ತೀರಿ ಹೋಗಿರುವ ಸೂಫಿ ಬ್ಯಾರಿಯವರ ಕುರಿತು

ಸೂಫಿ ಸಂತನ ಸಂಸಾರ ತೋಟ…

 

sufi1.jpg

ಹುಣ್ಣಿಮೆಯ ಮರುದಿನದ ಬೆಳದಿಂಗಳು. ಆ ದೊಡ್ಡ ಮಸೀದಿ ತೊಯ್ಯುತ್ತ ಮಲಗಿತ್ತು. ಚಂದ್ರನ ಕೆಳಗೆ ಚಂದಕ್ಕೆ ಹಾಸಿದಂತೆ ಒಂದು ತುಂಡು ಮೋಡ ಮುಸುಕಿಕೊಂಡು ಆಕಾಶದ ಅಳಿದುಳಿದ ಕತ್ತಲಿನ ಜಾಗದಲ್ಲಿ ಒಂದೊಂದು ನಕ್ಷತ್ರಗಳು ಮಿನುಗುತ್ತಿದ್ದವು. ಅಲ್ಲಲ್ಲಿ ಮಳೆಯ ಮೋಡಗಳು ನೀಲಿಗಟ್ಟಿಕೊಂಡು ಆ ಹೊತ್ತಲ್ಲಿ ಆ ಆಕಾಶ, ಈ ಭೂಮಿ ಮತ್ತು ಭೂಮಿಯ ಮೇಲಿರುವ ಈ ದೊಡ್ಡ ಮಸೀದಿ.

 ನೀನು ಯಾರೆಂದು ಯಾರಾದರೂ ಕೇಳಿದರೆ ನಾನು ಯಾರೆಂದು ಹೇಳಲಿ? ನಿನ್ನ ಹೆತ್ತವರು ಯಾರು, ನಿನ್ನ ಪಡೆದವನು ಯಾರು? ಎಂದು ಯಾರಾದರೂ ಕೇಳಿದರೆ ಯಾರೆಂದು ಹೇಳಲಿ? ಎಂದೂ ಕಾಣಿಸದ ಹಾಗೆ ಮಸೀದಿಯ ಪಕ್ಕಕ್ಕೆ ಒತ್ತಾಗಿ ಉದ್ದಕ್ಕೆ ಬೆಳೆದಿದ್ದ ಬಿದಿರು ಮೆಳೆಗಳು ಯಾವಾಗಲೋ ಹನಿದಿದ್ದ ಮಳೆಯ ಹನಿಗಳನ್ನು ಮೈಯ ಮೇಲೆ ಮುಡಿದುಕೊಂಡು ತಲೆದೂಗುತ್ತಾ ನೋಡುತ್ತಿದ್ದವು. ಮಸೀದಿಯ ಸುತ್ತ ಮೈದಾನ. ಆ ಕತ್ತಲೆ ಬೆಳಕಿನಲ್ಲೂ ಹಲವಾರು ಗೋರಿಗಳು. ಗೋರಿಗಳ ತಲೆ ಕಾಲುಗಳ ಭಾಗದಲ್ಲಿ ನೆಟ್ಟಿದ್ದ ಕಲ್ಲುಗಳು ಹೊಳೆಯುತ್ತಿದ್ದವು. ಎಷ್ಟು ವರ್ಷಗಳಿಂದ ತೆರೆಯುತ್ತ, ಮುಚ್ಚುತ್ತಾ, ಈ ಬೆಳದಿಂಗಳಿನಲ್ಲಿ ಹೀಗೆ ಹೊಳೆಯುತ್ತಾ ಮಲಗಿರುವ ಈ ಮಾನವನ ಮರಣ ಸಂಕೇತಗಳು,
 ಆ ರಾತ್ರಿಯಲ್ಲೂ ಹಸುವೊಂದು ಮೈದಾನದ ಗೋರಿಗಳ ಪಕ್ಕ ಬೆಳೆದಿದ್ದ ಹುಲು ಮೇಯುತ್ತಾ ಬಾಲವಾಡಿಸುತ್ತಾ ನಡೆಯುತ್ತಿತ್ತು. ಪಕ್ಕದಲ್ಲಿ ಸೂಫಿಬ್ಯಾರಿಯವರು ಮಾತನಾಡುತ್ತಾ ಕೂತಿದ್ದರು. ಸೂಫಿ ಬ್ಯಾರಿಯವರ ತಂದೆ ತಾಯಿಯರು ಮರಣವಾದ ಮಣ್ಣಾದ ಈ ಮೈದಾನದಲ್ಲಿ ನಾವಿಬ್ಬರು ಮಸೀದಿಯ ಕಟ್ಟೆಯ ಮೇಲೆ ಕೂತಿದ್ದೆವು. ಸೂಫಿಯವರು ಮನುಷ್ಯರ ಅವಿವೇಕಗಳ ಕುರಿತು ನಿಲ್ಲಿಸದೆ ಮಾತು ಮುಂದುವರಿಸಿದ್ದರು. ಮಸೀದಿಯ ಅಂಗಳದ ನುಣುಪು ಮೊಸಾಯಿಕ್ ನೆಲದಲ್ಲಿ ಪುಡಿ ಹುಡುಗರು ಕಂಬಳಿ ಹುಳಗಳಂತೆ, ಮೀನುಗಳಂತೆ ಜಾರಿಕೊಂಡು, ಅಂಗಾತವಾಗಿ ನೆಲಕ್ಕೆ ಕೆನ್ನೆಯನ್ನು ಉಜ್ಜಿಕೊಂಡು, ಬೆನ್ನು ಕೆಳಗೆ ಮಾಡಿಕೊಂಡು, ಕಾಲನ್ನು ನೆಲದ ಮೇಲೆ ಒತ್ತಿದೂಡಿ ಕಾರು ಬಸ್ಸುಗಳ ಹಾಗೆ ಆಟವಾಡಿಕೊಂಡು ಗುಸುಗುಸು ಮಾಡುತ್ತಾ ಮಸೀದಿಯ ಅಂಗಳದಲ್ಲಿ ಕೋಲಾಹಲ ಎಬ್ಬಿಸುತ್ತಿದ್ದರು.
ಸೂಫಿಯವರಿಗೆ ಮಾತನಾಡುತ್ತ, ಕಫ ಕಟ್ಟಿಕೊಂಡು ಕೆಮ್ಮು ಒತ್ತರಿಸಿ ಬಂದು ಕೆಮ್ಮತೊಡಗಿದರು. ಇವರಿಗೆ ಕೆಮ್ಮು ಬಂದರೆ ಅದು ನಿಲ್ಲದ ಕೆಮ್ಮು. ಪ್ರಪಂಚದ ಎಲ್ಲ ಸಂಕಟಗಳೂ ಅರ್ಥ ಆಗುವಂತೆ ಕೆಮ್ಮಲು ತೊಡಗುತ್ತಾರೆ. ನನಗೆ ಹೆದರಿಕ ಶುರು ಆಗುತ್ತದೆ. ಹೀಗೆ ಕೆಮ್ಮಿದರೆ ಇವರು ಉಳಿಯುವುದುಂಟಾ ಎಂದು ಸಂಕಟವಾಗುತ್ತದೆ. ಇಷ್ಟು ಕಫ ಇದ್ದರು ಇವರು ಹೀಗೆ ಮಾತನಾಡುವುದು ಯಾಕೆ ಎಂದು ಸಿಟ್ಟೂ ಬರುತ್ತದೆ. ಆದರೂ ಸೂಫಿಯವರು ಮಾತನಾಡುತ್ತಾರೆ, ಕೆಮ್ಮುತ್ತಾರೆ, ಕೆಮ್ಮು ನಿಲ್ಲುತ್ತದೆ, ಮತ್ತೆ ಮಾತು ಮುಂದುವರಿಸುತ್ತಾರೆ. ಹೆದರಿಕೊಂಡು ಸಂಕಟ ಪಟ್ಟುಕೊಂಡು ಮತ್ತೆ ಸಿಟ್ಟು ಮಾಡಿಕೊಂಡು  ನಾನಾ ಅವಸ್ಥೆ ಪಟ್ಟು ನಮಗೇ ಅಚ್ಚರಿ ಆಗುವಂತೆ ಅವರ ಮಾತಿನಲ್ಲಿ ಅರ್ಥಗಳು ಗೊತ್ತಾಗುತ್ತವೆ. ಮತ್ತೆ ಇವರನ್ನು ಈ ಪ್ರಪಂಚ ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದು ಬೇಜಾರಾಗುತ್ತದೆ. ಆದರೂ ಲೆಕ್ಕಿಸದೆ ಸದಾ ಚಟುವಟಿಕೆಯಿಂದ ಇರುವ ಇವರ ಕಂಡು ಅಚ್ಚರಿ ಆಗುತ್ತದೆ. ಈ ಪ್ರಪಂಚ, ಈ ಬೆಳದಿಂಗಳು, ಈ ಮಸೀದಿ ಮತ್ತು ಈ ಸೂಫಿ ಒಂದೂ ಗೊತ್ತಾಗದೆ ಮನುಷ್ಯನಿಗೆ ನೆಲೆಯಿಲ್ಲ ಅನ್ನಿಸುತ್ತದೆ.
ಸಾಧಾರಣವಾಗಿ ಈ ಸೂಫಿಯವರು ಕರೆದ ಕಡೆಗೆಲ್ಲ ನಾನು ಹೋಗುವುದಿಲ್ಲ. ಅವರು ಕರೆದಾಗ ನನ್ನ ಉತ್ತರವನ್ನು ಹೌದು ಮತ್ತು ಇಲ್ಲ ಎಂಬುದರ ನಡುವಿನ ಅರ್ಥ ಬರುವಂತೆ ಹೇಳಿರುತ್ತೇನೆ. ಸೂಫಿಯವರೂ ಕೂಡಾ ನಾವು ಕಾದ ದಿನ ಬರುವುದಿಲ್ಲ. ಒಂದು ದಿನ ಹಿಂದೆ ಅಥವಾ ಒಂದು ದಿನ ಮುಂದೆ ಬರುತ್ತಾರೆ ಹಾಗಾಗಿ ನಾವು ಕೂಡಿದ ಹೊತ್ತನ್ನು ಸೂಫಿಯವರು ಯೋಗಾಯೋಗ ಎನ್ನುತ್ತಾರೆ. ಇದನ್ನೇ ಪ್ರಾರಬ್ಧ ಫಲ ಎಂದೂ ಅವರು ಹೇಳುತ್ತಾರೆ. ಆಗಿದ್ದೂ ಆಗದಿದ್ದದ್ದೂ ಎರಡೂ ಒಳ್ಳೆಯದಕ್ಕೇ ಎನ್ನುವುದು ಅವರ ಮಾತು. ಈ ಮಾತನ್ನು ನಾನಂತೂ ಚೆನ್ನಾಗಿಯೇ ಬಳಸಿಕೊಳ್ಳುತ್ತೇನೆ. ಆದರೆ ಸೂಫಿಯವರು ಬರುವುದು ತುಂಬಾ ದಿನ ತಡವಾದರೆ ಸಂಕಟ ಶುರು ಆಗುತ್ತದೆ. ಅವರು ಕೊನೆಗೊಂದು ದಿನ ಊರೂರು ಸುತ್ತಿ ಕಾಡು ಮೇಡು ಅಲೆದು ಬಂದ ಹುಡುಗನ ಹಾಗೆ ಸುಸ್ತು ಮಾಡಿಕೊಂಡು ಮನೆಗೆ ಬರುತ್ತಾರೆ. ಅವರು ಬಂದೊಡನೆ ನಮ್ಮೆಲ್ಲರ ಮುಖದಲ್ಲಿ ನಗೆಯ ಮುಗುಳೊಂದು ಸುಳಿಯುತ್ತದೆ. ಸೂಫಿಯವರು ತಾಯಿ ಮುಂದೆ ಲೆಕ್ಕ ಒಪ್ಪಿಸುವ ಮಗುವಂತೆ ಹೋಗಿ ತಿರುಗಿ ಬಂದ ಕಥೆಯನ್ನೆಲ್ಲ ಹೇಳುತ್ತಾರೆ.
ಈ ಸಲ ಸೂಫಿಯವರು ಮೈಸೂರಿಗೆ ಹೋಗಿ, ಮಂಡ್ಯಕ್ಕೆ ಹೋಗಿ ಕನ್ನಂಬಾಡಿಯ ಬಳಿಗೆ ಹೋಗಿ ಹಾಗೇ ಚನ್ನರಾಯಪಟ್ಟಣಕ್ಕೆ ಹೋಗಿ ಕೊನೆಗೆ ಹಾಳು ಹಂಪಿಯ ನಡುವೆ ಇರುವ ಕನ್ನಡ ವಿಶ್ವವಿದ್ಯಾನಿಲಯಕ್ಕೂ ಹೋಗಿ ಬಂದಿದ್ದರು. ಹೋದಲ್ಲೆಲ್ಲ ಅವರ ಕೃಷಿಗೆ ಮರುಳಾದವರು, ಅವರ ಮಾತಿಗೆ ತಲೆ ತೂಗಿದವರು ಅವರನ್ನು ಮಾತನಾಡಿಸಿ ಕಳಿಸಿದ್ದರು. ಸೂಫಿಯವರು ಗಿಡದ ಬೇರು ಬಿಡಿಸುವ ರೀತಿ, ಬುಡ ಸರಿ ಮಾಡುವ ರೀತಿ, ನಾಲ್ಕೇ ಗಂಟೆಯಲ್ಲಿ ಅವರು ತೆಂಗಿನ ಬೇರಿಗೆ ನೀರು ಕುಡಿಸಿ ಹೂವು ಅರಳಿಸುವ ರೀತಿ, ಬಾಳೆಯ ಬುಡ ಬಿಡಿಸಿ ಗೊನೆಯಲ್ಲಿ ಹೂ ತೋರಿಸುವ ರೀತಿ ಕಂಡು ತುಟಿಯಲ್ಲಿ ಬೆರಳಿಟ್ಟು ಶಿಷ್ಯರಾಗಿ ಬಿಟ್ಟಿದ್ದರು. ಅರ್ಥಮಾಡಿಕೊಂಡವರ ಪ್ರೀತಿಗೆ ಮರುಳಾಗಿ, ಅರ್ಥವಾಗದವರ ಮೇಲೆ ಮುನಿದುಕೊಂಡು ಹೋದ ಮನೆಗಳ, ಸಂಸಾರದ ಕಷ್ಟಸುಖ, ಪ್ರೇಮ, ವಿರಹಗಳನ್ನು ಅರ್ಥಮಾಡಿಕೊಂಡು ಸೂಫಿಯವರು ಬಂದಿದ್ದರು. ಅವರು ನಮ್ಮಲ್ಲಿ ಇಲ್ಲದ ದಿನಗಳಲ್ಲಿ ಅವರಿಗೆ ಹತ್ತಾರು ಅಭಿಮಾನಿಗಳ ಪತ್ರಗಳೂ ಬಂದಿತ್ತು. ಒಡೆದು ಓದಿ ಉತ್ತರಿಸಲು ಸೂಫಿಯವರು ನನಗೆ ಅನುಮತಿ ಕೊಟ್ಟಿದ್ದರು. ಪತ್ರಗಳನ್ನೆಲ್ಲ ಓದಿ ಆದರೆ ಉತ್ತರಿಸದೆ ನಾನು ಸೋಮಾರಿಯಂತೆ ಕುಳಿತಿದ್ದೆ. ಮೈಸೂರಿನ ಕಾಲೇಜು ಹುಡುಗನೊಬ್ಬ ಸನ್ಯಾಸಿಯಾಗಲು ಹೋಗಿ ಮನೆ ಬಿಟ್ಟು ಓಡಿಹೋಗಿ ತಿರುಗಿ ಬಂದು ರಾಮಕೃಷ್ಣ ಪರಮಹಂಸರನ್ನು ಓದಿ ತಹಬಂದಿಗೆ ಬರದೆ ಆಮೇಲೆ ಕಾಲೇಜಲ್ಲಿ ಓದುತ್ತಾ ಕೃಷಿಯ ಕನಸುಕಂಡು ಬರೆದಿದ್ದ. ದೂರದ ಬ್ಯಾಂಕ್ ಮೆನೇಜರ್ ಒಬ್ಬರು ಕೆಲಸಬಿಟ್ಟು ಸೂಫಿಯವರ ಕೃಷಿ ಕಲಿಯಲು ಸಿದ್ಧರಾಗಿ ಬರೆದಿದ್ದರು. ರಾಯಚೂರಿನ ಬಳಿಯ ಸಿಂಧನೂರಿನ ರೈತರು ಸೂಫಿಯವರನ್ನು ಭಾಷಣಕ್ಕೆ ಕರೆದಿದ್ದರು. ಬೆಂಗಳೂರಿನ ಕಲಾಸಿಪಾಳ್ಯದ ರಫ್ತು ವ್ಯಾಪಾರಿಯೊಬ್ಬ ಅವರನ್ನು ಕೃಷಿ ಕಲಿಸಲು ಕರೆದಿದ್ದ. ಬೆಂಗಳೂರಿನ ಇಂಜಿನಿಯರ್ ಹೆಣ್ಣು ಮಗಳೊಬ್ಬಳು ಸೂಫಿಯವರನ್ನು ಕಾಣಲು ಅಷ್ಟು ದೂರದಿಂದ ಹುಡುಕಿಕೊಂಡು ಬಂದಿದ್ದರು. ನಾನು ಯಾರಿಗೂ ಉತ್ತರಿಸದೆ ಸೂಫಿಯವರು ಬರಲು ಕಾಯುತ್ತಿದ್ದೆ. ಮತ್ತು ಹುಡುಕಿಕೊಂಡು ಬಂದ ಹೆಣ್ಣು ಮಗಳಿಗೆ ಸೂಫಿಯವರ ಕೃಷಿ- ಕತೆ ಹೀಗೆ ಹೇಳಿ ಕಳಿಸಿದ್ದೆ. ಸೂಫಿಯವರು ಬಂದಾಗ ಎಲ್ಲ ಪತ್ರಗಳನ್ನೂ ಅವರ ಕೈಗೆ ಕೊಟ್ಟುಬಿಟ್ಟಿದ್ದೆ. ಈ ವಯಸ್ಸಾದ ಕೆಮ್ಮಿಕೆಮ್ಮಿ ನಿತ್ರಾಣರಾದ ಸೂಫಿಯವರು ಏನೂ ಕ್ಷೀಣ ತೋರಿಸದೆ ಇದ್ದು ಎಲ್ಲವನ್ನೂ ಓದಿ ಗುರುತು ಮಾಡಿಕೊಂಡು ಹಂಪನ ಕಟ್ಟೆ ಮಾರುಕಟ್ಟೆಗೆ ಹೋದರು. ಹೋಗಿ ಬರುವಾಗ ಚೀಲದಲ್ಲಿ ಒಣಗಿಸಿದ ಪುನರ್ಪುಳಿಯ ಸಿಪ್ಪೆ ಮತ್ತು ಒಣ ಕೊಲ್ಲತೆರು ಮೀನು ಕಟ್ಟಿಕೊಂಡು ಬಂದರು. ಇವರ ಪ್ರೀತಿಯೇ ಹೀಗೆ ನಾವು ಕುಡಿಯುವ ಜ್ಯೂಸ್, ಕಾಫಿ, ಟೀಗಿಂತ ಮಿಗಿಲಾದ ಪುನರ್ ಪುಳಿಯ ಹಾಗೆ ಮತ್ತು ನಾವು ತಿನ್ನುವ ಎಲ್ಲ ಭೋಗಗಳಿಗಿಂತ ರುಚಿಯಾದ ಒಣ ಕೊಲ್ಲತೆರು ಮೀನಿನ ಪಲ್ಯದ ಹಾಗೆ. ಇವರು ಮಕ್ಕಳು ಬಿಸ್ಕತ್ತು ಚಾಕಲೇಟ್ ತಿನ್ನುವುದನ್ನ ಕಂಡರೆ ಮುನಿದುಬಿಡುತ್ತಾರೆ. ಹಾಗೇ ದೊಡ್ಡವರು ತಿನ್ನುವ ಹೈಬ್ರಿಡ್ ಮೊಟ್ಟೆ, ಬ್ರೆಡ್ ಜಾಂ ಹಾಗೂ ಬಿರಿಯಾನಿಗಳನ್ನು ಪರಿಹಾಸ ಮಾಡುತ್ತಾರೆ. ಕುಚ್ಚಲಕ್ಕಿಯ ಅನ್ನ, ಹಸಿ ಈರುಳ್ಳಿ, ಹಸುವಿನ ಕರೆದಹಾಲು ಮತ್ತು ಬಿಸಿಲಲ್ಲಿ ಒಣಗಿಸಿದ ಒಣ ಮೀನು ಈ ತರಹದ ಸಣ್ಣ ಸಣ್ಣ ಸಂಗತಿಗಳಿಂದ ತುಂಬ ಸಂಗತಿಗಳನ್ನು ಕಲಿಸುತ್ತಾರೆ. ನಾವು ಇವರು ಹೇಳಿದ್ದನ್ನು ಮಾಡಿಯೋ, ಮಾಡಲಾಗದೆ ನಕ್ಕೋ ಇವರನ್ನು ಗಮನಿಸುತ್ತಿರುತ್ತೇವೆ. ನಮ್ಮ ಜೊತೆ ಇವರು ಬೇಜಾರು ಮಾಡಿಕೊಂಡರೂ ಸಿಟ್ಟಾಗುವುದಿಲ. ನಾವೂ ಹಾಗೆಯೇ ಮೂಗಿನ ಕೆಳಗೆ ನಕ್ಕರೂ ಇವರನ್ನು ಪ್ರೀತಿಸದೆ ಬಿಡುವುದಿಲ್ಲ.
ಹೆಂಡತಿ ಮಕ್ಕಳಿಲ್ಲದ ಸೂಫಿ ಬ್ಯಾರಿಯವರು ಊರಿಗೆ ಹೋಗಬೇಕು ಅಂತ ಹೇಳುತ್ತಿದ್ದರು. ಈ ಮಾತಿನ ಗಿಡಮರಗಳ ಸಂಸಾರಿ ಹೀಗೆ ಊರಿಗೆ ಹೋಗಬೇಕು ಅಂತ ಹೇಳಿದಾಗ ಕುತೂಹಲವಾಗಿ ನಾನು ಎಂದಿನ ವರಸೆಯಲ್ಲಿ ನಾನೂ ಬರುತ್ತೇನೆ ಎಂದು ಹೇಳಿದ್ದೆ. ಹೀಗೆ ಯಾರಾದರೂ ಎಲ್ಲಿಗಾದರು ಹೊರಟಾಗ ನಾನೂ ಬರುತ್ತೇನೆ ಎಂದು ಹೇಳುವುದು ನನ್ನ ವಾಸಿಯಾಗದ ಕಾಯಿಲೆ. ಹೋಗಲಾಗುವುದಿಲ್ಲ ಎಂದು ಗೊತ್ತಿದ್ದರೂ ಬಾಯಿ ತಪ್ಪಿ ಹಾಗೆ ಹೇಳಿಬಿಡುತ್ತೇನೆ. ಆದರೆ ಈ ಸಲ ನಿಜಕ್ಕು ಹೋಗಬೇಕು ಎಂದು ಅನ್ನಿಸಿಬಿಟ್ಟಿತ್ತು. ವಯಸ್ಸಾಗಿ ಹೋಗಿರುವ ಸೂಫಿಯವರ ಊರನ್ನು ನೋಡಿ ಗುರುತು ಮಾಡಿಕೊಳ್ಳಬೇಕು ಅಂತ ಅನ್ನಿಸಿತ್ತು. ಅದೂ ಅಲ್ಲದೆ ಸೂಫಿಯವರು ತಮ್ಮ ಅಜ್ಜ ಅಜ್ಜಿ, ತಂದೆತಾಯಿ, ಅಣ್ಣ ತಂಗಿಯಂದಿರ ಅಗಾಧ ಕತೆಗಳನ್ನು ಹೇಳಿ ನನ್ನ ಮರಳು ಮಾಡಿದ್ದರು. ಈ ಸಂಸಾರವನ್ನು ನೋಡಲೇಬೇಕು ಅನ್ನಿಸುತ್ತಿತ್ತು. ಅದರಲ್ಲೂ ಸೂಫಿಯವರ ತಂಗಿಯನ್ನು ನೋಡಲೇಬೇಕು ಅನ್ನಿಸುತ್ತಿತ್ತು. ಯಾಕೆಂದರೆ ಈ ತಂಗಿ ಇವರ ಜೊತೆ ಹಲವು ವರ್ಷಗಳಿಂದ ಮಾತುಬಿಟ್ಟಿದ್ದರು. ಈ ಅಣ್ಣ ಮನೆಗೆ ಬಂದ ತಕ್ಷಣ ತಂಗಿ ಮುಖ ತಿರುಗಿಸಿಕೊಂಡು ಕಡಿದು ಮನೆ ಬಿಟ್ಟು ಹೊರಟು ಹೋಗುತ್ತಿದ್ದರು. ಈ ತಂಗಿ ಸೂಫಿಯವರ ಪ್ರೀತಿಯ ತಂಗಿ ಎಷ್ಟು ಪ್ರೀತಿಯ ತಂಗಿ ಎಂದರೆ ಸೂಫಿಯವರು ಈ ತಂಗಿಯನ್ನು ತನ್ನ ಜೀವದ ಗೆಳೆಯನಿಗೆ ಬಹುಮಾನವೆಂಬಂತೆ ಮದುವೆ ಮಾಡಿಸಿ ಕೊಟ್ಟಿದ್ದರು. ಈ ಗೆಳೆಯ ಯಾರೂ ಇಲ್ಲದ ಪಾಪದ ಗೆಳೆಯ. ಯಾರಿಗೂ ಕೇಡು ಬಯಸದೆ ನಾಲ್ಕೂ ಹೊತ್ತೂ ಕುರಾನು ಓದಿಕೊಂಡು, ನಮಾಜು ಮಾಡಿಕೊಂಡು ಬದುಕುತ್ತಿದ್ದ ಸಾಧುಜೀವ. ಈ ಜೀವದ ಗೆಳೆಯನಿಗೆ ಪ್ರೀತಿ ತೋರಿಸಲು ಸೂಫಿಯವರು ತನ್ನ ತಂಗಿಯನ್ನು ಮದುವೆ ಮಾಡಿಸಿಕೊಟ್ಟಿದ್ದರು.
ಈ ಹುಚ್ಚಾಟಕ್ಕಾಗಿ ಸೂಫಿಯವರ ತಂದೆ ಸೂಫಿಯವರಿಗೆ ಕೋವಿ ತೋರಿಸಿ, ಸೂಫಿಯವರು ಹೆದರಿ ಊರುಬಿಟ್ಟು ಕೊಡಗಿನಲ್ಲಿ  ಕೆಲಸ ಮಾಡಿ ತಂದೆಯವರ ಕೋಪವೆಲ್ಲ ತೀರಿದ ಮೇಲೆ ತಣ್ಣಗೆ ಬಂದು ತಂಗಿಯನ್ನು ಆ ಗೆಳೆಯನಿಗೇ ಮದುವೆ ಮಾಡಿಸಿದ್ದರು. ತಂಗಿಯ ಸಂಸಾರ ಕಂಡು ಖುಷಿಪಟ್ಟಿದ್ದರು. ತಂಗಿಯ ಸಂಸಾರವನ್ನು ಸಲಹಿದ್ದರು. ತಂಗಿಯ ತೋಟದಲ್ಲಿ ಹಣ್ಣಿನ ಗಿಡಗಳನ್ನು ತಂದು ನೆಟ್ಟಿದ್ದರು.
ಗೆಳೆಯ ಅಳಿಯನಾಗಿ, ತಂಗಿಯ ಸಂಸಾರ ದೊಡ್ಡದಾಗಿ ಅಳಿಯ ತೀರಿ ಹೋಗಿ ಮಕ್ಕಳು ದೊಡ್ಡದಾಗಿ ಬೆಳೆದು ದುಬಾಯಿಗೆ ಹೋಗಿದ್ದರು. ಮಕ್ಕಳು ಚಿನ್ನದಂತಹ ಈ ಮಣ್ಣು ಬಿಟ್ಟು ಅರಬೀಸ್ಥಾನದ ಮರಳುಗಾಡಿಗೆ ಚಿನ್ನ ತರಲು ಹೋಗಿದ್ದು ಸೂಫಿಯವರಿಗೆ ಬೇಜಾರಾಗಿತ್ತು. ಈ ಮಣ್ಣಿನಲ್ಲಿ ಚಿನ್ನ ತೋರಿಸುತ್ತೇನೆ ಅಂತ ಅವರಿಗೆ ಕೃಷಿ ಕಲಿಸಲು ಹೋಗಿ ಸೋತಿದ್ದರು. ತಂಗಿ ಕೂಡಾ ಸಿಟ್ಟು ಮಾಡಿದ್ದಳು. ಮನೆಗೆ ಹೋದರೆ ಮುಖ ತಿರುಗಿಸುತ್ತಿದ್ದರು. ಅಣ್ಣ ಪಾಲು ಪಂಚಾಯತಿಗೆ ಬಂದಿದ್ದಾನೆ ಅಂತ ರಂಪ ಮಾಡುತ್ತಿದ್ದರು. ನನಗೆ ಈ ಪಾಪದ ಅಣ್ಣನ ಪಾಪದ ತಂಗಿಯನ್ನೂ ಅವರ ಸಂಸಾರವನ್ನೂ ನೋಡಬೇಕು ಅನ್ನಿಸುತ್ತಿತ್ತು. ಹಾಗೇ ಅಣ್ಣನಿಗೂ ತಂಗಿಗೂ ಮಾತು ತಿರುಗಿಸಿ ಕೊಡಬೇಕು ಅನ್ನಿಸುತ್ತಿತ್ತು. ಹಾಗೆ ಆದರೆ ಅಂತ ಆಸೆ ಆಗುತ್ತಿತ್ತು.
ನಾನು ಹುಣ್ಣಿಮೆಯ ಮರುದಿನ ಚಂದಿರನ ಬೆಳಕಿನಲ್ಲಿ ಆ ಊರಿಗೆ ಹೋದರೆ ಯಾರೂ ಕಾಯುತ್ತಿರುವಂತೆ ಕಾಣಿಸಲಿಲ್ಲ. ಗುಡ್ಡಗಾಡುಗಳ ನಡುವಿನ ಆ ಊರು ಚಂದಿರನ ಬೆಳಕಿನಲ್ಲಿ ಮಲಗಿತ್ತು ಮತ್ತು ಆ ಮನೆಯೊಳಗೆ ಜನರು ಯಾರು ಯಾರು ಎಂದು ಗೊತ್ತಾಗುತ್ತಿರಲಿಲ್ಲ. ಮನೆಯ ತುಂಬ ಮಕ್ಕಳು. ಸೂಫಿಯವರ ತಂಗಿ ಕಾಣಿಸಲಿಲ್ಲ. ಒಳಗೇ ಇದ್ದರು. ನಾನು ಅಪರಿಚಿತನಂತೆ ಬೆಳದಿಂಗಳಲ್ಲಿ ಬೆವರುತ್ತಾ ಕೂತಿದ್ದೆ. ನಾನು ಹೋಗಿದ್ದು ಸೂಫಿಯವರಿಗೆ ಅಚ್ಚರಿ ಮಾಡಿತ್ತು. ಹಾಗೇ ಖುಷಿ, ನಾನು ಹೀಗೆ ಉಂಡಾಡಿಯಂತೆ ಅಪರಿಚಿತ ಸಂಸಾರವೊಂದರೊಳಕ್ಕೆ ಅಪಸಮಯದಲ್ಲಿ ಹೋದವನಂತೆ ಎಲ್ಲರ ಮುಖ ನೋಡುತ್ತಾ ನಿಂತೆ. ಸೂಫಿಯವರ ಅಣ್ಣ ಸೂಫಿಯವರ ಮಗನಂತೆ ಕಾಣಿಸುತ್ತಿದ್ದರು. ಎಲ್ಲ ಗೊಂದಲವಾದಂತೆ ನನಗೆ ಮನೆಯ, ಹೆಂಡತಿಯ ಕಾಣಬೇಕು ಅನಿಸುತ್ತಿತ್ತು. ಮಸೀದಿ ಎಲ್ಲಿ ಅಂತ ಕೇಳಿದೆ. ಮಸೀದಿಯಲ್ಲಿ ಆ ದಿನ ರಾತೀಬ್ ಅಂತ ಸೂಫಿಯವರು ಹೇಳಿದ್ದರು. ರಾತೀಬ್ ಎಂದರೆ ಪಡೆದವನಿಗೆ ಬಹು ಪ್ರಿಯರಾದ ಸಂತರ ಹೆಸರಿನಲ್ಲಿ ನಡೆಯುವ ಸಮೂಹ ಪ್ರಾರ್ಥನೆ ಈ ಬೆಳದಿಂಗಳ ರಾತ್ರಿಯಲ್ಲಿ ಆ ಮಸೀದಿಯಲ್ಲಿ ನಡೆಯುತ್ತಿರುವ ಸೂಫಿ ಸಂತನ ಧ್ಯಾನದಲ್ಲಿ ಸೇರಬೇಕು ಅನ್ನಿಸುತ್ತಿತ್ತು. ಸಣ್ಣದಿರುವಾಗ ಮುಂಡು ಉಟುಕೊಂಡು ತಲೆಗೆ ಟವೆಲು ಕಟ್ಟಿಕೊಂಡು ಕಾಲು ನೋಯುತ್ತಿದ್ದರೂ ನಿಂತು ಸಂತನ ಹೆಸರು ಹೇಳಿಕೊಂಡು ಧ್ವನಿ ಬಿದ್ದು ಹೋಗುವಂತೆ ಹೇಳುತ್ತಿದ್ದ ಪ್ರಾರ್ಥನೆ.
ಉರಿಗೆ ಕೇಡು ಬಾರದಿರಲೆಂದು, ಊರಿಗೆ ಪ್ಲೇಗು ಬಾರದಿರಲೆಂದು ಮಸೀದಿಯ ಒಳಕದಗಳ ಮುಚ್ಚಿ, ಕತ್ತಲೆಯಲ್ಲಿ ರಾತೀಬ್ ಪಾರಾಯಣ ಮಾಡುತ್ತಿದ್ದರು. ಎಲ್ಲರೂ ಪರಿಶುದ್ಧರಾಗಿ, ಬಿಳಿಯ ಉಡುಪು ತೊಟ್ಟುಕೊಂಡು ಯಾರಿಗೂ ಕೇಡು ಬಯಸದೆ ಊರಿಗೆ ಊರೇ ಕತ್ತಲೆಯಲ್ಲಿ ಮಸೀದಿಯ ಒಳಗೆ ಪಾರಾಯಣದಲ್ಲಿ ತೊಡಗಿದ್ದರು. ಹೊರಗೆ ಬೆಳದಿಂಗಳು ಪಡೆದವನ ಕರುಣೆಯೆಂಬಂತೆ ಎಲ್ಲವನ್ನೂ ತೊಯ್ಯಿಸುತ್ತಿತ್ತು.
ತಡವಾಗಿ ಹೋದ ನಾನು ಮತ್ತು ಸೂಫಿ ಬ್ಯಾರಿ ಮಸೀದಿಯ ಕಟ್ಟೆಯಲ್ಲಿ ಕುಂತು ಕೇಳಿಸಿಕೊಳ್ಳುತ್ತಿದ್ದೆವು. ಪಾರಾಯಣದಲ್ಲಿ ಸೇರಬಾರದ ಗಲಾಟೆ ಮಾಡುವ ಹುಡಿ ಮಕ್ಕಳು ಮಸೀದಿಯ ಅಂಗಣದಲ್ಲಿ ನುಣುಪು ನೆಲದಲ್ಲಿ ಈಜಾಡುತ್ತಿದ್ದರು. ಮೈದಾನದ ಗೋರಿ ಹೊಳೆಯುತ್ತಿತ್ತು ಮತ್ತು ಆ ದನ ಹುಲ್ಲು ಮೇಯುತ್ತಿತ್ತು. ಸೂಫಿಯವರು ನಡುನಡುವೆ ಕೆಮ್ಮುತ್ತಾ ಪಿಸುದನಿಯಲ್ಲಿ ಕೃಷಿಯ ಬಗ್ಗೆ, ಕೃಷಿ ಮಾಡದೆ ಚಿನ್ನ ಅರಸಿ ಅರೇಬಿಯಾಕ್ಕೆ ಹೋಗುತ್ತಿರುವ ಈ ಮನುಷ್ಯ ಮಕ್ಕಳ ಮರುಳಿನ ಬಗ್ಗೆ ಹೇಳುತ್ತಿದ್ದರು. ನಾನು ಮನೆಯನ್ನು ಯೋಚಿಸುತ್ತಿದ್ದೆ. ಹಾಗೇ ಸೂಫಿ ಸಂತನ ಸಂಸಾರವನ್ನು!
 ಹಿಂದೆ ಒಂದು ಸಲ ಕತ್ತಲೆಯಲ್ಲಿ ಬಸ್ಸು ಸಿಗದೆ ನಾನೂ, ಸೂಫಿಯೂ ಮಂಗಳೂರಿನ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ನಾನು ಅಚಾನಕ್ಕಾಗಿ ಕೇಳಿದ್ದೆ ‘ಸೂಫಿಯವರೇ ನಿಮಗೆ ಸಂತರ ಬಗ್ಗೆ ನಂಬಿಕೆ ಇದೆಯಾ’ ಅಂತ. ಸೂಫಿಯವರು ಏನೂ ಗೊತ್ತಿಲ್ಲದವರಂತೆ ಕೈಬೀಸಿ ನಡೆಯುತ್ತಾ ‘ಭಕ್ತಿಯಿಂದಲೂ ಸಂತರಾಗ ಬಹುದು, ಕರ್ಮದಿಂದಲು ಸಂತರಾಗಬಹುದು’ ಎಂದು ಹೇಳಿದ್ದರು. ಭಕ್ತಿಯಿಂದ ಸಂತರಾದವರು ಕರ್ಮದಿಂದ ಸಂತರಾದವರೂ ಆ ಪಡೆದವನ ಪ್ರೀತಿಯ ಮುಂದೆ ಕೈಗೆ ಕೈಹಿಡಿದು ಸಮನಾಗಿ ನಡೆಯಬಹುದು ಎಂದು ಹೇಳಿದ್ದರು. ಈಗ ಇಲ್ಲಿ ನೋಡಿದರೆ ಸೂಫಿ ಸಂತನ ದರ್ಗಾದ ಈ ಮಸೀದಿಯಕಟ್ಟೆಯಲ್ಲಿ ರಾತೀಬ್ ಪಾರಾಯಣ ನಡೆಯುತ್ತಿರುವಾಗ ಕೃಷಿಯೆಂಬ ಕರ್ಮದ ಕುರಿತು ಮಾತನಾಡುತ್ತಿದ್ದರು.
 

Advertisements