ಪ್ರೊಫೆಸರ್ ವಿಕ್ರಂ ಹೇಳಿದ ‘ಚತುರಂಗ ಭವನ’ದ ಕಥೆ

chadurangaa.jpgನನ್ನ ಪ್ರೀತಿಯ ಬರಹಗಾರ ದಿವಂಗತ ಚದುರಂಗ ಅವರ ನಿಜವಾದ ಹೆಸರು ಎಂ. ಸುಬ್ರಹ್ಮಣ್ಯ ರಾಜೇ ಅರಸ್ ಎಂಬುದು ಬಹಳ ಕಾಲದವರೆಗೆ ನನಗೆ ತಿಳಿದಿರಲಿಲ್ಲ. ಎಂ. ಅಂದರೆ ಮುದ್ದುರಾಜ ಅರಸ್. ಮುದ್ದುರಾಜ ಅರಸರು ಚದುರಂಗರ ತಂದೆ. ಅವರು ತಲಕಾಡಿನ ರಾಜವಂಶಕ್ಕೆ ಸೇರಿದವರು. ತಲಕಾಡು ಮರಳಿನಿಂದ ಮುಚ್ಚಿದಾಗ ಇವರ ಹಿರಿಯರು ಅಲ್ಲಿಂದ ಸಮೀಪದ ಪಾಳ್ಯಕ್ಕೆ ಹೋಗಿ ನೆಲೆಸಿ ಪಾಳ್ಯದ ಚತುರಂಗ ಅರಸು ಮನೆತನದವರು ಅಂತ ಹೆಸರಾದವರು. ಈ ಮನೆತನದ ಅರಸರು ಚದುರಂಗ ಕ್ರೀಡೆಯಲ್ಲಿ ಪ್ರವೀಣರಾಗಿದ್ದರಿಂದ ಇವರಿಗೆ ಆ ಹೆಸರು ವಂಶಪಾರಂಪರ್ಯವಾಗಿ ಬಂದಿತ್ತು.
ನಾನು ಬಹಳ ಕಾಲದವರೆಗೆ ಚದುರಂಗ ಎನ್ನುವುದು ಒಂದು ಕಾವ್ಯನಾಮ ಎಂದೇ ತಿಳಿದಿದ್ದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯುವಕನಾಗಿದ್ದ ನನ್ನನ್ನು ಬೆಂಗಳೂರಿನ ಚಾಮರಾಜಪೇಟೆಯ ಹಳೆಯ ಕಾಲದ ಪಬ್ ಒಂದರಲ್ಲಿ ಪ್ರೀತಿಯಿಂದ ಕೂರಿಸಿಕೊಂಡು ಚದುರಂಗರು ಕಥೆ ಬರೆಯುವುದು ಹೇಗೆ ಎಂದು ಸೊಗಸಾಗಿ ಪಾಠ ಹೇಳಿಕೊಟ್ಟಿದ್ದರು. ಅರೆಬಿಯನ್ ರಾತ್ರಿಗಳ ಶಹಜéಾದೆಯ ಕಥೆ ಹೇಳಿ `ಕಥೆಯೆಂದರೆ ಹೀಗಿರಬೇಕಯ್ಯ’ ಎಂದು ಬೆನ್ನು ತಟ್ಟಿದ್ದರು. ಜುಲೈಕಾ ಮತ್ತು ಯೂಸುಫ್ ಎಂಬ ಅಮರ ಪ್ರೇಮಿಗಳ ಕಥೆ ಹೇಳಿದ್ದರು. ನಾನು ನನ್ನ ಮೊದಲ ಕಥೆ ಬರೆದಾಗ ಅದರಲ್ಲಿ ಈ ಕತೆಯನ್ನೂ ಒಂದು ಚೂರು ಸೇರಿಸಿ ಖುಷಿ ಪಟ್ಟಿದ್ದೆ. ಅದನ್ನು ಓದಲು ಚದುರಂಗರಿಗೆ ಕೊಡಲು ಮರೆತುಬಿಟ್ಟಿದ್ದೆ.
ಅದು ನಡೆದು ಕೆಲವು ವರ್ಷಗಳ ನಂತರ ಒಂದು ದೀಪಾವಳಿಯ ದಿನ ಚದುರಂಗರು ಜಯಲಕ್ಷ್ಮೀಪುರಂನಲ್ಲಿ ತಾವೇ ಕಟ್ಟಿಸಿದ ಮನೆಯಲ್ಲಿ ಮಲಗಿ ಒಂದೊಂದೇ ಇಂಚು ಸಾವನ್ನು ಆವಾಹಿಸಿಕೊಳ್ಳುತ್ತಾ ನಗುತ್ತಾ ತೀರಿಹೋಗಿದ್ದರು. ಜನನ ಮರಣ ಇತ್ಯಾದಿಗಳಲ್ಲಿ ನಂಬಿಕೆ ಕಳೆದುಕೊಂಡಿರುವ ನಾನು ತೀರಿಕೊಂಡ ಅವರನ್ನು ನೋಡಲು ಹೋಗಿರಲಿಲ್ಲ. ಆದರೂ ನನ್ನೊಳಗೆ ಒಂದು ಪ್ರಶ್ನೆ ಇದ್ದೇ ಇತ್ತು. ಉಯ್ಯಾಲೆ, ವೈಶಾಖ, ಸರ್ವಮಂಗಳಾ,ಹೆಜ್ಜಾಲ ದಂತಹ ಸಾಮಾಜಿಕ ಕಾದಂಬರಿಗಳನ್ನು ಬರೆದ ಚದುರಂಗರು ಯಾಕೆ ಎಲ್ಲೂ ಕೂಡಾ ತಲಕಾಡಿನ ಪಾಳ್ಯದ ಚತುರಂಗ ಮನೆತನದ ರೋಮಾಂಚಕರವೂ ವಿಷಾದಕರವೂ ಆದ ಏಳು ಬೀಳುಗಳ ಕುರಿತು ಬರೆಯಲಿಲ್ಲ ಎಂದು ಆಗಾಗ ಯೋಚಿಸುತ್ತಿದ್ದೆ. ನನಗೆ ಅರೆಬಿಯನ್ ರಾತ್ರಿಗಳ ಕಥೆ ಹೇಳಿದ ಅವರು ಅವರ ಮೈಸೂರಿನ ಅರಮನೆಯ ಹಗಲು ರಾತ್ರಿಗಳ ಕುರಿತು ಯಾಕೆ ಹೇಳಲಿಲ್ಲ ಎಂದು ಯೋಚಿಸುತ್ತಿದ್ದೆ. ಆಮೇಲೆ ಅವರವರ ಕಥೆಗಳ ಹಣೆಯಬರಹದ ಕುರಿತು ಹೆಚ್ಚು ಯೋಚಿಸುವುದು ಒಳಿತಲ್ಲ, ಹಾಗೆ ನೋಡಿದರೆ ನನ್ನ ರಾತ್ರಿಗಳ ಎಲ್ಲ ಕಥೆಗಳನ್ನೂ ಎಲ್ಲಿಯಾದರೂ ಬರೆಯಲು ಹೋದರೆ ಏನೆಲ್ಲಾ ನಡೆಯಬಹುದು ಎಂದು ಯೋಚಿಸಿ ಬೆಚ್ಚಿಬೀಳುತ್ತಿದ್ದೆ.
ಮೊನ್ನೆ ಶುಕ್ರವಾರ ಸಂಜೆ ಚದುರಂಗರ ಮಗ ಹಾಗೂ ನನ್ನ ಹಿರಿಯ ಸ್ನೇಹಿತರಾದ ಪ್ರೊಪೆಸರ್ ವಿಕ್ರಮರಾಜ ಅರಸರ ಜೊತೆ ಮೈಸೂರಿನ ಪಬ್ ಒಂದರಲ್ಲಿ ಕುಳಿತು ಚತುರಂಗ ಮನೆತನದ ಕಥೆ ಕೇಳಿಸಿಕೊಳ್ಳುತ್ತಿದ್ದೆ.

ಕಥೆ ಹೇಳುತ್ತಾ ಹೇಳುತ್ತಾ ವಿಕ್ರಮರಾಜ ಅರಸರುvikram.jpg ಉದ್ವಿಗ್ನರಾಗ ತೊಡಗಿದ್ದರು. ‘ಉದ್ವಿಗ್ನರಾಗಬೇಡಿ. ಕಥೆ ಹೇಳಿ’ ಎಂದು ಅವರನ್ನು ನಡುನಡುವೆ ಛೇಡಿಸುತ್ತಿದ್ದೆ. ಇದು ಉದ್ವಿಗ್ನತೆ ಅಲ್ಲ ವಿಷಾದ ಎಂದು ಅವರು ಸ್ಪಷ್ಟೀಕರಣ ನೀಡುತ್ತಿದ್ದರು. ಕಥೆ ಎಲ್ಲ ಹೇಳಿ ಮುಗಿಸಿದ ಮೇಲೆ ಗಟಗಟನೆ ಬಿಯರ್ ಕುಡಿದು ಮುಗಿಸಿ ಕತೆ ಹೇಗಿತ್ತು ಎಂದು ಕೇಳಿದರು. ಕಥೆಯ ಅಂಶ ಕಡಿಮೆ ಇತ್ತು ತತ್ವಶಾಸ್ತ್ರ ಕೊಂಚ ಜಾಸ್ತಿ ಆಯಿತು ಎಂದು ಪುನಃ ಕೀಟಲೆ ಮಾಡಿದೆ. ‘ಹಾಗಾದರೆ ನಡೆಯಿರಿ ಕಥೆ ಹೇಳುವುದು ಬೇಡ. ತೋರಿಸಿಯೇ ಬಿಡುತ್ತೇನೆ’ ಎಂದು ಕೈಹಿಡಿದು ಕರಕೊಂಡು ಚದುರಂಗರು ಅರಸರಂತೆ ಬಾಳಿ ಬದುಕಬೇಕಿದ್ದ ‘ಚತುರಂಗ ಭವನ’ ಎಂಬ ಸುಂದರವು ಭವ್ಯವೂ ವಿಶಾಲವೂ ಆದ ಮಹಲ್ಲನ್ನು ತೋರಿಸಿದರು.

ನಾವು ಹೋದಾಗ ಅಲ್ಲಿ ನಟ ವಿಷ್ಣುವರ್ಧನ್ ಅಭಿನಯಿಸುತ್ತಿರುವ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಯಾವು ಯಾವುದೋ ಭಾಷೆಗಳನ್ನು ಮಾತನಾಡುವ, ನೋಡಲು ಹೇಗೆ ಹೇಗೋ ಇರುವ

chthuranga-bhavan3.jpg

ಕುರುಚಲು ಗಡ್ಡದ, ನಿದ್ರೆಯಿಲ್ಲದ ಕಣ್ಣುಗಳ ಲೈಟ್ಬಾಯ್ಗಳೂ, ಸ್ಪಾಟ್ಬಾಯ್ಗಳೂ ಚತುರಂಗ ಭವನದ ತುಂಬೆಲ್ಲ ತಮ್ಮ ಲೈಟ್ಗಳನ್ನೂ, ಬೋಡರ್ುಗಳನ್ನೂ ಹರವಿಕೊಂಡು ತಲ್ಲೀನರಾಗಿದ್ದರು. ಯಾವುದೋ ಮಧ್ಯ ತಯಾರಿಕೆಯ ಕಾಖರ್ಾನೆಯೊಂದರ ವಿಶ್ರಾಂತಿಗೃಹವಾಗಿ ಹೋಗಿರುವ ಚತುರಂಗ ಭವನ ಶಾಪಗ್ರಸ್ತ ಕನ್ಯೆಯಂತೆ ಸಂಸಾರ ಸುಖವಿಲ್ಲದೆ ಹಾಗೇ ನಾಜೂಕಾಗಿ ಉಳಕೊಂಡು ಬಿಟ್ಟಿತ್ತು. ಒಂದು ಕಾಲದಲ್ಲಿ ಚದುರಂಗರನ್ನು ಹುಡುಕಿಕೊಂಡು ಬರುತ್ತಿದ್ದ ಆನಂದ, ಅ.ನ.ಕೃ., ತರಾಸು, ನಿರಂಜನ ರಂತಹ ಲೇಖಕರನ್ನೂ, ಕೇರಳದ ಆ ಕಾಲದ ಭೂಗತ ಕಮ್ಯೂನಿಷ್ಟ್ ನಾಯಕರನ್ನೂ ಕಂಡಿದ್ದ ಆ ರಾಜಮಹಲ್ ಇದೀಗ ನಟ ನಟಿಯರ ಕಲರವದಿಂದ ತುಂಬಿಕೊಂಡಿತ್ತು.

ಹಾಗೇ ನೋಡಿದೆ. ಆ ಮಹಲಿನಲ್ಲಿ ಸುಖವಾಗಿರುವವನು ಅಲ್ಲಿಯ ಕೆಲಸದ ಕಾವಲುಗಾರ ಒಬ್ಬ ಮಾತ್ರ ಅನಿಸಿತ್ತು. ಆ ಕಾವಲುಗಾರನ ಮಗು ಚಿತ್ರೀಕರಣದ ನಡುವಲ್ಲಿ ಗಾಳಿಯಿಲ್ಲದ ಚೆಂಡೊಂದನ್ನು ಒದ್ದು ಆಟವಾಡುತ್ತಿತ್ತು. ಅದನ್ನು ಕಂಡು ನನ್ನ ಮನಸಲ್ಲಿದ್ದ ಯೋಚನೆಯನ್ನು ವಿಕ್ರಮರಾಜ ಅರಸರೂ ಬಾಯಿಬಿಟ್ಟು ಹೇಳಿದರು.
ನಮಗಿಬ್ಬರಿಗೂ ಏಕ ಕಾಲದಲ್ಲಿ ಒಂದೇ ಸತ್ಯ ಹೊಳೆಯಲು ತೊಡಗಿತ್ತು. ದಾರಿಯಲ್ಲಿ ಹಿಂತಿರುಗಿ ಬರುವಾಗ ‘ಸಾರ್ ನೀವು ದಯವಿಟ್ಟು ‘ಚತುರಂಗ ಭವನ’ ಎಂಬ ಕಾದಂಬರಿಯನ್ನು ಬರೆಯಬೇಕು’ ಎಂದು ನಾನು ಅವರಲ್ಲಿ ಕೇಳಿಕೊಳ್ಳುತ್ತಿದ್ದೆ ‘ಇಲ್ಲ ನೀವೇ ಬರೆಯಬೇಕು’ ಎಂದು ಅವರು ನನ್ನನ್ನು ಕೇಳಿಕೊಳ್ಳುತ್ತಿದ್ದರು. ‘ಹಾಗಾದರೆ ಸಂಯುಕ್ತವಾಗಿ ಬರೆಯೋಣ, ನಿಮ್ಮ ತತ್ವಜ್ಞಾನ ನನ್ನ ಕಥನ ನಿಮ್ಮ ವಿಷಾದ ಮತ್ತು ನನ್ನ ಉದ್ವಿಗ್ನತೆ’ ಎಂದು ಹೇಳಿದೆ. ನಾವು ಆಮೇಲೆ ಇನ್ನೂ ಬಹಳ ಹೊತ್ತು ಮಾತನಾಡಿದೆವು.

chthuranga-bhavan.jpg

ವಿಕ್ರಂ ರಾಜ ಅರಸರು ಹೇಳಿದ ಚತುರಂಗ ಭವನದ ಕಥೆ ಸಂಕ್ಷಿಪ್ತವಾಗಿ ಹೀಗಿದೆ:
ಚತುರಂಗ ಬಸವರಾಜ ಅರಸಿನವರ ಮಗ ಅನಂತರಾಜ ಅರಸಿನವರು. ಇವರು ಹತ್ತೊಂಬತ್ತನೆಯ ಶತಮಾನದ ಆದಿ ಭಾಗದಲ್ಲಿ ಹುಟ್ಟಿದವರು. ಇವರು ಚತುರಂಗ ಪ್ರವೀಣರು. ಜೊತೆಗೆ ‘ಗ್ರಹಣ ದರ್ಪಣ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಕಾಲಕಾಲಕ್ಕೆ ಸಂಭವಿಸುವ ಗ್ರಹಣಗಳನ್ನು ಎಲ್ಲ ಕನ್ನಡಿಗರೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬರೆದು ತೋರಿಸಿದ್ದಾರೆ. ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ ಆಜ್ನೆಯಂತೆ ಬರೆಯಲ್ಪಟ್ಟ ಈ ಕೃತಿಯನ್ನು 1863ರಲ್ಲಿ ಸನ್ನಿಧಾನಕ್ಕೆ ಅಪರ್ಿಸಲಾಗಿದೆ. ಈ ಗ್ರಂಥ ಬರೆಯುವ ಹೊತ್ತಲ್ಲೇ ಅನಂತರಾಜ ಅರಸರ ಜೀವನದಲ್ಲಿ ಇನ್ನೊಂದು ಆಘಾತಕರ ಘಟನೆ ನಡೆದಿದೆ.
ಅದೇನೆಂದರೆ ಚದುರಂಗದಾಟ ಪ್ರವೀಣರಾಗಿದ್ದ ಅವರು ಒಂದು ಸಂಜೆ ಮಹಾರಾಜರೊಡನೆ ಚದುರಂಗವಾಡುತ್ತಾ ಆಟದ ಉತ್ಸಾಹದಲ್ಲಿ ಔಚಿತ್ಯ ಪ್ರಜ್ಞೆಯನ್ನೂ ಮರೆತು ಮಹಾರಾಜಾ ಮುಮ್ಮುಡಿ ಕೃಷ್ಣರಾಜ ಒಡೆಯರನ್ನೇ ಚದುರಂಗದಲ್ಲಿ ಸೋಲಿಸಿದ್ದಾರೆ. ಇದರಿಂದ ಕುಪಿತರಾದ ಮಹಾರಾಜರು ವಜ್ರ ವೈಡೂರ್ಯ ಖಚಿತವಾದ ಚದುರಂಗದ ದಾಳವೊಂದನ್ನು ಅನಂತರಾಜರ ಮುಖಕ್ಕೆ ನೆತ್ತರು ಒಸರುವಂತೆ ಬಿಸುಡಿದ್ದಾರೆ. ರಾಜರ ಕೋಪಕ್ಕೆ ತುತ್ತಾದ ಅನಂತರಾಜ ಅರಸರು ವ್ಯಾಕುಲರಾಗಿ ದೊಡ್ಡಕೆರೆಯ ದಡದಲ್ಲಿ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಆಗ ಆ ಹಾದಿಯಲ್ಲಿ ಬಂದ ಕಲ್ಲಹಳ್ಳಿಯ ಅರಸು ಮನೆತನದ ರೈತರೊಬ್ಬರು ಅನಂತರಾಜರಿಗೆ ಸಾಂತ್ವನ ಹೇಳಿ ಹಳ್ಳಿಗೆ ಕೊಂಡೊಯ್ದು ಅವರಿಗೆ ಕೃಷಿಭೂಮಿಯನ್ನು ಒದಗಿಸಿ ಹಳ್ಳಿಯ ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನೂ ವಹಿಸಿ ಅವರು ವ್ಯಾಕುಲವನ್ನು ಮರೆಯುವಂತೆ ಮಾಡಿದ್ದಾರೆ. ಅನಂತರಾಜ ಅರಸರು ತಮ್ಮ ಜೀವನದ ಕೊನೆಯವರೆಗೂ ಕಲ್ಲಹಳ್ಳಿಯಲ್ಲೇ ಕಳೆದಿದ್ದಾರೆ.
ಕಾದಂಬರಿಕಾರ ಚದುರಂಗರೂ, ದಿವಂಗತ ಮುಖ್ಯಮಂತ್ರಿ ಡಿ. ದೇವರಾಜ ಅರಸರೂ ಹೀಗೆ ಕಲ್ಲಹಳ್ಳಿಯ ರೈತಾಪಿ ಜನರ ನಡುವಿಂದ ಬಂದಿದ್ದಾರೆ. ಚದುರಂಗರು ಅನಂತರಾಜ ಅರಸರ ಮೊಮ್ಮಗ. ಅವರ ಹಿರಿಯ ಸಹೋದರ ಬಸವರಾಜ ಅರಸರು ರಾಜಕುಮಾರಿ ಲೀಲಾವತಿ ದೇವಿಯವರನ್ನು ಮದುವೆಯಾಗಿ ಮೈಸೂರು ಅರಸರ ಮನೆತನದ ಜೊತೆ ಪುನಃ ಸಂಬಂಧ ಬೆಳೆಸಿಕೊಂಡರು. ಮೈಸೂರಿನ ಜಯಲಕ್ಷ್ಮಿ ವಿಲಾಸ, ಚಿತ್ತರಂಜನ್ ಮಹಲು, ಲೋಕರಂಜನ್ ಮಹಲ್ ಅರಮನೆಗಳಲ್ಲಿ ಇದ್ದವರು.ಒಂದರಲ್ಲಿ ಶಯನ,ಇನ್ನೊಂದರಲ್ಲಿ ವಿರಾಮ ಮತ್ತೊಂದರಲ್ಲಿ ಮಾತುಕತೆ ಎಂದು ಅವುಗಳಲ್ಲಿ ಕಳೆದವರು. ಹಳ್ಳಿಯಿಂದ ಬಂದ ತನ್ನ ತಾಯಿ ಮತ್ತು ತಮ್ಮ ಚದುರಂಗರಿಗಾಗಿ ಚತುರಂಗಭವನ ಎಂಬ ಈ ಮಹಲನ್ನು ಕಟ್ಟಿಸಿದ್ದರು.
ಬಸವರಾಜ ಅರಸರಿಗೆ ತನ್ನ ತಮ್ಮ ಚದುರಂಗ ಅಲಿಯಾಸ್ ಸುಬ್ರಹ್ಮಣ್ಯರಾಜ ಅರಸ್ ಅವರೂ ಕೂಡಾ ರಾಜಮನೆತನದ ಕನ್ಯೆಯೊಬ್ಬಳನ್ನು ಕೈಹಿಡಿಯ ಬೇಕೆಂಬ ಆಸೆ ಇತ್ತು. ಅರಮನೆಯಿಂದಲೂ ಈ ಪ್ರಸ್ತಾಪ ಬಂದಿತ್ತು. ಮದುವೆಯೂ ತೀಮರ್ಾನವಾಗಿತ್ತು. ರಾಜಮನೆತನದ ಆ ಸುಂದರಿಯೂ ಅಪೂರ್ವವಾಗಿದ್ದರು. ಆದರೆ ಆಗಲೇ ಸಾಹಿತಿಯೂ ಪ್ರಗತಿಶೀಲನೂ, ಬಂಡಾಯಗಾರನೂ, ಪ್ರಜಾಪ್ರಭುತ್ವವಾದಿಯೂ, ಪ್ರೇಮಿಯೂ ಆಗಿದ್ದ ಚದುರಂಗ ಎಂಬ ಯುವಕ ಹೇಳದೇ ಕೇಳದೇ ರಾತ್ರೋರಾತ್ರಿ ಮೈಸೂರಿನಿಂದ ಪರಾರಿಯಾಗಿ ರಾಜ ಸಂಬಂಧದಿಂದ ಪಾರಾಗಿದ್ದರು.

chthuranga-bhavan2.jpg

ಏಕೆಂದರೆ ಅವರು ಆಗಲೇ ಕಲಾವಿದೆಯೂ ಸೂಕ್ಷ್ಮ ಮತಿಯೂ ಆದ ದೊಡ್ಡಮಣ್ಣಿ ಎಂಬ ರೈತರ ಮಗಳನ್ನು ಪ್ರೀತಿಸುತ್ತಿದ್ದರು. ಅವರಿಬ್ಬರ ಏಕೈಕ ಪುತ್ರನೇ ಈಗ ಇಂಗ್ಲಿಷ್ ಪ್ರೊಪೆಸರ್ ಆಗಿರುವ ವಿಕ್ರಂರಾಜೇ ಅರಸ್. ವಿನಾಕಾರಣವಾಗಿ ನನ್ನಂತಹ ಕೀಟಲೆಕೋರನನ್ನು ಕಾದಂಬರಿಕೋರನಾಗು ಎಂದು ಒತ್ತಾಯಿಸುತ್ತಿರುವ ನನ್ನ ಹಿರಿಯ ಸ್ನೇಹಿತರು. ನನ್ನ ಜೊತೆ

ಸಿಗರೇಟನ್ನೂ ಬಿಯರನ್ನೂ ಚತುರಂಗ ಭವನದ ಕಥೆಗಳನ್ನೂ ಹಂಚಿಕೊಳ್ಳುತ್ತಿರುವ ಉದಾರ ಹೃದಯವಂತರು.
ವಿಕ್ರಮರಾಜ ಅರಸರು ಹೇಳಿದ ಚತುರಂಗ ಭವನದ ನಿಜವಾದ ಕಥೆ ಇರುವುದು ಇಬ್ಬರು ಅಣ್ಣತಮ್ಮಂದಿರ ನಡುವೆ. ಇಬ್ಬರೂ ರಾಜಯೋಗವಿದ್ದವರು. ಅಣ್ಣ ರಾಜಕುಮಾರರಾದರು. ತಮ್ಮ ಕಾದಂಬರಿಕಾರರಾದರು. ಇಬ್ಬರೂ ಒಳಗೊಳಗೆ ತಮ್ಮ ಹಠವೇ ಸರಿ ಎಂದು ಸಾಧಿಸಿದರು. ಈಗ ಇಬ್ಬರು ಇಲ್ಲ. ಆದರೆ ಬಸವರಾಜ ಅರಸರು ಬಾಳಿದ ಹಾಗೂ ಸುಬ್ರಹ್ಮಣ್ಯರಾಜೇ ಅರಸ್ ಉರುಪ್ ನನ್ನ ಪ್ರೀತಿಯ ಚದುರಂಗ ತಿರಸ್ಕರಿಸಿದ ಈ ಚತುರಂಗ ಭವನ ಈಗ ಯಾವಾಗಲೂ ನಟನಟಿಯರಿಂದ ಕ್ಯಾಮರಾ ದೀಪಗಳಿಂದ ಗಿಜಿಗಿಡುತ್ತಿರುತ್ತದೆ. ಆದರೆ ಇಲ್ಲಿ ಯಾರೂ ಸಂಸಾರ ಹೂಡುವುದಿಲ್ಲ. ಏಕೆಂದರೆ ಇದು ಶಾಪಗ್ರಸ್ತ ಅರಮನೆ ಎಂದು ಬಹಳ ಕತೆಗಳೇ ಇವೆ.

Advertisements