆರಾಮವಾಗಿ ಯೂರೋಪಿನ ವೇದಿಕೆಯೊಂದರಲ್ಲಿ ಬರಹಗಾರ್ತಿಯ ಎದೆಗಾರಿಕೆಯ ಕುರಿತು ಮಾತನಾಡುತ್ತಿರುತ್ತಾರೆ.

ಸರಿಯಾಗಿ ಇಪ್ಪತ್ಮೂರು ವರ್ಷಗಳ ಹಿಂದೆ ವಿಜಯದಶಮಿಯ ದಿವಸ ನನ್ನ ಪುಟ್ಟ ಊರಿನ ಎಲ್ಲರೂ ಮಡಿಕೇರಿಯ ದಸರಾದ ಖುಷಿಯಲ್ಲಿರುವಾಗ ನಾನೊಬ್ಬನೇ ಹತ್ತಿರದ ತೋಟದ ಮನೆಯೊಂದರಲ್ಲಿ ಅಕ್ಕನ ಆಶ್ರಯದಲ್ಲಿ ಭೂಗತನಾಗಿದ್ದೆ. ಆ ಮೂರುದಿನಗಳ ಭೂಗತ ಅವಸ್ಥೆಯ ಕುರಿತು ಈಗ ಯೋಚಿಸುವಾಗ ನಗುವೆ ಪ್ರಧಾನವಾಗಿ ಬರುತ್ತದೆ. ಅನಂತರ ಬೇಜಾರೂ, ವಿಷಾದವೂ ಹಿಂಬಾಲಿಸುತ್ತದೆ. ಆ ಕಥೆ ನಡೆದದ್ದು ಹೀಗೆ.
ಆಗ ನಾನು ಹತ್ತೊಂಬತ್ತರ ಆದರೂ ಮೀಸೆ ಸರಿಯಾಗಿ ಮೂಡದ ಹುಡುಗನಾಗಿದ್ದೆ. ಪತ್ರಿಕೋದ್ಯಮ ಕಲಿಯುತ್ತಿದ್ದ ನಮ್ಮನ್ನು ಹುರಿದುಂಬಿಸುತ್ತಿದ್ದ ಮಹಾರಾಜ ಕಾಲೇಜಿನ ಉಪನ್ಯಾಸಕರು ನಾವು ಯಾವುದಕ್ಕು ಸಿದ್ಧರಾಗಿರ ಬೇಕೆಂದೂ, ಯಾರೊಡನೆ ಮಾತಿಗಿಳಿಯಲೂ ಹಿಂಜರಿಯಬಾರದೆಂದೂ, ಕೈಯಲ್ಲಿ ಸದಾ ಕ್ಯಾಮರಾ ಹಿಡಕೊಂಡು ತಿರುಗಾಡಬೇಕೆಂದೂ ಅಂತಹದೇನಾದರು ಕಂಡರೆ ಕಂಡಲ್ಲೇ ಗುಂಡು ಹೊಡೆಯುವಂತೆ ಪೋಟೋ ಹಿಡಿಯಬೇಕೆಂದು ಆಣತಿ ಇತ್ತಿದ್ದರು. ಅದರಂತೆ ನಾವು ಕಂಡವರನ್ನೆಲ್ಲ ಮಾತನಾಡಿಸಿಕೊಂಡು ಬೈಯಿಸಿಕೊಂಡು ಮೈಸೂರಿನ ಬೀದಿಯಲ್ಲೆಲ್ಲ ಓಡಾಡುತ್ತಿದ್ದೆವು. ಸುಮ್ಮನಿರಲಾಗದೆ ನಾನೂ ನನ್ನ ಗೆಳೆಯನ ಬಳಿಯಲ್ಲಿದ್ದ ಡಬ್ಬದಂತಹ ಕ್ಯಾಮರಾವೊಂದನ್ನು ಕಸಿದುಕೊಂಡು ಊರಿಗೆ ಹೊರಟೆ. ಊರಿಗೆ ಹೋದವನು ನಾನು ಹುಟ್ಟಿ ಆಟ ಆಡುತ್ತಾ ಬೆಳೆದ ಕಾಫಿ ತೋಟವನ್ನು ಹೊಕ್ಕು ಆ ತೋಟದೊಳಗೆ ಲೈನು ಮನೆಗಳಲ್ಲಿ ವಾಸಿಸುತ್ತಿದ್ದ ನನ್ನ ಪ್ರೀತಿಯ ಅಜ್ಜಿಯರ, ನನ್ನ ಜೊತೆ ಆಟವಾಡುತ್ತಾ ಬೆಳೆದು ಈಗ ಕಣ್ಣು ಕುಕ್ಕುವಂತೆ ಸುಂದರಿಯರಾಗಿದ್ದ ಕಾಫಿ ತೋಟದ ಹುಡುಗಿಯರ, ಅವರು ಕಾಫಿ ತೋಟದಲ್ಲಿ ಮದ್ದು ಹೊಡೆಯುತ್ತಿರುವ, ಅಗತೆ ನಡೆಸುತ್ತಿರುವ ಚಿತ್ರಗಳನ್ನು ತೆಗೆದೆ. ನನಗೆ ಹಾಲು ಕೊಟ್ಟು ಬೆಳೆಸಿದ ಈ ಅಜ್ಜಿಯಂದಿರು ವಿಶಾಲವಾಗಿ ನಗುತ್ತಾ, ನನ್ನ ಬಾಲ್ಯ ಕಾಲದ ಸಖಿಯರಾಗಿದ್ದ ಈ ಹುಡುಗಿಯರು ನಾಚುತ್ತಾ ಸಾಲಾಗಿ ನಿಂತು ಕ್ಯಾಮರಾಕ್ಕೆ ಫೋಸ್ ಕೊಟ್ಟಿದ್ದರು. ನಾನೂ ನಾಚಿಕೊಳ್ಳುತ್ತ ಅವರನ್ನೆಲ್ಲ ಇನ್ನೊಮ್ಮೆ ನೋಡಲಾಗಿದ್ದಕ್ಕೆ ಖುಷಿ ಪಡುತ್ತಾ ಹಾಗೇ ಮೈಸೂರಿಗೆ ತಿರುಗಿ ಹೋಗಿ ಆ ಚಿತ್ರಗಳನ್ನು ನೋಡುತ್ತಾ, ನಾಚುತ್ತಾ, ಕುಳಿತಿದ್ದೆ.

ಆಗ ಮುಂಗಾರು ಪತ್ರಿಕೆ ಆರಂಭವಾಗಿ ತಿಂಗಳುಗಳಾಗಿದ್ದವು ಎಂದು ಕಾಣುತ್ತದೆ. ಸಂಪಾದಕರು ಹುಡುಗನಾದ ನನಗೆ ಕಾಗದ ಬರೆದು ಲೇಖನ ಕಳುಹಿಸಲು ಹೇಳಿದ್ದೇ ತಡ, ಲೇಖನವೇನು, ಕಥೆಯೇನು, ಕವಿತೆಯೇನು ಎಂದು ವಿಂಗಡಿಸಲೂ ಪುರುಸೊತ್ತಿಲ್ಲದೆ ಒಂದು ತರಹದ ಸೃಜನಶೀಲ ತುರಿಕೆಯಿಂದ ಚಡಪಡಿಸುತ್ತಿದ್ದ ನಾನು, ನಾನು ತೆಗೆದಿದ್ದ ನನ್ನ ಪ್ರೀತಿಯ ಅಜ್ಜಿಯರ, ಗೆಳತಿಯರ ಚಿತ್ರಗಳ ಸಮೇತ ಕೊಡಗಿನ ಕಾಫಿ ತೋಟದ ಒಳಗಿನ ಜನರ ಬದುಕು ಎಂದು ಲೇಖನ ಬರೆದು ರಾತ್ರೋ ರಾತ್ರಿ ಅಂಚೆಗೆ ಹಾಕಿದ್ದೆ. ಅಂಚೆಗೆ ಹಾಕಿ ಹತ್ತು ದಿನಗಳಲ್ಲಿ ವಿಜಯದಶಮಿಯ ದಿವಸ ಮುಖಪುಟದಲ್ಲಿ ಚಿತ್ರಗಳ ಸಮೇತ ಲೇಖನ ಬಂದೇಬಿಟ್ಟಿತು.
ದಸರಾ ರಜೆಯಲ್ಲಿ ಊರಿಗೆ ಬಂದಿದ್ದ ನಾನು ವಿಜಯದಶಮಿಯ ಸಂಜೆ ಆಗುತ್ತಿದ್ದಂತೆ ಅಕ್ಕನ ಮನೆಯಲ್ಲಿ ಭೂಗತನಾದೆ. ನಾನು ಅಡಗಿ ಕುಳಿತಿರುವುದು ಅವಳಿಗೂ ಗೊತ್ತಾಗದೆ ಹೀಗೇ ನೆಂಟನಂತೆ ಬಂದಿದ್ದಾನೆಂದು ಕೋಳಿಯನ್ನೂ, ರೊಟ್ಟಿಯನ್ನೂ ಅರ್ಪಿಸುತ್ತಾ ಪ್ರೀತಿಯಿಂದ ನೋಡುತ್ತಾ ಕುಳಿತಿದ್ದಳು ಆಕೆ. ನಾನು ಭೂಗತನಾಗಿದ್ದು ಈ ಅಜ್ಜಿಯರಿಗೆ ಹೆದರಿ. ಈ ಹುಡುಗಿಯರ ಅಪ್ಪಂದಿರಿಗೆ ಹೆದರಿ. ನನ್ನ ಜನಗಳ ನಂಬಿಕೆಯಂತೆ ಫೋಟೋ ತೆಗೆಯುವುದು ಅಪರಾಧವಾಗಿತ್ತು. ಅವರ ಪ್ರಕಾರ ಕ್ಯಾಮರಾ ಎಂಬ ಈ ಯಂತ್ರ ನಶ್ವರವಾದ ಮಾನವ ಬದುಕನ್ನು ಶಾಶ್ವತವನ್ನಾಗಿ ಮಾಡುವ ಹುನ್ನಾರವಾಗಿತ್ತು. ಇಂದೋ ನಾಳೆಯೋ ಇಹವನ್ನು ತ್ಯಜಿಸಿ ಹೋಗಲಿರುವ ನಮ್ಮ ಚಿತ್ರಗಳನ್ನು ಪೇಪರಿಗೆ ಹಾಕಿ ನಾವು ಸ್ವರ್ಗಕ್ಕೆ ಹೋಗುವುದನ್ನು ಇಲ್ಲದಂತೆ ಮಾಡಿದೆಯಲ್ಲೋ ಎಂದು ಈ ಅಜ್ಜಿಯರು ಶಾಪ ಹಾಕುತ್ತಿದ್ದರು. ನನ್ನ ಸುಂದರಿ ಮಗಳ ಚಿತ್ರ ಎಲ್ಲಾ ಕಡೆಯೂ ಬಂದು ಇನ್ನು ಈ ಹುಡುಗಿಯನ್ನು ಯಾರು ಕಲ್ಯಾಣ ಮಾಡಿಕೊಳ್ಳುತ್ತಾರೆ ಎಂದು ತಂದೆಯಂದದಿರು ಗಲಾಟೆ ಮಾಡಿದ್ದರು. ನನ್ನ ಗುರುವೂ, ಗೆಳೆಯನೂ, ತತ್ವ ಜ್ಞಾನಿಯೂ ಆಗಿದ್ದ ದನಗಾಹಿ ಹುಡುಗನೊಬ್ಬನ ಸೋದರಿಯ ಚಿತ್ರವೂ  ಪತ್ರಿಕೆಯಲಿ ಬಂದು ಅವನು ನನ್ನನ್ನು ಹುಡುಕಿಕೊಂಡು ಬಂದು `ನಿನ್ನ ಅಕ್ಕನಾದರೆ ಪೇಪರಲಿ ಹಾಕುತ್ತಿದ್ದೆಯಾ’ ಎಂದು ಕೆಟ್ಟದಾಗಿ ದಬಾಯಿಸಿ ಹೋಗಿದ್ದನು. ಇನ್ನು ಲೇಖನದಲ್ಲಿ ಬರೆದ ಸಂಗತಿಗಳೆಲ್ಲವೂ ನಿಜವಾಗಿ ನಡೆದ ಕಥೆಗಳೂ, ಘಟನೆಗಳೂ ಆಗಿದ್ದು, ಈ ಕಥೆಗಳ ಪಾತ್ರಧಾರಿಗಳು ಅಕ್ಷರ ಬಲ್ಲವರಿಂದ ಅದನ್ನೆಲ್ಲ ಓದಿಸಿಕೊಂಡು ಕೇಳಿಸಿಕೊಂಡು, ಸಿಟ್ಟುಮಾಡಿಕೊಂಡು, ಬೇಜಾರು ಮಾಡಿಕೊಂಡು, ಅಷ್ಟು ಒಳ್ಳೆಯವನಾಗಿದ್ದ ನನ್ನ ತಲೆ ಕೆಟ್ಟು ಹೀಗೆಲ್ಲ ಬರೆದದ್ಕಕ್ಕೆ ನನ್ನನ್ನು ಹಿಡಿದು ಮೆಣಸಿನ ಹೊಗೆ ಹಾಕಲು ಕಾಯುತ್ತಿದ್ದರು. ಮನೆಯಲ್ಲಿದ್ದ ನನ್ನ ತಂದೆಯೂ, ತಾಯಿಯೂ, ತಮ್ಮ ತಂಗಿಯರೂ ಹಡಗು ಮುಳುಗಿದ ಹಾಗೆ ಮುಖಮಾಡಿಕೊಂಡು ನನಗೂ, ಪತ್ರಿಕೆಗೂ ಹಿಡಿಶಾಪ ಹಾಕುತ್ತಾ ಕಣ್ಣೀರು ಹಾಕುತ್ತಾ ಬರಲಿರುವ ದುರ್ಘಟನೆಗಳ ನೆನೆದು ಹೆದರಿ ಇದರಿಂದ ಪಾರು ಮಾಡುವ ಉಪಾಯ ಹುಡುಕಿ ನನ್ನನ್ನು ಹತ್ತಿರದ ಅಕ್ಕನ ಮನೆಗೆ ಭೂಗತನಾಗಲು ಕಳುಹಿಸಿದ್ದರು. ನಾನು ಕತ್ತಲಲ್ಲಿ ತಲೆ ತಪ್ಪಿಸಿಕೊಂಡು ಅಕ್ಕನ ಮನೆಗೆ ಹೋಗಿ ಕತ್ತಲೆಯಲ್ಲಿ ಚಿಮಿಣಿ ದೀಪದ ಮುಂದೆ ಕುಳಿತಿದ್ದೆ. ಏನು ಎಂದು ಕೇಳಿದರೆ ಏನೂ ಇಲ್ಲೆಂದು ತಲೆ ಆಡಿಸಿ ಕೋಳಿಯ ತುಂಡುಗಳನ್ನೂ ಬೇಯಿಸಿದ ಕಡುಬುಗಳನ್ನೂ ಬಾಯಿಗಿಡುತ್ತಿದ್ದೆ.

ಈ ಮೂರುದಿನಗಳಲ್ಲಿ ನಾನು ತುಂಬ ಬೆಳೆದಿದ್ದೆ.

ನಡುವಲ್ಲಿ ನನ್ನ ಉಮ್ಮ ಯಾರಿಗೂ ಗೊತ್ತಾಗದ ಹಾಗೆ ಬಂದು ‘ನಿನಗೆ ಬರೆಯುವ ಕೆಲಸ ಯಾಕೆ ಬೇಕಿತ್ತು ಮಗನೆ, ಸುಮ್ಮನೆ ಓದಿಕೊಂಡಿದ್ದರೆ ಆಗುತ್ತಿರಲಿಲ್ಲವೆ’ ಎಂದು ಅಗತ್ಯಕ್ಕಿಂತ ಕೊಂಚ ಹೆಚ್ಚೇ ಅತ್ತಿದ್ದಳು. ಈ ಮೂರು ದಿನದಲ್ಲೇ ಒಂದು ದಿನ ದಯವಿಟ್ಟು ನನ್ನನ್ನು ಮಾಫ್ ಮಾಡಿ ಎಂದು ನನ್ನ ಅಜ್ಜಿಯಂದಿರನ್ನು ಹುಡುಗಿಯರ ತಂದೆಯಂದಿರನ್ನು ನೋವು ಮಾಡಿದ್ದಕ್ಕೆ ಅದೇ ಪತ್ರಿಕೆಯಲ್ಲಿ  ಕ್ಷಮೆ ಕೇಳಿದ್ದೆ.  ಕನ್ನಡ ಬಾರದ ಅವರಿಗೆಲ್ಲ ಕ್ಷಮೆಯೂ ಗೊತ್ತಾಗಲಿಲ್ಲ. ಆದರೆ ನಾಡಿನ ವಿಚಾರವಂತರೆಲ್ಲ ‘ಲೇಖಕರು ಕ್ಷಮೆ ಕೇಳಿ ಹೇಡಿಗಳಾದರು’ ಎಂದು ಜರೆದಿದ್ದರು. ಅವರಿಗೆ ಈ ಲೇಖಕರು ಓರ್ವ ಮೀಸೆ ಮೂಡದ ಯುವಕನಾಗಿರುವುದೂ, ಆತ ತೆಗೆದಿರುವ ಫೋಟೋಗಳು ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿಯಿಲ್ಲದೆ ಇರುವುದೂ, ಆತ ಬರೆದಿರುವ ಸಂಗತಿಗಳು ಕೆಲವು ಖಾಸಗಿ ಸಂಗತಿಗಳನ್ನು ಒಳಗೊಂಡಿರುವುದೂ ಗೊತ್ತಾದಂತಿರಲಿಲ್ಲ.

ಈಗ ನಾನೂ ಇದನ್ನೆಲ್ಲ ಮರೆಯಬೇಕೆಂದರೂ ಮರೆಯಲು ಬಿಡುತ್ತಿಲ್ಲ. ದನಗಾಹಿಯಾಗಿದ್ದ ನನ್ನ ಗುರು ಗೆಳೆಯ ಮಾರ್ಗದರ್ಶಕ ಹುಡುಗನ ಮಾತುಗಳು ಈಗಲೂ ಮರೆಯಲಾಗುತ್ತಿಲ್ಲ. ಈಗಲೂ ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಆತ ಹೇಳಿದ ವಿವೇಕ ನನ್ನನ್ನು ಇನ್ನೂ ಬರೆಯುವುದರಿಂದ ತಡೆಯುತ್ತಿದೆ.

‘ನೀನು ಯಾಕೆ ನಿನ್ನ ಕುರಿತೇ ಬರೆಯಬಾರದು?’

 ಧರ್ಮವನ್ನು ಧ್ಯಾನ ಮತ್ತು ತಪಸ್ಸು ಏಕಾಗ್ರತೆ ಮತ್ತು ಒಳ್ಳೆಯತನ ಎಂದು ಹೇಳುವವರು ಸೃಜನಶೀಲತೆ ಅಥವಾ ಬರವಣಿಗೆಯನ್ನೂ ಹೀಗೇ ವಿವರಿಸುತ್ತಾರೆ. ಬರವಣಿಗೆ ಮತ್ತು ಧರ್ಮ ಹೀಗೆ ಟಾಲ್ ಸ್ಟಾಯ್, ಮಾಸ್ತಿ, ಸಿಂಗರ್ ಮತ್ತು ಬಶೀರ್ ಮುಂತಾದವರಲ್ಲಿ ಬೇರೆ ಬೇರೆ ಆಗಿರಲಿಲ್ಲ.

ತನ್ನ, ತನ್ನ ಲೋಕದ ಖಾಸಗಿ ಸುಖ ನೋವುಗಳ ವಾಸನೆ ಹಿಡಿದು ಬದುಕುವ ಬರಹಗಾರ ಬರೆಯುವ ಮೊದಲು ಆನಂದದಿಂದ ನಗುತ್ತಿರುತ್ತಾನೆ ಅಥವಾ ಆತಂಕದಿಂದ ಕಂಪಿಸುತ್ತಿರುತ್ತಾನೆ ಅನಿಸುತ್ತದೆ. ನಾವು ಓದಿರುವ ದೊಡ್ಡ ಲೇಖಕರೂ, ಬರಹಾರರೂ, ಕವಿಗಳೂ, ಕಥೆಗಾರರೂ ಹೀಗೆ ನಗುತ್ತಾ ಕಂಪಿಸುತ್ತಾ ಬರೆದಿದ್ದರು ಅನಿಸುತ್ತದೆ. ಹಾಗೆ ಬರೆದವರ ಬರಹಗಳು ಎಂತಹ ಧರ್ಮದ ಕಾನೂನು ಕಟ್ಟಳೆಗಳಿಗಿಂತ ತಲೆದಂಡಗಳಿಗಿಂತ ಅಮೂಲ್ಯವೂ, ಸೂಕ್ತವೂ,ಪ್ರೀತಿ ಪಾತ್ರವೂ ಆಗಿರುವುದು ಗೊತ್ತಾಗುತ್ತದೆ.

ಈ ತಸ್ಲೀಮಾ ಎಂಬ ಹೆಣ್ಣುಮಗಳು ಹಾಗೂ ಅವರ ಹಾಗೇ ಬರೆಯಲು ಹೊರಟಿರುವ ಪ್ರಪಂಚದ ನಾನಾ ಧರ್ಮ ಜಾತಿಗಳ ನೂರಾರು ಹುಡುಗ ಹುಡುಗಿಯರೂ ಈ ಬರವಣಿಗೆ ಎಂಬುದು ಧರ್ಮದ ಹಾಗೆ ಧ್ಯಾನ ಮತ್ತು ತಪಸ್ಸು, ಏಕಾಗ್ರತೆ ಮತ್ತು ಒಳ್ಳೆಯತನ ಎಂದು ತಿಳಿದುಕೊಂಡರೆ ಅನಿಸಿ ಖುಷಿಯಾಗುತ್ತದೆ. ಜೊತೆಗೆ ಕೊಂಚ ತಮಾಷೆ ಮತ್ತು ಪ್ರೀತಿಯಿಂದ ಬರೆದರೆ ಎಂಬ ಆಶೆಯಾಗುತ್ತದೆ.
 

Advertisements