ಅಚಲ್ ರಹೋ ರಾಜಾ : ದೇವತೆಯರಲ್ಲಿ ಒಂದು ಮೊರೆ

  achal2.jpg

ಈ ನಡುರಾತ್ರಿಯಲ್ಲಿ ಆ ಕೂಗು ಹಾಗೆಯೇ ಇನ್ನೂ ಕೇಳಿಸುತ್ತಿದೆ.ಕಾಲ ಇಷ್ಟು ಕಳೆದಿದ್ದರೂ ಆ ಕೂಗು ಇನ್ನೂ ಹಾಗೆಯೇ.ಕಾಫಿ ತೋಟದ ನಮ್ಮ ಬಿಡಾರದ ಮುಂದೆ ಸದಾ ಎರಡು ಮುತ್ತೈದೆಯರ ಹಾಗೆ ನಿಂತುಕೊಂಡಿದ್ದ ಜೋಡಿ ಪೇರಳೆ ಮರಗಳು.ಒಂದು ಬಟರ್ ಫ್ರೂಟಿನ ಅಸಹಾಯಕ ಮರ.ಪೇರಳೆ ಮರಗಳಿಗೆ ಜೋತು ಬಿದ್ದು ಪವಡಿಸಿದ್ದ ಮಲ್ಲಿಗೆಯ ಬಳ್ಳಿ.ಅದರಲ್ಲಿ ಆಗಾಗ ಕಂಡು ಬರುತ್ತಿದ್ದ ಪುಡಿ ಮಕ್ಕಳಂತಹ ಮಲ್ಲಿಗೆ ಮೊಗ್ಗುಗಳು.ಒಂದು ಕಂಬಳಿ ಹಣ್ಣಿನ ಗಿಡ.ಕೆಳಗೆ ಏಲಕ್ಕಿ ಕಾಡು.ಬತ್ತದ ಗದ್ದೆ.ಅಲ್ಲೇ ಎಲ್ಲೋ ಇದ್ದ ಒಂದು ಕೊಳ.ಅದರ ಸುತ್ತಲೂ ಏಡಿ ಮಣ್ಣಲ್ಲಿ ಏಡಿಗಳು ಗುಂಡಿ ತೋಡಿ ಮೇಲಕ್ಕೆ ಬಿಸಾಡಿದ್ದ ಒದ್ದೆ ಮಣ್ಣಿನ ಗೂಡು.ಬಿದ್ದ ಕೆಂಪು ಪಾಲವಾನದ ಹೂಗಳು.ನಾಚಿಕೆ ಮುಳ್ಳು.ಕೆಸರಲ್ಲಿ ಬೆಳೆದಿದ್ದ ಕೆಸದ ಕಾಡು. ಹಗಲಿಡೀ ಅದರೊಳಗೆ ಆಡಿ ಮುಗಿದು ಕತ್ತಲಾಗಿ ಮನೆಗೆ ಬಂದು ಆದರೆ ಪೇಟೆಗೆ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋದ ಅಣ್ಣ ಇನ್ನೂ ಕತ್ತಲಾದರೂ ಮನೆಗೆ ಬಂದಿಲ್ಲ ಎಂದು ನಾವೆಲ್ಲಾ ಕತ್ತಲಲ್ಲಿ ಕಾಯುತ್ತಾ ಕುಳಿತಿದ್ದರೆ ಆ ಕತ್ತಲಲ್ಲಿ ರಕ್ತ ಸಂಚಾರವಾದಂತೆ ಆ ಕೂಗು ಕೇಳಿ ಬರುತ್ತಿತ್ತು.

achal3.jpg

 ಅದು ಕಮ್ಯುನಿಷ್ಟ್ ಕಣ್ಣನ್  ತನ್ನ ಕೊಲೆಯಾದ ಮಗನ ತಲೆಯನ್ನು ಬೊಗಸೆಯಲ್ಲಿ ಎತ್ತಿಕೊಂಡು ರೋಧಿಸುತ್ತಾ ಕತ್ತಲಲ್ಲಿ ಅಲೆದಾಡುತ್ತಿರುವ ಸದ್ದು ಎಂದು ಎಲ್ಲರೂ ಹೇಳುತ್ತಿದ್ದರು.ಜೊತೆಗೆ ಗುಳ್ಳೆ ನರಿಗಳು ಬೇರೆ ಕತ್ತಲಲ್ಲಿ ಬತ್ತದ ಗದ್ದೆಯೊಳಗಿಂದ ಕೇಕೆ ಹಾಕುತ್ತಿದ್ದವು.ಜೊತೆಗೆ ಪೇಟೆಗೆ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿರುವ ಅಣ್ಣ ಇನ್ನೂ ಬಂದು ತಲುಪಿರಲಿಲ್ಲ.ಕಳೆದ ವಾರ ಅಣ್ಣ ಅಂಗಡಿಯಿಂದ ಕತ್ತಲಲ್ಲಿ ಬರುವಾಗ ಈ ಸದ್ದು ಕೇಳಿ ಓಡಿ ಬೇಲಿ ಹಾರಲು ಹೋಗಿ ಕಾಡು ಮಾವಿನ ಮರಕ್ಕೆ ಡಿಕ್ಕಿ ಹೊಡೆದು ಹಣೆಯಲ್ಲಿ ರಕ್ತ ಸುರಿಸುತ್ತಾ ಓಡಿ ಬಂದು ಬಿಡಾರದೊಳಗೆ ಸೇರಿಕೊಂಡಿದ್ದ.ಅವನು ಬೇರೆ ತಾನು ಕತ್ತಲಲ್ಲಿ ಕಮ್ಯುನಿಷ್ಟ್ ಕಣ್ಣನ್   ಕೈಯಲ್ಲಿ ನೆತ್ತರು ಸುರಿಯುತ್ತಿರುವ ಮಗನ ತಲೆಯನ್ನು ನೋಡಿದೆ ಎಂದು ಹೇಳಿ ಬೆಳಗಾದರೂ ನಮ್ಮನ್ನು ರಸ್ತೆಗಿಳಿಯದಂತೆ ಮಾಡಿದ್ದ.ಅವನೂ ಒಂದು ವಾರ ಕೆಲಸಕ್ಕೆ ಹೋಗದೆ ತಲೆಕೆಟ್ಟವನಂತೆ ಮನೆಯಲ್ಲೇ ಉಳಿದಿದ್ದ.ಅದು ಹೇಗೋ ಈವತ್ತು ಕೆಲಸಕ್ಕೆ ಹೋದವನು ಇನ್ನೂ ಕತ್ತಲಾದರೂ ಬಿಡಾರಕ್ಕೆ ತಲುಪಿರಲಿಲ್ಲ.ಈಗ ನೋಡಿದರೆ ಮತ್ತೆ ಕಮ್ಯುನಿಷ್ಟ್ ಕಣ್ಣನ್ ರೋಧಿಸುವ ಸದ್ದು.

 ಕೊಡಗಿನ ಗಡಿಯಿಂದ ಎಲ್ಲ ಕಮ್ಯುನಿಷ್ಟರನ್ನೂ ಓಡಿಸಿ ಬಿಟ್ಟಿದ್ದೇವೆ ಎಂದು ಕಾಫಿ ತೋಟಗಳ ಎಲ್ಲ ಸಾಹುಕಾರರೂ ಅಂದುಕೊಂಡು ಆರಾಮವಾಗಿದ್ದರೆ ಕಮ್ಯುನಿಷ್ಟ್ ಕಣ್ಣನ್ ಮಗನ ಹೆಣ ಪೇಟೆಯ ಹಾಳು ಬಾವಿಯಲ್ಲಿ ಸಿಕ್ಕಿತ್ತು.ಆತ ಇಸ್ಪೇಟ್ ಆಡಿ ಹಣ ಹಂಚುವಾಗ ಜಗಳವಾಗಿ ಕೊಲೆಯಾಗಿ ಹೋದ ಎಂದು ಆತನ ದೇಹವನ್ನು ಮಹಜರ್ ಮಾಡಿ ಮಣ್ಣು ಮಾಡಿ ಎಷ್ಟೋ ದಿನಗಳಾಗಿತ್ತು.ಆತ ಕೊಲೆಯಾಗಿದ್ದು ಕೊಡಗಿಂದ ಗಡೀಪಾರಾದ ಕಣ್ಣನ್ ಗೆ ತಿಳಿಯಲೇ ಇಲ್ಲವಲ್ಲ ಎಂದು ಎಲ್ಲರೂ ಬೇಜಾರು ಮಾಡಿ ಕೊಂಡಿದ್ದರು.ಕಮ್ಯುನಿಷ್ಟಾದರೂ ತಂದೆ ತಂದೆಯೇ ಅಲ್ಲವೇ ಎಂದು ಎಲ್ಲರಿಗೂ ಕರುಳು ಚುರ್ ಎಂ‍ದಿತ್ತು.

 ಪಾಳು ಬಾವಿಯಲ್ಲಿ ಕೊಲೆಯಾಗಿ ಎಷ್ಟೋ ಕಾಲವಾದರೂ ನಾವು ಆ ಬಾವಿಯ ಪಕ್ಕದಿಂದ ಬೆಳಗಿನ ಹೊತ್ತು ಅರಬಿ ಮದರಸಕ್ಕೆ ನಡೆದು ಹೋಗುವಾಗ ವಿಚಿತ್ರವಾಗಿ ಗಾಳಿ ಬೀಸುತ್ತಿತ್ತು.ಆ ಬಾವಿಯ ಪಕ್ಕದಲ್ಲಿ ಒಂದು ಗೋಳಿಯ ಮರ ಬೇರೆ. ಪಿಶಾಚಿ ಕಾಟ ಬರಬಾರದೆಂದು ಯಾರೋ ಬಿಳಿಯ ಬಟ್ಟೆಯೊಂದನ್ನು ಗೋಳಿ ಮರದ ತುದಿಗೆ ಕಟ್ಟಿದ್ದರು.ಬೆಳಗೆಯೇ ಗಾಳಿ ಬೀಸುವಾಗ ಆ ಬಟ್ಟೆ ಪಟ ಪಟ ಹೊಡೆಯುತ್ತಾ ನಾವು ಹೆದರಿ ಖುರಾನಿನ ಸಾಲುಗಳನ್ನ ಮನಸಲ್ಲೇ ಪಠಿಸುತ್ತಾ ಓಡಿಬಿಡುತ್ತಿದ್ದೆವು.ಜೊತೆಗೆ ನಡೆಯುತ್ತಿದ್ದ ಸಣ್ಣ ಹುಡುಗಿಯರು ಬೇರೆ ಹೆದರಿ ಕಂಗಾಲಾಗಿ ನಮ್ಮ ಕೈ ಹಿಡಿಯುತ್ತಿದ್ದರು .

 ಸಂಜೆ ಶಾಲೆ ಮುಗಿಸಿ ಹೋಗುವಾಗ ಮುಳುಗುವ ಸೂರ್ಯನ ಬೆಳಕಲ್ಲಿ ಪಟಪಟ ಹೊಡೆಯುವ ಬಿಳಿಯ ಬಟ್ಟೆ.ನಮ್ಮ ಚೀಲದೊಳಗೆ ಕನ್ನಡ ಪಾಠ ಪುಸ್ತಕ ಮಗ್ಗಿ ಪುಸ್ತಕ ಅರಬಿ ಪುಸ್ತಕ ಮಲಯಾಳದ ಧರ್ಮಕರ್ಮಗಳ ಪುಸ್ತಕ.ತಲೆಗೆ ಹಾಕುವ ಬಟ್ಟೆ ,ಜೊತೆಗೆ ಹುಣಸೆ ಬೀಜ,ಚಕ್ಕೋತದ ಹಣ್ಣು ಎಲ್ಲಕ್ಕು ಮಿಗಿಲಾಗಿ ಬಾವಿಯಲ್ಲಿ ಕೊಲೆಯಾದ ಕಣ್ಣನ್ ಪುತ್ರ.ಜೀವವೇ ಬೇಡದವರಂತೆ ನಾವು ಮತ್ತೆ ಓಡಲು ಶುರು ಮಾಡುತ್ತಿದ್ದೆವು.ಎಷ್ಟು ಓಡಿದರೆ ಈ ಹೆದರಿಕೆ ಮುಗಿಯುವುದು ಎಂದು ಗೊತ್ತಾಗುತ್ತಿರಲಿಲ್ಲ.

 ಆಗ ಹಾರಂಗಿ ಅಣೆಕಟ್ಟೆ ಬೇರೆ ಕಟ್ಟುತ್ತಿದ್ದರು.ಅಣೆ ಕಟ್ಟೆಗೆ ಸಣ್ಣ ಮಕ್ಕಳನ್ನು ಹಿಡಿದು ಬಲಿ ಕೊಡುತ್ತಾರೆ ಎಂದು ಬೇರೆ ಹೆದರಿಸಿದ್ದರು.ಹಾಗಾಗಿ ನಾವು ಒಬ್ಬರ ಕೈಯನ್ನೊಬ್ಬರು ಬಿಡದೆ ಹಿಡಕೊಂಡು ನಡೆಯುತ್ತಿದ್ದೆವು.ಆಗ ಸೇನೆಯ ಟ್ರಕ್‌ಗಳು ಸೈನಿಕರಿಗೆ ತರಭೇತಿ ಕೊಡಲು ಆ ಅಡ್ಡಾದಿಡ್ಡಿ ಟಾರು ರೋಡಿನಲ್ಲಿ ಸಾಲಾಗಿ ಹೋಗುತ್ತಿದ್ದವು.ಈ ಟ್ರಕ್ ಗಳಲ್ಲೇ ಮಕ್ಕಳನ್ನು ಹಿಡಿದು ಕೊಂಡು ಹೋಗುತ್ತಾರೆ ಎಂದು ಬೇರೆ ಯಾರೋ ಹೇಳುತ್ತಿದ್ದರು. ಈ ಟ್ರಕ್ ಗಳ ಸಾಲು ಕಂಡೊಡನೆ ನಾವು ತಲೆ ತಗ್ಗಿಸಿ ನಿಂತಲ್ಲೇ ನೆಲ ನೋಡುತ್ತ ಪುಟ್ಟ ಗಿಡಗಳಂತೆ ಸ್ತಬ್ಧರಾಗುತ್ತಿದ್ದೆವು.ಅವು ದಾಟಿದ ಮೇಲೆ  ಮೆಲ್ಲನೆ ಚಲಿಸುತ್ತಿದ್ದೆವು.

 ಕಾಫಿ ತೋಟದ ಬಿಡಾರ ತಲುಪುವ ಮೊದಲು ನಾವು ಕುಂಜಪ್ಪ ಗೌಡರ ಒಂಟಿ ಮನೆಯನ್ನು ದಾಟಿ ಹೋಗಬೇಕಾಗಿತ್ತು.ಕುಂಜಪ್ಪ ಗೌಡರಿಗೆ ಲಕ್ವ ಹೊಡೆದು ಅವರು ಹಗಲು ರಾತ್ರಿ ವಿಕಾರವಾಗಿ ಕೂಗಿಕೊಳ್ಳುತ್ತಿದ್ದರು.ಅವರು ಒಬ್ಬಳು ಕಿರಿಸ್ತಾನಿಯನ್ನು ಮದುವೆಯಾಗಿದ್ದರು. ಮದುವೆಯಾಗುವ ಮೊದಲು ಅವರು ಸೇನೆಯಲ್ಲಿ ಸೈನಿಕನಾಗಿ ಕೆಲಸ ಮಾಡಿದ್ದರು. ಮದುವೆಯಾಗಿ ಹತ್ತು ವರ್ಷಗಳಾದ ನಂತರ ಅವರಿಗೆ ಲಕ್ವ ಹೊಡೆದು ಸುಮಾರು ಇಪ್ಪತ್ತು ವರ್ಷಗಳ ಕಾಲ ಅವರು ವಿಕಾರವಾಗಿ ನರಳುತ್ತಾ ಬದುಕಿದ್ದರು.ನಾವು ಸಂಜೆ ಅವರ ತೋಟದ ಒಂಟಿಮನೆಯ ಮುಂದೆ ದಾಟುವಾಗ ಅವರ ಕೂಗು ನಮ್ಮ ಬಿಡಾರದವರೆಗೂ ನಮ್ಮನ್ನು ಹಿಂಬಾಲಿಸುತ್ತಿತ್ತು.ಅವರ ಮನೆಯ ಮುಂದೆ ಒಂದು ದಾಳಿಂಬೆ ಗಿಡ ಯಾವಾಗಲೂ ಹಣ್ಣುಗಳನ್ನು ತೂಗಿ ಕೊಂಡು ನಿಂತಿರುತ್ತಿತ್ತು.

 ಕಮ್ಯುನಿಷ್ಟ್ ಕಣ್ಣನ್ ನ ಮಗನ ಕೊಲೆಯಾಗುವುದಕ್ಕೆ ಸುಮಾರು ಒಂದು ತಿಂಗಳ ಹಿಂದೆ ಕುಂಜಪ್ಪ ತೀರಿ ಹೋಗಿದ್ದರು. ಅವರ ಶವದ ಅಂತ್ಯಕ್ರಿಯೆ ಅವರ ಬತ್ತದ ಗದ್ದೆಯಲ್ಲಿಯೇ ನಡೆದಿತ್ತು.ನಾವು ಸಂಜೆ ಶಾಲೆ ಮುಗಿಸಿ ಹೋಗುವಾಗ ಬತ್ತದ ಗದ್ದೆಯಲ್ಲಿ ಇನ್ನೂ ಹೊಗೆಯಾಡುತ್ತಿತ್ತು.ಆಮೇಲೆ ತುಂಬಾ ಸಲ ಅಣ್ಣ ಪೇಟೆಯಿಂದ ಬಟ್ಟೆ ಅಂಗಡಿಯ ಕೆಲಸ ಮುಗಿಸಿ ಕತ್ತಲಲ್ಲಿ ಬರುವಾಗ ಏದುಸಿರು ಬಿಡುತ್ತಾ ಓಡಿ ಬರುತ್ತಿದ್ದ.

 ಬತ್ತದ ಗದ್ದೆಯಿಂದ ಕುಂಜಪ್ಪಣ್ಣ ಕೂಗುವುದು ಕೇಳಿಸಿತು ಅನ್ನುತ್ತಿದ್ದ.ನಮಗೂ ಇರುಳೆಲ್ಲ ಆ ಸದ್ದು ಕೇಳಿಸುತ್ತಾ ಹೊರಗೆ ನೋಡಿದರೆ ಕ್ಷೀಣ ಚಂದ್ರನ ಬೆಳಕಿನಲ್ಲಿ ಜೋಡಿ ಪೇರಳೆ ಮರಗಳು ಅಲ್ಲಾಡುವುದು ಕೇಳಿಸುತ್ತಿತ್ತು

 ಪೇಟೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಬರುತ್ತಿದ್ದ ನನ್ನ ಅಣ್ಣ ಈಗ ದೂರದ ಅರೇಬಿಯಾ ಖಂಡದಲ್ಲಿದ್ದಾನೆ.ನಾನು ಕಾಫಿ ತೋಟಕ್ಕೆ ಕಾಲಿಡದೆ ನೂರಾರು ವರ್ಷಗಳಾದಂತೆ ಅನ್ನಿಸುತ್ತಿದೆ ‘ಅಚಲ್ ರಹೋ ರಾಜಾ’ ಎಂದು ಗಂಗೂತಾಯಿ ಜೈಜೈವಂತಿ ರಾಗದಲ್ಲಿ ಹಾಡುತ್ತಾ ಧೈರ್ಯ ಹೇಳುತ್ತಿದ್ದಾರೆ.

 ನನಗೆ ಯಾಕೋ ಕಮ್ಯುನಿಷ್ಟ್ ಕಣ್ಣನ್ ಕೊಲೆಯಾದ ಮಗನ ತಲೆಯನ್ನು ಬೊಗಸೆಯಲ್ಲಿ ಹಿಡಿದು ಕತ್ತಲಲ್ಲಿ ರೋಧಿಸುತ್ತಿದ್ದ ಸದ್ದು ಮತ್ತೆ ಕೇಳಿಸುತ್ತಿದೆ. ಇನ್ನು ಏನೂ ಕೆಟ್ಟದು ನಡೆಯದಿರಲಿ ಎಂದು ದೇವತೆಯರಲ್ಲಿ ಮೊರೆಯಿಡುತ್ತಿದ್ದೇನೆ.

Advertisements