ಎಸ್. ಮನೋರಮಾ ಅವರು ಕಳ್ಳನನ್ನು ಹಿಡಿದ ಕಥೆ

manorama.jpg

ತುರ ಗೆರಿಲ್ಲಾ ಹೋರಾಟಗಾರನ ಹಾಗೆ ಮೈಸೂರಿನ ಒಂದೊಂದು ರಸ್ತೆಯ ಮೇಲೆ ಒಂದೊಂದು ಸಂಜೆ ದಾಳಿ ನಡೆಸಿ ಸಾಲುಮರಗಳ ಸೊಂಟ ಮುರಿಯುತ್ತಿರುವ ಹಠಾತ್ ಮಳೆ. ರೆಂಬೆ ಕೊಂಬೆಗಳನ್ನು ಹೂವಿನ ಸಮೇತ ಕಳೆದುಕೊಂಡು ಆಕ್ರಂದಿಸುತ್ತಿರುವ ಗುಲ್ಮೊಹರ್ ಮರಗಳು. ಈ ಆಕ್ರಮಣದ ನಡುವೆ ಹೊಂಚು ಹಾಕಿಕೊಂಡು ಹೋಗಿ ಹಳೆಯ ಕಾಲದ ಮನೆಯೊಂದರಳಗೆ ಕುಳಿತು ನಾನು ಎಸ್. ಸಾವಿತ್ರಮ್ಮನವರು ಹಾಡುತ್ತಿರುವ ಹಳೆಯ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಮೈಸೂರಿನ ಪುರಾತನ ಎಲ್.ಎಂ.ಪಿ. ಡಾಕ್ಟರ್ ಶ್ರೀಕಂಠಯ್ಯನವರ ಮುದ್ದಿನ ಮಗಳು ಎಸ್. ಸಾವಿತ್ರಮ್ಮ  `come on come on my dear Krishna, sit down sit down my dear Krishna’ಎಂದು ಆ ಮಳೆಯಲ್ಲಿ ಹಾಡುತ್ತಿದ್ದರು. ಸಾವಿತ್ರಮ್ಮನವರಿಗೆ ತಮಗೆ ಈಗ ಎಷ್ಟು ವರ್ಷ ಎನ್ನುವುದು ಮರೆತು ಹೋಗಿದೆ. ಆದರೆ ಹುಟ್ಟಿದ್ದು ಶ್ರೀಮತಿ ಇಂದಿರಾ ಗಾಂಧಿ ಹುಟ್ಟಿದ ಒಂದು ದಿನ ಹಿಂದೆ ಅಥವಾ ಒಂದು ದಿನ ಮುಂದೆ ಅಂತ ಕರಾರುವಕ್ಕಾಗಿ ಹೇಳುತ್ತಾರೆ.

ಸಾವಿತ್ರಮ್ಮನವರು ಭಗವಾನ್ ಸಾಯಿಬಾಬಾರ ಭಕ್ತರು.’ನಿನ್ನೆ ತಾನೇ ರಾತ್ರಿ ಕನಸಿನಲ್ಲಿ ಸಾಯಿಬಾಬಾ ಬಂದಿದ್ದರು. ಬಂದು ನಕ್ಕು ಮಾತನಾಡಿಸಿದರು, ಪ್ರತೀ ಗುರುವಾರ ಆರರಿಂದ ಏಳರವರೆಗೆ ಭಜನೆಮಾಡು, ನಿನಗೆ ಇನ್ನೂ ಆಯಸ್ಸು ಬಹಳ ಇದೆ. ನಾಲ್ಕು ಜನರಿಗೆ ಒಳ್ಳೆಯದು ಮಾಡು ಎಂದು ಹೇಳಿ ಹೋದರು’ ಎಂದು ಸಾವಿತ್ರಮ್ಮನವರು ಹೇಳಿ ಇನ್ನೊಂದು ಭಜನೆ ಹೇಳಲು ಶುರುಮಾಡಿದರು ಬಹುಶಃ ಅದು ಶುಕ್ರವಾರ ಅನ್ನುವುದನ್ನು ಅವರು ಮರೆತಿದ್ದ ಹಾಗಿತ್ತು.

ಆದರೆ ನಾನು ಅಲ್ಲಿಗೆ ಹೋಗಿದ್ದು ಸಾವಿತ್ರಮ್ಮನವರನ್ನು ಮಾತನಾಡಿಸಲು ಆಗಿರಲಿಲ್ಲ. ನಾನು ಕಾಣಬೇಕಾಗಿದ್ದುದ್ದು ಸಾವಿತ್ರಮ್ಮನವರ ಮಗಳು ಮನೋರಮಾ ಅವರನ್ನು. ಮನೋರಮಾ ಅವರಿಗೆ ಈಗ 65 ವರ್ಷ. ಹೊಸತಾಗಿ ಕನ್ನಡದಲ್ಲಿ ಕಥೆಗಳನ್ನು ಬರೆಯಲು ಶುರುಮಾಡಿದ್ದರು. ಅವರ ಕಥೆಯೊಂದರ ಹಸ್ತಪ್ರತಿಯನ್ನು ಓದಿದ ನನಗೆ ಅವರನ್ನು ಕಾಣಬೇಕು ಅನ್ನಿಸಿತ್ತು. ‘ನಮ್ಮಮನೆ ಸಣ್ಣಮನೆ, ನೀವು ಬಂದರೆ ಮುಜುಗರವಾಗುತ್ತದೆ. ಬೇರೆ ಎಲ್ಲಾದರೂ ಸಿಗೋಣ’ ಎಂದು ಮನೋರಮಾ ಅವರು ನಮ್ಮ ಭೇಟಿಯ ದಿನವನ್ನು ಮುಂದಕ್ಕೆ ದೂಡುತ್ತಾ ಬಂದಿದ್ದರು. ಕೊನೆಗೆ ನಾನೇ ಹಠ ಮಾಡಿ ನಿಮ್ಮನ್ನು ನಿಮ್ಮ ಮನೆಯಲ್ಲೇ ಕಾಣಬೇಕು ಎಂದು ಮುಲಾಜಿಲ್ಲದೆ ಹೇಳಿ ಹೋಗಿಬಿಟ್ಟಿದ್ದೆ. ಹೋಗಿ ನೋಡಿದರೆ ಅವರ ಮನೆ ದೊಡ್ಡದಾಗಿಯೇ ಇತ್ತು. ಅದೂ ಅಲ್ಲದೆ ಅವರ ತಾಯಿ ಸಾವಿತ್ರಮ್ಮ ಬಲು ಚೆನ್ನಾಗಿ ಭಜನೆ ಹಾಡುತ್ತಿದ್ದರು. ಆ ವಯಸ್ಸಿನಲ್ಲೂ ಅವರ ಹಾಡಿನ ದಾಟಿ ಹೈಸ್ಕೂಲು ಹುಡುಗಿಯ ಹಾಡಿನ ಹಾಗೇ ಇತ್ತು.

ನನಗೆ ಎಸ್. ಮನೋರಮಾ ಅವರ ಪರಿಚಯವಾಗಿದ್ದು ಬಹಳ ಆಕಸ್ಮಿಕವಾಗಿ. ಮೈಸೂರು ಆಕಾಶವಾಣಿಯ ಬೆಳಗಿನ ನೇರ ಪ್ರಸಾರದ ಅಚಿಣಠತಿ ಒಂದರಲ್ಲಿ ‘ಅಕಸ್ಮಾತ್ತಾಗಿ ನಡುರಾತ್ರಿಯಲ್ಲಿ ನಿಮ್ಮ ಮನೆಗೆ ಕಳ್ಳ ನುಗ್ಗಿದರೆ ಏನು ಮಾಡುತ್ತೀರಿ? ನುಗ್ಗಿದಾಗ ನೀವು ಏನು ಮಾಡಿದಿರಿ?’ ಎಂದು ಕಳ್ಳರಿಂದ ನಡುರಾತ್ರಿಯಲ್ಲಿ ಮನೆ ದೋಚಿಸಿಕೊಂಡವರ ಜೊತೆ ಹರಟೆ ಹೊಡೆಯುತ್ತಾ ಇದ್ದೆ. ಎಲ್ಲರೂ ಕಳ್ಳ ನುಗ್ಗಿದ್ದನ್ನು ಒಂದು ತರಹದ ಸಂಭ್ರಮದಲ್ಲೇ ವಿವರಿಸುತ್ತಿದ್ದರು. ಕಳ್ಳನ ಬಣ್ಣ, ಕಳ್ಳನ ಚಹರೆ, ಕಳ್ಳನ ಹೆಜ್ಜೆಯ ಸದ್ದು, ಆತನ ಮಾತುಕತೆ, ಪೊಲೀಸರಿಂದ ಹೊಡೆತ ತಿಂದಾಗ ಆತ ಕಿರುಚಿಕೊಂಡಾಗ ತಮಗೆ ತಲ್ಲಣವಾಗಿದ್ದು ಇತ್ಯಾದಿಗಳನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದರು. ಅದರಲ್ಲಿ ಹಗಲು ಹೊತ್ತಲ್ಲಿ, ನಡು ಮಧ್ಯಾಹ್ನ ಹೊತ್ತಲ್ಲಿ ಕಳ್ಳರಿಂದ ದೋಚಿಸಿಕೊಂಡವರೂ ಇದ್ದರು. ಮನೆಗೆ ನುಗ್ಗಿದ್ದ ಕಳ್ಳರೂ ಆ ದಿನ ಮಾತನಾಡಿದ್ದರೆ ಕಳ್ಳತನದ ಎಲ್ಲ ಮಗ್ಗುಲುಗಳೂ ಪ್ರಸಾರವಾಗುತ್ತಿತ್ತು ಎಂದು ನನಗೆ ಅನ್ನಿಸುತ್ತಿತ್ತು. ಆದರೆ ಕಳ್ಳರನ್ನು ಹೇಗೆ ಕಂಡುಹಿಡಿಯುವುದು?

ಅದಾದ ಮೂರು ದಿನಗಳ ನಂತರ ನನ್ನ ಹೆಸರಿಗೆ ದೊಡ್ಡದಾದ ಪತ್ರವೊಂದು ಬಂದಿತ್ತು. ಅದನ್ನು ಎಸ್. ಮನೋರಮಾ ಬರೆದಿದ್ದರು. ತಮ್ಮ ಹೆಸರಿನ ಮುಂದೆ ಆವರಣದಲ್ಲಿ 65 ವರ್ಷ ಎಂದು ಬರೆದಿದ್ದರು. ಆ ಕಾಗದದಲ್ಲಿ ಅವರು ಒಬ್ಬ ಕಳ್ಳನನ್ನು ಪೊಲೀಸರು ಹಿಡಿಯಲು ತಾವೂ ಕಾರಣವಾಗಿದ್ದನ್ನು ಬರೆದಿದ್ದರು. `ಪಾಪ ಈಗ ಆ ಕಳ್ಳ ಎಲ್ಲಿದ್ದಾನೋ ಗೊತ್ತಿಲ್ಲ ಆದರೆ ಇದನ್ನು ನಿಮ್ಮ ಜೊತೆ ರೇಡಿಯೋದಲ್ಲಿ ಮಾತನಾಡಬೇಕು ಅಂತ ಅನ್ನಿಸುತ್ತಿತ್ತು. ಆಗಲಿಲ್ಲ. ಈಗ ಅದನ್ನು ಬರೆದುಕಳಿಸುತ್ತಿದ್ದೇನೆ’ ಎಂದು ಬರೆದಿದ್ದರು. ಅದನ್ನು ಓದಿದ ನನಗೆ ಒಂದು ಒಳ್ಳೆಯ ಕಥೆ ಓದಿದ ಹಾಗಾಗಿತ್ತು. ಅವರಿಗೆ ಪತ್ರವೊಂದನ್ನು ಬರೆದು `ನಿಮ್ಮ ಕನ್ನಡ ಚೆನ್ನಾಗಿದೆ ನಿಮಗೆ ಒಳ್ಳೆಯ ನಿರೂಪಣಾ ಶಕ್ತಿ ಇದೆ. ನೀವು ಯಾಕೆ ಕಥೆಗಳನ್ನು ಕಾದಂಬರಿಗಳನ್ನು ಬರೆಯಬಾರದು. ಕನ್ನಡಕ್ಕೆ ನಿಮ್ಮಂತಹ ಕಥೆಗಾರರ ತುರ್ತು ಅಗತ್ಯವಿದೆ’ ಎಂದು ಬರೆದಿದ್ದೆ ಅದಕ್ಕೆ ಅವರು ಉತ್ತರಿಸಿ ‘ಹತ್ತು ಪುಟಗಳು, ಐದು ಪುಟಗಳು, ಬಿಳಿ ಹಾಳೆಯ ಒಂದೇ ಮಗ್ಗುಲು ಹೀಗೆಲ್ಲಾ ಬರೆದು ಗೊತ್ತಿಲ್ಲ. ಬರೆಯುತ್ತೇನೆ. ಬರೆದಾಗ ಕಳಿಸುತ್ತೇನೆ. ಈಗ ನನಗೆ ಸಮಯವೇ ಇಲ್ಲ. ಹಾಸಿಗೆ ಹಿಡಿದಿರುವ ತಾಯಿಯ ಆರೈಕೆಗೇ ಸಮಯ ಸಾಲುವುದಿಲ್ಲ ಕ್ಷಮಿಸಬೇಕು. ನಿಮಗೂ ನಿಮ್ಮ ಮಕ್ಕಳಿಗೂ ದೇವರು ಆರೋಗ್ಯ ಕೊಡಲಿ’ ಎಂದು ಬರೆದಿದ್ದರು.
ಮತ್ತೊಮ್ಮೆ ಹಠಾತ್ತಾಗಿ ಹುಡುಕಿಕೊಂಡು ಬಂದು ಸಂಕೋಚದಲ್ಲಿ ಮಾತನಾಡಿ ಹೆಚ್ಚು ಏನೂ ಹೇಳದೆ ಹೋಗಲು ಹೊರಟಿದ್ದರು.

ಅವರು ನಡೆಯುವುದಕ್ಕೆ ಕೊಂಚ ಕಷ್ಟ ಪಡುತ್ತಿದ್ದರು. ಹಾಗಾಗಿ ನಾನು ಬೈಕಿನ ಹಿಂದೆ ಅವರನ್ನು ತಾಯಿಯಂತೆ ಕೂರಿಸಿಕೊಂಡು ಮಾರುಕಟ್ಟೆಯಲ್ಲಿ ಬಿಟ್ಟಿದ್ದೆ. ಅವರಿಗೆ ಮಾರುಕಟ್ಟೆಯಿಂದ ಹಾಲು ತರಕಾರಿ ಮೊಸರು ಹಣ್ಣು ಕೊಳ್ಳಬೇಕಿತ್ತು. ಜೊತೆಯಲ್ಲಿ ಪೋನ್ ಬಿಲ್ಲು, ಲೈಟ್ ಬಿಲ್ಲು, ಬ್ಯಾಂಕಿನ ಪಾಸ್ ಪುಸ್ತಕ ಇತ್ಯಾದಿ ಕೆಲಸಗಳೂ ಇತ್ತು. ಬೈಕಿನಿಂದ ಇಳಿದವರು ನನಗಾಗಿ ಕಿತ್ತಳೆ ಹಣ್ಣುಗಳನ್ನು ಕೊಂಡು ಕೊಳ್ಳಲು ನೋಡಿದರು. ನಾನು `ಬೈಕಿನಲ್ಲಿ ಹಣ್ಣುಗಳನ್ನು ತೂಗಿಸಿಕೊಂಡು ಹೋಗಲು ಆಗುವುದಿಲ್ಲ ಬಿದ್ದು ಹೋಗುತ್ತದೆ’ ಎಂದು ಸುಳ್ಳು ಹೇಳಿದ್ದೆ. ನನ್ನ ತಾಯಿಯನ್ನು ಜೀವನದಲ್ಲಿ ಇದುವರೆಗೆ ಒಂದು ಬಾರಿಯೂ ಬೈಕಿನ ಹಿಂದೆ ಕೂರಿಸಲು ಆಗಿರಲಿಲ್ಲ. ಮನೋರಮಾ ಅವರು ಕೂತರಲ್ಲ ಎಂದು ಖುಷಿಯಾಗಿತ್ತು.

ಮೊನ್ನೆ ಶುಕ್ರವಾರ ಗೆರಿಲ್ಲಾ ಮಳೆಯ ನಡುವೆ ಮನೋರಮಾ ಅವರ 85 ವರ್ಷದ ತಾಯಿ ಸಾವಿತ್ರಮ್ಮ ಭಜನೆಗಳನ್ನು ಹಾಡಿ ಮುಗಿಸಿ ಪ್ರಸಾದ ಕೊಟ್ಟಮೇಲೆ ನಾನು ಮನೋರಮಾ ಅವರಿಗೆ ನಿಮ್ಮ ಕಥೆ ಹೇಳಿ ಎಂದು ಹೇಳಿದ್ದೆ. ‘ಯಾವುದು ಆ ಕಳ್ಳನ ಕಥೆಯಾ?’ ಅಂತ ಕೇಳಿದರು. ‘ಇಲ್ಲ ನಿಮ್ಮ ಕಥೆ’ ಅಂತ ಹೇಳಿದೆ. ಅದಕ್ಕಾಗಿಯೇ ಕಾದು ಕುಳಿತಿದ್ದರೋ ಎನ್ನುವ ಹಾಗೆ ಮನೋರಮಾ ಅವರು ತಮ್ಮ ಕಥೆ ಹೇಳಿದ್ದರು.

ಮೈಸೂರು ಪ್ರಾಂತ್ಯದಲ್ಲಿ ಆ ಕಾಲದಲ್ಲೇ ಪ್ರಖ್ಯಾತ ವೈದ್ಯರಾಗಿದ್ದ ಶ್ರೀಕಂಠಯ್ಯನವರ ಮೊಮ್ಮಗಳು ಎಸ್. ಮನೋರಮಾ. ಅವರ ತಾಯಿ ಮೊದಲು ಹೇಳಿದ ಸಾವಿತ್ರಮ್ಮ. ತಂದೆ ನಾಗರಾಜರಾವ್ ರೈಲ್ವೆ ಇಲಾಖೆಯಲ್ಲಿದ್ದರು. ಇವರಿಬ್ಬರ ಏಳು ಜನ ಮಕ್ಕಳಲ್ಲಿ ಮೂರನೆಯವರು ಮನೋರಮಾ. ಸಾವಿತ್ರಮ್ಮನ ಅಕ್ಕನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮೂರೂವರೆ ವರ್ಷದ ಮನೋರಮಾ ಎಂಬ ಮುದ್ದಿನ ಮಗಳನ್ನು ಅಕ್ಕನಿಗೆ ಸಾಕಲು ಕೊಟ್ಟುಬಿಟ್ಟರು. ಮನೋರಮಾ ಆವತ್ತಿನಿಂದ 1996ರ ತನಕ ಮೈಸೂರಿನಿಂದ ದೂರವಾಗಿ ಎಲ್ಲೆಲ್ಲೋ ಬದುಕಿದ್ದರು. ಬೆಂಗಳೂರು, ನವದೆಹಲಿ, ನಾಗಪುರ ಹೀಗೆ  ಹೀಗೆ ಎಲ್ಲೆಲ್ಲೋ ಬದುಕಿದ್ದರು. ತಾಯಿಯ ಆರೋಗ್ಯ ತೀರಾ ಹದಗೆಟ್ಟಾಗ ಮೈಸೂರಿಗೆ ಮರಳಿ ಬಂದಿದ್ದರು. `ಪುಟ್ಬಾಲ್ ತರಹ ನನ್ನ ಲೈಫು’ ಅಂತ ಹೇಳಿ ತಮ್ಮ ಕಥೆ ಮುಗಿಸಿದ್ದರು. ಮನೋರಮಾ ಅವರು ಮದುವೆ ಆಗಿಲ್ಲ. ಅವರಿಗೆ ಚಿಕ್ಕ ವಯಸ್ಸಿನಿಂದಲೂ ಆಂಜನೇಯನನ್ನು ಕಂಡರೆ ಪ್ರೀತಿ. ಈಗಲೂ ಅವರ ಕತ್ತಿನಲ್ಲಿ ಆಂಜನೇಯನ ಮೂತರ್ಿ ಇದೆ. ಅದನ್ನು ಸವರುತ್ತಾ ಅವರು ಅವರ ಕಥೆಯನ್ನು ಹೇಳುತ್ತಿದ್ದರು.

ಮನೋರಮಾ ಅವರನ್ನು ಸಾಕಿದ ದೊಡ್ಡಮ್ಮ ಇದ್ದದ್ದು ಬೆಂಗಳೂರಿನ ಮಾವಳ್ಳಿಯಲ್ಲಿ. ಅಲ್ಲಿನ ಆಂಜನೇಯ ದೇವಸ್ಥಾನದ ಅರ್ಚಕರಿಗೆ ಆಗಲೇ ಎಂಬತ್ತು ವರ್ಷವಾಗಿತ್ತಂತೆ. ಏನು ಕಾಯಿಲೆಯಾದರೂ ಆಂಜನೇಯನ ಮೂರ್ತಿಯನ್ನು ತಬ್ಬಿಕೊಂಡು ಪ್ರಾರ್ಥಿಸಿ ಗಟ್ಟಿಮುಟ್ಟಾಗಿದ್ದರಂತೆ. ಅದನ್ನು ಕಂಡ ಬಾಲಕಿ ಮನೋರಮಾ ಆಂಜನೇಯನಿಗೆ ಒಲಿದು ಈಗಲೂ ಮದುವೆಯಾಗದೆ ಉಳಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಬಾಡಿಗೆಗಿದ್ದ ಮನೆಯ ಹೆಸರು ಮಾರುತಿ ನಿಲಯ. ಎಸ್.ಎಸ್.ಎಲ್.ಸಿ. ಮುಗಿಸಿದ ಬಳಿಕ ಮೂವತ್ತೊಂದು ವರ್ಷ ಟೀಚರಾಗಿ ಕೆಲಸ ಮಾಡಿದ್ದು ಮಾರುತಿ ವಿದ್ಯಾಲಯ ಅವರು ಕೆಲಸ ಶುರುಮಾಡಿದಾಗ ಬರುತ್ತಿದ್ದ ಸಂಬಳ ಎಂಬತ್ತೊಂಬತ್ತು ರೂಪಾಯಿ. ಅದರಲ್ಲಿ ತಮ್ಮ ತಂಗಿಯಂದಿರಿಗೆ ತಿಂಗಳಿಗೆ ಹತ್ತತ್ತು ರೂಪಾಯಿ ಓದಲು ಕಳಿಸುತ್ತಿದ್ದರಂತೆ. ಪ್ರಖ್ಯಾತ ವೈದ್ಯರಾಗಿದ್ದರೂ ಸರಳವಾಗಿ ಬದುಕಿದ್ದ ತಾತ ಶ್ರೀಕಂಠಯ್ಯನವರಿಗೆ ಹೋಟೆಲ್ಲಿನಲ್ಲಿ ತಿಂಡಿ ತಿಂದು ಖುಷಿಯಾಗಿರಲು ಬೇಡ ಬೇಡವೆಂದರೂ ತಿಂಗಳಿಗೆ ಹತ್ತು ರುಪಾಯಿ ಕಳಿಸುತ್ತಿದ್ದರಂತೆ. ಮೂರು ಪೈಸೆ ಬಸ್ ಚಾರ್ಜ್ ಉಳಿಸಿ ಮಾವಳ್ಳಿಯಿಂದ ವಿಲ್ಸನ್ ಗಾರ್ಡನ್ ವರೆಗೆ ನಡೆದುಕೊಂಡೇ ಶಾಲೆಗೆ ಪಾಠ ಹೇಳಲು ಹೋಗುತ್ತಿದ್ದರಂತೆ. ಉಳಿಸಿದ್ದ ಹಣದಲ್ಲಿ ಸೀರೆ ಬಟ್ಟೆ ದೊಡ್ಡಮ್ಮನ ಆಸ್ಪತ್ರೆ ಖರ್ಚು, ತಮ್ಮಂದಿರ ತಂಗಿಯರ ಮಕ್ಕಳ ಬಾಣಂತನಕ್ಕೆ ಉಡುಗೊರೆ ಇತ್ಯಾದಿಗಳಿಗೆ ಖರ್ಚು ಮಾಡುತ್ತಿದ್ದರಂತೆ.
ಮನೋರಮಾ ಅವರು ದೆಹಲಿಗೆ ತಮ್ಮ ಅಕ್ಕನ ಬಾಣಂತನಕ್ಕೆ ಹೋಗಿದ್ದರಂತೆ. ಆಗ ಅವರು ಇನ್ನೂ ಬಾಲಕಿ. ‘ಮನೋರಮಾ ಡೆಲ್ಲಿಗೆ ಹೋದ್ಲು’ ಅಂತ ಶಾಲೆಯಲ್ಲೆಲ್ಲ ಸುದ್ಧಿಯಾಗಿತ್ತಂತೆ. ಒಂದು ಸಲ ಡೆಲ್ಲಿಯಲ್ಲಿ ಅಕ್ಕನ ಮನೆಯಲ್ಲಿ  ಮನೋರಮಾ ಅವರ ಮರೆವಿನಿಂದಾಗಿ ಒಲೆಯಲ್ಲಿದ್ದ ಹಾಲು ಉಕ್ಕಿ ಹೋಯಿತಂತೆ. ಆದರೂ ಯಾರೂ ಬೈಯಲಿಲ್ಲವಂತೆ. ಅದನ್ನು ಯೋಚಿಸಿಕೊಂಡು ಹೇಳುವಾಗ ಮನೋರಮಾ ಅವರಿಗೆ ಈಗಲೂ ಅಳುಬರುತ್ತಿತ್ತು. ‘ನನ್ದೇ ತಪ್ಪುಸಾರ್ ಆದರೂ ಯಾರೂ ಬೈಯ್ಯಲೇ ಇಲ್ಲ’ ಅಂತ ಹೇಳುವಾಗ ಅವರ ಕಣ್ಣಂಚು ಒದ್ದೆಯಾಗುತ್ತಿತ್ತು. ಡೆಲ್ಲಿಯಲ್ಲಿ ಅಕ್ಕನ ಮನೆಯಲ್ಲಿ ಉಪ್ಪಿನಕಾಯಿ ಹಾಕುವ ಮರಗಿ ಇರಲಿಲ್ಲ. ಮೈಸೂರಿನಿಂದ ಒಯ್ಯಲು ಮರೆತು ಹೋಗಿ ಉಪ್ಪಿನಕಾಯಿ ಹೇಗೆ ಹಾಕುವುದು ಎಂದು ಒದ್ದಾಡುತ್ತಿದ್ದರಂತೆ. ಒಂದು ದಿನ ಬೀದಿಯಲ್ಲಿ ಯಾವನೋ ‘ಮರಗಿ ಮರಗಿ’ ಅಂತ ಮಾರಿಕೊಂಡು ಹೋಗುತ್ತಿದ್ದನಂತೆ. ಮನೋರಮಾ ಅವನನ್ನು ಕರೆದರಂತೆ. ಆತ ಬಂದವನು ಬುಟ್ಟಿಯಿಂದ ಕೋಳಿಗಳನ್ನು ತೆಗೆದು ಮನೆಯೊಳಕ್ಕೆ ಬಿಟ್ಟನಂತೆ. ‘ನೋಡಿ ಆತ ‘ಮುರ್ಗಿ ಮುರ್ಗಿ’ ಅಂತ ಹೇಳಿದ್ದು ನನಗೆ ‘ಮರಗಿ ಮರಗಿ’ ಅಂತ ಕೇಳಿ ಎಷ್ಟು ತಪ್ಪಾಯಿತು. ಆದರೂ ನನಗೆ ಯಾರು ಬೈಯಲಿಲ್ಲ ಎಂದು ಮನೋರಮಾ ಮತ್ತೆ ಸಂಕಟ ಪಡುತ್ತಿದ್ದರು.

ನನಗೆ 50 ವರ್ಷಗಳ ಹಿಂದೆ ಬಾಲಕಿ ಮನೋರಮಾಳ ಆ ಭಯಂಕರ ಪ್ರಮಾಧದಿಂದಾಗಿ ದೆಹಲಿಯ ಆ ಮನೆಯೊಳಗೆ ನುಗ್ಗಿದ್ದ ಕೋಳಿಗಳ ಚಿತ್ರ ಕಣ್ಮುಂದೆ ಬರುತ್ತಿತ್ತು. ಮಳೆ ಮತ್ತೆ ಆವರಿಸಿಕೊಳ್ಳಲು ಮೈಸೂರಿನ ಮೇಲೆ ಹೊಂಚು ಹಾಕುತ್ತಿತ್ತು.

‘ಅದು ಹೋಗಲಿ ಬಿಡಿ. ನೀವು ಮೈಸೂರಿನಲ್ಲಿ ಕಳ್ಳನನ್ನು ಹಿಡಿದ ಆ ಕಥೆಯನ್ನು ಇನ್ನೊಮ್ಮೆ ಹೇಳಿ’ ಎಂದು ಕೇಳಿಕೊಂಡೆ. ಮನೋರಮಾ ಅವರು ಹೇಳಿದರು. `ಪಾಪ ಆ ಕಳ್ಳ ಈಗ ಹೇಗಿದ್ದಾನೋ ಎಲ್ಲಿದ್ದಾನೋ ನೋಡಲು ಬೆಳ್ಳಗಿದ್ದ, ಕೆಂಪು ಟೋಪಿ ಹಾಕಿದ್ದ. ಅವನನ್ನು ಹಿಡಿಸಿಕೊಟ್ಟು ಒಂದು ತಿಂಗಳು ನಾನು ನರಳಿದೆ. ಬೀದಿಯಲ್ಲಿ ಎಲ್ಲಿ ಹೋದರೂ ಆತ ಕಾಣುತ್ತನಾ ಎಂದು ಹೆದರಿಕೊಂಡು ನಡೆಯುತ್ತಿದ್ದೆ’ ಎಂದರು. ‘ಆತ ನೋಡಲು ನಿಜವಾಗಿ ಹೇಗಿದ್ದ ಹೇಳಿ’ ಎಂದು ಕೇಳಿದೆ.

‘ಪಾಪ, ನಿಮ್ಮ ಹಾಗೆಯೇ ಇದ್ದ’ ಎಂದು ಮನೋರಮಾ ಮುಗ್ಧವಾಗಿ ಹೇಳಿದರು.

ನಾನೂ, ಸಾವಿತ್ರಮ್ಮನವರೂ ಅಲ್ಲಿ ನೆರೆದಿದ್ದ ಮನೋರಮಾ ಅವರ ಅಣ್ಣನ ಮಕ್ಕಳೂ ತಂಗಿಯ ಮಕ್ಕಳೂ ಎಲ್ಲರೂ ಜೋರಾಗಿ ನಕ್ಕೆವು. ಮನೋರಮಾ ಅವರಿಗೆ ನಾವು ನಕ್ಕದ್ದೇಕೆ ಅಂತ ಗೊತ್ತಾಗಲಿಲ್ಲ. `ಪಾಪ ಮಳೆ ಮತ್ತೆ ಬರೋಹಾಗೆ ಇದೆ. ಹೇಗೆ ಹೋಗುತ್ತೀರಿ, ಕೊಡೆ ಕೊಡಲಾ’ ಅಂತ ಕೇಳಿದರು. ಬೈಕಿನಲ್ಲಿ ಕೊಡೆ ಹಿಡಿದುಕೊಂಡು ಹೋಗಲಾಗುವುದಿಲ್ಲ ಎಂದು ಪಾಪ ಅವರಿಗೆ ಗೊತ್ತಾಗಲಿಲ್ಲ.

ಮನೋರಮಾ ಅವರಿಗೆ ಈಗ ಇದನ್ನು ಬರೆಯುತ್ತಿರುವ ಹೊತ್ತಲ್ಲಿ ಇನ್ನೊಮ್ಮೆ ಪೋನ್ ಮಾಡಿ ‘ನಿಮ್ಮ ಬಗ್ಗೆ ಬರೆಯುತ್ತಿದ್ದೇನೆ, ಆಶೀರ್ವಾದ ಮಾಡಿ’ ಎಂದು ಹೇಳಿದೆ. ‘ಪಾಪ ನೀವು ದೊಡ್ಡವರು ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ನಾನು ಹೇಗೆ ಆಶೀರ್ವದಿಸಲಿ’ ಅಂದರು.

`ಆದರೆ ನೀವು ಕಳ್ಳನನ್ನು ಹಿಡಿದ ಕಥೆಯನ್ನು ಬರೆಯೋದಿಲ್ಲ. ಅದನ್ನು ನೀವೇ ಬರೆಯಬೇಕು ಅದು ನಿಮ್ಮ copy right ಎಂದು ಹೇಳಿ ಪುನಃ ಬರೆಯಲು ಕೂತೆ.

ಎಸ್.ಸಾವಿತ್ರಮ್ಮನವರು ಹಾಡಿದ ಕೃಷ್ಣ ಭಜನೆ ಕೇಳಬೇಕಾದರೆ ಇಲ್ಲಿ ಕ್ಲಿಕ್ ಮಾಡಿ:

http://www.youtube.com/watch?v=fP1kCaorZ68]

 

Advertisements