ವೈಕಂ ಮಹಮದ್ ಬಷೀರ್ ಎಂಬ ಕಾಲಜ್ಞಾನಿ

basheer.jpg

‘ಸುಂದರವಾದ ಈ ಭೂಗೋಳದಲ್ಲಿ ನನಗೆ ಪಡೆದವನು ಅನುಮತಿಸಿದ್ದ ಸಮಯ ಪರಿಪೂರ್ಣವಾಗಿ ಅವಸಾನಿಸಿತು. ಇನ್ನು ಸಮಯ ಕೊಂಚವೂ ಇಲ್ಲ. ಆ ಪಡೆದವನ ಭಂಡಾರದಲ್ಲಿ ಮಾತ್ರ ಸಮಯವಿದೆ. ಎಂದಿಗೂ, ಎಂದೆಂದಿಗೂ ಮುಗಿಯದ ಸಮಯ ಅನಂತ ಅನಂತವಾದ ಸಮಯ’ ‘ನಾನು ತೀರಿಹೋದೆ.. ನನ್ನ ಇನ್ನು ಯಾರಾದರು ನೆನಪಿಸಬೇಕೆ? ನನ್ನ ಯಾರೂ ನೆನಪಿಸುವುದು ಬೇಡ ಎಂದು ನನಗೆ ಅನ್ನಿಸುತ್ತಿದೆ. ಯಾಕೆ ನೆನಪಿಸುವುದು? ಕೋಟ್ಯಾನುಕೋಟಿ ಅನಂತ ಕೋಟಿ ಸ್ತ್ರೀ ಪುರುಷರು ತೀರಿಹೋಗಿಲ್ಲವೇ? ಅವರನ್ನು ಯಾರು ನೆನಪಿಸುತ್ತಾರೆ?’ ‘ನನ್ನ ಪುಸ್ತಕಗಳೆಲ್ಲ ಎಷ್ಟು ಕಾಲ ನೆಲೆ ನಿಲ್ಲಬಹುದು? ಹೊಸಲೋಕ ಬರುವುದಲ್ಲವಾ? ಹಳೆಯದೆಲ್ಲ ಹೊಸದರಲ್ಲಿ ಮಾದು ಹೋಗಬೇಕಲ್ಲವಾ?’
ಮಲಯಾಳದ ಮಹಾಬರಹಗಾರ ವೈಕಂ ಮಹಮದ್ ಬಷೀರ್ ತನ್ನ ಕೊನೆಯ ಬರಹದಲ್ಲಿ ಬರೆಯುತ್ತಿದ್ದಾರೆ.

‘ನಾನು ಹಿಂದೂ ಸನ್ಯಾಸಿಗಳ ಜೊತೆ, ಮುಸ್ಲಿಂ ಸೂಫಿ ಸಂತರ ಜೊತೆ ಕಳೆದ ದಿನಗಳು ನೆನಪಾಗುತ್ತಿವೆ. ಅದೊಂದು
ಹುಡುಕಾಟವಾಗಿತ್ತು. ದೇವನ ನಾಮಗಳನ್ನು ಪಠಿಸುತ್ತಿದ್ದೆ, ನಿರಂತರವಾದ ಧ್ಯಾನವಾಗಿತ್ತು ಅದು. ಗಡ್ಡವನ್ನು ಮುಡಿಯನ್ನೂ ಬೆಳಸಿ ಪರಿಪೂರ್ಣ ನಗ್ನತೆಯ ಇರವು. ಪದ್ಮಾಸನ! ಯೋಗ ದಂಡ! ಅಯ್ಯೋ ಪಡೆದವನೇ ಯೋಚಿಸುತ್ತಿದ್ದೇನೆ. ಪ್ರಪಂಚಗಳಾಧ ಸರ್ವ ಪ್ರಪಂಚಗಳನ್ನೂ ಪ್ರಜ್ಞಾ ಮಂಡಲದಲ್ಲಿ ಕೇಂದ್ರೀಕರಿಸಿ, ಧ್ಯಾನದಿಂದ ಎದ್ದು ಭೂಗೋಳ, ಸೂರ್ಯಚಂದ್ರ ನಕ್ಷತ್ರ, ಕ್ಷೀರಪಥ, ಸೌರವ್ಯೂಹ, ಭೂಮಂಡಲಗಳಿಗೆ ಕೇಳಿಸುವಂತೆ ಮನಮಂತ್ರಿಸುತ್ತಿತ್ತು. ”ಅಹಂ ಬ್ರಹ್ಮಾಸ್ಮಿ’ ಅದೇ ಮಂತ್ರವನ್ನು ಧ್ಯಾನದಿಂದ ಎದ್ದ ಮುಸ್ಲಿಂ ಸೂಫಿ ಸಂತರು ಪಠಿಸುತ್ತಾರೆ ‘ಅನಲ್ ಹಕ್’ ನೆನಪು ಮಾಡಿಕೊಂಡರೆ ತಮಾಷೆ ಅನಿಸುತ್ತದೆ. ಇಹಲೋಕದ ಜೀವಿತ ಒಂದು ದೊಡ್ಡ ತಮಾಷೆ, ಭಗವಂತನ ಲೀಲಾವಿಲಾಸ’
ವೈಕಂ ಮಹಮದ್ ಬಷೀರ್ ಬರೆಯುತ್ತಾರೆ:

ರಾತ್ರಿ ನನಗೆ ಮಾತು ನಿಂತು ಹೋಯಿತು. ಎದೆ ಒಡೆದು ಹೋಗುತ್ತಿದೆ ಅನಿಸಿತು. ಗಂಟಲು ಹಿಡಕೊಳ್ಳತೊಡಗಿತು. ನಾನು ತೀರಿ ಹೋಗುತ್ತಿದ್ದೇನೆ ಅನಿಸುತ್ತಿತ್ತು. ‘ಮಾರನೇ ದಿನ ನನ್ನ ಪ್ರೀತಿಯ ಬಾಪಾ ತೀರಿ ಹೋದ ವಿಷಯ ತಿಳಿಯಿತು. ಅಲ್ಲಿ ನನ್ನ ಬಾಪಾನ ಉಸಿರನ್ನು ಪಡೆದವನ ದೂತರು ತೆಗೆದುಕೊಂಡು ಹೋಗುತ್ತಿರುವಾಗ ಇಲ್ಲಿ ನನ್ನ ಗಂಟಲು ಹಿಡಕೊಳ್ಳುತ್ತಿತ್ತು. ಉಸಿರು ಕಟ್ಟುತ್ತಿತ್ತು’.

ಈ ಸಾಲುಗಳನ್ನು ಬರೆಯುತ್ತಿರುವಾಗ ನನಗೂ ಹಾಗೇ ಅನಿಸುತ್ತದೆ ಕೈಬೆರಳುಗಳು ಕಂಪಿಸುತ್ತವೆ. ಧೈರ್ಯ ಸಾಲುತ್ತಿಲ್ಲ.

basheer2.jpg

ಎಂದೂ ಕಂಡೇ ಇರದ ಆದರೆ ಎಂದೂ ನಾನಾ ರೂಪಗಳಲ್ಲಿ ನಾನಾ ಕತೆಗಳ ಕತೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದ ಬಹುದೊಡ್ಡ ಮನುಷ್ಯನೊಬ್ಬನ ಕುರಿತು ಬರೆಯುವಾಗ ಸಾಲುಗಳು ಮಂಜಾಗುತ್ತವೆ. ಈ ಬಷೀರ್ ಎಂಬ ಮನುಷ್ಯ ಬರೆಯದೇ ಇರುವ ಏನನ್ನು ನಾವು ಬರೆಯಬಹುದು? ಬಷೀರ್ ಕೊಡದಿರುವ ಯಾವ ಚಿತ್ರವನ್ನು ನಾವು ಕೊಡಬಹುದು? ಬಷೀರ್ ಬರೆಯದೇ ಉಳಿದದ್ದು ಏನು?
ಕೇರಳದ ವೈಕಂ ಬಳಿಯಲ್ಲಿ ಮೂವಾಟುಪುಯ ಎಂಬ ಹೊಳೆಯೊಂದು ಹರಿಯುತ್ತದೆ. ಆ ನದಿಯ ಬದಿಯಲ್ಲಿ ತಲಯೋಲ ಪರಂಬ್ ಎಂಬ ಊರು. ನದಿಗೆ ತಾಗಿಕೊಂಡೇ ಹತ್ತಾರು ಎಕರೆಗಳಿರುವ ಪುಟ್ಟ ತೋಟ. ತೋಟದ ಪಶ್ಚಿಮ ದಿಕ್ಕಿಗೆ ಅಬ್ದುಲ್ ರಹಮಾನ್ ಎಂಬ ಮರದ ವ್ಯಾಪಾರಿಯೊಬ್ಬ ಪುಟ್ಟ ಮನೆಯೊಂದನ್ನು ಕಟ್ಟಿಸಿದ ತೆಂಗಿನ ಗರಿಗಳನ್ನು ಹೆಣೆದು ಗೋಡೆ ಮಾಡಿ ಕಟ್ಟಿದ ಮಾಡಿನ ಮನೆ. ಒಂದು ಹಗಲು ಅಬ್ದುಲ್ ರಹಮಾನನೂ ಅವನ ಸಹೋದರನೂ ತೋಟದ ಕಾಯಿಪಲ್ಲೆಗಳನ್ನು ಕೊಯ್ಯುತ್ತ ಮನೆಯಿಂದ ದೂರ ಹೋಗಿದ್ದರು. ಮನೆಯಲ್ಲಿ ಅಬ್ದುಲ್ ರಹಮಾನನ ಹೆಂಡತಿ ಕುಂಞಚುಮ್ಮ ಬತ್ತ ಬೇಯಿಸಿಕೊಂಡಿದ್ದಳು. ಹತ್ತು ತಿಂಗಳ ಗರ್ಭಿಣಿ ಹೆಂಗಸು. ಗರ್ಭದಲ್ಲಿ ಬಷೀರ್ ಇದ್ದ. ಬಯಸಿ, ಮೋಹಿಸಿ ಉಂಟಾದ ಗರ್ಭ. ಹಲವು ಹರಕೆಗಳ ನೇಚರ್ೆಗಳ ಫಲದಿಂದ ಬಂದ ಚೊಚ್ಚಲ ಮಗು. ಒಲೆಯಲ್ಲಿ ಒಣಗಿದ ಎಲೆಗಳು ಹೊತ್ತಿ ಉರಿಯುತ್ತಿದ್ದವು. ಒಲೆಯ ಮೇಲೆ ಬತ್ತ ತುಂಬಿಕೊಂಡಿದ್ದ ಚೆಂಬಿನ ಕಡಾಯಿ, ಕುಂಞಚುಮ್ಮ ಸೌಟಿನಿಂದ ಬತ್ತವನ್ನು ಮೊಗೆದು ತೆಗೆದು ಬಟ್ಟೆಯ ಬುಟ್ಟಿಗೆ ತುಂಬಿಸುತ್ತಿದ್ದಳು. ತಟ್ಟನೆ ತೆಂಗಿನ ಗರಿಯ ಗೋಡೆಗೆ ಬೆಂಕಿ ಹಿಡಿಯಿತು. ಜೊತೆಗೆ ಕುಂಞಚುಮ್ಮನಿಗೆ ಪ್ರಸವ ವೇದನೆ ತೊಡಗಿತು. ಹೊಗೆ ತುಂಬಿದ ಕಣ್ಣಲ್ಲಿ ಉರಿ. ಉಸಿರು ಹಿಡಕೊಂಡಿತು. ಕುಂಞಚುಮ್ಮ ಬತ್ತ ತುಂಬಿದ ಕಡಾಯಿಯನ್ನು ಸೊಂಟಕ್ಕೆ ಇಟ್ಟುಕೊಂಡಳು.

ಪ್ರಜ್ಞೆ ಬಂದಾಗ ಬಾಳೆಯ ಬುಡದಲ್ಲಿ ಮಲಗಿದ್ದಳು. ಗರ್ಭಜಾರಿಹೋಗಿತ್ತು. ಕುಂಞಚುಮ್ಮ ಹೊಟ್ಟೆ ಸವರಿ ನೋಡಿದಳು. ‘ಪಡೆದವನೇ ನನ್ನ ಪಡೆದವನೇ ಎಲ್ಲಿ?! ಅರೆಜ್ಞಾನದಲ್ಲಿ ಆ ಪಡೆದವನನ್ನು ನೆನೆದುಕೊಂಡು ಹೊತ್ತಿ ಉರಿಯುತ್ತಿದ್ದ ತೆಂಗಿನ ಗರಿಯ ಗುಡಿಸಲೊಳಕ್ಕೆ ನುಗ್ಗಿದಳು. ನೋಡಿದರೆ ಬರಿಯ ನೆಲದಲ್ಲಿ ಹಸಿಯ ಮಣ್ಣಲ್ಲಿ, ಬೇಯಿಸಿದ ಬತ್ತದ ಬುಟ್ಟಿಯ ಪಕ್ಕದಲ್ಲಿ ಮಲಗಿತ್ತು ಮಗು. ಅವನನ್ನು ಎದೆಗೆ ಒತ್ತಿಕೊಂಡು ಹೊರಗೆ ಓಡಿ ಬಾಳೆಯ ಬುಡದಲ್ಲಿ ಮಲಗಿಸಿದ ತಾಯಿ ಪ್ರಜ್ಞೆ ತಪ್ಪಿ ಮಲಗಿದಳು.

ಅಪ್ಪ ಅಬ್ದುಲ್ ರಹಿಮಾನ್ ಉರಿಯುವ ಮನೆಯ ನೋಡಿ ಓಡಿ ಬಂದವ ನೋಡಿದರೆ ಮನೆ ಹೊತ್ತಿ ಉರಿಯುತ್ತಿದೆ. ಹಾಗೇ ನೋಡಿದರೆ ಹಿತ್ತಲಲ್ಲಿ ಬಾಳೆಯ ಗಿಡದ ಬುಡದಲ್ಲಿ ಪ್ರಜ್ಞೆಯಿಲ್ಲದೆ ಮಲಗಿರುವ ತಾಯಿಯ ಮೊಲೆಗಳ ನಡುವೆ ಅಂಗಾತವಾಗಿ ಮಲಗಿದ ಮಗು. ಬಷೀರ್ ಬೆಂಕಿಯ ನಡುವೆ ಹುಟ್ಟಿದ ಬಾಲಕ. ಆ ಬೆಂಕಿಯ ನಡುವೆ ಹುಟ್ಟಿದ ಮಗುವನ್ನ ಅದರ ಅಜ್ಜ ನದಿಗೆ ತೆಗೆದುಕೊಂಡು ಹೋಗಿ ತೊಳೆದು ಅದರ ಕಿವಿಯಲ್ಲಿ ಪಡೆದವನ ಹೆಸರನ್ನು ಹೇಳಿ ಮಗುವಿಗೆ ಹೆಸರಿಟ್ಟರು. ಬಷೀರ್ ಎಂದರೆ ‘ಸುವಿಶೇಷ’ ಎಂದು ಅರ್ಥ

ಈ ಮೂವಾಟುಪುಯ ಎಂಬ ನದಿಯ ಎರಡು ಕವಲುಗಳು ಬಷೀರ್ ಹುಟ್ಟಿದ ಊರಲ್ಲಿ ಒಂದಾಗಿ ಸೇರಿ ಮುಂದೆ ದೊಡ್ಡ ನದಿಯಾಗಿ ಹರಿಯುತ್ತದೆ. ಬಷೀರ್ ಬರೆದ ‘ಬಾಲ್ಯಕಾಲಸಖಿ’ ಎಂಬ ಕಾದಂಬರಿಯ ಮಜೀದ್ ಎಂಬ ಬಾಲಕ, ಸಹುರಾ ಎಂಬ ಪುಟ್ಟ ಹುಡುಗಿ ನದಿಯ ಬದಿಯ ಕಾಲುದಾರಿಯಲ್ಲಿ ನಡೆಯುತ್ತ ಶಾಲೆಗೆ ಹೋಗುತ್ತಾರೆ. ಮಾತನಾಡಿಕೊಂಡು ಮಾವಿನ ಮಿಡಿಕೊಯ್ದುಕೊಂಡು, ಹಾದಿಯ ಉರುಟು ಕಲ್ಲುಗಳನ್ನು ಒದ್ದುಕೊಂಡು ನಡೆಯುವಾಗ ಆ ನದಿ ಅವರ ಕಣ್ಣುಗಳ ತುಂಬ ತುಂಬಿಕೊಂಡಿರುತ್ತದೆ.

ಶಾಲೆಯಲ್ಲಿ ಗುರುಗಳು ‘ಒಂದು ಮತ್ತು ಒಂದು ಸೇರಿದರೆ ಎಷ್ಟು’ ಎಂದು ಕೇಳುತ್ತಾರೆ. ಬಾಲಕ ಮಜೀದ್ ‘ಒಂದು ಮತ್ತು ಒಂದು ಸೇರಿದರೆ ಒಂದು ದೊಡ್ಡ ಒಂದು’ ಎಂದು ಉತ್ತರಿಸುತ್ತಾನೆ. ಆತನ ಕಣ್ಣುಗಳಲ್ಲಿ ಸುಹುರಾ ಎಂಬ ಹುಡುಗಿಯ ಕಣ್ಣುಗಳೊಳಗೆ ನದಿಯ ಒಂದು ಮತ್ತು ಇನ್ನೊಂದು ಕವಲುಗಳು ಒಂದಾಗಿ ಒಂದು ದೊಡ್ಡ ನದಿಯಾಗಿ ಹರಿಯುವ ಚಿತ್ರವಿರುತ್ತದೆ. ಈ ಬಷೀರ್ ಬರೆದಿದ್ದು ಓದಿದರೆ ಆತ ಬದುಕಿದ ಕತೆಗಳನ್ನು ಕೇಳಿದರೆ ಈ ಬಷೀರ್ ಎಂಬುದು ಆದೊಡ್ಡ ಒಂದಿಗಿಂತಲೂ ದೊಡ್ಡ ಒಂದು ಎಂದು ಅನಿಸುತ್ತದೆ.

ಒಂದು ರಾತ್ರಿ ಕತ್ತಲಲ್ಲಿ ಈ ಹೊಳೆಗೆ ಹುಚ್ಚು ಹಿಡಿಯಿತು. ತೋಟಕ್ಕೆ ಬಂದ ನೀರು ಮನೆಗೆ ಬಂದು, ಮನೆಗೆ ಬಂದ ನೀರು ಇನ್ನು ಬಿಡುವುದಿಲ್ಲ ಅನಿಸಿದಾಗ ಅಪ್ಪ ಅಮ್ಮ ಮಕ್ಕಳು ಪುಟ್ಟ ತೆಪ್ಪವನ್ನೇರಿ ಕುಳಿತರು. ಕಣ್ಣು ಕಾಣದ ಕತ್ತಲಲ್ಲಿ ಈ ತೆಪ್ಪ ಅಡಿಕೆಯ ತೆಂಗಿನ ಮರಗಳಿಗೆ ಡಿಕ್ಕಿ ಹೊಡೆಯುತತಾ ರಾತ್ತಿಯೆಲ್ಲ ನೀರಲ್ಲಿ ತೇಲುತ್ತ ನಿಂತಿತ್ತು. ಕಣ್ಣು ಕಾಣದ ಕತ್ತಲಲ್ಲಿ ಉಮ್ಮ ಒಂದು ಕೈಯಲ್ಲಿ ಉರಿವ ದೀಪ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಪುಟ್ಟ ಕಂದನನ್ನು ಹಿಡಿದುಕೊಂಡು ತುಯ್ದಾಡುತ್ತಾ ನಿಂತಿದ್ದಳು. ಬಷೀರ್, ಅವನ ತಮ್ಮ ಅಬ್ದುಲ್ ಕಾದರ್, ತಂಗಿ ಫಾತಿಮ, ಇನ್ನೊಬ್ಬ ತಮ್ಮ ಮೊಹಮ್ಮದ್ ಹನೀಫ್, ತಂಗಿ ಕುಂಞಮಿನ. ಕೊನೆಯ ತಮ್ಮ ಅಬೂಬಕರ್. ಉಮ್ಮನ ಕೈಯಲ್ಲಿದ್ದ ಮಗು ತಂಗಿಯೋ ತಮ್ಮನೋ ಅನ್ನುವುದು ಬಷೀರ್ಗೆ ಈಗ ನೆನಪಿಲ್ಲ.

ಉಮ್ಮ ತೇಲುತ್ತಿದ್ದ ತೆಪ್ಪದಿಂದ ದೀಪ ಮತ್ತು ಮಗುವಿನ ಸಮೇತ ನೀರಿಗೆ ಬಿದ್ದಳು. ಬಷೀರ್ ನದಿಗೆ ಹಾರಿ ಅಳಕ್ಕೆ ಹೋಗಿ ನೋಡಿದರೆ ಉಮ್ಮ ನೆಲದಲ್ಲಿ ನಿಂತ ಹಾಗೆ ನೀರಿನಲ್ಲಿ ಒಂದು ಕೈಯಲ್ಲಿ ದೀಪ ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನಿಂತಿದ್ದಳು. ಅವಳ ಕೈಯಲ್ಲಿದ್ದ ದೀಪ ಕೆಟ್ಟು ಹೋಗಿತ್ತು. ಆದರೆ ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಬಷೀರ್ ತಾಯಿಯನ್ನೂ, ಮಗುವನ್ನೂ, ದೀಪವನ್ನೂ ನೀರಿನಿಂದ ಎತ್ತಿ ಮೇಲಕ್ಕೆ ತಂದ, ತಂದೆ ತೆಪ್ಪದಿಂದ ಕೈಚಾಚಿ ಅವರನ್ನು ಎತ್ತಿಕೊಂಡರು. ಬಷೀರ್ ತೀರಿ ಹೋದಾಗ ಬಷೀರ್ ಬದುಕಿಸಿದ ಉಮ್ಮ ಇರಲಿಲ್ಲ. ಇದ್ದ ತಮ್ಮ ತಂಗಿಯರಿಗೆ ಅಣ್ಣನನ್ನು ಬದುಕಿಸಲಾಗಲಿಲ್ಲ.

basheer4.jpg

ಸಾಹಿತ್ಯ ಕ್ಷೇತ್ರದ ದಿಗ್ಗಜರು ಮಹಾಮಹಿಮರೂ ಆದ ವಿಮರ್ಶಕರು ಬಷೀರರನ್ನು ಕೇಳಿದರು ಬಷೀರ್ ನಿಮ್ಮ ಸೃಜನ ಶೀಲತೆಯ ಪ್ರೇರಣೆಯೇನು?
‘ನಮ್ಮ ಮನೆಯ ಅಂಗಳದಲ್ಲಿ ಬಾಳೆಯ ತೋಟ ಇತ್ತು. ಬಾಳೆಯ ಗಿಡದ ಒಣಗಿದ ತೊಗಟೆಗಳನ್ನೆಲ್ಲವನ್ನೂ ಕಿತ್ತು ತೆಗೆಯುತ್ತಿದ್ದೆ. ನಂತರ ಉಗುರಿನಿಂದ ಬಾಳೆಯ ಹಸಿರು ನಾರನ್ನು ಉದ್ದಕ್ಕೆ ಸೀಳಿ, ಎರಡೂ ತುದಿಯಲ್ಲಿ ತೆಂಗಿನ ಗರಿಯ ಕಡ್ಡಿಯನ್ನು ನಿಲ್ಲಿಸಿ, ಇನ್ನೊಂದು ನಾರನ್ನು ಅದರೊಳಗೆ ಸಿಕ್ಕಿಸಿ, ಆ ಕಡೆ ಈ ಕಡೆ ಎಳೆದರೆ ವೀಣೆಯ ಹಾಗೆ ಸದ್ದು ಬರುತ್ತಿತ್ತು ಮಹಾಸಂಗೀತ. ಅದು ಕೇಳಿಕೊಂಡಿರುವ ಅಭ್ಯಾಸ ಇತ್ತು. ಅದು ನನ್ನ ಬರಹದ ಪ್ರೇರಣೆ! ಬಷೀರ್ ಎಂತಹ ಜಾಣ ವಿಮರ್ಶಕರನ್ನೂ ಬಾಳೆಯ ನಾರಿನಂತೆ ಉಗರಿನಿಂದ ತೆಗೆದು ಬಿಡುತ್ತಿದ್ದರು.

ಈ ಬಷೀರ್ ಒಬ್ಬ ಪ್ರೇಮಿ. ಮಹಾಹುಚ್ಚ. ಕುಡಿಯುವುದು ಹೆಚ್ಚಾಗಿ, ಹುಚ್ಚಾಸ್ಪತ್ರೆ ಸೇರಿ ಅಲ್ಲಿಂದ ಬಂದು, ಮನೆಯ ತಿಣ್ಣೆಯಲ್ಲಿ ಕುಳಿತು ‘ಪಾತುಮ್ಮನ ಆಡು ಅಥವಾ ಹೆಂಗಸರ ಬುದ್ದಿ’ ಎಂಬ ಪುಸ್ತಕವನ್ನು ಬರೆದರು. ಅದರಲ್ಲಿ ಕಾದಂಬರಿಯ ಹಸ್ತಪ್ರತಿಯನ್ನು ತಿನ್ನುವ ಆಡು ಇದೆ. ಮನೆಯ ಮುಂದಿನ ಜಂಬುನೇರಳೆಯ ಗಿಡದಡಿಗೆ ಹಣ್ಣು ಕೊಯ್ಯಲು ಬಂದು ಆಶೆ ಹುಟ್ಟಿಸಿ ಹೋಗುವ ಹುಡುಗಿಯರಿದ್ದಾರೆ. ಸೊಟ್ಟ ಕಾಲಿನ ತಮ್ಮ ಅಬ್ದುಲ್ ಕಾದರ್ ಇದ್ದಾನೆ. ಒಂದು ದೊಡ್ಡ ಪ್ರಪಂಚ! ಬಷೀರ್ ಮಾತ್ರ ಬರೆಯುವಂತಹದ್ದು!

ಬಷೀರ್ ಜೈಲಿಗೆ ಹೋಗಿ ಬಂದಿದ್ದರು. ಕಣ್ಣೂರಿನ ಸೆಂಟ್ರಲ್ ಜೈಲಿನಲ್ಲಿ ಸ್ವಾತಂತ್ರ್ಯಕ್ಕಾಗಿ ಒದೆತ ತಿಂದು ಹೊರಗೆ ಬಂದಾಗ ಗಾಂಧಿ ಹೇಳಿದ ಅಹಿಂಸೆಯಲ್ಲಿ ನಂಬಿಕೆ ಹೊರಟು ಹೋಗಿ, ಕೆಂಪು ಅಕ್ಷರದ ಭೂಗತ ಪತ್ರಿಕೆಗೆ ಅಡ್ಡಹೆಸರಿನಿಂದ ಬರೆಯಲು ತೊಡಗಿ, ಪೊಲೀಸರು ಹುಡುಕಾಡಿದಾಗ ರೈಲು ಹತ್ತಿ ಉತ್ತರಕ್ಕೆ ಹೋದರು. ಅಲ್ಲಿ ಹಿಮಾಲಯದಲ್ಲಿ ಸಂತರ ಜೊತೆಯಲ್ಲಿ, ನಗ್ನ ಸನ್ಯಾಸಿಗಳ ಜೊತೆಯಲ್ಲಿ, ಹುಚ್ಚರ ಜೊತೆಯಲ್ಲಿ, ಭಂಗಿಬಾಬಾರ ಸನ್ನಿಧಿಯಲ್ಲಿ, ಸೂಫಿ ಸಂತರ ದಗರ್ಾಗಳಲ್ಲಿ ದೇವರನ್ನು ಧ್ಯಾನಿಸಿದರು. ಆಮೇಲೆ ಸುಮ್ಮನೆ ತಿರುಗಿ ಬಂದು ಮಾವಿನ ಮರದ ಬುಡದಲ್ಲಿ ಬೀಡಿ ಸೇದುತ್ತಾ, ಖಾಲಿ ಟೀ ಕುಡಿಯುತ್ತ, ರೆಕಾಡರ್್ ಪ್ಲೇಯರಿನಲ್ಲಿ ಸೈಗಲ್ ಹಾಡಿದ ಪ್ರೇಮಗೀತೆಗಳನ್ನು ಕೇಳುತ್ತಾ ಬರೆದರು. ಮಾತನಾಡಿದರು. ಮನೆಗೆ ಬಂದವರ ಹೆಗಲಿನ ಮೇಲೆ ಕೈ ಇಟ್ಟು ನಕ್ಕರು.

ಬಷೀರ್ಗೆ ಪ್ರವಾದಿಯ ನಾಡಾದ ಅರೇಬಿಯವನ್ನು ಒಮ್ಮೆ ನೋಡಬೇಕಿನಿಸಿತು. ಬೊಂಬಾಯಿಯಿಂದ ಹಡಗು ಹತ್ತಿ ಜೆದ್ದಾ ಎಂಬ ಮರಳುಗಾಡಿನ ಪಟ್ಟಣವನ್ನು ತಲುಪಿದರು.ಅಲ್ಲಿ ಸುಡುಬಿಸಿಲಿನಲ್ಲಿ ಮರಳಲ್ಲಿ ಕಾಲು ಹೂತು ನಡೆಯುತ್ತಿರುವಾಗ ಅವರಿಗೆ ಹಿಂದೂ ಸನ್ಯಾಸಿಗಳ ಜೊತೆಯಲ್ಲಿ ನಡೆಯುತ್ತಿರುವಂತೆ ಅನಿಸುತ್ತಿತ್ತು. ನಗ್ನ ಸನ್ಯಾಸಿಗಳ ಜೊತೆಯಲ್ಲಿ ನಗ್ನನಾಗಿ ‘ಅಹಂ ಬ್ರಹ್ಮಾಸ್ಮಿ’ ಎಂದು ಜಪಿಸಿಕೊಮಡು ನಡೆಯುತ್ತಿರುವಂತೆ ಅನಿಸಿತು. ಸೂಫಿ ಸಂತರಾದ ದವರ್ೇಸಿಗಳ ಜೊತೆ ‘ಅನಲ್ ಹಕ್’ ಎಂದು ನತರ್ಿಸುತ್ತ ನಡೆಯುತ್ತಿರುವಂತೆ ಅನಿಸುತ್ತಿತ್ತು.

ಬಷೀರ್ ಹೇಳುತ್ತಾರೆ; ನಾನಿಲ್ಲದೇ ಇದ್ದ ಕಾಲ ಅದು. ನನಗೆ ನೆನಪಿಲ್ಲದ ನನ್ನ ಜನನದ ಸಮಯ. ನನ್ನ ಮರಣ. ನಾನಿಲ್ಲದೆ ಬರಲಿರುವ ಅನಂತವಾದ ಕಾಲ…. ಪೂರ್ಣಚಂದ್ರ ಅನಂತ ಕೋಟಿ ನಕ್ಷತ್ರಗಳ ಏಕಾಂತ ಭೀಕರ ಅದ್ಭುತ ಸುಂದರ ರಾತ್ರಿಯಲ್ಲಿ ಕ್ಷಿತಿಜದ ಮುಂದೆ ಒಂಟಿಯಾಗಿ ನಾನು ಎರಡು ಮೂರು ಸಲ ನಿಂತಿರುವೆ ಅದೊಂದನ್ನೂ ಒಳಗೊಳ್ಳಲಾಗದೆ ಹೆದರಿ ಆತ್ತು ನಾನು ಓಡಿ ಬಂದಿರುವೆ.

ಬಷೀರ್ ಹುಡುಗನಿದ್ದಾಗ ಮನೆಗೆ ನೆರೆಯ ನೀರು ನುಗ್ಗಿ ಬಂದಾಗ ನದಿಯಲ್ಲಿ ಮರಿಗಳು, ಸತ್ತ ಮೃಗಗಳು, ಹಾವುಗಳು, ಸತ್ತ ಆನೆಗಳು ತೇಲಿ ಬರುತ್ತಿದ್ದವು. ಜೊತೆಯಲ್ಲಿ ಒಂದು ಹುಲ್ಲಿನ ಮನೆ, ತೇಲುವ ಮನೆಯ ಮೇಲೊಂದು ನಾಯಿ ಕುಳಿತಿತ್ತು. ಈ ನೆರೆಯ ಕಾಲದಲ್ಲಿ ನೀರಲ್ಲಿ ತೇಲಿಬರುವ ಹಾವುಗಳನ್ನೂ, ಚೇಳುಗಳನ್ನೂ ಕೊಲ್ಲಬಾರದು. ಏಕೆಂದರೆ ಅದು ಸಂಕಷ್ಟಕ್ಕೆ ಒಳಗಾದ ಎಲ್ಲರ ಸಹಜೀವಿತದ ಕಾಲ. ಆ ನೆರೆಯಲ್ಲಿ ಬಷೀರ್ ಮನೆಗೆ ಎಂಟು-ಒಂಬತ್ತು ಇಂಚು ಉದ್ದದ ಕರಿಯ ಚೇಳೊಂದು ತೇಲಿ ಬಂದಿತು. ಸ್ನಾನಮಾಡುತ್ತಿದ್ದ ಬಷೀರ್ನ ಅಮ್ಮ ಚೇಳನ್ನು ಕೊಲ್ಲಲು ಬಿಡಲಿಲ್ಲ. ಅದು ಪಡೆದವನ ಸೃಷ್ಟಿ ಎಂದು ಕೋಲಿನಿಂದ ಮೆಲ್ಲನೆ ಚೇಳನ್ನು ಸರಿಸಿ ಸ್ನಾನ ಮುಂದುವರಿಸಿದಳು.

ಸ್ನಾನ ಮುಗಿಸಿ ಬಿಳಿಯ ವಸ್ತ್ರಗಳನ್ನು ತೊಟ್ಟುಕೊಳ್ಳುತ್ತಿದ್ದ ಉಮ್ಮ ಪಟ್ಟನೆ ಕಿರುಚಿದ್ದು ಕೇಳಿಸಿತು. ನೋಡಿದರೆ ಉಮ್ಮನ ವಸ್ತ್ರದ ಎಡೆಯಲ್ಲಿ ಸೇರಿಕೊಂಡಿದ್ದ ಆ ಚೇಳು ಅವಳ ತೊಡೆಯಲ್ಲಿ ಹರಿದಾಡುತ್ತಿತ್ತು. ಮಕ್ಕಳನ್ನು ಹೊರಗೆ ಓಡಿಸಿದ ಬಾಪಾ ಹೆಂಡತಿಗೆ ವಸ್ತ್ರವನ್ನು ಬಿಚ್ಚಿಕೊಡವಲು ಹೇಳಿ ಮೆಲ್ಲನೆ ಕೆಳಕ್ಕೆ ಬಿದ್ದ ಚೇಳನ್ನು ಕೊಲ್ಲಲು ಹೊರಟ. ಗಂಡನ ಕೊಲ್ಲಲು ಬಿಡದೆ ಉಮ್ಮ ಅದನ್ನು ಎತ್ತಿ ಒಂದು ಮಡಿಕೆಯಲ್ಲಿರಿಸಿ ನದಿಯಲ್ಲಿ ತೇಲಿ ಬಿಟ್ಟರು. ಚೇಳು ಉಮ್ಮನನ್ನು ಕಚ್ಚಲಿಲ್ಲ. ಉಮ್ಮ ಚೇಳನ್ನು ಕೊಲ್ಲಲಿಲ್ಲ. ನೆರೆ ಬಂದ ಕಾಲದಲ್ಲಿ ಎಲ್ಲರೂ ಸಹಜೀವಿಗಳು ಎಂಬುದನ್ನು ಆ ಚೇಳೂ, ಈ ಮನುಷ್ಯರೂ ಅರಿತು ಕೊಂಡಿದ್ದರು.ಬಷೀರ್ ಗೆ ಇದು ಗೊತ್ತಿತ್ತು.

ಬಷೀರ್ ‘ಆತ್ಮ’ ಎಂಬುದು ಇದೆ ಎಂದು ನಂಬಿದ್ದರು. ಮರಣಾನಂತರ ಇರುವ ಜೀವಿತದಲ್ಲಿ ನಂಬಿದ್ದೇನೆ ಅಂತ ಬರೆದಿದ್ದರು. ‘ಮರಣಾನಂತರ ಈ ಗೋಳಗಳಂತಹ ಗೋಳಗಳು ಇರುವ ಈ ಮಹಾ ಪ್ರಪಂಚದಲ್ಲೆಲ್ಲ ತಿರುಗಬೇಕು. ಇದು ನನ್ನ ಮೋಹ ಅಂದಿದ್ದರು. ಪರ್ವತಗಳು ಸಿಡಿದು ಹೋಗುತ್ತವೆ. ಗೋಳ ಸಮೂಹಗಳು ಡಿಕ್ಕಿ ಹೊಡೆದು ಎಲ್ಲಾ ಧೂಳಾಗಿ ಆಧಿಯಾದ ಅನಂತವಾದ ಅಂಧಕಾರದಲ್ಲಿ ಭಯಾನಕವಾದ ಆದಿ ಶೂನ್ಯತೆಯಲ್ಲಿ ಲಯವಾಗುತ್ತವೆ ಎಲ್ಲವೂ’ ಎಂದು ಹೇಳಿದ್ದರು. basheer2.gifನಮ್ಮ ಬುದ್ಧಿ ಶೂನ್ಯತೆಯಿಮದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎನ್ನುತ್ತಿದ್ದರು.

ಇಷ್ಟು ಗಂಭೀರವಾಗಿ ಮಾತನಾಡುವ ಬಷೀರ್ ಮಹಾ ತಮಾಷೆಗಾರನಾಗಿದ್ದರು. ಸುಲೈಮಾನಿ ಎಂದು ಕರೆಯುವ ಕಪ್ಪು ಟೀ ಕುಡಿಯುತ್ತ, ಮೋಟು ಬೀಡಿ ಸೇದುತ್ತ, ಕೂದಲಿಲ್ಲದ ಹಣೆಯಲ್ಲಿ ಕೈಯಾಡಿಸುತ್ತಾ ಮಾಂಗೋಸ್ಟೈನ್ ಎಂಬ ಮಾವಿನ ಮರದ ಬುಡದಲ್ಲಿ ಆರಾಮ ಕುರ್ಚಿ ಹಾಕಿ ಕುಳಿತು ಆಲೋಚಿಸುತ್ತಾ ಗ್ರಾಮಾಫೋನಿನ ತಟ್ಟೆಯಲ್ಲಿ ಸೈಗಲ್ ಹಾಡಿದ ‘ಜಿಂದಗಿ’ ಎಂಬ ಚಿತ್ರದ ‘ಸೋಜಾ ರಾಜಕುಮಾರಿ’ ಎಂಬ ಹಾಡನ್ನು ಕೇಳುತ್ತಾ ಬೆರಳಿನಿಂದ ತಾಳ ಹಿಡಿಯುತ್ತಿದ್ದರು.

Advertisements