ಬೈಕು ಪಾಲಿಸುವ ಮರಳು ಗೋಪಾಲ

             gopalafirst.jpg

ಬೈಕಿನ ರಿಮ್ಮು ಒರೆಸುವ ಮರಳು ಗೋಪಾಲನ ಕುರಿತು ಗದ್ಯದಲ್ಲಿ ಬರೆಯುವುದೋ ಪದ್ಯದಲ್ಲಿ ಬರೆಯುವದೋ ಎಂದು ನನಗೆ ಇನ್ನೂ ಗೊತ್ತಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ತರಹದ ಸಂದಿಗ್ಧತೆ ಎಂದೂ ಎದುರಾಗಿಯೂ ಇರಲಿಲ್ಲ. ನನ್ನ ಬೈಕಿನ ಬೇರೆ ಎಲ್ಲಾ ಭಾಗಗಳೂ ಕೊಳೆಯಿಂದ ತುಂಬಿದ್ದರೂ ಚಕ್ರಗಳ ನಡುವಿನ ಲೋಹದ ರಿಮ್ಮುಗಳು ಯಾವಾಗಲೂ ಪಳಪಳನೆ ಹೊಳೆಯುತ್ತಿರುವ ಹಿಂದಿನ ಗುಟ್ಟು ಈವತ್ತಿನವರೆಗೆ ನನ್ನ ಹೆಂಡತಿಗೂ ಗೊತ್ತಿರಲಿಲ್ಲ. ಈವತ್ತು ಬರೆಯುವ ಮೊದಲು ಈ ಕುರಿತು ನನ್ನೊಳಗೂ ಇರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಆಕೆಗೆ ಮರಳು ಗೋಪಾಲನ ಕತೆ ಹೇಳಿ ಮುಗಿಸಿ ಆತನ ಚಿತ್ರಗಳನ್ನು ತೋರಿಸಿ ಬರೆಯಲು ಕುಳಿತಿರುವೆ.

ದಿನವೂ ನನ್ನ ಬೈಕಿನ ರಿಮ್ಮನ್ನು ಮಾತ್ರ ಒರೆಸಿ ಪಳಪಳ ಮಾಡಿ ಒಂದು ರೂಪಾಯಿ ನಾಣ್ಯವನ್ನು ಇಸಕೊಂಡು ತನ್ನ ನಾಯಿ ಕರಿಯನ ಜೊತೆ ಮರೆಯಾಗುವ ಈ ಗೋಪಾಲ ಉಳಿದ ಸಮಯದಲ್ಲಿ ಎಲ್ಲಿರುತ್ತಾನೆ ಹೇಗಿರುತ್ತಾನೆ ಎಂಬುದು ಇದುವರೆಗೆ ನನಗೂ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದ ನಂತರ ಈತನನ್ನು ಹುಡುಕುತ್ತಾ ಒಂಟಿಕೊಪ್ಪಲಿನ ಓಣಿ ಓಣಿಗಳಲ್ಲಿ  ಆತನನ್ನೂ ಆತ ಸಾಕಿರುವ ಇತರ ನಾಲ್ಕು ನಾಯಿಗಳನ್ನು ನೋಡಿ ಆತನೊಡನೆ ಮಾತನಾಡಿ ಏನೂ ಗೊತ್ತಾಗದೆ ಬಂದು ಕೂತಿರುವೆ.

gopala-2.jpg

ಮೈಸೂರಿನ ಯಾದವಗಿರಿಯಲ್ಲಿರುವ ತ.ರಾ.ಸು. ವೃತ್ತದ ಒಂದು ಮೂಲೆಯಲ್ಲಿರುವ ಗೂಡಂಗಡಿಯ ಮುಂದೆ ಟೀ ಕುಡಿಯಲು, ಸಿಗರೇಟು ಸೇದಲು, ಲಾಟರಿ ಟಿಕೇಟುಗಳನ್ನು ಕೊಳ್ಳಲು ಹತ್ತಾರು ಜನ ಬರುತ್ತಾ ಹೋಗುತ್ತಾ ಇರುತ್ತಾರೆ. ಕೆಲವರು ದಿನವಿಡೀ ಅಲ್ಲಿ ಮರದ ಕೆಳಗೆ ಸುಮ್ಮನೆ ಕುಳಿತಿರುತ್ತಾರೆ. ಬೆಳಗಿನ ಸುಮಾರು ಎಂಟು ಗಂಟೆಯಿಂದ ಹತ್ತುಗಂಟೆಯವರೆಗೆ ಈ ಗೋಪಾಲ ಕೈಯಲ್ಲಿ ಒಂದು ಮಾಸಿದ ಬಟ್ಟೆ ಹಿಡಿದುಕೊಂಡು ಬಾಯಲ್ಲಿ ಯಾರೋ ಎಳೆದು ಬಿಸಾಕಿದ ಸಿಗರೇಟು ತುಂಡನ್ನು ಕಚ್ಚಿಕೊಂಡು ಯಾರದಾದರೂ ಬೈಕಿನ ರಿಮ್ಮನ್ನು ಒರೆಸುತ್ತಾ ಕುಳಿತಿರುತ್ತಾನೆ. ಆತನ ಕರಿಯ ಎಂಬ ಹೆಸರಿನ ನಾಯಿ ಆತನ ಪಕ್ಕದಲ್ಲಿ ಧ್ಯಾನ ಮಾಡುವಂತೆ ಮಲಗಿರುತ್ತದೆ. ರಿಮ್ಮ ಒರೆಸುವ ಗೋಪಾಲ ಕೆಲವೊಮ್ಮೆ ವಿನಾಕಾರಣ ಕಿರುಚುತ್ತಾನೆ. ನಾಟಕದ ಹಾಡುಗಳನ್ನು ಹಾಡುತ್ತಿರುತ್ತಾನೆ. ತನ್ನಷ್ಟಕ್ಕೆ ಯಾರಾದರೂ ಜೊತೆ ವಾಗ್ವಾದದಲ್ಲಿ ತೊಡಗಿರುತ್ತಾನೆ. ಆತನ ಮುಖ ಸದಾ ವ್ಯಗ್ರವಾಗಿರುತ್ತದೆ. ಏನಾದರೂ ಮಾತನಾಡಿಸಿದರೆ ಎದ್ದು ಪರಚುವಂತೆ ಕಾಣುತ್ತಾನೆ. ಹಾಗಾಗಿ ಈತನ ಸಹವಾಸವೂ ಬೇಡ, ಈತನ ಕಥೆಯೂ ಬೇಡ ಎಂದು ಯಾವಾಗಲೂ ಈತ ಒರೆಸಿ ಮುಗಿಸಿದೊಡನೆ ಒಂದು ರುಪಾಯಿ ನಾಣ್ಯವನ್ನು ಕೈಗಿತ್ತು ಬೈಕು ಸ್ಟಾರ್ಟ್ ಮಾಡುತ್ತಿದ್ದೆ. ನಿನ್ನೆಯೂ ಹಾಗೆಯೇ ಮಾಡಲು ಹೊರಟಿದ್ದೆ.

ಆದರೆ ಅಷ್ಟರಲ್ಲಿ ಪಕ್ಕದ ಇನ್ನೊಂದು ಗೂಡಂಗಡಿಯ ಕಡೆಯಿಂದ ಇನ್ನೊಬ್ಬ ಮರುಳ ಕಿರುಚಾಡುವುದು ಕೇಳಿಸಿತು. ಬಹುಶಃ ಆತನ ಹೆಸರು ಅನಂತ. ದಕ್ಷಿಣ ಕನ್ನಡದ ಕಡೆಯವನಿರಬೇಕು. ಯಾವಾಗಲೂ ವೇದಾಂತಿಯಂತೆ ಅಲ್ಲಿ ಎಲ್ಲಾದರೂ ಕುಳಿತುಕೊಂಡಿರುತ್ತಿದ್ದವನು ಯಾವುದೋ ಸಲುವಾಗಿ ಕೋಪ ಮಾಡಿಕೊಂಡು ಆ ಅಂಗಡಿಯವನೊಡನೆ ಕಿರುಚಾಡಲು ತೊಡಗಿದ್ದ. ಆ ಅಂಗಡಿಯವನು ಬೇರೆ ಏನೂ ಮಾಡಲಿಲ್ಲ. ದೊಡ್ಡ ದೊಣ್ಣೆಯೊಂದನ್ನು ಎತ್ತಿಕೊಂಡು ಆ ಅನಂತನಿಗೆ ಬಡಿಯಲು ಶುರುಮಾಡಿದ್ದ. ಎಲ್ಲರೂ ನೋಡುತ್ತಿದ್ದರು. ನಾನೂ ನೋಡುತ್ತಿದ್ದೆ. ಅದು ಏನನ್ನಿಸಿತೋ ಬೈಕು ಒರೆಸುತ್ತಿದ್ದ ಮರಳು ಗೋಪಾಲ ತಾನೂ ಜೋರಾಗಿ ಅರಚಿಕೊಂಡು ಎದ್ದು ಓಡಿಹೋಗಿ ಅನಂತನನ್ನು ಆ ದೊಣ್ಣೆಯ ಪೆಟ್ಟುಗಳಿಂದ ರಕ್ಷಿಸಿ ಆತನನ್ನು ದೂರ ಕರೆದುಕೊಂಡು ಹೋಗಿ ಮೌನವಾಗಿ ಹಿಂದಿರುಗಿಬಂದು ಪುನಃ ತಲೆತಗ್ಗಿಸಿ ಒರೆಸಲು ತೊಡಗಿದ. ಆ ಗದ್ದಲದಿಂದ ಮೇಲೆದ್ದ ಗೋಪಾಲನ ನಾಯಿ ಕರಿಯ ಮೈಮುರಿದು ಪುನಃ ತಲೆತಗ್ಗಿಸಿ ಮಲಗಿಕೊಂಡಿತು.

ನನಗೆ ಇನ್ನು ಈ ಗೋಪಾಲನೊಡನೆ ಮಾತನಾಡದೆ ಇರುವುದು ಸರಿ ಅಲ್ಲ ಅನ್ನಿಸಿತು. ಅದೂ ಅಲ್ಲದೆ ಅದುವರೆಗೆ ಇಷ್ಟು ಕಾಲದವರೆಗೆ ದಿನಾ ಬೈಕು ಒರೆಸಿಕೊಳ್ಳುತ್ತಿದ್ದರೂ ಆತನ ಹೆಸರೂ ನನಗೆ ತಿಳಿದಿಲ್ಲವಲ್ಲ ಅಂತ ಬೇಸರವಾಯಿತು. ಅದೂ ಅಲ್ಲದೆ ಸದಾ ಶಾಂತವಾಗಿರುತ್ತಿದ್ದ ಹುಚ್ಚ ಅನಂತನನ್ನು ಹಾವಿಗೆ ಬಡಿದ ಹಾಗೆ ಆ ಗೂಡಂಗಡಿಯ ಮಾಲೀಕ ದೊಣ್ಣೆಯಿಂದ ಬಡಿದದ್ದು ನನಗೂ ಹೆದರಿಕೆಯಾಗುವಂತೆ ಮಾಡಿತ್ತು ಗೋಪಾಲ ಆತನನ್ನು ರಕ್ಷಿಸಿದ್ದು ನೋಡಿ ಈತ ನನಗಿಂತ ಮಿಗಿಲಾದ ಮನುಷ್ಯ ಅಂತಲೂ ಗೊತ್ತಾಯಿತು.

ಆತನ ಹೆಸರು ಕೇಳಿದೆ. ‘ಗೋಪಾಲ ಸಾರ್’ ಅಂದ. ‘ಮಕ್ಕಳು ಎಲ್ಲಿದ್ದಾರೆ’ ಎಂದು ಕೇಳಿದೆ. ‘ಇಲ್ಲ ಸಾರ್. ಇಲ್ಲೇ ಒಬ್ಬ ಇದ್ದಾನೆ ನೋಡಿ. ಒಟ್ಟು ಐದು ಜನ ಸಾರ್, ಇನ್ನು ನಾಲ್ಕು ಮಕ್ಕಳು ಅಲ್ಲೇ ಕನ್ನಡ ಸಂಘದ ಕಟ್ಟೆಯಲ್ಲಿ ಮಲಗಿದ್ದಾರೆ’ ಅಂತ ಹೇಳಿದ. ಆತ ಹೇಳಿದ್ದು ಇನ್ನೂ ನಾಲಕ್ಕು ನಾಯಿಗಳ ಬಗ್ಗೆ ಅಂತ ಗೊತ್ತಾಗಲಿಲ್ಲ. ಆತ ‘ಇಲ್ಲೇ ಒಬ್ಬ ಇದ್ದಾನೆ’ ಅಂತ ಕರಿಯ ಎಂಬ ಹೆಸರಿನ ನಾಯಿಯನ್ನು ತೋರಿಸಿದ ಮೇಲೆ ಗೊತ್ತಾಯಿತು. ಅಲ್ಲಿಯವರೆಗೆ ನನಗೆ ಈ ತ.ರಾ.ಸು. ವೃತ್ತದಲ್ಲಿ ಬೈಕಿನ ರಿಮ್ಮು ಒರೆಸುವ ಗೋಪಾಲನಿಗೂ ಕರಿಯ ಎಂಬ ಈ ನಾಯಿಗೂ ಯಾವುದೇ ಸಂಬಂಧವಿದೆ ಎಂದೂ ಗೊತ್ತಿರಲಿಲ್ಲ. ಸರಕಾರದವರು ಎಲ್ಲ ಬೀದಿನಾಯಿಗಳನ್ನು ಬಂಧಿಸಿ ಕೊಂಡು ಹೋಗಿದ್ದರೂ ಈ ಕರಿಯ ನಾಯಿ ಆರಾಮಾಗಿ ಇಲ್ಲಿ ಹೇಗೆ ಕೂತಿರುತ್ತದೆ ಎಂದು ಆಶ್ಚರ್ಯ ಪಟ್ಟುಕೊಳ್ಳುತ್ತಿದ್ದೆ.

gopala-003.jpg

ಯಾವಾಗಲೂ ಶಾಂತವಾಗಿರುವ ಆ ಅನಂತನಿಗೆ ಈವತ್ತು ಏಕೆ ಹೀಗೆ ಸಿಟ್ಟು ಬಂತು ಎಂದು ಕೇಳಿದೆ. ‘ಇಲ್ಲ ಸಾರ್ ಬಹಳ ಒಳ್ಳೆಯವನು. ನನ್ನ ಜೊತೆಯಲ್ಲೇ ಜೈಲಿನಲ್ಲಿದ್ದ ಸಾರ್. ಬಾಳಾ ಒಳ್ಳೆಯವನು ಸಾರ್. ಆದರೆ ಹುಚ್ಚ. ಮಂಗಳೂರಿನ ಹತ್ತಿರ ಆತನ ತಾತನಿಗೆ ದೊಡ್ಡ ದ್ರಾಕ್ಷಿ ತೋಟ ಇತ್ತು. ಆಸ್ತಿ ಜಗಳ ಬಂತು ಸಾರ್ ಯಾರನ್ನೋ ಕೊಂದು ಬಿಟ್ಟ ಪಾಪ. ಒಳ್ಳೆಯವನು. ನನಗೆ ಬರೀ ನಾಲ್ಕು ಜನ ದೋಸ್ತಿಗಳು ಸಾರ್ ಈ ಲೋಕದಲ್ಲಿ. ಅದರಲ್ಲಿ ಅನಂತ ಒಬ್ಬ ಸಾರ್. ಪಾಪ ಈವತ್ತು ಬಡಿದು ಸಾಯಿಸ್ತಾ ಇದ್ರು’ ಎಂದು ಅಲ್ಲಿದ್ದ ಎಲ್ಲರಿಗೂ ಅಶ್ಲೀಲವಾಗಿ ಬೈದು ನನ್ನ ಕೈಯಲ್ಲಿದ್ದ ಸಿಗರೇಟು ಇಸಕೊಂಡು ಆರಾಮಾಗಿ ಸೇದತೊಡಗಿದ.

‘ಗೋಪಾಲ ಈವತ್ತು ಒಂದು ರೂಪಾಯಿ ಸಾಕಾ, ಇನ್ನೂ ಬೇಕಾ ಎಷ್ಟು ಬೇಕಾದರೂ ಕೇಳು’ ಅಂದೆ. ನನಗೂ ಈ ಹಾಳು ಹಣದ ಬಗ್ಗೆ ಜಿಗುಪ್ಸೆ ಬಂದಿತ್ತು. ಆತನೂ ಅದನ್ನೇ ಹೇಳಿದ ‘ಹಣ ಯಾರಿಗೆ ಬೇಕು ಸಾರ್. ನಮ್ಮಮ್ಮ ಸ್ಟಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿದ್ರೆ ಅದು ನನಗೆ ಬೇಕಾ ಸಾರ್, ನೀವು ಸುಮ್ಮನೆ ಹೋಗಿ ಸಾರ್’ ಎಂದು ನಕ್ಕ. ಆತ ನಕ್ಕದ್ದನ್ನು ಅದೇ ಮೊದಲು ನೋಡಿದ್ದು. ಖುಷಿಯಾಯಿತು.

‘ಗೋಪಾಲಾ, ನಿನ್ನ ಸ್ಟೋರಿ ಹೇಳ್ತೀಯಾ; ಹೇಳು ಸಿನೆಮಾ ಮಾಡುತ್ತೇನೆ. ಅದರಲ್ಲಿ ಹಣಬಂದರೆ ನನಗೆ ಅರ್ಧ ನಿನಗೆ ಅರ್ಧ’ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಾ ಹೋದೆ. ‘ಇಲ್ಲಿ ಬೇಡಾ ಸಾರ್, ಒಂಟಿಕೊಪ್ಪಲು ಮೂರನೇ ಕ್ರಾಸ್ ಸಿಮೆಂಟ್ ಅಂಗಡಿ ಪಕ್ಕ ಕನ್ನಡ ಸಂಘದ ಕಟ್ಟೆ ಇದೆ ಸಾರ್. ಅಲ್ಲಿ ಮಲಗಿರ್ತೀನಿ. ಎಬ್ಬಿಸಿ. ಹೇಳ್ತೇನೆ. ಅವನವ್ವನ್ ಕಥೆಯಾ’ ಎಂದು ಸಿಗರೇಟು ಆರಿಸಿ ಉಳಿದ ತುಂಡನ್ನು ಕಿವಿಯ ಸಂದಿಗೆ ಸಿಕ್ಕಿಸಿ ಕರಿಯ ಎಂಬ ನಾಯಿಯನ್ನು ಎಬ್ಬಿಸಿ ಮಾಯವಾದ.
ನಿನ್ನೆ ಮಧ್ಯಾಹ್ನ ತುಂಬ ಹೊತ್ತು ಆತನನ್ನು ಹುಡುಕಿಕೊಂಡು ಅಲೆದಾಡಿದೆ. ಎಲ್ಲರೂ ನನ್ನನ್ನು ಹುಚ್ಚನಂತೆ ನೋಡುತ್ತಿದ್ದರು.

 ‘ಗೋಪಾಲ ಹುಚ್ಚ ಸಾರ್’ ಅಂದರು. ‘ಕಳ್ಳ ಸಾರ್ ಜೈಲಿಗೆ ಹೋಗಿ ಬಂದಿದ್ದ’ ಅಂದರು. ‘ಒಳ್ಳೆಯವನು ಸಾರ್ ಮದುವೆ ಯಾದವಳು ಮೋಸ ಮಾಡಿದಳು ಸಾರ್, ಅದಕ್ಕೆ ಹೀಗಾದ ಸಾರ್’ ಅಂದರು. ‘ಬಾಳಾ ಚೆನ್ನಾಗಿ ಚಿತ್ರ ಬರೀತಿದ್ದ ಸಾರ್’ ಅಂದರು. ‘ಸೈಕಲ್ ಅಂಗಡಿ ಇಟ್ಟುಕೊಂಡಿದ್ದ ಸಾರ್. ಸೈಕಲ್ ಅಂಗಡಿಯಲ್ಲಿ ಕ್ಯಾರಂಬೋರ್ಡ್ ಇಟ್ಟುಕೊಂಡಿದ್ದ ಸಾರ್ ನಾವೆಲ್ಲಾ ಅಲ್ಲಿ ಆಡುತ್ತಿದ್ದೆವು’ ಅಂದರು. ‘ಸಾರ್ ಅವರು ನೀಲಗಿರಿಯ ಗೌಡರು ಸಾರ್, ಬಹಳ ಹಿಂದೆ ನಾಗಮಂಗಲ, ಮಂಡ್ಯದ ಕಡೆ ಬರ ಬಂದಾಗ ಅವರ ಹಿರಿಯರು ನೀಲಗಿರಿಯ ಕಡೆ ವಲಸೆ ಹೋಗಿದ್ದರು. ಅವರಲ್ಲಿ ಈಗಲೂ ಕೆಲವರು ಎಸ್ಟೇಟಲ್ಲಿ ಹೆಲಿಕಾಪ್ಟರ್ ಇಟ್ಟುಕೊಂಡಿದ್ದಾರೆ’ ಅಂದರು. ‘ಅವರು ಒಬ್ಬ ಆರೇಳು ಅಣ್ಣತಮ್ಮಂದಿರು ಎಲ್ಲರೂ ಚೆನ್ನಾಗಿದ್ದಾರೆ ಇವನೊಬ್ಬನು ಮಾತ್ರ ಹೀಗಾದ ಬಾಳ ಕುಡುಕ ಸಾರ್ ಅವನು. ನಾಯಿ ಸಾಕೋದು ನಮಗಾಗೊಲ್ಲ ಸಾರ್’ ಅಂದರು. ‘ಸಾರ್ ನಾಯಿ ಜೊತೇಲೇ ತಟ್ಟೆಯಲ್ಲಿ ಊಟ ಮಾಡುತ್ತಾನೆ. ಒಂದೇ ಲೋಟದಲ್ಲಿ ನಾಯಿ ಜೊತೆ ನೀರು ಕುಡೀತಾನೆ ಸಾರ್ ಅಸಹ್ಯ’ ಅಂದರು. ಅವರೆಲ್ಲರಿಗೂ ನಾನು ಆ ನಡು ಮಧ್ಯಾಹ್ನ ಮರಳು ಗೋಪಾಲನನ್ನು ಹುಡುಕಿಕೊಂಡು ಓಡಾಡುತ್ತಿರುವುದನ್ನು ನೋಡಿ ಅಚ್ಚರಿಯಾಗಿತ್ತು. ಆಮೇಲೆ ಆಕಾಶವಾಣಿಯವನು ಎಂದು ಗೊತ್ತಾದ ಮೇಲೆ ಓ ಹಾಗಾ ಎಂದು ಸುಮ್ಮಗಾಗಿದ್ದರು. ನಾನು ಗೋಪಾಲನನ್ನು ಹುಡುಕಿ ಬೇಜಾರಾಗಿ ಮರಳಿ ಬಂದಿದ್ದೆ. ಮತ್ತೆ ಸಂಜೆ ಚಿರಿಚಿರಿ ಮಳೆಯಲ್ಲಿ ಇನೊಮ್ಮೆ ಹುಡುಕಿದೆ. ಹೋಗಿ ನೋಡಿದರೆ ಗೋಪಾಲ ಕಂದುಬಣ್ಣದ ಇನ್ನೊಂದು ನಾಯಿಯ ಜೊತೆ ಮೋರಿ ಕಟ್ಟೆಯೊಂದರಲ್ಲಿ ತಲೆಯ ಮೇಲೆ ಕೈಇಟ್ಟುಕೊಂಡು ಕುಳಿತಿದ್ದ. ಏನು ಯೋಚನೆ ಎಂದು ಕೇಳಿದೆ. ‘ಏನೂ ಇಲ್ಲ ಸಾರ್.ಬೇಜಾರಾಗಿತ್ತು’ ಅಂತ ಎದ್ದುಬಂದ.

ಆಮೇಲೆ ಆತ ಯಾವುದೋ ಮುಚ್ಚಿದ ಅಂಗಡಿಯೊಂದರ ಜಗಲಿಯಲ್ಲಿ ಕುಳಿತು ನನ್ನ ಜೊತೆ ಬಹಳ ಹೊತ್ತು ಏನೇನೋ ಮಾತನಾಡಿದ. ‘ಅಪ್ಪ ಬಡ್ಡಿಮಗ ಸಾರ್ ಬಾಳಾ ಹೊಡೀತಿದ್ದ ಸಾರ್’ ಅಂದ. ‘ಹೆಂಗಸರು ದೇವರು ಸಾರ್. ಪಾಪ. ಆದ್ರೂ ಏನೋ ತಪ್ಪು ಮಾಡ್ತಾರೆ’ ಅಂದ. ‘ಸುಮ್ಮನೆ  ಆಲದ ಕಟ್ಟೆಯಲ್ಲಿ ಮಲಗಿದ್ದೆ ಸಾರ್. ಪೊಲೀಸರು ಎತ್ತಿಕೊಂಡು ಹೋಗಿ ಜೈಲಿಗೆ ಹಾಕಿದ್ರು ಸಾರ್. ಎಲ್ಲಾ ಕೊಂದಾಕಿ ಬಿಡ್ತಾರೆ ಸಾರ್’ ಅಂದ. ‘ಎಲ್ಲ ಸುಮ್ನೆ ಸಾರ್ ಈ ಜನ್ಮದಲ್ಲಿ ನಾನು ಏನೂ ಹೇಳೋದಿಲ್ಲ ಸಾರ್. ಈ ಜನ್ಮದಲ್ಲಿ ನಾನು ಏನೂ ಮಾತಾಡಬಾರದು ಅಂತ ಅವನು ಹೇಳಿದ್ದಾನೆ ಸಾರ್’ ಅಂದ. ‘ಯಾರು’ ಅಂತ ಕೇಳಿದೆ ‘ಇನ್ನು ಯಾರು ಸಾರ್ ಆ ಭಗವಂತ ಪರಮಾತ್ಮ ಅಂತ’ ತುಂಬ ಹೆಸರುಗಳನ್ನು ಹೇಳಿದ.

 ‘ನಾಯಿ ಯಾಕೆ ಸಾಕ್ತೀಯಾ?’ ಅಂತ ಕೇಳಿದೆ. ‘ನಾಯಿಗಳಿಗೆ ಬೇರೆ ಯಾರಿದ್ದಾರೆ ಸಾರ್.. ಈ ಕರಿಯನನ್ನ ನೀವು ಸಾಕ್ತೀರಾ ಸಾರ್. ಇವನಿಲ್ಲದಿದ್ದರೆ ನಾನು ಎಲ್ಲಿಗೋ ಹೊರಟು ಹೋಗ್ತಿದ್ದೆ. ಸಾಕ್ತೀರಾ ಸಾರ್? ಅಂತ ಪುನಃ ಕೇಳಿದ ನನಗೂ ಅವನ ಹಾಗೆ ಸ್ವಂತ ಮನೆ ಇಲ್ಲ ಅಂತ ಹೇಳಿದೆ ‘ಬಿಡಿ ಸಾರ್ ನೀವು ಶ್ರೀಮಂತರು. ಸುಳ್ಳು ಹೇಳ್ತೀರಾ’ ಅಂತ ಹೇಳಿದ ‘ನಾಯಿ ಒಳ್ಳೇದು ಸಾರ್. ನಾಯಿ ಹಲ್ಲು ಕತ್ತಿಗೆ ಕಟ್ಟಿಕೊಂಡರೆ ಕಾಯಿಲೆ ಬರೋಲ್ಲ ಸಾರ್’ ಅಂದ. ‘ನಮ್ಮ ಅಮ್ಮ ಒಂದು ಚೀಲ ನಾಯಿ ಹಲ್ಲು ಇಟ್ಟುಕೊಂಡಿದ್ದರು’ ಅಂದ.

ಇವನು ಹೇಳುವುದನ್ನೆಲ್ಲಾ ಕೇಳುತ್ತಾ ಇರಲು ನನಗೂ ಮರುಳೇ ಎಂದು ಹೊರಟುಬಂದೆ.

ದಾರಿಯಲ್ಲಿ ಹಿರಿಯರಾದ ಸ್ನೇಹಿತರೊಬ್ಬರ ಕಿರಾಣಿ ಅಂಗಡಿ ಇದೆ. ಇವರೂ ನಾನೂ ಕೆಲವೊಮ್ಮೆ ಕಷ್ಟಸುಖ ಮಾತಾಡ್ತಾ ಕೂತಿರುತ್ತೇವೆ. ಅವರು ರಾಜಕೀಯದ ಹಳೆ ಹುಲಿ. ಸಮಾಜವಾದಿ.ಜೆ. ಪಿ, ಜನತಾಪಾಟರ್ಿ, ವಿಚಾರವಾದ ಅಂತ ಬಹಳ ಬಡಿದಾಡಿದವರು. ಅವರಲ್ಲಿ ಗೋಪಾಲನ ಬಗ್ಗೆ ಕೇಳಿದೆ ‘ಬಡ್ಡೀಮಗ, ವಂಡರ್ಪುಲ್ ಮನುಷ್ಯ ಸಾರ್. ನಾಯಿಗಳ ಜೊತೆ ಸೇರಿಕೊಂಡು ಹಾಳಾಗಿ ಹೋದ ಸಾರ್’ ಅಂದರು. ಗೋಪಾಲ ಬಹಳ ಚೆನ್ನಾಗಿ ಚಿತ್ರ ಬರೆಯುತ್ತಿದ್ದನಂತೆ. ರಸ್ತೆಯಲ್ಲಿ ಜನತಾ ಪಾರ್ಟಿಯ ನೇಗಿಲು ಹೊತ್ತ ರೈತನ ಚಿತ್ರವನ್ನು ನೀಟಾಗಿ ಬರೀತಿದ್ದನಂತೆ. ಒಂದು ಸಲ ಈತನ ನಾಯಿ ಸಹವಾಸ ನೋಡಿ ಸಹಿಸಲಾರದೆ ‘ಸ್ಟುಪಿಡ್’ ಅಂತ ಬೈದರಂತೆ ‘ನೀವೇ ಸ್ಟುಪಿಡ್’ ಅಂತ ತಿರುಗಿ ಬೈದು ಹೋದನಂತೆ.

 ‘ನಿಮ್ಮ ಜೊತೆ ಇದ್ದ ಯಾರು ಯಾರೆಲ್ಲಾ ಏನೆಲ್ಲಾ ಆದರು. ಸಿ.ಎಂ.ಆದರು, ಪಿ.ಎಂ. ಆದರು. ನೀವು ಮಾತ್ರ ಕಿರಾಣಿ ಅಂಗಡಿಯೊಳಗೆ ಹಾಗೇ ಬೇಳೆ ತೂಗುತ್ತಾ ಇದ್ದೀರಾ ನೀವೇ ಸ್ಟುಪಿಡ್’ ಅಂತ ಹೇಳಿದನಂತೆ. ಹಾಗೆ ಹೇಳಿ ಹೋದವನು ಎಷ್ಟೋ ವರ್ಷ ಇರಲೇ ಇಲ್ಲವಂತೆ. ಆಮೇಲೆ ಜೈಲಿನಿಂದ ತಿರುಗಿ ಬಂದನಂತೆ. ಅವರು ಗೋಪಾಲನ ಇನ್ನಷ್ಟು ಕತೆಗಳನ್ನು ಹೇಳುವ ಉತ್ಸಾಹದಲ್ಲಿದ್ದರು.

ಮಳೆ ಜೋರಾಗುವ ಸಂಭವವಿದ್ದರಿಂದ ನಾನು ಹೊರಟುಬಂದೆ.

gopala-3.jpg

Advertisements