ಕಬಾಡ್ ಮಂಗೇಶರಾಯರಿಗೆ ನಮಸ್ಕಾರ

ಹಿಂದೆ ಎಂದೂ ಕಾಣದಂತಹ ಸುಖದ ನೋವಿನ ತಳಮಳದ ಈ ಕನಸನ್ನು ಹೇಗೆ ಹೇಳಲಿ? ಸುರಿಯುವ ಜಿಟಿಜಿಟಿ ಮಳೆ ನಿಂತು ಈ ಮೈಸೂರು ಮಂದಹಾಸದಂತಹ ಎಳೆ ಬಿಸಿಲನ್ನು ತೋರಿಸಿಕೊಂಡು ಮೈಕಾಯಿಸುತ್ತಾ ಕೂತಿರುವಾಗ ಮಂಗಳೂರಿನ ರಥ ಬೀದಿಯ ಕೊನೆಯ ಆ ದೇವಸ್ಥಾನದ ಹಿಂಬದಿಯ ಆ ಎರಡು ಪುಟ್ಟ ಕೋಣೆಗಳ ಕತ್ತಲು ಕತ್ತಲು ಹಾಲ್ನಲ್ಲಿ ವಿಶಾಲವಾಗಿ ನಗುತ್ತ ಕೂತಿರುವ ಕಬಾಡ್ ಮಂಗೇಶ ರಾಯರ ನೆನಪಾಗುತ್ತಿದೆ.

 ಸುಮಾರು ಹನ್ನೆರಡು ವರ್ಷಗಳ ಹಿಂದೆ ಇಂತಹದೇ ಮಳೆ ನಿಂತ ಮೇಲಿನ ಬಿಸಿಲಲ್ಲಿ ಅವರನ್ನು ನೋಡಿ ಬಂದು ಸಂಕಟವಾಗಿ ಹಾಗೇ ನಿದ್ದೆ ಹೋಗಲು ನೋಡಿದ್ದೆ. ಅವರನ್ನು ಚೆನ್ನಾಗಿಯೇ ಮಾತನಾಡಿಸಿದ್ದೆ. ಅವರು ಹೇಳಿದ್ದನ್ನೆಲ್ಲ ಚೆನ್ನಾಗಿಯೇ ನೋಟ್ ಮಾಡಿಕೊಂಡಿದ್ದೆ. ಅವರೂ ಏನೂ ಆಗಿಯೇ ಇಲ್ಲ ಎನ್ನುವ ಹಾಗೆ ನಗುತ್ತಲೇ ಕುಳಿತಿದ್ದರು. ಈ ಇಷ್ಟು ವರ್ಷಗಳಲ್ಲಿ ಏನೂ ಆಗಿಯೇ ಇಲ್ಲ, ಇನ್ನು ಮುಂದೆಯೂ ಏನೂ ಆಗುವುದೂ ಇಲ್ಲ ಎಂಬಂತಹ ಅದಮ್ಯ ನಗುವಿನಿಂದಲೇ ಕೂತಿದ್ದ ಇವರನ್ನು ನಾನೂ ಏನೂ ಆಗಿಯೇ ಇಲ್ಲ ಎಂಬಂತೆ ಮಾತನಾಡಿಸುತ್ತಿದ್ದೆ. ಕೋಣೆಯೊಳಗೆ ಒಡಾಡುತ್ತಿದ್ದ ಕತ್ತಲು, ಬೆಳಕು, ಹಾಸಿಗೆ, ಕುರ್ಚಿ, ಮೇಜು, ಮೋಂಬತ್ತಿ, ದೇವ ದೇವತೆಗಳ ಚಿತ್ರಗಳು- ನಡುವಲ್ಲಿ ಕಬಾಡ್ ಮಂಗೇಶರಾಯರನ್ನು ಅವರ ಸ್ವಾತಂತ್ರ್ಯ ಹೋರಾಟ, ಜೇಲುವಾಸ, ಲಾಠಿ ಏಟಿನಿಂದಾಗಿ ಅವರ ಕಾಲಿನಲ್ಲಾಗಿರುವ ಮಾಯಲಾಗದ ಗಾಯ ಇತ್ಯಾದಿಗಳ ಕುರಿತು ಮಾತನಾಡಿಸುತ್ತಾ ಕುಳಿತಿದ್ದೆ. ಅವರು ತೊದಲುತ್ತಾ, ನಡು ನಡುವೆ ಎದ್ದು ನಡುಗುತ್ತಾ, ನಡೆದು ಗೋಡೆಯಲ್ಲಿದ್ದ ಚಿತ್ರಗಳನ್ನು ತೋರಿಸುತ್ತಾ, ಮೇಜಿನ ಡ್ರಾವರ್ ಎಳೆದು ಹಳೆಯ ಪತ್ರಗಳನ್ನು ತೋರಿಸುತ್ತಾ, ನಗುತ್ತಾ, ಕಣ್ಣು ಒರೆಸುತ್ತಾ ಆ ಹಳೆಯ ಮನೆಯೊಳಗೆಲ್ಲಾ ಓಡಾಡುತ್ತಿದ್ದರು.

 ನಾನು ಪ್ರಶ್ನೆಗಳೆಲ್ಲವೂ ಮುಗಿದವು ಅನ್ನುವ ಹಾಗೆ ‘ನಿಮ್ಮ ಅಂತಿಮ ಆಸೆ ಏನು’ ಎಂದು ಕೇಳಿದೆ. ‘ಏನೂ ಕಾಯಿಲೆಗಳಿಲ್ಲದೆ ಸುಖದಲ್ಲಿ ಮರಣ’ ಕಬಾಡ್ ಮಂಗೇಶರಾಯರು ನಗುತ್ತಾ ಉತ್ತರಿಸಿ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡರು. ನಾವು ಹೊರಟಾಗ ಆರಾಮ ಕುರ್ಚಿಯಿಂದ ಎದ್ದು ಬಂದರು. ‘ಈ ವಯಸ್ಸುಗಾಲದಲ್ಲಿ ತೊಂದರೆ ಕೊಟ್ಟೆ ಕ್ಷಮಿಸಿ’ ಎಂದು ಔಪಚಾರಿಕವಾಗಿ ಹೇಳಲು ನನ್ನ ಅಗಲದ ಬಾಯಿಯನ್ನು ನಾನು ತೆಗೆಯಲು ಹೋದರೆ, ಮಂಗೇಶರಾಯರು ‘ನನ್ನಿಂದ ತೊಂದರೆ ಆಗಲಿಲ್ಲ ತಾನೇ’ ಎಂದು ತಾವೇ ತಪ್ಪು ಮಾಡಿದ ಮಗುವಿನಂತೆ ಮುಖ ತೋರಿಸಿ ಕೇಳಿದರು. ಇನ್ನು ನನಗೆ ತಡೆದು ಕೊಳ್ಳಲಾಗಲಿಲ್ಲ.

ನೋಡಿದರೆ ಬಾಗಿಲಿನ ಮುಂದೆ ಕಳೆಗಿಡಗಳ ಪಕ್ಕದಲ್ಲಿ ಮಂಗೇಶರಾಯರು ಹರಿದು ಬಿಸಾಡಿರುವ ಹಳೆಯ ಡೈರಿಯ ಚೂರುಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಹೆಕ್ಕಿ ನೋಡಿದರೆ ಅವು 1930ರ ಡೈರಿಯ ಪುಟಗಳು. ಮಸಿಯಲ್ಲಿ ಮಳೆಯ ನೀರಲ್ಲಿ ನೆನೆದು ಬರಿಯ ಇಸವಿ ವಾರ ದಿನದ ಹೆಸರುಗಳ ಮಾತ್ರ ಉಳಿದಿದ್ದವು. ‘ನಿನ್ನೆಯೂ ಒಂದು ಡೈರಿಯನ್ನು ಹರಿದು ಬಿಸಾಡಿದೆ’ ಮಂಗೇಶರಾಯರು ಹೇಳಿದ್ದರು. ‘ಎರಡು ದಿನದ ಹಿಂದೆ ಇದ್ದ ಫೋಟೋ ಆಲ್ಬಂಗಳನ್ನೆಲ್ಲ ಹರಿದು ಚೂರು ಚೂರು ಮಾಡಿ ಬಿಸಾಕಿದೆ’ ಮಂಗೇಶರಾಯರು ನಗುತ್ತಲೇ ಹೇಳಿದ್ದರು. ‘ಅವುಗಳೆಲಾ ಇದ್ದರೆ ಎಲ್ಲಾ ನೆನಪಾಗುತ್ತದೆ. ಸಂಕಟವಾಗುತ್ತದೆ’ ಮಂಗೇಶರಾಯರು ನಕ್ಕಿದ್ದರು.

ಮನೆಗೆ ಬಂದು ನಡು ಮಧ್ಯಾಹ್ನ ನಿದ್ದೆ ಹೋಗಲು ನೋಡಿದ್ದೆ. ಒಂದು ತರಹದ ನೋವಿನ, ಮೊಂಡು ಹಠದ ನಿದ್ದೆ. ಜಿನುಗು ಮಳೆಯಲ್ಲಿ, ಎಳೆಯ ಬಿಸಿಲಿನಲ್ಲಿ ನಿದ್ದೆಯಲ್ಲಿ ಬೆವರುತ್ತ ತೊದಲುತ್ತ ಹಾಗೇ ಎಣೆ ಹಕ್ಕಿಗಳ ಕನಸು ಕಾಣುತ್ತ ಎದ್ದೆ. ಎದ್ದು ಕೂತಿರಲು ಏನೂ ಗೊತ್ತಾಗಲಿಲ್ಲ. ಊಹೆಗೂ ನಿಲುಕದ ನೋವು, ಊಹೆಗೂ ನಿಲುಕದ ಸುಖದ ಬದುಕೊಂದು ನನ್ನ ಕಣ್ಣ ಮುಂದೆಯೇ ಮೈಯ್ಯ ಬಣ್ಣವನ್ನು ಮೈಯ್ಯಗರಿಗಳನ್ನೂ ಕಳೆದುಕೊಂಡು, ಆದರೂ ಚಿಂತಿಸದೆ ಬಾಗಿಲವರೆಗೆ ಬಂದು ನಮ್ಮನ್ನು ಬೀಳ್ಕೊಂಡದ್ದು… ಇದೇನು ಸಾಧಾರಣ ಸಂಗತಿಯಲ್ಲ ಅನಿಸಿತು. ಹಾಗಾದರೆ ನಾನು ಈ ಮಧ್ಯಾಹ್ನ ಕಂಡಿದ್ದು ಸಾಧಾರಣ ಸಂಗತಿಯಲ್ಲ ಈ ಕಬಾಡ್ ಮಂಗೇಶರಾಯರು ಸಾಧಾರಣ ಮನಷ್ಯ ಅಲ್ಲ ಅವರು ಇರುವ ಮಂಗಳೂರಿನ ರಥಬೀದಿಯ ಉಮಾಮಹೇಶ್ವರ ದೇವಸ್ಥಾನವೂ, ದೇವಸ್ಥಾನದ ಹಿಂದಿರುವ ಆ ಪುಟ್ಟ ಮನೆಯೂ, ಆ ಮನೆಯ ಗೋಡೆಯೂ, ಗೋಡೆಯಲ್ಲಿ ತೂಗು ಹಾಕಿರುವ ಚಿತ್ರಗಳೂ ಎಲ್ಲವೂ……

ನಾನು ಕಂಡದ್ದು ಕನಸು ಅಲ್ಲ. ಮೈ ಕೊಡಹಿಕೊಳ್ಳುತ್ತೇನೆ. ಆ ಮನೆಯ ಗೋಡೆಯ ಮೂಲೆಯಲ್ಲಿ ಅಂಚು ಹಾಕಿದ ಒಂದು ಹಳೆಯ ಫೋಟೋ ಇದೆ. ಸುಮಾರು 40 ವರ್ಷ ಹಿಂದಿನದು. ಅದು ಮಂಗೇಶರಾಯರು ಮತ್ತು ಅವರ ಹೆಂಡತಿ ವಿಮಲಾದೇವಿಯವರ ಚಿತ್ರ. ವಿಮಲಾದೇವಿಯವರು ಕುರ್ಚಿಯಲ್ಲಿ ಮಲ್ಲಿಗೆ ಹೂವಿನ ಹಾಗೆ ಕುಳಿತಿದ್ದಾರೆ.ಮಂಗೇಶ ರಾಯರು ಕುರ್ಚಿಯ ಅಂಚಿನಲ್ಲಿ ಒರಗಿಕೊಂಡು ನಿಂತಿದ್ದಾರೆ. ಇಬ್ಬರೂ ಸುಂದರವಾಗಿದ್ದಾರೆ ಎಣೆ ಹಕ್ಕಿಗಳ ಹಾಗೆ.

ಹದಿನಾಲ್ಕು ವರ್ಷಗಳ ಹಿಂದೆ ಹೀಗೇ  ಇಂತಹದೇ ಒಂದು ಸೋನೆ ಮಳೆಯ ಮಧ್ಯಾಹ್ನ ಈ ಪುಟ್ಟ ಹಾಲಿನೊಳಕ್ಕೆ ಹೊಕ್ಕಾಗ ಕತ್ತಲೆಯ ಈ ಕೋಣೆಗಳ ಒಳಗೆ ನಗುತ್ತ ತೊದಲುತ್ತ ಕಬಾಡ್ ಮಂಗೇಶರಾಯರೂ ಅವರ ಹೆಂಡತಿ ವಿಮಲಾದೇವಿಯವರೂ ನನ್ನ ಜೊತೆ ಮಾತನಾಡಿದ್ದರು. ಎಲ್ಲಿಂದಲೋ ಹಾರಿ ಬಂದು ಈ ಅಪರಿಚಿತರ ಓಣಿಯೊಳಕ್ಕೆ ಸಿಕ್ಕಿ ಹಾಕಿಕೊಂಡಿರುವ ಎರಡು ವಯಸ್ಸಾದ ಹಕ್ಕಿಗಳ ಹಾಗೆ ಇವರು ಕಂಡಿದ್ದರು. ವಿಮಲಾದೇವಿಯರಿಗೆ ನಡೆಯಲು ಆಗುತ್ತಿರಲಿಲ್ಲ. ಮರದ ಕಟಕಟೆಯಂತಹ ಚೌಕಟ್ಟನ್ನು ಹಿಡಿದು ಅವರು ಅತ್ತಿತ್ತ ಓಡಾಡುತ್ತಿದ್ದರು. ವಯಸ್ಸಾದ ಗಂಡ ಮಂಗೇಶರಾಯರು ಜಾಸ್ತಿ ಮಾತನಾಡದ ಹಾಗೆ, ಅವರಿಗೆ ಆಯಾಸವಾಗದ ಹಾಗೆ ನಮ್ಮನ್ನು ಎಚ್ಚರಿಸಿದರು. ಮಂಗೇಶರಾಯರು ಈಗ ಇರುವುದಕ್ಕಿಂತ ಇನ್ನೂ ಹೆಚ್ಚು ತೊದಲುತ್ತಿದ್ದರು. ಹೆಂಡತಿ ವಿಮಲಾದೇವಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಎಂಬ ಧೈರ್ಯದಿಂದ ಇನ್ನೂ ಮುದುಕರಾಗಿದ್ದರು. ನಾವು ಅವರಿಬ್ಬರನ್ನು ಮಾತನಾಡಿಸುತ್ತಾ, ಅವರು ಹೇಳಿದ್ದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಕೂತಿದ್ದೆವು.

ಮಂಗೇಶರಾಯರು 1909ರಲ್ಲಿ ಬೆಳ್ತಂಗಡಿ ತಾಲ್ಲೂಕಿನ ಸಾರಸ್ವತ ಕುಟುಂಬವೊಂದರಲ್ಲಿ ಜನಿಸಿದರು. ಅರಸು ಮನೆತನವೊಂದರ ಹಣಕಾಸಿನ ಕಪಾಟನ್ನು ನೋಡಿಕೊಳ್ಳುತ್ತಿದ್ದ ಕಸುಬಿನಿಂದ ಆ ಮನೆತನಕ್ಕೆ ಕಬಾಡ್ ಎಂಬ ಹೆಸರು ಬಂದಿತ್ತು. ಮಂಗೇಶರಾಯರ ತಂದೆ ಆನಂದರಾವ್ ಎನ್ನುವವರು ಆ ಕಾಲದಲ್ಲಿ ಬಂಟ್ವಾಳ, ಬೆಳ್ತಂಗಡಿ, ಮೂಡಬಿದರೆ ಪ್ರಾಂತ್ಯಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಆದರೆ ಮಂಗೇಶರಾಯರು ಹುಟ್ಟಿದಾಗ ತೀರಿ ಹೋದರು. ಮಗುವಿಗೆ 2 ವರ್ಷವಾದಾಗ ತಾಯಿ ಕೂಡ ತೀರಿ ಹೋದರು. ಮಂಗೇಶರಾಯರಿಗೆ ಆ ಹೆಸರು ಬಂದದ್ದು ಅವರ ಅಜ್ಜನ ಹೆಸರಿನಿಂದ. ಆ ಅಜ್ಜನೇ ಮಂಗೇಶರಾಯರನ್ನು ಓದಿಸಿದರು. ಮಂಗೇಶರಾಯರು ಎಸ್.ಎಸ್.ಎಲ್.ಸಿ. ಮಾಡಿದ್ದು ಕಾರ್ಕಳದಲ್ಲಿ.

ಕಾರ್ಕಳದಲ್ಲಿ ಎಸ್.ಎಸ್.ಎಲ್.ಸಿ. ಮಾಡುತ್ತಿರುವಾಗಲೇ ಒಂದು ಸಲ ವಿಟ್ಲದ ಜಾತ್ರೆಯಲ್ಲಿ ಸಂಭ್ರಮದಲ್ಲಿ ಓಡಾಡುತ್ತಿದ್ದ ಅವಳಿ ಹುಡುಗಿಯರಿಬ್ಬರು ಮಂಗೇಶರಾಯರಿಗೆ ಕಂಡರು. ಅವರೇ ವಿಮಲಾದೇವಿ ಮತ್ತು ಕಮಲಾದೇವಿ. ತುಂಬ ವರ್ಷಗಳ ನಂತರ ಇದೇ ವಿಮಲಾದೇವಿಯನ್ನು ಮಂಗೇಶರಾಯರು ಮದುವೆ ಆದರು. ಈ ತುಂಬ ವರ್ಷಗಳಲ್ಲಿ ಏನೆಲ್ಲ ಬದಲಾವಣೆ ಆಗಿತ್ತು. ಮಂಗೇಶರಾಯರು ಮುಂಬಯಿಯಲ್ಲಿ ಸರದಾರ್ ಪಟೇಲ್, ನೆಹರೂ, ಅಬ್ದುಲ್ ಗಫಾರ್ ಖಾನ್ ಮುಂತಾದವರ ಗರಡಿಯಲ್ಲಿ ಪಳಗಿ ಜೈಲಿಗೆ ಹೋಗಿ, ಒದೆ ತಿಂದು ಸರಪಳಿ ಹಾಕಿಸಿಕೊಂಡು ವಿಧವಾ ವಿವಾಹವಾಗಬೇಕೆಂದು ಆದರ್ಶ ಹೊತ್ತು ಕಾಯುತ್ತಿದ್ದರು. ಅದೇ ಹೊತ್ತಿಗೆ ವಿಮಲಾದೇವಿಯವರು ಮುಂಬಯಿಗೆ ತುಂಬ ನೋವು ಹೊತ್ತು ಬಂದರು. ಮಂಗೇಶರಾಯರು ತಾನು ವಿಟ್ಲದ ಜಾತ್ರೆಯಲ್ಲಿ ನೋಡಿ ಖುಷಿಪಟ್ಟಿದ್ದ ಹುಡುಗಿಯನ್ನು ದೂರದ ಮುಂಬಯಿಯಲ್ಲಿ ರಿಜಿಸ್ಟರ್ಡ್ ಮದುವೆ ಆದರು.

ಮಂಗೇಶರಾಯರು ಸರ್ದಾರ್ ಪಟೇಲರ ಆಪ್ತ ಸಹಾಯಕರಾಗಿದ್ದರು. ಮಂಗೇಶರಾಯರು ನಾಲ್ಕೈದು ವರ್ಷ ಜೈಲಲ್ಲಿದ್ದರು. ಮಂಗೇಶರಾಯರೂ ವಿಮಲಾದೇವಿಯವರೂ ಮುಂಬಯಿಯ ತಾಡ್ದೇವ್ನಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ಆ ಮನೆಯಲ್ಲಿ ಕಾಂಗ್ರೆಸ್ಸಿನ ಸ್ವಾತಂತ್ರ್ಯ ಚಳವಳಿಯ ದಾಖಲೆಗಳೂ, ರಹಸ್ಯ ಪತ್ರಗಳೂ ಇದ್ದವು. ಒಂದು ದಿನ ಮಂಗೇಶರಾಯರು ಮನೆಯಲ್ಲಿ ಇಲ್ಲದಾಗ ಬ್ರಿಟಿಷರ ಪೊಲೀಸರು ದಾಳಿ ಮಾಡಿ ವಿಮಲಾದೇವಿಯವರಿಗೆ ಬೂಟುಗಾಲಲ್ಲಿ ಒದ್ದರು. ಅವರಿಗೆ ಗರ್ಭಪಾತವಾಯಿತು. ತೊಡೆಯ ಮೂಳೆ ಮುರಿಯಿತು. ಆಸ್ಪತ್ರೆಯಲ್ಲಿ ತೊಡೆಯೊಳಕ್ಕೆ ಉಕ್ಕಿನ ತಂತಿ ಸೇರಿಸಿದರು. ಅದೂ ತಪ್ಪಿ ಹೋಗಿ ವಿಮಲಾದೇವಿಯರಿಗೆ ಕಾಲಿನ ಸ್ವಾಧೀನ ತಪ್ಪಿತು. ಹದಿಮೂರು ವರ್ಷಗಳ ಹಿಂದೆ ಜನವರಿ ತಿಂಗಳ 4ನೇ ತಾರೀಕಿನವರೆಗೆ ವಿಮಲಾದೇವಿಯವರು ಒಂದು ಕಾಲೀನ ಸ್ವಾಧೀನವಿಲ್ಲದ ಮರದ ಕಟಕಟೆ ಹಿಡಿದುಕೊಂಡೇ ಓಡಾಡುತ್ತಿದ್ದರು. ಜನವರಿ 4 ರಂದು ವಿಮಲಾದೇವಿಯವರೂ ತೀರಿಹೋದರು. ಜನವರಿ ಒಂದರಂದು ಮಂಗೇಶರಾಯರು ಹೆಂಡತಿಗೆ ಎಂದು ಗಾಲಿ ಕುಚರ್ಿಯನ್ನು ತರಿಸಿದ್ದರು.

ನಾನು ್ನ ಮಂಗೇಶರಾಯರನ್ನು ಎರಡನೇ ಬಾರಿ ಹಾಗೇ ನೋಡುತ್ತಾ ಕುಳಿತಾಗ ಆ ಗಾಲಿಯ ಕುರ್ಚಿ ಮೂಲೆಯಲ್ಲಿ ಹಾಗೇ ನಿಂತುಕೊಂಡಿತ್ತು. ಗೋಡೆಯಲ್ಲಿ ದಿವಂಗತ ವಿಮಲಾದೇವಿ ನಗುತ್ತಿದ್ದರು.

ಈ ಎರಡು ಎಣೆ ಹಕ್ಕಿಗಳು ಬೇರೆ ಯಾರೂ ಇಲ್ಲದ ಈ ಲೋಕದಲ್ಲಿ 50 ಕ್ಕಿಂತಲೂ ಹೆಚ್ಚು ವರ್ಷ ಜೊತೆಗೆ ಜೀವಿಸಿದ್ದರು. ಎರಡನೆಯ ಮಗುವೂ ಹುಟ್ಟಿದ 3 ತಿಂಗಳಲ್ಲಿ ತೀರಿಹೋದ ನಂತರ ವಿಮಲಾದೇವಿ ಒಂದು ಥರಾ ಅಂತರ್ಮುಖಿ ಆದರು. ಮಂಗೇಶರಾಯರು ತಂದುಕೊಟ್ಟ ಚಿನ್ನ, ರೇಶ್ಮೆ ವಸ್ತ್ರ ಏನನ್ನೂ ಹಾಕಿಕೊಳ್ಳದೇ ಯಾವ ಸಂಭ್ರಮಕ್ಕೂ ಹೋಗದೆ ಮಂಗಳೂರಿನ ಈ ಕತ್ತಲಿನ ಮನೆಯಲ್ಲಿ ಮೌನವಾಗಿ ಮರದ ಕಟಕಟೆ ಹಿಡಿದು ನಡೆದಾಡಿದರು. ಮಂಗೇಶರಾಯರು ಅರಾಮ ಕುರ್ಚಿಯಲ್ಲಿ ಕೂತು ತನ್ನ ಪ್ರೀತಿಯ ಎಣೆ ಹಕ್ಕಿ ಗಾಯಗೊಂಡು ನಡೆಯುತ್ತಿರುವುದನ್ನು ಗಮನಿಸುತ್ತಿದ್ದರು.
ಬೇರೆ ಯಾರೂ ಇಲ್ಲದೆ ನಲವತ್ತು ವರ್ಷಗಳನ್ನು ಈ ಇಬ್ಬರು ಮಂಗಳೂರಿನ ದೇವಾಲಯದ ಹಿಂಬದಿಯಲ್ಲಿ ಬಾಡಿಗೆ ಕೋಣೆಯಲ್ಲಿ ಕಳೆದರು. ಅವರ ಸುಖ ಇವರಿಗೆ ಮತ್ತು ಇವರ ನೋವು ಅವರಿಗೆ ಮಾತ್ರ ಗೊತ್ತಿತ್ತು. ಮನೆಯ ಮುಂದೆ ಆಟವಾಡಲು ಬಂದ ಮಕ್ಕಳಿಗೆ ಈ ಸ್ವಾತಂತ್ರ್ಯ ಹೋರಾಟದ ಈ ಇಬ್ಬರು ನಾಯಕರು ಮಿಠಾಯಿ ನೀಡುತ್ತಿದ್ದರು. ಇಬ್ಬರಿಗು ಮಕ್ಕಳನ್ನು ಕಂಡರೆ ತುಂಬ ಪ್ರೀತಿ ಇತ್ತು. ಆದರೆ ಇವರಿಬ್ಬರಿಗೆ ಯಾರೂ ಇರಲಿಲ್ಲ. ಹುಟ್ಟಿದ ಊರು, ನೆಂಟರು, ಎಲ್ಲರೂ ಈ ಇಬ್ಬರ ಇರವನ್ನೂ ಮರೆತೇ ಹೋಗಿದ್ದರು. ಹಾಗೇ ಮಂಗಳೂರೆಂಬ ಈ ಅರಬೀ ಸಮುದ್ರವೂ, ಹಡಗುಗಳೂ, ಆಕಾಶವೂ, ವಿಮಾನಗಳೂ, ರಸ್ತೆಯೂ ವಾಹನಗಳೂ, ಇರುವ  ಮಹಾ ನಗರವು ಕೂಡಾ ಈ ಇಬ್ಬರನ್ನು ತಣ್ಣಗೆ ಒಳಗೆ ಸೇರಿಸಿಕೊಂಡು ಏನೂ ಗೊತ್ತಿಲ್ಲದ ಹಾಗೆ ಜೀವಿಸುತ್ತಿತ್ತು. ಜನವರಿ 4 ರವರೆಗೆ ಮಂಗೇಶರಾಯರಿಗೆ ವಿಮಲಾದೇವಿಯವರಾದರೂ ಇದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದು, ಸ್ವಾತಂತ್ರ್ಯ ಹೋರಾಟಗಾರರಿಗೆ ಅಧಿಕಾರ ಬಂದಾಗ ಮಂಗೇಶರಾಯರು ಮತ್ತು ವಿಮಲಾದೇವಿ ತಣ್ಣಗೆ ಮುಂಬಯಿಯಿಂದ ಮಂಗಳೂರಿಗೆ ಬಂದರು. ಯಾಕೆ ಬಂದಿರಿ ಅಂತ ಕೇಳಿದರೆ ಮುಂಬಯಿ ಹವೆ ಸರಿ ಇರಲಿಲ್ಲ ಅನ್ನುತ್ತಿದ್ದರು. ವಿಮಲಾದೇವಿಯವರೂ ರಾಯರನ್ನು ಬಿಟ್ಟು ತಣ್ಣಗೆ ಹೊರಟು ಹೋದರು. ಮಂಗೇಶರಾಯರು ಅಮೇಲೆ ಅಳಿದುಳಿದ ಚಿತ್ರಗಳನ್ನು, ಪತ್ರಗಳನ್ನೂ, ಡೈರಿಗಳನ್ನೂ ಹರಿದು ಬಿಸಾಕಿ ಆರಾಂ ಆಗಿ ವರ್ತಮಾನದ ಪತ್ರಿಕೆಗಳನ್ನೂ ಆಕಾಶವಾಣಿಯ ವಾರ್ತೆ ಮತ್ತು ಸಂಗೀತವನ್ನೂ ಕೇಳಿಕೊಂಡು ದಿನಕ್ಕೆ ಒಂದೇ ಊಟ ಮಾಡಿಕೊಂಡು ಒಂದು ಚೂರೂ ಬೇಜಾರು ತೋರಿಸದೆ ಆರಾಮ ಕುರ್ಚಿಯಲ್ಲಿ ಕೂತಿರುತ್ತಿದ್ದರು.

ಈಗ ಅವರಿಬ್ಬರೂ ಇಲ್ಲ. ತೋರಿಸಲು ಅವರ ಚಿತ್ರಗಳೂ ಇಲ್ಲ.ಕ್ಯಾಮರಾ ಮಾತ್ರ ಇದೆ.

Advertisements