ಒಂದು ದಶಕದ ಹಿಂದಿನ ಒಂದು ಪ್ರಬಂದ…..

 ಯಾಕೆ ಈ ಪ್ರೇಮದ ಜೀವಕೆ ಸಾವಿನ ಚಿಂತೆ…..

young3.jpg

  ಪುಟ್ಟ ಹುಡುಗಿಯಾಗಿದ್ದ ಈ ಚಂದದ ಹುಡುಗಿ ಈಗ ದೊಡ್ಡವಳಾದ ಮೇಲೂ ಮರೆಯದೆ ಸುಂದರವಾದ ರಾಖಿಯೊಂದನ್ನು ಅಂಚೆಯಲ್ಲಿ ಕಳುಹಿಸಿದ್ದಾಳೆ. ಪತ್ರದಲ್ಲಿ ಏನು ಏನೆಲ್ಲ ಹುಚ್ಚು ಹುಚ್ಚಾಗಿ ಮೊದ್ದು ಮೊದ್ದಾಗಿ ತುಂಟತನದಿಂದ ಬರೆದಿದ್ದಾಳೆ. ಅವಳು ಕಳುಹಿಸಿದ ಈ ಪಂಚವರ್ಣದ ರಾಖಿ ಮಳೆಯಲ್ಲಿ ನೆನೆದು ಬಿಸಿಲಲ್ಲಿ ಒಣಗಿ ಕೈಯ ಮೊಣಗಂಟಿನ ಬಳಿಯಲ್ಲಿ ವಿಚಿತ್ರವಾದ ಚಿತ್ರಗಳನ್ನು ಮೂಡಿಸಿದೆ. ನಾನು ಇವಳ ವೈಖರಿಯ ಕುರಿತು ಯೋಚಿಸುತ್ತಿದ್ದೇನೆ. ಚಂದದ ಪುಟ್ಟ ಹುಡುಗಿಯಾಗಿದ್ದ ಇವಳು ಬೆಳೆದು ಪುಟ್ಟ ಹೆಂಗಸಾಗಿರುವುದು ಚಂದಕ್ಕೆ ಏನೆಲ್ಲ ಗೀಚುತ್ತಾ, ಏನೆಲ್ಲ ಹರಟುತ್ತಾ, ಗೆಳತಿಯರ ಜೊತೆ ಸಿನಿಮಾ ನೋಡಿಬಂದು ಅದರ ಕತೆಯ ಕುರಿತು ಅವರೊಡನೆ ಹರಟುತ್ತಿದ್ದ ಇವಳು ಈಗ ಬೆಳೆದಿರುವುದು. ಕವಿತೆ ಬರೆಯುತ್ತಿರುವುದು, ಹಲವು ಹುಡುಗರ ನಿದ್ದೆಗೆಡಿಸಿ ಏನೂ ಆಗಿಯೇ ಇಲ್ಲವೆಂಬಂತೆ ಮೊದ್ದು ಮೊದ್ದಾಗಿ ತೊದಲುವುದು, ಅವರು ಅವಳ ಕುರಿತು ಹಲವು ಮಾತನ್ನಾಡಿ ಬಸವಳಿದು ಹೋಗುವುದು ಎಲ್ಲವೂ ನನ್ನ ಕಣ್ಣೆದುರೇ ನಡೆಯುತ್ತಿದೆ. ನನಗೆ ವಯಸ್ಸಾಗಿ ಹೋಗುತ್ತಿದೆ ಅನಿಸಿ ಸಣ್ಣಗೆ ಕಂಪಿಸುತ್ತೇನೆ.        ಹಾಗೇ ಇಲ್ಲ ಎಂದು ಜೋರಾಗಿ ನಕ್ಕುಬಿಡುತ್ತೇನೆ.

ದೂರದ ಊರಿಗೆ ಓದಲು ಹೋಗಿರುವ ಈ ಹುಡುಗಿ ಅಲ್ಲಿಂದ ನನಗೆ ಬರೆದಿದ್ದಾಳೆ: ‘ಇಲ್ಲಿ ನನಗೆ ತುಂಬಾ ಜನ ಗುರುತಾಗಿದ್ದಾರೆ. ಎಲ್ಲರೂ ನಾನು ಪ್ರಶ್ನೆಯಾಗಿ ಕಾಡಿದೀನೋ ಅನ್ನೋ ಹಾಗೆ ನಡೀತಾರೆ. ನಂಗೆ ಎಲ್ಲಾ ತಮಾಷೆ ಅನ್ಸುತ್ತೆ…. ಹೇಗಿದ್ದಿಯಾ? ಅತ್ತಿಗೆ ಹೇಗಿದ್ದಾರೆ. ಮತ್ತೇನು ವಿಶೇಷ ?…. ರಾಖಿ ಕಳಿಸ್ತಿದೀನಿ.  ರಾಖಿಯ ಬಣ್ಣಗಳು ನಿನ್ನ ಕೈಮೇಲೆ ಹರಡೋದನ್ನ ನೆನಸ್ಕೊಂಡ್ರೆ ಒಂಥರಾ ಮಜ’ ಎಂದು ಮುಗಿಸಿದ್ದಾಳೆ. ನಾನು ಅವಳು ಬರೆದ ಹಾಗೆ ಕೈಯ ಮೇಲೆ ರಾಖಿಯ ಬಣ್ಣ ಹರಡಿಕೊಂಡು ಎಲ್ಲ ಯೋಜಿಸಿಕೊಂಡು ಸುಸ್ತಾಗಿ ಕುಳಿತಿದ್ದೇನೆ. ಅಲ್ಲಿ ತಂಗಿ, ಅತ್ತಿಗೆ, ತಾಯಿ, ಮಗಳು, ಹೆಂಡತಿ ಹೀಗೆ ಈ ಹುಡುಗಿಯರ ಪಂಚವರ್ಣದ ಚಕ್ರ ಅಂಗೈಯಲ್ಲಿ ಗಿರ್ರನೆ ತಿರುಗಿ ಎಲ್ಲವೂ ದಿಗ್ಭ್ರಮೆಯಂತೆ ಕಾಣಿಸುತ್ತಿದೆ.

young2.jpg

ಈ ಹುಡುಗಿ ತಾನು ಓದುತ್ತಿರುವ ಕ್ಯಾಂಪಸ್ಸಲ್ಲಿ ಹಲವು ಹುಡುಗರ, ಹಲವು ಕವಿಗಳ, ಹಲವು ಪ್ರೇಮಿಗಳ, ಹಲವು ಮುದುಕು ಗಂಡಸರ, ಹಲವು ಒಂಟಿ ಹೆಂಗಸರ ನಡುವೆ ತಂಗಾಳಿಯಂತೆ, ನಿಟ್ಟುಸಿರಿನಂತೆ ಓಡಾಡುತ್ತಿದ್ದಾಳೆ. ಹಲವು ಹುಡಗುಗಳನ್ನು ಮುಳುಗಿಸಿದ ಗ್ರೀಕ್‌ನ ಸುಂದರಿ ಹೆಲೇನಾಳ ನೋಟದಂತೆ ಈ ಪುಟಾಣಿ ಹೆಂಗಸಿನ ಓಡಾಟ ಹಲವರ ಎದೆ ಬಡಿತವನ್ನು ರಕ್ತದ ಒತ್ತಡವನನು ಹಠಾತ್ತನೆ ಏರಿಸಿದೆ. ಮೂಲತಃ ಪುಕ್ಕಲರು, ಕವಿ ಹೃದಯಿಗಳೂ ಹಾಗು ಒಳ್ಳೆಯವರೂ ಆದ ಹಲವಾರು ಹುಡುಗರು ಆಶೆಯಿಂದ ಈಕೆಯನ್ನ ದೂರದಿಂದ ನೋಡುತ್ತ ಇವಳ ಮೈಯ ಪರಿಮಳ ಹತ್ತಿರವಾದಂತೆ ಕಣ್ಣನ್ನ ಭೂಮಿಗಿಳಿ ಬಿಡುತ್ತಾ, ತೊದಲುತ್ತಾ, ಉಗುಳ ನುಂಗಿ ಏನನ್ನೋ ಹೋಗಿ ಇನ್ನೇನೊ ಆಡುತ್ತಾ ಒಟ್ಟಾರೆ ಪೇಲವರಾಗಿ ಬಿಡುತ್ತಿದ್ದಾರೆ. ಮತ್ತೆ ಇವಳ ಕುರಿತು ಹಲವು ಕವಿತೆಗಳನ್ನೂ, ಕತೆಗಳನ್ನೂ ಹೇಳುತ್ತ, ಬರೆಯುತ್ತ, ದೂರಕ್ಕೆ ಮಾಯವಾದ ಅವಳ ರಂಗನ್ನು ಒಂದರೆಕ್ಷಣ ತಮ್ಮ ಹಂಗಿನಲ್ಲಿ ಹಿಡಿದಿಡಲು ನೋಡುತ್ತ, ಆಗದೆ ಒಟ್ಟಾರೆ ಸಖತ್ತಾಗಿ ಬೇಜಾರು ಮಾಡಿಕೊಂಡು ಬಿಡುತ್ತಾರೆ. ಆಮೇಲೆ ಮಾಯವಾಗುವ ಇವಳ ಮೈಯ ಪರಿಮಳವನ್ನು ಮರೆಯಲು ದೊಡ್ಡ ಗ್ರಂಥಗಳನ್ನೂ, ಇತಿಹಾಸವನ್ನೂ, ಮಾನವಶಾಸ್ತ್ರವನ್ನೂ ಓದುತ್ತಾ ಉದ್ಧಾಮ ಪಂಡಿತರಾಗ ಬಯಸುತ್ತಾರೆ. ಆ ದೊಡ್ಡ ವಿಶ್ವವಿದ್ಯಾನಿಲಯದ ದೊಡ್ಡ ದೊಡ್ಡ ಕಟ್ಟಡಗಳ ನಡುವೆ ಓದುತ್ತಾ ಕೂತಿರುವ ಈ ಹುಡುಗರು ಹಾಗೇ ಓದುತ್ತಲೇ ಕೂತಿರುವಂತೆ ಆ ಕಟ್ಟಡಗಳ ಹೊರಗಿನ ಹುಲ್ಲು ಮೈದಾನ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ಮರಗಿಡಗಳು ಇಬ್ಬನಿ ಹೊತ್ತು ತಲೆತೂಗಿ ಬಾಗಿ ಹಕ್ಕಿಗಳು ಮಂಜಿನಲ್ಲಿ ಹಠಾತ್ತನೆ ಮಾಯವಾಗುತ್ತದೆ.

ಈ ಹುಡುಗಿ ಇನ್ನೂ ಬೆಳಗಾದರೂ ಆಲಸಿಯಂತೆ ಮುಸುಕು ಹೊದ್ದುಕೊಂಡು ಕಿಟಕಿಯಿಂದ ತೂರಿ ಬರುವ ಎಳೆಯ ಸೂರ್ಯ ಕಿರಣಗಳನ್ನು ಮೈಯ ಮೇಲೆ ಆವಾಹಿಸುತ್ತಾ ಒಂದು ತರಹದ ನಿದ್ದೆಯ ಎಚ್ಚರದ ಆಟವಾಡುತ್ತಾ ಮಲಗಿದ್ಧಾಳೆ. ಅವಳ ಮುಖದಲ್ಲಿ ನಿದ್ದೆಯಿದೆ. ಆಲಸ್ಯವಿದೆ, ಹಾಗೇ ಹಲವು ಏರು ಜವ್ವನಿಗರ ನಿದ್ದೆ ಕೆಡಿಸಿದ ಅವ್ಯಕ್ತ ತೃಪ್ತಿ ಅವಳ ತುಟಿಗಳಲ್ಲಿ ಆಟವಾಡುತ್ತಿದೆ. ಅವಳು ನಿದ್ದೆ ಮುಗಿಸಿ ಎದ್ದು ಅರ್ಥವಾಗದ ಒಂದು ಪ್ರಶ್ನಾರ್ಥಕ, ಆಶ್ಚರ್ಯಸೂಚಕ ಚಿಹ್ನೆಯಂತೆ ಕ್ಯಾಂಪಸ್‌ನ ಗಾಳಿ, ಮಂಜು, ಮರ, ಹುಲ್ಲು ಹಾಸಿನ ನಡುವೆ ಎದೆಗೆ ಪುಸ್ತಕಗಳ ತಬ್ಬಿಕೊಂಡು ಓಡಾಡುತ್ತಾಳೆ. ಬೆಳಗೆಯೇ ಕಣ್ಣ ಪಿಸುರು ಒರಸುತ್ತಾ ರಾತ್ರಿಯ ಹ್ಯಾಂಗೋವರ್ ನ ಸುಸ್ತಿನಲ್ಲಿ ಓಡಾಡುವ ಹುಡುಗರು ಮತ್ತೆ ಇವಳತ್ತ ನೋಡಲು ಶುರು ಮಾಡುತ್ತಾರೆ. ಶ್ರಾವಣ ಮಾಸದ ಎರಚಲು ಮಳೆ, ಬಿಸಿಲಲ್ಲಿ ಬೀಳಲು ತೊಡಗುತ್ತದೆ. ಎಂತಹ ಮಳೆ ಬಿಸಿಲಿನ ಆಟ! ಕೆರೆಯ ಆಚೆ ಕಡೆಯಲ್ಲಿ ಎಂತಹ ಕಾಮನಬಿಲ್ಲು! ಮುಖದ ಮುಂದೆ ಓಡಾಡುತ್ತಿರುವ ಈ ಹುಡುಗಿಯ ನಡೆ! ಎಷ್ಟು ಎಷ್ಟು ಆಶೆ ಹುಟ್ಟಿಸುತ್ತಾಳೆ ಈ ಹುಡುಗಿ! ಕ್ಯಾಂಪಸ್‌ನಲ್ಲಿ ಕವಿಯಂತಹ ಬೆರಳುಗಳು ಉಳ್ಳ ಹುಚ್ಚನಂತೆ ಕೂದಲು ಕೆರೆದಿರುವ ಹುಡುಗನೊಬ್ಬ ಇವಳ ಪ್ರೇಮದ ಬಳ್ಳಿಯ ಭಾರಕ್ಕೆ ಕುಗ್ಗಿ ಹೋಗಿ ಮುದುಕನಂತಾಗಿ ನಡೆಯುತ್ತಿದ್ದಾನೆ. ಅವನ ಚಪ್ಪಲಿಯ ಉಂಗುಷ್ಟ ಕಿತ್ತುಹೋಗಿ ಅವನಿಗೆ ಅಳು ಬರುತ್ತಿದೆ ಅವನಿಗೆ ಅವ್ವನ ನೆನಪಾಗುತ್ತದೆ.
ಎಲ್ಲ ನೆನಪಾಗುತ್ತ ಈ ಹುಚ್ಚು ಹಿಡಿಸುವ ಹುಡುಗಿಯರ ಗತ್ತು, ಮೋಹಕತೆಗಳ ಕುರಿತು ಹೊಟ್ಟೆ ಕಿಚ್ಚಾಗುವಷ್ಟು ಸಂಕಟವಾಗುತ್ತಿದೆ.

ಹಾಗೇ ನೆನಪಾಗುತ್ತಿದೆ… ನನಗೆ ರಾಖಿ ಕಳುಹಿಸಿಕೊಟ್ಟಿರುವ ಈಕೆ ಬರೆದ ಕವಿತೆಯೊಂದರ ಸಾಲುಗಳು, ಅವುಗಳನ್ನು ಪತ್ರಿಕೆಯಲ್ಲಿ ಓದಿ ನಾನು ಅವಳಿಗೆ ಬರೆಯಬೇಕೆಂದಿದ್ದ ಮಾತುಗಳು ಎಲ್ಲವೂ ಹಾಗೇ ನಿಂತುಕೊಂಡು ಬಿಟ್ಟಿದೆ. ಹಾಗೆ ನೋಡಿದರೆ ಈ ಕವಿತೆಗಳಿಂದ, ಕವಿತೆಯನ್ನು ಓದಿ ಬರೆಯುವ ಮಾತುಗಳಿಂದ ಅಂತಹ ವ್ಯತ್ಯಾಸ ಏನು ಉಂಟಾಗುತ್ತದೆ? ಈ ಹುಡುಗಿಯ ಮನಸಿನಲ್ಲಿ ಕವಿತೆ ಹುಟ್ಟಿದ ಹೊತ್ತು ಆಕೆ ಅನುಭವಿಸಿದ್ದು, ಅದನ್ನು ಓದಿದ ಹೊತ್ತು ನಾನು ಅಂದುಕೊಂಡದ್ದು ಎಲ್ಲವೂ ಒಂದರೆಗಳಿಗೆ ಕಳೆದರೆ ಇಬ್ಬನಿಯಂತೆ ಕರಗಿ ಹೋಗಿರುತ್ತದೆ. ಆಮೇಲೆ ಏನು ಉಳಿದಿರುತ್ತದೆ?

೨೨ರ ಹರೆಯದ ಆಕೆಯ ಇಪ್ಪತ್ತೆರಡು ಸಾಲಿನ ಈ ಕವಿತೆಯಲ್ಲಿ ಆಕೆ ಹುಡುಗನ ಕುರಿತು ಉತ್ಕಟ ಪ್ರೀತಿಯ ಸುಖದ ಕುರಿತು, ಸೂರ್ಯ ಚಂದ್ರರ ಕುರಿತು, ಹಾದರದ ಕುರಿತು, ಒಂಟಿತನದ ಕುರಿತು, ಹಾಗೇ ಕೊನೆಗೆ ಸಾವಿನ ಕುರಿತು ಬರೆದಿದ್ದಳು. ಇವಳು ಈ ವಯಸ್ಸಿನಲ್ಲಿ ಹೀಗೆ ಕವಿತೆಯೊಂದನ್ನು ತೊಡಗಿ ಮುಗಿಸುವಷ್ಟರಲ್ಲಿ ಪ್ರೀತಿಯಿಂದ ಸಾವಿಗೆ ಹೊರಟು ಹೋಗಿರುವುದರ ಕುರಿತು ಹೆದರಿಕೆಯಾಗಿತ್ತು. ಹಾಗೇ ಕೊಂಚ ಅಭಿಮಾನವೂ ಬೆಳೆದು ಬಿಟ್ಟಿತ್ತು. ಸುಂದರಿಯಾಗಿರುವ ಕವಿಯಿತ್ರಿಯಾಗಿರುವ ಪುಟ್ಟ ಹುಡುಗಿಯೇ ಸಾವಿನ ಕುರಿತು ಯೋಚಿಸಲು ಕಾಲ ಇದು ಸನ್ನಿಹಿತವಲ್ಲ’ ಎಂದು ಬರೆಯಬೇಕೆಂದುಕೊಂಡವನು ಸುಮ್ಮನಾಗಿದ್ದೆ. ಹೀಗೆ ಸಾಸಿವೆಯಂತಿದ್ದ ಹುಡುಗಿ ಹಠಾತ್ತನೆ ಸಾಸಿವೆಯ ಗಿಡದಂತೆ ಉದ್ದಕ್ಕೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಬೆಳೆದು ಸುಂದರಿಯಾಗಿ ಈಗ ಯೋಗಿನಿಯಂತೆ  ಸಾವಿನ ಕುರಿತು ಯೋಚಿಸುತ್ತಿರುವುದರ ಪರಿಯನ್ನು ಕಂಡು ಬೆರಗಾಗಿದ್ದೇನೆ. ಏನಿದು ಈ ಹುಡುಗಿಯರ ರೂಪಾಂತರ ಎಂದು ಗಲಿಬಿಲಿಯಾಗಿದ್ದೇನೆ. ಮತ್ತೆ ಸುಮ್ಮನೆ ಆಗಿದ್ದೇನೆ. ನಾವು ಈ ಹುಡುಗಿಯರ ಕಂಡು ಪಡುವ ಆಸೆಗಳಲ್ಲಿ ಮಾನಸಿಕವಾದದ್ದು ಎಷ್ಟು, ದೈಹಿಕವಾದದ್ದು ಎಷ್ಟು? ಈ ಹುಡುಗಿಯರು ಹುಡುಗರ ಪ್ರೇಮದಲ್ಲಿ ಬಯಸುವುದು ಸಾವಿನಂತಹ ಖುಷಿಯನ್ನೆ? ಹಾಗೆ ನೋಡಿದರೆ ಎಲ್ಲಾ ಭಾಷೆಯಲ್ಲಿಯೂ ಉತ್ಕಟ ಪ್ರೇಮವೆಂಬುದು ಸಾವಿನಷ್ಟೇ ಮೋಹಕವೂ ಅಷ್ಟೇ ಭಯಾನಕವೂ ಆಗಿಲ್ಲವೆ? ಎಲ್ಲವನ್ನೂ ಕಳೆದು ಇಬ್ಬರೂ ಒಂದರಲ್ಲೇ ಲೀನರಾಗುವ ಈ ಹೊತ್ತು ಸಾವೇ ಅಲ್ಲವೆ….

ಕ್ಯಾಂಪಸ್‌ನ ಹುಡುಗರು ಆಕೆಯ ಚಂದವನ್ನೂ, ಆಕೆಯ ನಡಿಗೆಯನ್ನೂ, ಆಕೆಯ ಧೈರ್ಯವನ್ನೂ ಅನುಭವಿಸಿಕೊಂಡು, ಮೋಹಿಸಿಕೊಂಡು ಇರುವ ಹೊತ್ತಿನಲ್ಲಿ ಈ ಮಂಜಿನಲ್ಲಿ, ಮಳೆಯಲ್ಲಿ ನೆನೆದು ನಡೆಯುವ ಈ ಹುಡುಗಿ ಸಾವಿನ ಕುರಿತೂ
ಪ್ರೇಮದ ಕುರಿತು ಏಕ ಕಾಲದಲ್ಲಿ ಚಿಂತಿಸುತ್ತಿದ್ದಾಳೆ. ನಾನು ಆಕೆಯ ಕವಿತೆಯನ್ನೂ, ನಡಿಗೆಯನ್ನೂ, ದೂರದಿಂದಲೇ ಊಹಿಸಿಕೊಂಡು ಮೆಚ್ಚಿಕೊಂಡು ಸುಮ್ಮನಾಗಿದ್ದೇನೆ.

ನಾವು ಎರಡನೆ, ಮೂರನೆಯ ತರಗತಿಗಳಲ್ಲಿರುವಾಗ ಹುಡುಗರೂ ಹುಡುಗಿಯರೂ ಜೂಟಾಟ ಆಡುತ್ತಿದ್ದೆವು. ಹುಡುಗರೆಂದರೇನು, ಹುಡುಗಿಯರೆಂದರೇನು ಎಂದು ಗೊತ್ತಿಲ್ಲದ ನಾವು ಆಗ ಜೂಟಾಟ ಆಡುತ್ತಾ ಶಾಲೆಯ ಕೋಣೆ, ಬೆಂಚು, ಕಪಾಟುಗಳ ನಡುವೆ ಮರೆಯಾಗುತ್ತ, ಆಟದ ಅಂಗಳಕ್ಕೆ ಇಳಿದು ಓಡಿ, ಚುಕ್ಕೆಗಳಂತೆ ಕಾಣೆಯಾಗುತ್ತ ಒಬ್ಬೊಬ್ಬರನ್ನೇ ಮುಟ್ಟಿ ಔಟ್ ಮಾಡುತ್ತ ಉಳಿದ ಕೆಲವರನನೂ ಆಯ್ದು ಹಿಡಿಯಲು ಸುತ್ತುವರಿಯುತ್ತಿದ್ದೆವು. ಹಾಗೆ ಯಾವಾಗಲೂ ಔಟಾಗದೆ ಕೊನೆಯವರೆಗೂ ತಪ್ಪಿಸಿಕೊಂಡೇ ಉಳಿಯುತ್ತಿದ್ದ ಬೆಳ್ಳಗೆ, ಕುಳ್ಳಗೆ ದಪ್ಪವಾಗಿದ್ದ ಗುಂಗುರು ಕೂದಲಿನ ಪುಟ್ಟ ಹುಡುಗಿಯೊಬ್ಬಳು ಈಗ ನೆನಪಾಗುತ್ತಿದ್ದಾಳೆ. ಆಕೆಯ ಹೆಸರೂ ಬಾಯಿಗೆ ಬರುತ್ತಿದೆ. ಆಕೆ ಕೊನೆಯವರೆಗೂ ಸಿಗದೆ ಓಡಿ ಕೊನೆಗೆ ಅವಳೊಬ್ಬಳೇ ಉಳಿದು ನಾವೆಲ್ಲರು ಆಕೆಯನ್ನು ನಾನಾ ದಿಕ್ಕುಗಳಿಂದ ಸುತ್ತುವರಿದು ಮುಟ್ಟಿ ಜೂಟಾಟ ಮುಗಿಸಿ ಬರುತ್ತಿದ್ದೆವು. ಅಂತಹ ಆ ವಿಚಿತ್ರ ಹಿಡಿಯುವ ಆಟದ ಆ ಪುಟ್ಟ ಹುಡುಗಿ, ಪುಟ್ಟ ಹುಡುಗರಾಗಿ ಅಟ್ಟಿಸಿಕೊಂಡು ಓಡಾಡುತ್ತಿದ್ದ ನಮಗೆ ಹೇಗೆ ಕಂಡಿದ್ದಳು? ನೆನಪಾಗುತ್ತಿದೆ, ಹೇಳಲು ಆಗುತ್ತಿಲ್ಲ. ಅಂತಹ ಆಟ ಇದು. ಎಷ್ಟು ಮೃದುವಾಗಿ ಹೆಸರಿಸಿದರೂ ಹೇಳಲು ಆಗದ ಹೆಸರು ಅವಳದು. ಅವಳು ಈಗ ದೊಡ್ಡ ಹೆಂಗಸಾಗಿ ಎಲ್ಲಿದ್ದಾಳೆ? ಯಾವ ಮನೆಯಲ್ಲಿ, ಯಾವ ಹೊಲದಲ್ಲಿ, ಯಾವ ತೋಟದಲ್ಲಿ, ಯಾವ ಮಗುವಿನ ತಾಯಿಯಾಗಿದ್ದಾಳೆ. ನನಗೆ ಯಾಕೋ ಆಕೆ ಓಡಲಾಗದ ಹಾಗೆ ಚಿಗುರುಗಳನ್ನೂ, ಬೇರುಗಳನ್ನು ಬೆಳೆಸಿಕೊಂಡಿರುವ ಗಿಡವಾಗಿ ಹೋಗಿದ್ದಾಳೆ ಅನಿಸುತ್ತದೆ. ಅಂತಹ ಹುಡುಗಿ ಅವಳು. ಬೇಡವೆಂದರೂ ಲೀಲಾಜಾಲವಾಗಿ ಬರುವ ಆ ಹುಡುಗಿಯ ಹೆಸರನ್ನು ಯಾರಿಗೂ ಹೇಳದೆ ಬಚ್ಚಿಟ್ಟುಕೊಳ್ಳುತ್ತಿದ್ದೇನೆ.

ಉಯ್ಯಾಲೆಯಲ್ಲಿ ಕುಳಿತು ಉಯ್ಯಾಲೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಬೇರಯೇ ಆಗಿಬಿಡುವ ಹುಡುಗಿಯರ ಈ ರೂಪಾಂತರ ಎಷ್ಟು ಚಂದದ ಹಾಗೆಯೇ ಎಷ್ಟು ನೋವು ಮಾಡುವ ವಿಷಯ. ಅವಳ ಬಿಟ್ಟು ಇವಳ ಬಿಟ್ಟು ಅವಳು ಯಾರು ಎಂದು ಒಂದೇ ಹುಡುಗಿಯ ಹತ್ತು ಹನ್ನೆರಡು ಭಂಗಿಗಳನ್ನು, ನಡತೆಗಳನ್ನು ಒಮ್ಮೆಗೇ ಆಕೆಯ ಕೆನ್ನೆಗೆ ಬರುವ ಹಲವು ರಂಗುಗಳನ್ನೂ ಒಟ್ಟಿಗೆ ಒಂದೇ ಭಾಷೆಯಲ್ಲಿ ಹೇಳುವುದು ಹೇಗೆ?

Advertisements