ಮೋಹಿತನ ೧೦ ಕವಿತೆಗಳು

 mk045.jpg

 

ನನ್ನ ಒಳ್ಳೆಯತನ ಮತ್ತು ನಿನ್ನ ಚಂದ

ನಿನ್ನ ಸಂಗೀತ ನನ್ನ ಕವಿತೆ

ಇದೆಲ್ಲ ಎಷ್ಟೊಂದು ಸುಳ್ಳು!

ನನ್ನ ಮೂಗು ನಿನ್ನ ಕಾಲ ಬೆರಳನ್ನು ಘ್ರಾಣಿಸುತ್ತಿರುವುದು

ಎಷ್ಟು ಹೊತ್ತಿಂದ ಎಂಬುದನ್ನೂ ಮರೆತಿರುವುದು

m1.jpg

ನಿನ್ನ ಗಂಡನ ಕೈ ಬೆರಳಿನ ಸಿಗರೇಟಿನ ವಾಸನೆ

ನಿನ್ನ ಕಿವಿಯ ಹಿಂದುಗಡೆ

ನಿನ್ನ ಮಗುವಿನ ಜೊಲ್ಲಿನ ಪರಿಮಳ ನಿನ್ನ ಎದೆಯ ಮೇಲೆ

ಹಿಂದೆ ನಾನೆಲ್ಲೋ ಮುಡಿಸಿದ್ದ ಕೇದಗೆಯ ಕಂಪು

ಈಗಲೂ ನಿನ್ನ ತೊಡೆಯ ನಡುವೆ

m4.jpg

ಅದೆಲ್ಲ ಹೋಗಲಿ ಬಿಡು
ಈ ನಡು ಹಗಲಿನ ಆಕಾಶ ನೋಡು

ಮತ್ತು ಕೆಳಗೆ ನಿನ್ನ ದೇಹ ನನ್ನನ್ನು

ಸುತ್ತಿಕೊಂಡಿರುವುದು.ಇನ್ನು ಯಾವತ್ತು

ನಾವು ಹೀಗೆ ಆಕಾಶದ ಕೆಳಗೆ ಕೆಟ್ಟ

ಹಾವುಗಳ ಹಾಗೆ ಬುಸುಗುಡುವುದು?

m074.jpg

ನನ್ನನ್ನು ನೀನು ಅಂದು ಕೊಂಡಿರುವುದು
ನಿನ್ನನ್ನು ನಾನು ಧ್ಯಾನಿಸುವುದು
ಇಬ್ಬರಿಗೂ ಮರೆತುಹೋಗುವುದು
ಕಂಡೊಡನೆ ಕೂಡುವುದು
ಉಣ್ಣುವುದು ಮತ್ತು ನಿನ್ನ ಮುಡಿಯ
ಬಿಡಿಸಿ ಕಟ್ಟುವುದರಲ್ಲಿ
ಸಂಜೆಯಾಗಿರುವುದು.

m116.jpg


ನೀನು ಹೊರಟ ಮೇಲೆ ಏನೋ ಬೇಕೆನಿಸುವುದು
ಅದು ಅವಳಲ್ಲಿದೆಯೆನಿಸುವುದು.
ಆ ಬಿಕ್ಷುಕಿಯಲ್ಲಿಆ ದೇವತೆಯ ಮುಖ ಹೊತ್ತ
ಬಾಲಕಿಯಲ್ಲಿ ಅಲ್ಲ ಆ ಮರಳಲ್ಲಿ ಕಾಲು ಊರಿರುವ
ಬಾಲಕನಲ್ಲಿ ಅದು ಇದೆ ಅನಿಸುವುದು

m3.jpg


ನನ್ನ ಬೆರಳ ತುದಿಯ ಬೆಂಕಿ
ನಿನ್ನ ಕಿಬ್ಬೊಟ್ಟೆಯ ಕಾವು
ಮತ್ತು ಇದು ಯಾವುದೂ ಅರಿವಿಲ್ಲದೆಯೆ
ನಗುವ ಮಗು.
ಹೇಳು ನಮ್ಮ ಈ ಹಾದರದ
ಹುಚ್ಚು ಬಿಡಿಸುವ ಮದ್ದು ಯಾವುದು?

m058.jpg


ತೀರಿ ಹೋದ ಆತ್ಮಗಳನ್ನು ಉಸಿರಾಡುವುದು
ಬರಲಿರುವ ಜೀವಗಳನ್ನು ಕಾಣುವುದು
ಇತಿಹಾಸ ತರ್ಕ ಕಾಲಜ್ನಾನ ಕಾವ್ಯ
ಇದೆಲ್ಲಕ್ಕು ಮಿಗಿಲು ನಿನ್ನನ್ನು ಕೂಡುವುದು
ಎನ್ನುವುದು ಎಷ್ಟೊಂದು ದೊಡ್ಡ ಸುಳ್ಳು.
ಈ ಹೊತ್ತಲ್ಲಿ ಸುಳ್ಳು ನುಡಿಯುವುದೂ
ನಮಗಿಬ್ಬರಿಗೆ ಏನನ್ನೆಲ್ಲಾ ನೀಡುವುದು.

m070.jpg

ಬೇಕಂತಲೇ ಪಡುವ ಒಂಟಿತನ
ಬೇಕಂತಲೇ ಬಿಡುವ ಈ ನೀಳ ನಿಟ್ಟುಸಿರು
ನಿನ್ನ ಕಾಲಸಪ್ಪಳಕ್ಕಾಗಿ ಕಾಯುವ ಈ ಪರಿಎಲ್ಲ ಸುಮ್ಮನೆ.
ನನ್ನ ಬೇಟೆಯ ಮನಸು,ಕಂಡೊಡನೆ ಜಿಗಿದು ನಿನ್ನ ಗುಂಡಿಗೆಗೆ
ನಾಲಗೆಯಿಡಬೇಕೆನ್ನುವ ಹಸಿವು ಇದೂ ಸುಮ್ಮನೆ.
ನಿಜಕ್ಕೂ ಗೊತ್ತಿಲ್ಲ ನಿನ್ನ ಕಂಡೊಡನೆ ತುಂಬಿಕೊಳ್ಳುವ ಎದೆ

ಏನನ್ನೂ ಅರಿಯಬಿಡುವುದಿಲ್ಲಸುಮ್ಮಗೆ

m073.jpg

ನೀ ಕೈ ತಿರುಗಿಸಿ ಹೊರಟ ಹೊತ್ತು
ಹೊಕ್ಕ ವೈರಾಗ್ಯಇನ್ನೂ ಬಿಟ್ಟಿಲ್ಲ
ನೀ ಬೇಡವೆಂದಮೇಲೆ ಬೇಡವೆಂದುಕೊಂಡದ್ದು
ಇನ್ನೂ ತಿರುಗಿ ಸಿಕ್ಕಿಲ್ಲ
ನೀ ಹೊರಡುವ ಮುನ್ನ ಅಂದದ್ದು ನಿಜವೆನಿಸಿದ್ದು
ಕೊಂಚ ಹೊತ್ತು ಮಾತ್ರ.ಮತ್ತೆ ಈ ಹೊತ್ತಿನವರೆಗೂ
ಹೊಕ್ಕಿರುವ ವೈರಾಗ್ಯ ಇದಕೆ ಯಾವ ಮಾತೂ
ಅರಿವಾಗುವುದಿಲ್ಲ.

m0701.jpg

೧೦
ನಾವು ಹೀಗಿರುವುದು
ದೈವಕ್ಕೆ ಎದುರು ಹೇಳುವುದು.
ಇದು ದೈವದ ಅಣತಿ
ಆಗಿರಲೂ ಬಹುದು.
ಇಲ್ಲವಾದರೆ ಯಾಕೆ ಕಳೆದ ಇರುಳು
ಎಲ್ಲಿಂದಲೋ ಗೋಚರಿಸಿದ ಅವಳು
ರೋಗಗ್ರಸ್ತೆ,ಸಿಡುಕಿ, ಮಾರಿಮುಖದವಳು
ದೇವತೆಯ ಹಾಗೆ ಕಾಣಿಸಿಕೊಂಡಳು?

poem.jpg

“ಮೋಹಿತನ ೧೦ ಕವಿತೆಗಳು” ಗೆ 15 ಪ್ರತಿಕ್ರಿಯೆಗಳು

  1. ನಮ್ಮೆಲ್ಲರ ಹುಡುಗು ಬುದ್ಡಿಯನ್ನು ಮನ್ನಿಸುವ ದೊಡ್ಡಬುದ್ದಿಗಳು ಇಲ್ಲದೇ ಇರುವುದರಿಂದಲೇ ಈ ಭುವಿ ಇಷ್ಟೊಂದು ರಸಮಯವಾಗಿದೆ.
    ಅವರ ಅನುಪಸ್ತಿತಿ ಯನ್ನು ಉಪಯೋಗಿಸಿಕೊಳ್ಳಿ.ಆದರೆ ಎಲ್ಲ ಮುನ್ನೆಚ್ಚರಿಕೆಗಳನ್ನು ಪಾಲಿಸಿ.

  2. ಪ್ರಿಯ ರಶೀದ್,

    ಉತ್ತಮ ಕವಿತೆಗಳು. ನೀಲು ಯಾಕೆ ನೆನಪಾಗುತ್ತಾಳೆ ಇದನ್ನು ಓದಿದರೆ?! ಬೋದಿಲೇರನ ಪಾಪದ ಹೂಗಳ ಸುಗಂಧ ಮನವನ್ನು ಆವರಿಸಿಕೊಂಡಿದೆ ಈಗ.
    ಅವಳ ಚಂದ ಸುಳ್ಳಿರಬಹುದು – ನಿಮ್ಮ ಒಳ್ಳೆಯತನ ಸುಳ್ಳಾ? ಭಯಪಡಿಸಬೇಡಿ.

    ಮರದೊಳಡಗಿದ ಬೆಂಕಿಯಂತಹ ಬೇಸರ – ಇಂತಹ ಕವಿತೆಗಳ ಓದಿನಿಂದ ಹೊತ್ತಿ ಉರಿಯುತ್ತದೆ.

    ಜಾಸ್ತಿ ಇಷ್ಟವಾಗಿದ್ದು – ನೀ ಕೈ ತಿರುಗಿಸಿ ಹೊರಟ ಹೊತ್ತು ಹೊಕ್ಕ ವೈರಾಗ್ಯ ಇನ್ನೂ ಬಿಟ್ಟಿಲ್ಲ.

  3. ಪ್ರೀತಿಯ ರಶೀದ್ ಸರ್,
    ಹೇಗಿದ್ದೀರಿ? ಇದೀಗಷ್ಟೆ ನಾನು ಲಿಬಿಯಾಗೆ ಬಂದಿಳಿದಿದ್ದೇನೆ. ಇಲ್ಲಿ ಈಗ ಎಲ್ಲವೂ ಸುಗಮವಾಗಿದೆ. ಇಲ್ಲಿಯ ಸಧ್ಯದ ಪರಿಸ್ಥಿತಿ ಬಗ್ಗೆ ಲೇಖನವನ್ನು ಆಮೇಲೆ ಬರೆದೇನು! ಇರಲಿ. ಪ್ರೇಮ ಮತ್ತು ಕಾಮದ ವಾಸನೆಯನ್ನು ಹೊತ್ತುಕೊಂಡಿರುವ ನಿಮ್ಮ ಕವನಗಳು ಏನನ್ನೋ ಹೇಳಲು ಹೊರಟಿವೆ. ಅಥವಾ ಏನೂ ಹೇಳುತ್ತಿಲ್ಲವೆ? ಒಮ್ಮೊಮ್ಮೆ ಏನನ್ನೂ ಹೇಳದ ಕವನಗಳೇ ಸುಕಾ ಸುಮ್ಮನೆ ಕಾಡತೊಡಗುತ್ತವೆ. ಆದರೆ ಈ ಚಳಿಗೆ ಮೈ ಮನಸ್ಸುಗಳನ್ನು ಒಂಥರಾ ಬೆಚ್ಚಗಾಗಿಸುವ ನಿಮ್ಮ ಈ ಕವನಗಳು ಕಿಚ್ಚು ಹಚ್ಚಿದ್ದಂತೂ ಸತ್ಯ! Thanks for your short poems.
    ಪ್ರೀತಿಯಿಂದ
    ಉದಯ್ ಇಟಗಿ

  4. ಇದನ್ನು ಬರೆಯುವ ಹೊತ್ತಿಗೆ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ನನ್ನ ಆಫೀಸಿನಲ್ಲಿ ನೈಟ್​ ಶಿಫ್ಟ್​ ಎಂದು ಮುಖ ಊದಿಸಿಕೊಂಡು ಬಂದವರೆಲ್ಲಾ, ತಮ್ಮನ್ನು ತಾವೇ ತಬ್ಬಿಕೊಂಡು ಚಳಿ ಎಂದು ನಡುಗುತ್ತಿದ್ದಾರೆ, ನಾನು ಮಾತ್ರ ಕಂಪ್ಯೂಟರ್​ನ ಎದುರು ಕೂತು ನಿಮ್ಮ ಪದ್ಯಗಳನ್ನು ಓದುತ್ತ ಬೆಚ್ಚಗಿದ್ದೇನೆ. ಮಳೆ ಪಾಡಿಗೆ ಮಳೆ ಸುರಿಯಲಿ, ನನ್ನ ಪಾಡಿಗೆ ನಾನು ಓದುತ್ತೇನೆ, ನಿಮ್ಮ ಪಾಡಿಗೆ ನೀವು ಬರೆಯಿರಿ.

Leave a reply to sindhu ಪ್ರತ್ಯುತ್ತರವನ್ನು ರದ್ದುಮಾಡಿ