ಇತಿಹಾಸದ ಭಾರ ಮತ್ತು ನರಮನುಷ್ಯರು

 owen.jpg

ಪುಟ್ಟ ಮಕ್ಕಳ ತಲೆಯೊಳಕ್ಕೆ ಇತಿಹಾಸವನ್ನು ಹೇಗೆ ತಿರುಚಿ ತುಂಬಲಾಗುತ್ತಿದೆ ಎಂಬ ವಿಷಯವಾಗಿ ಅಭ್ಯಾಸ ಮಾಡಲು ಐರ್ಲೆಂಡಿನ ಓವನ್ ಓ’ ಕೆಲ್ಲಿ ಮತ್ತು ನಾನು ಅವನ ದೇಶದಲ್ಲಿ ಮತ್ತು ಭಾರತ ದಲ್ಲಿ ಸುತ್ತಾಡಿದೆವು.ನಾನು ಆತನನ್ನು ಕಟ್ಟಿಕೊಂಡು ದೆಹಲಿ,ಕೇರಳ,ಕರ್ನಾಟಕದಲ್ಲಿ ಓಡಾಡಿಸಿದರೆ ಆತ ನನ್ನನ್ನು ಕಟ್ಟಿಕೊಂಡು ಆತನ ದೇಶದಲ್ಲಿ ಓಡಾಡಿದ್ದ.ಬಾರತದಿಂದ ಐರ್ಲೆಂಡ್ ತಲುಪಬೇಕಾದರೆ ಇಂಗ್ಲೆಂಡಿನ ಮೇಲಿಂದಾಗಿ ಹಾರಬೇಕಾಗಿತ್ತು. ಅಕ್ಟೋಬರ್ ತಿಂಗಳ ಮಗುವಿನಂತಹ ಎಳೆ ಬಿಸಿಲಿನಲ್ಲಿ ನಮ್ಮನ್ನು ಅಷ್ಟು ವರ್ಷ ಆಳಿದ್ದ ಆ ಮಹಾ ವಶಾಹತುಶಾಹಿ ನೆಲ ಸೋಮಾರಿಯಂತೆ ಮಲಗಿತ್ತು. ನನ್ನ ಜೊತೆಗಿದ್ದ ಓವನ್ ಅಸಂಖ್ಯ ಸಲ ಇಂಗ್ಲೆಂಡಿನ ಮೇಲಿಂದ ಹಾರಿದ್ದ.ಆತನ ದೇಶವನ್ನೂ ಬ್ರಿಟಿಷರು ಮನಸೋ ಇಚ್ಛ್ವೆ ಸಾಕಷ್ಟು ಕಾಲ ಆಳಿ ಹಾಳು ಮಾಡಿದ್ದರಿಂದ  ಅವನಿಗೂ ಹೀಗೆ ಆ ದೇಶದ ತಲೆಯ ಮೇಲೆ ಹಾರುವುದೆಂದರೆ ಒಂತರಾ ಖುಷಿಯಂತೆ.ಆತ ದಾರಿಯಲ್ಲಿ ಬರುವ ಊರುಗಳ ಹೆಸರು ಓದಿ ಹೇಳುವವನಂತೆ ಮೋಡಗಳ ಕೆಳಗೆ ಕಾಣಿಸುವ ಇಂಗ್ಲೆಂಡಿನ ಊರುಗಳ ಹೆಸರನ್ನು ನನಗೆ ಹೇಳುತ್ತಿದ್ದ.ಆತ ಹಾಗೆ ಹೇಳುತ್ತಿದ್ದಂತೆ ನನಗೆ ಊರುಗಳ ಬದಲು ಇಂಗ್ಲಿಷಿನ ಕವಿಗಳೂ ಕಥೆಗಾರರೂ ನಾಟಕಕಾರರೂ ತಲೆಯೊಳಗೆ ಬಂದು ಹೋಗುತ್ತಿದ್ದರು.

ಈ ಓವನ್ ನನಗಿಂತ ಸ್ವಲ್ಪ ಸಣ್ಣವ.  ನೋಡಲು ಮಹಾ ಹಠಮಾರಿ ಹುಡುಗನಂತೆ ಕಂಡರೂ ಒಳಗೊಳಗೆ ಕಾಲಜ್ನಾನಿಯಂತೆ ಮುಗುಮ್ಮಾಗಿದ್ದ. ಇತಿಹಾಸ ಪಂಡಿತರು,ಮಕ್ಕಳು, ಬಿಕ್ಷುಕರು, ಸನ್ಯಾಸಿಗಳು, ವೇಶ್ಯೆಯರು,ಪ್ರಾರ್ಥನಾ ಮಂದಿರಗಳು ಎಲ್ಲವನ್ನೂ ಸಮ ಚಿತ್ತದಿಂದ ಕಂಡು ಭಾರತದಿಂದ ಹೊರಡುವಾಗ ಹಳೆ ದೆಹಲಿಯ ಇತಿಹಾಸ ಪ್ರಸಿದ್ಧ ಕೋಟು ಹೊಲಿಯುವ ಅಂಗಡಿಯೊಂದರಿಂದ ಕಡುನೀಲಿ ಬಣ್ಣದ ಕೋಟೊಂದನ್ನು ಹೊಲಿಸಿಕೊಂಡು ಮದು ಮಗನಂತೆ  ಖುಷಿ ಪಟ್ಟಿದ್ದ.
ಈತನಿಗೆ ನಿಜ ಭಾರತದ ದರ್ಶನ ಮಾಡಿಸಬೇಕು ಜೊತೆಗೆ ನಾನೂ ಕಂಡು ಧನ್ಯನಾಗಬೇಕು ಎಂದು ಬೆಂಗಳೂರಿನ ಬ್ರಿಗೇಡ್ ರಸ್ತೆಯ ಪಕ್ಕದ ಓಣಿಯಲ್ಲಿರುವ ಅರೆನಗ್ನ ನೃತ್ಯದ ಮಧು ಶಾಲೆಗೆ ಕರಕೊಂಡು ಹೋದರೆ ಆತ ಈ ನಟ್ಟ ನಡುವಿನ ಅಸಾಧ್ಯ ಹಸಿವಿನ ಆ ರಾತ್ರಿಯಲ್ಲಿ ಅಷ್ಟೊಂದು ಸೌಂದರ್ಯ ವನ್ನು ಭಾರಿಸಲಾರದೆ ವಾಂತಿ ಮಾಡಿಕೊಂಡಿದ್ದ.ನನಗೆ ಪಾಪ ಅನಿಸಿತ್ತು.
ನಾನು ಮಾಡಿದ್ದ ಪಾಪಕ್ಕೆ ಶಾಸ್ತಿ ಮಾಡುತ್ತೇನೆ ಮಗನೇ ಎನ್ನುವಂತೆ ಆತ ನನ್ನನು ಆತನ ದೇಶದಲ್ಲಿ ಕೂದಲು ಕೊಂಕದ ಹಾಗೆ ನೋಡಿಕೊಂಡಿದ್ದ. ಒಂದು ದೊಡ್ಡ ದೋಣಿಯಷ್ಟಿದ್ದ ಆತನ ಕಾರಿನಲ್ಲಿ ಹತ್ತಿಸಿಕೊಂಡು ತನ್ನ ದೇಶ ತೋರಿಸಿದ್ದ. ಹಾದಿ ಬದಿಯ ಸಣ್ಣ ಪುಟ್ಟ ಪಬ್ಬುಗಳಲ್ಲಿ ಉಣ್ಣುವುದು ಮತ್ತು ಬಾಯಾರಿಕೆ ನೀಗಿಸಿಕೊಳ್ಳುವುದು,ನಡು ನಡುವಲ್ಲಿ ಇತಿಹಾಸವನ್ನು ಹೇಗೆ ತಿರುಚಲಾಗಿದೆ ಎಂದು ಅಭ್ಯಾಸ ನಡೆಸುವುದು,ಇರುಳಲ್ಲಿ ಕಾರಿನ ಭಾಗಿಲು ಹಾಕಿಕೊಂಡು ನಿದ್ರಿಸುವುದು,ಬೆಳಗ್ಗೆ ಎದ್ದು ಮುಂದೆ ಹೋಗುವುದು-ಹೀಗೆ ಅಲ್ಲಿದ್ದ ಏಳೆಂಟು ದಿನಗಳಲ್ಲಿ ಐರ್ಲೆಂಡಿನ ಒಂದು ಪ್ರಾಂತ್ಯದ ದರ್ಶನ ಮಾಡಿಸಿದ್ದ.

ire4.jpg

 ಎಷ್ಟು ತಿಂದರೂ ತೀರದ ಹಸಿವು,ಎಷ್ಟು ಕುಡಿದರೂ ಏರದ ಅಮಲು,ಎಷ್ಟು ಮಾತನಾಡಿಸಿದರೂ ಬೋರಾಗದ ಜನರು-ನಾನು ಸಣ್ಣಪುಟ್ಟದಕ್ಕೆಲ್ಲ ರೋಮಾಂಚನಗೊಂಡು ಒಂದು ನಿಮಿಷವೂ ಸುಮ್ಮನಿರದೆ ಆ ಚಂದದ ದೇಶ ವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದೆ.
ನಾವು ಸಾಧಾರಣವಾಗಿ ಎಲ್ಲ ಅನಾಹುತಗಳಿಗೂ ಬ್ರಿಟಿಷರನ್ನು ಬೈಯ್ಯುವ ಹಾಗೆ ಅವರೂ ಬೈಯುತ್ತಿದ್ದರು.ಏಕೆಂದರೆ ನಮಗೆ ಮಾಡಿದ್ದನ್ನೇ ಬ್ರಿಟಿಷರು ಅವರಿಗೂ ಮಾಡಿದ್ದರು.ನಾವು ಕುಮಾರವ್ಯಾಸನ ಮುಂದೆ ಒರಿಜಿನಲ್ ವ್ಯಾಸ ಏನೂ ಅಲ್ಲ ಅನ್ನುವ ಹಾಗೆ ಅವರು ಜಾರ್ಜ್ ಬರ್ನಾಡ್ ಶಾನ ಮುಂದೆ ಶೇಕ್ಸ್ ಪಿಯರ್ ಏನೂ ಅಲ್ಲ ಅನ್ನುತ್ತಿದ್ದರು.ನಮ್ಮ ಹಾಗೇ ಅವರೂ ಸಣ್ಣ ಸಣ್ಣದಕ್ಕೆಲ್ಲ ಉದ್ರೇಕಿತರಾಗುತಿದ್ದರು ಸಮಾಜವಾದ, ಕಾರ್ಮಿಕರ ಐಕ್ಯತೆಗಳ ಕುರಿತು ಭಾವುಕರಾಗುತ್ತಿದ್ದರು.ಸಾಧಾರಣವಾಗಿ ಎಲ್ಲರೂ ತಮ್ಮ ಆರ್ಥಿಕ ಪರಿಸ್ಥಿತಿಯ ಕುರಿತು ಕಳವಳಗೊಂಡಿದ್ದರು.ತಮ್ಮ ದೇಶ ಇಷ್ಟು ಸುಂದರವಾಗಿರುವುದರಿಂದಲೇ ಅಮೇರಿಕ ಯುರೋಪುಗಳ ಶ್ರೀಮಂತರು ಇಲ್ಲಿಯ ಭೂಮಿಯನ್ನು ಕೊಂಡುಕೊಂಡು ಬಂಗ್ಲೆಗಳನ್ನು ಕಟ್ಟಿಕೊಂಡು ರಜಾಮೋಜು ಮಜಾ ಮಾಡಿಕೊಂಡು ಇಲ್ಲಿ ನಮಗೆಲ್ಲ ಬದುಕುವುದೇ ಕಷ್ಟವಾಗಿದೆ ಎಂದು ಗೊಣಗುತ್ತಿದ್ದರು.ನೋಡಿದರೆಅವರು ಯಾರೂ ಬಡವರಂತೆ ಕಾಣುತ್ತಿರಲಿಲ್ಲ.ಬಡವರಂತೆಯೂ ಇರಲಿಲ್ಲ.ಆದರೆ ಅವರ ದೇಶ ಮಾತ್ರ ನಿಸ್ಸಂದೇಹವಾಗಿ ಯುರೋಪಿನ ಅತ್ಯಂತ ಸಿರಿವಂತ ದೇಶವಾಗಿ ಕಣ್ಣಿಗೆ ಹೊಡೆಯುವಂತೆ ಕಂಗೊಳಿಸುತ್ತಿತ್ತು.
ಗೆಳೆಯ ಓವನ್ ಕೂಡಾ ಕೊಂಚ ಹಾಗೇ ಇದ್ದ.ಹಾಗೆ ನೋಡಿದರೆ ಆತ ಅರೆ ನಿರುದ್ಯೋಗಿಯಾಗಿದ್ದ.ರೇಡಿಯೋ ಕೇಂದ್ರದಲ್ಲಿ ಯಾವಾಗಲೊಮ್ಮೆ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ. ಸಂಜೆಯ ಹೊತ್ತು ಐರಿಷ್ ದೇಶೀಯ ಆಹಾರ, ಮೀನು ಮಾಂಸ  ತರಕಾರಿ ಉಪ್ಪಿನಕಾಯಿ ಮಾರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.ಕತ್ತಲಾಗುತ್ತಿದ್ದಂತೆ ಹಳೆಯ ಓವರ್ ಕೋಟ್ ಹಾಕಿಕೊಂಡು ತನ್ನ ಫಿನ್ ಲ್ಯಾಂಡಿನ ಸುಂದರಿ ಗೆಳತಿಯ ಜೊತೆಯಲ್ಲಿ ಪಬ್ ಗಳಿಗೆ ದಾಳಿಯಿಡುತ್ತಿದ್ದ.ಆತ ತತ್ವ ಶಾಸ್ತ್ರದ ವಿದ್ಯಾರ್ಥಿ.ಜರ್ಮನ್ನಿನ ತತ್ವಜ್ನಾನಿ ನೀಷೆ ಆತನಿಗೆ ಅಚ್ಚುಮೆಚ್ಚು.ಹಳೆಯ ಐರಿಷ್ ಜನಪದ ವಾದ್ಯಗಳ ನುಡಿಸುವ ವಾದ್ಯಗಾರರ ತಂಡದಲ್ಲಿ ಆತ ಕೆಲವೊಮ್ಮೆ ಹಾಡುತ್ತಿದ್ದ.
ಇದೆಲ್ಲಕ್ಕಿಂತ ಮಿಗಿಲು ಅಂದರೆ ಆತ ವರ್ಷದಲ್ಲಿ ನಾಲ್ಕು ತಿಂಗಳು ದೇಶಾಂತರ ಸುತ್ತುತ್ತಿದ್ದ. ಬ್ರೆಝಿಲ್,ಪನಾಮಾ.ಇರಾನ್,ಚೀನಾ,ಥೈಲೆಂಡ್ ಹೀಗೆ ಹೋಗಿ ಇದ್ದು ಬರುತ್ತಿದ್ದ. ಕೆಲವು ತಿಂಗಳು ಬ್ರೆಝಿಲ್ ನ ಅಮೆಜಾನ್ ಕಾಡಿನಲ್ಲಿ ಮರ ಕಡಿಯುವ ಕಂಪನಿಯೊಂದರ ಎಕ್ಷಿಕ್ಯುಟಿವ್ ಗಳಿಗೆ ವ್ಯಾವಹಾರಿಕ ಇಂಗ್ಲಿಷ್ ಕಲಿಸುವ ಕೆಲಸವನ್ನೂ ಮಾಡಿದ್ದ.ಕೊನೆಗೆ ತನ್ನ ವ್ಯಾವಹಾರಿಕ ಇಂಗ್ಲಿಷ್ಗೂ ಅಮಜಾನ್ ಕಾಡು ಮಾಯವಾಗುತ್ತಿರುವುದಕ್ಕೂ ಸಂಬಂಧ ಇದೆ ಎಂದು ಅರಿವಾಗಿ ಕಂಪನಿಯ ಜೊತೆ ಜಗಳಾಡಿಕೊಂಡು ಕೆಲಸವನ್ನು ಬಿಸಾಕಿ ಹೀಗೆ ನಿರುದ್ಯೋಗಿ ಯಾಗಿಯೇ ಅರ್ದಮುಕ್ಕಾಲು ಭೂಗೋಳ ಸುತ್ತಿದ್ದ.
ನಾನು ಬಾರತದವನು ಪೂರ್ಣ ಉದ್ಯೋಗಿಯಾಗಿದ್ದರೂ ಜಿಪುಣನಂತೆ ಕಾಣಿಸುತ್ತಿದ್ದೆ. ಐರ್ಲೆಂಡಿನಲ್ಲಿ ಹಾಲಿಲ್ಲದ ಒಂದು ಖಾಲಿ ಚಾ ಕುಡಿಯ ಬೇಕಿದ್ದರೂ ಎರಡು ಯುರೋ ಕೊಡಬೇಕಿತ್ತು.ಆದರೆ ಅದೇ ಎರಡು ಯುರೋಗೆ ಎರಡು ಲೀಟರ್ ಪೆಟ್ರೋಲ್ ಸಿಗುತ್ತಿತ್ತು.ಓವನ್ ಮದುವೆಯಾಗದೆ ,ಗೆಳತಿಯ ಜೊತೆ ಓಡಾಡಿಕೊಂಡು,ಮನೆ ಕಟ್ಟಿಕೊಳ್ಳದೆ, ಕಾರಿಗೆ ಚಕ್ರ ಕಟ್ಟಿಕೊಂಡು ಅದನ್ನೇ ಮನೆ ಮಾಡಿಕೊಂಡು ಇರುವುದಕ್ಕೆ ಕಾರಣ ಹೊಳೆಯುತ್ತಿತ್ತು.

ಹಾಗೆ ನೋಡಿದರೆ ನಾನು ಇಲ್ಲಿ ಹೇಳ ಹೊರಟಿದ್ದು ಈ ಓವನ್ ನ ಕತೆಯನ್ನಲ್ಲ.ಐರ್ಲೆಂಡಿನಲ್ಲಿ ನಾನು ಕಾಕತಾಳೀಯವಾಗಿ ಕಂಡ ಎರಡು ಮಲಯಾಳೀ ಕುಟುಂಬಗಳ ಕತೆಯನ್ನ.ಈ ಎರಡೂ ಕುಟುಂಬಗಳ ವಿಶೇಷ ಎಂದರೆ ಈ ಎರಡೂ ಮನೆಗಳ ಗಂಡಸರಿಗೆ ಕೆಲಸವಿರಲಿಲ್ಲ.ಜೊತೆಗೆ ಆ ಇಬ್ಬರೂ ಗಂಡಸರು ಕಲಾವಿದರಾಗಿದ್ದರು ಮತ್ತು ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಅಸಾಧ್ಯ ಅವಮಾನದಲ್ಲಿ ಕುದಿಯುತ್ತಿದ್ದರು.ಅವರಿಬ್ಬರ ಹೆಂಡತಿಯರು ನರ್ಸ್ ಗಳಾಗಿ ರಾತ್ರಿಪಾಳಿಯಲ್ಲಿ ದುಡಿಯುತ್ತ ಅವರಿಬ್ಬರ ಕಣ್ಣುಗಳು ಪೇಲವವಾಗಿ ಊದಿಕೊಂಡಿದ್ದವು.  ಮತ್ತು ಮೂರನೆಯದಾಗಿ ಆ ಎರಡೂ ಕುಟಿಂಬಗಳ ಮಕ್ಕಳು ಸಿಕ್ಕಾಪಟ್ಟೆ ಚೂಟಿಯಾಗಿದ್ದರು.ಇತಿಹಾಸದ ಬಗ್ಗೆ,ತಮ್ಮ ಹೆತ್ತವರ ಬಗ್ಗೆ,ತಮ್ಮ ದೇಶ ಬಾರತದ ಬಗ್ಗೆ , ತಾವು ಇರುವ ಐರ್ಲೆಂಡಿನ ಬಗ್ಗೆ ಸಾಕಷ್ಟು ವಿಮರ್ಶಾತ್ಮಕವಾಗಿಯೂ ವಿನೋದವಾಗಿಯೂ ಮಾತನಾಡಿ ತಮ್ಮ ಅಪ್ಪಂದಿರಿಂದ ಮೆಚ್ಚುಗೆಯನ್ನೂ ಅಮ್ಮಂದಿರಿಂದ ಬೈಗುಳವನ್ನೂ ಕೇಳಿಸಿಕೊಳ್ಳುತ್ತಿದ್ದರು.
ಆ ಹುಡುಗಿಯ ಹೆಸರು ಬೀನಾಮೋಳ್ ಅಂತ.ಸುಮಾರು ಹತ್ತು ಹನ್ನೊಂದು ವರ್ಷದವಳಾದ ಆ ಹುಡುಗಿ ಐಲೆಂಡಿನ ಒಂದು ಹಳ್ಳಿ ಎನ್ನಬಹುದಾದ ಆ ಪುಟ್ಟ ಊರಿನ ಕ್ಯಾಥೋಲಿಕ್ ಶಾಲೆಯಲ್ಲಿ ತನ್ನ ಬಣ್ಣದಿಂದಾಗಿಯೂ ಚೂಟಿತನದಿಂದಾಗಿಯೂ ಎದ್ದು ಕಾಣುತ್ತಿದ್ದಳು. ಕುಳ್ಳಗೆ ದಪ್ಪಗೆ ಕೊಂಚ ಕರ್ರಗೆ ಇದ್ದ ಬೀನಾ ಮೋಳ್ ನಾನು ಭಾರತದವನು ಮತ್ತು ಮಲಯಾಳಿಯೂ ಕೂಡಾ ಎಂದು ಗೊತ್ತಾಗಿ ಭಾವುಕಳಾಗಿ ಬಿಟ್ಟಿದ್ದಳು. ನನ್ನ ಅಂಗಿ ಜಗ್ಗಿ ಎಳೆದು ಒತ್ತಾಯ ಪೂರ್ವಕವಾಗಿ ತನ್ನ ಅಪ್ಪ ಅಮ್ಮನ ಹತ್ತಿರ ಕರಕೊಂಡು ಹೋಗಿದ್ದಳು.ಅವಳ ಒತ್ತಾಯದ ರಭಸಕ್ಕೆ ನಾನೂ ಕಂಗಾಲಾಗಿ ಹೋಗಿ ನಿಮ್ಮ ದೇಶದಲ್ಲಿ ಹೀಗೆ ಅಪರಿಚಿತ ಮನುಷ್ಯನೊಬ್ಬ ಪುಟ್ಟ ಹುಡುಗಿಯೊಬ್ಬಳ ಜೊತೆ ಮಾತನಾಡಿಕೊಡು ಹೋಗುವುದು ಕಾನೂನು ಸಮ್ಮತವೇ ಎಂದು ಕೇಳಿದ್ದೆ.
‘ನಿಮ್ಮಿಬ್ಬರ ಮುಖ ಚಹರೆಯೂ ಬಣ್ಣವೂ ಒಂದೇ ತರಹ ಇರುವುದರಿಂದ ಏನೂ ತೊಂದರೆಯಿಲ’ ಎಂದು ಓವನ್ ಅಂದಿದ್ದ.
ಬೀನಾಮೋಳ್ ಶಾಲೆಯ ಚೀಲವನ್ನು ಬೆನ್ನಲ್ಲಿ ಹೇರಿಕೊಂಡು ದಾರಿಯುದ್ದಕ್ಕೂ ತಡೆಯಿಲ್ಲದೆ ಮಾತನಾಡುತ್ತಾ ತನ್ನ ಮನೆಗೆ ಕರಕೊಂಡು ಹೋಗಿದ್ದಳು. ನಾನು ಹೀಗೆ ಹಠಾತ್ತನೆ ಬಂದಿದಕ್ಕೆ ಆಕೆಯ ಅಪ್ಪ ಗಾಭರಿಯಾಗಿ ಬಿಟ್ಟಿದ್ದ. ಬಾರತದಿಂದ ಯಾರೋ ಸಾಲ ವಸೂಲು ಮಾಡಲು  ಹುಡುಕಿಕೊಂಡು ಬಂದಿದ್ದಾರೆ ಅಂತ ತಿಳಿದು ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ.ಈತ ಯಾಕೆ ಇಷ್ಟೊಂದು ಅವಾಕ್ಕಾಗಿದ್ದಾನೆ ಎಂದು ನನಗೆ ಮೊದಲು ಗೊತ್ತಾಗಲಿಲ್ಲ. ಆನಂತರ ತಿಳಿಯಿತು.
ಆತ ಕೇರಳದಲ್ಲಿ ಒಂದಿಷ್ಟು ಹೆಸರು ಮಾಡಿದ್ದ ಕಲಾತ್ಮಕ ಚಿತ್ರಗಳ ನಿರ್ದೇಶಕನಾಗಿದ್ದ.ಆತನ ಹೆಂಡತಿ ಕುವೈತ್ ನಲ್ಲಿ ಹತ್ತಿಪ್ಪತ್ತು ವರ್ಷ ನರ್ಸ್ ಆಗಿ ದುಡಿದು ಸಾಕಾಗಿ ವಾಪಾಸ್ಸು ಬಂದಿದ್ದಳು.ಈತ ಚಿತ್ರಗಳನ್ನು ತೆಗೆದು ಆಕೆ ಉಳಿಸಿದ್ದನ್ನೆಲ್ಲ ಕರಗಿಸಿದ್ದ.ಕೊನೆಯ ದಾರಿಯಾಗಿ ಮದರ್ ಥೆರೇಸಾ ಕುರಿತು ಭಕ್ತಿ ತುಂಬಿದ್ದ ಚಿತ್ರವೊಂದನ್ನು ತೆಗೆದಿದ್ದ.ಆ ಭಕ್ತಿಯೂ ಅವನನ್ನು ಉಳಿಸಿರಲಿಲ್ಲ.  ಸಾಕಷ್ಟು ಸಾಲವನ್ನು ಮಾತ್ರ ಉಳಿಸಿತ್ತು. ಕೊನೆಯ ದಾರಿಯಾಗಿ ಐರ್ಲೆಂಡಿನಲ್ಲಿ ಹೆಂಡತಿಗೆ ಕೆಲಸವೊಂದನ್ನು ಹುಡುಕಿಕೊಂಡು ಮಕ್ಕಳ ಜೊತೆ ಈ ಹಳ್ಳಿಗೆ ಹಾರಿಬಿಟ್ಟಿದ್ದ.
ಆತನ್ ಹೆಂಡತಿ ಮತ್ತೆ ಸಾಕ್ಷಾತ್ ಸಂತಳಂತೆ ರಾತ್ರಿಪಾಳಿಯಲ್ಲಿ ದುಡಿಯಲು ತೊಡಗಿದ್ದಳು.ನಡುನಡುವೆ ಸಣ್ಣಗೆ ಗೊಣಗುತ್ತಿದ್ದಳು. ಅತ ವಿನಾಕಾರಣ ರೇಗುವವನಂತೆಯೂ ಹೊಡೆಯುವವನ೦ತೆಯೂ ಕಾಣಿಸುತ್ತಿದ್ದ.ಮಗಳು ಬೀನಾ ಮೋಳ್ ಮಾತ್ರ ಏನೂ ಅರಿವಾಗುವುದು ಬೇಡ ಎಂಬಂತೆ ಆ ಅಪರಿಚಿತ ದೇಶದಲ್ಲಿ ಚೂಟಿಯಾಗಿ ಓಡಾಡುತ್ತಿದ್ದಳು.
ಎರಡನೆಯ ಮಲಯಾಳಿ ಕುಟುಂಬ ಕೊಂಚ ಪರವಾಗಿಲ್ಲ ಎನ್ನುವ ಹಾಗಿತ್ತು. ಈ ಕುಟುಂಬದ ಯಜಮಾನನೂ ಮನೆಯಲ್ಲಿ ಮಕ್ಕಳನ್ನು ನೋಡಿ ಕೊಂಡಿರ ಬೇಕಾಗಿದ್ದಕ್ಕೆ ಕೊಂಚ ವ್ಯಗ್ರನಾಗಿದ್ದರೂ ಮಕ್ಕಳನ್ನು ಒಳಗಿಂದೊಳಗೆ ಪ್ರೀತಿಸುತ್ತಿರುವವನಂತೆ ಕಂಡ. ಆಶ್ಚರ್ಯ ಅಂದರೆ ಆತ ಕೂಡಾ ಕಲಾವಿದನಾಗಿದ್ದ.ಹೆಂಡತಿ ನರ್ಸ್ ಆಗಿ ಡಬ್ಲಿನ್ ನಲ್ಲಿ ದುಡಿಯುತ್ತಿದ್ದಳು.ಸಾಕಷ್ಟು ವರ್ಷ ಒಬ್ಬಳೇ ಇದ್ದವಳು ಮಕ್ಕಳನ್ನು ಬಿಟ್ಟು ಇರಲಾರದೆ ಮಕ್ಕಳನ್ನು ನೋಡಿಕೊಳ್ಳುವ ನೆವದಲ್ಲಿ ಗಂಡನನ್ನೂ ಕರೆಸಿಕೊಡಿದ್ದಳು.ಆತ ಕೇರಳದಲ್ಲಿ  ವೇದಿಕೆ ಗಳಿಗೆ ಕಲಾವಿನ್ಯಾಸ ಮಾಡುವ ಕಲಾವಿದನಾಗಿ ಕೆಲಸಮಾಡಿಕೊಂಡಿದ್ದವನು ಈಗ ಡಬ್ಲಿನ್ ನಲ್ಲಿ ಕಕ್ಕಾವಿಕ್ಕಿಯಾಗಿ ಹೋಗಿದ್ದ.ಆತನ ಹೆಂಡತಿ ಸಾಕಷ್ಟು ಜಾಣೆಯಂತೆ ಕಾಣುತ್ತಿದ್ದಳು.ಸಂಬಳ ಉಳಿಸಿ ಸಾಕಷ್ಟು ದೊಡ್ಡದಿರುವ ಬಂಗಲೆಯಂತಹ ಮನೆಯೊಂದನ್ನು ಕಂತಿನಲ್ಲಿ ಖರೀದಿಸಿದ್ದಳು. ಐರ್ಲೆಂಡ್ ಬಿಟ್ಟು ಕೇರಳಕ್ಕೆ ಮರಳುವಾಗ ಕಂತೂ  ಮುಗಿದಿರುತ್ತದೆ,ಹೋಗುವಾಗ ಹತ್ತು ಪಟ್ಟು ಹಣವೂ ಬರುತ್ತದೆ ಎಂದು ಸಾಕಷ್ಟು ಮುಂದಾಲೋಚನೆ ಯನ್ನೂ ಮಾಡಿದ್ದಳು. ಆತನೂ ಹೆಂಡತಿಯ ವ್ಯಾವಹಾರಿಕ ಜ್ನಾನವನ್ನು ಸಾಕಷ್ಟು ಮೆಚ್ಚಿಕೊಂಡಿರುವಂತೆ ಕಾಣಿಸುತ್ತಿದ್ದ. ಜೊತೆಗೆ ತಾನೂ ವ್ಯವಹಾರ ಜ್ನಾನದಲ್ಲಿ ಕಡಿಮೆಯೇನಿಲ್ಲ ಎಂದು ತನ್ನ ಕೋಣೆಯೊಳಗಿಂದ ತಾನು ಮಾಡಿಟ್ಟಿರುವ ಬೆಂಡಿನ ಕಲಾಕೃತಿಗಳನ್ನ ತಂದು ತೋರಿಸಿದ.
 ಆ ಕಲಾಕೃತಿಗಳನ್ನ ನೋಡುತ್ತ ನೋಡುತ್ತ ಓವನ್ ಮೂಗಿನ ತುದಿಯಲ್ಲಿ ಕಣ್ಣಿನ ಕೊನೆಯಲ್ಲಿ ನಗುತ್ತಿದ್ದ. ಅವೆಲ್ಲ ಐರಿಷ್ ಗೆರಿಲ್ಲಾ ಹೋರಾಟಗಾರರು ಬ್ರಿಟಿಷರ ಎದುರು ನಡೆಸಿದ ಹೋರಾಟದ ನೆನಪಿಗಾಗಿ, ಹುತಾತ್ಮರ ನೆನಪಿನಲ್ಲಿ ಅಲ್ಲಲ್ಲಿ ರಸ್ತೆ ಚೌಕಗಳಲ್ಲಿ,ಉದ್ಯಾನವನಗಳಲ್ಲಿ ನಿಲ್ಲಿಸಲ್ಪಟ್ಟಿರುವ ಸ್ಮಾರಕಗಳ ಪ್ರತಿಕೃತಿಗಳು!

ireland.jpg

  ನಮ್ಮ ಕೇರಳದ ಕಲಾವಿದ ಸಾಕಷ್ಟು ಚಿಂತಿಸಿಯೇ ಬೆಂಡಿನಲ್ಲಿ ಇವುಗಳನ್ನು ಸುಂದರವಾಗಿ ತಯಾರಿಸಿದ್ದ.ಐರಿಶ್ ಜನರು ತಮ್ಮ ಹೋರಾಟದ ಇತಿಹಾಸದ ಕುರಿತು ಸಾಕಷ್ಟು ಭಾವುಕರಾಗಿರುತ್ತಾರೆ ಹಾಗಾಗಿ ಕಾಸು ಕೊಟ್ಟು ಕೊಳ್ಳುತ್ತಾರೆ ಎನ್ನುವ ಮುಂದಾಲೋಚನೆ ಇವನದು.
“ಜೊತೆಗೆ ಇತಿಹಾಸ ಭಾರವೂ ಆಗಬಾರದಲ್ಲ.ಅದಕ್ಕಾಗಿ ಬಾರತದ ಮಿತ್ರ ಅವುಗಳನ್ನು ಬೆಂಡಿನಲ್ಲಿ ಮಾಡಿದ್ದಾನೆ”
ಓವನ್ ದಾರಿಯುದ್ದಕ್ಕು ಚುಡಾಯಿಸುತ್ತಿದ್ದ
 ನಾನಾಗಿದ್ದರೆ ಬೇರೇನು ಮಾಡಬಹುದಿತ್ತು ಎಂದು ನಾನು ಯೋಚಿಸುತ್ತಿದ್ದೆ.

Advertisements