ಟಾಲ್ ಸ್ಟಾಯ್ ಮಹರ್ಷಿಯ ಒಂದು ಪುಟ್ಟ ಕಾದಂಬರಿ

 tolstoy.jpgಹೇಗಾದರೂ ಮಾಡಿ ಒಂದು ಕಾದಂಬರಿ ಬರೆದುಬಿಡು.ಆಮೇಲೆ ನಿನ್ನ ಹಿಡಿಯುವವರೇ ಇರುವುದಿಲ್ಲ’ ಎಂದು ಗೆಳೆಯರು ಪುಸಲಾಯಿಸುತ್ತಿದ್ದರು.

ಇವರು ಪುಸಲಾಯಿಸುತ್ತಿರುವುದರ ಹಿಂದೆ ಏನೋ ಮಸಲತ್ತಿರಬೇಕು.ಇಲ್ಲ,ನನಗಾಗುವುದಿಲ್ಲ ಎಂದು ನಾನು ತಲೆಕೆದರಿಕೊಂಡು ಊರಿಡೀ ಅಳುತ್ತಾ ಓಡಾಡುವುದನ್ನು ಕಂಡು ಖುಷಿಪಡಲು ಇವರು ಮಸಲತ್ತು ನಡೆಸುತ್ತಿರಬೇಕು ಎಂದು ನಾನವರ ಮಾತುಗಳನ್ನು ಕೇಳಿಸಿಯೂ ಕೇಳಿಸಿಕೊಳ್ಳದವನ ಹಾಗೆ ಸುಮ್ಮನೇ ಓಡಾಡುತ್ತಿದ್ದೆ.

ಒಂದು ವೇಳೆ ಇವರು ಇನ್ನೂ ಹಠ ಹಿಡಿದರೆ ಹೇಗೆ ತಪ್ಪಿಸಿಕೊಳ್ಳುವುದು?

ತಪ್ಪಿಸಿಕೊಳ್ಳಲಾಗದೆ ಬರೆಯಲೇ ಬೇಕಾಗಿ ಬಂದ ಪಕ್ಷದಲ್ಲಿ ಏನು ಬರೆಯುವುದು?

 ಕಾದಂಬರಿ ಬರೆಯುವುದು ಅಂದರೆ ಏನು ಸುಲಭವೇ… ಅದಕ್ಕೆ ಜೀವನದರ್ಶನ ಬೇಕು, ದೇಶಕಾಲಗಳ ಅಮೂಲಾಗ್ರ ಅರಿವಿರಬೇಕು,ಜನಜೀವನದ ನಾಡಿಮಿಡಿತ,ಮನುಷ್ಯ ಸ್ವಭಾವದ ಏರಿಳಿತ ಎಲ್ಲ ತಿಳಿದಿರಬೇಕು.

ಪ್ರಹಸನವೊಂದರ ಕೇವಲ ಪಾತ್ರವಾಗಲು ಲಾಯಕ್ಕಾಗಿರುವ ನನ್ನಂತವನು ಕಾದಂಬರಿ ಏನು ಕಡಿಯುವುದು.

ಅದನ್ನು ಬರೆಯುವುದಕ್ಕಿಂತ ಏನಾದರು ಓದುವುದು ಒಳ್ಳೆಯದು.ಓದುವುದಕ್ಕಿಂತ ಓಡಾಡುವುದು ಒಳ್ಳೆಯದು ಅಂದುಕೊಂಡು ಓಡಾಡಿಕೊಂಡಿದ್ದೆ.

ಇವನು ಹೀಗೆ ಓಡಾಡಿಕೊಂಡಿದ್ದರೆ ತಪ್ಪಿಸಿಕೊಳ್ಳುತ್ತಾನೆ ಎಂದು ಅರಿತುಕೊಂಡ ಹಿರಿಯರೊಬ್ಬರು ನೀನು ಕಾದಂಬರಿ ಬರೆದರೆ ಒಂದು ಪದಕ್ಕೆ ಒಂದು ರೂಪಾಯಿ ಕೊಡುವೆ.ಅದರಲ್ಲೂ ನೀನು ಮೈಸೂರಿನ ಹುಲಿ ಟಿಪ್ಪೂ ಸುಲ್ತಾನನ ಬಗ್ಗೆ ಕಾದಂಬರಿ ಬರೆದರೆ ಪದಕ್ಕೆ ಒಂದೂವರೆ ಕೊಡುವೆ ಎಂದು ಪಂಥ ನೀಡಿ ಹೋಗಿದ್ದರು.

ನಾನು ಈ ಅಪಾರ ಧನವನ್ನು ಹೇಗೆ ನಿರ್ವಹಿಸುವುದು ಎಂದು ತಲೆಕೆಡಿಸಿಕೊಂಡು ಏನೂ ಗೊತ್ತಾಗದೆ ಮರವೊಂದರ ಕೆಳಗೆ ಟಾಲ್ ಸ್ಟಾಯ್ ಮಹರ್ಷಿಯ ಪುಟ್ಟ ಕಾದಂಬರಿಯೊಂದನ್ನ ಹಿಡಿದು ಕೂತಿದ್ದೆ.
ಅದು ಟಾಲ್ಸ್ಟಾಯ್ ಮಹಷರ್ಿ ತನ್ನ ಜೀವಿತದ ಕೊನೆಯ ಕಾಲಘಟ್ಟದಲ್ಲಿ ಬರೆದ ಕಾದಂಬರಿ.

ಅದರ ಹೆಸರು ‘ಹಾಜಿ ಮುರಾದ್’.

ಹಾಜಿ ಮುರಾದ್ ರಷ್ಯಾದ ಚಕ್ರವರ್ತಿ ಒಂದನೇ ನಿಕೋಲಾಸನಿಗೆ ಒಂದು ಕಾಲದಲ್ಲಿ ಸಡ್ಡು ಹೊಡೆದಿದ್ದ ಚೆಚೆನ್ಯಾದ ಮುಸ್ಲಿಂ ಬಂಡುಕೋರ ನಾಯಕ.

ನಿಧಾನಕ್ಕೆ ಶಿಥಿಲವಾಗುತ್ತಿದ್ದ ರಷ್ಯನ್ ಸೇನೆಯ ಬೆನ್ನಹುರಿಗಳಲ್ಲಿ ನಡುಕ ಹುಟ್ಟಿಸಿದ್ದ ಉಗ್ರಗಾಮಿ.

ಆತನ ಕುರಿತ ದಂತಕಥೆಗಳು ಆತನಿಗಿಂತ ಸಹ್ಯವಾಗಿದ್ದಂತ ಮನುಷ್ಯ.hadji-murad.jpg

ಒಂದು ಕಾಲದಲ್ಲಿ ಕಕಾಸಸ್ ಪ್ರಾಂತದಲ್ಲಿ ಸೈನಿಕನಾಗಿದ್ದ ಟಾಲ್ಸ್ಟಾಯ್ ಹಾಜಿ ಮುರಾದನ ಬಗ್ಗೆ ಕೇವಲ ಕೇಳಿ ಅರಿತಿದ್ದ.

ಅದಕ್ಕಿಂತ ಹೆಚ್ಚಾಗಿ ಸೈನಿಕನಾಗಿರುವಾಗ ಆತನಿಗೆ ರಷ್ಯನ್ ದೊರೆ ಒಂದನೇ ನಿಕೋಲಾಸನ ಐಲುತನಗಳು ಹತ್ತಿರದಿಂದ ಗೊತ್ತಾಗಿತ್ತು.

ಹಾಜಿ ಮುರಾದನ ಜೀವನ ವೃತ್ತಾಂತ ಟಾಲ್ಸ್ಟಾಯ್ಗೆ ಯಾಕೋ ತನ್ನ ಜೀವಿತದ ಕೊನೆಯ ಕಾಲದಲ್ಲಿ ತುಂಬ ಮುಖ್ಯ ಅನ್ನಿಸಿರಬೇಕು.

1910ರಲ್ಲಿ ಯಾವುದೋ ಒಂದು ಅಜ್ಞಾತ ರೈಲು ನಿಲ್ದಾಣದಲ್ಲಿ ಜಗತ್ತು ಈವರೆಗೆ ಕಂಡ ಟಾಲ್ಸ್ಟಾಯ್ ಎಂಬ ಮಹಾಕಥೆಗಾರ ಅನಾಥನಂತೆ ಸತ್ತುಹೋದ.

1912 ರಲ್ಲಿ ಹಾಜಿ ಮುರಾದ್ ಎಂಬ ಈ ಪುಟ್ಟ ಕಾದಂಬರಿ ಪ್ರಕಟವಾಯಿತು.

ಪುಟ್ಟದು ಯಾಕೆಂದರೆ ಆತ ಬರೆದ ವಾರ್ ಅಂಡ್ ಪೀಸ್ ,ಅನ್ನಾಕರೇನಿನಾ ಇದೆಲ್ಲಾ ಮಹಾ ಕಾದಂಬರಿಗಳು.

ಅವುಗಳ ಮುಂದೆ ಹಾಜಿ ಮುರಾದ್  ತುಂಬ ಸಣ್ಣದು.

ಆದರೆ ನಾನು ಯಾಕೋ ಸಣ್ಣದಾದರೇನು ದೊಡ್ಡದಾದರೇನು ಸದ್ಯಕ್ಕೆ ಬರೆಯುವುದರಿಂದ ಬಚಾವಾದರೆ ಸಾಕು ಎಂದು ಹುಣಸೂರಿನ ಹತ್ತಿರ ಮರವೊಂದರ ಬುಡದಲ್ಲಿ ಹಗಲಿಡೀ ಕುಳಿತು ಹಾಜಿಮುರಾದನ್ನ ಓದಿಮುಗಿಸಿದೆ.

ಆವತ್ತು ಶ್ರಾವಣ ಶನಿವಾರ.ದೂರದ ಒಂಟಿಗುಡಿಸಲಲ್ಲಿ ಶನಿಕತೆ ಇಟ್ಟುಕೊಂಡಿದ್ದರು.

ಶನಿಮಹಾತ್ಮೆಯ ಹಾಡು ಹಾರ್ಮೋನಿಯಂ ಸದ್ದಿನ ನಡುವೆ ತೇಲಿಬರುತ್ತಿತ್ತು.

ಎದುರುಗಡೆ ಎರಡು ಕಾಗೆಗಳು ನೆಲದಲ್ಲಿ ಬಿದ್ದಿದ್ದ ಟೂಥ್ ಪೇಸ್ಟಿನ ಮುಚ್ಚಳಕ್ಕಾಗಿ ಜಗಳವಾಡುತ್ತಿತ್ತು.

ಈ ಕಾಗೆಗಳಿಗೆ ಈ ಮುಚ್ಚಳ ಯಾಕೆ ಎಂದು ಕೊನೆಯವರೆಗೂ ನನಗೆ ಗೊತ್ತಾಗಲೇ ಇಲ್ಲ. ಇನ್ನೂ ಗೊತ್ತಾಗುತ್ತಿಲ್ಲ.

ಟಾಲ್ ಸ್ಟಾಯ್ ಬರೆದ ಹಾಜಿ ಮುರಾದ್ ಎಂಬ ಕಾದಂಬರಿ ಹೀಗೆ ಶುರುವಾಗುತ್ತದೆcover.gif

ಕಾದಂಬರಿಯ ನಿರೂಪಕ ಕೊಯ್ಲಾದ ಹೊಲದ ನಡುವೆ ನಡೆದು ಹೋಗುತ್ತಾ ಇರುತ್ತಾನೆ.

ಕೊಯಿಲು ಮುಗಿದಿದೆ.

ಸುತ್ತ ನಾನಾ ಬಗೆಯ ಹೂಗಳು.

ಕೆಂಪು, ಬಿಳಿ, ನಸುಗೆಂಪು ಹೂಗಳು,ಪರಿಮಳ ಸೂಸುವ ಸೊಕ್ಕಿರುವ ಕಾಡು ಸುಮಗಳು.

ನಿರೂಪಕ ಒಂದೊಂದೇ ಹೂಗಳನ್ನು ಹೆಕ್ಕಿಕೊಳ್ಳುತ್ತಾ ಆಘ್ರಾಣಿಸುತ್ತಾ ಮನೆಯ ಕಡೆ ನಡೆಯುತ್ತಿರುತ್ತಾನೆ.

ನಡುವಲ್ಲಿ ಕೆಸರು ಹೊಂಡವೊಂದರಲ್ಲಿ ಮುಳ್ಳುಕಂಟಿಯೊಂದರಲ್ಲಿ ಅರಳಿರುವ ಒಂದು ಸುಂದರ ಹೂ.

ಇದನ್ನೂ ಆಯ್ದುಕೊಳ್ಳಬೇಕೆಂದು ಆತ ಹೊಂಡಕ್ಕೆ ಇಳಿಯುತ್ತಾನೆ.

ಆ ಮುಳ್ಳು ಕಂಟಿ ಹೂವಿಗೆ ಮೂತಿಯಿಕ್ಕಿ ದುಂಬಿಯೊಂದು ಜೇನು ಹೀರಿ ಮತ್ತಾಗಿ ಅಲ್ಲೇ ನಿದ್ದೆ ಹೋಗಿರುತ್ತದೆ.

ಆತ ಆ ಹೂವನ್ನು ಕಿತ್ತುಕೊಳ್ಳಲು ನೋಡುತ್ತಾನೆ.

ಅದು ಅಷ್ಟು ಸುಲಭದಲ್ಲಿ ಸಿಗುವುದಿಲ್ಲ.

ಬಲ ಪ್ರಯೋಗಿಸಿ ಕಿತ್ತುಕೊಳ್ಳುವಲ್ಲಿ ಜಯಶಾಲಿಯಾಗುತ್ತಾನೆ.

ಆದರೆ ಅಷ್ಟರಲ್ಲಿ ಆ ಹೂವು ಮುದುಡಿ ಹೋಗಿರುತ್ತದೆ.

ಅದು ಚಂದವಿತ್ತು ಎಂಬುದರ ಕುರುಹೂ ಇರುವುದಿಲ್ಲ.

ಕೈಯಲ್ಲಿರುವ ಉಳಿದ ಸುಕೋಮಲ ಸುಮಗಳ ಜೊತೆ ಅದು ಕುರೂಪಿಯಂತೆ ಕಾಣುತ್ತದೆ.

ನಿರೂಪಕ ಅದನ್ನು ದೂರಕ್ಕೆ ಒಗೆದು ಬಿಡುತ್ತಾನೆ.

‘ಅಯ್ಯೋ ಎಷ್ಟೊಂದು ಜೀವ ಬಲವಿದ್ದ ಹೂ ಅದು! ಎಷ್ಟು ಪ್ರತಿರೋಧ ತೋರಿಸಿ ಸೋಲೊಪ್ಪಿತು’ಎಂದು ಉದ್ಘರಿಸಿ ಮುನ್ನಡೆಯುತ್ತಾನೆ.

ನಡೆಯುತ್ತಾ ಆ ಕಂಟಿಹೂವಿನ ಕುರಿತು ಯೋಚಿಸುತ್ತಾ ಸಾಗಿದವನಿಗೆ ಯಾಕೋ ಹಾಜಿ ಮುರಾದ್ ಎಂಬ ಮುಸ್ಲಿಂ ಬಂಡುಕೋರನ ಕತೆ ನೆನಪಾಗುತ್ತದೆ.

ಆ ಕತೆಯನ್ನು ಹೇಳುತ್ತಾ ಹೋಗುತ್ತಾನೆ.

ನೂರಿಪ್ಪತ್ತು ಪುಟಗಳಲ್ಲಿ ಹಾಜಿ ಮುರಾದನ ಕಥೆ ಹೇಳಿ ಮುಗಿಸಿ ಕೊನೆಯಲ್ಲಿ ಟಾಲ್ಸ್ಟಾಯ್ ಮತ್ತೊಮ್ಮೆ ಈ ಮುಳ್ಳು ಕಂಟಿಯ ಹೂವನ್ನು ನೆನಪಿಸಿಕೊಳ್ಳುತ್ತಾನೆ.

ಕಾದಂಬರಿಯ ಕೊನೆಯಲ್ಲಿ ಹಾಜಿ ಮುರಾದನ ಕಡಿದ ತಲೆಯನ್ನು ರಷ್ಯನ್ ಸೈನಿಕರು ಊರೂರಿಗೆ ಕೊಂಡುಹೋಗಿ ಪ್ರದರ್ಶಿಸುತ್ತಾರೆ .ಅದು ಎಲ್ಲರಿಗೆ ಎಚ್ಚರಿಕೆಯ ಸಂಕೇತ.

ಟಾಲ್ ಸ್ಟಾಯ್ ಎಂಬ ಮಹರ್ಷಿಗೆ ಅದು ಯಾರ ಕೈಗೂ ನಿಲುಕದ ಕಾಡು ಹೂವೊಂದರ ಸಂಕೇತ!

ಯಾಕೋ ನಾನು ಹಾಜಿ ಮುರಾದ್ ಎಂಬ ಕಾದಂಬರಿಯನ್ನ ಓದಿ ಆನಂದಿಸಿದ್ದನ್ನ ಇಲ್ಲಿ ನಮೂದಿಸಿಯೇ ಇಲ್ಲ.

ಯಾಕೋ ಹೂವೊಂದರ ಪ್ರತಿಮೆಗೆ ನೇಣು ಹಾಕಿಕೊಂಡಿರುವೆ.

ಓದಿರುವುದೇ ಹೀಗಾದರೆ ಇನ್ನು ಬರೆದರೆ ಹೇಗೆ?

ಕಾಗೆಗಳನ್ನೂ, ನೆಲದಲ್ಲಿ ಬಿದ್ದಿದ್ದ ಟೂಥ್ ಪೇಸ್ಟಿನ ಮುಚ್ಚಳವನ್ನೂ ಯೋಚಿಸುತ್ತಾ ಕೂತಿರುವೆ.

Advertisements