ಅಲ್ಬರ್ಟ್ ಕಮು ಬರೆದ ಒಂದು ಹಳೆಯ ಕಾದಂಬರಿ

ಪ್ಲೇಗ್ ಮಾರಿಯ ಮೇಲೆ ಮಾನವ ಭಾಷ್ಯ

plague1.jpg

ಎಂಟು ತಿಂಗಳ ಕಾಲ ಮರಣ ನರ್ತನ ನಡೆಸಿದ ಪ್ಲೇಗ್ ಮಾರಿ ಆಯಾಸಗೊಂಡಂತೆ ನಟಿಸುತ್ತಾ ಹಿಮ್ಮೆಟ್ಟಿದ್ದಾಳೆ. ಮರಣ ಭಯದಲ್ಲಿ ಕಳೆದ ಈ ನಗರ ಇದ್ದಕ್ಕಿದ್ದಂತೆ ಉಲ್ಲಾಸಗೊಳ್ಳುತ್ತಿದೆ. ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ನಗರದ ಬಾಗಿಲುಗಳು ತೆರೆದುಕೊಂಡಿವೆ. ಅಗಲಿ ಇದ್ದವರು ಒಂದಾಗುತ್ತಿದ್ದಾರೆ. ಪ್ರೇಮಿಗಳು, ಗಂಡ-ಹೆಂಡತಿಯರು ತೆರೆದ ತೋಳುಗಳಿಂದ ನಡು ಬೀದಿಯಲ್ಲೇ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ನಿಂತು ಹೋಗಿದ್ದ ರೈಲ್ವೆ ಎಂಜಿನ್‌ಗಳಿಂದ ಹೊಗೆ ಏಳುತ್ತಿದೆ. ಮುಚ್ಚಿದ್ದ ನಗರದ ಬಂದರಿಗೆ ಹಡಗುಗಳು ಬರತೊಡಗಿವೆ. ಪ್ಲೇಗಿನಿಂದ ಬದುಕಿ ಉಳಿದ ಜನ ಮೈಮರೆತು ಕೇಕೆ ಹಾಕುತ್ತಿದ್ದಾರೆ. ನಗರ ತನ್ನ ಸಹಜ ಓಟಕ್ಕೆ ಸಿದ್ಧವಾಗುತ್ತಿದೆ. ಎಲ್ಲವೂ ಎಲ್ಲರೂ ಅವರವರ ಖಾಸಗೀ ಕೋಣೆಗಳಿಗೆ ಮರಳುತ್ತಿದ್ದಾರೆ….

ಆದರೆ ನೂರಾರು ಜನ ರೈಲಿನಲ್ಲಿ ನಗರಕ್ಕೆ ಮರಳಿ ಬಂದವರು ನಿಲ್ದಾಣದಲ್ಲಿ ತಮ್ಮನ್ನು ಕಾದುನಿಲ್ಲಬೇಕಾಗಿದ್ದವರ ಮುಖ ಕಾಣದೆ ಎಲ್ಲ ಗೊತ್ತಾದವರಂತೆ ದಂಗು ಬಡಿದು ನಿಂತಿದ್ದಾರೆ. ಅವರ ಮನಸ್ಸಿನಲ್ಲಿ ಅನಿಸಿದ್ದು ನಿಜವಾಗಿದೆ. ಅವರಿಗೆ ಕಾಯಬೇಕಾಗಿದ್ದವರು ಈಗ ದೊಡ್ಡ ಮಣ್ಣಿನ ಹೊಂಡಗಳಲ್ಲಿ ಕ್ರಿಮಿನಾಶಗಳ ನಡುವೆ ಪದರ ಪದರಗಳಲ್ಲಿ ಹೆಣವಾಗಿ ಕೊಳೆತುಹೋಗುತ್ತಿದ್ದಾರೆ. ತಾಯಂದಿರು ಹೆಂಡತಿಯರು, ಪ್ರೇಮಿಗಳು ರೈಲ್ವೆ ನಿಲ್ದಾಣದಲ್ಲಿ ಹಾಗೇ ಗರಬಡಿದು ನಿಂತಿದ್ದಾರೆ. ಅವರಿಗೆ ಅಳು ಬರುತ್ತಿಲ್ಲ.

ಈ ಸುಖ ದುಃಖದ ಪ್ರೇಮದ ವಿರಹದ ನೂಕು ನುಗ್ಗಲಿನ ನಡುವೆ ಏಕಾಂಗಿಯಾಗಿ ಈ ಡಾಕ್ಟರ್ ಮನೆಯೊಂದರ ತಾರಸಿಯ ಮೇಲೆ ನಿಂತು ನಗರದ ಬೀದಿಗಳನ್ನೂ ಆಕಾಶವನ್ನೂ ಹಾಗೂ ಕಡಲನ್ನು ನೋಡುತ್ತಿದ್ದಾನೆ. ಅವುಗಳೆಲ್ಲವು ಏನೂ ಆಗದೆ ಹಾಗೆ ಹಾಗೇ ಇವೆ. ಆದರೆ ಈ ಡಾಕ್ಟರನಿಗೆ ಗೊತ್ತಿದೆ. ಆತ ಹೇಳ ಹೊರಟಿರುವ ಕಥೆ ವಿಜಯದ ಕಥೆಯಲ್ಲ. ಇದು ಭಯದ ವಿರುದ್ಧ ನಡೆಯುವ ಎಂದೆಂದೂ ಮುಗಿಯದ ಹೋರಾಟದ ಕಥೆ. ಅವರವರರ ಖಾಸಗೀ ನಂಬಿಕೆಗಳು ಏನೇ ಇದ್ದರೂ, ಸಂತರಾಗಲು ಸಾಧ್ಯವಾಗದೇ ಹೋದರೂ ಈ ಪ್ಲೇಗ್ ಎಂಬ ಮಾರಿಗೆ ತಲೆಬಾಗಲು ನಿರಾಕರಿಸಿ, ಆದಷ್ಟೂ ಜನರನ್ನು ಉಳಿಸಿಕೊಳ್ಳಲು ಹೆಣಗಿದ ಮಾನವಂತರ ಕಥೆ.

ಬದುಕಿ ಉಳಿದವರ ವಿಜಯೋತ್ಸವದ ಕೇಕೆ ಕೇಳುತ್ತಾ ಈ ಡಾಕ್ಟರ್ ವಿಷಣ್ಣನಾಗುತ್ತಿದ್ದಾನೆ. ಆತನಿಗೆ ಗೊತ್ತಿದೆ. ವಿಜಯದ ಕೇಕೆಯಲ್ಲಿರುವ ಪಾಪದ ಈ ಜನರಿಗೆ ಗೊತ್ತಿಲ್ಲ: ಪ್ಲೇಗ್‌ನ ವಿಷಾಣು ಎಂದೆಂದಿಗೂ ಸಾಯುವುದಿಲ್ಲ. ಇವುಗಳು ಮರೆಯಾಗುವುದೂ ಮತ್ತೆ ಬರಲಿಕ್ಕೆ. ಜನರಿಗೆ ಗೊತ್ತಿಲ್ಲ: ಈ ಪ್ಲೇಗ್ ಅಣುಗಳು ಶವಾವಸ್ಥೆಯಲ್ಲಿ ಹಲವು ವರ್ಷಗಳವರೆಗೆ ಸಾಯದೆ ಹಾಗೇ ಬಿದ್ದು ಕೊಂಡಿರುತ್ತವೆ. ನಮ್ಮ ಕುರ್ಚಿ, ಮೇಜು, ಬಟ್ಟೆ, ಕಪಾಟುಗಳಲ್ಲಿ ಅಡಗಿ ಕುಳಿತು ಕಾಲನುಕಾಲಕ್ಕೆ ಮತ್ತೆ ಇಲಿಗಳ ಮೂಲಕ ಇಂತಹ ಸಂತಸದ ನಗರಗಳಿಗೆ ಸಾವಿಗಾಗಿ ಬರುತ್ತವೆ…
‘ಪ್ಲೇಗ್’ ಎಂಬ ಕಾದಂಬರಿ ಹೀಗೆ ಮುಕ್ತಾಯವಾಗುತ್ತದೆ.

albert-camus.jpg

೧೯೪೭ರಲ್ಲಿ ಫ್ರೆಂಚ್ ಭಾಷೆಯಲ್ಲಿ ‘ಪ್ಲೇಗ್’ ಎಂಬ ಈ ಕಾದಂಬರಿ ಬರೆದ ಆಲ್ಬರ್ಟ್ ಕಮು  ಒಂದು ರೀತಿಯಲ್ಲಿ ಪ್ಲೇಗ್ ಮಾರಿಯ ಮೇಲೆ ಮನುಷ್ಯ ಭಾಷ್ಯವನ್ನು ರಚಿಸಿದ್ದಾನೆ. ಒಟ್ಟಾರೆ ಮಾನವ ಪರಿಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ನಿರಾಸೆಗೊಂಡಿದ್ದ ಈ ಲೇಖಕ ಮನುಷ್ಯನೊಬ್ಬನ ಸಾಧ್ಯತೆಗಳ ಕುರಿತು ಅಷ್ಟೇ ಆಶಾವಾದಿಯಾಗಿದ್ದ. ದೇವರನ್ನು ನಂಬದೆಯೇ ಮನುಷ್ಯನೊಬ್ಬ ಸಂತನಾಗಬಹುದು ಎಂದು ನಂಬಿದ್ದ. ಮನುಷ್ಯನಿಗೆ ಅನ್ನ ಮತ್ತು ನ್ಯಾಯ ಬೇಕು. ಇವುಗಳ ದೊರತ ಮೇಲೂ ಆತನಿಗೆ ನಿರ್ಮಲ ಸೌಂದರ್ಯ ಬೇಕು. ಅನ್ನಕ್ಕೆ ಮತ್ತು ನ್ಯಾಯಕ್ಕೆ ನಾವು ಹೋರಾಡುತ್ತೇವೆ ಹಾಗೇ ಆತ್ಮದ ಹಸಿವಾದ ಸೌಂದರ್ಯ ಕುಡಾ ಆತನಿಗೆ ಬೇಕು ಎಂದು ಹೇಳಿದ್ದ. ಈ ಕಮು ಎಂಬ ಲೇಖಕ ಒಳ್ಳೆಯ ಫುಟ್‌ಬಾಲ್ ಆಟಗಾರನಾಗಿದ್ದ. ಆದರೆ ಕಾಲಕಾಲಕ್ಕೆ ಬರುತ್ತಿದ್ದ ಕ್ಷಯದ ಹೊಡೆತದಿಂದಾಗಿ ಆಟ ಬಿಡಬೇಕಾಯಿತು. ಈತ ತನ್ನ ೪೪ನೇ ವಯಸ್ಸಿನಲ್ಲಿ ನೋಬೆಲ್ ಬಹುಮಾನ ಪಡೆದ. ೪೭ನೇ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ ತೀರಿಕೊಂಡ. ಈತ ಬರೆದ ಪ್ಲೇಗ್ ಎಂಬ ಈ ಕಾದಂಬರಿ ವಿಜ್ಞಾನದ, ಧರ್ಮದ, ರಾಜಕಾರಣ ಹಾಗೂ ಮೂಢನಂಬಿಕೆಗಳ ನಡುವೆ ಇಬ್ಬರು ಮೂವರು ಒಳ್ಳೆಯ ಮನುಷ್ಯರು ಪ್ಲೇಗಿನ ವಿರುದ್ಧ ಒಂದಿಷ್ಟು ಜನರನ್ನು ಉಳಿಸಿಕೊಳ್ಳಲು ನಡೆಸುವ ಹೆಣಗಾಟದ ಕಥೆ. ಅಸಹ್ಯ ಮನುಷ್ಯ ಸಹವಾಸದ ನಡುವೆ, ಕೊಳಕುತನಗಳ ನಡುವೆ ದೇವರೇ ಕಳುಹಿಸಿದ ಪ್ಲೇಗಿನ ಕೈಗಳಿಂದ ಮನುಷ್ಯ ಮಕ್ಕಳನ್ನು ರಕ್ಷಿಸುವ ಇವರು ಮಾಡಿದ್ದು ದೇವರು ಮೆಚ್ಚುವಂತಹ ಕಾರ್ಯ. ದೇವರನ್ನು ನಂಬದ ಒಳ್ಳೆಯ ಒಂದಿಷ್ಟು ಜನ ದೇವರ ಮೇಲೆ ಬರೆದ ಭಾಷ್ಯ. ಆ ನಗರದ ಕೊಳಕಿಗೆ ಸೌಂದರ್ಯ ತರುವ ಒಂದು ಪುಟ್ಟ ಪ್ರಯತ್ನ.

೧೮೪೦ರ ದಶಕ. ಅಲ್ಜೀರಿಯಾ ದೇಶದ ಒರಾನ್ ಎಂಬ ಸಾಧಾರಣ ನಗರ. ಈ ನಗರದ ಸಾಧಾರಣತೆಯೇ ಅದರ ವಿಶೇಷ. ಪಾರಿವಾಳಗಳು ಕೂರದ, ಮರಗಳಿಲ್ಲದ ,ಹೂತೋಟಗಳಿಲ್ಲದ, ಹಕ್ಕಿಯ ರೆಕ್ಕೆಗಳ, ಎಲೆಗಳ ಮರ್ಮರ ಕೇಳಿಸದ ನಗರ. ವಸಂತ ಬಂದಿವೆ ಎಂಬುದು ಹೊರ ಊರುಗಳಿಂದ ಮಾರುಕಟ್ಟೆಗೆ ಬಂದ ಹೂವು ರಾಶಿಗಳಿಂದ ಗೊತ್ತಾಗುತ್ತಿತ್ತು. ಮಾರುಕಟ್ಟೆಯಲ್ಲಿ ಮಾತ್ರ ವಸಂತ ಕೂಗುತ್ತಿತ್ತು. ಇಲ್ಲಿ ಕೆಲಸ, ಪ್ರೀತಿ, ಸಾವು, ಕಾಮ ಒಂದೇ ರೀತಿಯಲ್ಲಿ ನಡೆಯುತ್ತಿತ್ತು. ಬಿಸಿನೆಸ್ ನಡೆಸುವುದು ಎಲ್ಲರ ಪ್ರೀತಿ ಪಾತ್ರ ಉದ್ಯೋಗವಾಗಿತ್ತು. ಎಳೆಯರ ಕಾಮಪ್ರೇಮ ಅತ್ಯುಗ್ರವಾಗಿತ್ತು. ಆದರೆ ಅಪಕಾಲದ್ದಾಗಿತ್ತು. ಅಶಕ್ತರಿಗೆ ಇಲ್ಲಿ ಜಾಗವಿರಲಿಲ್ಲ. ಕಡಲಿನ ಕಿನಾರೆಯಲ್ಲಿದ್ದ ಈ ಊರು  ಕಡಲಿಗೆ ಬೆನ್ನು ಮಾಡಿ ‘ಹೊರಗಡೆ’ ಗೆ ಕುಳಿತಂತೆ ಕಾಣುತ್ತಿತ್ತು. ಹಾಗಾಗಿ ಕಡಲನ್ನು ಕುಳಿತಲ್ಲಿಂದ ಕಾಣಲಾಗುತ್ತಿರಲ್ಲಿ. ಅದಕ್ಕಾಗಿ ನಗರದ ಹಿಂದಿನಿಂದ ನಡೆದು ಹೋಗಬೇಕಿತ್ತು.

ಆವತ್ತು ಏಪ್ರಿಲ್ ೧೬ ಡಾ. ಬರ್ನಾಡ್ ರಿಯೋ ಎಂಬ ಈ ವೈದ್ಯ ಬೆಳಗ್ಗೆ ತನ್ನ ದವಾಖಾನೆಗೆ ಹೊರಟಾಗ ಕಾಲಡಿಗೆ ಏನೋ ಮೃದುವಾದದ್ದು ತಾಗಿದಂತಾಯಿತು. ಸತ್ತ ಇಲಿಯ ಕಳೇಬರ. ಸುಮ್ಮನೆ ಅದನ್ನು ಆ ಕಡೆಗೆ ಒದ್ದು ನಡೆದ. ಅಂದು ಸಂಜೆ ಹಿಂತಿರುಗಿ ಬಂದು ಫ್ಲಾಟ್‌ನ ಬೀಗದ ಕೀಲಿ ತಿರುಗಿಸುವಾಗ ಹೆಗ್ಗಣವೊಂದು ಕತ್ತಲೆಯಿಂದ ಕುಡಿದಂತೆ ತೂರಾಡುತ್ತಾ ಬಂದು ಸಣ್ಣಗೆ ಕಿರುಗುಟ್ಟಿ ಬಾಯಿಂದ ರಕ್ತ ಕಾರಿ ಆತನ ಕಣ್ಣ ಮುಂದೆಯೇ ಸತ್ತು ಬಿತ್ತು. ಡಾಕ್ಟರ್ ಅದನ್ನು ಸುಮ್ಮನೆ ನೋಡಿ ಒಳಗೆ ಹೋದ. ಆತನಿಗೆ ಈ ಇಲಿಗಳ ಕುರಿತು ತಲೆ ಕೆಡಿಸಿಕೊಳ್ಳಲು ಮನಸ್ಸಿರಲಿಲ್ಲ. ಆದರೆ ಈ ಇಲಿ ರಕ್ತಕಾರಿದ್ದು ನೋಡಿ ತಲ್ಲಣವಾಗಿತ್ತು. ಆತನ ಹೆಂಡತಿಗೆ ಒಂದು ವರ್ಷದಿಂದ ಹುಷಾರಿರಲಿಲ್ಲ. ದೂರದ ಕ್ಷಯರೋಗದ ಸ್ಯಾನಿಟೋರಿಯಂಗೆ ಕಳುಹಿಸಬೇಕಿತ್ತು. ಆತ ಹೋದಾಗ ಆಕೆ ಮಲಗಿದ್ದಳು. ಸಣ್ಣಗೆ ಕ್ಷೀಣಾವಗಿ ನಕ್ಕಳು. ಅವಳ ಕಾಯಿಲೆ ಹಾಗೂ ವಯಸ್ಸನ್ನು ಮರೆಸಿಬಿಡುವ ಅವಳ ಹುಡುಗಿಯ ರೀತಿಯ ನಗು.

ಏಪ್ರಿಲ್ ೧೭ಕ್ಕೆ ಬೆಳಿಗಗೆ ಸತ್ತಿರುವ ಇನ್ನೂ ಮೂರು ಇಲಿಗಳನ್ನು ಕಂಡ. ಮಧ್ಯಾಹ್ನ ಹತ್ತು ಹನ್ನೆರಡು ಇಲಿಗಳು. ಸಂಜೆ ಹೆಂಡತಿ ರೈಲು ಹತ್ತಿ ಕ್ಷಯ ಚಿಕಿತ್ಸಾಲಯಕ್ಕೆ ಹೊರಟು ಹೋದಳು. ಊರಿನಿಂದ ತಾಯಿ ಬಂದು ಮಗನನ್ನು ನೋಡಿಕೊಳ್ಳಲು ಸೇರಿಕೊಂಡಳು. ಅವತ್ತು ರಾತ್ರಿಯಾಗುತ್ತಿದ್ದಂತೆ ಆ ಸತ್ತ ಇಲಿಗಳನ್ನು ಹೊರಕ್ಕೆ ಸಾಗಿಸಿದ ಕೆಲಸದವನಿಗೆ ಹೇಳಲಾಗದ ಕಾಯಿಲೆಯಂತಹದು ಕಾಣಿಸಿತು. ಏಪ್ರಿಲ್ ೧೮ಕ್ಕೆ ನಗರದಲ್ಲೆಲ್ಲಾ ಸತ್ತು ಬಿದ್ದಿರುವ ಇಲಿಗಳು. ೧೯ರಂದು ಇಲಿಗಳು ಗುಂಪು ಗುಂಪಾಗಿ ಚರಂಡಿ, ಬಿಲ, ಅಡಿಪಾಯಗಳೊಳಗಿನಿಂದ ಸಾಲು ಸಾಲಾಗಿ ಬಂದು ಬೀದಿಯಲ್ಲಿ ನೆಗೆದು ಬಿದ್ದು ಸಾಯತೊಡಗಿದ್ದವು. ಏಪ್ರಿಲ್ ೨೮ರಂದು ಎಂಟು ಸಾವಿರ ಸತ್ತ ಇಲಿಗಳು. ಅದೇ ದಿನ ಕೆಲಸದವನು ತಲೆ ತಗ್ಗಿಸಿ ಮೈಯನ್ನು ಎಳೆಕೊಳ್ಳುತ್ತಾ ಕೈಕಾಲುಗಳನ್ನು ವಿಚಿತ್ರವಾಗಿ ತಿರುಚಿಕೊಂಡು ಬಂದ, ಆತನ ಕತ್ತಿನಲ್ಲಿ ಮರದ ಗಂಟಿನ ಹಾಗೆ  ಗೆಡ್ಡೆಯೊಂದು ಬಂದಿತ್ತು. ಏಪ್ರಿಲ್ ೩೦ಕ್ಕೆ ಕೆಲಸದ ಈ ಮುದುಕ ಮೈಕೆಲ್ ‘ಆ ಹಾಳು ಇಲಿಗಳು ಆ ಹಾಳು ಇಲಿಗಳು’ ಎಂದು ಗೊಣಗುತ್ತಾ ತೀರಿಹೋಗುತ್ತಾನೆ. ಈತನ ಸಾವಿನೊಂದಿಗೆ ಈ ಕಾದಂಬರಿಯ ಒಂದು ಅಧ್ಯಾಯ ಮುಗಿದು ಇನ್ನೊಮದು ಶುರುವಾಗುತ್ತದೆ. ಹಾಗೆಯೇ ಪ್ಲೇಗಿನ ಮೊದಲ ಮಾನವ ಬಲಿ.

severinin_sea_dancer.jpg

ಈ ಊರಿನ ಒಂದು ಬೀದಿಯಲ್ಲಿ ಗೋಡೆಯ ನೆರಳಿನ ಮೇಲೆ ಒಂದಿಷ್ಟು ಬೆಕ್ಕುಗಳು ಯಾವಾಗಲೂ ಮಲಗಿಕೊಂಡಿರುತ್ತವೆ. ಪ್ರತಿ ದಿನ ಮಧ್ಯಾಹ್ನ ಊಟ ಮುಗಿಸಿ ಎಲ್ಲರೂ ಮನೆಯೊಳಗೆ ಮಲಗಿರುವಾಗ ಮುದುಕನೊಬ್ಬ ನಿಧಾನಕ್ಕೆ ತನ್ನ ಮನೆಯ ಬಾಲ್ಕನಿಗೆ ಬಂದು ನಿಲ್ಲುತ್ತಾನೆ. ಸೈನಿಕನಾಗಿದ್ದ ಎನಿಸುವ ಮುದುಕ ದೃಢ, ನೇರ, ಮಂಜಿನ ಹಾಗೆ ಬೆಳ್ಳಗೆ ಶಿಸ್ತಾಗಿ ಒಪ್ಪಾಗಿ ಬಾಚಿದ ಆತನ ಕೂದಲು, ಬಾಲ್ಕನಿಯ ಗೋಡೆಗೆ ಒರಗಿಕೊಂಡು ಆತ ಆರ್ತನಾಗಿ ಈ ಬೆಕ್ಕುಗಳನ್ನು ಕರೆಯುತ್ತಾನೆ. ಬೆಕ್ಕುಗಳು ಅರೆ ನಿದ್ದೆ ಕಣ್ಣುಗಳಿಂದ ಮುದುಕನನ್ನು ನೋಡಿ ಸುಮ್ಮಗಾಗುತ್ತವೆ. ಬಿಳಿ ಬಿಳಿ ಚಿಟ್ಟೆಗಳ ಹಾಗೆ ನೆಲಕ್ಕೆ ಬಂದು ಬೀಳುವ ಈ ಚೂರುಗಳನ್ನು ಬೆಕ್ಕುಗಳಿಗೆ ಗುರಿಯಿಟ್ಟು ಉಗುಳಲು ತೊಡಗುತ್ತಾನೆ. ತನ್ನ ಉಗುಳ ಕ್ಷಿಪಣಿಗಳು ಬೆಕ್ಕುಗಳಿಗೆ ತಾಗಿದಂತೆ ಖುಷಿಯ ಮುಖ ಮಾಡಿಕೊಂಡು ಬೀಗುತ್ತಾನೆ…..

ಇನ್ನೊಬ್ಬ ಮನುಷ್ಯ. ಈತನ ಹೆಸರು ಜೋಸೆಫ್. ಈತ ಮುನಿಸಿಪಾಲಿಟಿಯಲ್ಲಿ ಗುಮಾಸ್ತ. ಹುಟ್ಟು ಸಾವು ಮದುವೆ ಇತ್ಯಾದಿಗಳ ದಾಖಲಾತಿ ಈತನ ಕೆಲಸ. ಒಂದು ರೀತಿಯಲ್ಲಿ ಈತ ನಮ್ಮಲ್ಲಿರುವ ಎಲ್ಲ ಒಳ್ಳೆಯವರಂತೆ ಒಬ್ಬ ನಿಗೂಢ ಮನುಷ್ಯ ನೋಡಲಿಕ್ಕೆ ಆತ ಮುನಿಸಿಪಾಲಿಟಿ ಗುಮಾಸ್ತನ ತರಹವೇ ಇದ್ದ. ಉದ್ದಕ್ಕೆ ತೆಳ್ಳಗೆ ಯಾವಾಗಲೂ ದೊಡ್ಡ ಸೈಜಿನ ಅಂಗಿಪ್ಯಾಂಟ್ ಧರಿಸಿ ಇರುತ್ತಿದ್ದ. ಮುನಿಸಿಪಾಲಿಟಿಯವರು ಸಂಬಳ ಜಾಸ್ತಿ ಮಾಡಿಸುತ್ತೀವಿ ಅಂತ ಆಶೆ ತೋರಿಸಿ ಕೆಲಸ ಕೊಟ್ಟಿದ್ದರು. ನಂತರ ಅದನ್ನು ಮರೆತೇ ಬಿಟ್ಟಿದ್ದರು. ಆತ ಕೂಡ ಇದರ ಕುರಿತು ತಕರಾರು ತೆಗೆಯದೆ ಸುಮ್ಮನೆ ಇದ್ದ. ಏಕೆಮದರೆ ಆತ ಪದಗಳಿಗೆ ಸದಾ ತಡಕಾಡುತ್ತಿದ್ದ. ಆತನಿಗೆ ಸರಿಯಾದ ಪದಗಳು ಸಿಗುತ್ತಿರಲಿಲ್ಲ. ತನ್ನ ಹಕ್ಕುಗಳಿಗೆ ಹೋರಾಡುವುದು ಒಳ್ಳೆಯದಲ್ಲ ಎಂದು ಆತನಿಗೆ ಅನಿಸುತ್ತಿತು. ಹಾಗೇ ಇನ್ನೊಬ್ಬರು ನೀಡಿದ್ದ ಆಶ್ವಾಸನೆಗಳನ್ನು ನೆನೆಪಿಸುವುದು ಕೂಡಾ ಒಂದು ರೀತಿಯಲ್ಲಿ ತನ್ನ ಹಕ್ಕುಗಳಿಗೆ ಹೋರಾಡಿದಂತೆ ಅಂದುಕೊಂಡಿದ್ದ. ಹಾಗೇ ಆತ ತನ್ನ ಪತ್ರವ್ಯವಹಾರದಲ್ಲಿ ‘ಇತಿ ತಮ್ಮ ವಿಧೇಯ’, ‘ಕೃತಜ್ಞ’ ಇತ್ಯಾದಿ ಬಳಸುತ್ತಿರಲಿಲ್ಲ. ಇದು ತನ್ನ ಸ್ವಾಭಿಮಾನಕ್ಕೆ ಒಳ್ಳೆಯದಲ್ಲ ಎಂದು ಆತ ಭಾವಿಸಿದ್ದ. ತನಗೆ ಸಿಕ್ಕುವುದರಲ್ಲಿ ಸುಖವಾಗಿರಬಹುದು ಎಂದು ಆತನಿಗೆ ಗೊತ್ತಿತ್ತು. ಇಷ್ಟೆಲ್ಲ ಆದರೂ ಕೂಡಾ ಆತ ಸದಾ ಸರಿಯಾದ ಪದಗಳಿಗೆ ತಡಕಾಡುತ್ತಲೇ ಇರುತ್ತಿದ್ದ.

ಈ ಜೋಸೆಫ್ ನಂತಹ ಒಳ್ಳೆಯವರು ಇರುವ ಊರಿಗೆ ಪ್ಲೇಗ್ ಹೇಗೆ ಬಂತು ಎಂದು ಈ ಕಾದಂಬರಿಯ ಡಾಕ್ಟರ್ ಸದಾ ಆಶ್ಚರ್ಯ ಪಡುತ್ತಾನೆ. ಈ ಜೋಸೆಫ್ ಈ ಕಾದಂಬರಿಯ ಹೀರೋ. ಮತ್ತು ಬೆಕ್ಕುಗಳಿಗೆ ಉಗಿಯುವ ಮುದುಕ ಇಲ್ಲಿನ ದುಷ್ಟ.

ಈ ರೋಗವನ್ನು ‘ಪ್ಲೇಗ್’ ಎಂದು ಘೋಷಿಸಿ ಆಗಿದೆ. ಈ ಪ್ಲೇಗ್ ಎಂಬುದು ಹುಲಮಾನವರಾದ ನಮ್ಮ ಊಹೆಗೆ ನಿಲುಕುವಂತಹದಲ್ಲ. ಅಥವಾ ಇದು ಬರಿಯ ಭ್ರಮೆ ಅಥವಾ ಕಳೆದು ಹೋಗುವ ಕೆಟ್ಟ ಕನಸು ಅಂದುಕೊಂಡಿದ್ದೇವೆ. ಡಾಕ್ಟರ್ ರಿಯೋ ಕೂಡಾ ಇದು ಕೇವಲ ಹೆದರಿಕೆ ಅಂದುಕೊಳ್ಳುತ್ತಾನೆ. ಹೊಟೇಲುಗಳಲ್ಲಿ ಕುಳಿತಾಗ ಯಾರಾದರೂ ಬೇಕು. ಬೆಚ್ಚಗಿನ ಮಾನವ ಸ್ನೇಹ ಬೇಕು ಎನಿಸುತ್ತದೆ. ಎಲ್ಲರೂ ದೂರವಾಗುತ್ತಿದ್ದಾರೆ ಎನಿಸುತ್ತದೆ. ಮೊದಲಾದರೆ ರೋಗಿಗಳೇ ಸಹಾಯ ಬಯಸಿ ಬರುತ್ತಿದ್ದರು. ಈಗ ಪ್ಲೇಗ್ ಬಂದಿರುವ ಮನೆ ಹೊಕ್ಕರೆ ಗರಬಡಿದು ಹೋಗುತ್ತಾರೆ. ಸಿಟ್ಟನಿಂದ ದುರುಗುಟ್ಟುತ್ತಾರೆ. ಇದು ಪ್ಲೇಗ್ ಅಲ್ಲ ಎಂದು ಆಕಾಶಕ್ಕೆಲ್ಲ ಕೇಳುವಂತೆ ಅರಚುತ್ತಾರೆ. ಇದೇ ಮೊದಲ ಬಾರಿಗೆ ನಗರದ ಬಾಗಿಲುಗಳನ್ನು ಮುಚ್ಚಲಾಗಿದೆ. ಹೊರಕ್ಕೆ ಹೋದವರು ಹೊರಗೇ ಉಳಿದು, ಒಳಗೆ ಉಳಿದುಕೊಂಡವರು ಸಿಕ್ಕಿಕೊಂಡಿದ್ದಾರೆ. ಕಾಗದ ಕೂಡಾ ಬರೆಯಲಿಕ್ಕಿಲ್ಲ. ಕಾಗದಗಳಿಂದ ಪ್ಲೇಗ್ ಹರಡಿದರೆ ಎಂಬ ಭಯ. ಬರಿಯ ಟೆಲಿಗ್ರಾಂಗಳು ಮಾತ್ರ. ಎಷ್ಟು ಪ್ರೀತಿಯನ್ನು ಬರೆಯಬೇಕಾದರೂ ಸಿಗುವುದು ಎರಡು ಮೂರು ಪದ ‘ನಾನು ಆರೋಗ್ಯ, ಇಲ್ಲಿ ನಿನ್ನದೇ ಯೋಚನೆ, ಪ್ರೀತಿ’ ಗಂಡಂದಿರಿಗೆ ತಮ್ಮ ಹೆಂಡತಿಯರ ಕುರಿತು ಅಸೂಯೆ, ಪ್ರೇಮಿಗಳಿಗೂ ಹಾಗೇ, ಎರಡು ರೀತಿಯ ನೋವು. ಒಂದು ನಮ್ಮದು. ಇನ್ನೊಂದು ನಮ್ಮಿಂದ ಅಗಲಿರುವ ಹೊರಗಿರುವವರ ನೋವಿನ ಕುರಿತ ನೋವು. ನಗರದ ಎಲ್ಲರೂ ಮನೆಯ ಕರೆಗಂಟೆ ಬಾರಿಸುವುದನ್ನೇ ಕಾಯುತ್ತಿರುವಂತೆ ಕಾಣಿಸುತ್ತಾರೆ. ಆದರೆ ಯಾರೂ ಬರುತ್ತಿಲ್ಲ, ಕಳೆದದ್ದರ ಕುರಿತು ಉದ್ವಿಗ್ನತೆ, ನಡೆಯುತ್ತಿರುವುದರ ಕುರಿತು ಅಸಹನೆ, ಬರಲಿರುವುದರಿಂದ ವಂಚಿತನಾಗಿರುವ ಗೋಳು. ಎಲ್ಲ ಒಂದು ರೀತಿಯಲ್ಲಿ ಭ್ರಷ್ಟನಂತೆ, ಬಹಿಷ್ಕೃತನಂತೆ. ತನ್ನ ಮನೆಯೊಳಗೇ ತಾನು ಗಡೀಪಾರಾಗಿ ಹೋಗಿರುವಂತೆ! ಮೇಲಿರುವ ಆಕಾಶದ ಅಗಾಧ ಅಲಕ್ಷ್ಯದ ಕೆಳಗೆ ಈ ಓರಾನ್ ಎಂಬ ಸಾಧಾರಣ ನಗರ, ವಾಹನಗಳೆಲ್ಲ ಗುಂಡಗೆ ವೃತ್ತವೊಂದರಲ್ಲಿ ಸದಾ ಸುತ್ತುತ್ತಿರುವಂತೆ ಅನಿಸುತ್ತಿತ್ತು. ಎಲ್ಲರಿಗೂ ನಗರ ಸಭೆಯನ್ನು ಕಂಡಾಬಟ್ಟೆ ಬೈಯ್ಯಬೇಕು ಅನಿಸುತ್ತಿತ್ತು. ಎಲ್ಲರೂ ಒಂದು ರೀತಿಯ ಕಿರಿಕಿರಿಯ ಅಸಂಗತ ಸ್ಥಿತಿಯಲ್ಲಿ ಪ್ಲೇಗ್ ಮಾರಿಯ ಮುಂದೆ ನಿಂತು ತಲೆ ಕೆರೆದುಕೊಳ್ಳುತ್ತಿರುವಂತೆ ಪ್ರಯೋಜನಕ್ಕೆ ಬಾರದ ಮಾತು, ಅಳು ಹಾಗೂ ಸಿಟ್ಟು.

ಈ ನಗರದ ಒಳ್ಳೆಯವನಾದ ಪಾದ್ರಿಯೊಬ್ಬ ಕೆಟ್ಟುಹೋದ ಮನುಷ್ಯರನ್ನು ಒಳ್ಳೆಯದಾರಿಗೆ ತರಲು ದೇವರು ಕಳುಹಿಸಿದ ಈ ಪ್ಲೇಗು ಎಂದು ಧರ್ಮ ಪ್ರವಚನವೊಂದರಲ್ಲಿ ಹೇಳುತ್ತಾರೆ. ಇದು ಸೈತಾನನ ಆಟ ಅನ್ನುತ್ತಾರೆ. ದೇವರ ದಯೆಯಲ್ಲಿ ಹಾಗೂ ಭಕ್ತರ ನಂಬಿಕೆಯಲ್ಲಿ ಈ ಪಾದ್ರಿ ಮುಕ್ತಿ ಕಾಣುತ್ತಾರೆ. ಈ ಎಲ್ಲ ದಿನಗಳ ಭಯಾನಕ ಮರಣ ನರ್ತನಗಳ ನಡುವೆಯೂ, ಮನುಷ್ಯರ ಆರ್ತನಾದದ ನಡುವೆಯೂ ನಾವೆಲ್ಲ ಆ ದೇವನಿಗೆ ಕೈಯೆತ್ತಿ ಮುಗಿದು ನಮ್ಮ ಪ್ರೀತಿಯ ಪ್ರಾರ್ಥನೆಯಿಂದ ಪ್ಲೇಗನ್ನು ಗೆಲ್ಲಬಹುದು ಎನ್ನುತ್ತಾರೆ. ಪ್ಲೇಗಿನ ೯೪ನೆಯ ದಿನ ೧೨೪ ಜನ ಸತ್ತಿರುತ್ತಾರೆ. ಜನ ಧರ್ಮವನ್ನೂ ವಿಜಾನವನ್ನೂ ನಂಬುವ ಸ್ಥಿತಿಯಲ್ಲಿರುವುದಿಲ್ಲ. ಇದಕ್ಕಿಂತ ಮೂಢನಂಬಿಕೆಗಳು ಪ್ರಿಯವಾಗುತ್ತವೆ.

‘ನಿಮಗೆ ದೇವರಲ್ಲಿ ನಂಬಿಕೆ ಇದೆಯಾ’ ಡಾಕ್ಟರ್‌ರನ್ನು ಗೆಳೆಯನೊಬ್ಬ ಕೇಳುತ್ತಾನೆ.

‘ಇಲ್ಲ, ಆದರೆ ಅದಕ್ಕೆಲ್ಲ ಈಗ ಏನು ಅರ್ಥ? ನಾನು ಕತ್ತಲಲ್ಲಿ ತಡವರಿಸುತ್ತಿದ್ದೇನೆ. ಏನಾದರೂ ಕಂಡೀತು ಅಂತ. ಆದರೆ ನನಗೆ ಅಂತದ್ದೇನೂ ಕಾಣಿಸುತ್ತಿಲ್ಲ. ಸಧ್ಯಕ್ಕೆ ನಾವು ದೇವರನ್ನು ನಂಬದಿರುವುದು ದೇವರಿಗು ಒಳ್ಳೆಯದು ಅಂತ ಅನ್ನಿಸುತ್ತದೆ. ಸಾವಿನ ಜೊತೆಗೆ ಹೋರಾಡುವುದು ಮೇಲೆ ಸುಮ್ಮನೆ ಕೈಕಟ್ಟಿ ಕುಳಿತಿರುವ ಆತನಿಗೆ ಕೈ ಮುಗಿಯುವುದಕ್ಕಿಂತ ಜರೂರಿನದ್ದು’.

ಡಾಕ್ಟರ್ ರಿಯೋ ಈ ಕುರಿತು ತೀರಾ ಸಹಜ ಹಾಗೂ ಸ್ಪಷ್ಟ ನಿಲುವು ಹೊಂದಿದ್ದಾನೆ. ತುಂಬಾ ಜರೂರಿನ ಕೆಲಸ ಸಾವಿನಿಂದ ಹಾಗೂ ಅಗಲಿಕೆಯಿಂದ ಜನರನ್ನು ಉಳಿಸುವುದು. ಅಂದರೆ ಪ್ಲೇಗಿನ ವಿರುದ್ಧ ಹೋರಾಡುವುದು. ಇದು ಅಂತಹ ವಿಶೇಷ ಕೆಲಸವೇನೂ ಅಲ್ಲ. ತೀರಾ ಲಾಜಿಕ್ ಆದದ್ದು ಇದನ್ನು ಆತ ಸಹಜ ಸಭ್ಯತೆ ಎನ್ನುತ್ತಾನೆ. ಸಹಜ ಸಭ್ಯತೆ ಎಂದರೆ ನನ್ನ ಕೆಲಸವನ್ನು ನಾನು ಮಾಡುವುದು. ಸುಮ್ಮನೆ ಮಾಡುತ್ತಾ ಹೋಗುವುದು.

ಸುಮ್ಮನೆ ತನ್ನ ಕೆಲಸವನ್ನು ಮಾಡುತ್ತಾ ಈ ಡಾಕ್ಟರ್ ಎಂಬ ಸಂತ ನೂರಾರು ಜೀವಗಳನ್ನು ಉಳಿಸಿರುತ್ತಾನೆ. ಆದರೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅದು ಸಹಜ ಸಭ್ಯತೆ.

ಹಾಗೆ ನೋಡಿದರೆ ಪ್ಲೇಗನ್ನು ಊಹಿಸುತ್ತಾ ಖಿನ್ನವಾಗಲಿಕ್ಕೆ ಈ ಕಾದಂಬರಿ ಓದಬೇಕು. ಈ ಡಾಕ್ಟರ್, ಆ ಜೋಸೆಫ್. ವರದಿ ಮಾಡಲು ಬಂದು ನಗರದಲ್ಲೇ ಸಿಕ್ಕಿ ಹಾಕಿಕೊಂಡು ತನ್ನ ಗೆಳೆಯನನ್ನು ಕಾಣದೆ ಒದ್ದಾಡುವ ಫ್ರೆಂಚ್ ಪತ್ರಕರ್ತ, ಪಾದ್ರಿ , ಆತ್ಮಹತ್ಯೆಗೆ ಯತ್ನಿಸಿ ಬದುಕಿ ಕಳ್ಳಸಾಗಾಣಿಕೆ ನಡೆಸುವ ಒಬ್ಬ ಮನುಷ್ಯ. ಬೆಕ್ಕುಗಳಿಗೆ ಉಗಿಯುವ ಈ ಮುದುಕ ಇವರೆಲ್ಲರನ್ನೂ ಕಾಣಲಿಕ್ಕೆ ಈ ಕಾದಂಬರಿ ಓದಬೇಕು. ನನಗಂತು ಇದನ್ನು ಓದುತ್ತಾ ಕೂತಾಗ ನಡುರಾತ್ರಿಯಲ್ಲಿ ಬೆಳಕಿಗೆ ಬರುವ ಸೂರ್ಯನ ಕುದುರೆಗಳು ದೇವರ ದೂತರಂತೆ, ಹಾತೆಗಳು ಪ್ಲೇಗಿನಂತೆ ಕಂಡು ಹೆದರಿಬಿಟ್ಟಿದ್ದೆ. ಹಾಗೆ ಎದ್ದು ಈ ಡಾಕ್ಟರ್ ಆಲ್ಬಟ ರಿಯೋ ಕೈ ಕುಲುಕಿ ಸುಮ್ಮನೆ ನೋಡುತ್ತ ನಿಲ್ಲಬೇಕು ಅನ್ನಿಸುತ್ತಿತ್ತು.

camusquote2.jpg

3 thoughts on “ಅಲ್ಬರ್ಟ್ ಕಮು ಬರೆದ ಒಂದು ಹಳೆಯ ಕಾದಂಬರಿ

  1. Rasheed Uncle,

    I have been a serious reader of Kamus. you just refreshed some wonderful memories of Prof. Rajendra Chenni lecturing us on ‘The Plague’ at Kuvempu University. Each time I’ve read this book, I have had new insights. I guess, that’s the sign of a good book. By the way, the coverpage of the hardbound edition you have seems to be pretty old. Do you have it with you? I have some fond memories associated with it.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s