[photo:Nethraraju]
ಕನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ ಕಡಿಮೆ ಹಳಬರನ್ನು ಮಾತನಾಡಿಸಿದರೆ ಅವರಿಂದ ಕುವೆಂಪು ಅವರ ಹೆಸರೇ ಬರುವುದಂತೆ.
`ಇವರಿಬ್ಬರ ಗುಂಗಿನಿಂದ ಹೊರಬಂದು ಬರೆಯುವುದೆಂದರೆ ಮೈಸೂರಿನಲ್ಲಿ ಹರಸಾಹಸದ ಕೆಲಸವೇ ಸರಿ. ಹಾಗಾಗಿ ನೀನು ಯಾಕೆ ಸ್ವಲ್ಪ ನಮ್ಮ ದೇವನೂರು ಮಹಾದೇವರನ್ನು ಮಾತನಾಡಿಸಿ ಬರೆಯಬಾರದು ಎಂದು ಗೆಳೆಯರೊಬ್ಬರು ಕೊಂಚ ಕಳಕಳಿಯಿಂದಲೇ ನನಗೊಂದು ಉಚಿತ ಐಡಿಯಾ ಕೊಟ್ಟಿದ್ದರು.
ಅವರು ಹೇಳಿದ ಉಪಾಯವೂ ಬಹಳ ಹರ ಸಾಹಸದ ಕೆಲಸವೆಂದು ನನಗೆ ಅನ್ನಿಸುತ್ತಿತ್ತು. ಯಾಕೆಂದರೆ ನೋಡಿದಾಗಲೆಲ್ಲ ಈ ಭೂಲೋಕದ ನಾನಾ ನೋವುಗಳನ್ನೂ, ಸಾಮಾಜಿಕ ಸ್ಥಿತ್ಯಂತರಗಳನ್ನೂ ಬೇರೆ ಬೇರೆ ಕೋನಗಳಲ್ಲಿ ಚಿಂತಿಸಿಕೊಂಡು ಕೂತಿರುತ್ತಿದ್ದ ದೇವನೂರು ಒಂದು ಸಣ್ಣ ಪ್ರಶ್ನೆಗೂ ಉತ್ತರ ಹೇಳಲು ಬಹಳ ಕಾಲವನ್ನು ತೆಗೆದುಕೊಂಡು ಅವರ ಯೋಚನಾ ಖಂಡಗಳ ನಡುವಿನ ಮೌನವನ್ನು ಹೇಗೆ ತುಂಬಿಸುವುದು ಎಂದು ನನಗೆ ಯೋಚನೆ ಶುರುವಾಗುತ್ತಿತ್ತು. ಮಹಾದೇವ ಅವರು ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವೊಂದರ ಅಧ್ಯಕ್ಷರೂ ಆಗಿರುವುದರಿಂದ ಅವರು ಬಹುತೇಕ ಕಾಲ ಚಿಂತಿಸುವುದರಲ್ಲೂ, ಏನು ಭಾಷಣ ಮಾಡುವುದೆಂದು ಯೋಚಿಸುವುದರಲ್ಲೂ ಹಾಗೂ ಪಕ್ಷದ ಕಾರ್ಯಕರ್ತರು ಹೊರತರುವ ಭಿತ್ತಿಪತ್ರ, ಕರಪತ್ರ, ಪ್ರಣಾಳಿಕೆ ಇತ್ಯಾದಿಗಳ ಕರಡುಪ್ರತಿಗಳನ್ನು ಸರಿಪಡಿಸುವುದರಲ್ಲೂ ವ್ಯಯವಾಗುತ್ತಿತ್ತು. ಹಾಗಾಗಿ ಅವರನ್ನು ನಾನು ಮಾತನಾಡಿಸಲು ಹೋದರೆ ಅವರ ಕಾಲ ನನ್ನ ಕೀಟಲೆಯ ಪ್ರಶ್ನೆಗಳಿಗೆ ಉತ್ತರ ಹೇಳುವುದರಲ್ಲಿ ಕಳೆದು ಹೋಗಬಾರದು ಎಂಬ ಹೆದರಿಕೆಯೂ ನನಗಿತ್ತು.
ಆದರೂ ಧೈರ್ಯಮಾಡಿ ಒಂದುದಿನ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಅವರಿಗೆ ಪೋನ್ ಮಾಡಿ ‘ಮಾದೇವ ಮಾಮ. ಈವತ್ತು ಸಾಯಂಕಾಲ ಕುಕ್ಕರಹಳ್ಳಿ ಕೆರೆದಂಡೆಯಲ್ಲಿ ವಾಕ್ ಹೋಗೋಣವಾ’ ಎಂದು ಕೇಳಿ ಬಿಟ್ಟೆ. ನನ್ನ ಪ್ರಶ್ನೆಯ ಹಿಂದೆ ಯಾವುದೋ ತುಂಟ ಹುನ್ನಾರವಿರುವುದನ್ನು ಆ ಮಾತಿನಲ್ಲಿದ್ದ `ಮಾಮ’ ಎಂಬ ಪದದ ಪರಿಮಳದಿಂದಲೇ ಮನಗಂಡ ಮಾದೇವ `ಯಾಕೆ? ಏನು ಸಮಾಚಾರ?’ ಎಂದು ನಯವಾಗಿ ಗದರಿಸಿದರು. ಮಹಾದೇವ `ಏನು ಸಮಾಚಾರ?’ ಎಂದರೆ ಮೈಸೂರಿನ ಕಾಲು ಭಾಗ ಲೇಖಕರು, ಬರಹಗಾರರು, ಬುದ್ಧಿಜೀವಿಗಳು ಹೆದರಿಬಿಡುತ್ತಾರೆ. ನಾನೂ ಹಾಗೆ ಹೆದರಿದಂತೆ ನಟಿಸಿ `ಇಲ್ಲ ಮಾಮ ಈ ವಾರದ ಲೇಖನ ಬರೆಯಲು ನೀವೇ ನನಗೆ ಕಥಾನಾಯಕ. ನೀವೇ ನನ್ನನ್ನು ಕಾಪಾಡಬೇಕು, ಮಹಾರಾಜರ ಕಥೆಗಳನ್ನೂ, ಮಹಾಕವಿಗಳ ಕಥೆಗಳನ್ನೂ ಕೇಳಿ ಓದುಗರು ಬೋರ್ ಹೊಡೆಸಿಕೊಂಡಿದ್ದಾರೆ’ ಎಂದು ಹೇಳಿದೆ.
‘ನಾನು ಬೋರ್ ಹೊಡೆಸುವುದಿಲ್ಲ ಎಂದು ಏನು ಗ್ಯಾರಂಟಿ’ ಎಂದು ಕೇಳಿದರು.
‘ಇಲ್ಲ ಮಾಮ ಬನ್ನಿ ವಾಕ್ ಹೋಗುವಾ. ನೀವು ಮಾತನಾಡದಿದ್ದರು ಪರವಾಗಿಲ್ಲ, ನಾನು ಹೇಗೋ ನಿಮ್ಮ ಮೌನವನ್ನೇ ಊಹಿಸಿಕೊಂಡು ಬರೆದು ಬಿಡುತ್ತೇನೆ’ ಎಂದೆ.
‘ಹಾಗಾದರೆ ಒಂದು ಉಪಾಯ. ನಾನು ಬರುವುದಿಲ್ಲ. ನಾನು ಜೊತೆಯಲ್ಲಿ ನಡೆಯುತ್ತಿದ್ದೇನೆ ಎಂದು ಊಹಿಸಿಕೊಂಡು ಬರೆ. ನಿನಗೆ ಜಯವಾಗಲಿ’ ಎಂದು ಉಪಾಯವಾಗಿ ತಪ್ಪಿಸಿಕೊಂಡು ಮಹಾದೇವ ಮತ್ತೆ ಮೌನದ ಮೊರೆ ಹೊಕ್ಕಿದ್ದರು.
ರಾತ್ರಿಯೆಲ್ಲಾ ನಿದ್ದೆಯಿಲ್ಲದಿದ್ದರೂ ಇಂದು ಬೆಳಿಗೆಯೇ ಎದ್ದು ನಿದ್ದೆಕಣ್ಣಲ್ಲಿ ಬೈಕು ಓಡಿಸುತ್ತಾ ಸೂರ್ಯನಿಗಿಂತಲೂ ಮೊದಲೇ ಕುಕ್ಕರಹಳ್ಳಿಕೆರೆಯ ನೈಋತ್ಯ ಮೂಲೆಯನ್ನು ತಲುಪಿ ಮಹಾದೇವರನ್ನು ಮನಸಿನಲ್ಲಿಯೇ ನೆನೆದುಕೊಂಡು ನಡೆಯಲು ತೊಡಗಿದೆ. ಸುಮಾರು ಹತ್ತಿರ ಹತ್ತಿರ ನಾಲ್ಕು ಕಿಲೋಮೀಟರ್ ಇರುವ ಈ ಕೆರೆಯ ಒಂದು ಸುತ್ತನ್ನು ನಾನು ಸಾಧಾರಣವಾಗಿ ಮೂವತ್ತಾರು ನಿಮಿಷಗಳಲ್ಲಿ ಮುಗಿಸುತ್ತೇನೆ. ಆದರೆ ಇಂದು ಜೊತೆಯಲ್ಲಿ ಮಹಾದೇವರನ್ನೂ ಮನಸಿನಲ್ಲಿಯೇ ನಡೆಸಿಕೊಂಡು ಹೋಗಬೇಕಾಗಿರುವುದರಿಂದ ಅವರಿಗೆ ಆಯಾಸವಾಗಬಾರದೆಂಬ ಕಾರಣಕ್ಕಾಗಿ ನಿಧಾನಕ್ಕೆ ನಡೆಯತೊಡಗಿದೆ
ಅದೂ ಅಲ್ಲದೆ ಮನೆಯಲ್ಲಿ ರಜಾದ ಮಜದಲ್ಲಿರುವ ಮಕ್ಕಳು ನೀನು ನಿಧಾನವಾಗಿ ಬಂದರೆ ಸಾಕು. ನೀನು ಮನೆಗೆ ಬಂದ ಕೂಡಲೇ ಸಂಗೀತ ಕೇಳಲು ಶುರುಮಾಡುತ್ತೀಯಾ. ನಿನ್ನ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಿಂದ ನಮಗೆ ಆಟವಾಡಲು ಆಗುವುದಿಲ್ಲ ಎಂದು ರಾತ್ರಿಯೇ ಎಚ್ಚರಿಸಿ ನಿದ್ದೆ ಹೋಗಿದ್ದರು. ನಾನು ಬೆಳಿಗೆಯೇ ಎದ್ದು ವಾಕ್ ಹೋಗಲು ಹಾಕುವ ನನ್ನ ಇತಿಹಾಸ ಪ್ರಸಿದ್ಧ ಶೂಗಾಗಿ ಮನೆಯಲ್ಲೆಲ್ಲಾ ಗದ್ದಲ ಮಾಡಿಕೊಂಡು ಹುಡುಕುತ್ತಿದ್ದರೆ ಅವರು ಇಹಲೋಕದ ಯಾವುದೇ ಪರಿವೆಯಿಲ್ಲದೆ ಕಣ್ಣುಗಳನ್ನು ಕನಸುಮಾಡಿಕೊಂಡು ನಿದ್ದೆಯಲ್ಲೂ ಆಟವಾಡುತ್ತಿದ್ದರು.
ನಾನು ರಾತ್ರಿ ಬಹಳ ಹೊತ್ತಿನ ತನಕ ದೇವನೂರ ಮಹಾದೇವರನ್ನು ಕೆರೆಯ ಏರಿಯಮೇಲೆ ಮನಸಿನಲ್ಲೇ ಹೇಗೆ ನಡೆಸಿಕೊಂಡು ಹೋಗುವುದು ಎಂದು ಯೋಚಿಸುತ್ತಿದ್ದೆ. ಸಣ್ಣ ವಯಸ್ಸಿನಿಂದಲೂ ನನಗೆ ಮಹಾದೇವ ಒಂದು ತರಹದ ಜೇಮ್ಸ್ ಬಾಂಡ್ ಇದ್ದಹಾಗೆ. ಅವರ ನಾಯಕಿಯರಾದ ಒಡಲಾಳದ ಸಾಕವ್ವ, ನವಿಲುಬರೆಯುವ ಪುಟಗೌರಿ, ಕುಸುಮ ಬಾಲೆಯ ಹೊಲಾರಹಟ್ಟಿಯ ತೂರಮ್ಮ, ಚನ್ನನ ಅವ್ವ, ಯಾಡನ ಅವ್ವ ಮಾದೇವಿ- ಇವರನ್ನೆಲ್ಲ ಸುತ್ತ ನಿಲ್ಲಿಸಿಕೊಂಡು ಅವರ ನಡುವೆ ಕೈಯಲ್ಲಿ ಉರಿಯುತ್ತಿರುವ ಸಿಗರೇಟಿನಂತಹ ಲೇಖನಿಯನ್ನು ತುಪಾಕಿಯಂತೆ ಹಿಡಿದು ನಿಂತುಕೊಂಡಿರುವ ದೇವನೂರು ಮಹಾದೇವ ಎಂಬ ನನ್ನ ಪ್ರೀತಿಯ ಲೇಖಕನ ಈ ಮಾದರಿಯ ಸಿನಿಮಾ ಪೋಸ್ಟರ್ ಗಳನ್ನು ಮೈಸೂರಿನ ಗೋಡೆಗಳ ಮೇಲೆ ಊಹಿಸಿಕೊಂಡು ಸೈಕಲ್ಲು ಓಡಿಸುತ್ತಿದ್ದ ನನಗೆ ಮಹಾದೇವರನ್ನು ಮೊದಲು ಬಾರಿಗೆ ಕಂಡಾಗ ಅವರು ಮಹಾದೇವ ಎಂದು ನಂಬಲಾಗಿರಲೇ ಇಲ್ಲ. ಕದ್ದು ಸಿಗರೇಟು ಸೇದಲು ನಿಂತಿದ್ದ ನಾನೂ, ಧೈರ್ಯವಾಗಿ ಸಿಗರೇಟು ಸೇದಲು ನಿಂತಿದ್ದ ಅವರೂ ಒಂದೇ ಪೆಟ್ಟಿಗೆ ಅಂಗಡಿಯ ಮುಂದೆ ಚಿಲ್ಲರೆಗಾಗಿ ಕಾಯುತ್ತಾ ಒಬ್ಬರನೊಬ್ಬರು ಮೆಚ್ಚಿಕೊಂಡು ಒಂದೇ ಮೈಸೂರಿನಲ್ಲಿ ಬದುಕುತ್ತಿದ್ದೆವು.
ಈಗ ನೋಡಿದರೆ ಮಹಾದೇವ, `ವಾಕ್ ಬರುವುದಿಲ್ಲ. ನೀನೇ ಮನಸ್ಸಿನಲ್ಲಿ ನನ್ನನ್ನು ಊಹಿಸಿಕೊಂಡು ಕೆರೆಯ ಸುತ್ತ ಒಂದು ಸುತ್ತು ನಡೆದು ಬಂದು ಬರೆ. ನಿನಗೆ ನನ್ನ ಆಶೀರ್ವಾದವಿದೆ ಎಂದು ಹರಸಿ ಬೆಳಬೆಳಗೆಯೇ ನನ್ನನು ಒಂಟಿಯನ್ನಾಗಿಸಿ ಕೆರೆಗೆ ಸುತ್ತು ಹಾಕಿಸುತ್ತಿದ್ದರು.
ಬೇರೆಯ ದಿನವಾದರೆ ಹಕ್ಕಿ ಪಕ್ಷಿಗಳನ್ನೂ, ನಾಝೀ ಯಾತನಾ ಶಿಬಿರಗಳಲ್ಲಿ ನಡೆಯುತ್ತಲೇ ಇರುವ ನಿರಾಶ್ರಿತರ ಹಾಗೆ ಮುಖಮಾಡಿಕೊಂಡು ಬೆಳಗೆಯೇ ನಡೆಯುವ ಸುಂದರ ಸುಂದರಿಯರನ್ನೂ, ಗೃಹಸ್ಥರನ್ನೂ, ವಾಣಿಜ್ಯೋದ್ಯಮಿಗಳನ್ನೂ, ಮಾಜಿ ರಾಜಕಾರಣಿಗಳನ್ನೂ, ಕೆರೆಯ ಹುಲ್ಲು ಕದ್ದು ಸಾಗಿಸಲು ಬಂದವರನ್ನೂ, ಕೆರೆಯ ನೀರಿನಿಂದ ಆಕಾಶಕ್ಕೆ ಹಾರುವ ಮೀನುಗಳನ್ನೂ, ತುಂಬು ಸಂಸಾರ ತೂಗಿಸಲು ಮರದ ಕೊಂಬೆಗಳಲ್ಲಿ ಹರಸಾಹಸ ಮಾಡುತ್ತಿರುವ ಗಂಡು ಹೆಜ್ಜಾರ್ಲೆಗಳನ್ನೂ ನೋಡುತ್ತಾ ಬಿರುಸಾಗಿ ನಡೆಯುವ ನಾನು ಈ ದಿನ ಮನಸಿನ ಒಳಗೆ ಮಹಾದೇವ ಇರುವುದರಿಂದ ಬೇರೆ ಏನೂ ಯೋಚಿಸದೆ ಗಂಭೀರವಾಗಿ ನಡೆಯುತ್ತಿದ್ದೆ. ಮನಸಿನಲ್ಲೇ ಮಹಾದೇವನಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವರು ಸಲೀಸಾಗಿ ಉತ್ತರಿಸುತ್ತಿದ್ದರು.
ಕೆರೆಯ ದಡದಲ್ಲಿ ನಡೆದ ನಮ್ಮ ಪ್ರಶ್ನೋತ್ತರಗಳು ನಮ್ಮ ಪಾಲಿಗೆ ಬಹಳ ನಿಜವಾಗಿದ್ದರೂ ಅದು ನಿಜವಾಗಿ ನಡೆದಿಲ್ಲದಿರುವುದರಿಂದ ಅದನ್ನೆಲ್ಲಾ ಇಲ್ಲಿ ಲಿಖಿತ ರೂಪಕ್ಕೆ ಇಳಿಸಲಾಗುವುದಿಲ್ಲ. ಆದರೆ ಒಂದಂತೂ ನಿಜ. ನಾನೇ ಒಬ್ಬ ಮಹಾಜಾಣ ಎಂದು ನಾನು ತಿಳಿದುಕೊಂಡಿದ್ದರೆ ಮಹಾದೇವ ನನಗಿಂತ ಜಾಣರಾಗಿದ್ದರು. ನಾನು ಕೆರೆಯ ಸುತ್ತ ಅವರನ್ನು ಮನಸಿನಲ್ಲೇ ನಡೆಸಿಕೊಂಡು ಬೆವರಿಕೊಂಡು ಏನು ಬರೆಯುವುದೆಂದು ಚಿಂತಿತನಾಗಿದ್ದರೆ ಅವರು ಮನೆಯಲ್ಲಿ ಮಲಗಿಯೇ ನನ್ನನ್ನು ಕೆರೆಯ ಸುತ್ತ ನಡೆಸಿ ನಾನಾ ಕೋನಗಳಿಂದ ಬಹಳಷ್ಟು ಸಂಗತಿಗಳನ್ನು ಸಂಗ್ರಹಿಸಿಬಿಟ್ಟಿದ್ದರು. ಇವರು ಮೈಸೂರು ಪ್ರಾಂತ್ಯದ ಜನರಿಂದ ಧರೆಗೆ ದೊಡ್ಡವರು ಎಂದು ಕರೆಸಿಕೊಳ್ಳುತ್ತಿರುವುದು ಸುಮ್ಮನೇ ಅಲ್ಲ ಎಂಬ ಅರಿವನ್ನು ಹೊಂದಿ ನಾನು ನಡೆಯುತ್ತಲೇ ಇದ್ದೆ.
“ಮನಸ್ಸಿನಲ್ಲೇ ಮಹಾದೇವ” ಗೆ 5 ಪ್ರತಿಕ್ರಿಯೆಗಳು
yaake devanoorara ondu photo kooda ilva…!!
ಜಗವನ್ನೆಲ್ಲ ಜಾಲಾಡಿದ ಮೇಲೆ ನನ್ನ ಜೇಮ್ಸ್ ಬಾಂಡ್
ಫೊಟೋ ಕೊನೆಗೂ ಸಿಕ್ತು .ಹಾಕಿದ್ದೀನಿ.ನೋಡಿ ಸಾರ್-ಎಷ್ಟು ಮುದ್ದಾಗಿದ್ದಾರೆ ನಮ್ಮ ಹೀರೋ!
Priya Rasheed,
Ondu vibhinna prayatna. Mahadevarannu manassinalle ittukondu tiruguvaaga enenu maadutteeri, maatadutteeri emba kutoohalavittu. Konegoo adannu manassinalle ittukodri. Naaveega Mahadevara jote Rasheedarannu manassinalle ittukondu enenu matadidri antha kelabekide! Irali. Mahadevarannu dharege doddavaru andiralla? Nanna prakara aa hottoge nimage avaru kerege doddavaraagiddaru, alva?!!!
preetiyinda
-Suresh
[…] ದಿ ಮೈಸೂರ್ ಪೋಸ್ಟ್ […]
🙂