ರಾಮಚಂದ್ರ ಭಟ್ಟರೂ,ಕುಂಞಪ್ಪ ಬ್ಯಾರಿಗಳೂ

puttur1.jpg

ದು ಹುಡುಗ ಹುಡುಗಿಯರ ಹದಿಹರೆಯದ ಹುಚ್ಚಿನ ಮೋಹಕ ಪ್ರೇಮವಲ್ಲ, ಹೆಣ್ಣು- ಗಂಡಿನ ಉರಿಯುವ ಪ್ರೇಮದ, ಕಾಮದ ನಾಲಗೆಯ ಚಾಚುವಿಕೆಯಲ್ಲ, ಗಂಡಸು ಮತ್ತು ಗಂಡಸಿನ ನಡುವಿನ ಅಥವಾ ಹೆಂಗಸು ಮತ್ತು ಹೆಂಗಸಿನ ನಡುವಿನ ಹೇಳಲೂ ಆಗದ ನುಂಗಲೂ ಆಗದ ಆಕರ್ಷಣೆಯಲ್ಲ.

ಇದು ಇಬ್ಬರು ಮುದುಕರ ಪ್ರೇಮದ ಕಥೆ. ಇಲ್ಲಿ ನಾಯಕರಿಲ್ಲ, ನಾಯಕಿಯರಿಲ್ಲ, ಖಳರಿಲ್ಲ, ವಿರಹವಿಲ್ಲ, ಅಸೂಯೆಯಿಲ್ಲ. ಎಲ್ಲವನ್ನೂ ವಿವರಿಸಿ ಹೇಳುವ ಕಾರ್ಯ ಮತ್ತು ಕಾರಣಗಳೆಂಬ ಸಂಬಂಧಗಳ ಹಂಗೂ ಈ ಮುದುಕರಿಗೆ ಇಲ್ಲ. ಯಾಕೆ ಈ ಪ್ರೇಮ ಎಂದು ಕೇಳಿದರೆ ಇದಕ್ಕೇ ಎಂದು ಖಂಡ ತುಂಡವಾಗಿ ಉತ್ತರಿಸಲೂ ಇವರಿಬ್ಬರಿಗೂ ಇಷ್ಟವಿಲ್ಲ. ಯಾಕೆಂದರೆ ಇವರಿಬ್ಬರಿಗೂ ಇದಕ್ಕೆ ಇದೇ ಉತ್ತರವೆಂಬುದು ಗೊತ್ತಿಲ್ಲ. ಇನ್ನೂ ಒತ್ತಾಯ ಮಾಡಿದರೆ ಒಬ್ಬರು ನಾಚಿಕೊಳ್ಳುತ್ತಾರೆ. ಇನ್ನೊಬ್ಬರು ಆಕಾಶದ ಕಡೆಗೆ ಕೈ ತೋರಿಸುತ್ತಾರೆ.

ಒಬ್ಬರ ಹೆಸರು ಇಸ್ಮಾಯಿಲ್ ಕುಂಞಪ್ಪ ಬ್ಯಾರಿ ಅಂತ. ವಯಸ್ಸು ಸುಮಾರು 80 ಇನ್ನೊಬ್ಬರು ರಾಮಚಂದ್ರ ಭಟ್ಟರು. ಪ್ರಾಯ ಬ್ಯಾರಿಗಳಿಗಿಂತ ಎರಡು ವರ್ಷ ಕಡಿಮೆ. ಇಬ್ಬರ ಮುಖವೂ ಸುಕ್ಕಾಗಿದೆ. ಇಬ್ಬರ ಬೆನ್ನೂ ಬಾಗಿದೆ. ಆದರೂ ಈಗಲೂ ಒಬ್ಬರನ್ನೊಬ್ಬರು ಕಂಡಾಗ ಇವರಿಬ್ಬರ ಕಣ್ಣುಗಳು ಅರಳುತ್ತದೆ. ಮುಖದ ಸುಕ್ಕುಗಳು ಮಾಯವಾಗುತ್ತದೆ. ಇವರಿಬ್ಬರ ತುಟಿಗಳ ನಡುವಿನಿಂದ ಮಗುವಿನಂತಹ ನಗುವೊಂದು ಅರಳುತ್ತದೆ. ಈ ನಗುವೊಂದೇ ಇವರಿಬ್ಬರ ನಾಲ್ಕು ದಶಕಗಳನ್ನು ಮೀರಿದ ಪ್ರೇಮದ ಕಥೆಯನ್ನು ಹೇಳುತ್ತದೆ.

ಹತ್ತು ವರ್ಷಗಳ ಹಿಂದೆ ನಾನೂ ನನ್ನ ಗೆಳೆಯ ಶಿವರಾಮ ಪೈಲೂರನೂ ಸುರಿಯುವ ಜಟಿ ಜಟಿ ಮಳೆಯಲ್ಲಿ, ಬಿಸಿಲು ಮಳೆ ಸೂರ್ಯ ಮೋಡಗಳ ಮೋಜಿನ ಆಟ ಆಕಾಶದಲ್ಲಿ ನಡೆಯುತ್ತಿರುವಾಗ ಈ ಇಬ್ಬರು ಮುದುಕರನ್ನು ನೋಡಿ ಬರಲು ಹೊರಟಿದ್ದವು. ಈ ಇಬ್ಬರನ್ನು ನಾವು ಜೊತೆಗೆ ನೋಡುವುದು ಇದೇ ಕೊನೆ ಸಲವೇನೋ ಎಂಬ ಹೆದರಿಕೆಯಾಗುತ್ತಿತ್ತು.

ಮಂಗಳೂರಿಗೆ ಬಂದಿದ್ದವರೊಬ್ಬರು ಕುಂಞಪ್ಪ ಬ್ಯಾರಿಗಳಿಗೆ ಸಖತ್ ಹುಷಾರಿಲ್ಲ. ಈ ಮಳೆಗಾಲವನ್ನು ಅವರು ನೀಗುವುದು ಕಷ್ಟ ಎಂದು ಹೇಳಿ ಹೆದರಿಕೆ ಹುಟ್ಟಿಸಿದ್ದರು. ಅದಕ್ಕಾಗಿಯೇ ನಾವು ಬಿಸಿಲಾದರು ಮಳೆಯಾದರೂ ಸರಿಯೇ ಈ ಇಬ್ಬರು ಅಪರೂಪದ ಮುದುಕರನ್ನು ಜೊತೆಗೆ ಕೂಡಿಸಿ ನೋಡಬೇಕು ಅವರಿಬ್ಬರನ್ನು ಒಂದು ಕಡೆ ಕೂರಿಸಿ ಚಿತ್ರವನ್ನಾದರೂ ತೆಗೆಯಬೇಕು ಎಂದೆಲ್ಲಾ ಯೋಚಿಸುತ್ತಾ ಹೊರಟೇ ಬಿಟ್ಟಿದ್ದೆವು. ಮಳೆ ಸುರಿಯುತ್ತ, ಬಿಸಿಲು ಇಣುಕುತ್ತಾ ಆಕಾಶ ಮುನಿಸುಗೊಂಡ ಹೆಂಗಸಿನ ಮುಖದಂತೆ ಮೋಡಗಳಿಂದ ದುಮುಗುಟ್ಟುತ್ತ ಸುರಿಯಲು ರೆಡಿಯಾಗುತ್ತ, ನೆಲವೆಲ್ಲ ಒದ್ದೆ ಒದ್ದೆಯಾಗಿ ರಸ್ತೆಯ ಬದಿಯಲ್ಲಿ ಹಸಿರಾಗಿ ನಾವು ಹೋಗುತ್ತಿರುವ ದಾರಿ ಯಾವುದೋ ಮಾಯಾಲೋಕಕ್ಕೆ ಹೋಗಲಿಕ್ಕಿರುವ ಕಳ್ಳ ಹಾದಿಯಂತೆ ಕಂಗೊಳಿಸುತ್ತಿತ್ತು.

ನನಗೆ ಮನಸಿನಲ್ಲೇ ಕಳ್ಳ ನಗುವೊಂದು ಸುಳಿಯುತ್ತಿತ್ತು ಈ ಮುದುಕರನ್ನೂ ಮುದುಕಿಯರನ್ನೂ ಹುಡುಕಿಕೊಂಡು ಅವರ ಕಥೆಗಳಿಗಾಗಿ ಅವರನ್ನು ಮೋಹಿಸಿಕೊಂಡು ಓಡಾಡುವ ನನ್ನ ಹುಚ್ಚು! ನನ್ನ ಈ ಹುಚ್ಚು ಕಂಡವರು ನಗುತ್ತಾರೆ. ನನಗೂ ಅಕಾಲ ಮುಪ್ಪು ಬಂದು ಒದಗಿದೆಯೆಂದೂ ಅದಕ್ಕೇ ಮುದುಕ ಮುದಕಿಯರ ಕುರಿತು, ತೀರಿ ಹೋದ ಪ್ರಾಯದವರ ಕುರಿತು ಬರೆಯುತ್ತಿರುವೆನೆಂದೂ ತಮಾಷೆ ಮಾಡಿ ನಗುತ್ತಾರೆ. ಹುಡುಗ ಹುಡುಗಿಯರ ಕುರಿತು ಪ್ರೇಮ ಪ್ರಣಯಗಳ ಕುರಿತು ಬರೆಯ ಬೇಕೆಂದು ಒತ್ತಾಯಿಸುತ್ತಾರೆ. ಆದರೂ ನಾನು ಈ ಮುದುಕರ ಕುರಿತು ಯೋಚಿಸುವುದರಲ್ಲಿ ಅವರನ್ನು ಹುಡುಕುತ್ತ ಓಡಾಡುವುದರಲ್ಲಿ ಪ್ರಣಯವನ್ನೂ ಮೀರಿದ ಮೋಹಕತೆಯನ್ನು ಕಲ್ಪಿಸಿಕೊಳ್ಳುತ್ತ ಓಡಾಡುತ್ತೇನೆ. ಆ ಓಡುತ್ತಿರುವ ಬಸ್ಸಿನಲ್ಲೂ ನಗು ಬಂದು ಪೆಚ್ಚಾಗಿ ಸುಮ್ಮನೇ ಕುಳಿತಿದ್ದೆ. ಬಸ್ಸಿನೊಳಗಿದ್ದವರೆಲ್ಲ ಆಕಳಿಸಿ ಆಕಳಿಸಿ ಬಸ್ಸಿನ ಕನ್ನಡಿಗಳೆಲ್ಲ ಮಂಜು ಮಂಜಾಗಿ ಮುಸುಕಾಗಿ ಬಿಟ್ಟಿತ್ತು. ಬಿಸಿಲು ಬಂದರೂ ಗಾಳಿಗೆ ಹೆದರಿ ಯಾರೂ ಗಾಜು ತೆರೆಯುತ್ತಿರಲಿಲ್ಲ. ಎಲ್ಲರೂ ಮುದುಕರಾಗುತ್ತಿದ್ದಾರೆ ಎನಿಸಿ ನಗು ಬಂತು.

ಈ ಒಂದು ವರ್ಷದ ಹಿಂದೆ ಹೀಗೇ ಇನ್ನೊಬ್ಬರು ಮುದುಕರೊಬ್ಬರ ಇತ್ಯೋಪರಿ ವಿಚಾರಿಸುತ್ತಾ ಕವಿ, ವಿದ್ವಾಂಸ, ವಿಮರ್ಶಕ ಲಕ್ಷ್ಮೀಶ ತೋಳ್ವಾಡಿಯವರ ಕಾಡಿನ ನಡುವಿನಲ್ಲಿರುವ ಮನೆಗೆ ಹೋಗಿದ್ದೆ. ಮಳೆಗಾಲದಲ್ಲಿ ಕತ್ತಲಲ್ಲಿ ಬೆಳಗ್ಗೆಯೇ ಚಿಮಿಣಿ ದೀಪದ ಬೆಳಕಿನ ಲಕ್ಷ್ಮೀಶರು ಮುದುಕರೊಬ್ಬರ ಜೊತೆಗೆ ವೇದಾಂತ ಚಚರ್ಿಸುತ್ತಿದ್ದರು. ಇಬ್ಬರೂ ಗ್ರಂಥಗಳನ್ನೂ ಶ್ಲೋಕಗಳನ್ನು ತರ್ಕಗಳನ್ನು ಅಕ್ಕಿಯ ನಡುವಿನಿಂದ ನೆಲ್ಲು ಹೆಕ್ಕುವಂತೆ ಹೆಕ್ಕುತ್ತಾ, ಬಿಸಾಕುತ್ತಾ ಗಹನವಾಗಿ ಚರ್ಚೆಯಲ್ಲಿ ಮುಳುಗಿದ್ದರು. ಅವರು ಸತ್ಯದ ಕುರಿತು ಶೋಧನೆಯಲ್ಲಿ ತೊಡಗಿದ್ದರು. ನಾನು ಹುಡುಕಿಕೊಂಡು ಹೋದ ಮುದುಕರು ಅಲ್ಲಿ ಇರದಿದ್ದರೂ ಇರುವ ಈ ಮುದುಕರ ಮಾತಿಗೆ ಮರುಳಾಗಿ ನಾನೂ ತಲೆದೂಗಲೂ ತೊಡಗಿದ್ದೆ. ಹಾಗೇ ಮಾತಾನಾಡುತ್ತಾ ಲಕ್ಷ್ಮೀಶರು ನನಗೆ ಆ ಮುದುಕರ ಪರಿಚಯ ಮಾಡಿಕೊಟ್ಟರು ಅವರೇ ನಮ್ಮ ರಾಮಚಂದ್ರ ಭಟ್ಟರು. ಈ ರಾಮಚಂದ್ರ ಭಟ್ಟರು ಸತ್ಯದ ಶೋಧಕರೆಂದೂ ಒಂದು ರೀತಿಯ ಯೋಗಿಗಳೆಂದೂ, ತನ್ನ 40ನೇ ವಯಸ್ಸಿನಲ್ಲಿ ಒಮ್ಮೆ ತೀರಿಹೋಗಿ ಮತ್ತೆ ಜನ್ಮ ತಳೆದು ಹೀಗೆ ಯೋಗಿಗಳಂತೆ ಸತ್ಯಜ್ಞಾನಾನ್ವೇಷಣೆಯಲ್ಲಿ ತೊಡಗಿರುವರೆಂದೂ ಹೇಳಿದರು.

ಎಳೆಯನಾದ ನನಗೆ ರಾಮಚಂದ್ರಭಟ್ಟರ ಸತ್ಯಶೋಧನೆಯ ಮಾತುಗಳು ಒಮ್ಮೆಲೆ ಗೊತ್ತಾಗದಿದ್ದರೂ ಅವರು ತೀರಿಹೋಗಿ ಮರು ಹುಟ್ಟು ಪಡೆದ ಕತೆ ಕೇಳಿ ಕುತೂಹಲವೂ ಮೆಚ್ಚುಗೆಯೂ ಅಚ್ಚರಿಯೂ ಆಯಿತು. ಹಾಗೇ ಮಾತನಾಡುತ್ತ ಲಕ್ಷ್ಮೀಶರು ಇಸ್ಮಾಯಿಲ್ ಕುಂಞಪ್ಪ ಬ್ಯಾರಿಗಳ ಕಥೆಯನ್ನೂ ಹೇಳಿದರು. ಈ ಕುಂಞಪ್ಪ ಬ್ಯಾರಿಗಳು ರಾಮಚಂದ್ರಭಟ್ಟರ ಜ್ಞಾನಾನ್ವೇಷಣೆಯ ಸಂಗಾತಿಯೆಂದೂ ತಿಳಿಸಿದರು. ರಾಮಚಂದ್ರಭಟ್ಟರು ತೀರಿಹೋಗಿ ಹೊಸ ಹುಟ್ಟು ಪಡೆದು ಬದುಕಿದ ನಂತರ ಅವರು ನಡೆದಲ್ಲೆಲ್ಲ ನಡೆದು ಅವರು ಹೇಳಿದ್ದನ್ನೆಲ್ಲ ಕೇಳುತ್ತಾ ಅವರು ಮಲಗಿದ ತಪಸ್ಸು ಮಾಡಿದ ಗುಡ್ಡಗಳಲ್ಲೂ ಪುಟ್ ಪಾತ್ ಗಳಲ್ಲೂ ಮಲಗುತ್ತ ತನ್ನ ಅಡಿಕೆ ವ್ಯಾಪಾರ, ಬೀಡಿ ಕಟ್ಟುವ ಕಾಯಕ ಎಲ್ಲವನ್ನೂ ಬಿಟ್ಟು ಲಾಸ್ ಹೊಡೆದು ಹೋದ, ಆದರೆ ಅಷ್ಟೇ ಲೋಕ ಸಂಪನ್ನನಾದ ಈ ಬ್ಯಾರಿಯೊಬ್ಬರ ಕಥೆ ಕೇಳುತ್ತಾ ನನಗೆ ಹೊಸತೊಂದು ಮಾಯಾಲೋಕ ಹೊಕ್ಕ ಅನುಭವವಾಯಿತು. ಗುರುಗೋವಿಂದ ಭಟ್ಟರೂ, ಶಿಶುನಾಳ ಶರೀಫ್ ಸಾಹೇಬರೂ, ಕವಿ ಬೇಂದ್ರೆಯೂ, ಇನ್ನೊಬ್ಬ ಆಧ್ಯಾತ್ಮ ಕವಿ ಮಧುರಚನ್ನರೂ ಗೆಳತನದಲ್ಲಿ ಬಾಳಿ ಬದುಕಿದ ಈ ಕನ್ನಡ ನಾಡಿನ ಇನ್ನೊಂದು ತುದಿಯಲ್ಲಿ ಅಡಿಕೆ ಮರ, ಬಾಳೆ ತೋಟ ಒಣ ಮೀನು ಬಿದಿರು ಹೂಗಳ ನಡುವೆ ಹೀಗೆ ರಾಮಚಂದ್ರಭಟ್ಟರೂ ಕುಂಞಪ್ಪ ಬ್ಯಾರಿಗಳೂ ಬಾಳಿ ಬದುಕುತ್ತಿರುವುದು ಕೇಳಿ ಆನಂದವೂ ಕುಚೋದ್ಯವೂ ಉಂಟಾಗಿತ್ತು.

puttur.jpg  ನಾನು ಭಟ್ಟರನ್ನು ಕಂಡ ಮೇಲೆ ಕುಂಞಪ್ಪ ಬ್ಯಾರಿಗಳನ್ನು ಕಾಣಲು ಹೋಗಿದ್ದೆ. ಅದೂ ಒಂದು ವರ್ಷದ ನಂತರ ಬಸ್ಸು ಹತ್ತಿ, ಟ್ಯಾಕ್ಸಿ ಹತ್ತಿ, ರಿಕ್ಷಾ ಹತ್ತಿ ಸುಬ್ರಹ್ಮಣ್ಯದಿಂದ ಬೆಳ್ಳಾರೆಗೆ ಹೋಗಿ ಬೆಳ್ಳಾರೆಯ ಬಳಿ ಇರುವ ನೆಟ್ಟಾರಿನ ಇಸ್ಮಾಯಿಲ್ ಕುಂಞಪ್ಪ ಬ್ಯಾರಿಗಳ ಬಂಡಶಾಲೆಯ ಹಾಗೆ ಇರುವ ಆದರೆ ಈಗ ಎಲ್ಲಾ ಖಾಲಿಯಾಗಿರುವ ಅಂಗಡಿ ಮುಂಗಟ್ಟಿನ ಮುಂದೆ ಹೋಗಿ ಇಳಿದಾಗ ಮನೆಯೊಳಗೆ ಇಬ್ಬರೂ ಮುದುಕರು ಸುಮ್ಮನೇ ಕುಳಿತಿದ್ದರು. ನಾನು ಭಟ್ಟರಿಗೆ ಗೊತ್ತಾಗದ ಹಾಗೆ ಬ್ಯಾರಿಗಳನ್ನೊಮ್ಮೆ ನೋಡಿ ಬರಬೇಕೆಂದು ಅಂತ ಹೊಂಚು ಹಾಕಿ ಹೋಗಿದ್ದರೆ ನಾವು ಬರುವುದು ಗೊತ್ತು ಅನ್ನುವ ಹಾಗೆ ಭಟ್ಟರು ಬ್ಯಾರಿಗಳ ಜೊತೆ ಸುಮ್ಮನೆ ಕುಳಿತಿದ್ದರು. ಇದು ಯಾವ ಮಾಯ ಎಂದು ತಲೆ ತೂಗಿದರೆ ಭಟ್ಟರು ಆಕಾಶದ ಕಡೆ ನೋಡಿ ತುಂಟತನದಲ್ಲಿ ನಕ್ಕರು. ಬ್ಯಾರಿಗಳು ನಾಚಿಕೊಂಡರು. ಈ ಭಟ್ಟರ ಮಾಯಾವಿಯಂತಹ ನಗುವೂ ಬ್ಯಾರಿಗಳ ಮಗುವಿನಂತಹ ನಾಚುಕೆಯೂ ಆ ಹೊತ್ತಿನಲ್ಲಿ ಅವರು ಏನೂ ಹೇಳದಿದ್ದರೂ ನಮಗೆ ಅವರಿಬ್ಬರ ಪ್ರೇಮದ ಕಥೆ ಹೇಳಿತು. ಆಮೇಲೆ ಅವರಿಬ್ಬರೂ ಸೇರಿ ಅವರ ಪ್ರೇಮದ ಕಥೆ ವಿವರಿಸಿದರು. ಅದು ನಡೆದಿದ್ದು ಹೀಗೆ.

ಅದು ಸುಮಾರಾಗಿ 1952ನೆಯ ಇಸವಿ. ಸ್ವಾತಂತ್ರ್ಯ ಬಂದಿತ್ತು. ಗಾಂಧಿ ತೀರಿಹೋಗಿದ್ದರು. ಮಂಜೇಶ್ವರದ ಕಲ್ಲಬನದ ಅಮದ್ ಬ್ಯಾರಿ ಮತ್ತು ಉಮ್ಮಾತುಮ್ಮ ಅವರ ಮಗ ನಮ್ಮ ಕುಂಞಪ್ಪ ಬ್ಯಾರಿ ನೆಟ್ಟಾರಿನಲ್ಲಿ ತನ್ನ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುತ್ತ ಬಿಡು ಹೊತ್ತಿನಲ್ಲಿ ಬೀಡಿ ಕಟ್ಟುತ್ತ ಹಾಗೆ ಒಂದು ಮಧ್ಯಾಹ್ನ ಕುಳಿತಿದ್ದರು. ಜೊತೆಗೆ ಹೆಂಡತಿ, ಮಕ್ಕಳು ಸಂಸಾರ, ಆಡು ಕೋಳಿ ಮತ್ತು ಬಿಸಿಲು.

ಅದೇ ಹೊತ್ತಲ್ಲಿ ಅದೇ ಊರ ಒಳಗಿನ ಅಡಿಕೆ ತೋಟದ ನಡುವಿನ ಮನೆಯೊಂದರಲ್ಲಿ ಸಂಸಾರವಂತ, ಮಗನೊಬ್ಬನ ತಂದೆ, ಹೆಂಡತಿಯೊಬ್ಬಳ ಗಂಡ ರಾಮಚಂದ್ರ ಭಟ್ಟರು ಪ್ರಜ್ಞಾಹೀನರಾಗಿ ಬಿದ್ದರು. ಅವರು ಒಳ್ಳೆಯ ಸಂಸಾರವಂತನೂ, ಕಾನೂನು ವ್ಯವಹಾರಗಳಲ್ಲಿ ನುರಿತವನೂ ಆಗಿದ್ದರು. ಹಿಂದೆ ಎಂದೂ ಆಗದ ಹಾಗೆ ಪ್ರಜ್ಞೆ ತಪ್ಪಿಬಿದ್ದ ರಾಮಚಂದ್ರಭಟ್ಟರು ಮತ್ತೆ ಪ್ರಜ್ಞೆ ತಿಳಿದು ಎದ್ದಾಗ ಹಿಂದಿನ ರಾಮಚಂದ್ರಭಟ್ಟರಾಗಿರಲಿಲ್ಲ. ನಾನು ನನ್ನ ಹಳೆಯ ದೇಹ ಬಿಟ್ಟು ಹೋಗಿದ್ದೇನೆ ಎಂದು ಮುಸುಕು ಹಾಕಿಕೊಂಡು ಮಲಗಿದರು. ಮುಸುಕು ತೆಗೆಯಲು ಬಂದ ಹೆಂಡತಿಯನ್ನು ‘ನೀನು ಯಾರು’. ಎಂದು ಕೇಳಿದರು. ತಾಯಿಯನ್ನೂ ಹಾಗೇ ಕೇಳಿದರು. ಮಗನನ್ನೂ ಹಾಗೇ ಕೇಳಿದರು. ನಾನು ಜನ ಬೇರೆ ಅಂದರು. ಇವರೆಲ್ಲ ಯಾರು? ಇದು ಯಾರ ಮನೆ? ಈ ಹೆಂಗಸರೂ, ಗಂಡಸರೂ ಮಕ್ಕಳೂ ಯಾರೂ ಎಂದು ಕೇಳಲು ತೊಡಗಿ, ‘ಈ ದೇಹ ನನ್ನದಲ್ಲ, ಇದು ತೀರಿ ಹೋದ ರಾಮಚಂದ್ರನ ದೇಹ. ನಾನು ರಾಮಚಂದ್ರನಲ್ಲ’ ಎಂದು ಹೇಳಿದರು.

ಇಲ್ಲಿ ಹೀಗೆ ಆಗುತ್ತಿರುವಾಗ ಅಲ್ಲಿ ಬೀಡಿ ಕಟ್ಟುತ್ತಿದ್ದ ಕುಂಞಪ್ಪ ಬ್ಯಾರಿಯ ಕೈಯಲ್ಲಿದ್ದ ಬೀಡಿ ಕೆಳಕ್ಕೆ ಬಿತ್ತು. ಅದೇ ಹೊತ್ತಿಗೆ ಭಟ್ಟರ ಮನೆಯಿಂದ ಆಳುಗಳು ಕುಂಞಪ್ಪ ಬ್ಯಾರಿಗಳನ್ನು ಹುಡುಕಿಕೊಂಡು ಬಂದರು. ತೀರಿಹೋಗಿ ಹೊಸ ಹುಟ್ಟು ಪಡೆದ ರಾಮಚಂದ್ರ ಭಟ್ಟರು ಈಗ ಕುಂಞಪ್ಪ ಬ್ಯಾರಿಗಳನ್ನು ಮಾತ್ರ ಬಯಸಿದ್ದರು. ‘ಹೆಂಡತಿ ಹೆಂಡತಿ ಅಲ್ಲ, ತಾಯಿ ತಾಯಿ ಅಲ್ಲ. ಮಗ ಮಗನಲ್ಲ ಕುಂಞಪ್ಪ ಬ್ಯಾರಿ ಮಾತ್ರ ನನ್ನ ಸಖ’ ಆಂತ ಊಟ ಮಾಡದೆ ನೀರು ಕುಡಿಯದೆ ಹಠದಲ್ಲಿ ಮಲಗಿದ್ದರು. ಕುಂಞಪ್ಪ ಬ್ಯಾರಿಗಳು ಕಟ್ಟುತ್ತಿದ್ದ ಬೀಡಿಯನ್ನು ಬಿಟ್ಟು ಬಂದ ಆಳುಗಳ ಜೊತೆ ಭಟ್ಟರ ಮನೆಗೆ ಹೋದರು. ಹಾಸಿಗೆ ಕಂಬಳಿ ಎತ್ತಿಕೊಂಡು ಆರು ತಿಂಗಳು ಭಟ್ಟರ ಮನೆಯಲ್ಲಿ ಕಳೆದರು. ಭಟ್ಟರ ಆರೈಕೆ ಮಾಡಿದರು. ಹುಚ್ಚು ಅಂತ ಭಟ್ಟರನ್ನು ಆಸ್ಪತ್ರೆಗೆ ಸೇರಿಸಿದರೆ ಅಲ್ಲಿಯ ಡಾಕ್ಟರುಗಳೂ ಇದು ಹುಚ್ಚಲ್ಲ ಆಧ್ಯಾತ್ಮ ಅಂತ ಅವರನ್ನು ಮನೆಗೆ ಕಳುಹಿಸಿದರು.

putturina ajjaಕುಂಞಪ್ಪ ಬ್ಯಾರಿಗಳು ಹೇಳುತ್ತಾರೆ. ‘ಇದನ್ನು ಮಾತುಗಳಿಂದ ಹೇಳುವುದು ಕಷ್ಟ. ಈ ಭಟ್ಟರು ಈ ದೇಹವೇ ನನ್ನದಲ್ಲ ಅಂತ ಮಲಗಿದರು. ಸತ್ಯ ಅಂದರೇನು ಅದು ಹೇಗಿರುತ್ತದೆ ನೋಡುವಾ ಅಂತ ನನ್ನ ಜೊತೆ ಹಗಲು ರಾತ್ರಿ ಮಾತನಾಡಿದರು. ನಾನು ನಿದ್ದೆಯಲ್ಲಿ ತೂಕಡಿಸಿದರೂ ಭಟ್ಟರೂ ಮಾತು ನಿಲ್ಲಿಸದೆ, ಅವರು ಬೆಳಗಿನವರೆಗೂ ಮಾತನಾಡಿ ನಾನು ತಂದಿದ್ದ ಬೀಡಿಯೆಲ್ಲಾ ಸೇದಿ ಮುಗಿದು ಬೀಡಿ ಬೂದಿಯ ಗುಡ್ಡೆಯಾದರೂ ಭಟ್ಟರು ಮಾತನಾಡುತ್ತಲೇ ಇದ್ದರು. ಮಾತು ಮುಗಿದ ಮೇಲೆ ನನ್ನ ಜೊತೆ ತಿರುಗಲುತೊಡಗಿದರು. ಅಡಿಕೆ ವ್ಯಾಪಾರ, ಬಾಳೆಗೊನೆ ಕಡಿಯುವಲ್ಲೆಲ್ಲ ನನ್ನ ಜೊತೆ ಬಂದರು. ಮಾತನಾಡಿದರು. ಗಡ್ಡ ಮುಡಿ ಬಿಟ್ಟುಕೊಂಡು ಆರು ತಿಂಗಳು ಮಳೆಯಲ್ಲಿ ನೆನದು, ಆರು ತಿಂಗಳು ಬಿಸಿಲಲ್ಲಿ ಗುಡ್ಡದ ತುದಿಯಲ್ಲಿ ಕಳೆದ,ು ಅಲ್ಲೇ ಮಲಗಿ ನಾನೂ ಅವರ ಜೊತೆಯಲ್ಲೇ ಕಳೆದು ಊರವರೆಲ್ಲ ‘ಭಟ್ರೆಗ್ ಕುಂಞಪ್ಪ ಮರ್ಲ್’ ಪತ್ತಾಯೆ’ (ಭಟ್ಟರಿಗೆ ಕುಂಞಪ್ಪ ಹುಚ್ಚು ಹಿಡಿಸಿದ) ಅಂತ ಮೂದಲಿಸಿದರು. ‘ಅವರಿಗೆ ಹುಚ್ಚಾದರೆ ನಿನಗೂ ಹುಚ್ಚಾ’ ಅಂತ ನನ್ನ ಮನೆಯವರೂ ಮೂದಲಿಸಿದರು. ‘ಈ ಭಟ್ಟನಿಗೆ ಮೀನಿನ ಅಂಗಡಿಯಲಿ ಕೂರಲು ಹುಚ್ಚಾ’ ಅಂತ ಎಲ್ಲರೂ ಅಚ್ಚರಿಪಟ್ಟರು. ಆದರೂ ಭಟ್ಟರು ಬಿಡಲಿಲ್ಲ. ಬೆಂಗಳೂರು, ಮೈಸೂರು ಮಂಗಳೂರು ಅಂತ ಎಲ್ಲೆಲ್ಲೂ ಬ್ಯಾರಿಗಳನ್ನು ತಿರುಗಾಡಿಸಿದರು.

ಮಂಗಳೂರಲ್ಲಿ ಬ್ಯಾರಿಗಳ ಜೊತೆಯಲ್ಲಿ ಮಸೀದಿಯಲ್ಲಿ ಹೋಗಿ ಕುಳಿತರು. ಭಟ್ಟರು ನೆಟ್ಟಾರಿನ ದರ್ಕಾಸಿನ ಗುಹೆಯಲ್ಲಿ ತಪಸ್ಸಿಗೆ ಕುಳಿತಾಗ ಬ್ಯಾರಿಗಳು ಗುಹೆಯ ಹೊರಗೆ ಕಾದು ಕುಳಿತರು. ಭಟ್ಟರು ಮಳೆಯಲ್ಲಿ ನೆನೆಯದಂತೆ ಬಿಸಿಲಲ್ಲಿ ಕರಟದಂತೆ ಕೊಡೆ ಹಿಡಿದರು. ಭಟ್ಟರ ಜೊತೆ ಗುಡ್ಡದ ತುದಿಯಲ್ಲೂ, ಬಸ್ ನಿಲ್ದಾಣಗಳಲ್ಲೂ ಹುಚ್ಚನಂತೆ ಮಲಗಿ ಭಟ್ಟರು ಹೇಳುವುದನ್ನು ಕೇಳಿದರು.

ಈ ಭಟ್ಟರು ಹೇಳಿದ ಸತ್ಯವೇನು? ಈ ಬ್ಯಾರಿಗಳು ತಿಳಿಕೊಂಡ ಸತ್ಯಗಳೇನು? ನಾನೂ ನನ್ನ ಗೆಳೆಯನೂ ಈ ಇಬ್ಬರು ಸಖರ ಚಿತ್ರ ತೆಗೆಯಬೇಕೆಮದು ಹೊರಟು ಅವರಿಬ್ಬರು ಇರುವ ಈ ನೆಟ್ಟಾರು ಎಂಬ ಊರಿಗೆ ಮುಸುಕು ಹಾಕಿಕೊಂಡ ಕರಿಮೋಡಗಳ ಅಡಿಯಲ್ಲಿ ಗಡಿಬಿಡಿಯಲ್ಲಿ ನಡೆದು ಬರುತ್ತಿರುವಾಗ ನಗುವೂ, ಖೇದವೂ, ಅಚ್ಚರಿಯೂ, ಆನಂದವೂ ಉಂಟಾಗುತ್ತಿತ್ತು. ಈ ಇಬ್ಬರು ಗೆಳೆಯರ ಗೆಳೆತನವನ್ನು ಏನೆಂದು ವಣರ್ಿಸುವುದು? ಸುಮ್ಮನೇ ವರ್ಣಿಸುವುದರ ಬದಲು ಈ ಇವರಿಬ್ಬರನ್ನು ಕೊನೆಯ ಬಾರಿಗೆ ನೋಡುತ್ತಿರುವುದು ಎನ್ನುವ ಹಾಗೆ ನನ್ನ ಗೆಳೆಯ ಶಿವರಾಂ ಪೈಲೂರು ತನ್ನಲ್ಲಿದ್ದ ಎರಡೂ ಕ್ಯಾಮರಾಗಳಿಂದ ಅಳಿಯುತ್ತಿರುವ ಹಿಮರಾಶಿಯೊಂದನ್ನು ಕರಗಿ ಹೋಗುವ ಮೊದಲು ಹಿಡಿದಿಟ್ಟುಕೊಳ್ಳುವಂತೆ ಚಕಚಕನೆ ಈ ಇಬ್ಬರು ಮುದುಕರ ಚಿತ್ರಗಳನ್ನು ತೆಗೆಯುತ್ತಿದ್ದ. ಅವರಿಬ್ಬರು ಶಾಲೆಬಿಟ್ಟು ಅಗಲಿ ಹೋಗುತ್ತಿರುವ ಗೆಳೆಯರಂತೆ ಪೋಸು ಕೊಡುತ್ತಿದ್ದರು.

ರಾಮಚಂದ್ರ ಭಟ್ಟರು ತನ್ನ ಎಂದಿನ ಆಧ್ಯಾತ್ಮಿಕ ಭಂಗಿಯಲ್ಲಿ ಕುಳಿತು ಕಣ್ಣು ಮುಚ್ಚಿದರು. ಕುಂಞಪ್ಪ ಬ್ಯಾರಿಗಳ ಉಸಿರಾಟದ ತೊಂದರೆಯಿಂದ ಆರಾಮ ಕುರ್ಚಿಯಲ್ಲಿ ಮೈಚೆಲ್ಲಿ ಮಲಗಿ ಕೈಯಲ್ಲಿ ಅಲ್ಲಾಹುವಿನ ನಾನಾ ನಾಮಗಳನ್ನು ಪಠಿಸುವ ಜಪಮಾಲೆಯನ್ನು ತಿರುಗಿಸುತ್ತಾ ಧ್ಯಾನದಲ್ಲಿ ತೊಡಗಿದ್ದರು.

ನಿಮ್ಮಿಬ್ಬರ ಈಗಲೂ ಉಳಿದಿರುವ ಈ ಒಡನಾಟದ ಕಾರಣವನ್ನು ಹೇಳಲೇ ಬೇಕು ಎಂದು ಮೊಂಡು ಹಿಡಿದೆ. ರಾಮಚಂದ್ರ ಭಟ್ಟರು ಓರ್ವ ಮುಸಲ್ಮಾನ ಪ್ರಾರ್ಥಿಸುವಂತೆ ಎರಡೂ ಕೈಗಳನ್ನು ಆಕಾಶದ ಕಡೆಗೆ ಎತ್ತಿ ‘ಇದು ಒದಗಿಬಂದ ಸ್ನೇಹ ಉದ್ದೇಶರಹಿತವಾದದ್ದು’ ಎಂದು ಕಣ್ಣುಮುಚ್ಚಿಕೊಂಡರು. ಕುಂಞಪ್ಪ ಬ್ಯಾರಿಗಲು ಓರ್ವ ಬ್ರಾಹ್ಮಣನಂತೆ ಎರಡೂ ಹಸ್ತಗಳನ್ನು ಜೋಡಿಸಿ ಹಣೆಯ ನಡುವೆ ತಂದು ‘ಎಲ್ಲವನ್ನೂ ಆ ಪಡೆದವನೇ ಹೇಳಬೇಕು’ ಎಂದು ಕೈ ಮುಗಿದು ನಕ್ಕರು.
ಹಿಂದೊಮ್ಮೆ ಅವರೇ ಹೇಳಿದ್ದರು. ‘ನಮ್ಮಿಬ್ಬರ ಸ್ನೇಹವೆಂದರೆ ಹಾವನ್ನು ಮಂಗ ಹಿಡಿದ ಹಾಗೆ. ಹಾವೂ ಬಿಡುವುದಿಲ್ಲ ಮಂಗವೂ ಬಿಡುವುದಿಲ್ಲ ನಮ್ಮದೂ ಹಾಗೆ’ ಅಂದಿದ್ದರು.

ಹಾವು- ಮಂಗ -ಬ್ರಾಹ್ಮಣ -ಬ್ಯಾರಿ -ಸಂಸಾರ. ಆಧ್ಯಾತ್ಮ, ಸತ್ಯ, ಹೆಂಡತಿ, ಮಕ್ಕಳು, ಬೀಡಿ, ತಪಸ್ಸು, ಮಳೆ, ಬಿಸಿಲು, ಮೋಡ, ಏನು ಅಂತ ವರ್ಣಿಸುವುದು ಈ ಇಬ್ಬರ ಸ್ನೇಹದ ಕುರಿತು? ವರ್ಣಿಸದೇ ಹೇಗೆ ಇರುವುದು? ನಾನೂ ಇವರಿಬ್ಬರನ್ನು ನೋಡುತ್ತಾ, ಮಂಗನಂತೆ ಹಾವಿನಂತೆ ಚಡಪಡಿಸುತ್ತ ಸುರಿಯುವ ಮಳೆಯನ್ನೇ ನೋಡತೊಡಗಿದೆ ಇಬ್ಬರು ಮುದುಕ ಪ್ರೇಮಿಗಳು ಕಣ್ಣುಮುಚ್ಚಿ ಕುಳಿತು ಕೊಂಡಿದ್ದರು.

ಇದೆಲ್ಲ ನಡೆದು ಹತ್ತಿರ ಹತ್ತಿರ ಹತ್ತು ವರ್ಷಗಳಾಗಿವೆ. ಈಗ ಬ್ಯಾರಿಗಳೂ ಇಲ್ಲ.ಭಟ್ಟರೂ ಇಲ್ಲ. ಈ ನಡುವೆ ಏನೇನೆಲ್ಲಾ ನಡೆದಿದೆ. ಆದರೂ ಇದೆಲ್ಲ ಯಾಕೋ ನೆನಪಾಗುತ್ತಿದೆ.

putturina ajja1

[ಚಿತ್ರಗಳು:ಶಿವರಾಂ ಪೈಲೂರ್]

15 thoughts on “ರಾಮಚಂದ್ರ ಭಟ್ಟರೂ,ಕುಂಞಪ್ಪ ಬ್ಯಾರಿಗಳೂ

  1. ನೋಡ್ತಾ ಇರಿ ಇಸ್ಮಾಯಿಲ್ ಕೂಡಾ ಹೇಗೆ ಬರ್ತಾ ಬರ್ತಾ ನಾನು ಈಗ ಇರುವ ಹಾಗೆ ತಮಾಷೆಯಾಗಿ ಕಾಣಿಸ್ಲಿಕ್ಕೆ ಶುರುವಾಗ್ತಾರೆ ಅಂತ!ಮದುವೆಯಾದ ಮೇಲೆ ನೀವೂ ಕೂಡಾ insignificant ಆಗಿ ಕಾಣಿಸ್ತೀರ! ಅದು ಪ್ರಕೃತಿ ನಿಯಮ.

  2. ಓಹೋ, ಮದುವೆಯಾದವರೆಲ್ಲ insignificant ಆಗಿ ಕಾಣ್ತಾರೋ? ಇದ್ಯಾವ ಹೊಸ ಸತ್ಯ? ಯಾರು ಹೇಳಿದ್ದು? ಭಟ್ಟರೋ, ಕುಞಪ್ಪ ಬ್ಯಾರಿಗಳೋ?

    ಈ ಇಬ್ಬರ ಸ್ನೇಹದಂಥ ಸ್ನೇಹ ಇನ್ನೂ ನೋಡಲು ಸಿಕ್ಕೀತೇ?

  3. ಒಂದು ವಿಶಿಷ್ಟ ಅನುಭವ…ರಾಮಚಂದ್ರ ಭಟ್ಟರು ಪ್ರಜ್ಞಾಹೀನರಾಗಿ ಬಿದ್ದಿರೋದು, ಕುಂಞಪ್ಪ ಬ್ಯಾರಿಗಳ ಅಡಿಕೆ ವ್ಯಾಪಾರದ ಅಂಗಡಿ,ಅವರಿಬ್ಬರೂ ಬೆಟ್ಟದ ಮೇಲೆ ಕುಳಿತು ಆಧ್ಯಾತ್ಮದ ಶೋಧನೆ ಮಾಡುತ್ತಿದ್ದುದು ಎಲ್ಲ ಕಣ್ಣ ಮುಂದೆ ಹಾದು ಹೋದಂತಾಯಿತು….ಯಾವತ್ತೂ ನೆನಪಲ್ಲಿರಬಲ್ಲ ಸತ್ಯ ಕಥೆ…ಬಹಳ ಚೆನ್ನಾಗಿತ್ತು ರಶೀದ್ ಸರ್…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s