ಷಿಲ್ಲಾಂಗಿನಲ್ಲಿ ಕನ್ನಡದ ಇಬ್ಬರು ಹೆಣ್ಣುಮಕ್ಕಳನ್ನು ನೆನೆಯುತ್ತ

      barapani_b.jpg

 ಮೇ ಮಾಸದ ಈ ಇರುಳಿನಲ್ಲಿ ಒಬ್ಬನೇ ಕುಳಿತು ಮೇಘಾಲಯದ ಕನಸು ಕಾಣುತ್ತಿರುವೆ. ಶಾಂತಾ ಅವರ ನೆನಪಾಗುತ್ತಿದೆ. ಶಾಂತಾ ಕನ್ನಡದ ಸಂಪಿಗೆ ಘಾಟಿನಂತಹ ಕವಿ ಪು.ತಿ.ನ. ಅವರ ಮಗಳು.ಕೇಂದ್ರ ಜಲ ಮಂಡಲಿಯಲ್ಲಿ ಬಲು ದೊಡ್ಡ ಇಂಜಿನಿಯರ್ ಆಗಿದ್ದ ಶಾಂತಾ ಅವರ  ಗಂಡ ಶ್ರೀ ರಂಗಾಚಾರ್ ಷಿಲ್ಲಾಂಗ್ ನಲ್ಲಿರುವಾಗ ತೀರಿ ಹೋಗಿದ್ದರು. ತನ್ನ ಗಂಡನ ಆತ್ಮ ಅಲ್ಲೇ ಇದೆ ಎಂದು ನಂಬಿರುವ ಶಾಂತಾ ಇನ್ನು ನೂರಾರು ವರ್ಷವಾದರೂ ಅಲ್ಲೇ ಇರುತ್ತಾರೆ ಅನಿಸುತ್ತದೆ.

 ಷಿಲ್ಲಾಂಗ್ ನ ನೋಂಗ್ರಿಮ್ ಹಿಲ್ಸ್ ನಲ್ಲಿ ಶಾಂತಾ ಬಾಡಿಗೆಗಿರುವ ದೊಡ್ಡ ಗಾಜಿನ ಮರದ ಮನೆ.ಅವರು ಧೈರ್ಯಕ್ಕೆ ಎಂದು ಇಟ್ಟುಕೊಂಡಿರುವ ಕೋಂಗ್ ಎಂಬ ಖಾಸೀ ಬುಡಕಟ್ಟಿನ ಹೆಂಗಸು. ಬಿಟ್ಟು ಎಂಬ ಕೆಲಸದ  ಅಸ್ಸಾಮೀ ಹುಡುಗ.ಎಲ್ಲರೂ ನೆನಪಾಗುತ್ತಿದ್ದಾರೆ.

shantha.jpg

ಗೋಕುಲಾಷ್ಟಮಿಯ ದಿನ ಅಂತ ಕಾಣುತ್ತೆ. ಶಾಂತಾ ಅವರ ಮನೆಯಲ್ಲಿ ಹಣ್ಣು ಹಂಪಲುಗಳ ಗೊಂಚಲನ್ನು ಮಾಡಿಗೆ ನೇತು ಹಾಕಿದ್ದರು. ನಮ್ಮನ್ನು ಕದ್ದು ತಿನ್ನಲು ಹೇಳಿದ್ದರು.ನಾನು  ದಿನವೂ ತಿನ್ನುವ ಶೈಲಿಯನ್ನು ಬದಲಾಯಿಸಿ ಕದ್ದು ತಿನ್ನುವಂತೆ ತಿನ್ನಲು ನೋಡಿ ಆಗದೆ ಪೆಚ್ಚಾಗಿ ತಿಂದಿದ್ದೆ.ಅವರು ನಕ್ಕಿದ್ದರು.ಕೃಷ್ಣನಂತೆ ಕದ್ದು ತಿನ್ನುವುದು ಹೇಗೆ ಎಂದು ತೋರಿಸಿದ್ದರು. ಗಣಪತಿ ಹಬ್ಬಕ್ಕೆ ಚಕ್ಕುಲಿ ಉಂಡೆ ಪಾನಕ ಮೋದಕ ಅಂತೆಲ್ಲ ತಯಾರಿಸಿ ಗಣಪತಿ ಕೂರಿಸಿದ್ದಲ್ಲಿಗೆ ಕೊಟ್ಟು ಕಳುಹಿಸಿದ್ದರು.ಮೇಲುಕೋಟೆ ವೈರಮುಡಿ ಉತ್ಸವದ ದಿನದಂದೇ ತನ್ನ ತಂದೆ ಪು.ತಿ.ನ.ಅವರ ಹುಟ್ಟು ಹಬ್ಬ ಎಂದು ಹೊಟ್ಟೆತುಂಬ ಸಿಹಿ ಊಟ ಮಾಡಿಸಿ ಕಳುಹಿಸುತಿದ್ದರು.ನಮಗೊಂದಿಷ್ಟು ನೋವಾದರೆ ಅವರ ಹೃದಯ ತತ್ತರಿಸುತ್ತಿತ್ತು.ಶಾಂತಾ ಅವರು ತಂದೆಯನ್ನು ನೋಡಲು ಬೆಂಗಳೂರಿಗೆ ಹೋದಾಗ ನನಗೆ ಷಿಲ್ಲಾಂಗಿನಲ್ಲಿ ತಬ್ಬಲಿಯಂತೆ ಅನ್ನಿಸುತ್ತಿತ್ತು.

 ಈಗ ಏನೂ ಆಗಿಯೇ ಇಲ್ಲವೆಂಬಂತೆ ಷಿಲ್ಲಾಂಗಿನಲ್ಲಿ ನನಗೊಬ್ಬರು ಶಾಂತಾ ಅನ್ನುವ ಅಮ್ಮ ಇರಲೇ ಇಲ್ಲ ಎನ್ನುವಂತೆ ಜಡವಾಗಿ ತನ್ನ ಬಾಲವನ್ನು ತಾನೇ ನೆಕ್ಕುವ ಬೆಕ್ಕಿನಂತೆ ಏನು ಬರೆಯಲಿ ಎಂದು ಹೊಂಚು ಹಾಕುತ್ತಾ ಕೂತಿರುವೆ.ತನಗೆ ತಾನು ಬೈದುಕೊಳ್ಳುವುದೂ ಕಾವ್ಯದಂತಾಗುವ ಪರಿಯನ್ನು ನೆನೆದು ಹೇಸಿಗೆಯಾಗುತ್ತಿದೆ.ಶಾಂತಾ ಷಿಲ್ಲಾಂಗಿನಲ್ಲಿ ತಣ್ಣಗಿರುವ ಈ ಮೇ ಮಾಸದಲ್ಲಿ ಕನ್ನಡದ ಇನ್ನು ಯಾರೋ ಒಬ್ಬ ಹುಡುಗನಿಗೆ ಅದೇ ಪ್ರೀತಿಯಲ್ಲಿ ತಾಯಿಯಂತೆ ಹೊಟ್ಟೆ ತುಂಬಿಸುತ್ತಿರಬಹುದು ಎಂದು ನೆನೆದು ತಲೆಯೊಳಗೆ ತಂಗಾಳಿಯಂತೆ ಖುಷಿಯಾಗುತ್ತಿದೆ.

 ಷಿಲ್ಲಾಂಗಿನಲ್ಲಿ ತಾಯಿಯಂತಿದ್ದ ಶಾಂತಾ ಎರ್ಅಡು ವರ್ಷದ ಹಿಂದೆ ಮೈಸೂರಿನ ಛತ್ರಿಮರ ಸರ್ಕಲ್ ಹತ್ತಿರ ಟಿ.ನರಸೀಪುರದ ಕಡೆಯಿಂದ ಬಂದ ಬಸ್ಸು ಇಳಿದು ನಂಜನಗೂಡಿನ ಕಡೆಯ ಬಸ್ಸು ಹತ್ತಿಹೋದರು.ತಿರುಮಲನ ದೇವಸ್ಥಾನ ನೋಡಿ ಬಂದು ಶ್ರೀಕಂಠೇಶ್ವರನನ್ನು ನೋಡಿಹೋಗಲು ಬಂದವರಂತೆ.ತಮ್ಮ ಹಾಗೇ ಇರುವ ಇನ್ನೊಬ್ಬ ಸ್ತ್ರೀಯ ಜೊತೆ ಗುರುತೇ ಇಲ್ಲದವರಂತೆ ನಡೆದು ಹೋಗುತ್ತಿದ್ದರು.ನಾನು ಕನಸು ಕಂಡವನಂತೆ ಅಮ್ಮಾ ಎಂದು ಕೂಗಿ ಹತ್ತಿರ ಹೋದೆ.ಅವರಿಗೆ ಮೊದಲು ಗೊತ್ತಾಗಲಿಲ್ಲ.ಗೊತ್ತಾದ ಮೇಲೆ ನಕ್ಕು ಹಾಗೇ ಹೊರಟು ಹೋದರು.ಹೆಚ್ಚು ಏನೂ ಹೇಳಲಿಲ್ಲ.ನನಗೂ ಏನು ಹೇಳುವುದು ಗೊತ್ತಾಗಲಿಲ್ಲ.ಹರಕೆ ಹೊತ್ತವರಂತೆ ಹೊರಟು ಹೋದರು.ಈಗಲೂ ನನಗೆ ಅವರನ್ನು ಮೈಸೂರಿನ ಛತ್ರಿಮರದ ಸರ್ಕಲ್ಲಿನಲ್ಲಿ ಕಂಡದ್ದು ಕನಸಂತೆ ಅನ್ನಿಸುತ್ತಿದೆ.

  ಒಂದು ದೀಪಾವಳಿಗೆ ಶಾಂತಾ ಬೆಂಗಳೂರಿಗೆ ತಂದೆಯ ಬಳಿ ಬಂದಿದ್ದರು.ನನಗೆ ಎಂದಿನಂತೆ ಷಿಲ್ಲಾಂಗಿನಲ್ಲಿ ಹಬ್ಬದ ದಿನದ ತಬ್ಬಲಿತನ ಶುರುವಾಗಿತ್ತು.ಅಲ್ಲಿ ಯಾರಿಗೂ ದೀಪಾವಳಿ ಗೊತ್ತಿರಲಿಲ್ಲ.ತೆರೆದ ಟೆಂಪೋದಲ್ಲಿ ಚರ್ಮಸುಲಿದ ದನಗಳನ್ನೂ,ಹಂದಿಗಳನ್ನೂ ಬೆತ್ತಲೆಯಾಗಿ ಪೇರಿಸಿಕೊಂಡು ಮಾರುಕಟ್ಟೆಗೆ ಹೊಯ್ಯುತ್ತಿದ್ದರು.ಅದು ಅವರವರ ಆಹಾರ ಎಂದು ಎಷ್ಟು ಅಂದುಕೊಂಡರೂ ಮನಸ್ಸು ಕಿವುಚುತ್ತಿತ್ತು.ತಡೆಯಲಾಗದೆ ಯಾರದಾದರೂ ಜೊತೆ ಕನ್ನಡದಲ್ಲಿ ಮಾತನಾಡಿ ದೀಪಾವಳಿಯ ಕುರಿತು ಮಾತನಾಡಿ ಸಂಕಟ ಕಡಿಮೆ ಮಾಡಿಕೊಳ್ಳಲೇ ಬೇಕು ಅಂದು ಕೊಂಡು ಇಂಗ್ಲಿಷ್ ಪತ್ರಿಕೆಯೊಂದರ ಕಛೇರಿಗೆ ನುಗ್ಗಿದ್ದೆ.ಅಲ್ಲಿ ಕನ್ನಡದ ಹೆಣ್ಣು ಮಗಳೊಬ್ಬರು ಅಕ್ಷರ ಜೋಡಿಸುವ ಕೆಲಸ ಮಾಡುತ್ತಾರೆ ಎಂದು ಮಲಯಾಳೀ ಗೆಳೆಯನೊಬ್ಬ ಹೇಳಿದ್ದ.

 ಆಕೆ ತಲೆ ತಗ್ಗಿಸಿಕೊಂಡು ಬೈತಲೆಗೆ ಢಾಳಾಗಿ ಕುಂಕುಮ ಇಟ್ಟುಕೊಂಡು ಕುಳಿತಿದ್ದರು.ನೋಡಲು ಕನ್ನಡದ ಹುಡುಗಿಯ ಹಾಗೆ ಕಾಣಿಸುತ್ತಿರಲಿಲ್ಲ. ಎಲ್ಲಿಂದಲೋ ಧೈರ್ಯ ತಂದುಕೊಂಡು ನೀವು ಕನ್ನಡದವರಾ ಎಂದು ಹಿಂದಿಯಲ್ಲಿ ಕೇಳಿದೆ. ಆಕೆ ನಾನು ಇಷ್ಟು ಅಧೈರ್ಯದಿಂದಿರುವುದ ಕಂಡು ನಕ್ಕಳು. ನೀವೇ ಅಲ್ಲವಾ ಕನ್ನಡ ಸಂಘದ ಕಾರ್ಯದರ್ಶಿ.ನೀವೇ ಅಲ್ಲವಾ ಈ ಸಲ ಗಣಪತಿ ಹಬ್ಬ ಮಾಡಿದವರು ಎಂದು ಉತ್ತರ ಕರ್ನಾಟಕದ ಕನ್ನಡದಲ್ಲಿ ಕೇಳಿಬಿಟ್ಟರು.ನಾನು ಅಧೈರ್ಯ ಕಳೆದು ಕೊಂಡು ಈವತ್ತು ದೀಪಾವಳಿ ಅಲ್ಲವಾ ಎಂದು ಕೇಳಿ ಮತ್ತೆ ಸಂಕೋಚದಲ್ಲಿ ಮುಳುಗಿದೆ.

 ಶಾಂತಾ ಅವರು ಗೊತ್ತಾ ಎಂದು ಕೇಳಿದೆ.ಯಾರು ಅಮ್ಮಾನಾ ಎಂದು ನನ್ನನ್ನೇ ಕೇಳಿದರು. ಅಮ್ಮ ಊರಿಗೆ ಹೋಗಿದ್ದಂಗ್ ಅದಲ್ರೀ ಎಂದು ಆಕೆಯೇ ಹೇಳಿದರು. ನಂ  ಮನೀಗೆ ಬರ್ರೀ ಇಲ್ಲೇ ಪೋಲೀಸ್ ಕ್ವಾರ್ಟಸ್ನಾಗೆ ಇದೀವ್ರೀ.ನಾವೂ ದೀಪಾವಳಿ ಮಾಡಿದ್ದೀವ್ರೀ.ಅಂತೆಲ್ಲ ಹೇಳಿದ್ರು.ನಾನು ಏನೇನೋ ತೊದಲಿದೆ.ಇಲ್ಲೇ ಚಾ ಕುಡೀತೀರೇನ್ರೀ ಎಂದು ಟೀ ತರಿಸಿ ಕೊಟ್ಟರು.ಬಿಸ್ಕತ್ತು ತರಿಸಿ ತಿನ್ನಿಸಿದರು. ನಂ ಮನೆಯವ್ರು ಇಲ್ಲೇ ಪೋಲೀಸಾಗಿದಾರ್ರೀ ಅವರಿಗೆ ಕನ್ನಡ ಬರೋದಿಲ್ರೀ.ಅವರು ಇಲ್ಲೀದೇ ಮಂದಿ ಕಣ್ರೀ. ನಮ್ಮವ್ವನ್ ಕಡೀಂದ ನೆಂಟರಾಗಬೇಕ್ರಿ ಅವರು ಎಂದು ಹೇಳಿದರು.
 ನಾನು ಈ ಕನ್ನಡದ ಹುಡುಗಿಯ ಹೆಸರು ಹೇಳುವುದಿಲ್ಲ.ಆದರೆ ಅವರ ಕಥೆ ಹೇಳುತ್ತೇನೆ.

 ಈಕೆಯ ತಂದೆಯ ಊರು ಹೈದರಾಬಾದ್ ಕರ್ನಾಟಕದ ಒಂದು ಹಳ್ಳಿ.ಈತ .ತುಂಬ ಸುಂದರ ಮೈಕಟ್ಟಿನ ದಲಿತ ಹುಡುಗ. ಮಿಲಿಟರಿ ಸೇರಿ ಊರು ಸುತ್ತಾಡುತ್ತಾ ಹಾಗೇ ಷಿಲ್ಲಾಂಗಿನ ಮಿಲಿಟರಿ ಕ್ಯಾಂಪ್ ಗೆ ಬಂದಿದ್ದ. ಅಲ್ಲಿ ಈತ ಪ್ರೇಮಿಸಿದ್ದು ಗಾರೋ ಬುಡಕಟ್ಟಿನ ಸುಂದರಿಯೊಬ್ಬಳನ್ನ.ಆಕೆ ಆ ಕಾಲದಲ್ಲೇ ಮಿಡ್ ವೈಫ್ ಕೆಲಸ ಕಲಿತು ಅಕ್ಷರವನ್ನೂ ಕಲಿತು ಧೈರ್ಯವಾಗಿ ಓಡಾಡುತ್ತಿದ್ದವಳು .ಕನ್ನಡ ನಾಡಿನ ಈ ದಲಿತ ಹುಡುಗ ಈ ಹುಡುಗಿಯನ್ನು ರೈಲಿನಲ್ಲಿ ಕರೆದುಕೊಂಡು ಊರಿಗೆ ಓಡಿಬಂದು ಮದುವೆ ಮಾಡಿಕೊಂಡು ಬಿಟ್ಟ.ಅವರಿಗೆ ಹುಟ್ಟಿದ ಹೆಣ್ಣು ಮಗಳೇ ನಾನು ಕಥೆ ಹೇಳುತ್ತಿರುವ ಈ ಹುಡುಗಿ. ಈ ಹುಡುಗಿ ಹುಟ್ಟುವ ಮೊದಲೇ ಹೆಂಡತಿಯನ್ನು ಊರಲ್ಲೇ ಬಿಟ್ಟು  ಆತ ತಿರುಗಿ ಮಿಲಿಟರಿಗೆ ಹೋಗಿದ್ದ.ಆ ಗಾರೋ ಬುಡಕಟ್ಟಿನ ತಾಯಿ  ಕನ್ನಡದ ಅಪರಿಚಿತರ ನಡುವಲ್ಲಿ ಒಂಟಿಯಂತೆ ಇರಲಿಲ್ಲ.ಊರಲ್ಲಿ ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸುವುದು,ಕಸೂತಿ ಕಲಿಸುವುದು,ಇಂಗ್ಲಿಷ್ ಹೇಳಿಕೊಡುವುದು ಹೀಗೆಲ್ಲ ಮಾಡಿ ಊರವರಿಗೆಲ್ಲ ತಾಯಿಯಾಗಿದ್ದಳು.ಯಾವ ಭಿಡೆಯಿಲ್ಲದೆ ಓಡಾಡಿ ಕೊಂಡಿದ್ದಳು.

  ಮಿಲಿಟರಿಯಿಂದ ರಜೆಯಲ್ಲಿ ಬಂದ ಈತ ಹೆಂಡತಿಯ ಓಡಾಟ,ನಡುರಾತ್ರಿಯಲಿವ್ಲ್ ಹೆರಿಗೆ ಕೆಲಸ ಎಲ್ಲ ಕಂಡು ಸಹಿಸಲಾಗದೆ ಆಕೆಯ ತಲೆ ಬೋಳಿಸಿ ಅವಮಾನಿಸಿ ಕೋಣೆಯಲ್ಲಿ ಕೂಡಿಸಿ ಹಿಂಸೆ ಕೊಟ್ಟಿದ್ದ.ದಿಗ್ಭ್ರಾಂತಳಾದ ಆ ಗಾರೋ ಹೆಣ್ಣು ಮಗಳು ಗಂಡನನ್ನೂ ಪುಟ್ಟಮಗಳನ್ನೂ ಬಿಟ್ಟು ಹೇಳದೇ ಕೇಳದೇ ಪುನಃ ಮೇಘಾಲಯಕ್ಕೆ ಓಡಿ ಹೋಗಿ ಬಿಟ್ಟಿದ್ದಳು.

 ನಾನು ಕಥೆ ಹೇಳಲು ಹೊರಟ ಈ ಹೆಣ್ಣು ಮಗಳು ಹುಟ್ಟಿ ಹದಿನಾರು ವರ್ಷ ಕನ್ನಡ ನಾಡಿನಲ್ಲಿ ಬೆಳೆದು ಆಮೇಲೆ ತಾಯಿಯನ್ನು ಹುಡುಕುತ್ತಾ ತಾನೂ ಷಿಲ್ಲಾಂಗಿಗೆ ಓಡಿ ಹೋಗಿ ಸೇರಿಕೊಂಡು ಅಮ್ಮನದೇ ಬುಡಕಟ್ಟಿನ ಹುಡುಗನೊಬ್ಬನನ್ನು ಮದುವೆಯಾಗಿ ಸುಖವಾಗಿದ್ದಾಳೆ.

 ಇಲ್ಲಿ ಷಿಲ್ಲಾಂಗಿನಲ್ಲಿ ಸುಖವಾಗಿದ್ದೀರಾ ಎಂದು ಕೇಳಿದರೆ ಸುಖ ಎಂದರೆ ಏನು ಎನ್ನುವಂತೆ ಈಕೆ ನನ್ನನ್ನೇ ನೋಡಿದ್ದಾಳೆ.ತಾನು ಹುಟ್ಟಿದ ಕನ್ನಡನಾಡು, ತನ್ನ ಅಪ್ಪ,ಅವ್ವ ,ತನ್ನ ಮಕ್ಕಳು ಎಲ್ಲರನ್ನೂ ಸಮಚಿತ್ತದಲ್ಲಿ ನೋಡುತ್ತಾಳೆ. ನೂರಾರು ವರ್ಷ ತಲೆ ಕೆಳಗೆ ಮಾಡಿ ತಪಸ್ಸುಮಾಡಿದರೂ ಈಕೆಯಷ್ಟು ಒಳ್ಳೆಯತನವನ್ನು  ಭಗವಂತ ಯಾರಿಗೂ ನೀಡಲಿಕ್ಕಿಲ್ಲ ಎನ್ನಿಸುತ್ತದೆ.

 ನಾನಾದರೋ ಮೇ ಮಾಸದ ಈ ಇರುಳಿನಲ್ಲಿ ಕನ್ನಡ ನಾಡಿನ ಈ ಇಬ್ಬರು ಹೆಣ್ಣುಮಕ್ಕಳನ್ನು ದೂರದ ಷಿಲ್ಲಾಂಗಿನಲ್ಲಿ ಊಹಿಸಿಕೊಂಡು ಸಂತೋಷ ಪಡುತ್ತಿರುವೆ           

Advertisements