ಕಿ.ರಂ.ನಾಗರಾಜ್ ಎಂಬ ಗಾರುಡಿಗ

 kiram.jpg

ಶ್ರಾವಣದ ಕೊನೆಯ ಶನಿವಾರ ಅಪರಾಹ್ನ. ಕೊತ್ತಂಬರಿ, ಮೆಂತೆ ಸೊಪ್ಪು, ಚೆಂಡು ಹೂ, ಸೇವಂತಿಗೆ. ಕುಂಕುಮ, ಅಗರಬತ್ತಿ ಮತ್ತು ಬೀದಿಯ ತುಂಬ ತಳ್ಳಾಡುತ್ತಾ ಹೆಗಲಿಗೆ ಒರೆಸಿ ಬೆವರುತ್ತ ನಡೆಯುತ್ತಿರುವ ಮಂದಿಯ ಮಿಶ್ರ ಪರಿಮಳ.

ಕಿ.ರಂ ನನ್ನನ್ನು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ತಾಗಿಕೊಂಡಿರುವ ರಸ್ತೆಗಳಲ್ಲಿ ನಡೆಸುತ್ತಿದ್ದರು. ಎಲ್ಲ ದೇವಾಲಯಗಳೂ, ದೇವ ದೇವತೆಗಳೂ ಹಳದಿಯ ಹೂಗಳಿಂದ ಅಲಂಕೃತಗೊಂಡು ಸಂಜೆಗೆ ಬರುವ ಭಕ್ತರನ್ನು ಕಾಯುತ್ತಿದ್ದವು.. ಈ ದೇವರುಗಳು, ಈ ದೇವತೆಗಳು, ಈ ತಳ್ಳುವ ಜನರು, ಈ ಅಗಾಧ ಮನುಷ್ಯವಾಸನೆ ಮತ್ತು ಹೂವುಗಳ ಪರಿಮಳ. ನಾವು ಅವೆನ್ಯೂ ರಸ್ತೆಯ  ಆ ಸಂಗೀತದ ಅಂಗಡಿಯನ್ನು ಅರಸಿಕೊಂಡು ನಡೆಯುತ್ತಿದ್ದೆವು. ಕಿ.ರಂ ಈ ಹಳೆಯ ಸಂಗೀತದ ಅಂಗಡಿಯ ಕಥೆಯನ್ನು ಹೇಳುತ್ತಿದ್ದರು. ಅವರು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ದೂರದ ಸೆಂಟ್ರಲ್ ಕಾಲೇಜಿಗೆ ದಿನವೂ ನಡೆಯುತ್ತಾ ದಾರಿಯಲ್ಲಿ ಸಿಗುವ ಈ ಸಂಗೀತದ ಅಂಗಡಿ, ಶೆಟ್ಟಿಯೊಬ್ಬ ಸಂಗೀತದ ಗ್ರಾಮೊಫೋನ್ ತಟ್ಟೆಗಳನ್ನು ಪೇರಿಸಿಟ್ಟು ಮಾರುತ್ತಾ, ಬಾಡಿಗೆಗೆ ನೀಡುತ್ತಾ ಕುಳಿತಿರುತ್ತಿದ್ದ. ಆತನ ಅಂಗಡಿಯ ಅಟ್ಟದಲ್ಲೊಂದು ಹಳೆಯ ಎಚ್ಎಂವಿ ಗ್ರಾಮೊಫೋನ್, ಹಿತ್ತಾಳೆಯ ಹಾನರ್ಿನ, ಎಪ್ಪತ್ತೇಳು ಆರ್.ಪಿ.ಎಂ. ವೇಗದ, ಕೈಯಿಂದ ಕೀಲಿ ತಿರುಗಿಸಿ ಹಾಡಿಸುವ ಈ ಗ್ರಾಮೊಫೋನ್ ಯಂತ್ರ ಆತನ ಅಂಗಡಿಯ ಅಟ್ಟದಲ್ಲಿ ದೇವತೆಯಂತೆ ಕೂತಿರುತ್ತಿತ್ತು. ಆತ ಕೇಳಿದವರಿಗೆ ಈ ಸಂಗೀತದ ತಟ್ಟೆಗಳನ್ನು ಬಿಕರಿ ಮಾಡುತ್ತಾ,  ಬಾಡಿಗೆಗೆ ಕೊಡುತ್ತಾ, ಕೊಳ್ಳಲಾಗದ ಹುಡುಗರಿಗೆ ಹಾಡಿಸಿ ಕೇಳಿಸುತ್ತಾ ಬೇಕಾದವರಿಗೆ ಗ್ರಾಮೊಫೋನಿನ ಮುಳ್ಳುಗಳ ಪೆಟ್ಟಿಗೆಯನ್ನು ಬೆಂಕಿ ಪೆಟ್ಟಿಗೆಯಂತೆ ಮಾರುತ್ತಾ ಅಂಗಡಿಯ ತುಂಬಾ ಓಡಾಡುತ್ತಾ ನಗುತ್ತಾ ಇರುತ್ತಿದ್ದ. ಈ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ದಿವಸ ಕಾಳಿಂಗರಾಯರು ಹಾಡಿದ ದೇಶಭಕ್ತಿ ಗೀತೆಗಳನ್ನು ಬೀದಿ ತುಂಬ ಕೇಳಿಸುವಂತೆ ಹಾಕುತ್ತಿದ್ದ. ಕಾಲೇಜಿಗೆ ಹೋಗುತ್ತಿದ್ದ ಕಿ.ರಂ ದಾರಿಯಲ್ಲಿ ಈ ಸಂಗೀತದ ಅಂಗಡಿಯಲ್ಲಿ ಅವಕ್ಕಾಗಿ ನಿಂತು, ಈ ತಟ್ಟೆಗಳನ್ನು ಮೋಹದಿಂದ ನೋಡಿ, ಪ್ರೀತಿಯಿಂದ ಸವರಿ, ದಿನಕ್ಕೊಂದರಂತೆ ಜೋಪಾನದಿಂದ ಕೊಂಡು ಹೋಗಿ ಕೇಳಿ ಹಿಂತಿರುಗಿಸಿ ಪುನಃ ಬಂದು ತೆಗೆದುಕೊಂಡು ಹೋಗುತ್ತಿದ್ದರು. ಅಪರೂಪಕ್ಕೆ ಈ ಶೆಟ್ಟಿಯ ಸಂಗೀತದ ಅಂಗಡಿಯಿಂದ ಮೊಜಾರ್ಟನ  ಸಿಂಪೋನಿ ಕೇಳಿ ಬರುತ್ತಿತ್ತು. ಈ ಶೆಟ್ಟರು ಮೊಜಾರ್ಟನ ಸಂಗೀತ ಕೇಳುತ್ತಾ ಕುಳಿತಿರುತ್ತಿದ್ದರು.

ಕಿ.ರಂ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಈ ಅಂಗಡಿಯನ್ನು ನೆನಪಿಸಿಕೊಳ್ಳುತ್ತಾ ನಾವಿಬ್ಬರೂ ಆ ನೆನಪ ವಾಸನೆ ಹಿಡಿದುಕೊಂಡು ಬೆಂಗಳೂರಿನ ಈ ಅಸಾಧ್ಯ ರಂಗು ರಂಗಿನ ಶ್ರಾವಣ ಶನಿವಾರ ಮಧ್ಯಾಹ್ನ ನಡೆಯುತ್ತಿದ್ದೆವು. ನಾವಿಬ್ಬರೂ ಆ ಅಂಗಡಿ ಈಗಲೂ ಹಾಗೇ ಇರಬಹುದು ಎಂದು ನಂಬಿರಲಿಲ್ಲ. ಅದರೂ ಇರಬಹುದು ಎಂಬ ಆಶೆಯಿಂದ ನಡೆಯುತ್ತಿದ್ದೆವು. ನನಗಾದರೂ ನೂರಾರು ವರುಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಮುತ್ತು ರತ್ನ ಮಾಣಿಕ್ಯಗಳನ್ನು ಬೀದಿಯಲ್ಲಿ ಕಡಲೇಪುರಿ ಮಾರುವಂತೆ ರಾಶಿ ಹಾಕಿ ಮಾರುತ್ತಿದ್ದ ಕಥೆಗಳು ನೆನಪಾಗಿ ಈ ಶೆಟ್ಟರ ಸಂಗೀತದ ಅಂಗಡಿ ಅಂತಹುದೇ ಒಂದು ಕತೆಯಂತೆ ಕಂಡು ಆದರೂ ಆಶೆಯಿಂದ ಕಿ.ರಂ ಅನ್ನು ನಂಬಿ ನಡೆಯುತ್ತಿದ್ದೆ. ನಂಬಿದವರಿಗೆ ಇಂಬು ಕೊಡುವ ದೈವದಂತೆ ‘ಕಿ.ರಂ’ ಆ ಅಂಗಡಿಯ ಮುಂದೆ ನಿಲ್ಲಿಸಿದರು. ಶೆಟ್ಟರು ತೀರಿ ಹೋದರೂ ಶೆಟ್ಟರ ಮಗ ಸಣ್ಣ ಶೆಟ್ಟರು ಡಾಳಾಗಿ ಹಣೆಗೆ ಉದ್ದದ ನಾಮವೊಂದನ್ನು ಎಳೆದುಕೊಂಡು ಬೆಳ್ಳಗೆ ನಗುತ್ತಾ ಅದೇ ಹಳೆಯ ಎಪ್ಪತ್ತೇಳು ಆರ್ಪಿಎಂ ಹಿತ್ತಾಳೆಯ ಹಾನರ್ಿನ ಗ್ರಾಮೊಫೋನ್ ಹಿಂದೆ ಕುಳಿತಿದ್ದರು. ಕಿ.ರಂ ತುಂಟನಂತೆ ನಗುತ್ತಿದ್ದರು. ಇಂತಹದೇ ಈ ಹೊತ್ತಿನಲ್ಲಿ ಇಲ್ಲೇ ಈ ಬೀದಿಯಲ್ಲಿ ಎಂದೆಂದಿಗೂ ಈ ಅಂಗಡಿ ಹೀಗೆ ಇರುತ್ತದೆ ಎಂದು ತಿಳೀದುಕೊಂಡ ಕಾಲಜ್ಞಾನಿಯಂತೆ ಇತ್ತು ಅವರ ಮುಖ. ಅವೆನ್ಯೂ ರಸ್ತೆಯಲ್ಲಿ ಶ್ರಾವಣದ ಕೊನೆಯ ಆ ಮಧ್ಯಾಹ್ನ ನಾನು ಮೊಜಾರ್ಟನ ಸಂಗೀತವನ್ನು ಮನಸಿನಲ್ಲೇ ಕೇಳಿಸಿಕೊಳ್ಳುತ್ತಿದ್ದೆ. ಕಿ.ರಂ ಕಾಲವನ್ನು ಕೀಲಿಕೈ ಹಾಕಿ ತೆರೆದು ತೋರಿಸುತ್ತಿದ್ದರು. ಆ ಅಂಗಡಿಯ ಶೆಟ್ಟರ ಮಗ, ಆ ಅಂಗಡಿಯ ಸಂಗೀತ, ಶ್ರಾವಣ ಶನಿವಾರದ ಆ ಜನ ಜಾತ್ರೆ, ಹೂ, ಕುಂಕುಮ, ಸಂಗೀತ, ಸುಗಂಧ ಹಾಗೂ ಮನುಷ್ಯವಾಸನೆ. ಕಿ.ರಂ ಏನೂ ಗೊತ್ತಿಲ್ಲದಂತೆ ನನಗೆ ಲೋಕ ದರ್ಶನ ಮಾಡಿಸಿ ನಗುತ್ತಾ ನಿಂತಿದ್ದರು.

‘ಮಳೆಗಾಲದಲ್ಲಿ ಕಡಲು ಹೇಗಿರುತ್ತದೆ?’ ಕಿ.ರಂ ಸಣ್ಣ ಹುಡುಗನ ಹಾಗೆ ಕೇಳಿದ್ದನ್ನೇ ಎರಡು ಮೂರು ಬಾರಿ ಕೇಳುತ್ತಿದ್ದರು. ನಾವು ನಡೆದೂ ನಡೆದೂ ಕೆ.ಆರ್. ಮಾರುಕಟ್ಟೆಯ ಅಂಚಿನಲ್ಲೇ ಸುತ್ತು ಹಾಕುತ್ತಾ ಹಾಗೇ ಕೋಟೆ ಪ್ರದೇಶದ ಹತ್ತಿರ ಬಂದು ಟಿಪ್ಪೂ ಸುಲ್ತಾನನ ಬೇಸಿಗೆ ಅರಮನೆಯ ಗೋಡೆಗೆ ಬೆನ್ನು ಕೊಟ್ಟು ಕೂತು ಬೀಡಿ ಸೇದುತ್ತಿದ್ದೆವು, ತಾನು ಬೆಂಗಳೂರಲ್ಲಿ ಇಲ್ಲವೇ ಇಲ್ಲ ಎನ್ನುವ ಹಾಗೆ ಈ ಚಂದದ ಮಣ್ಣಿನ ಅರಮನೆ ಯಾವುದೇ ಮಾನವ ಸಹವಾಸವಿಲ್ಲದೆ ಆರಾಮವಾಗಿ ಮಲಗಿತ್ತು. ದೇವನಹಳ್ಳಿಯ ಹೈದರಾಲಿ ಬೇಸಿಗೆಗೆ ಅಂತ ಬೆಂಗಳೂರಲ್ಲಿ ಕಟ್ಟಿಸಿದ ಮಣ್ಣಿನ ಗೋಡೆಯ ಮರದ ತೊಲೆಗಳ ಅರಮನೆ. ಈ ಅರಮನೆಯ ಮುಂದೆ ಹೂ ತೋಟವಿತ್ತಂತೆ. ಅಫಘಾನಿಸ್ತಾನದಿಂದ ತರಿಸಿ ನೆಡಿಸಿದ ಮರಗಳಿದ್ದುವಂತೆ. ಈಗ ನೋಡಿದರೆ ಎಲ್ಲವೂ ಸುಳ್ಳು ಎನ್ನುವ ಹಾಗೆ ಸುಮ್ಮನೆ ಮಲಗಿತ್ತು. ಕಿ.ರಂ ಈ ಅರಮನೆಯ ಗೋಡೆಗೆ ಬೆನ್ನು ತಾಗಿಸಿ ಕೂರಿಸಿಕೊಂಡು ಕತೆ ಹೇಳುತ್ತಿದ್ದರು. ಕಿ.ರಂ ಅಜಂತಾ ಎಲ್ಲೋರಾಕ್ಕೆ ಹೋಗುವ ಮೊದಲು ಬರುವ ಔರಂಗಾಬಾದಿನ ಕೋಟೆ ಕೊತ್ತಲಗಳ ಕುರಿತು ಮಾತನಾಡಲು ತೊಡಗಿದರು. ಈ ಇತಿಹಾಸ ಕತೆಗಳ ಕಾಲಾಂತರ ಹೀಗೆ ಹಿಗ್ಗಾಮುಗ್ಗಾ ಜಂಪ್ ಹೊಡೆಯುತ್ತಿರುವುದು ಕಂಡು ಕಂಗಾಲಾಗಿ ಕಿ.ರಂ ಅನ್ನೇ ನೋಡುತ್ತಾ ಕುಳಿತಿದ್ದೆ. ಪಕ್ಕದ ಗುಡಿಯಿಂದ ಹೆಣ್ಣು ಮಗಳೊಬ್ಬಳು ಚಂದವಾಗಿ ಹಾಡುತ್ತಿರುವ ದಾಸರ ಹಾಡು, ಬೆನ್ನ ಹಿಂದೆ ಬೇಸಿಗೆ ಅರಮನೆ, ಇಲ್ಲದ ಹೂ ತೋಟ, ಔರಂಗಾಬಾದಿನ ಕೋಟೆ ಕೊತ್ತಲಗಳ ಕಥೆಗಳು, ಸುಲ್ತಾನನೊಬ್ಬ ತನ್ನ ರಾಣಿಗಾಗಿ ತಾಜ್ಮಹಲಿನದ್ದೇ ರೀತಿ ಇರುವ ಗಾರೆಯ ಅರಮನೆ ಕಟ್ಟಿಸಿದನಂತೆ. ದೂರದಿಂದ ಹುಣ್ಣಿಮೆಯ ಬೆಳಕಿನಲ್ಲಿ ತಾಜ್ಮಹಲಿನ ಹಾಗೇ ಕಾಣುವುದಂತೆ. ಈ ಕಿ.ರಂ ಹೇಳುವ ಕಥೆಗಳು. ನಾನು ಸುಸ್ತಾಗಿ ಅವರನ್ನೇ ನೋಡಿದೆ. ಕೀರಂ ಇಳಿದು ಹೋಗಿದ್ದಾರೆ ಅನಿಸಿತು. ಹಾಗೇ ನೋಡಿದೆ. ಬೇಂದ್ರೆಯ ಕುರಿತು ಮಾತನಾಡುತ್ತಾ ಹಾಗೇ ಅತ್ತೇ ಬಿಡುವ ಕಿ.ರಂ ಎಲ್ಲರೂ ಕೀರಂ ಶರಾಬು ಕುಡಿದು ಹಾಗೆ ಮಾತನಾಡುತ್ತಾರೆ ಅನ್ನುತ್ತಾರೆ. ಕೀರಂ ಕುಡಿಯದೆಯೂ ಹಾಗೇ ಮಾತನಾಡುವುದನ್ನ  ನಾನು ಕಂಡಿದ್ದೆ. ಈಗ ನೋಡಿದರೆ ಕಿ.ರಂ ಏನೂ ಮಾತಾಡದೆಯೇ ಕುಡಿಯದೆಯೇ ಹಾಗೆ ಮೌನವಾಗಿ ಈ ಬೇಸಿಗೆಯ ಮಣ್ಣಿನ ಅರಮನೆಗೆ ಒರಗಿ ಕೂತು ಎಲ್ಲ ಇತಿಹಾಸ ಕಾಲ ಕಥಾವಳಿಗಳನ್ನು ಹುಡುಗನೊಬ್ಬನ ಮುಂದೆ ದಿಗಂಬರಗೊಳಿಸುತ್ತಾ ಬಟ್ಟೆ ತೊಡಿಸುತ್ತಾ ಕೂತಿದ್ದರು. ನಂತರ ನನ್ನನ್ನೇ ಕೇಳುತ್ತಿದ್ದರು. ‘ಮಳೆಗಾಲದಲ್ಲಿ ಕಡಲು ಹೇಗಿರುತ್ತದೆ?’

ಮಳೆಗಾಲದಲ್ಲಿ ಕಡಲು ಹೇಗಿರುತ್ತದೆ. ಹೇಗೆ ಹೇಳುವುದು? ಮಳೆ ಬರುತ್ತದೆ. ಆದರೆ ಕಡಲು ಹಾಗೇ ಇರುತ್ತದಾ? ಸಜ್ಜನ ಸಂತರಾದ, ಸದಾ ಉಟ್ಟದ್ದು ಕೊಳೆಯಾಗದಂತೆ ಎತ್ತಿ ಹಿಡಿದು ನಡೆಯುವ ಮಯರ್ಾದಾ ಪುರುಷರಾದ ನಾವು ಮಳೆಗಾಲದ ಕಡಲನ್ನು ಹೇಗೆಂದು ಈ ಕಿ.ರಂ ನಾಗರಾಜ್ಗೆ ವಿವರಿಸುವುದು. ಗೊತ್ತಾಗಲಿಲ್ಲ. ಆದರೂ ವಿವರಿಸಿದೆ. ಮಳೆಗಾಲದಲ್ಲಿ ಕಡಲು ಹಾಗೆ ಇರುವುದಿಲ್ಲ ಎಂದೂ ಇಬ್ಬರಿಗೂ ಗೊತ್ತಾಯಿತು.

‘ಕಾವ್ಯ ಬಂತು ಬೀದಿಗೆ’ ಎಂದು ಕವಿಗಳೆಲ್ಲರೂ ತರಾತರಿಯಿಂದ ಓಡಾಡುತ್ತಾ ಮೋಟುಗೋಡೆಗಳಿಗೆ ಕಾವ್ಯ ತಾಂಬೂಲ ಉಗಿದು ಕೆಂಪು ಮಾಡುತ್ತಾ ಇದ್ದಂತಹ ಹೊತ್ತಲ್ಲಿ ಹುಡುಗರಾದ ನಮ್ಮನ್ನು ಬೆಂಗಳೂರಿನ ಬೀದಿಗಳಲ್ಲಿ ನಡೆದಾಡಿಸಿ, ತನ್ನ ಮನೆಯ ಅಟ್ಟದಲ್ಲಿ ಪುಸ್ತಕಗಳ ಸಮುದ್ರದ ನಡುವೆ ಕೂರಿಸಿ ಪಂಪನನ್ನೂ, ಬೇಂದ್ರೆಯನ್ನೂ, ಅಲ್ಲಮನನ್ನೂ, ಶರೀಫನನ್ನೂ ಹಾಗೂ ಅಕ್ಕಮಹಾದೇವಿಯನ್ನೂ ಕಲಿಸಿ ಕೊಟ್ಟವರು ಕಿ.ರಂ. ಹಾಗೇ ಮಲ್ಲಿಕಾರ್ಜುನ ಮನ್ಸೂರರನ್ನೂ, ಕುಮಾರ ಗಂಧರ್ವರನ್ನೂ, ಆಲಿ ಆಕ್ಬರ್ ಖಾನ್ ರನ್ನೂ ಕೇಳಿಸಿದವರು. ನಮಗೆ ಅಮೀರ್ ಖಾನರ ಗಾಯನದ ಹುಚ್ಚು ಹಿಡಿದದ್ದು ಕಿ.ರಂ ಜೊತೆ ಅದನ್ನು ಕೇಳಿದಾಗ, ಬೇಂದ್ರೆಯ ಕಾವ್ಯ ಕೇಳಿ ಕುಣಿದದ್ದು ಕಿ.ರಂ ಅದನ್ನು ಓದಿದಾಗ. ಶಿಶುನಾಳ ಶರೀಫರ ಸಾಹೇಬರ ಹಾಡುಗಳನ್ನು ಎಲ್ಲರೂ ದಾಸರ ಪದದಂತೆಹಾಡುತಿದ್ದಾಗ ಕಿ.ರಂ ತನ್ನ ಗಾರುಡಿಯ ಪೆಟ್ಟಿಗೆ ತೆರೆದು ಅದರೊಳಗಿರುವ ಸ್ವತಃ ಶಿಶುನಾಳ ಶರೀಫ ಸಾಹೇಬರ ಮೊಮ್ಮಗ ಹಜರೆ ಹಾಡಿದ ತತ್ವ ಪದಗಳ ರೆಕಾರ್ಡಿಂಗ್ ಹಾಕಿ ಕೇಳಿಸಿದರು. ನಮಗೆ ನುರು ವರ್ಷಗಳ ಹಿಂದ ಶರೀಫ್ ಹಾಡುತ್ತಿದ್ದ ಹಾಗೆ ಅನಿಸುವ ಹಾಗೆ ಈ ಹಾಡುಗಳು ಶರೀಫರ ಮೊಮ್ಮಗನ ಬಾಯಿಯಿಂದ ಕೇಳುತ್ತಿತ್ತು. ಕಿ.ರಂ ತುಂಟನಂತೆ ಕಣ್ಣು ಮಿಟುಕಿಸಿ ಹಾಗೇ ಹಾಡಿನ ಕೂಡೆ ಧ್ವನಿ ಕೂಡಿಸುತ್ತಾ ಅಳು ಬಂದು ಕಣ್ಣು ಒರೆಸಿ ಕೊಳ್ಳುತ್ತಿದ್ದರು. ಕಿ.ರಂ ಮನೆಯ ಅಟ್ಟದಲ್ಲಿ ಶರೀಫರ ಹಾಡು, ಇಂತಹ ಹೊತ್ತು ಇಂತಹ ಗಳಿಗೆ, ಇಂತಹುದೇ ಮುಹೂರ್ತ. ಈ ಕಿ.ರಂ ಈ ನಾವು, ಈ ಶರೀಫ ಎಲ್ಲರೂ ಎಂದೆಂದಿಗೂ ಹೀಗೆ ಇರಲಿ ಎಂದು ಪ್ರಾಥರ್ಿಸುತ್ತಿದ್ದೆವು. ಆದರೆ ಹಾಡು ಕೇಳಿದ ಮೇಲೆ ಕಿ.ರಂ ‘ನಡೆಯೋ ದೇವರ ಚಾಕರಿಗೆ’ ಎಂದು ಹುಡುಗರಾದ ನಮ್ಮನ್ನು ಎಬ್ಬಿಸಿ ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡಿಸುತ್ತಿದ್ದರು.
ಬೆಂಗಳೂರಿನ ರಾತ್ರಿಗಳಲ್ಲಿ ರಾತ್ರಿಯ ಎಷ್ಟರ ಜಾವಕ್ಕೆ ಯಾವ ಬೀದಿಯ ಯಾವ ಮೂಲೆಯಲ್ಲಿ ಅತ್ಯುತ್ತಮ ಬೆಣ್ಣೆ ಇಡ್ಲಿ ಚಟ್ನಿ ಸಿಗುತ್ತದೆ ಎಂದು ಕಿ.ರಂಗೆ ಗೊತ್ತಿದೆ. ಹಾಗೇ ಬೆಂಗಳೂರಿನ ಅತ್ಯುತ್ತಮ ಪೂರಿ ಸಾಗು ಸಿಗುವ ಜಾಗ, ಹಾಗೇ ಖಾರದ ಪುಡಿ ಮಸಾಲೆ, ಹಾಗೇ ಗಂಧದ ಕಡ್ಡಿ ಹಾಗೇ ಅತ್ತರು ಎಲ್ಲವೂ ಎಲ್ಲಿ ಎಂದು ಕಿ.ರಂ ಗೆ ಗೊತ್ತು. ಅತ್ಯುತ್ತಮ ಕಾವ್ಯ ಎಲ್ಲಿದೆ ಎಂದು ತೋರು ಬೆರಳಿಂದ ಮುಟ್ಟಿ ಸಾಲುಗಳನ್ನು ತೋರಿಸುವಂತೆ ಕಿ.ರಂ ಎಂಬ ಈ ನಗರ ವಿಶೇಷ ಪರಿಣಿತಮತಿ ನಮಗೆ ಬೆಂಗಳೂರನ್ನು ತೋರಿಸಿದ್ದರು.
ಹದಿನಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಭೇಟಿ ಆದಾಗ ನಾನು ಮತ್ತು ಕಿ.ರಂ ಒಂದೇ ಸ್ಥಿತಿಯಲ್ಲಿದ್ದೆವು. ಕೀರಂ ಮಂಗಳೂರಿಗೆ ಬಂದಿದ್ದಾರೆ ಅಂತ ಗೊತ್ತಾಯಿತು. ಹೋಗಿ ನೋಡಿದರೆ ಹೋಟಲಿನ ಕೋಣೆಯೊಂದರಲ್ಲಿ ಮಂಗಳೂರಿನ ಬರಹಗಾರರು ಕಿ.ರಂ ಅನ್ನು ಮುತ್ತಿಕೊಂಡಿದ್ದರು. ಕುಡಿಸಿದರೆ ಕಿ.ರಂ ಸಾಹಿತ್ಯದ ಕುರಿತು ಇನ್ನೂ ಚೆನ್ನಾಗಿ ಮಾತನಾಡುತ್ತಾರೆ ಎಂಬ ಹನ್ನಾರದಿಂದ ಅವರೆಲ್ಲ ಕೂಡಿರುವಂತೆ ಕಂಡಿತು. ಮಾತನಾಡದೆ ಹಿಂದಕ್ಕೆ ಹೋಗಿ ಮಾರನೆಯ ಬೆಳಗ್ಗೆ ಬಂದು ನೋಡಿದೆ. ಕಿ.ರಂ ಸುಸ್ತಾಗಿದ್ದರು. ಇವರ ಸಾಹಿತಿಗಳ ಸಂಗ ಕಂಡು ಬೇಜಾರಾಗಿತ್ತು. ಬನ್ನಿ ಹೋಗೋಣ ಅಂತ ಹಳೆಯ ಬಂದರಿಗೆ ಹೋಗಿ ದೋಣಿಯಲ್ಲಿ ಕುಳಿತು ಗುರುಪುರ ನದಿಯನ್ನು ದಾಟಿ, ಬೆಂಗರೆಯಲ್ಲಿ ಇಳಿದು ಬೆಂಗರೆಯ ಮರಳ ರಾಶಿಯಲ್ಲಿ ಕಡಲನ್ನು ನೋಡುತ್ತಾ ಕುಳಿತೆವು. ಜನವರಿ ತಿಂಗಳ ಬೆಳಗಿನ ಮಂಜು ಕರಗಿ ಸೂರ್ಯ ಪ್ರಖರವಾಗಿ ಬೆಳ್ಳಗೆ ಮರಳಿನ ಮೇಲೆ ಉರಿಯುತ್ತಿದ್ದ. ಇಬ್ಬರಿಗೂ ಸೂರ್ಯನನ್ನು ತಡಕೊಳ್ಳಲಾಗದೇ ಪುನಃ ದೋಣಿ ಹತ್ತಿ ಹಿಂದಕ್ಕೆ ಬಂದು ಮಂಗಳೂರಿನ ಬೀದಿಗಳ ತುಂಬ ಅಲೆದಿದ್ದೆವು. ತಲೆ ‘ಧಿಂ’ ಅನ್ನುತ್ತಿತ್ತು. ತಲೆಯೊಳಗೆ ಬೆಂಗರೆಯ ಸೂರ್ಯ…. ಕಿ.ರಂ ರೈಲು ಹತ್ತಿ ಬೆಂಗಳೂರಿನ ಹೊರಟು ಹೋಗಿದ್ದರು. ಈಗ ಬೆಂಗಳೂರಲ್ಲಿ ಕುಳಿತು ಮಳೆಗಾಲದಲ್ಲಿ ಕಡಲು ಹೇಗಿರುತ್ತದೆ ಎಂದು ಕೇಳುತ್ತಿದ್ದರು.
ಕಿ.ರಂ ನಮಗೆ ದ್ರಾಕ್ಷಾರಸ, ಕಾವ್ಯ ಹಾಗೂ ಸಂಗೀತವನ್ನು ಕಲಿಸಿದವರು. ಸಂಗೀತದ ಅಂಗಡಿಯಲ್ಲಿ ತತ್ವಜ್ಞಾನವನ್ನೂ, ಸಾರಾಯಿಯ ಅಡ್ಡೆಯಲಲಿ ಕೈವಲ್ಯವನ್ನೂ ಹಾಗೂ ಕವಿತೆಗಳಲ್ಲಿ ಕುಣಿತವನ್ನೂ ತೋರಿಸಿಕೊಟ್ಟವರು. ಬಸವನಗುಡಿಯ ಗಾಂಧೀಬಜಾರ್ನಲ್ಲಿ ಪ್ರಾರ್ಥನಾ ಸ್ಥಳದಂತಿರುವ ಮಿಲಿಟರಿ ಹೊಟೇಲಿನಲ್ಲಿ ಕೂರಿಸಿಕೊಂಡು ರಾಗಿ ಮುದ್ದೆಯನ್ನು ಹೇಗೆ ಮುರಿದು ತಿನ್ನಬೇಕೆಂದು ತೋರಿಸಿಕೊಡುತ್ತಿದ್ದರು. ನಾನು ಮತ್ತೆ ಹುಡುಗನಾಗಿ ರಾಗಿ ಮುರಿಯುವ ಅವರ ಬೆರಳುಗಳನ್ನೇ ಅನುಕರಿಸುತ್ತಾ, ಮಾಂಸದ ಕೀಮಾ ಉಂಡೆಗಳನ್ನು ಜಗಿದು ಸಾರಿನಲ್ಲಿ ಗಂಟಲಿನೊಳಕ್ಕೆ ಇಳಿಸುತ್ತಿದ್ದೆ. ಪ್ರಾರ್ಥನಾ ಸ್ಥಳದಂತಹ ಮಾಂಸಾಹಾರಿ ಹೋಟೆಲು, ಸಸ್ಯಹಾರಿ ಯಾದ ಕಿ.ರಂ ಪ್ರಿತಿಯಿಂದ ಒತ್ತಾಯ ಪೂರ್ವಕವಾಗಿ ನಡೆಸಿಕೊಂಡು ತಂದು ಕೂರಿಸಿ ಮಾಂಸದ ಸಾರು ಮುದ್ದೆಯನ್ನು ತಿನ್ನಿಸುತ್ತಿದ್ದರು. ನಾನು ಜೀವಮಾನದಲ್ಲಿ ಮೊದಲ ಬಾರಿಗೆ ಎಂಬಂತೆ ತಿನ್ನುತ್ತಾ ಬೆವರುತ್ತಿದ್ದೆ. ಮತ್ತು ಬೆವರುತ್ತಾ ತಿನ್ನುತ್ತಿದ್ದೆ. ಕಿ.ರಂ ನೋಡುತ್ತಿದ್ದರು. ನನಗೆ ಏನೂ ಹೇಳಲಾಗದೆ ಹಾಗೆ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು. ‘ಈ ಕಾವ್ಯದಂತಹ ಕೀಮಾ ಉಂಡೆಗಳು’ ಎಂದು ತೊದಲಬೇಕು ಅನಿಸುತ್ತಿತ್ತು.
 

Advertisements