ದಾರಿ ಯಾವುದಯ್ಯಾ ವೈಕುಂಠಕೆ……….

 

vaikunta.jpg

‘ದಾರಿ ಯಾವುದಯ್ಯ ವೈಕುಂಠಕೆ’ಎಂದು ಗೊಣಗುತ್ತಿದ್ದೇನೆ.ಗೆಳೆಯ ದೂರದಿಂದ ದೂರವಾಣಿಯಲ್ಲಿ `ಕುರಾನ್ ಓದುತ್ತಿದ್ದೇನೆ..ಕೆಲವು ಕಡೆ ಎಷ್ಟು ಚೆನ್ನಾಗಿದೆ.ಇನ್ನು ಕೆಲವು ಕಡೆ ಗೊತ್ತಾಗುತ್ತಿಲ್ಲ. ನಿನಗೇನಾದರೂ ಅರಿವಾಗಿದೆಯೇ?’ಎಂದು ಕೇಳುತ್ತಿದ್ದಾನೆ. ನಾನು ಸುಮ್ಮನೇ ತಲೆಯಾಡಿಸುತ್ತೇನೆ.’ದೇವರುಗಳ ವಾಣಿ ಮಾರಾಯ.ನರಮನುಷ್ಯರ ಅರಿವಿಗೆ ಅಷ್ಟು ಸುಲಭದಲ್ಲಿ ಒದಗುವುದಿಲ್ ಲ.ಹಾಗೆ ಒದಗಿದ್ದಿದ್ದರೆ ಯಾಕೆ ನಾನು ಮತ್ತು ನೀನು ಯಾಕೆ ಈ ನಿತ್ಯ ನರಕದ ಬೆಂಕಿಯಲ್ಲಿ ಹೀಗೆ ಹಿತವಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದೆವು’ ಎಂದು ಕಿಚಾಯಿಸಬೇಕೆನ್ನಿಸುತ್ತದೆ.ಆದರೆ ಆತ ಹೀಗೆ ಗಂಭೀರವಾಗಿ ಧರ್ಮಪಾರಾಯಣದಲ್ಲಿ ತೊಡಗಿರುವಾಗ ಹೇಗೆ ಲಂಪಟತನ ಮೆರೆಯಲಿ ಎಂದು ಸುಮ್ಮನಾಗುತ್ತೇನೆ.

`ಒಂದು ಸಲ ಸಕಲೇಶಪುರದಿಂದ ತರಕಾರಿ ಲಾರಿ ಹತ್ತಿ ಶಿರಾಡಿ ಘಾಟಿ ಇಳಿದು ಬರುವಾಗ ಡ್ರೈವರ್ ಕುರಾನಿನ ಕ್ಯಾಸೆಟ್ ಹಾಕಿದ್ದ.ಆ ಚಳಿ, ಆ ಮಂಜು, ಆ ಬೆಳಗಿನ ಜಾವ, ಆ ತೂಕಡಿಕೆ,ಆ ಲಾರಿಯ ಇಂಜಿನ್‌ನ ಹಿತವಾದ ಬಿಸಿ, ಮತ್ತು ಕ್ಯಾಸೆಟ್ಟಿನಲ್ಲಿ ಕೇಳಿಸುತ್ತಿದ್ದ ಕುರಾನು ಒಂದು ತರಹದ ದೈವಾನುಭೂತಿಯಂತೆ ಅನಿಸುತ್ತಿತ್ತು..’ ಆತನಿಗೆ ಕಥೆ ಹೇಳಲು ಶುರು ಮಾಡಿದ್ದೆ. ಆ ಮೇಲೆ ಆತನಿಗೆ ಚೇಷ್ಟೆ ಮಾಡಬೇಕೆನಿಸಿ ‘ಅದು ಹೋಗಲಿ ಬಿಡು. ಮೂರು ವರುಷದ ನನ್ನ ಮಗ ಎಷ್ಟು ಚಂದ ಸಂಸ್ಕೃತ ಶ್ಲೋಕ ಹೇಳುತ್ತಾನೆ ಗೊತ್ತಾ..ಬೇಕಾದರೆ ಕೇಳು’ ಎಂದು ಫೋನನ್ನ ನನ್ನ ಕಂದನ ಕೈಗೆ ಕೊಟ್ಟೆ. ನನ್ನ ಪ್ರಚಂಡನೂ ಪುಂಡನೂ ಆಗಿರುವ ಮೂರು ವರುಷದ[ ಈಗ ೫ ವರ್ಷ ] ಮಗ ಶುರು ಮಾಡಿದ.

‘ ಕರಾಗ್ರೇ ವಸತೇ ಲಕ್ಷ್ಮೀ, ಕರ ಮದ್ಯೇ ಸರಸ್ವತೀ..’

ಸ್ನಾನದ ಶ್ಲೋಕ ಹೇಳು ಮಗಾ ಅಂದೆ .ಆತ ಶುರು ಮಾಡಿದ. ‘ಗಂಗೇಚ,ಯಮುನೇಚ..’ ಆಮೇಲೆ ಮಲಗುವ ಮೊದಲುaki.jpg ಹೇಳುವ ಶ್ಲೋಕ ಹೇಳಿದ.ಊಟಕ್ಕೆ ಮೊದಲು ಹೇಳುವ ಶ್ಲೋಕ ಹೇಳಿದ.ಆಮೇಲೆ ಝಂಡಾ ಊಂಚಾ ಹಾಡಿದ ಆಮೇಲೆ ಜಯಭಾರತ ಜನನಿ ಹಾಡಿದ.ಆಮೇಲೆ ಅದೇನೋ ನೆನಪಿಸಿಕೊಂಡು ಜೋರಾಗಿ ಅಳಲು ಶುರುಮಾಡಿದ.

ಕುರಾನಿನ ಬಗ್ಗೆ ಮಾತನಾಡಲು ದೂರವಾಣಿ ಮಾಡಿದ್ದ ಗೆಳೆಯ ಈಗ ಅಳುತ್ತಿದ್ದ ಮಗನನ್ನು ರಮಿಸುವ ಕೆಲಸ ಮಾಡುತ್ತಿದ್ದ.ನಾನು ಎಲ್ಲವನ್ನು ಹಿತವಾಗಿ ಮಜಾ ತೆಗೆದು ಕೊಳ್ಳುತ್ತಿದ್ದೆ.ಈ ನನ್ನ ಮಗ ಈ ಸಣ್ಣ ವಯಸ್ಸಿನಲ್ಲೇ ಶ್ಲೋಕಗಳನ್ನೂ ಬೈಗುಳಗಳನ್ನೂ ಸಿನಿಮಾ ಹಾಡುಗಳನ್ನೂ ಕಲಿತಿದ್ದ. ಅವನು ಯಾವಾಗಲೂ ಬಲಗಾಲಿನ ಚಪಲಿಯನ್ನು ಎಡಗಾಲಿಗೂ ಎಡಗಾಲಿನದನ್ನು ಬಲಗಾಲಿಗೂ ಹಾಕುತ್ತಿದ್ದ . ಅದಕ್ಕೆ ಯಾರೋ ಅವನನ್ನು ಉಲ್ಟಾ ಸಾಬಿ ಎಂದು ಕರೆದಿದ್ದರು. ಅದನ್ನು ಬಾಯಿ ಪಾಠ ಮಾಡಿಕೊಂಡು ಆತ ಅಪ್ಪನಾದ ನನ್ನನ್ನೂ ಕೆಲವೊಮ್ಮೆ ಉಲ್ಟಾ ಸಾಬಿ ಎಂದು ಕರೆಯುತ್ತಿದ್ದ. ಎಡ ಬಲಗಳನ್ನು ಸಾಕಷ್ಟು ಕನ್ಫ್ಯೂಸ್ ಮಾಡಿಕೊಂಡಿರುವ ನನಗೆ ಆ ಹೆಸರು ಸಾಕಷ್ಟು ಅರ್ಥಪೂರ್ಣವಾಗಿದೆ ಅಂತ ನಾನೂ ಸುಮ್ಮನಿದ್ದೆ.

ಗುಲ್ಬರ್ಗದಲ್ಲಿದ್ದಾಗ ಹೀಗೇ ದಾರಿ ಯಾವುದಯ್ಯ ವೈಕುಂಠಕೆ ಎಂದು ಸುಮ್ಮನೆ ಬಿಸಿಲಿರಲಿ ಮಳೆಯಿರಲಿ ಒಬ್ಬನೇ ಓಡಾಡುತ್ತಿದೆ. ಅಲ್ಲಿ ಒಂದು ಕಡೆ ಸೂಫಿ ಸಂತರೊಬ್ಬರ ಉರೂಸು ನಡೆಯುತ್ತಿತ್ತು.ಅದು ಬಹುಶಃ ಹದಿಮೂರನೇ ಶತಮಾನದ ಸೂಫಿ ಸಂತರೊಬ್ಬರ ಉರೂಸು. ಈ ಮಹಾಮಹಿಮ ಸೂಫಿ ಸಂತ ಓರ್ವ ಉಗ್ರ ಸೇನಾನಿಯೂ ಆಗಿದ್ದ.ಆತ ತನ್ನ ಖಡ್ಗವನ್ನ ಒರೆಯಿಂದ ಹೊರಗೆಳೆದರೆ ನರಬಲಿಯಾಗದೆ ಅದು ಒರೆಯನ್ನು ಸೇರುತ್ತಿರಲಿಲ್ಲ.ಅಷ್ಟು ಕೋಪಿಷ್ಟ ಖಡ್ಗ.ಈ ಮಹಾ ಸಂತ ಸಮಾದಿಯಾದಾಗ ಆ ತನ ಜೊತೆಯಲ್ಲೇ ಆ ಖಡ್ಗವನ್ನೂ ಸಮಾದಿ ಮಾಡಿದ್ದರು.ಆ ಸiದಿಯ ಪಕದಲ್ಲೇ ಆಳವಾದ ಬಾವಿಯೊಂದಿದೆ. ಅದು ಆ ಸಂತ ತನ್ನ ಖಡ್ಗವನ್ನ ನೆಲಕ್ಕೆ ಊರಿ ಉಂಟು ಮಾಡಿದ ಬಾವಿ .ಆ ಬಾವಿಯ ನೀರಿಗೆ ನರಮನುಷ್ಯರ ಎಲ್ಲ ಕಾಯಿಲೆಗಳನ್ನ ಗುಣ ಪಡಿಸುವ ಮಾಂತ್ರಿಕ ಶಕ್ತಿಯಿದೆ ಎಂದು ಈಗಲೂ ಜನ ಮುಗಿ ಬೀಳುತ್ತಾರೆ.
ಏಳುನೂರು ವರ್ಷಗಳ ನಂತರ ಒಂದು ಉರಿಬಿಸಿಲಿನ ಸಂಜೆ ನಾನು ಒಬ್ಬ ರೋಗಿಷ್ಟ ನಂತೆ ಆ ಬಾವಿಯ ನೀರನ್ನು ನೋಡುತ್ತಾ ನಿಂತಿದ್ದೆ.ಅದು ಎಲ್ಲ ಹಳೆಯ ಬಾವಿಗಳಂತೆ ಕಸ ಕಡ್ಡಿ ಪ್ಲಾಸ್ಟಿಕ್ ತುಂಬಿಕೊಂಡು ನಿಂತಿತ್ತು.ಆ ಸಂತನ ಈಗಿನ ವಾರಸುದಾರ ಇನ್ನೂ ಮೀಸೆ ಮೂಡದಿದ್ದ ಒಬ್ಬ ಯುವಕ. ಆದರೆ ಆತನ ಮುಖದಲ್ಲಿ ಏಳುನೂರು ವರ್ಷಗಳ ಇತಿಹಾಸ ಮಡುಗಟ್ಟಿ ನಿಂತಿತ್ತು.ಆ ಬಾವಿಯ ಕುರಿತು ಕೇಳಿದೆ ಆತನಿಗೆ ಏನೂ ಗೊತ್ತಿರಲಿಲ್ಲ. ಖಡ್ಗದ ಕುರಿತು ಕೇಳಿದೆ.ಆತ ಭಾವಾವೇಶಕ್ಕೆ ಒಳಗಾದ. ಆ ಖಡ್ಗದ ಕುರಿತು ಮಾತನಾಡಿದರೂ ನರಹತ್ಯೆಯಾಗಬಹುದು ಎಂಬಂತೆ ಆ ಮೀಸೆ ಮೂಡದ ಯುವಕನ ಸದ್ದು ??ನಡುಗುತ್ತಿತ್ತು ಸಧ್ಯ ಏನೂ ಆಗದಿರಲಿ ಎಂದು ಅಲ್ಲಿಂದ ಬಂದು ಬಿಟ್ಟೆ.

ಈಗಲೂ ಈ ಹೊತ್ತಲ್ಲೂ ಎಷ್ಟು ತಿಣುಕಿದರೂ ಸ್ವರ್ಗದ ದಾರಿ ಅರಿವಾಗುತ್ತಿಲ್ಲ. ಹಾಳು ನರಕದ ಸಹವಾಸವೂ ಸುಖ ಕೊಡುತಿಲ್ಲ.ಮಗ ಮತ್ತೆ ಗಮನ ಸೆಳೆಯುವ ಸೂಚನೆ ಎಂಬಂತೆ ನಡು ರಾತ್ರಿಯಲ್ಲಿ ಕನವರಿಸುತ್ತಿದ್ದಾನೆ. ಅದು ಏನೆಂದೂ ಗೊತ್ತಾಗುತ್ತಿಲ್ಲ.

 

Advertisements