ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆ

 nagaraja-pandey.jpg

ನಿನ್ನೆ ಸಂಜೆ ಮೈಸೂರಿನಲ್ಲಿ ಇನ್ನೇನು ಮಳೆ ಸುರಿಯುವ ಹಾಗೆ ಇತ್ತು. ಆದರೆ ಹಾಗೇನೂ ಆಗಲಿಲ್ಲ.  ನಾನು ಸುಮಾರು ಎರಡು ಗಂಟೆಗಳ ಹೊತ್ತು ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಕಥೆ ಕೇಳುತ್ತಾ ಕುಳಿತಿದ್ದೆ.  ಒಂದಂತೂ ನಿಜ.  ಇನ್ನು ನೂರಾರು ವರ್ಷಗಳಷ್ಟು ಕಾಲ ಬರೆಯುವಷ್ಟು ವಿಷಯಗಳು ಅವರ ಬಳಿ ಇರುವುದು ಗೊತ್ತಾಯಿತು. ನನಗೆ ಮೈಸೂರಿನಲ್ಲಿ ಮಾತನಾಡಲು, ನನ್ನನ್ನು ಹರಸಲು ಇನ್ನೊಬ್ಬರು ಮಹಾ ಗುರುಗಳು ದೊರಕಿದರು ಎಂಬ ಆನಂದದಿಂದ ಅವರ ಬಳಿಯಿಂದ ಹೊರಟು ಬಂದು ಇದನ್ನು ಬರೆಯುತ್ತಿರುವೆ

 ನಾಗರಾಜ ಸೂರ್ಜನಾರಾಯಣ ಪಾಂಡೆಯವರು ನನಗೆ ಮೊದಲು ಪರಿಚಯವಾಗಿದ್ದು ಸುಮಾರು ಆರು ತಿಂಗಳುಗಳ ಹಿಂದೆ ಆಕಸ್ಮಿಕವಾಗಿ. ಹಳೆಯಕಾಲದ ಕೀ ಕೊಡುವ ಕೈಗಡಿಯಾರಗಳನ್ನು ಸರಿಪಡಿಸುವ ತಜ್ಞರು ಯಾರಾದರೂ ಇದ್ದಾರೆಯೇ ಎಂದು ಮೈಸೂರಿನ ಮಕ್ಕಾಜಿ ಚೌಕದ ಬಳಿಯಿರುವ ಒಲಂಪಿಯಾ ಥಿಯೇಟರಿನ ಅಕ್ಕ ಪಕ್ಕ ಹುಡುಕುತ್ತಿದ್ದೆ ಆಗ ಯಾರೋ ಪಾಂಡಯವರ ಹೆಸರು ಹೇಳಿದರು.  ಹೋಗಿ ನೋಡಿದರೆ ಆ ಹಳೆಯ ಗಡಿಯಾರದ ಅಂಗಡಿಯಲ್ಲಿ ಪಾಂಡೆಯವರ ಪುತ್ರ ಇದ್ದರು.  ಪಾಂಡೆಯವರು ಈಗ ಗಡಿಯಾರಗಳ ಗೊಡವೆಗೆ ಹೋಗುವುದಿಲ್ಲವೆಂದೂ ಈಗ ಅವರು ಪತಂಜಲೀ ಯೋಗವನ್ನು ಅರ್ಹರಿಗೆ ಹೇಳಿಕೊಡುತ್ತಿದ್ದಾರೆಂದೂ ಗೊತ್ತಾಯಿತು.  ದೂರವಾಣಿಯಲ್ಲಿ ಪಾಂಡೆಯವರನ್ನು ಮಾತನಾಡಿಸಿ ‘ಏನು ಪಾಂಡೆಯವರೇ ಗಡಿಯಾರದ ಸಹವಾಸ ತೊರೆದು ಯೋಗಾಚಾರ್ಯರಾಗಿದ್ದೀರಲ್ಲಾ..?’ ಎಂದು ಕೇಳಿದೆ ‘ಈಗ ಯೋಗದ ಮೂಲಕ ಕಾಲವನ್ನು ಅಳೆಯುತ್ತಿದ್ದೇನೆ’ ಎಂದು ತೀರಾ ಅಪರೂಪದ, ಆಳದ ಧ್ವನಿಯಲ್ಲಿ ಹೇಳಿದರು. ಅವರ ಧ್ವನಿ ಕೇಳಿದರೇ ಪುಳಕಿತವಾಗುವ ಹಾಗೆ ಇತ್ತು.  ಆಮೇಲೆ ಅವರ ಜೊತೆ ರಾಜಯೋಗದ ಕುರಿತು, ಪತಂಜಲಿಯ ಕುರಿತು ಕೇಳಿದೆ. ಅವರ ಜೊತೆ ಮಾತನಾಡುತ್ತಾ ಈ ಮನುಷ್ಯ ಬಹಳ ದೊಡ್ಡವರು ಅನಿಸಿತು. ಹುಡುಗನಾಗಿರುವಾಗ ಬಹಳ ಕಷ್ಟಪಟ್ಟಿದ್ದಾರೆ ಅನಿಸಿತು.

 ಯೋಗದ ಜೊತೆಗೆ ಕಾವ್ಯ, ಗಡಿಯಾರದ ಜೊತೆಗೆ ಭಗವಂತ, ಹಸಿವಿನ ಜೊತೆ ಆದ್ಯಾತ್ಮ, ಕಾಮದ ಜೊತೆ ಏಕಾಂಗಿತನ, ಹಷೀಸಿನ ಜೊತೆ ಆತ್ಮಹತ್ಯೆ, ಆತ್ಮ ಸಾಕ್ಷಾತ್ಕಾರದ ಜೊತೆ ಒಲವು ಎಲ್ಲವನ್ನು ಬಲ್ಲವರಾಗಿದ್ದಾರೆ ಅನಿಸಿತು. ಅದಕ್ಕಾಗಿ ನಿನ್ನ ಪುನಃ ಅವರ ಜೊತೆ ಇನ್ನಷ್ಟು ಮಾತನಾಡಿಸಿದೆ. ಅವರ ಕಥೆ, ಕಾವ್ಯ, ಹಾಡು, ಆಧ್ಯಾತ್ಮ, ಹಸಿವು, ಏಕಾಂಗಿತನ ಮತ್ತು ಎಡೆಬಿಡದ ಅಲೆದಾಟ- ಎಲ್ಲವನ್ನೂ ಕೇಳಿಸಿಕೊಂಡು ಸಖತ್ ಸುಸ್ತಾಗಿ ಹೋದೆ.  ಅದೊಂದು ತರಹದ ಸೋಲಿನ ಸುಸ್ತು.  ಜ್ಞಾನಿಯ ಎದುರಲ್ಲಿ ಸೋಲುವ ಪ್ರಣಯಿಯ ಹಾಗೆ.  ಅವರೂ ನನ್ನ ವಯಸಿನಲ್ಲಿ ಇಂತಹ ಹಲವು ಸೋಲುಗಳನ್ನು ಕಂಡಿರುವರು ಅನಿಸಿತು. ಬರುವಾಗ ಕೈಮುಗಿದೆ.  ‘ನಿಮ್ಮನ್ನು ನಾನು ಕಂಡಿದ್ದು ಒಂದು ತರಹದ ವಿಧಿಲಿಖಿತದ ಹಾಗಿದೆ. ಇನ್ನೇನೆಲ್ಲಾ ಆಗಲಿಕ್ಕಿದೆಯೋ’ ಅಂದೆ.

 ‘ಇದು ನನ್ನ ಅಹಂಕಾರದ ಮಾತಲ್ಲ. ನಿನಗೆ ನೂರು ವರುಷಗಳಷ್ಟು ಕಾಲ ಹೇಳಬಲ್ಲ ಕಥೆಗಳು
 ನನ್ನ ಬಳಿ ಇದೆ.  ನನ್ನನ್ನು ಸ್ವೀಕರಿಸು’ ಎಂದು ಅವರು ಅಂದರು ‘ಅಹುದಹುದು’ ಎಂದು
 ಅಲ್ಲಿಂದ ಹೊರಟು ಬಂದೆ.

pande2.jpg

 ಪಾಂಡೆಯವರು ಕನ್ಯಾಕುಬ್ಜ ಎಂಬ ವೈದಿಕ ಜನಾಂಗಕ್ಕೆ ಸೇರಿದವರು. ಬಿಹಾರ ಮತ್ತು ಉತ್ತರ ಪ್ರದೇಶದ ನಡುವಿನ ಕನೌಜ್ ಪ್ರದೇಶದವರು.  ಪಾಠಕ್, ತ್ರಿವೇಧಿ ದ್ವಿವೇಧಿ, ಶುಕ್ಲ, ಪಾಂಡೆ, ವಾಜಪೇಯಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಜನಾಂಗದವರು ಈಗಲೂ ಅಲ್ಲಿ ಜೀವಿಸುತ್ತಿದ್ದಾರೆ.  ಹದಿನೆಂಟನೆಯ ಶತಮಾನದಲ್ಲಿ ಔರಂಗಜೇಬನ ಕಾಟವನ್ನು ತಡೆಯಲಾರದೆ ಇವರ ಹಿರಿಯರಲ್ಲಿ ಹಲವರು ಆಗಲೇ ಸಾಮೂಹಿಕವಾಗಿ ಚಿತೆಗೆ ಏರಿದ್ದಾರೆ.  ಉಳಿದವರಲ್ಲಿ ಹಲವರು ಭೂಮಿಕಾಣಿಗಳನ್ನು ಮಾರಿ, ಕುದುರೆಯೇರಿ, ಕತ್ತೆಗಳ ಮೇಲೆ ಚಿನ್ನಾಬರಣಗಳನ್ನು ಹೊರೆಸಿಕೊಂಡು, ಹಲವೆಡೆ ಚೆಲ್ಲಾಪಿಲ್ಲಿಯಾಗಿದ್ದಾರೆ.

 ನಾಗರಾಜ ಪಾಂಡೆಯವರ ಪೂರ್ವಜ ಕಲ್ಯಾಣ ಪಾಂಡೆ ಎಂಬವರು ಹದಿನೆಂಟನೆಯ ಶತಮಾನದಲ್ಲಿ ಶಿವಮೊಗ್ಗದ ಬಳಿಯ ಕುಂಸಿಗೆ ಬಂದು ನೆಲಸಿದ್ದಾರೆ. ಮನೆ ದೇವರು ವೈಷ್ಣೋದೇವಿಯನ್ನು ಅಗಲಿ ಧರ್ಮಸ್ಥಳದ ಮಂಜುನಾಥನನ್ನು ಹೊಸ ಮನೆ ದೇವರೆಂದು ಒಪ್ಪಿಕೊಂಡಿದ್ದಾರೆ.  ಅವರ ಮಗ ರಘುನಾಥ ಪಾಂಡೆ ಮೈಸೂರು ಮಹಾರಾಜರ ಅನುಮತಿಯಿಂದ ಕುಂಸಿಯಲ್ಲಿ ಒಂದು ಕೋಟೆ ಕಟ್ಟಿಸಿ,ಅದರ ಸುತ್ತ ಕಾಲುವೆ ಹರಿಸಿ, ಅದರೊಳಗಡೆ ಏಳು ಅಂತಸ್ತಿನ ಮಣ್ಣಿನ ಅರಮನೆಯನ್ನು ನಿಮರ್ಿಸಿದ್ದಾರೆ.  ಕಾಲಾಂತರದಲ್ಲಿ ಅಂದರೆ ನಾಗರಾಜ ಪಾಂಡೆಯವರ ತಾತ ಶಿವರಾಮ ಪಾಂಡೆಯವರ ಕಾಲದಲ್ಲಿ ಯಾವುದೋ ಅಹಮ್ಮಿನ ಕಾರಣದಿಂದ ಆ ಮನೆ ಪಾಲಾಗಿದೆ.  ಒಂದು ಆಷಾಡ ಶುಕ್ರವಾರ ಅಣ್ಣತಮ್ಮಂದಿರು ಜಗಳವಾಡಿ ಆ ಮಣ್ಣಿನ ಅರಮನೆ ಭಾಗವಾಗಿ ಚಿನ್ನದ ವರಹಗಳನ್ನು ಕೊಳಗದಲ್ಲಿ ವಿಂಗಡಿಸಿ ಹಂಚಿಕೊಂಡು ಜೂಜಿನಲ್ಲಿ ಅದನ್ನೂ ಕಳೆದುಕೋಂಡಿದ್ದಾರೆ. 1963ರಲ್ಲಿ ಎಂಬತ್ತ ಮೂರು ಏಕರೆಗಳಷ್ಟು ಇದ್ದ ಅವರ ಸಾಮ್ರಾಜ್ಯ 1976ರ ದೇವರಾಜ ಅರಸರ ಭೂ ಮಸೂದೆಯ ಹೊತ್ತಿಗೆ ಸೊನ್ನೆಯಾಗಿದೆ. ಅವರು ಹತ್ತಿರ ಹತ್ತಿರ ಬಿಕಾರಿಗಳಾಗಿದ್ದಾರೆ.  1947ರಲ್ಲಿ ಹುಟ್ಟಿದ ನಾಗರಾಜ ಪಾಂಡೆಯವರು 1951ರಲ್ಲಿ ತಾಯಿಯನ್ನು ಕಳೆದುಕೊಂಡಿದ್ದಾರೆ. 

  ಪಾಂಡೆಯವರ ತಂದೆ ಸೂರ್ಯನಾರಾಯಣ ಪಾಂಡೆಯವರು ಎರಡನೇ ವಿಶ್ವಯುದ್ಧದಲ್ಲಿ ಬ್ರಿಟಿಷರ ಪರವಾಗಿ ಜರ್ಮನ್ ನಾಝಿಗಳ ಎದುರು ಫ್ರಾನ್ಸ್ ಇಂಗ್ಲೆಂಡ್ಗಳಲ್ಲಿ ಹೋರಾಡಿ ಕಾಲಿಗೆ ಏಟು ಮಾಡಿಕೊಂಡು ಬಂದಿದ್ದಾರೆ.  ಹೆಂಡತಿ ತೀರಿಹೋದಾಗ ಏಕಾಂಗಿಯಾಗಿ ಆಳುಗಳ ಸಹಾಯದಿಂದ ಅವರ ಅಂತ್ಯಕ್ರಿಯೆಯನ್ನು ಅಮಾನುಷವಾಗಿ ಮುಗಿಸಿದ್ದಾರೆ. ಹೆಂಡತಿ ತೀರಿ ಹೋದ ಮೂರು ತಿಂಗಳಲ್ಲೇ ಹೊಸಬಿ ಹೆಂಡತಿಯನ್ನು ಮದುವೆಯಾಗಿದ್ದಾರೆ. ನಾಗರಾಜ ಪಾಂಡೆಯವರ ಹಾಲುಗಲ್ಲದ ಇಬ್ಬರು ತಮ್ಮಂದಿರೂ ದೊಡ್ಡವರ ನಿರ್ಲಕ್ಷದಿಂದ ಹೊಟ್ಟೆಗಿಲ್ಲದೆ ತೀರಿಹೋಗಿದ್ದಾರೆ.  ನಾಲ್ಕು ವರ್ಷದ ಹುಡುಗನಾಗಿದ್ದ ನಾಗರಾಜ ಪಾಂಡೆ ಕೇವಲ ತನ್ನ ಆತ್ಮಬಲದಿಂದ ಬದುಕಿ ಉಳಿದಿದ್ದಾರೆ.  ಆ ವಯಸಿನಲ್ಲೇ ಆ ಬಾಲಕನಿಗೆ ದೇವರ ಮೇಲೆ ನಂಬಿಕೆ ಹೊರಟು ಹೋಗಿದೆ.  ಶಿವಮೊಗ್ಗದ ಡಿ.ವಿ.ಎಸ್. ಶಾಲೆಯ ಒಂದು ಕಣ್ಣಿನ ಮೇಷ್ಟ್ರು ಅಳಸಿಂಗಾಚಾರರಿಂದ ಹೆದರಿಕೊಂಡು ಪಾಠ ಹೇಳಿಸಿಕೊಂಡಿದ್ದಾರೆ.  ಇನ್ನೊಬ್ಬರು ಗಣಿತದ ಮೇಷ್ಟ್ರು ಅವರಿಗೆ ಗಣಿತ ಹೇಳುವ ಬದಲು ಕಥೆಗಳನ್ನು ಹೇಳಿ ಬದುಕಿಸಿದ್ದಾರೆ.  ಡಿ.ವಿ.ಎಸ್. ಶಾಲೆಯಲ್ಲಿ ಯಾರೋ ಸರ್ಕಸ್ಸಿನ ಕಂಪೆನಿಯವರು ಬಿಟ್ಟುಹೋದ ಪ್ರಾಣಿಗಳ ಪಂಜರದೊಳಗೆ ಕೂತು ಮದ್ಯಾಹ್ನದ ಬುತ್ತಿಯನ್ನು ತಿಂದಿದ್ದಾರೆ.  ಮನೆಯಲ್ಲಿ ಅಪ್ಪನ ಆರ್ಭಟ, ಮಲತಾಯಿಯ ಅವಜ್ಞೆ ತಾಳಲಾರದೆ ತನ್ನ ಹದಿನಾರನೆಯ ವಯಸ್ಸಿನಲ್ಲಿ ಕುಂಸಿಯಿಂದ ಭದ್ರಾವತಿಯ ಕಬ್ಬಿಣದ ಕಾಖರ್ಾನೆಗೆ ಮ್ಯಾಂಗನೀಸ್ ಅದಿರು ಸಾಗಿಸುವ ಲಾರಿ ಹತ್ತಿ ಮೈಯನ್ನೆಲ್ಲಾ ಕೆಂಪುಮಾಡಿಕೊಂಡು, ಅದೇ ಕೆಂಪು ಅಂಗಿಯಲ್ಲಿ ಶಿವಮೊಗ್ಗದಿಂದ ಹರಿಹರದವರೆಗೆ ನಡೆದು, ರೈಲು ಹತ್ತಿ, ಟಿಕೇಟಿಲ್ಲದೆ, ಹಸಿವಿನಿಂದ ಅದೇ ಕೆಂಪು ಮೈಯಲ್ಲಿ ಬೊಂಬಾಯಿ ತಲುಪಿದ್ದಾರೆ.

 ನಾಗರಾಜ ಪಾಂಡೆಯವರು ನಿನ್ನೆ ಬೊಂಬಾಯಿಯ ತಮ್ಮ ಕಥೆಯನ್ನು ಹೇಳುವಾಗ ನಾನು ಕಣ್ಣೆಲ್ಲ ಕಿವಿಯಾಗಿ ಕೇಳಿಸಿಕೊಳ್ಳುತ್ತಿದ್ದೆ.  ಅವರು ಹೇಳುತ್ತಿದ್ದ ಪದಗಳು ನನ್ನ ಕಣ್ಣಿಗೆ ಕಾಣಿಸುತ್ತಿದ್ದವು.  ಅರವತ್ತರ ದಶಕದ ಹಿಂದಿ ಸಿನೆಮಾವೋಂದರ ರೋಚಕ ಕಥೆಯಂತೆ ಕಾಣಿಸುತ್ತಿತ್ತು. ಹಾಡು, ಹೊಡೆದಾಟ, ಹಸಿವು, ಮದ್ಯಪಾನ, ಏಕಾಂಗಿತನಗಳ ಕಥೆ. ಅದು ಬ್ಲಾಕಿನಲ್ಲಿ ಸಿನೆಮಾ ಟಿಕೇಟು ಮಾರಿ, ಬೀದಿಯ ಕೇಡಿಗಳೊಂದಿಗೆ ಕಾದಾಡಿ, ಗೋಣಿಚೀಲದ ಮೇಲೆ ಮಲಗಿ, ಹಸಿವಿನಲ್ಲಿ ಕಾತರಿಸಿ, ದೇವರು, ಜಾತಿ, ಆಹಾರ, ನಿದ್ದೆಗಳ ಹಂಗು ತೊರೆದು ಆತ್ಮಹತ್ಯೆ ಮಾಡೆಕೊಳ್ಳಲು ಹೋದ ಕನ್ನಡದ ಕವಿಯೊಬ್ಬನ ಕಥೆ ಅದು.  ಬಹುಶಃ ಪಾಂಡೆಯವರು ಆ ಕಾಲದಲ್ಲಿ ತಮ್ಮ ಅತ್ಯುತ್ತಮ ಕವಿತೆಗಳನ್ನು ಬರೆದಿದ್ದಾರೆ.  ಕನ್ನಡದಲ್ಲಿ ಕವಿತೆಗಳನ್ನೂ, ಉರ್ದುವಿನಲ್ಲಿ ಶಾಯರಿಗಳನ್ನು ಹಿಂದಿಯಲ್ಲಿ ದೋಹಾಗಳ್ನು ರಚಿಸಿದ್ದಾರೆ.  ನಿನ್ನೆ ಮಾತು ಮುಗಿಸಿ ಪಾಂಡೆಯವರು ಅರ್ದ ಸಂಕೋಚದಿಂದ ಮತ್ತು ಪೂರಾ ಆತ್ಮ ವಿಶ್ವಾಸದಿಂದ ಅವರು ಬರೆದಿರುವ ಹಳೆಯ ಕವಿತೆಗಳನ್ನು ನನಗೆ ತೋರಿಸಿದ್ದಾರೆ.  ಅಲ್ಲಿಯವರೆಗೆ ಅವರು ಕವಿಗಳು ಎಂದೂ ನನಗೆ ತಿಳಿದಿರಲಿಲ್ಲ.  ಓದಿದ ಮೇಲೆ ವೇದ್ಯವಾಯಿತು.  ಅಪುರ್ವ ಹೊಳಹುಗಳುಳ್ಳ ಕವಿತೆಗಳು. ಆತ್ಮಹತ್ಯೆಯ ಅಂಚಿನ ತನಕ ಹೋದ ಕವಿಯೊಬ್ಬನನ್ನು ಉಳಿಸಿದ ಸಾಲುಗಳಂತೆ ಕಾಣಿಸಿದವು.

 ‘ಸಾರ್ ಯಾಕೆ ಇದನ್ನು ನೀವು ಪ್ರಕಟಿಸಲಿಲ್ಲ’ ಎಂದು ಕೇಳಿದೆ ‘ಇಲ್ಲ ನಿಮ್ಮ ಕನ್ನಡ ಸಾಹಿತ್ಯದಲ್ಲಿ ತುಂಬಾ ಗುಂಪುಗಾರಿಕೆಗಳಿವೆ. ಹಾಗಾಗಿ ಅದು ಹೀಗೇ ಇರಲಿ.  ಪ್ರಕಟಗೊಂಡು ಕಲುಷಿತವಾಗುವುದು ಬೇಡ’ ಅಂದರು. ಅವರೊಡನೆ ನಾನು ಕನ್ನಡ ಸಾಹಿತ್ಯದ ಪರವಾಗಿ ವಕಾಲತ್ತು ವಹಿಸುವ ಕಾರ್ಯ ಮಾಡುವುದು ಬೇಡ ಅನಿಸಿ ಸುಮ್ಮನಾದೆ, ಆದರೂ ಪಾಂಡೆಯವರ ಕವಿತೆಗಳನ್ನು ಹೀಗೆ ಸುಮ್ಮನೆ ರದ್ದಿಯವನ ಪಾಲು ಮಾಡುವುದು ಬೇಡ ಅನ್ನಿಸುತ್ತಿತ್ತು.  ಏಕೆಂದರೆ ಈಗಾಗಲೇ ಅವರ ಮುಗ್ದರಾದ ಮಡದಿ ತನ್ನ ಪತಿ ದೇವರ ಹಲವು ಕವಿತೆಗಳ ಕೈ ಬರಹದ ಪುಸ್ತಕಗಳನ್ನು ತೂಕಕ್ಕೆ ಮಾರಿದ್ದಾರೆ ಎಂದು ಅವರೇ ನಗುತ್ತಾ ಹೇಳುತ್ತಿದ್ದರು.

 ಬೊಂಬಾಯಿಯ ಕಾದಾಟದ ಬದುಕು ಸಾಕಾಗಿ, ಒಂದು ಸಂಜೆ ನಾಗರಾಜ ಪಾಂಡೆಯವರು ಒಂದು ಲೋಟ ಮದ್ಯಕ್ಕೆ ವಿಷವನ್ನು ಬೆರೆಸಿ, ಅದನ್ನು ಸಮುದ್ರ ತೀರದಲ್ಲಿ ಎದುರಿಗಿಟ್ಟುಕೊಂಡು, ಇನ್ನೊಂದು ಲೋಟದಲ್ಲಿ ನೀರು ಬೆರೆಸದ ಮದ್ಯವನ್ನು ಸುರಿದುಕೊಂಡು ಸತ್ತು ಹೋಗಬೇಕು ಎಂದು ಕುಡಿಯುತ್ತಾ ಕೂತರಂತೆ. ಮದ್ಯ ತಲೆಗೇರಿದ ಮೇಲೆ ವಿಷಕುಡಿದರೆ ಸಾಯುವ ಸಂಕಟ ಗೊತ್ತಾಗುವುದಿಲ್ಲ ಎನ್ನುವುದು ಅವರ ಆಲೋಚನೆಯಾಗಿತ್ತಂತೆ.  ಆದರೆ ಕುಡಿದ ಮದ್ಯ ಅವರ ತಲೆಗೇರಿ, ಹಾಗೇ ನಿದ್ದೆ ಬಂದು, ನಿದ್ದೆಯಲ್ಲಿ ಕಾಲುತಾಗಿ ವಿಷದ ಲೋಟ ಸಮುದ್ರದ ಮರಳಿನಲ್ಲಿ ಚೆಲ್ಲಿ ಹೋಯಿತಂತೆ.  ತಾನು ತೀರಿಹೋಗಿ ನರಕದಲ್ಲಿರುವೆನು ಎಂದು ಭಾವಿಸಿ ನಾಗರಾಜ ಪಾಂಡೆಯವರು ಮುಂಜಾನೆ ಕಣ್ಣು ತೆರೆದರೆ ಇನ್ನೂ ಜುಹೂ ಬೀಚಿನಲ್ಲೇ ಇದ್ದರೆಂತೆ.

 ‘ಕುಡಿತದ ಸತ್ಪಲಗಳು’ ಎಂದು ನಾನು ನಗಾಡಿದೆ.  ಆ ಮೇಲೆ ಪಾಂಡೆಯವರು ತಾವು ಬದಲಾದ ಕಥೆಯನ್ನು ಹೇಳಿದರು. ಗಡಿಯಾರ ರಪೇರಿಯ ಕೆಲಸ ಕಲಿತದ್ದು, ಜಾದೂ ಕಲಿತದ್ದು, ಯೋಗಕಲಿತದ್ದು, ರಾಜಯೋಗ ಕಲಿತದ್ದು, ಕುಂಸಿಯ ತಮ್ಮ ಹಳೆಯ ಕೋಟೆಯ ಕುರುಹುಗಳನ್ನು ಹುಡುಕುತ್ತಾ ಭಾರತವನ್ನು ಸುತ್ತಿದ್ದು, ಹಾರ್ಮೋನಿಯಂ ಹಿಡಿದಿದ್ದು, ತತ್ವಶಾಸ್ತ್ರ, ಮನಶಾಸ್ತ್ರ, ಕುವೆಂಪು, ಬೇಂದ್ರೆ, ತೇಜಸ್ವಿ, ಆಲನಹಳ್ಳಿ ಕೀಟ್ಸ್, ಕೋಲ್ರಿಜ್- ಎಲ್ಲರನ್ನೂ ಮೊಗೆ ಮೊಗೆದು ಕುಡಿದಿದ್ದು, ಈಗ ಹೆಂಡತಿ ಮಕ್ಕಳು, ಮೊಮ್ಮಕ್ಕಳು ಎಲ್ಲರ ಜೊತೆ ಮೈಸೂರಿನಲ್ಲಿ ಬದುಕುತ್ತಿರುವುದು ಎಲ್ಲವನ್ನು ಹೇಳುತ್ತಿದ್ದರು.

 ‘ಮತ್ತೆ ಮತ್ತೆ ಬರುತ್ತೇನೆ. ಕ್ಷಮಿಸಬೇಕು. ತೊಂದರೆ ಕೊಡುತ್ತಿರುತ್ತೇನೆ’ ಅಂದಿದ್ದೆ. ‘ಹಾಗೇನಿಲ್ಲ. ನಾವೆಲ್ಲಾ ಕ್ರಿಯೇಟಿವ್ ಇಂಟೆಲಿಜೆನ್ಸ್ ಏಜೆನ್ಸಿಗೆ ಸೇರಿದವರು ಬರುತ್ತಲೇ ಇರಿ’ ಅಂದಿದ್ದಾರೆ.

ಬಹುಶಃ ನಾನು ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಹೋಗುತ್ತಲೇ ಇರುತ್ತೇನೆ.
 

Advertisements