ಒಂದು ಪುರಾತನ ಪ್ರೇಮ- ಒಂದು ಸಣ್ಣ ಕಥೆ.

 drawing4.jpg

                                                                                   

ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು  ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ ತರಗೆಲೆಗಳ ಹಾಗೆ ಕಂಡುಬಿಡುವೆನೆಂದು ಅಂದು ಕೊಂಡಿರಲಿಲ್ಲ.  

ವೀರಾಜಪೇಟೆಯ ಆ ಪುಟ್ಟ ಗಜಿಬಿಜಿ ಖಾಸಗೀ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರು ಏಜಂಟರುಗಳ ಕೂಗು, ಬಸ್ಸುಗಳ ತಾರಾಟ, ಹಳೆಯ ಲಟಾರಿ ಯಜ್ದಿ ಬೈಕುಗಳನ್ನು ಸುಮ್ಮನೆ ಸದ್ದು ಮಾಡುತ್ತಾ ಓಡಿಸುವ ಯುವಕರು,ಸೀರೆಯ ನೆರಿಗೆ ಎತ್ತಿಕೊಂಡು ನಡೆಯುವ ಯುವತಿಯರು,ಮಲಯಾಳಿ ದೇಶದಕಡೆಗೆ ಹೋಗುವ ಕೊನೆಯ ಬಸ್ಸಿಗಾಗಿ ಕಾದು ನಿಂತಿರುವ ಕ್ರೈಸ್ತಕನ್ಯಾಸ್ತ್ರೀಯರು, ಬೆಳ್ಳನೆಯ ಮುಂಡಾಸು ಸುತ್ತಿಕೊಂಡ ಮುಸ್ಲಿಂ  ಮತಪಂಡಿತ ಮಕ್ಕಳು. ವಾಂತಿ ಮಾಡಿಕೊಂಡು ಸುಸ್ತಾಗಿ ಬಸ್ಸೊಳಗೆ ತಮ್ಮತಮ್ಮ ಗಂಡಂದಿರ ಎದೆಗೆ ಒರಗಿ ನಿದ್ರಿಸುತ್ತಿರುವ ಎಳೆಯ ಪತ್ನಿಯರು….ಕುಡಿದು ಹೆಗಲಿಗೆ ಹೆಗಲು ಕೋಸಿಕೊಂಡು ಮಳೆಯಲ್ಲಿ ಸಿಳ್ಳೆ ಹೊಡೆದು ಕೊಂಡು ನಡೆದು ಹೋಗುತ್ತಿರುವ ಗೆಣೆಕಾರರು…

ಸಂಜೆ ವೀರಾಜಪೇಟೆಯಲ್ಲಿ ,ಆ ಕೆಸರು ಮಳೆ ಮನುಷ್ಯವಾಸನೆಗಳ ನಡುವೆ ಕೊಡೆ ಹಿಡಿದು ಕೊಂಡಿದ್ದ ನನಗೆ ಯಾಕೋ ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ.ಅದು ಡಿಸೆಂಬ್ ತಿಂಗಳ ಕೊನೆಯ ವಾರ.ಆದರೂ ಚಿರಿಚಿರಿ ಮಳೆ. ಅದು ರಂಜಾನ್  ತಿಂಗಳ ಕೊನೆಯ ದಿನಗಳು.ದಿನವಿಡೀ ಉಪವಾಸ ಹಿಡಿದ ಮುಸಲ್ಮಾನ ಭಾಂದವರು ಸಂಜೆ ಇನ್ನೇನು ಉಪವಾಸ ಮುಗಿಸಲು ಕಾಯುತ್ತಿದ್ದರು. ಹಾಗಾಗಿ ಒಂದು ತರಹದ ಧಾರ್ಮಿಕ ಹಸಿವೋ ಹಠ ವೋ ಅವರ ಮುಖದಲ್ಲಿತ್ತು. ಕ್ರಿಸ್ಮಸ್ ಗೆ ಇನ್ನು ಎರಡೇ ದಿನಗಳಿತ್ತು. ಕನ್ಯಾಶ್ರಮಗಳಿಂದ ಅನುಮತಿ ಪಡೆದು ತಮ್ಮ ಕುಟುಂಬ ವನ್ನು ಕಾಣಲು ಹೊರಟ ಕನ್ಯಾಸ್ತ್ರೀಯರ ಮುಖಗಳಲ್ಲಿ ಅಷ್ಟೇನೂ ಉಲ್ಲಾಸ ಕಾಣಿಸುತ್ತಿರಲಿಲ್ಲ.ಕಾಪಿಗೆ ಬೆಲೆಯಿಲ್ಲದೆ ಶುಂಠಿಗೆ ಬೆಲೆಯಿಲ್ಲದೆ ಅವೆರಡಕ್ಕೆ ಬೆಲೆಯಿಲ್ಲದಿದ್ದರೆ ಬೇರೆ ಏತಕ್ಕೂ ಬೆಲೆಕೊಡದ ಕೊಡಗಿನ ಬೆಳೆಗಾರರ ಮುಖಗಳೂ ಆಸಕ್ತಿ ಹುಟ್ಟಿಸುವಂತಿರಲಿಲ್ಲ.

  drawing1.jpgಸುಮ್ಮನೆ ಹತ್ತಬೇಕಿದ್ದ ಬಸ್ಸುಗಳನ್ನೆಲ್ಲ ತಪ್ಪಿಸಿಕೊಳ್ಳುತ್ತ ಎಲ್ಲಿಗಾದರೂ ಯಾಕಾದರೂ ಹೋಗಬೇಕು ಎಂದುಕೊಳ್ಳುತ್ತ ನಿಂತಿದ್ದವನ ಮುಂದೆ ಅವರಿಬ್ಬರು ಗಾಳಿಗೆ ಸಿಕ್ಕಿದ ಒಣ ಎಲೆಗಳಂತೆ ನಡೆದು ಬರುತ್ತಿದ್ದರು.ಮುಂದೆ ಮೌಲಾನ್ ಕುಟ್ಟಿ ಕಾಕಾ ಎಂಬ ಮುದುಕ ಮತ್ತು ಅವರ ಹಿಂದೆ ಪಾತುಂಞೆ ಎಂಬ ಸುಂದರಿ ಮುದುಕಿ… ಎಷ್ಟೋಕಾಲದ ನಂತರ ಇಬ್ಬರು ಮರಣದ ನಂತರವೇ ಒಂದಾಗಿರುವರೋ ಎಂಬಂತೆ ಆ ಮಂಜು ಮಳೆ ಗಾಳಿಯ ನಡುವೆ ನಡೆದು ಬರುತ್ತಿದ್ದರು. ಪಾತುಂಞೆ ತಾತಾಳ ಇತಿಹಾಸ ಪ್ರಸಿದ್ಧ ಬೆಳ್ಳಗಿನ ಬಣ್ಣ ಮತ್ತು ಅವಳ ತುಟಿಯಮೇಲಿದ್ದ ಕಪ್ಪಗಿನ ಕೆಡು ಮತ್ತು ಅದರ ಮೇಲೆ ಬೆಳೆದಿದ್ದ ಕಪ್ಪಗಿನ ಕೂದಲು ಈಗ ವಯಸ್ಸಾಗಿದ್ದರಿಂದ ಮಾತ್ರ ಬೆಳ್ಳಗಾಗಿ ಬಿಟ್ಟಿತ್ತು.ಇಲ್ಲದಿದ್ದರೆ ಮುದುಕಿ ಇನ್ನೂ ಸುಂದರಿಯಾಗಿಯೇ ಉಳಿದಿದ್ದಳು.ಮೌಲಾನ್ ಕುಟ್ಟಿ ಕಾಕಾ ಮಾತ್ರ ಕೊಂಚ ತಲೆ ಕೆಟ್ಟವರಂತೆ ಕಾಣಿಸುತ್ತಿದ್ದರು. ಕಾಲಲ್ಲಿರಬೇಕಾದ ರಬ್ಬರಿನ ಚಪ್ಪಲಿಗಳನ್ನು ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಕೊಂಡು ಓಲಾಡಿಕೊಂಡು ನಡೆಯುತ್ತಿದ್ದರು.ಅವರ ಬಿಳಿ ಪಂಚೆ ಗಾಳಿ ಮಳೆ ಕೆಸರುಮಣ್ಣಿಗೆ ಸಿಲುಕಿ ಯಾವುದೋ ಬಣ್ಣ ಪಡೆದಿತ್ತು. ಎಲೆ ಅಡಿಕೆಯ ಜೊಲ್ಲು ಬಾಯಿಂದ ಇಳಿದು ಗಡ್ಡಕ್ಕೆ ಸೇರುತ್ತಿತ್ತು..ಬಾಯಲ್ಲಿ ಯಾವಾಗಲೋ ಆರಿಹೋಗಿದ್ದ ಮೋಟು ಬೀಡಿ.ಮುದುಕ ಗಾಳಿಗೆ ಸಿಕ್ಕಿ ಆರಲು ಹೊರಟ ಮೋಂಬತ್ತಿಯಂತೆ ನಡೆದಾಡುತ್ತಿದ್ದ. ಅವರ ಹಿಂದೆ ಕೊಂಚ ಸ್ತಿರವಾಗಿ ಪಾತುಂಞೆ ತಾತಾ ನಡೆದು ಬರುತ್ತಿದ್ದಳು .ಮುದುಕಿಯ ಮುಖದಲ್ಲಿ ಎಂತಹದೋ ಉಲ್ಲಾಸ ಕಂಡು ಬರುತ್ತಿತ್ತು.

ಸುಮಾರು ಇಪ್ಪತ್ತೈದು ವರ್ಷಗಳ ನಂತರ ನಾನು ಮತ್ತೆ ಈ ಇಬ್ಬರ ಮುಖವನ್ನು ಕಾಣುತ್ತಿರುವುದು.ಈ ದಿನ ನೋಡಿರದಿದ್ದರೆ ಇತರ ನೂರಾರು ಸಾವಿರಾರು ವಯಸ್ಸಾದವರ ಹಾಗೆ ಈ  ಇಬ್ಬರು ಅಮರ ಪ್ರೇಮಿಗಳೂತೀರಿಕೊಂಡು ಹೋಗಿರುವರು ಅಂತಲೇ ತಿಳಿದು ಕೊಂಡಿರುತ್ತಿದ್ದೆ. ಮೂರು ವರ್ಷಗಳ ಹಿಂದೆ ನನ್ನ ಬಾಪಾ ತೀರಿಹೋಗಿದ್ದರು.ಈ ಇಬ್ಬರು ಅವರಿಗಿಂತ ಎಷ್ಟೋ ದೊಡ್ಡವರು.ನಾವು ಸಣ್ಣದಿರುವಾಗ ನದಿಬದಿಯಲ್ಲಿ ಕತ್ತಲಲ್ಲಿ ಕೂತುಗೊಂಡು ವಯಸ್ಸ್ಸಾದವರಲ್ಲಿ ಯಾರು ಮೊದಲು ತೀರಿಹೋಗಬಹುದು ಯಾರು ನಂತರ ಎಂದು ಲೆಕ್ಕ ಹಾಕುತ್ತಿದ್ದೆವು.ಆಗ ಮೊದಲು ಮೊದಲಿಗೇ ಬರುತ್ತಿದ್ದುದು ಈ ವೌಲಾ್ ಕುಟ್ಟಿಯವರ ಹೆಸರು. ನಂತರ ನದಿಯಲ್ಲಿ ಕತ್ತಲಲ್ಲಿ ಬತ್ತಲೆ ಸ್ನಾನ ಮಾಡುತ್ತಿದ್ದ ಪಾತುಂಞ ಎಂಬ ಅವರ  ಸುಂದರಿ ಪ್ರೇಯಸಿಯ ಹೆಸರು.ಅಪ್ಪಿತಪ್ಪಿಯೂ ಕೂಡಾ ನಾವು ಹುಡುಗರು ತೀರಿ ಹೋಗಲಿರುವವರ ಯಾದಿಯಲ್ಲಿ ನಮ್ಮ ತಂದೆ ತಾಯಿಯರ ಹೆಸರು ಹೇಳುತ್ತಿರಲಿಲ್ಲ. ಈಗ ನೋಡಿದರೆ ನಾವು ಹೆಸರು ಹೇಳದವರೆಲ್ಲ ತೀರಿಹೋಗಿದ್ದರೂ ಈ ಇಬ್ಬರು ಎಂದೂ ಒಂದಾಗಿರದಿದ್ದ ಅಮರ ಪ್ರೇಮಿಗಳು ನನ್ನೆದುರೇ ಜೀವಂತ ದೇವತೆಯರಂತೆ ನಡೆದು ಬರುತ್ತಿದ್ದರು

 ಯಾಕೋ ಇವರಿಬ್ಬರನ್ನು ಇಪ್ಪತ್ತೈದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಆ ರೂಪದಲ್ಲಿ ಕಂಡೊಡನೆ ನನಗೆ ಕಣ್ಣು ತುಂಬಿ ಬಂತು. ವೀರಾಜಪೇಟೆಯ ಆ ಸಾಧಾರಣ ಬಸ್ಸು ನಿಲ್ದಾಣ  ಜನನ-ಮರಣಗಳ ಪಾಪ-ಪುಣ್ಯಗಳ ರಂಗತಾಣವಾಗಿ ಕಂಡು ಸಣ್ಣಗೆ ನಡುಗಿದೆ.ಮೌಲಾನ್ ಕುಟ್ಟಿಯವರು ವಶೀಕರಣಕ್ಕೊಳಪಟ್ಟ ಮಂತ್ರವಾದಿಯಂತೆ ನಲುಗಿಹೋಗಿದ್ದರು.ಅವರ ತಲೆ ಬೋಳಾಗಿ,ಗಡ್ಡ ಮೀಸೆ ಕಣ್ಣಹುಬ್ಬು ಎಲ್ಲ ಬೆಳ್ಳಗಾಗಿಹೋಗಿತ್ತು.ಅವರು ತೊದಲುತ್ತಿದ್ದರು.ಕಂಡಕಂಡವರಿಗೆ ಅಸಹಜವಾಗಿ ಕೈ ಮುಗಿದು ನಗುತ್ತಿದ್ದರು. ನೋಡಿದವರಿಗೆ ಅದು ಅಳುವಂತೆ ತೋರುತ್ತಿತ್ತು. ಅವರ ಹಿಂದೆ ಬರುತ್ತಿದ್ದ ಪಾತುಂಞೆ ತಾತಾ ಒಂದು ಚೂರೂ ಮಾಸದ ಬೆಳ್ಳನೆ ಯ ಕುಪ್ಪಾಯ ಹಸಿರು ಅರೆ ಸೀರೆ ಸೊಂಟಕ್ಕೆ ಬೆಳ್ಳಿಯ ಉಡಿಪಟ್ಟಿ ಮತ್ತು ತಲೆಗೊಂದು ಬೆಳ್ಳನೆಯ ಬಟ್ಟೆಯನ್ನು ಕಟ್ಟಿಕೊಂಡು ಅಪೂರ್ವ ಸುಂದರಿಯಂತೆ ನಡೆಯುತ್ತಿದ್ದರು.ಆ ಮುದುಕಿಯ ಮುಖದಲ್ಲಿ ಹೇಳಲಿಕ್ಕಾಗದ ಒಂದು ಮಂದಹಾಸವಿತ್ತು. ನಾನು ದೀನನಾಗಿ ಏನೂ ಮಾಡಲಾಗದವನಂತೆ ಆ ಜನ ಜಂಗುಳಿಯಲ್ಲಿ ಅವರನ್ನು ನೋಡುತ್ತಾ ನಿಂತಿದ್ದವನು ಹತ್ತಿರಕ್ಕೆ ಹೋಗಿ ಅವರಿಬ್ಬರ ಮುಂದೆ ನಿಂತೆ.

ನನ್ನ ಗುರುತಾಯಿತಾ..ಎಂದು ಮಲಯಾಳದಲ್ಲಿ ಕೇಳಿದೆ.

ಪಾತುಂಞೆ ತಾತಾ ಎಲ್ಲರ ಮುಖ ನೋಡುವಂತೆಯೇ ನನ್ನ ಮುಖವನ್ನೂ ನೋಡಿ ಮಂದಹಾಸ ಸೂಸಿತು

ಮುದುಕ ಕಿವಿಯನ್ನು ಮುಂದೆ ಮಾಡಿಕೊಂಡು ಹತ್ತಿರಕ್ಕೆ ಬಂದು ಸುಮ್ಮನೆ ನಕ್ಕಿತು.

ಅಲ್ಲಿಗೆ ನನಗೆ ಗೊತ್ತಾಗಿ ಹೋಯಿತು. ಈ ಇಬ್ಬರು ಪುರಾತನ ಪ್ರೇಮಿಗಳು ತಿರುಗಿ ಬರಲಾಗದ ಲೋಕವೊಂದಕ್ಕೆ ಬದುಕಿರುವಾಗಲೇ ಹೋಗಿಬಿಟ್ಟಿದ್ದಾರೆ. ಇನ್ನು ಇವರ ಜೊತೆ ಮಾತನಾಡಿ ಸುಖ ದುಃಖ ವಿಚಾರಿಸಿ ಏನೂ ಸುಖವಿಲ್ಲವೆಂದು ಗೊತ್ತಾಗಿ ಪೆಚ್ಚಾಗಿ ಹೋದೆ.

  ******************** 

ಇಂದಿರಮ್ಮ ಎಂಬ ಒಂದು ಆಕಳನ್ನು ನೆನೆಯದೆ ಮತ್ತು ಈ ಆಕಳಿಗೆ ಇಂದಿರಮ್ಮ ಎಂಬ ಹೆಸರಿಟ್ಟ ನನ್ನ ಬಾಪಾನನ್ನು ನೆನೆಸಿಕೊಳ್ಳದೆ ನಾನು ಈ ಇಬ್ಬರು ಪ್ರೇಮಿಗಳ ಕತೆಯನ್ನು ಮುಂದುವರಿಸುವ ಹಾಗೆಯೇ ಇಲ್ಲ. ಹಾಗೆ ನೋಡಿದರೆ ವೀರಾಜಪೇಟೆ ಬಸ್ಸು ನಿಲ್ದಾಣದಲ್ಲಿ ತರಗೆಲೆಯಂತೆ ತೂರಿಕೊಂಡು ನಡೆದು ಬರುತ್ತಿದ್ದ ಇವರಿಬ್ಬರು ಕಣ್ಣಿಗೆ ಬಿದ್ದ ಕೂಡಲೇ ನನ್ನ ಮನಸ್ಸು ತುಂಬಿಕೊಂಡದ್ದು ತೀರಿಹೋದ ನನ್ನ ಬಾಪಾನ ನೆನಪು ಮತ್ತು ಅವರು ಹೆಸರಿಟ್ಟು ಸಾಕಿದ್ದ ಇಂದಿರಮ್ಮ ಎಂಬ ಪಾಪದ ಕಂದು ಆಕಳಿನ ರೂಪು.

ನಮ್ಮಲ್ಲಿ ಇಂದಿರಮ್ಮ ಎಂಬ ಆಕಳು ಇದ್ದದ್ದು ನಿಜ.ಇದಕ್ಕೂ ಮೊದಲು ಇಂದಿರಮ್ಮ ಎಂಬ ಇನ್ನೊಂದು ಹಳೆಯ ಆಕಳಿತ್ತು.ಇಂದಿರಾ ಗಾಂದಿಯವರ ಪರಮ ಅಬಿಮಾನಿಯಾಗಿದ್ದ ನನ್ನ ಬಾಪಾ ಅದಕ್ಕೆ ಕರುವಾಗಿರುವಾಗಲೇ ಇಂದಿರಮ್ಮ ಎಂಬ ಹೆಸರಿಟ್ಟಿದ್ದರು.ಆ ಹಸು ತುಂಬಾ ಒಳ್ಳೆ ಸ್ವಭಾವದ ಹಸುವಾಗಿತ್ತಂತೆ.ಅಷ್ಟೊಂದು ಹಾಲು ಕೊಡುತ್ತಿತ್ತಂತೆ.ಆದರೆ ನನಗೆ ನೆನಪಿರುವಾಗಲೇ ಅದಕ್ಕೆ ತುಂಬಾ ವಯಸ್ಸಾಗಿ ತೀರಿಹೋಗಿತ್ತು.ಅದರ ನೆನಪಿಗೆ ಅಂತ ಇನ್ನೊಂದು ಕರುವಿಗೆ ಇಂದಿರಮ್ಮ ಎಂದು ಇನ್ನೊಮ್ಮೆ ಹೆಸರಿಟ್ಟಿದ್ದರು.ಈ ಇಂದಿರಮ್ಮನೂ ತುಂಬ ಒಳ್ಳೆಯ ಹಸು.ಆದರೆ ತುಂಬ ದಡ್ಡ ಹಸು.ಅದಕ್ಕೆ ತಾನು ಹಸುವೆಂಬುದೇ ತಿಳಿದಿರಲಿಲ್ಲ.ಹಾಗಾಗಿ ಕರುಹಾಕದೆ,ಹಾಲು ಕೊಡದೆ ಎಲ್ಲರಿಂದಲು ಬಯ್ಯಿಸಿಕೊಳ್ಳುತ್ತಿತ್ತು.drawing2.jpg ಕೋಳಿಗಳ ಜೊತೆ ಕೋಳಿಯಂತೆ ವರ್ತಿಸುವುದು, ನಾಯಿಗಳೊಂದಿಗೆ ಆಟವಾಡಲು ಹೋಗಿ ಕಚ್ಚಿಸಿಕೊಳ್ಳುವುದು,ನಾವು ಮಕ್ಕಳು ಎರಡು ಕಾಲಲ್ಲಿ ಓಡಿನಡೆದಾಡುವ ಕಡೆಯಲ್ಲೆಲ್ಲಾ ತಾನೂ ನಡೆಯಲು ಹೋಗಿ ಸಿಕ್ಕಿಹಾಕಿ ಕೊಳ್ಳುವುದು ಹೀಗೆಲ್ಲಾ ಮಾಡಿ ದೊಡ್ಡವರಿಂದ ಸಕತ್ತಾಗಿ ಏಟು ತಿನ್ನುತ್ತಿತ್ತು.

ಆ ಸಣ್ಣ ವಯಸ್ಸಿನಲ್ಲೇ ಪೋಲಿ ಬಿದ್ದು ಹೋಗಿದ್ದ ನನ್ನನ್ನು ಸರಿದಾರಿಗೆ ತರಲು ನನ್ನ ಬಾಪಾ ಇಂದಿರಮ್ಮ ಎಂಬ ಈ ಆಕಳನ್ನು ನನ್ನ ಸುಪರ್ದಿಗೆ ಬಿಟ್ಟಿದ್ದರು.ಅಂದರೆ ಅದನ್ನು ನೋಡಿಕೊಳ್ಳುವುದು,ಮೇಯಿಸಲು ಒಯ್ಯುವುದು,ತೊಳೆಯಲು ನದಿಗೆ ಕೊಂಡುಹೋಗುವುದು ಇದನ್ನೆಲ್ಲ ನಾನು ಮಾಡಬೇಕೆಂದು ಕನಸು ಕಂಡಿದ್ದರು.ಒಂದು ವೇಳೆ ಈ ಇಂದಿರಮ್ಮ ಕರು ಹಾಕಿದ್ದೇ ಆದರೆ ಹಾಲು ಕರೆಯುವುದು,ಅಳೆಯುವುದು,ಮಾರುವುದು,ಲೆಕ್ಕ ಇಟ್ಟುಕೊಳ್ಳುವುದು,ದುಡ್ಡು ವಸೂಲು ಮಾಡುವುದು ಇದನ್ನೆಲ್ಲಾ ನಾನೇ ಮಾಡಬೇಕೆಂದೂ ಇದರಿಂದ ನನ್ನ ಪೋಲಿ ತಿರುಗುವ ಚಟ ಅಳಿದು,ಜವಾಬ್ಧಾರಿಬುದ್ಧಿ ಬರುವುದೆಂದೂ ಇದರಿಂದ ತುಂಬ ಕಷ್ಟದಲ್ಲಿ ಬದುಕುತ್ತಿರುವ ನಮ್ಮ ಕುಟುಂಬವೇ ಉದ್ಧಾರವಾಗುವುದೆಂದೂ ಅವರು ಕನಸು ಕಂಡಿದ್ದರು.

ನನ್ನ ಬಾಪಾನ ಆತ್ಮಕ್ಕೆ ಶಾಂತಿಯಿರಲಿ.

ಅವರು ಅಂದು ಕೊಂಡಂತೆ ನಾನು ನಡೆದುಕೊಳ್ಳಲೇ ಇಲ್ಲ.ಇಂದಿರಮ್ಮ ಎಂಬ ಆ ಆಕಳನ್ನು ಕರೆದುಕೊಂಡು ಹೊರಟೆನೆಂದರೆ ನನಗೆ ಬೇರೆಯೇ ಯೋಚನೆಗಳು ಹೊಳೆಯುತ್ತಿದ್ದವು.ನದಿಯಲ್ಲಿ ಮೀಯಿಸಲು ಹೊರಟರೆ ಬೇರೆಯೇ ತರಹದ ಜನರು ಬೇಟಿಯಾಗುತ್ತಿದ್ದರು.ಅದು ಬೇರೆಯೇ ಒಂದು ಲೋಕ!ಹಾಗೆ ವೀಕ್ಷಿಸುತ್ತಿದ್ದಾಗಲೇ ಒಮ್ಮೆ ಈ ವೌಲಾ್ ಕುಟ್ಟಿ ಕಾಕಾ ನನ್ನ ಕಡೆಗಣ್ಣಿಗೆ ಸಿಕ್ಕಿಹಾಕಿಕೊಂಡದ್ದು.

ಅವರೂ ನನ್ನ ಹಾಗೆಯೇ ವೀಕ್ಷಣೆ ನಡೆಸಿದ್ದರು.

ಅವರು ಕದ್ದು ನೋಡುತ್ತಿದ್ದುದು ನದಿಯಲ್ಲಿ ಅರೆ ಬತ್ತಲೆಯಾಗಿ ಮೀಯುತ್ತಿದ್ದ ಪಾತುಂಞೆ ಎಂಬ ಸುಂದರಿ ಮುದುಕಿಯನ್ನು . ನದಿಯಲ್ಲಿ ಮೀಯುತ್ತಿದ್ದರೆ ಈ ಪಾತುಂಞೆ ಮುದುಕಿ ಅಂತ ಯಾರೂ ಹೇಳುವ ಹಾಗಿರಲಿಲ್ಲ.ನಾನೇ ಎಷ್ಟೋ ಸಲ ಬೆನ್ನು ತೋರಿಸಿಕೊಂಡು ಸ್ನಾನ ಮಾಡುತ್ತಿದ್ದ ಈ ಅಜ್ಜಿಯನ್ನು ಯಾರೋ ಸುಂದರಿಯುವತಿ ಎಂದು ಕದ್ದು ನೋಡುತ್ತಾ ನಂತರ ಗೊತ್ತಾಗಿ ಓಡಿ ಹೋಗಿದ್ದುಂಟು.

ಹಾಗಾಗಿ ಮುದುಕರಾದ ಮೌಲಾನ್ ಕುಟ್ಟಿಯವರು     ಮುದುಕಿಯಾದ ಪಾತುಂಞೆಯನ್ನು ಕದ್ದು ನೋಡುವುದರಲ್ಲಿ ಅಂತಹ ತಪ್ಪೇನೂ ನನಗೆ ಈಗ ಕಾಣಿಸುವುದಿಲ್ಲ. ಆದರೆ ಆಗ ಚಿಕ್ಕವನಾಗಿರುವಾಗ ನನಗೆ ಅಸೂಯೆಯಾಗುತ್ತಿತ್ತು.

ಹಾಗಾಗಿ ವಿಚಿತ್ರವಾಗಿ ಕೂಗಿಕೊಳ್ಳುತ್ತಿದ್ದೆ.

ಈಗ ಎಲ್ಲ ವಿಚಿತ್ರವಾಗಿ ಕಾಣಿಸುತ್ತಿದೆ.

ಪಾತುಂಞೆ ವಿಚಿತ್ರ ಮುದುಕಿ.ಆಕೆ ತನ್ನನ್ನು ಬೆಳ್ಳೆಕ್ಕಾರನ ಅಂದರೆ ಬ್ರಿಟಿಷ್ ದೊರೆಯೊಬ್ಬನ ಮೊಮ್ಮಗಳು ಅಂತ ತಿಳಿದಿದ್ದಳು.ಕಾಡು ಕಡಿದು ಕಾಪಿತೋಟ ಮಾಡಲು ಬಂದ ಬೆಳ್ಳೆಕ್ಕಾರ ಈ ಪಾತುಂಞೆಯ ಅಜ್ಜಿಯನ್ನು ಮೋಹಿಸಿದ್ದನಂತೆ. ಹಾಗಾಗಿ ಪಾತುಂಞೆ ಅಷ್ಟು ಬೆಳ್ಳಗೆಯಂತೆ.ಪಾತುಂಞೆ ಆ ವಯಸ್ಸು ಕಾಲದಲ್ಲೂ ಅದನ್ನು ಎಲ್ಲರ ಬಳಿ ಹೇಳಿಕೊಂಡು ತಿರುಗಾಡುತ್ತಿತ್ತು.ಅದನ್ನು ಎಲ್ಲರಿಗೆ ತೋರಿಸಲು ನದಿಯಲ್ಲಿ ಅರೆ ಬತ್ತಲಾಗಿ ಮೀಯುತ್ತಿತ್ತು.ಎರಡೋ ಮೂರೋ ಮದುವೆಯಾಗಿ ಅದರಲ್ಲಿ ಅಸಂಖ್ಯಾತ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದಿದ್ದ ಮೌಲಾನ್ ಕುಟ್ಟಿ ಪಾತುಂಞೆ ಎಂಬ ಸುಂದರಿ ಮೀಯುವುದನ್ನು ನೋಡುತ್ತಿತ್ತು.drawing3-1.jpgತನ್ನ ಮಕ್ಕಳು ಮೊಮ್ಮಕಳ ಎದುರಲ್ಲೂ ನಾಚುಕೆಯಿಲ್ಲದೆ ನೋಡುತ್ತಾ ನಿಲ್ಲುತ್ತಿತ್ತು

`ನನಗೆ ನಾಚುಕೆ ಏಕೆ? ಅವಳು ನನಗೆ ಮೀಸಲಾಗಿದ್ದವಳು..ಒಂದಲ್ಲ ಒಂದು ದಿನ ಅವಳ ಕುರುಡು ಗಂಡನ ಕೈ ಬಿಡಿಸಿಕೊಂಡು ನನ್ನ ಕೈ ಹಿಡಿದು ಬರಬೇಕಾದವಳು.. 

  ಆ ವಯಸ್ಸುಕಾಲದಲ್ಲೂ ಮೌಲಾನ್ ಕುಟ್ಟಿ ಪಾತುಂಞೆಯ ಮೇಲಿನ ತಮ್ಮ ನೂರಾರು ವರ್ಷಗಳ ಪ್ರೇಮದ ಕತೆಯನ್ನು ಎಲ್ಲರೆದುರು ಹೇಳಿಕೊಳ್ಳುತ್ತಿದ್ದರು.

ಪಾತುಂಞೆ `ಆ ಮುದುಕನಿಗೆ ಮರಳು… ಅವನು ನೂರು ವರ್ಷಗಳಿಂದ ಕಾಯುತ್ತಿದ್ದರೆ ಇನ್ನೂ ನೂರು ವರ್ಷ ಕಾಯಲಿ , ನಾನು ನನ್ನ ಕುರುಡು ಗಂಡನ ಬಿಟ್ಟು ಅವನ ಮಂಚಕ್ಕೆ ಹೋಗುವುದಿಲ್ಲ ಎಂದು ನಟಿಕೆ ಮುರಿಯುತ್ತಿದ್ದಳು.

ನಾನು ಇಂದಿರಮ್ಮ ಎಂಬ ಆಕಳನ್ನು ನದಿಯ ಬದಿಯಲ್ಲಿ ಮೇಯಲು ಬಿಟ್ಟು ಇವರಿಬ್ಬರ ನೂರಾರು ವರ್ಷಗಳ ಪ್ರೇಮ ಸಮರವನ್ನು ಕದ್ದು ಅನುವಿಸುತ್ತಿದ್ದೆ.

ಅದು ಅವರಿಬ್ಬರಿಗೂ ಗೊತ್ತಿತ್ತು. ಹಾಗಾಗಿ ಅವರಿಬ್ಬರೂ ಹುಡುಗನಾಗಿದ್ದರೂ ನನಗೆ ಮರ್ಯಾದೆ ತೋರಿಸುತ್ತಿದ್ದರು ಹಾಗೂ ಅವರಿಬ್ಬರು ಒಬ್ಬರನ್ನೊಬ್ಬರು ಹೇಗೆ ಮೋಹಿಸುತ್ತಿದ್ದರೆಂದೂ ಹೇಗೆ ಅವರಿಗೆ ಇನ್ನೊಬ್ಬರಿಂದ ಮೋಸವಾಯಿತೆಂದೂ ವಿವರಿಸುತ್ತಿದ್ದರು.

ನಾನು ಅವರಿಬ್ಬರ ಪ್ರೇಮವಾಗ್ವಾದಗಳಿಂದ ತಪ್ಪಿಸಿ ಕೊಂಡು ನದಿಯ ಬದಿಯಲ್ಲಿ ಕಳೆದು ಹೋದ ಇಂದಿರಮ್ಮ ಎಂಬ ಆಕಳನ್ನು ಹುಡುಕುವವನಂತೆ ಓಡಿಬಿಡುತ್ತಿದ್ದೆ.

**********

   ಆ ಹೊಟೇಲಿನ ನೂರಾರು ಕತ್ತಲ ಕೋಣೆಗಳೊಳಗಿನಿಂದ ಏಕಕಾಲದಲ್ಲಿ ನೂರಾರುಗಾಜಿನ ಬಳೆಗಳ ಕಲರವ,ಬೆಳ್ಳಿಕಾಲುಗೆಜ್ಜೆಗಳ ಗಿಜಿಗಿಜಿ, ನಗುವ, ನಿಟ್ಟುಸಿರುಬಿಡುವ, ಮೂಗೆಳೆಯುವ, ಅರೆಯುವತೊಳೆಯುವ, ಗೇರುವ, ಕುಟ್ಟುವ ಸಡಗರ ಬೇಸರದ ಸದ್ದು ಕೇಳಿಬರುತ್ತಿತ್ತೆಂದರೆಭೂಮಿ ಆಕಾಶಗಳನ್ನು ಒಂದು ಮಾಡುವಂತೆ ಎಲ್ಲಕಡೆ ಒಲೆಯಹೊಗೆ ತುಂಬಿಕೊಂಡು ಆ ಹೊಗೆಯ ನಡುವೆ ಒಂದಿಷ್ಟು ಜಾಗ ಮಾಡಿಕೊಂಡು ಒಂದು ಕರಿಹಿಡಿದ ಟೇಬಲಿನ ಮುಂದೆ ಹೊಗೆಗೋ ಅಥವಾ ಯಾತಕ್ಕೋ ಗೊತ್ತಾಗದೆ ಕಣ್ಣಲ್ಲಿ ನೀರು ಸುರಿಸಿಕೊಂಡು ವೌಲಾ್ ಕುಟ್ಟಿಯವರು ದಿನದ ಹಣ ಎಣಿಸುತ್ತಾ ಕೂತಿದ್ದಾರೆಂದರೆ ಮೈನಾಡಿನಲ್ಲಿ ಸಂಜೆಯಾಯಿತು ಎಂದು ಅರ್ಥ.ಅಷ್ಟು ಹೊತ್ತಿಗೆ ಮೌಲಾನ್ ಕುಟ್ಟಿಯವರ ಜ್ಯೇಷ್ಟ ಮಗಳಾದ ಸುಹುರಾ ಎಂಬ ನಡುವಯಸ್ಸಿನ ಸುಂದರಿ ಹುಡುಗಿ ಗ್ಯಾಸ್  ಲೈಟಿಗೆ ಗಾಳಿ ಹೊಡೆದು ಕಡ್ಡಿಗೀರಿ ಬೆಳಕು ಎಲ್ಲಕಡೆ ಬುಸ್ಸೆಂದು ಹೊತ್ತಿಕೊಂಡಿತೆಂದರೆ ಇನ್ನು  ಸ್ಥಳೀಯ ಗಂಡಸರಿಗೆ ಅಲ್ಲಿ ಕೆಲಸವಿಲ್ಲವೆಂದು ಅರ್ಥ. drawing5.jpg    ಇನ್ನು ಅಲ್ಲಿ ನಮ್ಮಂತ ಹುಡುಗರಿಗೂ ಕೂರಲು ಅನುಮತಿಯಿಲ್ಲ. ಇನ್ನು ಅಲ್ಲಿ ನಡೆಯುವುದು ಮೌಲಾನಾ ಕುಟ್ಟಿಯವರ ಸ್ತ್ರೀಸಂಸಾರದ ರಾತ್ರಿ ಊಟದ ಹೋಟೆಲು. ಹಗಲೆಲ್ಲ ಮಲಗಿರುವ ಮುದುಕನಂತೆ ಗೊರಗುಟ್ಟಿಕೊಂಡಿರುವ ಅ  ಹೋಟೆಲ್ಲು ಇರುಳು ಕವಿಯುತ್ತಿದ್ದಂತೆಯೇ ಜಗಜಗಿಸಲು ತೊಡಗುತ್ತದೆ.

` ಇನ್ನು ಹುಡುಗರು ಜಾಗ ಖಾಲಿ ಮಾಡಬಹುದು.. ಎಂದುಮೌಲಾನ್ ಕುಟ್ಟಿಯವರ ಮೊದಲನೆಯ ಹೆಂಡತಿ ಖತೀಜುಮ್ಮ ಎಲೆಯಡಿಕೆ ಜಗಿದ ರಸವನ್ನು ಹಿತ್ತಾಳೆಯ ಪೀಕುದಾನಿಗೆ ತುಪ್ಪಿ ಗಹಗಹಿಸಿ ನಕ್ಕರೆಂದರೆ ಇನ್ನು ಮೌಲಾನ್ ಕುಟ್ಟಿಯವರನ್ನೂ ಸೇರಿಸಿದಂತೆ ಸ್ಥಳೀಯ ಗಂಡಸರಿಗಾಗಲೀ ಹುಡುಗರಿಗಾಗಲೀ ಅಲ್ಲಿ ಜಾಗವಿಲ್ಲವೆಂದು ಅರ್ಥ. ನಾವು ಹುಡುಗರು ಉದಾಸೀನರಾಗಿ ಅಷ್ಟುಹೊತ್ತು ಬಿಸಿಮಾಡಿಟ್ಟುಕೊಂಡಿದ್ದ ಬೆಂಚುಗಳನ್ನು ಬಿಟ್ಟು ಏಳಲು ಪಾಡುಪಡುತ್ತಿದ್ದಂತೆ ಮೌಲಾನ್ ಕುಟ್ಟಿಯವರ ಎರಡನೆಯ ಹೆಂಡತಿ ಪಾತುಮ್ಮ ಹೊಗೆ ಏಳುತ್ತಿರುವ ಮರಗೆಣಸು ತುಂಬಿದ ಬಾಂಡಲಿಯನ್ನು ಎತ್ತಿಕೊಂಡು ಬಂದು ಕಪಾಟಿನೊಳಗಡೆ ಕುಕ್ಕುತ್ತಾರೆ.

  ಆ ಇರುಳುಕತ್ತಲಿನಲ್ಲಿ ಹೊರಗೆ ಮಂಜುಕವಿದು ಒಳಗಡೆ ಬೇಯಿಸಿದ ಮರಗೆಣಸಿನ ಹಿಮಕವಿದು ನಂತರ ಮೌಲಾನ್ ಕುಟ್ಟಿಯವರ ಸುಂದರಿಯರಾದ ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ ಕಾಯಿಸಿದ ಮೀನು,ಒಣಗಿಸಿ ಹುರಿದ ಮಾಂಸ ಕಾಡು ಮೊಲದ ಮಾಂಸ  ಹಬೆಯಲ್ಲಿ ಬೇಯಿಸಿದ ನೂಲು ಹಿಟ್ಟು, ಕರಿದ ನೇಂದ್ರ, ಹುರಿದ ನೇಂದ್ರ, ಬೇಯಿಸಿದ ನೇಂದ್ರ.. ..   ಹೀಗೆ ಒಂದೊಂದೇ ಬಾಂಡಲಿಗಳನ್ನು ಹಿಡಿದು ಹೊರಬಂದು ಅಡ್ಡಾಡತೊಡಗಿದರೆಂದರೆ ಅಲ್ಲೊಂದು ಯಕ್ಷಿಗಳ ಲೋಕವೇ ಸೃಷ್ಟಿಯಾಗಿಬಿಡುತ್ತಿತ್ತು. ಮೌಲಾನ್ ಕುಟ್ಟಿಯವರ ಜೊತೆಗೆ ನಾವು ಹುಡುಗರೂ  ಆ ಹೋಟೆಲ್ಲಿನಿಂದ ಜಾಗ ಖಾಲಿಮಾಡುತ್ತಿದ್ದೆವು.ಗಂಡಸರಾದ ನಮ್ಮ ಸದ್ದು ಅಲ್ಲಿಂದ ಅಡಗುತ್ತಿದ್ದಂತೆಯೇ ಅಲ್ಲಿ ಹೆಂಗಸರ ಹೇಳಲಾಗದಂತಹ ಸದ್ದಿನ ಸಂತೆಯೊಂದು ಶುರುವಾಗುತ್ತಿತ್ತು. ಮತ್ತು ಮಲೆಯಮೇಲಿನ ತೇಗದ ಕೂಪಿನಿಂದ ಇಳಿದುಬರುವ ಲಾರಿಗಳು ಒಂದೊದಾಗಿ ಸದ್ದು ಮಾಡುತ್ತಾ ಆ ಹೋಟೆಲಿನ ಮುಂದೆ ನಿಲ್ಲಲು ತೊಡಗಿ ಆ ಲಾರಿಗಳ ಡ್ರೈವರುಗಳೂ ಲೋಡರುಗಳೂ ಕ್ಲೀನರುಗಳಾದ ಹುಡುಗರುಗಳೂ ತಮತಮಗೆ ತಕ್ಕುದಾದ ಗಂಡಸುತನವನ್ನು ತಮ್ಮತಮ್ಮ ಮುಖಗಳಲ್ಲೂ ಮೈಯ್ಯ ಮಾಂಸಖಂಡಗಳಲ್ಲೂ ತೋರಿಸಿಕೊಳ್ಳುತ್ತ ಹೋಟೆಲಿನ ಒಳಗಡೆಹೊಕ್ಕುಬಿಡುತ್ತಿದ್ದರು.ಮೌಲಾನ್ ಕುಟ್ಟಿಯವರ ಹೋಟೆಲ್ಲಿನಿಂದ ದೂಡಿಸಿಕೊಂಡ ನಾವು ಹುಡುಗರುಅನಾಥರಂತೆ ನದಿಯಬದಿಯಲ್ಲಿ ಕುಳಿತುಕೊಂಡು ಸಂಜೆಕತ್ತಲಿನಲ್ಲಿ ನದಿಯಿಂದಏಳುವ ಕಾವಳದಲ್ಲಿ ಜಿಗಿಯುವ ಉಸಿರುಬಿಡುವ ನಾನಾತರಹದ ಜಲಜಂತುಗಳನ್ನುನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದೆವು. ಮೌಲಾನ್ ಕುಟ್ಟಿಯವರು ದಿಕ್ಕುತಪ್ಪಿದವರಂತೆ ಕತ್ತಲಿನಲ್ಲಿ ಎಡವಿಕೊಂಡು ಸೇತುವೆದಾಟಿ  ಮಸೀದಿಯ ಅಂಗಳ ಸೇರಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಲು ತೊಡಗುತ್ತಿದ್ದರು 

       `ಓ ಅಲ್ಲಾಹುವೇ ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ.ಓ ಪ್ರಭುವೇ ನೀನು ನನ್ನನ್ನು ಅತ್ಯಂತ ಸರಳವಾಗಿ ವಿಚಾರಣೆ ನಡೆಸು..

**************************

   ಪಾತುಂಞೆ ತಾತಾಳ ಕುರುಡ ಗಂಡನ ಹೆಸರು ಅಲವಿ ಕೋಯಾ ಅಂತ. .ಅವರನ್ನು ಹಲವರು ಕುರುಡು ಕೋಯಾ ಎಂತಲೂ ಇನ್ನು ಕೆಲವರು ಮಾಯದ ಕೋಯಾ ಎಂತಲೂಕರೆಯುತ್ತಿದ್ದರುಕೋಯಾ ತನ್ನ ಬಿದಿರಿನ ಬಿಡಾರವನ್ನೆಲ್ಲ ಕತ್ತಲು ಮಾಡಿಕೊಂಡು ಎಲ್ಲೋ ಒಂದು ಮೂಲೆಯಲ್ಲಿ ಕಣ್ಣುಬಿಚ್ಚಿಕೊಂಡು ಕುಳಿತುಕೊಂಡುಬಿಟ್ಟರೆ ಮನೆಯೊಳಗೆ ಗಾಳಿ ಅಲ್ಲಾಡುವುದೂ ಆತನಿಗೆ ಕಾಣಿಸುತ್ತಿತ್ತು.ಪಾತುಂಞೆ ಸುಮ್ಮನೆ ಶೆಖೆಗೆ ಅಂತ ರವಿಕೆಯ ಒಂದು ಗುಂಡಿ ಸರಿಸಿದರೂ ಆತ ಹೂಂಕರಿಸಿಬಿಡುತ್ತಿದ್ದ.ಆಕೆಯ ಕಾಲ ಸಪ್ಪಳದಿಂದಲೇ ಆಕೆ ಹೋಗುವುದು ನದಿಗೋ ನೀರಿಗೋ ತಂಡಾಸಿಗೋ ಎಂದು ಗೊತ್ತು ಹಿಡಿಯುತ್ತಿದ್ದ.ಅದಕ್ಕೇ ಪಾತುಂಞೆ ಕುರುಡು ಗಂಡ ಕೋಲು ಊರಿಕೊಂಡು ನದಿಯ ಆಚೆ ಕರೆಯ ಮಸೀದಿಗೆ ನಡೆಯುತ್ತಿದ್ದಂತೆ ಕದ್ದು ನದಿಗಿಳಿಯುತ್ತಿದ್ದಳು.ನಮಾಜ್ ಮುಗಿಸಿ ಬಂದ ಕೋಯಾನಿಗೆ ಹೆಂಡತಿ ನದಿಯಲ್ಲಿ ಮೀದು ಬಂದದ್ದು ವಾಸನೆ ಯಿಂದಲೇ ಗೊತ್ತಾಗಿ ಹೋಗುತ್ತಿತ್ತು

‘ಬೆಕ್ಕಿಗೆ ಕಣ್ಣಿಲ್ಲಾ ಎಂದು ಕಟ್ಟಿಕೊಂಡರೆ ಅದಕ್ಕೆ ಕುಂಡೆಯಲ್ಲೂ ಕಣ್ಣು..’ಪಾತುಂಞೆ ಜೋರಾಗಿಯೇ ಗೊಣಗುತ್ತಿದ್ದಳು.

ಕುರುಡ ಕೋಯಾಹೆಂಡತಿಯನ್ನು ಮನೆಯೆಲ್ಲಾ ಅಟ್ಟಾಡಿಸಿಕೊಂಡು ಹೊಡೆಯಲು ಹೋಗಿ ಗೋಡೆಗೆ ಡಿಕ್ಕಿ ಹೊಡೆಯುತ್ತಿದ್ದ ‘ಈ ಬೆಳ್ಳಗಿನ ಹೆಣ್ಣಿನ ಮೈ ಕಾಣುವವರು ಯಾರೂ ಮುಟ್ಟಬಾರದು ಅಂತ ಕುರುಡನನ್ನು ಕಟ್ಟಿಕೊಂಡರೆ ಇವನು ಮೂರುಕಣ್ಣಿನವನಾದನಲ್ಲ ಪಡೆದವನೇ’ ಎಂದು ಪಾತುಂಞೆ ಅವನಿಂದ ತಪ್ಪಿಸಿಕೊಳ್ಳುತ್ತಾ ಬೊಬ್ಬೆ ಹೊಡೆಯುತ್ತಿದ್ದಳು ಹಾಗಾಗಿ ಅಲವಿಕೋಯಾ ಆದಷ್ಟು ಮನೆಯಮುಂದಿನ ಮಣ್ಣಿನ ಹಾಸಿನಲ್ಲೇ ಆದಷ್ಟು ನಮಾಝು ಮಾಡಿಮುಗಿಸುತ್ತಿದ್ದರು ಮತ್ತು ಶುಕ್ರವಾರದಂದು ಮಾತ್ರ ಮಸೀದಿಗೆ ಹೋಗಿಬರುತ್ತಿದ್ದರು.ಅಥವಾಪಾತುಂಞೆಯ ಜೊತೆ ತಾನೂ ತಡಕುತ್ತಾ ನದಿಗೆ ನಡೆದು ದಡದಲ್ಲಿ ಕೂತುಬಿಡುತ್ತಿದ್ದರು.ಆಗ ಮಾತ್ರ ಪಾತುಂಞೆ ಬೆತ್ತಲಾಗುತ್ತಿರಲಿಲ್ಲ…ಮತ್ತು ಮೌಲಾನ್ ಕುಟ್ಟಿಯವರು ನದಿಯ ಬದಿಗೆ ಸುಳಿಯುತ್ತಿರಲಿಲ್ಲ. ಮತ್ತು ನಾನು ಇಂದಿರಮ್ಮ ಎಂಬ ಆಕಳನ್ನು ಕುರುಡ ಕೋಯನಿಗೆ ಸದ್ದು ಕೇಳಿಸದ ಹಾಗೆ ನದಿ ದಾಟಿಸಿ ಕರೆದೊಯ್ದು ಬಿಡುತ್ತಿದ್ದೆ

*********************************** 

ಅದೆಲ್ಲಿಂದಲೋ ಮಸೀದಿಯಿಂದ ಸಂಜೆಯ ಉಪವಾಸ ಮುಗಿಸುವ ಬಾಂಗಿನ ಕೂಗು ಕ್ಷೀಣವಾಗಿ ಹಸಿದ ಹೊಟ್ಟೆಯೊಳಗಿಂದ ಕೇಳಿಬರುವ ದೀನಕೂಗಿನಂತೆ ಕೇಳಿಬರುತ್ತಿದ್ದಂತೆ ಮಲಗಿಕೊಂಡಂತಿದ್ದ ಆ ನಗರ ಸೆಟೆದುಕೊಂಡು ಅಲ್ಲಾಡಲು ತೊಡಗಿತು.ಅದೆಲ್ಲೋತೆರೆದುಕೊಳ್ಳಲು ತೊಡಗಿದಹೋಟೆಲ್ಲುಗಳು, ಗ್ಲಾಸಿನಸದ್ದು, ತಿನ್ನುವಸದ್ದು, ಖರ್ಜೂರ,ಗಸಗಸೆ,ಹುರಿದಮೊಟ್ಟೆ,ಮೆಂತೆಯಪಾಯಸ,ಸುಲಿದ ಕಿತ್ತಳೆಯಪರಿಮಳ.. ಮಳೆ ನಿಂತು ಆಕಾಶ ಒಂದುತರಹದ ಹಳದಿಯಿಂದ ತುಂಬಿಕೊಂಡು ಕುಡಿದವರು ಕುಡಿಯದವರು ಉಪವಾಸವಿದ್ದವರು ಇರದಿದ್ದವರು ಎಲ್ಲರೂ ಆ ಹಳದಿ ಬೆಳಕಿನಲ್ಲಿ ವಿಚಲಿತರಾಗಿ ನಡೆಯುತ್ತಿರುವವರಂತೆ ತೋರುತ್ತಿದ್ದರು

ಮೌಲಾನ್  ಕುಟ್ಟಿ ಮತ್ತು ಪಾತುಂಞೆ ಎಂಬ ಅಮರ ಪ್ರೇಮಿಗಳು ಅದಾಗ ತಾನೇ ತೆರೆದುಕೊಂಡ ಹೋಟೆಲ್ಲೊಂದರ ಮುಂದೆ ದೀನರಾಗಿ ನಿಂತು ಕೊಂಡುಉಪವಾಸ ಮುರಿಯಲು ಏನನ್ನಾದರೂ ತಿನ್ನಲು ಕೊಡಲುಕೈಯೆತ್ತಿ ಬೇಡಿಕೊಳ್ಳುತ್ತಿದ್ದರು`ಇಹ ಲೋಕದಲ್ಲಿ ಕೈಯೆತ್ತಿ ಕೊಟ್ಟರೆ ಪರಲೋಕದಲ್ಲಿ ಆ ಪಡೆದವನು ನಿಮಗೆ ಕೈಯೆತ್ತಿ ನೀಡುತ್ತಾನೆ ಮಕ್ಕಳೇ’ಮೌಲಾನ್  ಕುಟ್ಟಿಯವರು ಎರಡೂ ಕೈಗಳನ್ನೆತ್ತಿ ಒಮ್ಮೆಆಕಾಶನೋಡುತ್ತಾ ಇನ್ನೊಮ್ಮೆ ಹೋಟೆಲ್ಲಿನಿಂದ ಹೊರಬರುವ ತಿಂದುಂಡ ಬಾಯಿಗಳನ್ನು ಆಸೆಯಿಂದ ನಿರುಕಿಸುತ್ತಾ ನಾಲಿಗೆ ತೀಡಿಕೊಳ್ಳುತ್ತಾ ಕೇಳಿಕೊಳ್ಳುತ್ತಿದ್ದರು

`ಈ ವಯಸ್ಸಾದ ಯತೀಂ ಮುದುಕರ ಉಪವಾಸ ಬಿಡಿಸಿದರೆ ಮೂವತ್ತೂ ಉಪವಾಸ ಮಾಡಿದ ಕೂಲಿ ಪರಲೋಕದಲ್ಲಿ ಸಿಗುತ್ತದೆ ನನ್ನ ಮುದ್ದು ಮಕ್ಕಳೇ’ ಪಾತುಂಞೆ ತಾತಾ ಮೋಹಕವಾಗಿ ಕೂಗಿಕೊಳ್ಳುತ್ತಿದ್ದಳು. ಮುದುಕಿಯಾದರೂ ಇನ್ನೂ ಹಾಗೇ ಇರುವ ಆಕೆಯ ಬೆಳದಿಂಗಳಂತಹ ಮೈ.. ಆಕೆಯ ತುಟಿಯ ಮೇಲಿನ ಕಪ್ಪಗಿನ ಕೆಡು.. ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ವೀರಾಜಪೇಟೆಯ ಆ ಸಂಜೆ.. ಉಪವಾಸ ಮುರಿದು ತಲೆಗೆ ಬೆಳ್ಳಗಿನ ಬಟ್ಟೆ ಕಟ್ಟಿಕೊಂಡು ಪ್ರಾರ್ಥಿಸಲು ಮಸೀದಿಗೆ ದಾವಿಸುತ್ತಿರುವ ಮಂದಿ..ಯಾಕೋ ಕಣ್ಣು ತುಂಬಿಕೊಳ್ಳತೊಡಗಿ ನಗು ಬಂತು.ಬಂದ ಬಸ್ಸುಗಳನ್ನೆಲ್ಲ ತಪ್ಪಿಸಿ ಕೊಂಡು ಎಲ್ಲಿಗೆ ಯಾಕಾದರೂ ಹೋಗಬೇಕೆಂದು ನನ್ನ ಬಾಲ್ಯ ಕಾಲದ ಈ ಪುರಾತನ ಪ್ರೇಮಿಗಳನ್ನು ಕಣ್ಣೆವೆ ಬಿಡಿಸದೆ ಸುಮ್ಮನೆ ನೋಡುತ್ತಿರುವ ನಾನು.. ಉಪವಾಸವೂ ಇರದೆ ಪಡೆದವನನ್ನೂ ಕಾಣದೆ ನಾನಾ ಖಯಾಲಿಗಳಲ್ಲಿ ಮುಳುಗಿರುವ ನಾನು..

ಅವರಿಬ್ಬರನ್ನು ಕರೆದು ಹೋಟೆಲ್ಲಿನೊಳಗೆ ಕೂರಿಸಿ ಅಪರಿಚಿತನಂತೆ ನಟಿಸುತ್ತಾ ಅವರ ಉಪವಾಸ ಬಿಡಿಸಿದೆ.ಅವರು ನೂರಾರು ದಿನಗಳಿಂದ ಉಪವಾಸ ಇದ್ದವರಂತೆ ತಿನ್ನುತ್ತಿದ್ದರು.ತಿಂದು ಮುಗಿಸಿದ ಮೌಲಾನ್ ಕುಟ್ಟಿಯವರು ಸುಮ್ಮನೇ ತೇಗುತ್ತಿದ್ದರು.ತಿಂದು ಮುಗಿದಮೇಲೆ ಪಾತುಂಞೆ ತಾತಾ`ನಿನ್ನ ಪಡೆದವನು ರಹಮತ್ತಿನಲ್ಲಿ ಇಡಲಿ ಮಗನೇ..ಎಂದರುಆಮೇಲೆ ಕೊಂಚ ತಡೆದು` ನಿನ್ನದು ಎಲ್ಲಿಯಾಯಿತು ಮಗನೇ ಎಂದು ಕೇಳಿದಳು ಯಾಕೋ ಸುಳ್ಳು ಹೇಳಬೇಕೆನಿಸಿತು ಇಲ್ಲೇ ಕೇರಳದಲ್ಲಿ..ಇರಿಟ್ಟಿಯ ಹತ್ತಿರ.. ಇಲ್ಲಿ ಶುಂಠಿ ವ್ಯಾಪಾರಕ್ಕೆ ಬಂದಿರುವೆ..ಎಂದು ಹೇಳಿಬಿಟ್ಟೆ.  ವೌಲಾ್ ಕುಟ್ಟಿಯವರು ತೇಗುವುದು ಮುಗಿದು ಅಲ್ಲೇ ಹೋಟೆಲಿನೊಳಗೇ ಪ್ರಾರ್ಥಿಸಲು ಶುರುಮಾಡಿದರು.

`ಪಡೆದವನೇ..ಎಲ್ಲಿಂದಲೋ ಬಂದು ನಮಗೆ ಈ ದಿನದ ಉಪವಾಸ ಮುರಿಸಿದ ಈ ಮಗುವಿಗೆ ಇಹದಲ್ಲೂ ಪರದಲ್ಲೂ ಬರಕತ್ತನ್ನೂ ರಹಮತ್ತನ್ನೂ ಕರುಣಿಸು ಪಡೆದವನೇ ಅಂತಿಮ ದಿನದಂದು ಇವನನ್ನು ಅತ್ಯಂತ ಸರಳವಾಗಿ ವಿಚಾರಣೆ ನಡೆಸು ಕರುಣಾಮಯನಾದ ಅಲ್ಲಾಹುವೇ..

***********************

ನಮ್ಮ ಇಂದಿರಮ್ಮ ಎಂಬ ಆಕಳುಸತ್ತುಹೋಗಿದ್ದು ಮತ್ತು ಪಾತುಂಞೆ ತಾತಾಳ ಗಂಡ ಕುರುಡ ಕೋಯಾ ತೀರಿಹೋಗಿದ್ದು ಒಂದೇದಿನದಲ್ಲಿ ಮತ್ತು ಒಂದೇ ನದಿಯಲ್ಲಿ..

ಸುಮಾರು ಕಾಲು ಶತಮಾನದ ಹಿಂದೆ ಇಂತಹದೇ ಒಂದು ಸಂಜೆ ಮೈನಾಡಿನ ನದಿಯಲ್ಲಿ ಪಾತುಂಞೆ ನದಿಯ ನೀರಲ್ಲಿ ಮುಳುಗು ಹಾಕುತ್ತಿರುವಾಗ ಪಾಪದ ಆಕಳು ನಾನಿಲ್ಲದೆ ನದಿ ದಾಟಲು ಹೋಗಿ ನೀರಲ್ಲಿ ಸಿಲುಕಿ ಪಾತುಂಞೆ ಬೊಬ್ಬೆ ಹಾಕಿದಳಂತೆ.ಕುರುಡು ಕೋಯ ನದಿಗೆ ಹಾರಿದನಂತೆ.ನಾವು ಶಾಲೆ ಬಿಟ್ಟು ಬಂದಾಗ ಆಕಳ ದೇಹ ಮತ್ತು ಕುರುಡು ಕೋಯನ ಶರೀರ ಎರಡನ್ನೂ ದಡದಲ್ಲಿ ಮಲಗಿಸಿ ಪಾತುಂಞೆ ಪಡೆದವನಿಗೆ ಶಾಪ ಹಾಕುತ್ತಿದ್ದಳು.

ಮೌಲಾನ್ ಕುಟ್ಟಿಯವರು ನೋಡುತ್ತಿದ್ದರು..ನಾವು ಮಕ್ಕಳು ಅಳುತ್ತಿದ್ದೆವು.. 

***************************

ಪ್ರಿಯ ಓದುಗರೇ,ಈ ಕತೆ ಹೇಗೆ ಮುಗಿಸುವುದು ಎಂದು ಕುಳಿತಿರುವಾಗಲೇ ಮೌಲಾನ್  ಕುಟ್ಟಿಯವರು ತೀರಿ ಹೋದ ಸುದ್ದಿ ಬಂದಿದೆ. ಪಾತುಂಞೆ ತೀರಿಹೋದ ಅವರ ದೇಹದ ಬಳಿ ಇದ್ದಳಂತೆ ಮತ್ತು ಮೌಲಾನ್  ಕುಟ್ಟಿಯವರ ದೇಹವನ್ನು  ಮೈನಾಡಿನ ಖಬರ ಸ್ಥಾನಕ್ಕೆ ಕೊಂಡು ಹೋಗುವಾಗ ಪಡೆದವನಿಗೆ ಶಾಪ ಹಾಕುತ್ತಿದ್ದಳಂತೆ.ಮತ್ತು ಈಗಲೂಅವಳ ಬಿದಿರಿನ ಬಿಡಾರವನ್ನು ಕತ್ತಲೆ ಮಾಡಿಕೊಂಡುಕೂತಿರುತ್ತಾಳಂತೆ.ಎಲ್ಲರ ಆತ್ಮಕ್ಕೂ ಶಾಂತಿಯಿರಲಿ

**********************************************

[ರೇಖಾ ಚಿತ್ರಗಳು:ಚರಿತಾ]

Advertisements