ಮೋಹಿತನ ೧೦ ಕವಿತೆಗಳು

 mk045.jpg

 

ನನ್ನ ಒಳ್ಳೆಯತನ ಮತ್ತು ನಿನ್ನ ಚಂದ

ನಿನ್ನ ಸಂಗೀತ ನನ್ನ ಕವಿತೆ

ಇದೆಲ್ಲ ಎಷ್ಟೊಂದು ಸುಳ್ಳು!

ನನ್ನ ಮೂಗು ನಿನ್ನ ಕಾಲ ಬೆರಳನ್ನು ಘ್ರಾಣಿಸುತ್ತಿರುವುದು

ಎಷ್ಟು ಹೊತ್ತಿಂದ ಎಂಬುದನ್ನೂ ಮರೆತಿರುವುದು

m1.jpg

ನಿನ್ನ ಗಂಡನ ಕೈ ಬೆರಳಿನ ಸಿಗರೇಟಿನ ವಾಸನೆ

ನಿನ್ನ ಕಿವಿಯ ಹಿಂದುಗಡೆ

ನಿನ್ನ ಮಗುವಿನ ಜೊಲ್ಲಿನ ಪರಿಮಳ ನಿನ್ನ ಎದೆಯ ಮೇಲೆ

ಹಿಂದೆ ನಾನೆಲ್ಲೋ ಮುಡಿಸಿದ್ದ ಕೇದಗೆಯ ಕಂಪು

ಈಗಲೂ ನಿನ್ನ ತೊಡೆಯ ನಡುವೆ

m4.jpg

ಅದೆಲ್ಲ ಹೋಗಲಿ ಬಿಡು
ಈ ನಡು ಹಗಲಿನ ಆಕಾಶ ನೋಡು

ಮತ್ತು ಕೆಳಗೆ ನಿನ್ನ ದೇಹ ನನ್ನನ್ನು

ಸುತ್ತಿಕೊಂಡಿರುವುದು.ಇನ್ನು ಯಾವತ್ತು

ನಾವು ಹೀಗೆ ಆಕಾಶದ ಕೆಳಗೆ ಕೆಟ್ಟ

ಹಾವುಗಳ ಹಾಗೆ ಬುಸುಗುಡುವುದು?

m074.jpg

ನನ್ನನ್ನು ನೀನು ಅಂದು ಕೊಂಡಿರುವುದು
ನಿನ್ನನ್ನು ನಾನು ಧ್ಯಾನಿಸುವುದು
ಇಬ್ಬರಿಗೂ ಮರೆತುಹೋಗುವುದು
ಕಂಡೊಡನೆ ಕೂಡುವುದು
ಉಣ್ಣುವುದು ಮತ್ತು ನಿನ್ನ ಮುಡಿಯ
ಬಿಡಿಸಿ ಕಟ್ಟುವುದರಲ್ಲಿ
ಸಂಜೆಯಾಗಿರುವುದು.

m116.jpg


ನೀನು ಹೊರಟ ಮೇಲೆ ಏನೋ ಬೇಕೆನಿಸುವುದು
ಅದು ಅವಳಲ್ಲಿದೆಯೆನಿಸುವುದು.
ಆ ಬಿಕ್ಷುಕಿಯಲ್ಲಿಆ ದೇವತೆಯ ಮುಖ ಹೊತ್ತ
ಬಾಲಕಿಯಲ್ಲಿ ಅಲ್ಲ ಆ ಮರಳಲ್ಲಿ ಕಾಲು ಊರಿರುವ
ಬಾಲಕನಲ್ಲಿ ಅದು ಇದೆ ಅನಿಸುವುದು

m3.jpg


ನನ್ನ ಬೆರಳ ತುದಿಯ ಬೆಂಕಿ
ನಿನ್ನ ಕಿಬ್ಬೊಟ್ಟೆಯ ಕಾವು
ಮತ್ತು ಇದು ಯಾವುದೂ ಅರಿವಿಲ್ಲದೆಯೆ
ನಗುವ ಮಗು.
ಹೇಳು ನಮ್ಮ ಈ ಹಾದರದ
ಹುಚ್ಚು ಬಿಡಿಸುವ ಮದ್ದು ಯಾವುದು?

m058.jpg


ತೀರಿ ಹೋದ ಆತ್ಮಗಳನ್ನು ಉಸಿರಾಡುವುದು
ಬರಲಿರುವ ಜೀವಗಳನ್ನು ಕಾಣುವುದು
ಇತಿಹಾಸ ತರ್ಕ ಕಾಲಜ್ನಾನ ಕಾವ್ಯ
ಇದೆಲ್ಲಕ್ಕು ಮಿಗಿಲು ನಿನ್ನನ್ನು ಕೂಡುವುದು
ಎನ್ನುವುದು ಎಷ್ಟೊಂದು ದೊಡ್ಡ ಸುಳ್ಳು.
ಈ ಹೊತ್ತಲ್ಲಿ ಸುಳ್ಳು ನುಡಿಯುವುದೂ
ನಮಗಿಬ್ಬರಿಗೆ ಏನನ್ನೆಲ್ಲಾ ನೀಡುವುದು.

m070.jpg

ಬೇಕಂತಲೇ ಪಡುವ ಒಂಟಿತನ
ಬೇಕಂತಲೇ ಬಿಡುವ ಈ ನೀಳ ನಿಟ್ಟುಸಿರು
ನಿನ್ನ ಕಾಲಸಪ್ಪಳಕ್ಕಾಗಿ ಕಾಯುವ ಈ ಪರಿಎಲ್ಲ ಸುಮ್ಮನೆ.
ನನ್ನ ಬೇಟೆಯ ಮನಸು,ಕಂಡೊಡನೆ ಜಿಗಿದು ನಿನ್ನ ಗುಂಡಿಗೆಗೆ
ನಾಲಗೆಯಿಡಬೇಕೆನ್ನುವ ಹಸಿವು ಇದೂ ಸುಮ್ಮನೆ.
ನಿಜಕ್ಕೂ ಗೊತ್ತಿಲ್ಲ ನಿನ್ನ ಕಂಡೊಡನೆ ತುಂಬಿಕೊಳ್ಳುವ ಎದೆ

ಏನನ್ನೂ ಅರಿಯಬಿಡುವುದಿಲ್ಲಸುಮ್ಮಗೆ

m073.jpg

ನೀ ಕೈ ತಿರುಗಿಸಿ ಹೊರಟ ಹೊತ್ತು
ಹೊಕ್ಕ ವೈರಾಗ್ಯಇನ್ನೂ ಬಿಟ್ಟಿಲ್ಲ
ನೀ ಬೇಡವೆಂದಮೇಲೆ ಬೇಡವೆಂದುಕೊಂಡದ್ದು
ಇನ್ನೂ ತಿರುಗಿ ಸಿಕ್ಕಿಲ್ಲ
ನೀ ಹೊರಡುವ ಮುನ್ನ ಅಂದದ್ದು ನಿಜವೆನಿಸಿದ್ದು
ಕೊಂಚ ಹೊತ್ತು ಮಾತ್ರ.ಮತ್ತೆ ಈ ಹೊತ್ತಿನವರೆಗೂ
ಹೊಕ್ಕಿರುವ ವೈರಾಗ್ಯ ಇದಕೆ ಯಾವ ಮಾತೂ
ಅರಿವಾಗುವುದಿಲ್ಲ.

m0701.jpg

೧೦
ನಾವು ಹೀಗಿರುವುದು
ದೈವಕ್ಕೆ ಎದುರು ಹೇಳುವುದು.
ಇದು ದೈವದ ಅಣತಿ
ಆಗಿರಲೂ ಬಹುದು.
ಇಲ್ಲವಾದರೆ ಯಾಕೆ ಕಳೆದ ಇರುಳು
ಎಲ್ಲಿಂದಲೋ ಗೋಚರಿಸಿದ ಅವಳು
ರೋಗಗ್ರಸ್ತೆ,ಸಿಡುಕಿ, ಮಾರಿಮುಖದವಳು
ದೇವತೆಯ ಹಾಗೆ ಕಾಣಿಸಿಕೊಂಡಳು?

poem.jpg

Advertisements