ರಾಮಾಪುರದಲ್ಲೊಂದು ಜನ್ಮರಹಸ್ಯ

                                                                  -೧-

 ನಾವು ರಾಮಾಪುರ ತಲುಪಿದಾಗ ರಾತ್ರಿಯಾಗಿತ್ತು. ಕತ್ತಲಲ್ಲಿ ಈ ದರಿದ್ರ ಧರೆಗೆ ಇಳಿದ ಕ್ಷುದ್ರ ದೇವತೆಯರಂತೆ ನಾವು ಮಹದೇಶ್ವರ ಟ್ರಾವೆಲ್ಸ್ ಬಸ್ಸಿನಿಂದ ಜಿಗಿದು ರಾಮಾಪುರ ಬಸ್ ಸ್ಟಾಪ್ ನಲ್ಲಿ ಇಳಿದಾಗ ಇದು ಯಾವ ಊರು? ಇಲ್ಲಿಯ ಜನರು ಹೇಗೆ? ಬಡವರಲ್ಲಿ ಬಡವರು ಎಷ್ಟು? ಕೊಬ್ಬಿರುವ ಭೂಮಾಲಕರು ಹೇಗೆ? ಅಲ್ಲಿನ ರಾಜಕಾರಣಿಗಳು ಯಾರು? ಅಧಿಕಾರಷಾಹಿ ಯಾರ ಬಾಲ? ಪೋಲೀಸು  ವ್ಯವಸ್ಥೆ ಯಾರ ಪರ- ಒಂದೂ ಗೊತ್ತಾಗದಂತೆ ಕಡ್ಲೆಪುರಿ ಮಾರುವ ಹೆಂಗಸಿನ ಸೀಮೆಣ್ಣೆ ಬುಡ್ಡಿಯ ಕರ್ರಗಿನ ಹೊಗೆಯಿಂದ ಆವೃತವಾದ ಮಂದ ಬೆಳಕು ಆ ಊರಿನ ಏಕೈಕ ಆಶಾಕಿರಣದಂತೆ ಅಲ್ಲಾಡುತ್ತಿತ್ತು.ದಾರಿ ದುರ್ಗಮವಾಗಿದ್ದರೂ ಭವಿಷ್ಯ ಉಜ್ಜ್ವಲವಾಗಿದೆ ಎಂಬ ಮಾವೋತ್ಸೆ ತುಂಗನ ಮಾತನ್ನು ನಂಬಿಕೊಂಡು  ತಿನ್ನಲು ಏನಾದರೂ ಸಿಗಬಹುದೋ ಎಂಬ ಆಸೆಯಿಂದ ನಾನು ಆ ಕತ್ತಲಲ್ಲೂ  ಏನನ್ನೋ ಹುಡುಕುವ ದಾರ್ಶನಿಕನಂತೆ ಆ ಊರನ್ನು ತಿನ್ನುವವನಂತೆ ನೋಡುತ್ತಿದ್ದೆ.
 ಉಳ್ಳವರ ಕೈಯ್ಯಿಂದ ಇಲ್ಲದವರನ್ನು ಕಾಪಾಡಬೇಕು.ಉಳ್ಳವರ ಪರವಾಗಿರುವ ಹೋಟೆಲ್ಲುಗಳಿಂದ ಉಣ್ಣಬಾರದು
 ಉಳ್ಳವರು ಕರೆದರೂ ಊಟಮಾಡಬಾರದು ಏನೂ ಇಲ್ಲದ ಜನರ  ಜೊತೆ ಬದುಕಬೇಕು ಅವರೇ ನಮ್ಮ ವಿಶ್ವವಿದ್ಯಾನಿಲಯಗಳು ಎಂದೆಲ್ಲ ನಮಗೆ ನಾವೇ ಕಟ್ಟು ಪಾಡು ಹಾಕಿಕೊಂಡು ಉಳ್ಳವರ ಗುಲಾಮಗಿರಿಗೆ ನಮ್ಮನ್ನು ತಯಾರು ಮಾಡುವ ಕಾಲೇಜುಗಳಲ್ಲಿ ಹೆಚ್ಚು ಕಲಿಯುವುದೇನೂ ಇಲ್ಲ ಎಂದು ನಂಬಿಕೊಂಡು ನಾವು ರಾಮಾಪುರದಲ್ಲಿ ಇಳಿದರೆ ಎಲ್ಲರೂ ಕತ್ತಲಲ್ಲಿ ಕರಗಿ ಹೋಗಿ ಯಾರು ಯಾರೆಂದು ಗೊತ್ತಾಗದೆ ಕಿತ್ತು ತಿನ್ನುತ್ತಿರುವ ಈ ಹಸಿವೊಂದೇ ಸತ್ಯ ಎಂಬ ಅರಿವಾಗಿತ್ತು
 ಅದು ಬೇರೆ ಸದಾ ಬರದಲ್ಲಿ ಇರುತ್ತಿದ್ದ ಈ ಪ್ರಾಂತದಲ್ಲಿ ಈ ಸಲ ಮೇ ತಿಂಗಳಲ್ಲೇ ಮಳೆ ಸುರಿದು ನಿಂತು ಎಲ್ಲವನ್ನೂ ರಾಡಿ ಮಾಡಿ ಬಿಟ್ಟಿತ್ತು. ನಾವು ಮೈಸೂರಿನ ಛತ್ರಿಮರ ಸರ್ಕಲಲ್ಲಿ ಬಸ್ಸು ಹತ್ತುವಾಗಲೇ ಶುರುವಾಗಿದ್ದ ಚಿರಿಚಿರಿ ಮಳೆ ಕೊಳ್ಳೇಗಾಲ ದಾಟುತ್ತಿದ್ದಂತೆ ತಾರಕಕ್ಕೆ ಏರಿ ಕೊಳ್ಳೇಗಾಲದಲ್ಲಿ ಬಸ್ಸು ಬಸುರಿಯಂತೆ ತುಂಬಿಕೊಂಡು ಅದು ಯಾವುದೋ ಹ್ಯಾಂಡ್ ಪೋಸ್ಟಲ್ಲಿ ಒಂದಿಷ್ಟು ಕುಡುಕರು ಬೇರೆ ಹತ್ತಿಕೊಂಡು ಬಾಗಿಲಲ್ಲಿ ನೇತಾಡಿಕೊಂಡು ಕನ್ನಡವನ್ನು ತುಂಬ ಅಶ್ಲೀಲವಾಗಿ ಉಪಯೋಗಿಸುತ್ತಿದ್ದರು. ಬೇಂದ್ರೆ ಕುವೆಂಪು ನರಸಿಂಹಸ್ವಾಮಿ ಎಚ್ಚೆಸ್ಕೆ ಮುಂತಾದವರ ಕನ್ನಡದಿಂದ ಪ್ರೇರಿತನಾಗಿ ಕನ್ನಡದ ಬಗ್ಗೆ ವಿಪರೀತ ಮೋಹ ಬೆಳೆಸಿಕೊಂಡಿದ್ದ ನನಗೆ ಗರಬಡಿದಂತಾಗಿತ್ತು.ಬಸ್ಸಿನ ಬಾಗಿಲಲ್ಲಿ ನೇತಾಡುತ್ತಿದ್ದವರು ನೋಡಲು ಬಡವರ ಹಾಗೇ ಇದ್ದರು.ರಾಮಾಪುರದವರೆಗೂ ಅಶ್ಲೀಲವಾಗಿ ಬೈಯುತ್ತಲೇ ಬಂದಿದ್ದ ಅವರು  ನಮ್ಮ ಜೊತೆ ರಾಮಾಪುರದಲ್ಲೇ ಇಳಿದಿದ್ದರು. ದಾರಿಯಲ್ಲೆಲ್ಲೋ ಅಡವಿಯ ನಡುವೆ ಬಸ್ಸು ನಿಂತು ಎಲ್ಲರೂ ಸಾಮೂಹಿಕವಾಗಿ ಮೂತ್ರ ಮಾಡಲು ತೊಡಗಿದ್ದರು. ಅಲ್ಲೂ ಅವರು ಹಾಗೇ ಮಾತನಾಡುತ್ತ ಬಿದ್ದುಹೋಗುವಂತೆ ಗಹಗಹಿಸಿ ನಗುತ್ತ ಬಸ್ಸು ಹೊರಟಾಗ ಮತ್ತೆ  ಬಾಗಿಲಲ್ಲಿ ನೇತಿದ್ದರು.
 ಅವರಲ್ಲೊಬ್ಬ ಕೊಂಚ ಚಿಂತನಾಶೀಲನಂತೆ ಕಾಣುತ್ತಿದ್ದವನು ನನ್ನ ಗರಬಡಿದಂತಿದ್ದ ಮುಖವನ್ನು ಆಗಾಗ ನೋಡುತ್ತಿದ್ದವನು ತಪ್ಪು ತಿಳ್ಕೋಬೇಡಿ ಸಾ ಈ ಬಸ್ಸಲ್ಲಿ ಒಂದಿನಾನೂ ಸೀಟು ಸಿಕ್ಕೋದಿಲ್ಲ ಸಾ ಎಣ್ಣೆ ಹಾಕದಿದ್ರೆ ನೇಲಕ್ಕಾಗೋದಿಲ್ಲ ಸಾ ಬಯ್ಯದಿದ್ರೆ ದಾರಿ ಹೋಗೋದಿಲ್ಲ ಸಾರ್ ನಾವೆಲ್ಲಾ ಒಳ್ಳೆಯವ್ರೇ ಸಾರ್ ಅಂತ ಅಂದಿದ್ದ.ಎಲ್ಲಿ ಸಿಟಿಯವ್ರಾ ಸಾರ್ ಎಂದು ಕೇಳಿದ್ದ. ನಾನು ಮಹಾರಾಜ ಕಾಲೇಜು ಅಂತ ಹೇಳಿದ್ದೆ. ನನ್ನ ಅಕ್ಕನ್ ಮಗಾನೂ ಅಲ್ಲೇ ಓದಿದ್ದು ಸಾರ್.ಕಬ್ಬಳ್ಳಿ ಹಾಸ್ಟೆಲಲ್ಲಿ ಇದ್ದ ಸಾರ್.ಈಗ ತಹಶೀಲ್ದಾರ್ ಪರೀಕ್ಷೆಗೆ ಕೂತಿದ್ದಾನೆ ಸಾರ್ ಏನೋ ಸಾರ್ ಬಡವ್ರು ಸಾರ್ .ತಪ್ಪು ತಿಳ್ಕೋಬೇಡಿ ಸಾರ್.ರೇಶ್ಮೆಗೂಡು ಮಾರಕ್ಕೆ ಹೋಗಿದ್ವಿ ಸಾರ್.ಎಲ್ಲ ಕಡೆ ಮೋಸ ಸಾರ್ ರೈತರಿಗೆ ಏನೂ ಗೀಟೋದಿಲ್ಲ ಸಾರ್.ದಲ್ಲಾಳಿಗಳೇ ತಿನ್ಕೋತಾರೆ ಸಾರ್ ಅಂತ ಆತ ಮಾತನಾಡುತ್ತ ಮಾತನಾಡುತ್ತ ಇನ್ನೇನು ಆತ್ಮೀಯನಾಗ ಬೇಕು ಅನ್ನುವಷ್ಟರಲ್ಲಿ ರಾಮಾಪುರ ಸ್ಟಾಪ್ ಬಂದು ಬಾಗಿಲಲ್ಲಿ ನೇತಾಡುತ್ತಿದ್ದವರು ಜಿಗಿದು ಅವರ ಹಿಂದೆ ನಾವು ಜಿಗಿದು ಮಹದೇಶ್ವರ ಬಸ್ಸು ಹಡಗಿನಂತೆ ತೆವಳುತ್ತಾ ಮಹದೇಶ್ವರ ಬೆಟ್ಟದ ಕಡೆ ಮಾಯವಾಗಿ ಯಾರಿಗೆ ಯಾರೂ ಕಾಣಿಸದಂತೆ  ಕತ್ತಲು ಬಂದು ಕುಳಿತಿತ್ತು. ಬಸ್ಸಲ್ಲಿ ಅಶ್ಲೀಲವಾಗಿ ಬೈಯುತ್ತ ನಗುತ್ತ ಪ್ರೀತಿಪಾತ್ರರಾದವರೂ ಕನಸಿನಂತೆ ಮಾಯವಾಗಿಬಿಟ್ಟಿದ್ದರು.ಕತ್ತಲೂ ಹಸಿವೂ ಮಾಯವೂ ಎಲ್ಲವೂ ನಿಜ ಎಂಬುದನ್ನು ಸಾರಿ ಹೇಳುವಂತೆ ಅಲ್ಲಾಡುತ್ತಿದ್ದ ಕಡಲೆ ಪುರಿ ಮಾರುವ ಹೆಂಗಸಿನ ಸೀಮೆಣ್ಣೆ ಬುಡ್ಡಿಯ ಮಂಕು ಜ್ವಾಲೆಗಳು ಇನ್ನೇನು ಕೊನೆಯುಸಿರು ಎಲೆಯಲಿರುವ ಅನಾಥ ಬಿಕ್ಷುಕಿಯಂತೆ ನಿಸ್ಸಾಹಯಕವಾಗತೊಡಗಿದ್ದ
 ಇನ್ನೇನು ಆ ಬೆಳಕೂ ನಂದಿತು ಅನ್ನುವಷ್ಟರಲ್ಲಿ ರಾಮಾಪುರದ  ಠಾಣೆಯ ರಾತ್ರಿ ಪಾಳಿಯ ಇಬ್ಬರು ಪೋಲೀಸರು ಆ ಹೆಂಗಸಿನ ಅಳಿದುಳಿದ ಕಡಲೇಪುರಿಯನ್ನೂ ಪೇಪರಿಗೆ ಹಾಕಿಸಿಕೊಂಡು ಚಿಲ್ಲರೆ ಕಾಸು ಮಡಗಿ ನಮ್ಮನ್ನು ಒಮ್ಮೆ ನೋಡಿ ಅವರೂ ಕತ್ತಲಲ್ಲಿ ಮಾಯವಾದರು.ಬುಡ್ಡಿಯಲ್ಲಿ ಉಳಿದಿದ್ದ ಸೀಮೆಣ್ಣೆ ಹನಿಗಳನ್ನು ಉಳಿಸುವ ಸಲುವಾಗಿ ಕಡಲೆ ಪುರಿಹೆಂಗಸು ಜ್ವಾಲೆಯನ್ನು  ಬಾಯಿಯಿಂದ ಊದಿ ಕೆಡಿಸಿ ತನ್ನ ಸುತ್ತಲೂ ಕತ್ತಲು ಮಾಡಿಕೊಂಡು ತಾನೂ ಕತ್ತಲಲ್ಲಿ ಮಾಯವಾದಳು.

-೨-
 ನಾನು ಇಲ್ಲಿ ಹೇಳ ಹೊರಟಿದ್ದು ರಾಮಾಪುರ ಎಂಬ ಈ ಊರಿನ ಆ ಇರುಳಿನ ಮಾಯದಂತಹ ನೀರವತೆಯನ್ನಲ್ಲ.ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಖಚಿತ ಗುರಿಗಳನ್ನು ಇಟ್ಟುಕೊಂಡು ಊರು ಅಡವಿ ಅಲೆಯುತ್ತಿದ್ದ ಹೊತ್ತಲ್ಲಿ ಈ ರಾಮಾಪುರ ಎಂಬ ಊರಿನಲ್ಲಿ ಆ ರಾತ್ರಿ ಹಸಿವೆಗೆ ಟೀ ಬನ್ನು ಕೊಟ್ಟು ಮಲಗಲು ಚಾಪೆ ಕೊಟ್ಟು ತಾನೂ ನಮ್ಮೊಂದಿಗೆ ಮಾತನಾಡುತ್ತ ಮಲಗಿ ನಮ್ಮ ಹೋರಾಟದ ದಾರಿಯಲ್ಲಿ ತಾನೂ ಒಬ್ಬ ಸಂಗಾತಿ ಎಂದು ಉಚ್ಚರಿಸಿ ಆದರೆ ಬೆಳಗೆ ಎದ್ದವನೇ ಅಪರಿಚಿತನಂತೆ ನಮ್ಮನ್ನು ಜಾಗ ಖಾಲಿ ಮಾಡಲು ಹೇಳಿದ ಒಬ್ಬ ಕ್ಷೌರಿಕನ ಕತೆಯನ್ನು.
 ಆತನ ಹೆಸರನ್ನು ರಾಮು ಎಂದು  ಇಟ್ಟುಕೊಳ್ಳಿ.ರಾಜು ಎಂದೂ ಬೇಕಾದರೆ ಕರೆಯಿರಿ.ಆತ ಆ ಇರುಳಿನಲ್ಲಿ ಒಬ್ಬ ಆಶಾಕಿರಣದಂತೆ ತನ್ನ ಕ್ಷೌರದಂಗಡಿಯನ್ನು ನಮಗಾಗಿಯೇ ತೆರೆದು ಇಟ್ಟವನಂತೆ ಕನ್ನಡಿಯ ಮುಂದೆ ತನ್ನ ಮೀಸೆಯನ್ನು ತಾನೇ ಕತ್ತರಿಸುತ್ತಾ ಹದ ಮಾಡುತ್ತ ಕುಳಿತ್ತಿದ್ದ.ಅವನ ಕಣ್ಣುಗಳಲ್ಲಿ ಆ ಪೆಟ್ರೋ ಮ್ಯಾಕ್ಷ್ ಬೆಳಕಿನಲ್ಲಿ ಅದೆಂತಹದೋ ನೋವು ಅದೆಂತಹದೋ ತಹತಹ ಕಂಡೂ ಕಾಣದಂತೆ ವ್ಯಕ್ತವಾಗುತ್ತಿತ್ತು.ನಾವು ಆತನ ಮೀಸೆ ಕತ್ತರಿಸುವ ಕಾಯಕ ಮುಗಿಯುತ್ತಿದ್ದಂತೆ ನಮ್ಮ ಪರಿಚಯವನ್ನು ಹೇಳಿಕೊಂಡು ನಾವು ಬಂದಿರುವ ಕಾರಣವನ್ನು ಹೇಳಿಕೊಂಡು ಆ ಊರಿನ ರೈತಾಪಿ ಜನರ ಭೂರಹಿತ ಕೃಷಿ ಕಾರ್ಮಿಕರ ಕಷ್ಟ ಸುಖಗಳಿಗೆ ಸ್ಪಂದಿಸಲು ನಾವು ಬಂದಿರುವೆವೆಂದು ಹೇಳಿ ಈ ಇರುಳಿನಲ್ಲಿ ಉಳಿದಿರುವ ಈ ಒಂದೇ ಒಂದು ಅಂಗಡಿಯಲ್ಲಿ ನಮಗೆ ಇರಲು ಒಂದಿಷ್ಟು ಜಾಗ ಕೊಡಬೇಕೆಂದು ವಿನಂತಿಸಿ ಕೊಂಡಿದ್ದೆವು.
ನಮ್ಮ ಮಾತನ್ನು ಫುಲ್ ಕೇಳಿಸಿಕೊಳ್ಳುವ ಮೊದಲೇ  ಎಲ್ಲವನ್ನೂ ಅರಿತುಕೊಂಡವನಂತೆ ಆತ ರಾಮಾಪುರದ ಸಾಮಾಜಿಕ ರಾಜಕೀಯ ಆರ್ಥಿಕ ಆಯಾಮಗಳನ್ನು ಒಬ್ಬ ನುರಿತ ಸಮಾಜ ಶಾಸ್ತ್ರಜ್ನನಂತೆ ನಮಗೇ ವಿವರಿಸಿ ಹೇಳಿದ್ದ.ಬದಲಾವಣೆ ಆಗಲೇ ಬೇಕು ಎಂದು ಒತ್ತಿಹೇಳಿದ್ದ.ಅದು ಹೇಗೆ ರಾಜಕೀಯ ನಾಯಕರು ಪೋಲೀಸು ಅರಣ್ಯ ಇಲಾಖೆಯ ನೌಕರ ವರ್ಗದವರು ಗ್ರಾನೈಟ್ ಉದ್ಯಮದವರು ಎಲ್ಲ ಸೇರಿ ಆ ಊರಿನ ಬಡಜನತೆಯ ಜೀವನವನ್ನ ಚಿಂದಿ ಮಾಡಿದ್ದಾರೆ ಎಂಬುವುದನ್ನ ವಿವರಿಸಿದ್ದ . ಜೊತೆಗೆ ಒಂದು ಸಂಜೆ ಮಾಜಿ ಮುಖ್ಯಮಂತ್ರಿಯೊಬ್ಬರ ಕಾರು ಆ ಊರಿನ ಬಡವನೊಬ್ಬನ ಸೈಕಲ್ಲಿಗೆ ಡಿಕ್ಕಿಯಾಗಿ ಗಾಯಗೊಳಿಸಿದಾಗ ಅದು ಹೇಗೆ ತಾನು ಎಲ್ಲರನ್ನು ಒಟ್ಟುಸೇರಿಸಿ ಆ ಕಾರಿಗೆ ಜಖಂ ಮಾಡಿದೆ, ಅದು ಹೇಗೆ ಆ ಮಾಜಿ ಮುಖ್ಯಮಂತ್ರಿ ಕಾರಿನಿಂದ ಇಳಿದು ಕೈಜೋಡಿಸಿ ಕ್ಷಮೆ ಕೇಳಿದರು ಎಂಬುದನ್ನ  ಕಣ್ಣಿಗೆ ಕಟ್ಟುವವನಂತೆ ವಿವರಿಸಿದ್ದ.ಬಡವರು ಒಂದಾದರೆ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ ಅಂದಿದ್ದ. ಕೊನೆಗೆ ನೀವು ಬಡವರ ಪರ ನಾನೂ ಬಡವರ ಪರ ಈ ಕೂದಲು ಕಸದ ಅಂಗಡಿಯಲ್ಲಿ ಯಾಕೆ ಮಲಗುತ್ತೀರಿ .ನನ್ನ ಮನೆಗೇ ಬನ್ನಿ ಎಂದು ಕರೆದು ಕೊಂಡು ಹೋಗಿ ಎಲ್ಲಿಂದಲೋ ಖಾಲಿ ಟೀ ಮಾಡಿಸಿ ತಂದು ಬನ್ನು ತಂದು ಕೊಟ್ಟು ಮಾತನಾಡಿಸುತ್ತಾ ಮಲಗಿದ್ದ.
  ನಾವು ಆ ದೊಡ್ಡ ಕೋಣೆಯನ್ನ ಆ ತನ ಮನೆಯ ಒಂದು ಭಾಗವೆಂದು ತಿಳಿದುಕೊಂಡು ಒಳಹೊಕ್ಕು ನೋಡಿದರೆ ಅದು ದವಸ ದಾನ್ಯಗಳನ್ನ ಪೇರಿಸಿಡುವ ದೊಡ್ಡ ಗೋದಾಮಾಗಿತ್ತು.ಒಂದು ಮೂಲೆಯಲ್ಲಿ ರೇಶ್ಮೆಗೂಡಿನ ಸಾಲು ಸಾಲು ತಟ್ಟೆಗಳಲ್ಲಿ ರೇಶ್ಮೆಹುಳಗಳು ಹಿಪ್ಪುನೇರಳೆ ಎಲೆಗಳನ್ನು ಸಾಮೂಹಿಕವಾಗಿ ಮೆಲ್ಲುತ್ತಾ ಸದ್ದುಮಾಡುತ್ತಿದ್ದರೆ ಇನ್ನೊಂದು ಮೂಲೆಯಲ್ಲಿ ದನಕರು ಎಮ್ಮೆ ಇತ್ಯಾದಿಗಳು ಮೆಲುಕು ಹಾಕುತ್ತಾ ಮಲಗಿದ್ದವು.ಜೋಳ ನವಣೆ ಉದ್ದು ಎಳ್ಳು ಸಾಲು ಸಾಲು  ಗೋಣಿ ಚೀಲಗಳಲ್ಲಿ ತುಂಬಿಕೊ೦ಡಿದ್ದವು.ಜೊತೆಗೆ ಗೋಡೆಯಲ್ಲಿ ಜೋಡು ನಳಿಗೆಯ ಬಂದೂಕೊಂದು ನೇತಾಡುತ್ತಿತ್ತು.ಆ ಊರಲ್ಲಿ ಬಹಳವಾಗಿ ಧನ ದವಸ ಜಾನುವಾರು ಕಳ್ಳತನವಾಗುತ್ತದೆಂತಲೂ ಅದಕ್ಕಾಗಿ ಬಂದೂಕು ಇಟ್ಟುಕೊಂಡಿರುವನೆಂತಲೂ ಹಾಗೆ ನೋಡಿದರೆ ಈ ಗೋದಾಮಿನ ಒಡೆಯ ತಾನಲ್ಲವೆಂತಲೂ ಈ ಊರಿನ ಸಿರಿವಂತನೊಬ್ಬನ ದತ್ತು ಮಗ ತಾನೆಂತಲೂ ಆ ಸಾಕು ತಂದೆಯ ಗೋದಾಮನ್ನು ತಾನು ಕಾಯುತ್ತಿರುವೆನೆಂತಲೂ ಹೇಳಿದ್ದ. ಮಾತನಾಡುತ್ತ ಮಾತನಾಡುತ್ತಾ ಆ ಗೋದಾಮಿನ ಬಾಗಿಲು ಮುಚ್ಚಿ ಅಗುಳಿ ಹಾಕಿ ಬಂದೂಕವನ್ನ ತನ್ನ ತಲೆಯ ಹತ್ತಿರ ಇಟ್ಟುಕೊಂಡು ಮಲಗಿದ್ದ .ಆತನ ಪಕ್ಕದಲ್ಲಿ ನಾನು ಮಲಗಿದ್ದೆ. ಆತನ ಬಾಯಿಯಿಂದ ಸಾರಾಯಿಯ ವಾಸನೆ ಸಖತ್ತಾಗಿ ಹೊಡೆಯುತ್ತಿತ್ತು. ನನ್ನ ಸಂಗಾತಿಗಳೆಲ್ಲ ನಿದ್ದೆ ಹೋಗಿದ್ದರು.
 ಬಂದೂಕು ಇಟ್ಟುಕೊಂಡ ಆ ಕ್ಷೌರಿಕನ ಪಕ್ಕದಲ್ಲಿ ನನಗೆ ನಿದ್ದೆಯೇ ಬಂದಿರಲಿಲ್ಲ.ಆತನೂ ನಿದ್ದೆ ಮಾಡಲಿಲ್ಲ.ನಾವಿಬ್ಬರೂ ಆ ರಾತ್ರಿ ಬಹುತೇಕ ಮಾತಲ್ಲೇ ಕಳೆದೆವು.ನಾನು ನನ್ನ ಬಗ್ಗೆ ಹೇಳಿದರೆ ಆತ ತನ್ನ ಜನ್ಮ ರಹಸ್ಯವನ್ನ ನನ್ನ ಬಳಿ ಹೇಳಿಕೊಂಡ.
 ಅದೊಂದು ದೊಡ್ಡ ಕತೆ.ಈಗ ಹೇಳಿ ಮುಗಿಯುವುದಿಲ್ಲ.ಆದರೆ ನನಗೆ ಈಗಲೂ ನಗು ಬರುವುದು ಆತ ಬೆಳಗೆ ಎದ್ದವನೇ ನಮ್ಮನ್ನು  ಆ ಊರಿಂದ ಜಾಗ ಖಾಲಿ ಮಾಡಲು ಹೇಳಿ ಗದರಿಸಿ ಕಳಿಸಿದ್ದನ್ನ ನೆನಪು ಮಾಡಿಕೊಂಡಾಗ.ಆತ ನಮ್ಮನ್ನು ಏನಂತ ತಿಳಿದನೋ ಗೊತ್ತಿಲ್ಲ.ಬೆಳಗೆ ಎದ್ದವನೇ ಮಹದೇಶ್ವರ ಬೆಟ್ಟದ ಕಡೆ ಹೋಗುತ್ತಿದ್ದ ಗ್ರಾನೈಟ್ ಕಲ್ಲಿನ ಖಾಲಿ ಲಾರಿಯೊಂದಕ್ಕೆ ನಮ್ಮನ್ನ ಹತ್ತಿಸಿ ಏನೂ ಹೇಳದೆ ಹೊರಟು ಹೋದ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s