ಲಂಕೇಶರ ಕೊನೆಯ ದಿನಗಳು:ಹತ್ತು ವರ್ಷಗಳ ಹಿಂದೆ ಬರೆದದ್ದು…….

2ಬಹುಶಃ ಬದುಕಿದ್ದರೆ ಲಂಕೇಶರಿಗೆ  ೭೧ ವರ್ಷ ತುಂಬಿ ಎರಡು ತಿಂಗಳಾಗುತ್ತಿತ್ತು. ಈ ತುಂಬುತ್ತಿತ್ತು ಅನ್ನುವುದನ್ನು ಲಂಕೇಶ್ ಶೈಲಿಯಲ್ಲಿಯೇ ಯೋಚನೆ ಮಾಡುವುದಾದರೆ  ಅವರಿಗೆ ಈಗ ಮಕ್ಕಳಿಂದ ಒದ್ದು ಹೊರಗೆ ಹಾಕಿಸಿಕೊಳ್ಳುವ ವಯಸ್ಸು.

ಒಂದು ಸಲ ನಾನು ಸ್ವಲ್ಪ ಕೃತಕ ಭಾವುಕತೆ ತುಂಬಿಸಿಕೊಂಡು `ಸರ್,ನಿಮ್ಮ`ಅವ್ವ’ಕವಿತೆ… ಬಹುಶಃ ನಿಮ್ಮ ಅವ್ವ ಬದುಕಿದ್ದಿದ್ದರೆ..’ಅಂತೆಲ್ಲ ಹೇಳಿ ಅವರನ್ನು ಪೂಸಿ ಹೊಡೆಯಲು ನೋಡಿದ್ದೆ.

`ಅಯ್ಯೋ ಮಾರಾಯ ಅವಳೇನಾದರೂ ಈಗಲೂ ಬದುಕಿದ್ದರೆ ದೊಡ್ಡ ರಗಳೆಯಾಗಿರೋದು. ಯಾರು ಯಾರು ಯಾವ ಯಾವ ಕಾಲದಲ್ಲಿ ಸಾಯಬೇಕೋ ಆಗ ಸಾಯಬೇಕು.ಇಲ್ಲದಿದ್ರೆ ಫಜೀತಿ ಯಾಗೋದು’ ಅಂತ ಅವರ ನಾಚುಕೆಯ ಹುಡುಗನ ಶೈಲಿಯಲ್ಲಿ ನಕ್ಕಿದ್ದರು.

ಆಗ ಅವರು ತೀರಿಹೋಗಲಿಕ್ಕೆ ಕೆಲವೇ ತಿಂಗಳುಗಳು ಉಳಿದಿತ್ತು.

ಕೊನೆಗೊಮ್ಮೆ ಸಮುದ್ರ ನೋಡೋಣ ಅಂತ ಮಂಗಳೂರಿನ ಸೋಮೇಶ್ವರ ಕಡಲ ತೀರಕ್ಕೆ ಬಂದಿದ್ದವರು ಕಡಲಿಂದ ತುಂಬಾ ದೂರ ಕಲ್ಲ ಬೆಂಚಿನ ಮೇಲೆ ಕುಳಿತುಕೊಂಡು ನಾವು ಅಲೆಗಳ ಜೊತೆ ಆಡೋದನ್ನ ನೋಡುತ್ತಿದ್ದರು.ಅಲ್ಲಿಂದಲೇ ನಮ್ಮ ಫೊಟೋ ಹಿಡಿಯುತ್ತಿದ್ದರು.ವಾಪಾಸ್ಸು ಬರುವಾಗ ಹಠ ಮಾಡಿ ಟಾಕ್ಷಿ ಚಾಲಕನ ಪಕ್ಕದಲ್ಲೇ ಕೂತು ಆತನ ದುಡಿಮೆ,ವರಮಾನ ಖರ್ಚು,ಕುಡಿತ,ಉಳಿತಾಯ ಎಲ್ಲವನ್ನು ಕೇಳಿ ತಿಳಿದುಕೊಂಡು ಅವನೆಷ್ಟು ಆರಾಮವಾಗಿದ್ದಾನೆ ಎಂದು ಅರಿತುಕೊಂಡು ಕೊನೆಗೆ ತಮಗೆ ಇನ್ನೂ ಪತ್ರಿಕೆಯ ಹಣವನ್ನು ಕೊಡದೆ ಬಾಕಿ ಉಳಿಸಿಕೊಂಡಿರುವ ಹಂಪನಕಟ್ಟೆಯ ಪತ್ರಿಕಾ ಏಜೆಂಟನನ್ನು ಬಾಯಿಗೆ ಬಂದಂತೆ ಬಯ್ಯಲು ತೊಡಗಿದ್ದರು.

 

20728188_10155046645773246_2719970011117976084_n

ಲಂಕೇಶರು ತೆಗೆದಿದ್ದ ಫೋಟೋ. ಜೊತೆಯಲ್ಲಿ ಕೆ.ರಾಮದಾಸ್

`ಸರ್,ಸಮುದ್ರ ನೋಡಿ ಏನು ಅನಿಸಿತು?’ ಅಂತ ಕೇಳಿದರೆ,

`ಸಮುದ್ರ ಏನು ಮಹಾಸಮುದ್ರ,ಜೀವನವೇ ಒಂದು ದೊಡ್ಡ ಸಮುದ್ರ.ಕಪ್ಪೆ ಸಮುದ್ರದಲ್ಲಿದ್ದರೂ ಅದಕ್ಕೆ ಸಮುದ್ರದಲ್ಲಿದ್ದೇನೆ ಅಂತ ಗೊತ್ತಿರೋದಿಲ್ಲ.ಸಮುದ್ರ ನೋಡಿ ಅಂತಹ ವಿಶೇಷ ಏನೂ ಅನ್ಸಿಲ್ಲ.ಸುಮಾರು ೪೦ ವರ್ಷಗಳ ಹಿಂದೆ ಆಗುಂಬೆ ಹತ್ರ ಬಹಳ ಗುಂಗು ಹಿಡಿಸಿದ್ದ ಹುಡುಗಿಯೊಬ್ಬಳನ್ನು ನೋಡಬೇಕಂತ ಕಾಡೊಳಗೆ ಅವಳ ಮನೆ ಹುಡುಕಿಕೊಂಡು ಹೋಗಿದ್ದೆ.ಅವಳು ನನ್ನ ಗುರುತೇ ಗೊತ್ತಿಲ್ಲದಂತೆ ಆಡಿದ್ದಳು.ಆಗ ಅಲ್ಲಿಂದ ವಾಪಾಸ್ಸಾಗಿ ಮಂಗಳೂರ ಹತ್ರ ಸಮುದ್ರ ನೋಡಕ್ಕೆ ಹೋಗಿದ್ದೆ.ಆಗ ಆ ಸಮುದ್ರಾನೇ ಬೇರೆ,ಈಗ ಈ ಸಮುದ್ರಾನೇ ಬೇರೆ.’ಅಂತ ಅನ್ನ ತೊಡಗಿದ್ದರು.

`ಪ್ಲೀಸ್ ನಿಮ್ಮನ್ನ ಅರ್ದಗಂಟೆ ಹೊತ್ತು ಸಂದರ್ಶನ ಮಾಡ್ಬೇಕಿತ್ತಲ್ಲ’ಅಂದರೆ,

`ಸಂದರ್ಶನಾನು ಇಲ್ಲ ಶನಿದರ್ಶನಾನು ಇಲ್ಲ.ಅದರ ಬದಲು ಇಸ್ಪೀಟ್ ಆಡಬಹುದು’ಅಂದುಬಿಟ್ರು.

`ಇಲ್ಲ ಲಂಕೇಶ್,ನಿಮ್ಮ ಇಂಟರ್‌ವ್ಯೂ ಮಾಡಿದರೆ ನನಗೆ ಪ್ರೊಮೋಷನ್ ಕೊಡ್ತಾರೆ’ಅಂತ ಸುಳ್ಳು ಹೇಳಿದೆ. ‘ಹೌದಾ.ಹಾಗಾದರೆ ಈಗಲೇ ನಡಿ’ಅಂತ ಹೊಸ ಅಂಗಿ ಹಾಕಿಕೊಂಡು ನಮ್ಮ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದೇ ಬಿಟ್ರು.

`ಲಂಕೇಶ್,ನಿಮ್ಮ ಬರಹಕ್ಕೆ ಪ್ರೇರಣೆ ಏನು?’ಅಂತ ಕೇಳಿದರೆ, `ನಮ್ಮವ್ವ ಶಿವಮೊಗ್ಗದಲ್ಲಿ ಮೊಸರು ಮಾರಲಿಕ್ಕೆ ಬರ್ತಾ ಇದ್ರು.ನಮ್ಮಪ್ಪ ಸಿಕ್ಕಾಪಟ್ಟೆ ಜಗಳ ಆಡ್ತಾ ಇದ್ದ.ಒಂದು ದಿನ ಅಪ್ಪನ ಕೈ ಹಿಡಕೊಂಡು ಕೆರೆ ಏರಿ ಮೇಲೆ ಹೋಗ್ತಾ ಇದ್ರೆ ಸಿಕ್ಕಾಪಟ್ಟೆ ಗಾಳಿ ಬೀಸಿ ಸತ್ತೇ ಹೋಗ್ತೀನೇನೋ ಅಂತ ಭಯವಾಗಿ ಬಿಟ್ಟಿತ್ತು..’ ಅಂತ ಕತೆ ಹೇಳಿ ಬಿಟ್ಟಿದ್ದರು.

`ಅಲ್ಲ ಮಾರಾಯ ನಮ್ಮ ದೇವನೂರು ಮಹಾದೇವ ತಮ್ಮ ಮನೆಯಲ್ಲಿ ವೀಣೆ ಇತ್ತು,ಮಹಾಭಾರತ ಪಾರಾಯಣ ಮಾಡ್ತಿದ್ರು ಅಂತೇನಾದ್ರೂ ಹೇಳಿದ್ರೆ ಎಷ್ಟು ತಮಾಶೆ ಯಾಗಿರುತ್ತೆ ಅಲ್ವಾ’ ಅಂತ ನಕ್ಕಿದ್ದರು.

4`ಅಲ್ಲ ಲಂಕೇಶ್, ನಿಮ್ಮ ಹುಳಿ ಮಾವಿನ ಮರ ಓದಿದ ಮೇಲೆ ನೀವು ಎಷ್ಟು ಒಳ್ಳೆಯವರು ಅಂತ ಅನ್ನಿಸ್ತಾ ಇದೆ.ಛೆ, ನೀವು ಆ ತರ ಕೆಟ್ಟಕೆಲಸ ಏನೂ ಮಾಡಿಲ್ಲ ನಿಮಗಿಂತ ನಾನೇ ಎಷ್ಟೋ ವಾಸಿ’ಅಂತ ನನ್ನ ಒಂದೊಂದು ಕೆಟ್ಟ ಕೆಲಸವನ್ನೂ ಅವರ ಮುಂದೆ ರಂಗು ರಂಗಾಗಿ ವರ್ಣಿಸಲು ಹೋದರೆ ಅವರು ತಂದೆಯಂತೆ,

`ಹುಡುಗಿಯರ ವಿಷಯದಲ್ಲಿ ಹುಷಾರಾಗಿರಬೇಕು.ಅವರೇನಾದ್ರೂ ಹಚ್ಚಿಕೊಂಡ್ರೆ ತುಂಬಾ ಕಷ್ಟ. ನೋಡು ನಾನು ಜ್ವರ ಹಿಡಕೊಂಡು ಮಲಗಿದ್ದೆ ಅವಳೊಬ್ಬಳು ಬಂದು ನಿಮ್ಮನ್ನು ಕೂಡಬೇಕು ಅಂತ ಹಠ ಮಾಡ್ತಾ ಕೂತ್ಲು.ಆಮೇಲೆ ನಾನೇ  ಹುಡುಗರಿಗೆ ಹೇಳಿ ಅವಳನ್ನು ಇನ್ನು ಮುಂದೆ ಆಫೀಸ್ ಒಳಕ್ಕೆ ಬಿಡ್ಬೇಡಿ ಅಂತ ಬಂದೋಬಸ್ತ್ ಮಾಡಬೇಕಾಯ್ತು.ನೋಡು ಎಂತ ಫಜೀತಿ ಅಂತ’ ಎಂದು ಅಸಹಾಯಕರಾಗಿ ಕಂಬಳಿ ಹೊದ್ದುಕೊಂಡು ಅದರೊಳಗಿಂದಲೇ ನಕ್ಕಿದ್ದರು.

‘ ನನಗೆ ಜ್ವರ ಬಿಟ್ಟ ಮೇಲೆ ಮುಂದಿನ ವಾರ ಬಾ.  ನಿನಗೆ ಇನ್ನೂ ಚೆನ್ನಾಗಿ ಬರೆಯುವ ಎರಡು ಮೂರು ಸೀಕ್ರೆಟ್ ಹೇಳಿ ಕೊಡುತ್ತೇನೆ.ಆಗ ನೀನು ಸಾಬಿ ನನ್ಮಗ ಇನ್ನೂ ಚೆನ್ನಾಗಿ ಬರೀತೀಯಾ’ಅಂತ ಹೇಳಿ ಖುಷಿ ಪಟ್ಟಿದ್ರು.

‘ಯಾಕೋ ಚೆನ್ನಾಗಿ ಬರೆಯಕ್ಕೆ ಆಗ್ತಾನೇ ಇಲ್ಲ.`ಪತ್ರಿಕೆ’ಚೆನ್ನಾಗಿ ಬರ್ಬೇಕಾದ್ರೆ ಏನಾದ್ರೂ ಐಡಿಯಾ ಹೇಳು’ಅಂತ ಕೇಳಿದ್ರು.

‘ಏನೂ ಇಲ್ಲ ಸಂಪಾದಕರು ಬದಲಾಗಬೇಕು’ಅಂತ ತಮಾಷೆಗೆ ಹೇಳಿದ್ದೆ.

ತಮಾಷೆಗೆ ಅಂತ ನಾ ಹೇಳಿದ್ದನ್ನ ಲಂಕೇಶ್ ನಿಜ ಮಾಡಿದ್ದರು. ಸಂಪಾದಕರ ಕೊಠಡಿಯಲ್ಲಿ ಸಂಪಾದಕರ ಮೃತ ದೇಹವನ್ನ ಅಂತಿಮ ದರ್ಶನಕ್ಕಾಗಿ ಇಟ್ಟಿದ್ದರು.ಆ ದೇಹದ ಸುತ್ತ ಅಸಂಖ್ಯ ಹೆಣ್ಣು ಮಕ್ಕಳು,ಗಂಡಸರು ಅಳುತ್ತ ನಿಂತಿದ್ದರು.

ನಾನು ಲಂಕೇಶರ ಫಜೀತಿಗಳನ್ನು ಯೋಚಿಸಿಕೊಂಡು ಸುಮ್ಮನೆ ನಿಂತಿದ್ದೆ.

`ಅಲ್ಲ ಮಾರಾಯಾ, ನನಗೆ ಮಕ್ಕಳ ಬಗ್ಗೆ ಚಿಂತೆಯಿಲ್ಲ.ಅವರು ನನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ.ಅವರನ್ನು ಬಿಟ್ಟಿರಲಾರದೆ ನಾನು ಹೆಚ್ಚು ಕಾಲ ಊರು ಬಿಟ್ಟು ಹೊರಗಿರುವುದೇ ಇಲ್ಲ.ಅವರಿಗೆ ಎಲ್ಲ ಮಾಡಿ ಕೊಟ್ಟಿದ್ದೇನೆ.ಮನೆ ಕಟ್ಟಿಸಿಕೊಟ್ಟಿದ್ದೇನೆ.ಮದುವೆ ಮಾಡಿಸಿದ್ದೇನೆ.ಆವರೂ ಅಷ್ಟೇ ನನ್ನ ಪ್ರೀತಿಸುತ್ತಾರೆ.ಕೆಲಸ ಸಾಕು ಮಾಡು ನಮ್ಮ ಜೊತೆಗಿರು ಅಂತೆಲ್ಲ ಹೇಳುತ್ತಾರೆ.ಆ ಮಟ್ಟಿಗೆ ನಾನು ಖುಷಿಯಾಗಿದ್ದೇನೆ. ಬೇಕಾದರೆ ನೀನೇ ನೋಡು ಬಾ.ನಾಳೆ ಬೆಳಗ್ಗೆ ನಾನು ಮೈಸೂರಿನಿಂದ ಬೆಂಗಳೂರಿಗೆ ತಿರುಗಿ ಹೋಗುತ್ತೇನೆ.ಆಗ ನನ್ನ ಮನೆ ತೋರಿಸುತ್ತೇನೆ.ನನ್ನ ಕಾರಲ್ಲೇ ಬಾ’ ಎಂದು ಬೆಳಗ್ಗೆಯೇ ಎಬ್ಬಿಸಿ ಕರಕೊಂಡು ಹೋಗಿದ್ದರು.

1ಕಾರೊಳಗೆ ವಿಪರೀತ ಚಳಿಯಲ್ಲಿ ನಡುಗುತ್ತಿದ್ದರು.ನಿದ್ದೆ ತೂಗುತ್ತಿದ್ದ ನನ್ನನ್ನು ಪುನಃ ಪುನಃ ಕರೆದು ನಿದ್ದೆ ಬಂತಾ ಎಂದು ಮಾತನಾಡಿಸುತ್ತಿದ್ದರು.ನಾವಿಬ್ಬರು ಕಾರೊಳಗೆ ಕಾಲ ವಯೋಮಾನ ಪರಿಜ್ಞಾನವಿಲ್ಲದೆ ಬೆಂಗಳೂರಿನ ಅವರ ಮನೆ ತಲುಪುವವರೆಗೆ ಹತ್ತು ಹಲವು ಗುಟ್ಟಿನ ಸಂಗತಿಗಳನ್ನು ಹಂಚಿಕೊಂಡೆವು.

ಅವರ ಮನೆಯ ಗೇಟು ತೆಗೆದರೆ ತುಂಬ ಚೂಟಿಯಾಗಿದ್ದ ಕೆಲಸದ ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆಗೆದು ನಕ್ಕಳು.

ದೊಡ್ಡದಾಗಿದ್ದ ನಾಯಿಯೊಂದು ಬಾಲ ಅಲ್ಲಾಡಿಸಿದಂತೆ ಈಗ ಸಣ್ಣಗೆ ನೆನಪು.

ಬಾಗಿಲು ತೆಗೆದು ಮಹಡಿ ಹತ್ತಿ ಲಂಕೇಶರು ತಮ್ಮ ಕೋಣೆಯನ್ನು ತೋರಿಸಿದರು.ಪುಸ್ತಕಗಳಿದ್ದ ಲೈಬ್ರರಿ ಕೋಣೆಯನ್ನು ತೋರಿಸಿದರು, ಸ್ನಾನ ಮಾಡುವ ಸ್ನಾನದ ತೊಟ್ಟಿಯನ್ನು ತೋರಿಸಿದರು,ಫಿಸಿಯೋಥೆರಪಿ ಮಾಡಿಸಿಕೊಳ್ಳುವ ಮಂಚವನ್ನು ತೋರಿಸಿದರು.

`ಕಾಫಿ ಕುಡೀತೀಯಾ? ಈಗ ನಾನೇ ಹೊರಗೆಲ್ಲಾದರೂ ತರಿಸಿಕೊಂಡು ಕುಡಿಯಬೇಕಾಗುತ್ತದೆ’ ಅಂದರು.

`ಕೆಲಸದವಳಿಗೆ ಒಳ್ಳೆ ಕಾಪಿ ಮಾಡಲು ಬರುವುದಿಲ್ಲ’ ಅಂದರು.

5

ಲಂಕೇಶರ ಜೊತೆಯಲ್ಲಿ ಲೇಖಕ

ಆಮೇಲೆ ಯಾಕೋ ವ್ಯಗ್ರ ರಾಗಿ,

‘ಹೋಗುವಾಗ ದಾರಿಯಲ್ಲಿ ನೀನೇ ಎಲ್ಲಾದರೂ ಕುಡಿ’ ಅಂದರು.

ಯಾರೂ ಇಲ್ಲದ ಆ ಮನೆಯಲ್ಲಿ ಸಂಪಾದಕ ಲಂಕೇಶ್ ತೀರಾ ಒಂಟಿಯಾಗಿದ್ದರು.

Advertisements