ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು

waynad2.jpg

 ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು ಕುಳಿತಿರುವೆ.ಇಳಿಸಲಾಗುತ್ತಿಲ್ಲ.ಅಷ್ಟು ಘಾಟು.

ಇಳಿಸದಿರಲಾಗುವುದೂ ಇಲ್ಲ. ಹಳೆಯದನೆಲ್ಲ ಮರೆತಿರುವೆಯೇನು ಎನ್ನುವಂತೆ ಬಟ್ಟಲು ಎದುರು ಕೂತಿದೆ.ಒಮ್ಮೆ ಒಂದು ಸ್ವಪ್ನದಂತೆ,ಒಮ್ಮೆ ಒಂದು ಪ್ರಪಾತದಂತೆ,ಒಮ್ಮೆ ಹೆಂಗಸೊಬ್ಬಳ ದೀರ್ಘ ನಿಟ್ಟುಸಿರಂತೆ,ಒಮ್ಮೆ ತರಳೆಯೊಬ್ಬಳ ಬೆರಳು ಕಚ್ಚಿದ ನಾಚಿಕೆಯಂತೆ ಮೈಯೆಲ್ಲ ಹರಿದಾಡುವ ಮದ್ಯಸಾರ. ನಿನ್ನನ್ನುಹೇಗೆ ಸೇವಿಸದಿರಲಿ ಎಂದು ದಿಟ್ಟಿಸುತ್ತೇನೆ.

 ನಾನು ಪ್ರೀತಿಸಿದ ಹುಡುಗಿಯನ್ನು ಒಂದು ದೇವತೆಯ ಚಿತ್ರದ ಎದುರು ನಿಂತು ಮದುವೆ ಮಾಡಿಕೊಂಡು ಅವಳ ಹೆತ್ತವರು ಒಡಹುಟ್ಟಿದವರಿಂದ ತಲೆಮರೆಸಿಕೊಂಡು ಅದರ ನಡುವೆ ರೇಷನ್ ಕಾರ್ಡ್ ಬೇರೆ ಮಾಡಿಸ ಬೇಕಾಗಿ ಬಂದು ಸಣ್ಣ ವಯಸ್ಸಿನವನಾದ ನಾನು ಕುಟುಂಬದ ಯಜಮಾನ ಎಂದೂ ಅವಳು ಯಜಮಾನತಿಯೆಂದೂ ಫೊಟೋ ಹಾಕಿಸಿಕೊಂಡು ಅಕ್ಕಿ ಸಕ್ಕರೆ ತಂದು ಸಂಸಾರ ಮಾಡುವಾಗ ನಾವು ಸಣ್ಣದಾಗಿರುವಾಗ ಅಂಗಡಿ ಆಟ ಆಡುತ್ತಿದ್ದುದು ನೆನಪಾಗಿ ನಗು ಬಂದರೂ ವಿಷಯದ ಗಂಭೀರತೆಯನ್ನು ಅರಿತು ಸುಮ್ಮನಾಗುತ್ತಿದ್ದೆವು.

mr-and-mrs2.jpg

ಆಮೇಲೆ ಅವಳೇ ಧೈರ್ಯ ಹೇಳಿ ಅಪ್ಪ ಅಮ್ಮನ ಹತ್ತಿರ ಕರೆದು ಕೊಂಡು ಹೋಗಿದ್ದಳು.ನಾನು ಅಪರಾದಿಯಂತೆ ಹಿಂಬಾಲಿಸಿದ್ದೆ.

ರಾತ್ರಿ ಪ್ರಪಾತವೊಂದರ ಹತ್ತಿರ ಬಸ್ಸು ಇಳಿದು ಬೆಳದಿಂಗಳಲ್ಲಿ ಕೇರಳದ ಆ ಕಾನನದ ನಡುವೆ ಕಾಡುಮಲೆ ಎಂದು ಕರೆಯಲ್ಪಡುವ ಆ ಗುಡ್ಡಹತ್ತಿದ್ದೆವು.ಗುಡ್ಡದ ತುದಿಯಲ್ಲಿ ಬೆಳದಿಂಗಳಲ್ಲಿ ಶಿಲುಬೆಯೊಂದು  ಕಾಣುತ್ತಿತ್ತು.ಮೂಗಿಗೆ ಲಾವಂಚದ ಪರಿಮಳ.ಲಾವಂಚದ ತೋಟದಲ್ಲಿ ರಾತ್ರಿ ಹೊತ್ತು ಬೆಳದಿಂಗಳಲ್ಲಿ ಕಾಡಾನೆಗಳು ಸಂಚರಿಸುವುದನ್ನ ಕಾಣಬಹುದು ಅಂದಿದ್ದಳು. ಶಿಲುಬೆ ಮಲೆಯನ್ನ ಬರಿಗಾಲಲ್ಲಿ ಹತ್ತಿರುವೆ ಅಂದಿದ್ದಳು. ಆ ರಾತ್ರಿ ಕಾಲಿಗೆ ತಾಗುತ್ತಿದ್ದ ಒಂದೊಂದು ತಿರುವಿಗೂ ಒಂದೊಂದು ಹಳ್ಳಕ್ಕೂ ಒಂದೊಂದು ಕಥೆ ಹೇಳಿ ರೋಮಾಂಚನಗೊಂಡು ಯಾರು ಏನು ಅಂದು ಕೊಳ್ಳುವರು ಎನ್ನುವ ಎಗ್ಗಿಲ್ಲದೇ ಸಾಗುತ್ತಿದ್ದಳು.’ಹೆಣ್ಣಿನ ವಿಜಯದ ಸಂಭ್ರಮ ಮತ್ತು ಗಂಡಿನ ನಾಚಿಕೆಗೇಡು’ ಎಂದು ಮನಸ್ಸಲ್ಲೇ ಅಂದುಕೊಂಡು ನಾನು ನಡೆಯುತ್ತಿದ್ದೆ.wayanad.jpg

 ಆ ಇರುಳು ನಾನು ಅಂದುಕೊಂಡಂತೆ ಅಪಾಯಗಳೇನೂ ಸಂಭವಿಸಲಿಲ್ಲ.ಅವರೆಲ್ಲ ನನ್ನನ್ನು ಒಬ್ಬ ಮಲಯಾಳ ಗೊತ್ತಿಲ್ಲದ ಒಬ್ಬ ವೀರಕನ್ನಡಿಗನಿರಬೇಕು ಅಂದು ಕೊಂಡಿದ್ದರು.ಆದರೆ ಅದು ತಪ್ಪು ಎಂಬ ಅರಿವಾಗಿ ಆನಂತರ ಸಹಜವಾಗಿ ನಿದ್ದೆ ಹೋಗಿದ್ದರು. ಈ ಹುಡುಗಿ ಆ ಬೆಳದಿಂಗಳ ರಾತ್ರಿಯಲ್ಲಿ ಚಿಮಿಣಿ ದೀಪ ಕೈಯಲ್ಲಿ ಹಿಡಿದು ಆ ಚಂದದ ಮಣ್ಣಿನ ಮನೆಯ ಒಂದೊಂದು ಮೂಲೆಯನ್ನೂ ತೋರಿಸಿದ್ದಳು.ಗೋಡೆಯ ಕಿಂಡಿಗಳನ್ನೂ ಕೂಡಾ. ತಾನು ಅಡಗಿ ಕೂರುತ್ತಿದ್ದ ಮೂಲೆ,ತಾನು ಬೆರಳು ಕೊಯಿದುಕೊಂಡ ಈಳಿಗೆ ಮಣೆ, ತಾನು ಎಡವಿ ಬಿದ್ದ ಅರೆಯುವ ಕಲ್ಲು.ತನ್ನ ಮುದ್ದಿನ ಬೆಕ್ಕು ಮರಿಯಿಟ್ಟ ಜಾಗ,ಹಿಂದೆ ಯಾವಾಗಲೋ ತನ್ನನ್ನು ಹಿಂಬಾಲಿಸಿಕೊಂಡು ಬಂದ ಹುಡುಗನೊಬ್ಬನಿಗೆ ತನ್ನ ತಾಯಿ ಬಿಸಿ ನೀರು ಎರೆಚಿದ ಚೊಂಬು ಎಲ್ಲ ತೋರಿಸಿ ಪಿಸುಗುಟ್ಟಿದ್ದಳು. ನಾನು ಬೆವೆತು ಬಿಟ್ಟಿದ್ದೆ.

 ಮಾರನೆಯ ಬೆಳಗು ಆಕೆಯ ಬಲಿಷ್ಠನೂ ನೀಳಕಾಯನೂ ಆದ ಅಣ್ಣನೊಬ್ಬ ಕೈಯಲ್ಲಿ ಕತ್ತಿ ಹಿರಿದು ಕೊಂಡು ನನ್ನನ್ನು ಹಿಂಬಾಲಿಸಲು ಹೇಳಿದ್ದ. ನಾನು ವಧಾಸ್ಥಾನಕ್ಕೆ ಹೋಗುತ್ತಿರುವ ಖೈಧಿಯಂತೆ ಆತನನ್ನು ಹಿಂಬಾಲಿಸಿದ್ದೆ. ಇನ್ನೇನು ಕತ್ತಿ ನನ್ನ ಕತ್ತರಿಸಿತು ಅಂದುಕೊಳ್ಳುವಷ್ಟರಲ್ಲಿ ಆತ ಗಿಡವೊಂದನ್ನು ತೋರಿಸಿ ಇದು ನಿಮ್ಮೂರಲ್ಲಿ ಇದೆಯಾ ಎಂದು ಕೇಳುತ್ತಿದ್ದ,ಹಣ್ಣೊಂದನ್ನು ಕಿತ್ತು ಕೊಡುತ್ತಿದ್ದ.ಎದುರಿಗೆ ಬಂದವರಲ್ಲಿ ಕುಶಲ ವಿಚಾರಿಸಿ ತನ್ನ ತಂಗಿಯನ್ನು ಹಾರಿಸಿಕೊಂಡು ಹೋದವನು ಇವನೇ ಎಂದು ಪರಿಚಯ ಮಾಡಿಕೊಡುತ್ತಿದ್ದ. ಕರೆದವರ ಬಿಡಾರಗಳೊಳಗೆ ನುಗ್ಗಿ ಮರಗೆಣಸನ್ನೂ ಒಣಮಾಂಸವನ್ನೂ ಖಾಲಿ ಟೀಯನ್ನೂ ಸೇವಿಸಿ ನಾವು ಮುಂದೆ ಸಾಗುತಿದ್ದೆವು.ಅಷ್ಟು ಹೊತ್ತಿಗೆ ಬೆಳಗು ಏರಿ ನನಗೆ ಆ ಕಾಡುಮಲೆಯೆಂಬ ಊರು ಬರಿಯ ಪ್ರಪಾತಗಳಿಂದಲೂ,ಹಳ್ಳಗಳಿಂದಲೂ ಮತ್ತು ಒಳ್ಳೆಯ ಆಹಾರಗಳಿಂದಲೂ ಕೂಡಿದೆ ಎಂಬ ಅರಿವಾಗಿ ನಿರಾತಂಕವಾಗಿತ್ತು.

 ಆನಂತರ ಆದಿವಾಸಿ ಹಾಡಿಯೊ೦ದರಲ್ಲಿ  ಗುಡಿಸಲಿನ ಎದುರಿನ ಸ್ವಚ್ಛ ನಿರಭ್ರ ನೆಲದಲ್ಲಿ ನಮ್ಮನ್ನು ಕುಳ್ಳಿರಿಸಿ ಗೇರು ಹಣ್ಣಿನ ಸಾರವನ್ನು ಕುಡಿಸಿದ್ದರು. ಅದೇ ನಾನು ಈ ಮೊದಲು ಹೇಳಿದ  ಒಮ್ಮೆ ಒಂದು ಸ್ವಪ್ನದಂತೆ,ಒಮ್ಮೆ ಒಂದು ಪ್ರಪಾತದಂತೆ,ಒಮ್ಮೆ ಹೆಂಗಸೊಬ್ಬಳ ದೀರ್ಘ ನಿಟ್ಟುಸಿರಂತೆ,ಒಮ್ಮೆ ತರಳೆಯೊಬ್ಬಳ ಬೆರಳು ಕಚ್ಚಿದ ನಾಚಿಕೆಯಂತೆ ಮೈಯೆಲ್ಲ ಹರಿದಾಡುವ ಮದ್ಯಸಾರ. 

 ಆ ಮದ್ಯಸಾರ ಮೈಮನಸುಗಳಲ್ಲಿ ಹರಿದಾಡಲು ತೊಡಗಿ ನಾನು ಆ ಅನಿರ್ವಚನೀಯ ಸ್ವಪ್ನಸ್ಥಿತಿಯಲ್ಲಿ ಏರಿದ್ದ ಇಳಿದಿದ್ದ ಕಣಿವೆ ಪ್ರಪಾತಗಳನ್ನು ಸಲೀಸಾಗಿ ಮತ್ತೆ ಹತ್ತಿ ಇಳಿದಿದ್ದೆ.ಎದುರುಗೊಂಡವರ ಜೊತೆ ಸಲೀಸಾಗಿ ನಕ್ಕಿದ್ದೆ.ಒಂದು ರೀತಿಯ ನವದೀಕ್ಷಾ ಸಾರದಂತಹ ಗೇರು ಹಣ್ಣಿನ ಸಾರ.

 ಅದು ಈಗ ಮತ್ತೆ ಬಟ್ಟಲಲ್ಲಿ ಬಂದು ಕುಳಿತಿದೆ.ಹಳೆಯದೆಲ್ಲ ಮರೆತಿಯೇನು ಎನ್ನುವಂತೆ.ಏನೂ ಮಾತನಾಡದೆ ಸುಮ್ಮನೆ ಒಪ್ಪಿಸಿಕೊಳ್ಳುತ್ತಿರುವೆ.

Advertisements