ಮುಲ್ಲಾ ಇಸ್ಮಾಯೀಲನ ಕಥೆ

ramadan.jpg

ಈತನ ಹೆಸರು ಮುಲ್ಲಾ ಇಸ್ಮಾಯಿಲ್ ಕೊತ್ವಾಲ್, ಹುಟ್ಟಿದ್ದು ಇಂಗ್ಲೆಂಡಿನ ಬೋಲ್ಟನ್ ಎಂಬ ಪಟ್ಟಣದಲ್ಲಿ.. ೧೯೬೦ರ ಆದಿಯಲ್ಲಿ ಬೋಲ್ಟನ್ ನಗರದ ಮೊದಲ ಮಸೀದಿ ಕಟ್ಟಿದ್ದು ಮುಲ್ಲಾ ಇಸ್ಮಾಯಿಲನ ಅಪ್ಪ. ಈ ಅಪ್ಪ ಹುಟ್ಟಿದ್ದು ಭಾರತದ ಗುಜರಾತ್ ರಾಜ್ಯದಲ್ಲಿ. ಅಪ್ಪನಿಗೆ ಮಗ ಇಸ್ಮಾಯಿಲ್ ಬಲುದೊಡ್ಡ ಮುಲ್ಲಾ ಆಗಬೇಕೆಂದು ಬಲು ಆಸೆ ಇತ್ತಂತೆ.ಅಪ್ಪನ ಆಸೆಯಂತೆ ಮಗ ಇಸ್ಮಾಯಿಲ್ ಹತ್ತನೆಯ ಎಳೆಪ್ರಾಯದಲ್ಲಿಯೇ ಮೂವತ್ತು ಅಧ್ಯಾಯಗಳ ಪವಿತ್ರ ಖುರಾನನ್ನು ಕಂಠಪಾಠ ಮಾಡಿದನಂತೆ.ಹದಿಮೂರನೆಯ ಹರೆಯದಲ್ಲಿಯೇ ಲೌಕಿಕ ವಿದ್ಯಾಬ್ಯಾಸದ ಜೊತೆ ಜೊತೆಯಲ್ಲಿಯೇ `ಹಾಫಿಜ್’ ಆಗಿ ಅಪ್ಪನಿಗೆ ಅಚ್ಚರಿ ಮೂಡಿಸಿದನಂತೆ. ಆನಂತರ ಅಪ್ಪ ಮಗ ಇಸ್ಮಾಯಿಲನಿಗೆ ಇಸ್ಲಾಮಿಕ್ ಯುನಿವರ್ಸಿಟಿ ಯಲ್ಲಿ ಕಲಿಯಲು ಆಜ್ನಾಪಿಸಲು ಮಗ ಹಾಗೆಯೇ ಮಾಡಿ ೭ ವರ್ಷಗಳ ಕಾಲ ಲೌಕಿಕ ವಿದ್ಯಾಬ್ಯಾಸದ ಜೊತೆ ಜೊತೆಯಲ್ಲಿಯೇ ಅರಬಿ ವ್ಯಾಕರಣವನ್ನೂ , ಪವಿತ್ರ ಖುರಾನಿನ ವಿಶ್ಲೇಷಣೆಯನ್ನೂ, ಪವಿತ್ರ ಪ್ರವಾದಿಯವರ ಬೋಧನೆಗಳನ್ನೂ, ಇಸ್ಲಾಮ್ ಸಾಹಿತ್ಯ ಚರಿತ್ರೆಯನ್ನೂ ಕರಗತ ಮಾಡಿಕೊಂಡು ಆನಂತರ ನೇರವಾಗಿ ದಕ್ಷಿಣ ಆಫ್ರಿಕದ ಜೊಹಾನ್ಸ್‌ಬರ್ಗ್ ಎಂಬ ಪಟ್ಟಣದ ಇಸ್ಲಾಮಿಕ್ ಯುನಿವರ್ಸಿಟಿಯೊಂದರಲ್ಲಿ ಆರು ಪ್ರಸಿದ್ಧ ಬುಖಾರಿ ಗ್ರಂಥಗಳನ್ನು ಅಭ್ಯಸಿಸಿ  `ಹಾಲಿಂ’ ಪದವಿಯನ್ನು ಪಡೆದನಂತೆ.ತದನಂತರ ಅಪ್ಪನಿಗೆ ಮಗ ಇಸ್ಮಾಯಿಲ್ `ಮುಪಿ’ ಪಧವಿಯನ್ನು ಪಡೆಯಲಿ ಎಂಬ ಆಸೆಯಾಯಿತಂತೆ. ಅದರಂತೆ ಮಗ ಇಸ್ಮಾಯಿಲ್ ಪಾಕಿಸ್ತಾನಕ್ಕೆ ತೆರಳಿ ವಿಖ್ಯಾತ ಮತ ಪಂಡಿತ ಮುಫ್ತಿ ತಾಕಿ ಉಸ್ಮಾನಿಯವರ ಬಳಿಯಲ್ಲಿ ಇಸ್ಲಾಂ ಹಣಕಾಸಿನ ಕುರಿತು ಮೂರು ವರ್ಷಗಳ ಕಾಲ ಕಲಿತು ಮುನ್ನೂರು ಫತ್ವಾಗಳನ್ನು ರಚಿಸಿ ಮುಫ್ತಿ ಆದರಂತೆ. ಈಗ ದಾರ್ಮಿಕ ಮಹಾಪ್ರಬಂಧವೊಂದನ್ನು ಬರೆದು ಮುಗಿಸುತ್ತಿದ್ದಾರೆ ವಿಷಯ: ದಾರ್ಮಿಕ ವಧೆ.

ಮುಲ್ಲಾ ಇಸ್ಮಾಯಿಲ್ ಕೊತ್ವಾಲನನ್ನು ನಾನು ಕಂಡಿದ್ದು ಐರ್ಲೆಂಡ್ ದೇಶದ ರಾಜಧಾನಿ ಡಬ್ಲಿನ್ ನಗರದ ಬಹುಮುಖ್ಯ ರಸ್ತೆಯೊಂದರ ಪುಟ್ಟ ಮದ್ರಸಾವೊಂದರಲ್ಲಿ. ಉದ್ದ ಕರಿ ಗಡ್ಡದ, ದಪ್ಪ ಕನ್ನಡಕದ ಹಿಂದಿರುವ ಯಾವ ಭಾವನೆಯನ್ನೂ ಸೂಸದ ಕಣ್ಣುಗಳ ಈತ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಧಾರ್ಮಿಕ ಗುರುವಾಗಿದ್ದ, ಮತ್ತು ತನ್ನ ಸ್ಥಾನವನ್ನು ಬಹು ಗಂಭೀರವಾಗಿ ತೆಗೆದುಕೊಂಡು ನನ್ನಲ್ಲಿ ಸಣ್ಣಗಿನ ನಗು,ಸಣ್ಣಗಿನ ಗಾಭರಿ ಹಾಗು ಬಲುದೊಡ್ಡ ಭೀತಿಯನ್ನು ಹುಟ್ಟಿಸುವಂತೆ ಮಾತನಾಡುತ್ತಿದ್ದ.  ನಾನು ಆತನ ಮಾತುಗಳನ್ನು ಕೇಳುವ ಮೊದಲು ಡಬ್ಲಿನ್ ನ ಬಲು ಹಳೆಯ ಇಗರ್ಜಿಯೊಳಗೆ ಹೋಗಿ ಬಂದಿದ್ಡೆ.ಅದು ನಿಜಕ್ಕೂ ಬಲು ಹಳೆಯ ಇಗರ್ಜಿ.ಕ್ರೈಸ್ತ ಧರ್ಮ ಇಂಗ್ಲೆಂಡ್ ದೇಶದೊಳಕ್ಕೆ ಒಕ್ಕುವ ಮೊದಲೇ ಬಹುಶಃ ನಿರ್ಮಾಣ ಗೊಂಡ ಮಾತೆ ಮೇರಿಯ ದೇಗುಲ. ಅದಕ್ಕೇ ಐರಿಶ್ ಜನರಿಗೆ ಇಂಗ್ಲಿಷರನ್ನ ಕಂಡರೆ ಒಂಥರಾ ಬಿಗುಮಾನ ಮತ್ತು ತಮ್ಮನ್ನು ನೂರಾರು ವರ್‍ಷ ಆಳಿದ ಅವರ ಕುರಿತು ಸಾತ್ವಿಕ ಸಿಟ್ಟು.   ನಾನು ಆ ಇಗರ್ಜಿಯ ಪಕ್ಕದ ಪಬ್ ನಲ್ಲಿ ಮಾತನಾಡಿಸಿದ ಮೇರಿ ಫ್ಲಾಯ್ಡ್ ಎಂಬ ೯೬ ವರ್ಷದ ಐರಿಶ್  ಮುದುಕಿಗೆ ಆ ಸಾತ್ವಿಕ ಸಿಟ್ಟೂ ಇರಲಿಲ್ಲ. ಆಕೆ ಕ್ಯಾಥೊಲಿಕ್.ಆಕೆಯ ತೀರಿಹೋದ ಗಂಡ ಆಂಗ್ಲಿಕನ್. ಎಲ್ಲ ಧರ್ಮಗಳನ್ನೂ ಇತಿಹಾಸದ ಪುಸ್ತಕಗಳನ್ನೂ ಸುಟ್ಟು ಹಾಕಬೇಕೆಂದು ಆಕೆ ತನ್ನ ನಡುಗುವ ಧ್ವನಿಯಲ್ಲಿ ಆವೇಶಭರಿತಳಾಗಿ ನನ್ನೊಡನೆ ವಾದಿಸಿದ್ದಳು. ಅದು ಹೇಗೆ ಇತಿಹಾಸ ಮತ್ತು ಧರ್ಮ ಐರ್ಲೆಂಡನ್ನು ನೂರಾರು ವರ್ಷ ಜನಾಂಗೀಯ ಕಲಹದಲ್ಲಿ ಮುಳುಗಿಸಿತು ಎನ್ನುತ್ತ ಮಾರ್ಧವವಾಗಿ ಅತ್ತಿದ್ದಳು.ಜೊತೆಗೆ ಅಕ್ಟೋಬರ್ ತಿಂಗಳ ೨೦ನೇ ತಿಯದಿ ತನ್ನ ಹುಟ್ಟುಹಬ್ಬವೆಂದೂ ತನಗೆ ಭಾರತದಿಂದ ಆ ದಿನದಂದು ಹುಟ್ಟು ಹಬ್ಬದ ಶುಭಾಶಯವನ್ನು ದಯವಿಟ್ಟು ದೂರವಾಣಿ ಮೂಲಕ ತಿಳಿಸಬೇಕೆಂದೂ,ತನಗೆ ಗಾಂಧಿಯನ್ನು ಕಂಡರೆ ಬಹಳ ಇಷ್ಟವೆಂದೂ, ಬಾರತದಿಂದ ಬರಲಿರುವ ನನ್ನ ಶುಭಾಶಯಕ್ಕಾಗಿ ಕಾದು ಕುಳಿತಿರುವೆನೆಂದೂ ಹೇಳಿ ಬೊಚ್ಚುಬಾಯಿಯ ತುಂಬ ನಕ್ಕು ನಡುಗುವ ಕೈಗಳಿಂದ ಕೈ ಕುಲುಕಿ ಬೀಳುಕೊಟ್ಟಿದ್ದಳು.ನಾನು ಅವಳಿಗೆ ಟಾಟಾ ಹೇಳಿ ಅಚಾನಕ್ಕಾಗಿ ಮುಲ್ಲಾ ಇಸ್ಮಾಯೀಲನ ಮದರಸಾದೊಳಕ್ಕೆ ಹೊಕ್ಕುಬಿಟ್ಟಿದ್ಡೆ.

thedecoratedshed.jpg

 ಹಾಗೆ ನೋಡಿದರೆ ಮುಲ್ಲಾ ಇಸ್ಮಾಯೀಲನ ಮದರಸಾ ನಾನು ಬಾಲ್ಯದಲ್ಲಿ ಖುರಾನು ಕಲಿತ ಮದರಸಾದಂತೆ ಇರಲಿಲ್ಲ.ಡಬ್ಲಿನ್‌ನ ಆ ಬಲುಮುಖ್ಯ ರಸ್ತೆಯಲ್ಲಿ ಒಂದು ಮಾಧಕ ಪಾನೀಯದ ಅಂಗಡಿ ಹಾಗೂ ಇನ್ನೊಂದು ಲೈಂಗಿಕ ಆಟಿಕೆಗಳನ್ನು ಮಾರುವ ಅಂಗಡಿಗಳ ನಡುವೆ ಸ್ವಲ್ಪ ಹಳೆಯದು ಎನ್ನಬಹುದಾದ ಅಟ್ಟಣಿಗೆಯುಳ್ಳ ಕಟ್ಟಡವೊದರ ಅದಾಗ ತಾನೇ ನವೀಕರಿಸಲ್ಪಟ್ಟ ಭಾಗವೊದರಲ್ಲಿ ಹಸಿರು ಅಕ್ಷರಗಳಲ್ಲಿ ಅರಭಿ ಹಾಗೂ ಆಂಗ್ಲ ಭಾಷೆಯಲ್ಲಿ ಬರೆಯಲ್ಪಟ್ಟ ಆ ಮದರಸಾದ ಬಾಗಿಲು ಅಸಹಜವಾಗಿ ತೆರೆದುಕೊಂಡಿತ್ತು ಮತ್ತು ಅದರ ತೆರೆದ ಬಾಗಿಲಿನ ಹಿಂದೆ ಅತ್ಯಾಧುನಿಕ ಉಳಿ ಹಾಗು ಗರಗಸಗಳನ್ನು ಹಿಡಿದುಕೊಂಡು ಒಬ್ಬಾತ ಕೆಂಪು ಮುಖದ ಯುವಕ ಸದ್ದು ಮಾಡುತ್ತ ಆಚಾರಿ ಕೆಲಸ ಮಾಡುತ್ತಿದ್ದ.` ಈ ಮದರಸಾದ ಮುಲ್ಲಾ ಎಲ್ಲಿ?’ ಎಂದು ಅವನನ್ನು ನಾನು ಇಂಗ್ಲಿಷ್ನಲ್ಲಿ ಕೇಳಿದೆ.ಆತ ನನ್ನನ್ನು ಸಂಶಯಾಸ್ಪದವಾಗಿ ನೋಡಿ ಮತ್ತೆ ತನ್ನ ಉಳಿ ಸದ್ದನ್ನು ಮುಂದುವರಿಸಿದ.ನಾನು ಸುಮ್ಮನೇ ಮದರಸಾದ ನೆಲದಲ್ಲಿ ಹಾಸಿದ್ದ ರತ್ನಗಂಬಳಿಯಲ್ಲಿ ಕಾಲುಚಾಚಿ ಕುಳಿತು ಮೇಲೆ ಚಾವಣಿಯನ್ನು ನಿಟ್ಟಿಸತೊಡಗಿದೆ.ಆತನಿಗೆ ಏನನಿಸಿತೋ ಏನೋ `ಕ್ಷಮಿಸು ಬ್ರದರ್ ಚಾವಣಿ ಸೋರುತ್ತಿದೆ, ಮತ್ತು ಬಾಗಿಲೂ ಮುರಿದಿದೆ ನಾನು ಇದನೆಲ್ಲಾ ಸರಿಮಾಡುತ್ತಿರುವೆ. ಒಂದು ನಿಮಿಷ. ಈ ಮದರಸಾದ ಮುಲ್ಲಾನನ್ನು ಕರೆ ತರುವೆ’ ಎಂದು ಎಲ್ಲೋ ಹೊರಟ.`ಒಂದು ನಿಮಿಷ ಬ್ರಧರ್, ನಿನ್ನ ನೋಡಿದರೆ ನೀನು ಐರಿಶ್ ತರಹ ಇಲ್ಲ.ಆದರೆ ನಿನ್ನತಲೆಯ ಬಿಳಿ ಟೊಪ್ಪಿನೋಡಿದರೆ ನೀನು ಮುಸಲ್ಮಾನನ ಹಾಗೆ ಕಾಣುತ್ತಿರುವೆ.ನೀನು ಯಾವ ದೇಶದವನು.ನಾನಾದರೋ ಇಂಡಿಯಾದಿಂದ ಬಂದವನು.ನನ್ನ ಹೆಸರು ಹೀಗೆ ಎಂದು ಹೇಳಿದೆ.
ಆತನ ಮುಖದಲ್ಲಿ ಉತ್ತರ ಹೇಳಬೇಕೆನ್ನುವ ಯಾವ ಉತ್ಸುಕತೆಯೂ ಇರಲಿಲ್ಲ
`ನಾನು ಚೆಚೆನ್ಯಾದದವನು’ ಎಂದಷ್ಟೇ ಹೇಳಿ ಮುಲ್ಲಾನನ್ನು ಕರೆತರಲು ಆತ ಹೋದ.
ಆತ ಹೋದಮೇಲೆ ಬಂದವರೇ ಮುಲ್ಲಾ ಇಸ್ಮಾಯಿಲ್ ಕೊತ್ವಾಲ್!

 ಮುಲ್ಲಾ ಇಸ್ಮಾಯಿಲ್ ನನ್ನೊಡನೆ ಮಾತನಾಡುವ ಮೊದಲು ತನ್ನೆರೆಡೂ ಕೈಗಳಿಂದ ನನ್ನ ಕೈಗಳನ್ನುಮುಚ್ಚಿ ಕಣ್ಮುಚ್ಚಿ  ಪ್ರಾರ್ಥಿಸಿ ಕೈಗಳನ್ನು ಆಕಾಶದಕಡೆಗೆ ಎತ್ತಿ ಕಣ್ಣಿಗೊತ್ತಿಕೊಂಡರು.ನನ್ನೊಡನೆ ಮಾತನಾಡಲು ಅನುಮಾಡಿಕೊಟ್ಟದ್ದಕ್ಕಾಗಿ ಪಡೆದವನಿಗೆ ಕೃತಜ್ನತೆ ಗಳನ್ನು  ಅರುಹಿದರು.
`ನಾನು ಇನ್ನೂIsಟಚಿmiಛಿ sಟಚಿughಣeಡಿiಟಿg      ಅಂದರೆ ದಾರ್ಮಿಕ ಪ್ರಾಣಿಹತ್ಯೆ.
   ಕುರಿತಾದ ಮಹಾಪ್ರಭಂದವನ್ನು ಬರೆದು ಮುಗಿಸಬೇಕಾಗಿದೆ’
ಹೀಗೆ ಹೇಳುವಾಗ ಮುಲ್ಲಾ ಇಸ್ಮಾಯೀಲರ ಮುಖದಲ್ಲಿ ಸಣ್ಣದಾದ ಶಿಸು ಸಹಜ ನಾಚಿಕೆ ಸುಳಿದು ಹೋಯಿತು.
`ಹಾಗೆ ನೋಡಿದರೆ ನನಗೆ ಮುಫ್ತಿ ಪಧವಿ ದೊರೆತಮೇಲೆ ಎರಡು ಕಡೆಯಿಂದ ಮುಲ್ಲಾ ಕೆಲಸಕ್ಕೆ ಕರೆ ಬಂದಿತ್ತು.ಒಂದು ಅಮೇರಿಕಾದ ವಾಷಿಂಗ್ಟನ್ ಪಟ್ಟಣದಿಂದ ಇನ್ನೊಂದು ಈ ಡಬ್ಲಿನ್ ನಗರದಿಂದ’
`ನನ್ನ ಅಮ್ಮ ಅಮೇರಿಕಾ ಬಲು ದೂರ. ಲಂಡನ್ ನಿಂದ ಡಬ್ಲಿನ್ ಬಲು ಹತ್ತಿರ ಎಂದು ಹೇಳಿದಳು. ಇಲ್ಲಿಗೆ ಬಂದು ೭ ವರ್ಷವಾಯಿತು’ ಮುಲ್ಲಾ ಇಸ್ಮಾಯಿಲ್ ಮಾತು ಮುಂದುವರಿಸಿಹರು.
  ನಾನು ಈ ನಗರದ ಎರಡನೇ ಇಮಾಂ. ಈ ನಗರದವರಿಗೆ ನಾನು ಬಲು ಪ್ರಿಯನಾದೆ.ಈಗ ಶುಕ್ರವಾರದ ಜುಮ್ಮಾ ನಮಾಝ್ ಗೆ ೭೦೦ ಜನ ಸೇರುತ್ತಾರೆ. ೧೦ ವಿವಿಧ ದೇಶಗಳ ಮುಸಲ್ಮಾನರು. ಐರಿಸ್ ಮುಸಲ್ಮಾನರು,ಬೋಸ್ನಿಯಾದ ಮುಸಲ್ಮಾನರು,ನೈಜಿರಿಯಾದ ಮುಸಲ್ಮಾನರು,ಇಂಡಿಯಾದ ಮುಸಲ್ಮಾನರು,ಪಾಕಿಸ್ತಾನದ ಮುಸಲ್ಮಾನರು,ಎಲ್ಲೆಡೆಯ ಮುಸಲ್ಮಾನರು ಒಂದೇ ಸೂರಿನ ಕೆಳಗೆ ಎಷ್ಟೊಂದು ಚಂದ ಭಗವಂತನನ್ನು ಪ್ರಾರ್ಥಿಸುವುದು. . . . ಹೇಳುತ್ತ ಹೇಳುತ್ತ ಮುಲ್ಲಾ ನಿದಾನಕ್ಕೆ ಉಧ್ವಿಗ್ನರಾಗುತ್ತಿದ್ದರು.
` ಈ ಮದರಸಾದಲ್ಲಿ ವಾರಕ್ಕೆ ಒಬ್ಬರಾದರೂ ಮುಸಲ್ಮಾನರಾಗುತ್ತಾರೆ. ಕಳೆದ ವಾರವಷ್ಟೇ ಐರಿಶ್ ಸಹೋದರಿಯೊಬ್ಬರ್ ಮುಸಲ್ಮಾನರಾದರು. ಅದರ ಹಿಂದಿನವಾರ ಚೈನಾದವರು ಒಬ್ಬರು. ಅದರ ಹಿಂದಿನ ವಾರ ಒಬ್ಬರು ಜರ್ಮನ್. ಇದೆಲ್ಲಾ ಯಾಕೆ ಗೊತ್ತ?’
ಇಸ್ಮಾಯಿಲ್ ನನ್ನ ಕಡೆ ನೋಡಿದರು.
` ಜಗತ್ತಿನ ಅಶಾಂತಿಗೆಲ್ಲಾ ಪರಿಹಾರ ನಮ್ಮಲ್ಲಿದೆ,’ ಇಸ್ಮಾಯಿಲ್ ನಕ್ಕರು
‘ಹತ್ತು ದಿನಗಳ ಹಿಂದೆ ಏನಾಯ್ತು ಗೊತ್ತಾ? ಅವರು ಕೇಳಿದರು.ಆಮೇಲೆ ಒಂದು ಉದಾಹರಣೆ ಹೇಳಿದರು.
`ಇಲ್ಲಿ ಒಬ್ಬಳು ಮುಸಲ್ಮಾನ ಹುಡುಗಿ ಶಾಲೆ ಕಲಿಯುತ್ತಿದ್ದಳು.   ನಿಮಗೆ ಗೊತ್ತಲ್ಲ.  ಶಾಲೆಗೆ ಹೋದರೆ ಮಕ್ಕಳು ಚಿತ್ರ ಬಿಡಿಸಬೇಕಾಗುತ್ತದೆ. ಆದರೆ ನಿಮಗೆ ಗೊತ್ತಲ್ಲಾ. . ನಮ್ಮ ಧರ್ಮದ ಪ್ರಕಾರ ಮನುಷ್ಯರ ಚಿತ್ರಬಿಡಿಸುವುದು ಪಾಪ. ಪಡೆದವನಿಗಲ್ಲದೆ ಮನುಷ್ಯ ಆಕಾರವನ್ನು ಉಂಟುಮಾಡುವ ಅಧಿಕಾರ ಯಾರಿಗೂ ಇಲ್ಲ. ಆದರೆ ಈ ಹುಡುಗಿ ಮನುಷ್ಯ ಮುಖದ ಚಿತ್ರ ಬಿಡಿಸಿಬಿಟ್ಟಳು. ಆದರೆ ಈ ದೇಶದ ಘನತೆ ಏನು ಗೊತ್ತಾ? ಆ ಹುಡುಗಿಯ ಟೀಚರ್ ಒಬ್ಬರು ಐರಿಶ್ ಕ್ಯಾಥೊಲಿಕ್. ಬಹಳ ಒಳ್ಳೆಯವರು. ಆ ಹುಡುಗಿಗೆ ಬುದ್ದಿ ಹೇಳಿ ನೋಡಮ್ಮಾ ನಿನ್ನ ಧರ್ಮದ ಪ್ರಕಾರ ನೀನು ಚಿತ್ರ ಬಿಡಿಸಬಾರದು. ಅದು ಅಪರಾಧ.ಹಾಗಾಗಿ ನೀನು ಬಿಡಿಸಿದ ಚಿತ್ರವನ್ನು ಅಳಿಸು ಎಂದು ಅವಳಿಂದ ಅದನ್ನು ಅಳಿಸಿ ಹಾಕಿಸಿದರು.’
‘ಇದು ಏನು ಗೊತ್ತಾ. ಇದು ಸಹಬಾಳ್ವೆ.ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬಾಳುವುದು’.ಮುಲ್ಲಾ ಇಸ್ಮಾಯಿಲ್ ಮುಂದುವರಿಸುತ್ತಲೇ ಇದ್ದರು.   ನನಗೆ ಯಾಕೋ ಬಾಯಿ ಕಹಿಯಾಗಲು ತೊಡಗಿತ್ತು. ಜಗತ್ತಿನ ಪಾಪಗಳನ್ನೆಲ್ಲ ಮಾಡಿ ಮತ್ತೆ ಅದನ್ನೆಲ್ಲ ಅಳಿಸಿಹಾಕಲು ಈ ಮಾನವ ಜನ್ಮ ತೀರಾ ಸಣ್ಣದು ಅನಿಸಿತು.
ಮತ್ತೆ ಈ ಮುಲ್ಲಾ ಇಸ್ಮಾಯಿಲ್ ಯಾಕೋ ಸರಿಯಿಲ್ಲಾ ಅನಿಸಿತು. ಆಗಲೇ ರಾತ್ರಿ ಒಂಬತ್ತಾಗುತಿತ್ತು.ಆದರೂ
ಡಬ್ಲಿನ್‌ನ ಆಕಾಶದಲ್ಲಿ ಸೆಪ್ಟೆಂಬರ್‌ನ ಸೂರ್ಯ ಮೈಬೆಚ್ಚಗೆ ಮಾಡುತ್ತಿದ್ದ.ಒಳಹೊಕ್ಕ ಬಾಗಿಲಿಂದಲೇ ಹಿಂತಿರುಗಿದೆ.

Advertisements