ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವ ನನ್ನ ಮಗನನ್ನು ನೋಡಿಕೊಳ್ಳಲು ಸಿದ್ಧಮ್ಮ ಎಂಬ ಗಾಣಿಗರ ಅಜ್ಜಿ ಬರುತ್ತಾಳೆ. ಈ ಅಜ್ಜಿಯ ಬೆನ್ನು ಸ್ವಲ್ಪ ಬಾಗಿದೆ. ಸೊಂಟ ಯಾವಾಗಲೂ ಹಿಡಿದುಕೊಂಡಿರುತ್ತದೆ. ಕೀಟಲೆಯಲ್ಲಿ ನನಗಿಂತಲೂ ಒಂದು ಕೈ ಮೇಲೆಯೇ ಇರುವ ನನ್ನ ಮಗ ಒಂದು ಕಣ್ಣು ತೆರೆದುಕೊಂಡು ಇನ್ನೊಂದು ಕಣ್ಣನ್ನು ಮುಚ್ಚಿ ಕಣ್ಣೆದುರು ಕಾಣಿಸುವ ಎಲ್ಲ ಚರಾಚರ ವಸ್ತುಗಳ ಸ್ಪೆಲ್ಲಿಂಗನ್ನು ಹೇಳಿಕೊಂಡು ಕ್ಯಾಟ್ ಅನ್ನುವ ಹೆಸರಲ್ಲಿ ‘ಸಿ’ ಯಾಕೆ ಬೇಕು? ‘ಯು’ ಯಿಂದ ಶುರುವಾಗುವುದಾದರೆ ಕೊಡೆಯನ್ನು ಯುಂಬ್ರೆಲಾ ಎಂದು ಕರೆಯಬೇಕಲ್ಲವೇ ಎಂದೆಲ್ಲಾ ಗೊಂದಲ ಮಾಡಿಕೊಂಡು ನಿದ್ದೆ ಬಾರದೆ ಒದ್ದಾಡುತ್ತಿರುತ್ತಾನೆ. ಅವನನ್ನು ಹೆದರಿಸಿ ಬೆದರಿಸಿ ರಮಿಸಿ ನಿದ್ದೆ ಹೋಗಿಸಿ ಸಿದ್ದಮ್ಮ ತಾನೂ ಸುಸ್ತಾಗಿ ತೂಕಡಿಸುತ್ತಾ ಕುಳಿತಿರುತ್ತಾಳೆ.
ಮಧ್ಯಾಹ್ನದ ಹೊತ್ತು ಬೇರೆ ಏನೂ ಕೆಲಸವಿಲ್ಲದಿದ್ದರೆ ನಾನು ಆ ಅಜ್ಜಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಅವಳ ಸಂಕಟಗಳನ್ನು ಅವಳ ಬಾಯಿಯಿಂದ ಹೊರತರಿಸಿ ಅವಳ ಸಂಕಟಗಳಿಗೇನಾದರೂ ಪರಿಹಾರ ಒದಗಿಸಬಹುದಾ ಎಂದು ಯೋಚಿಸುತ್ತಿರುತ್ತೇನೆ. ಅಜ್ಜಿ ಮಂಪರಿನಲ್ಲಿ ಹೇಳುವ ಬಹುತೇಕ ಸಂಕಟಗಳಿಗೆ ಈ ಜಗತ್ತಿನಲ್ಲಿ ಪರಿಹಾರಗಳಿಲ್ಲ ಎಂದು ಗೊತ್ತಾಗಿ ಪೆಚ್ಚಾಗಿ ಬಿಡುತ್ತೇನೆ.
ಉದಾಹರಣೆಗೆ ಗಾಣಿಗರ ಸಿದ್ಧಮ್ಮ ಮೊನ್ನೆ ಒಂದು ದಿನ ಮಧ್ಯಾಹ್ನ ನಿದ್ದೆಯ ಮಂಪರಿನಲ್ಲಿ ಮಾತನಾಡುತ್ತಾ, ‘ನನ್ನ ಮೊಮ್ಮಗನಿಗೆ ಇನ್ಪೋಸಿಸ್ನಲ್ಲಿ ಒಂದು ಕೆಲಸ ಕೊಡಿಸಿ ಬಿಡಪ್ಪಾ ನಿನಗೆ ಪುಣ್ಯ ಬರುತ್ತೆ, ನಿನ್ನ ಕಾಲು ಕಟ್ಕೊಳ್ತೀನಿ’ ಅಂತ ಹೇಳುತ್ತಿದ್ದಳು. ಈ ಮೊಮ್ಮಗ ಏಳನೇ ಕ್ಲಾಸಲ್ಲಿ ಫೈಲಾಗಿ ಈಗ ನಾಲ್ಕು ವರ್ಷವಾಗಿದೆ. ಈತ ಸಿದ್ದಮ್ಮನ ಮೊದಲ ಮಗಳ ಮಗ. ಮೈಸೂರಿನಿಂದ ಹೊರಗೆ ಶ್ರೀರಂಗಪಟ್ಟಣದ ಬಳಿ ಅಪ್ಪನ ಜಮೀನಿನಲ್ಲಿ ಹೊಲ ಉಳುತ್ತಾ ಉಳಿದ ಸಮಯದಲ್ಲಿ ಶಾಲೆಗೆ ಹೋಗುತ್ತಾ ಇದ್ದ. ಮೈಸೂರು ಮಾಹಿತಿ ತಂತ್ರಜ್ಞಾನದ ಕೇಂದ್ರವಾದ ಮೇಲೆ ಜಮೀನಿನ ರೇಟು ಸಿಕ್ಕಾಪಟ್ಟೆ ಏರಿ ಅದು ಗೊತ್ತಿಲ್ಲದ ಈ ಬಾಲಕನ ಅಪ್ಪ ಒಂದಿಷ್ಟು ದುಡ್ಡಿಗೆ ಅದನ್ನು ಅಡ ಇಟ್ಟು ಈ ಜಮೀನು ಈಗ ಯಾರದೋ ಪಾಲಾಗಿದೆ. ಆ ಹುಡುಗ ಪೋಲಿಬಿದ್ದಿದ್ದಾನೆ. ಆದರೆ ಆತ ಒಳ್ಳೆಯ ಹುಡುಗ. ಸಿದ್ದಮ್ಮನಿಗೆ ಅವನನ್ನು ಕಂಡರೆ ಪ್ರೀತಿ. ಇನ್ಪೋಸಿಸ್ನಲ್ಲಿ ತುಂಬಾ ಸಂಬಳ ಸಿಗುತ್ತದೆ ಅಂತ ಸಿದ್ಧಮ್ಮನಿಗೆ ಯಾರೋ ಹೇಳಿದ್ದಾರೆ. ಅದಕ್ಕೆ ಸಿದ್ದಮ್ಮ ತೂಕಡಿಕೆಯ ನಡುವೆಯೇ ಕನಸುಗಳನ್ನು ಕಂಡುಕೊಂಡು ತನ್ನ ಮನದ ಆಸೆಯನ್ನು ನನ್ನೊಡನೆ ಹೇಳಿಕೊಳ್ಳುತ್ತಿದ್ದಾಳೆ.
ನಾನು ಮಲಗಿರುವ ಮಗನನ್ನೂ, ತೂಕಡಿಸುತ್ತಿರುವ ಅಜ್ಜಿಯನ್ನೂ ಬಿರುಬಿಸಿಲಲ್ಲಿ ಬೆವರುತ್ತಿರುವ ಮೈಸೂರನ್ನೂ ಮತ್ತು ಇನ್ಫೋಸಿಸ್ ಎಂಬ ಕಂಪೆನಿಯನ್ನೂ ಯೋಚಿಸಿಕೊಂಡು ಪೆಚ್ಚಾಗುತ್ತೇನೆ.
ಸಿದ್ದಮ್ಮ ನಿದ್ದೆಯಲ್ಲಿ ಇನ್ನೂ ಏನೇನೋ ಹೇಳುತ್ತಾ, ನನ್ನ ಬಗ್ಗೆಯೂ ಏನೇನೋ ಪ್ರಶ್ನೆಗಳನ್ನು ಕೇಳುತ್ತಾ ಕುಳಿತಲ್ಲೇ ತೂಕಡಿಸಿರುತ್ತಾಳೆ. `ನಿನ್ನ ತಾಯಿಯ ಕಣ್ಣಿನ ಪೊರೆ ಆಪರೇಷನ್ ಮಾಡಿಸಿದ್ದು ಸರಿಯಾಯ್ತೇನಪ್ಪಾ, ನಿಮ್ಮ ಗಂಡಹೆಂಡತಿಯರ ಜಗಳ ಸರಿ ಆಯ್ತೇನಪ್ಪಾ’ ಎಂದೆಲ್ಲಾ ಕೇಳುತ್ತಿರುತ್ತಾಳೆ. ನಾನು ಉತ್ತರಿಸುತ್ತೇನೆ. ಸಿದ್ದಮ್ಮನ ಮಂಪರಿಗೂ ನನ್ನ ಎಚ್ಚರಕ್ಕೂ ದೊಡ್ಡ ವ್ಯತ್ಯಸವೇನೂ ಇರುವುದಿಲ್ಲ.
ಎಚ್ಚರವಿರುವಾಗ ಸಿದ್ದಮ್ಮ ಏನೂ ಮಾತನಾಡುವುದಿಲ್ಲ. ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. ‘ಏನೂ ಆಗೋದಿಲ್ಲಾ ಬುಡಪ್ಪಾ…’ ಎಂದು ಎಲ್ಲ ಕೆಲಸಗಳನ್ನೂ ಮಾಡುತ್ತಿರುತ್ತಾಳೆ. ಮಗ ನಿದ್ದೆಯಿಂದ ಏಳುವವರೆಗೆ ತಾನೂ ತೂಕಡಿಸುತ್ತಾ ಕಾದಿದ್ದು, ಅವನನ್ನು ಆಟವಾಡಲು ಕಳುಹಿಸಿ, ಇನ್ನೊಂದು ಮನೆಗೆ ಪಾತ್ರೆತೊಳೆಯುವ ಕೆಲಸಕ್ಕೆ ಹೋಗುತ್ತಾಳೆ. ಉಳಿದ ಹೊತ್ತಿನಲ್ಲಿ ಮೈಸೂರಿನ ಕಂದಾಯ, ಆರೋಗ್ಯ ನೋಂದಣಿ, ಬ್ಯಾಂಕ್ ಇತ್ಯಾದಿ ಕಛೇರಿಗಳನ್ನು ಸುತ್ತುತ್ತಾ ತನಗೆ ಇನ್ನೂ ಬರಬೇಕಾದ ರೇಷನ್ಕಾಡರ್್, ವೃದ್ದಾಪ್ಯವೇತನ, ಬ್ಯಾಂಕ್ಸಾಲ ಇತ್ಯಾದಿಗಳಿಗೆ ಓಡಾಡುತ್ತಿರುತ್ತಾಳೆ. ಬಹುಶಃ ಈ ಜನ್ಮದಲ್ಲಿ ಆಕೆಗೆ ಇದು ಯಾವುದೂ ಸಿಗುವುದಿಲ್ಲ.
ರೇಷನ್ ಕಾರ್ಡ್ ಗೆ ಬೇಕಾದ ವಾಸ್ತವ್ಯದ ದೃಢೀಕರಣ ಪತ್ರ ಈಕೆಯ ಬಳಿ ಇಲ್ಲ. ಈಕೆಗೆ ನಾಲ್ಕು ಗಂಡು ಮಕ್ಕಳಿರುವುದರಿಂದ ವೃದ್ದಾಪ್ಯ ವೇತನ ಸಿಗುವುದಿಲ್ಲ. ಸಂಬಳದ ಸರ್ಟಿಫಿಕೇಟ್ ಇಲ್ಲದಿರುವುದರಿಂದ ಬ್ಯಾಂಕ್ ಸಾಲ ಸಿಗುವುದಿಲ್ಲ. ಸಿದ್ದಮ್ಮನಿಗೆ ತನಗೆ ಎಷ್ಟು ವಯಸ್ಸು ಎಂಬುದು ನೆನಪಿಲ್ಲ. ಮದುವೆ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಆಯ್ತು ಎಂಬ ನೆನಪಿದೆ. ಗಂಡ ರಂಗಸ್ವಾಮಿ ಆಗ ಹೇಗಿದ್ದರು ಎಂಬುದು ನೆನಪಿಲ್ಲ. ಗಂಡ ರಂಗಸ್ವಾಮಿ ಹಳ್ಳಿ ಹಳ್ಳಿ ತಿರುಗುತ್ತಾ ಗಂಧದ ಕಡ್ಡಿ ಮಾರುತ್ತಾ ಇದ್ದವನು ಈಗ ಕಳೆದ ಹತ್ತುವರ್ಷಗಳಿಂದ ದೇಹದ ಒಂದು ಬದಿಗೆ ಲಕ್ವಾ ಹೊಡೆಸಿಕೊಂಡು ಮಾತುಬಾರದೆ ಕಂಡ ಕಂಡದ್ದಕ್ಕೆಲ್ಲಾ ಕಣ್ಣೀರು ಹಾಕುತ್ತಾ ಕಾಲೆಳೆಯುತ್ತಾ ಮೈಸೂರಿನ ಚೆಲುವಾಂಬಾ ಉದ್ಯಾನವನದಲ್ಲಿ ಓಡಾಡುತ್ತಿರುತ್ತಾರೆ. ಯಾರನ್ನು ನೋಡಿದರೂ ಅವರಿಗೆ ಅಳು ಬರುತ್ತದೆ. ಮಾತು ಬರುವುದಿಲ್ಲ. ಆತ ಉದ್ಯಾನವನದ ಲತಾಮಂಟಪದಲ್ಲಿ ಕಣ್ಣೀರು ಹಾಕುತ್ತಾ, ಸಿದ್ದಮ್ಮ ಎಲ್ಲರ ಮನೆ ಕೆಲಸ ಮುಗಿಸ ಬರುವವರೆಗೆ ಕಾದಿದ್ದು ನಂತರ ಆಕೆಯನ್ನು ಹಿಂಬಾಲಿಸಿಕೊಂಡು ಒಂಟಿಕೊಪ್ಪಲಿನ ತನ್ನ ಒಂದು ರೂಮಿನ ಮನೆಯನ್ನು ಸೇರುತ್ತಾನೆ.
ಆ ಒಂದು ರೂಮಿನ ಮನೆ ಒಂದುಕಾಲದಲ್ಲಿ ಗಂದದ ಕಡ್ಡಿ ರಂಗಸ್ವಾಮಿಯ ದೊಡ್ಡ ಆಸ್ತಿಯ ಒಂದು ಸಣ್ಣ ಭಾಗವಾಗಿತ್ತು. ಕೋಟರ್ು, ಕಛೇರಿ, ದಾಯಾದಿ ವೈಮನಸ್ಸು, ಸಾಲ ಇತ್ಯಾದಿಗಳಿಂದ ಅದು ಕರಗಿ ರಂಗಸ್ವಾಮಿ ಮತ್ತು ಸಿದ್ದಮ್ಮನ ದೊಡ್ಡ ಸಂಸಾರ ಈಗ ಈ ಒಂದು ಸಣ್ಣ ಕೋಣೆಯಲ್ಲಿದೆ. ಮದುವೆಯಾಗಿ ಹೋದ ನಾಲಕ್ಕು ಹೆಣ್ಣು ಮಕ್ಕಳಲ್ಲಿ ಬಹುತೇಕ ಹೆಣ್ಣುಮಕ್ಕಳು ಗಂಡಂದಿರ ಕಷ್ಟ ಸಹಿಸಲಾರದೆ ಇಲ್ಲೇ ಬಂದಿದ್ದಾರೆ. ಗಂಡು ಮಕ್ಕಳೂ ಬಹುತೇಕ ಮಂದಿ ಹೀಗೇ ಬಂದಿದ್ದಾರೆ. ಸಿದ್ದಮ್ಮ ಮನೆ ಕೆಲಸ ಮಾಡಿದ ಹಣದಲ್ಲಿ ಇವರೆಲ್ಲಾ ಬದುಕ ಬೇಕಾಗಿದೆ. ಇದನ್ನೆಲ್ಲಾ ಯೋಚಿಸಿಕೊಂಡು ಮಾತು ಹೊರಟು ಹೋಗಿರುವ ರಂಗಸ್ವಾಮಿ ಅಳುವಿನಲ್ಲೇ ಎಲ್ಲವನ್ನು ವ್ಯಕ್ತ ಪಡಿಸುತ್ತಿರುತ್ತಾರೆ.
ಸಿದ್ದಮ್ಮ ಹುಟ್ಟಿದ್ದು ಮಂಡ್ಯದ ಬಳಿಯ ನಾಗಮಂಗಲದಲ್ಲಿ. ಮೂರು ವರ್ಷಕ್ಕೆ ತಾಯಿ ತೀರಿ ಹೋಗುತ್ತಾರೆ. ಸಿದ್ದಮ್ಮನ ತಾಯಿ ಸಿದ್ದಮ್ಮನ ತಂದೆಯ ಎರಡನೇ ಹೆಂಡತಿ. ಆ ಹೆಂಡತಿ ಸಿದ್ದಮ್ಮನ ತಾಯಿಯ ಅಕ್ಕ. ಆಕೆಗೂ ಒಬ್ಬಳು ಮಗಳು ಆ ಇಬ್ಬರು ಹೆಂಡತಿಯರೂ ಗಂಡನೂ ಕಾಲರಾ ಬಂದು ತೀರಿಹೋದ ಮೇಲೆ ಉಳಿದ ಅಕ್ಕ ಸಿದ್ದಮ್ಮನನ್ನು ಸಾಕಿ ಶಾಲೆಗೆ ಕಳಿಸಿದ್ದಾರೆ. ಆ ಶಾಲೆಯಲ್ಲಿ ಸದಾ ತೂಕಡಿಸುವ ಒಬ್ಬ ಉಪಾದ್ಯಾಯ. ಆತನ ತೂಕಡಿಕೆ ತಾಳಲಾರದೆ ಸಿದ್ದಮ್ಮ ಶಾಲೆಗೆ ಹೋಗದೆ ನಾಗಮಂಗಲದ ಕೇಶವ ದೇವಸ್ಥಾನದ ಅಂಗಳದಲ್ಲಿ ಲಗೋರಿ ಆಡುತ್ತಾ ಪುರಿ ತಿನ್ನುತ್ತಾ ಸಾಬರ ಹುಡುಗರ ಜೊತೆ, ಬೆಸ್ತರ ಹುಡುಗಿಯರ ಜೊತೆ ಕುಂಟಾಬಿಲ್ಲೆ ಆಡುತ್ತಾ ದೊಡ್ಡವಳಾಗಿದ್ದಾಳೆ. ಹನ್ನೊಂದನೆಯ ವಯಸ್ಸಿನಲ್ಲಿ ಮದುವೆಯೂ ಆಗಿದೆ.
ಆಮೇಲೆ ಎಂಟು ಮಕ್ಕಳು ಆಗಿದ್ದಾರೆ. ಮನೆಕೆಲಸ ಶುರುಮಾಡಿ 30 ವರ್ಷಗಳಾಗಿವೆ. ಸಿದ್ದಮ್ಮನ ವಿಶೇಷತೆ ಏನೆಂದರೆ ಆಕೆ ಮಕ್ಕಳನ್ನು ಬಲು ಚೆನ್ನಾಗಿ ನಿದ್ದೆ ಮಾಡಿಸುತ್ತಾಳೆ. ಆಕೆ ನಿದ್ದೆ ಮಾಡಿಸಿ ಬೆಳೆಸಿದ ಹತ್ತಾರು ಮಕ್ಕಳು ಈಗ ದೊಡ್ಡವರಾಗಿ ಅದರಲ್ಲಿ ಕೆಲವರು ಮಾಹಿತಿ ತಂತ್ರಜ್ಞರೂ, ಕಲಾವಿದರೂ, ಕವಿಗಳೂ ಆಗಿದ್ದಾರೆ. ನನ್ನ ಮಗ ದೊಡ್ಡ ಸ್ಪೆಲ್ಲಿಂಗ್ ತಜ್ಞನಾಗುವ ಗುಣ ಲಕ್ಷಣಗಳನ್ನು ಈಗಲೇ ತೋರಿಸುತ್ತಿದ್ದಾನೆ. ಸಿದ್ದಮ್ಮ ಅಷ್ಟು ದೊಡ್ಡ ಹಣೆ ಬೊಟ್ಟು ಇಟ್ಟುಕೊಂಡು ಮೂಗುತಿ ಧರಿಸಿಕೊಂಡು ನಿದ್ದೆಯಲ್ಲಿ ಕನವರಿಸುತ್ತಿದ್ದಾಳೆ. ಆಕೆ ಎಚ್ಚರಾದಾಗ ನೋಡಲಿ ಎಂಬ ಉದ್ದೇಶದಿಂದ ನಾನು ಡಾಕ್ಟರ್ ರಾಜಕುಮಾರ್ ನಟಿಸಿರುವ ಸಿನೆಮಾವೊಂದು ಬರುತ್ತಿರುವ ಟಿ.ವಿ. ಚಾನಲ್ ಆನ್ ಮಾಡಿ ಹೊರಟು ಬಂದ್ದಿದ್ದೇನೆ.
ಸಿದ್ದಮ್ಮನಿಗೆ ಈಗ ಒಂದೇ ಒಂದು ಆಸೆ ಉಳಿದಿದೆ. ಯಾರೋ ಎರಡುರೂಪಾಯಿ ಬಡ್ಡಿದರದಲ್ಲಿ ನಲವತ್ತು ಸಾವಿರ ಸಾಲ ನೀಡುವೆ ಎಂದಿದ್ದಾರೆ. ಎರಡುರೂಪಾಯಿ ಬಡ್ಡಿಯ ಆ ಸಾಲವನ್ನು ತೆಗೆದುಕೊಂಡು- ನಾಲ್ಕು ರೂಪಾಯಿ ಬಡ್ಡಿದರದಲ್ಲಿ ತೆಗೆದು ಕೊಂಡಿರುವ ಸಾಲ ತೀರಿಸಿ- ಅಡ ಇಟ್ಟಿರುವ ಮನೆಯ ಇನ್ನೊಂದು ಕೋಣೆಯನ್ನು ಬಿಡಿಸಿಕೊಂಡು- ಅದನ್ನು ಬಾಡಿಗೆಗೆ ಕೊಟ್ಟು- ಆ ಹಣದಲ್ಲಿ ಈ ಎರಡು ರೂಪಾಯಿ ಬಡ್ಡಿದರದ ಸಾಲವನ್ನು ತೀರಿಸಬೇಕು ಎಂಬುದು ಸಿದ್ದಮ್ಮನ ಇತ್ತೀಚಿನ ಯೋಚನೆ. ಅದಕ್ಕಾಗಿಯೇ ಇರಬೇಕು ನಿದ್ದೆಯಲ್ಲೂ ಅವಳ ಕೈ ಬೆರಳುಗಳು ಬಡ್ಡಿದರವನ್ನು ಲೆಕ್ಕ ಹಾಕುತ್ತಾ ಇರುತ್ತವೆ.
ಮೊನ್ನೆ ಮೈಸೂರಿನ ಇನ್ ಫೋಸಿಸ್ ಗೆ ಭಾರತದ ಮಾನ್ಯ ರಾಷ್ಟ್ರಪತಿ ಅಬ್ದುಲ್ ಕಲಾಂ ಬಂದಿದ್ದರು. ಅಲ್ಲಿಗೆ ನಾನೂ ಹೋಗುತ್ತಿದ್ದೇನೆ ಎಂದು ಸಿದ್ದಮ್ಮನಿಗೆ ಯಾರೋ ಹೇಳಿದ್ದರು. ‘`ಅಯ್ಯೋ ರಾಷ್ಟ್ರಪತಿಗಳಿಗೆ ಹೇಳಿ ಇನ್ಪೋಸಿಸ್ನಲ್ಲಿ ನನ್ನ ಮೊಮ್ಮಗನಿಗೆ ಒಂದು ಕೆಲಸ ಕೊಡಿಸಿಬಿಡು ಮಗಾ, ನಿನಗೆ ಪುಣ್ಯ ಬರುತ್ತದೆ’ ಎಂದು ಅಜ್ಜಿ ಬೇಡಿಕೊಳ್ಳುತ್ತಿದ್ದರು.
ನಾನು ಏನು ಮಾಡುವುದು ಎಂದು ಗೊತ್ತಾಗದೆ ಸುಮ್ಮನಿದ್ದೆ. ಅದೂ ಅಲ್ಲದೆ ಇನ್ಪೋಸಿಸ್ಗೆ ಹೋಗುವುದು ನನ್ನ ಕಾರ್ಯಸೂಚಿಯಲ್ಲಿರಲಿಲ್ಲ. ನಾನು ಇನ್ನೊಂದು ಸಮಾರಂಭಕ್ಕೆ ಹೋಗ ಬೇಕಾಗಿತ್ತು. `ಜಾಗತೀಕರಣದ ಸವಾಲುಗಳು, ಧರ್ಮ, ಆಧ್ಯಾತ್ಮ ಹಾಗೂ ಶಿಕ್ಷಣ’ ಎನ್ನುವ ರಾಷ್ಟ್ರೀಯ ವಿಚಾರ ಗೋಷ್ಟಿಯೊಂದನ್ನು ವರದಿ ಮಾಡಲು ನಾನು ಹೋಗಬೇಕಾಗಿತ್ತು. ಹಾಗಾಗಿ ಸಿದ್ದಮ್ಮನಿಗೆ ಇದನ್ನು ಹೇಗೆ ಹೇಳವುದು ಗೊತ್ತಾಗಲಿಲ್ಲ.
[ಈ ಬ್ಲಾಗಿನಲ್ಲಿ ಸಿದ್ದಮ್ಮನ ಚಿತ್ರಗಳು ಪ್ರಕಟವಾಗುತ್ತಿದೆ. ಗಾಣಿಗರ ಸಿದ್ದಮ್ಮನಿಂದ ನಿದ್ದೆ ಮಾಡಿಸಿಕೊಂಡು ಬೆಳೆದು ದೊಡ್ಡವರಾದ ಮಕ್ಕಳು ಯಾರಾದರೂ ಆಕೆಯನ್ನು ನೆನಪಿಸಿಕೊಂಡರೆ ಸಹಾಯ ಮಾಡಬಹುದಾಗಿದೆ.]
“ಗಾಣಿಗರ ಸಿದ್ಧಮ್ಮನ ಇನ್ಪೋಸಿಸ್ ಕನಸು” ಗೆ 10 ಪ್ರತಿಕ್ರಿಯೆಗಳು
ಎಷ್ಟು ಚೆನ್ನಾಗಿ ಸಿದ್ದಮ್ಮನ ಬಗೆಗೆ ಬರೆದಿದೀರಿ ಥ್ಯಾಂಕ್ಯೂ. ಇಂಥದೇ ಚೆಂದ
ರಶೀದ್
ನಿಮ್ಮ ಹೂವಿನ ಕೊಲ್ಲಿಯ ಫೋಟೋಗಳು ಚೆನ್ನಾಗಿದ್ದರೂ ಅದಕ್ಕಿಂತ ನಾವು ಊಹಿಸಿಕೊಂಡದ್ದೇ ಚಂದ ಅಲ್ಲವಾ
ರಶೀದ್,
ಓದುತ್ತಾ ಹೋದಂತೆ ನನಗೇ ಗೊತ್ತಿಲ್ಲದಂತೆ ಕಣ್ಣಂಚು ಒದ್ದೆಯಾಗಿತ್ತು. ಕಾಲ ಬುಡದಲ್ಲೇ ಇಷ್ಟು ಒಳ್ಳೆಯ ವಿಷಯ ಇಟ್ಟುಕೊಂಡು ಇಷ್ಟು ದಿನ ಇಡೀ ಮೈಸೂರನ್ನೇ ಶೋಧಿಸಿಬಿಟ್ಟಿರಲ್ಲಾ!
ಮತ್ತೆ ಮತ್ತೆ ಕಾಡುವ ಬರಹಕ್ಕಾಗಿ ಥ್ಯಾಂಕ್ಸ್.
-ಸುರೇಶ್ ಕೆ.
ರಶೀದ್,
ನನಗೆ ನಿಮ್ಮ ಮೇಲೆ ಹೊಟ್ಟೆಕಿಚ್ಚು. ನಿಮಗೆ ಕಾಣುವ ಕಣ್ಣು, ಹೃದಯ ಎರಡೂ ಇವೆ.
-ಸುದರ್ಶನ್
ಪ್ರಿಯ ಸುದರ್ಶನ್
ಆದರೆ ತಲೆ ಯಾಕೋ ಕೊಂಚ ಕೆಟ್ಟು ಹೋದಂತಿದೆ
ಮತ್ತು ಅದು ಯಾರ ಅರಿವಿಗೂ ಬರುತ್ತಿಲ್ಲವಲ್ಲ ಎಂದು ಕಳವಳವಾಗುತ್ತಿದೆ-
ರಶೀದ್.
ನಿಮ್ಮ ಬರಹ ಲಾಜವಾಬ್!ಕಮೆ೦ಟ್ ಮಾಡಲು ಬಹಳ ಯೋಚನೆ ಮಾಡಬೇಕು ಓದುಗರು ಆದರೆ ತಲೆ ಚೆನ್ನಾಗಿ ಇಟ್ಟುಕೊಳ್ಳಿ ಮಾರಾಯರೆ.
ಸಿದ್ದಮ್ಮನ ಪಕ್ಕದಲ್ಲಿ ತು೦ಟ ನಗುವ ಪುಟ್ಟ ಹುಡುಗ ದೊಡ್ಡವನಾಗಬೇಕೆ ಆಕೆಯ ಕಷ್ಟಗಳಿಗೆ ಪರಿಹಾರ ಸಿಗಲು ? ನಾನು ಸಹಾಯ ಮಾಡುವದಾದರೆ ಹೇಗೆ ?
ಅನನ್ಯರ ಮಾತು ನಿಜ. ಸಿದ್ದಮ್ಮನ ಕಥೆ ನಮಗೆಲ್ಲ ಒಳ್ಳೆಯ ಓದಾಯಿತು. ಬರಿಯ ಓದಿಗೇ ನಿಲ್ಲದೆ ಸಿದ್ದಮ್ಮನಿಗೆ ಸಹಾಯವಾಗುವಂತೆಯೂ ಆಗಲಿ.
ಇಂತಹ ಕರುಳು ಚುರ್ರೆನ್ನುವ ಕಥಾನಕಗಳಿಂದ ಇವುಗಳನ್ನೋದುವ ಮಧ್ಯಮ ವರ್ಗದವರಾದ ನಾವುಗಳು ಪಾಪಪ್ರಜ್ಞೆಯಿಂದ ಕೆಲ ಕಾಲ ನರಳಬಹುದೇನೋ. ಈ ಕೋಟಲೆಗಳಿಗೆ ಕೊನೆ ಹೇಗೆ? ಕೇವಲ ಉದಾರವಾದೀ ನಿಲುವುಗಳಿಂದಲೇ ನಿಭಾಯಿಸಬಹುದಾದಂತಹ ಸಮಸ್ಯೆಯೇ ಇದು?
ಅಬ್ದುಲ್ ರಶೀದ್ ಸರ್…,ಜಾಗತೀಕರಣದ ಮಾಂತ್ರಿಕತೆಯ ಗಟ್ಟಿ ಬೀಜ .ಅಪ್ಪಟ ದೇಶೀಯ ಸಂಸ್ಕೃತಿ.ಗಾಣಿಗೇರ ಸಿದ್ದಮ್ಮನಂತವಳಲ್ಲಿ…ಕನಸಿನ ಮೊಳಕೆಯೊಡಿಯುವಂತೆ..ಮಾಡಿದ ತಮ್ಮ ಕತೆ…ತುಂಬಾ ಚನ್ನಾಗಿದೆ…ವೈ.ಎಸ್.ಹರಗಿ..