ಒಂದು ಹಳೆಯ ಕವಿತೆ

 ಹಸುವಿನಂತಹ…

hasuvinanthaha.jpg

ಹಾಲು ಕರೆಯುವ ಹಸುವಿನಂತಹ ಹಾದರಗಿತ್ತಿ
ಮುದುಕಿ,ಹೆಂಗಸು,ಹತ್ತಿರಕ್ಕೆ ಇನ್ನೂ ಹುಡುಗಿ
ಅರೆ ಸೀರೆ ಮೊಣಕಾಲಿಗೆ ಎತ್ತಿ
ಆಕಳ ಅವುಡಿಗೆ ತಾಡನ ನಡೆಸಿದ್ದಾಳೆ ಹುಚ್ಚಿ
ಹುಚ್ಚೇ ಹಿಡಿಸುವ ಹಳೆಯ ಹಾದರಗಿತ್ತಿ

ಕಂದು ಆಕಳ ಹಿಂಬದಿ ಕಂಡು ಕಣ್ಣುಮುಚ್ಚುತ್ತಾಳೆ
ಗಂಡಸಿನಂತಹ ತನ್ನಬಾಲವ ತಾನೇ ನೆಕ್ಕುವ
ತಾನೇ ಹಾಲು ಎಳಕೊಳ್ಳುವ, ಬಿಡುವ
ಅದರ ಕೊರಳ ವಿಟನಂತೆ ಸವರುತ್ತಾಳೆ
ಎಷ್ಟೋ ಮಾಡಿ ಮುಗಿಸಿ ಬೇಡವೆಂದು ಅಂಡು ನೆಲಕ್ಕೆ
ಊರಿ ಕುಂತ ಸುಂಟರಗಾಳಿ.

ಅವಳ ಮೊಲೆಗಳು ಬಿರಿದದ್ದು,ಬೆಳೆದದ್ದು,ಹಾದಿಹೋಕರ
ಹೊಟ್ಟೆ ಉರಿಸಿದ್ದು ಈಗ ಒಣಗಿದ ಎಳ್ಳಂತೆ ಕಡುವಾಗಿದೆ
ಕಡು ನೀಲ ಆಕಾಶಕ್ಕೆ ತಿಳಿನೀಲ ಮೋಡದಂತೆ
ಅವಳ ತೋಳ ನರಬಳ್ಳಿಗಳು ತಬ್ಬಿದೆ.
ಅವಳ ಬಿಗಿದುಕೊಂಡಿದ್ದ ತೊಡೆಗಳು ಸಡಿಲವಾಗುತ್ತಾ
ಸ್ನಾಯುವಾಗುತ್ತಾ ಒಂದಕ್ಕೊಂದು ಮುಟ್ಟಿ
ಮರದ ಜೀವಂತ ಗ್ರಾಮ ದೇವತೆಯಂತೆ
ಕೂತಿದ್ದಾಳೆ ಆಕಳ ಮುಂದೆ,
ಕಾಯಲು ಹೇಳುತ್ತಿದ್ದಾಳೆ ಈ ಹಳೆಯ ಹಾದರದ ಹೆಂಗಸು
ಆಕಳೊಡನೆ ಮಾತು ಆಡಿ.

ಅವಳ ಗ್ರಾಮಕ್ಕಿರುವ ಆಕಾಶ ಅವಳು
ಮತ್ತೆಲ್ಲ ಬರಿಯ ಜನರು,ಜನರೆಂದರೆ
ಬರಿಯ ಗಂಡಸರು.
ಉಟ್ಟದ್ದನ್ನು ಉರಿಗೆ ಎಸೆದೆವೆಂದು
ಕಂಕುಳಲ್ಲಿ ಬೆವರು ಸೂಸುವ ಬರಿಯ
ಹುಡುಗರು.ಗಂಡಸರಂತೆ
ಗರ್ವ ಉಳ್ಳವರು.
ಹಾದರವನು ಆಶೆ ಪಡುವರು
ಕಂಡೊಡನೆ ಪೋಲಿ ಮಾತುಗಳ ಹೇಳಿರಮಿಸಿ
ಮುಖ ಸೆಟೆಸಿ ಹೋಗುವರು,ಅಯ್ಯೋ
ಮಕ್ಕಳಂತಹ ಗಂಡು ಆಡುಗಳು.
ಪೇರಲೆಯ ಗೆಲ್ಲುಗಳಂತಹ ಅವಳ ತೋಳುಗಳು ಬಾಗಿ
ಪೇಲವವಾಗಿ..ಆದರೂ ಆಸೆ ಪಡುವರು ಅವಳನ್ನು
ಹುಳಹರಿದ ಹಣ್ಣಂತಹ ಅವಳ ತುಟಿಗಳ ಗಾಯಮಾಡಿ
ಅವಳತೋಳುಗಳಎತ್ತಿ ಗೇರಸಾರಾಯಿಯಂತಹ
ಬೆವರಸೆಲೆ ದಾರಿಯಲ್ಲೆಲ್ಲ ಮನಸನೋಡಿಸುವರು
ಹೆದ್ದಾರಿಯ ಅರಿಯದ ಲಾರಿ ಚಾಲಕರೂ ಸೇರಿ.
*******
ಅವಳ ಕಣ್ಣುಗಳಲ್ಲಿ ಆಕಾಶವಿದೆ..ಅವಳ ಬಾಗಿದ ಬೆನ್ನಿಗೆ
ಆಕಳ ಕಂದು ಬಂದಿದೆ ಸಂಜೆಯಾದಂತೆ
ಅವಳ ಗ್ರಾಮಕ್ಕೊಬ್ಬಳೇ ಅವಳು ಎಂಥ ಹಾಯುವ
ಗೊಣಗುವ ಆಕಳ ಮೊಲೆಯಲ್ಲೂ ಹಾಲ ಬರಿಸುವವಳು

 

Advertisements