‘ಹಿಂದೂಸ್ತಾನದ ರಾಜಮಹಾರಾಜರುಗಳು ಅದು ಹೇಗೆ ಅಷ್ಟು ಸುಲಭದಲ್ಲಿ ಬ್ರಿಟಿಷ್ ದೊರೆಗಳ ಕೈಯಲ್ಲಿ ಸೋತುಹೋದರು ಗೊತ್ತಾ?..’
ಪ್ರೊಪೆಸರ್ ಕರಿಮುದ್ದೀನ್ ಸಾಹೇಬರು ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಟಿಪ್ಪುಸುಲ್ತಾನ್ ಹೈದರಾಲಿಗಳ ಸಮಾದಿಯ ಮುಂದಿರುವ ಸುಂದರ ಉದ್ಯಾನವನದಲ್ಲಿ ನಡೆಯುತ್ತ ನಡುವೆ ಹಿಂತಿರುಗಿ ನನ್ನತ್ತ ನೋಡಿ ಪುಟ್ಟ ಬಾಲಕನಂತೆ ನಕ್ಕರು.
ನಾನು ಗೊತ್ತಿಲ್ಲವೆಂಬಂತೆ ಅವರತ್ತ ನೋಡಿದೆ.
‘ಎಲ್ಲಾ ಈ ಆನೆಗಳ ದೆಸೆಯಿಂದ. ಈ ರಾಜಮಹಾರಾಜರುಗಳಿಗೆ ಯಾವಾಗಲೂ ಆನೆಗಳ ಮೇಲೆಯೇ ಸವಾರಿ ಹೋಗಬೇಕು. ಆನೆಗಳ ಬಿಟ್ಟು ಕೆಳಗಿಳಿಯಬಾರದು. ಅರಮನೆಗೆ ಹೋಗುವಾಗಲೂ ಆನೆ. ಮಸೀದಿಗೆ ಹೋಗುವಾಗಲೂ ಆನೆ. ಕೋಟೆಯನ್ನು ಪ್ರವೇಶಿಸುವಾಗಲೂ ಆನೆ. ಇವರು ಆನೆಯ ಮೇಲೆ ರಾಜಗಾಂಭೀರ್ಯದಲ್ಲಿ ನಿಧಾನವಾಗಿ ಚಲಿಸುವಾಗ ಬ್ರಿಟಿಷರು ಕುದುರೆಗಳ ಮೇಲೆ ವೇಗವಾಗಿ ಬಂದು ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡರು. ಹೋಗಲಿ ಈ ರಾಜರುಗಳು ಕೋಟೆಗಳ ಬಾಗಿಲುಗಳನ್ನಾದರೂ ಸಣ್ಣದಾಗಿ ನಿರ್ಮಿಸಬಾರದಾ? ಆನೆಗಳು ಹೋಗಿಬರಲು ಅವುಗಳನ್ನೂ ಅಗಲವಾಗಿ ಮಾಡಿದರು. ಬ್ರಿಟಿಷ್ರಿಗೆ ಇನ್ನೇನು ಬೇಕು – ಎಲ್ಲವನ್ನು ವೇಗವಾಗಿ ನುಂಗಿ ನೀರು ಕುಡಿದರು’
ಪ್ರೊಪೆಸರ್ ಕರೀಮುದ್ದೀನ್ ಸಾಹೇಬರು ಹೇಳುತ್ತಾ ಕೊನೆಯಲ್ಲಿ ಇನ್ನೊಮ್ಮೆ ನಕ್ಕರು. ನಾನು ಇವರು ಹೇಳಿದ ಕಾರಣವನ್ನು ಮೊದಲು ನಂಬದಿದ್ದರೂ ಆಮೇಲೆ ನನಗೆ ಗೊತ್ತಿರುವ ಎಲ್ಲ ಕೋಟೆಗಳ ಬಾಗಿಲುಗಳನ್ನೂ ನೆನಪುಮಾಡಿಕೊಂಡೆ. ಹೌದು. ಅವುಗಳು ಬಹುತೇಕ ಕರೀಮುದ್ದೀನ್ ಸಾಹೇಬರು ಹೇಳಿದ ಹಾಗೆ ಆನೆಗಳು ಹೋಗಲೆಂದೇ ಮಾಡಿದ ಹಾಗಿತ್ತು. ಅವರ ಮಾತುಗಳು ಪೂರ್ತಿ ನಿಜವಲ್ಲದಿದ್ದರೂ ಕೇಳಲು ತುಂಬಾ ಸಕಾರಣವಾಗಿತ್ತು.
‘ಕರೀಮುದ್ದೀನ್ ಸಾಹೇಬರೇ ನೀವು ಟಿಪ್ಪುಸುಲ್ತಾನರ ಕಾಲದಿಂದಲೂ ಅರೇಬಿಕ್ ವಿದ್ವಾಂಸರ ಕುಟುಂಬಕ್ಕೆ ಸೇರಿದವರು. ಅದು ಹೇಗೆ ನೀವು ಕನ್ನಡ ಶಾಲೆಗೆ ಹೋಗಿ ಕನ್ನಡ ಎಂ.ಎ. ಮಾಡಿ ಕನ್ನಡದ ಪ್ರೊಪೆಸರ್ ಆಗಿ ನಿವೃತ್ತರಾದಿರಿ?’ ಎಂದು ಕೇಳಿದೆ. ಅದಕ್ಕೆ ಅವರು ತಮ್ಮ ಜೀವನದ ಕಥೆ ಹೇಳಿದರು.
ಮೊನ್ನೆ ಯುಗಾದಿಯ ಮಾರನೆಯದಿನ, ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಪ್ರದೇಶದ ಕಾವೇರಿ ನದಿಯ ತೀರದಲ್ಲಿರುವ ಸುಮಾರು ನೂರಿಪ್ಪತ್ತು ವರ್ಷಗಳಷ್ಟು ಹಳೆಯ ವೆಲ್ಲೂರು ಮಾದರಿಯ ಹಳೆಯ ಹಂಚಿನ ಮನೆಯ ಎದುರಿನ ಕಲ್ಲು ಹಾಸಿನಲ್ಲಿ ಕುಳಿತು ಎಪ್ಪತ್ತನಾಲ್ಕು ವರ್ಷದ ಕರೀಮುದ್ದೀನ್ ಸಾಹೇಬರು ತಮ್ಮ ಕಥೆ ಹೇಳಿ ಮುಗಿಸಿದರು. ಬಹುಶಃ ಆ ಕತೆಯ ಕೊನೆಯಲ್ಲಿ ಕತ್ತಲಲ್ಲಿ ಕಣ್ಣೀರು ಒರೆಸಿಕೊಂಡು ನನ್ನನ್ನು ಬೀಳುಕೊಂಡರು.
ಈ ಕಥೆಯಲ್ಲಿ ಟಿಪ್ಪೂಸುಲ್ತಾನ ಬರುತ್ತಾನೆ. ಕುಪ್ಪಳ್ಳಿ ವೆಂಕಟ ಪುಟ್ಟಪ್ಪನವರು ಬರುತ್ತಾರೆ. ಮಿಲ್ಟನ್ನ ಪ್ಯಾರಡೈಸ್ಲಾಸ್ಟ್ ಬರುತ್ತದೆ. ಏಸುಕ್ರಿಸ್ತ ಬರುತ್ತಾನೆ. ಮಾವಿದ್ ವಿಶಾವ ಹೈ ಎಂಬ ಸಂಸ್ಕೃತ ಶ್ಲೋಕ ಬರುತ್ತದೆ. ನೂರುನ್ ಅಲಾನೂರ್ ಎಂಬ ಕುರಾನಿನ ವಾಕ್ಯ ಬರುತ್ತದೆ. ನಕ್ಸಲೈಟರು ಬರುತ್ತಾರೆ. ಹನ್ನೆರೆಡುವರ್ಷದ ಒಂದು ಬೆಕ್ಕು, ಒಂದು ಪುಟ್ಟ ನಾಯಿಮರಿ, ನಕ್ಸಲರದಾಳಿಯಲ್ಲಿ ಹತನಾದ ಕರೀಮುದ್ದಿನರ ಸಾಕುಮಗಳ ಗಂಡನ ತಬ್ಬಲಿ ಮಕ್ಕಳು ಈ ಕಥೆ ಹೇಳಿ ಮುಗಿದ ಮೇಲೂ ಕಾವೇರಿಯ ಅಂಗಳದ ಆ ಹಳೆಯ ಮನೆಯ ಅಂಗಳದಲ್ಲಿ ಆಟವಾಡುತ್ತಿರುತ್ತಾರೆ. ನಾನು ಇನ್ನು ಉಳಿದಿರುವ ಆರು ನೂರು ಪದಗಳಲ್ಲಿ ಪ್ರೊಪೆಸರ್ ಕರೀಮುದ್ದೀನರ ಕಥೆ ಹೇಳಿ ಮುಗಿಸಲು ನೋಡುತ್ತೇನೆ.
ಪ್ರೊಫೆಸರ್ ಕರೀಮುದ್ದೀನ್ ಸಾಹೇಬರ ಮುತ್ತಾತಂದಿರಾದ ಮಹಮದ್ ಉಮರ್ಸಾಹೇಬ್ ಮತ್ತು ಮಹಮದ್ ಇಬ್ರಾಹಿಂಸಾಹೇಬ್ ಎಂಬ ಸಹೋದರರು ಟಿಪ್ಪೂಸುಲ್ತಾನನಿಗೆ ಬಾಮೈದರಾಗಿದ್ದರು. ಈಸ್ಟ್ ಇಂಡಿಯಾ ಕಂಪೆನಿಯ ಕೈಯಲ್ಲಿ ಟಿಪ್ಪೂ ಪತನಗೊಂಡನಂತರ ಬ್ರಿಟಿಷ್ರ ಸೆರೆಯಾಳುಗಳಾಗಿ ಇವರು ಸಂಸಾರ ಸಮೇತ ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧನದಲ್ಲಿದ್ದರು. ಬಂದಿಗಳಾಗಿದ್ದ ಇವರಿಗೆ ಬ್ರಿಟಿಷ್ ಸರಕಾರ 500 ರೂಪಾಯಿಗಳ ರಾಜಬತ್ತೆಯನ್ನೂ ನಿಗದಿ ಮಾಡಿತ್ತು. ಆದರೆ ರಾಜಬತ್ತೆಗಿಂತ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪೂ ಹಾಗು ಹೈದರರ ಸಮಾದಿಯ ಸೇವೆ ಸಲ್ಲಿಸುವುದೇ ಮೇಲು ಎಂದುಕೊಂಡ ಈ ಮುತ್ತಾತರಲ್ಲಿ ಒಬ್ಬರು ದಿವಾನ್ ಪೂರ್ಣಯ್ಯನವರಲ್ಲಿ ಕೇಳಿಕೊಂಡು ದಗರ್ಾದ ಪರಿಚಾರಕರಾಗಿ ಸೇರಿಕೊಂಡರು. ಅವರ ಕಾಲಾನಂತರ ಅವರ ಮಗ ಮಹಮದ್ ಗೌಸ್ ಸಾಹೇಬರು 50 ವರ್ಷ, ಅವರ ತಮ್ಮ ಮಹಮದ್ ಹುಸೈನ್ ಸಾಹೇಬರು 44 ವರ್ಷ, ಗೌಸ್ ಸಾಹೇಬರ ಮಗ ಕರೀಮುದ್ದೀನ್ ಸಾಹೇಬರು 57 ವರ್ಷ ಸೇವೆ ಸಲ್ಲಿಸಿದರು.
ಕರೀಮುದ್ದಿನ್ ಸಾಹೇಬರ ಮಗ ಹಕೀಂ ಅಬ್ದುಲ್ಅಲೀಂ ಎನ್ನುವವರು ಈಗ ಪಾಂಡವಪುರ ಎಂದು ಕರೆಯಲ್ಪಡುವ ಆಗ ಫ್ರೆಂಚ್ರಾಕ್ಸ್ ಎಂದು ಕರೆಯಲ್ಪಡುತ್ತಿದ್ದ ನಗರದಲ್ಲಿದ್ದ ವಿಭಾಗೀಯ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದು ತಮ್ಮನ್ನು ದಯವಿಟ್ಟು ಪುನಃ ದರ್ಗಾದ ಮೇಲ್ವಿಚಾರಕನನ್ನಾಗಿ ನೇಮಿಸಬೇಕೆಂದೂ, ತಮ್ಮ ಸ್ಥಿತಿ ಬಹಳ ದಯನೀಯವಾಗಿರುವುದೆಂದೂ, ರೋಗಿಗಳಿಗೆ ಯುನಾನಿ ಔಷದಿಗಳನ್ನು ಉಚಿತವಾಗಿ ನೀಡುತ್ತಿದ್ದ ತಮಗೆ ಶ್ರೀರಂಗ ಪಟ್ಟಣದ ಪುರಸಭೆ ನೀಡುತ್ತಿದ್ದ ಹತ್ತು ರೂಪಾಯಿಗಳ ತಿಂಗಳ ಭತ್ಯೆಯೂ ನಿಂತುಹೋಗಿದೆಯೆಂದೂ ತಮ್ಮನ್ನು ಕಡಿಮೆ ಪಕ್ಷ ಮಸೀದಿಯಲ್ಲಿ ಕುರಾನು ಪಠಿಸುವ ಕೆಲಸಕ್ಕಾದರೂ ನೇಮಿಸಬೇಕೆಂದು ಬೇಡಿಕೊಂಡಿದ್ದರು. ಆದರೆ ಕೆಲಸ ಖಾಲಿ ಇಲ್ಲದ ಕಾರಣದಿಂದಾಗಿ ವಿಭಾಗಾಧಿಕಾರಿಗಳು ಅವರ ಅಜರ್ಿಯನ್ನು ತಿರಸ್ಕರಿಸಿದ್ದರು. ಪ್ರೊಫೆಸರ್ ಕರೀಮುದ್ದೀನ್ ಸಾಹೇಬರು ಈ ಹಕೀಂ ಸಾಹೇಬರ ಕಿರಿಯ ಮಗ.ಅವರ ಬಳಿ ಈ ಅರ್ಜಿಯ ನಕಲು ಪ್ರತಿ ಈಗಲೂ ಇದೆ.
ತಂದೆಯವರು ತೀರಿ ಹೋದಾಗ ಕರೀಮುದ್ದೀನರಿಗೆ ಆರುವರ್ಷ. ಮೂರೂವರೆ ಮೈಲಿ ಉದ್ದ, ಎರಡೂವರೆ ಮೈಲಿ ಅಗಲವಿರುವ ಸುಂದರ ದ್ವೀಪವಾದ ಶ್ರೀರಂಗಪಟ್ಟಣದ ಜನಸಾಮಾನ್ಯರು ಬದುಕುವ ಗಂಜಾಂ ಎಂಬ ಪ್ರದೇಶದ ಶುಕ್ರವಾರ ಪೇಟೆ ಬೀದಿಯಲ್ಲಿ ಇರುವ ಆಮನೆಯೂ ಈಗಲೂ ಹಾಗೇ ಇದೆ. ಕರೀಮುದ್ದೀನರ ಒಬ್ಬ ಅಣ್ಣನಿಗೆ ಹುಚ್ಚುಹಿಡಿದಿತ್ತು. ಆತ ಹುಚ್ಚಿನಲ್ಲೇ ತೀರಿಹೋದ. ಅಕ್ಕಂದಿರಲ್ಲಿ ಒಬ್ಬರು ಕ್ಯಾನ್ಸರ್ ತಗುಲಿ ಅವಿವಾಹಿತರಾಗಿಯೇ ತೀರಿಹೋದರು. ವಿವಾಹಿತನಾಗಿ ಆರು ಮಕ್ಕಳನ್ನು ಹೊಂದಿದ್ದ ಅಣ್ಣ ಕೆಲಸದ ಸ್ಥಳದಲ್ಲಿ ಆದ ಅವಮಾನ ಸಹಿಸಲಾರದೆ ಕಾವೇರಿ ನದಿಗೆ ಹಾರಿ ಪ್ರಾಣಕಳಕೊಂಡರು. ಆ ದುಃಖದಲ್ಲಿ ತಾಯಿಗೂ ಮತಿಭ್ರಮಣೆಯಾಯಿತು.
ಆ ತಾಯಿ, ಅಣ್ಣನ ಸಂಸಾರ, ಕಾಯಿಲೆಯ ತಂಗಿ ಇವರೆಲ್ಲರನ್ನು ಸಂಬಾಳಿಸಿ ಮುಗಿಯದೆ ಪ್ರೊಪೆಸರ್ ಕರೀಮುದ್ದೀನರು ಈಗಲೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಅವರ ಜೊತೆಗೆ ಕಳೆದ ಹನ್ನೆರಡು ವರ್ಷಗಳಿಂದ ಬೆಕ್ಕೊಂದು ಬದುಕುತ್ತಿದೆ. ಅದು ಸದಾಕಾಲ ಅವರ ಜೊತೆ ಇರುತ್ತದೆ. ಅವರು ಎಲ್ಲಾದರೂ ಮೈಸೂರಿಗೋ ಮಂಡ್ಯಕ್ಕೋ ಉಪನ್ಯಾಸಮಾಡಲು ಹೋದರೆ ಅದು ಅವರ ಒಂಟಿಕೋಣೆಯ ಮುಚ್ಚಿದ ಬಾಗಿಲ ಮುಂದೆ ಶತಪಥ ಹಾಕುತ್ತಾ ಇರುತ್ತದೆ.
ಕರೀಮುದ್ದೀನರು ತಮ್ಮ ಅಣ್ಣನ ಮಗಳಲ್ಲಿ ಒಬ್ಬಾಕೆಯನ್ನು ಆಂದ್ರಕ್ಕೂ, ಇನ್ನೊಬ್ಬಾಕೆಯನ್ನು ಪಾವಗಡಕ್ಕೂ ಮದುವೆ ಮಾಡಿಸಿ ಕಳಿಸಿದ್ದರು. ಅದರಲ್ಲಿ ಪಾವಗಡದಾಕೆಯ ಗಂಡನನ್ನು ಮೋಟಾರು ಬೈಕಿನಲ್ಲಿ ಹೋಗುತ್ತಿರುವಾಗ ಕ್ರಾಂತಿಕಾರಿಗಳು ಕೊಂದು ಹಾಕಿದ್ದಾರೆ. ಈಗ ಆಕೆಯ ಮಕ್ಕಳೂ ಆ ಬೆಕ್ಕಿನ ಜೊತೆಯಲ್ಲಿ ಕರಿಮುದ್ದೀನರ ಬಳಿ ಆಟವಾಡಿಕೊಂಡಿರುತ್ತವೆ.
ಹಾಗೆ ನೋಡಿದರೆ 1947ರಲ್ಲಿ ದೇಶ ವಿಭಜನೆಯಾದಾಗ ಕರೀಮುದ್ದೀನರ ಕುಟುಂಬದವರು ಪಾಕಿಸ್ತಾನಕ್ಕೋ ಬಾಂಗ್ಲಾ ದೇಶಕ್ಕೋ ವಲಸೆ ಹೋಗಬೇಕಾಗಿತ್ತು. ಏಕೆಂದರೆ ಪರಿಸ್ಥಿತಿಯೇ ಹಾಗಿತ್ತು. ಕರೀಮುದ್ದೀನರು ಆಗ ಮೈಸೂರಿನ ಮಹಾರಾಜಾ ಶಾಲೆಯಲ್ಲಿ ಹೈಸ್ಕೂಲು ಓದುತ್ತಿದ್ದರು. ಬೆಳಿಗ್ಗೆ ಎದ್ದು ಶ್ರೀರಂಗಪಟ್ಟಣದ ರೈಲು ನಿಲ್ದಾಣದವರೆಗೆ ನಡೆದು, ಮದ್ದೂರಿನಿಂದ ಬರುತ್ತಿದ್ದ ಶಟಲ್ ಟ್ರೈನಿನ ಶಾಲಾಮಕ್ಕಳ ಸ್ಪೆಷಲ್ ಬೋಗಿ ಹತ್ತಬೇಕಾದರೆ ರೈಲು ನಿಲ್ದಾಣದಲ್ಲಿ ಕಿಕ್ಕಿರಿದು ಕೂತಿದ್ದ ನಿರಾಶ್ರಿತ ಹಿಂದೂಗಳ ರೋಧನ ಅವರ ಹೃದಯ ಹಿಂಡುತ್ತಿತ್ತು ತಾನು ಮುಸಲ್ಮಾನ ಅಂದುಕೊಳ್ಳಲು ಅವರಿಗೆ ಗಾಬರಿಯಾಗುತ್ತಿತ್ತು.
ಉತ್ತರ ಭಾರತದಿಂದ ಬಂದಿದ್ದ ಆ ನಿರಾಶ್ರಿತರು ಹೃದಯ ವಿದ್ರಾವಕ ಕತೆಗಳನ್ನು ಹೇಳುತ್ತಿದ್ದರು. ಆ ಕತೆ ಕೇಳಿ ಅಳ್ಳೆದೆಗೊಂಡ ಕರೀಮುದ್ದೀನ್ ಎಂಬ ಆ ಹುಡುಗ ಮನೆಯ ಯಜಮಾನನೂ ಆಗಿದ್ದರಿಂದ ಎಲ್ಲಿಗಾದರೂ ದೂರ ಕುಟುಂಬ ಸಮೇತ ಪರಾರಿಯಗ ಬೇಕೆಂದು ಕೊಂಡಿದ್ದ. ಆದರೆ ಶ್ರೀರಂಗಪಟ್ಟಣದ ಹಿರಿಯರು ಆ ಹುಡುಗನಿಗೆ ಬುದ್ದಿ ಹೇಳಿ ರಕ್ಷಣೆ ಕೊಟ್ಟು ಕಾಪಾಡಿದರು. ಏಕೆಂದರೆ ಆಗ ಶ್ರೀರಂಗಪಟ್ಟಣದಿಂದ ಹೈದರಾಬಾದಿನ ನವಾಬರ ರಾಜ್ಯಕ್ಕೆ ವಲಸೆ ಹೋದವರು ಅಲ್ಲಿನ ರಜಾಕಾರರಿಂದ ಒದೆತ ತಿಂದು ವಾಪಸ್ಸು ಬಂದಿದ್ದರು. ಅದೂ ಅಲ್ಲದೆ ಕರೀಮುದ್ದೀನ್ ಟಿಪ್ಪೂವಿನ ಕುಟುಂಬಕ್ಕೆ ಸೇರಿದ್ದರಿಂದ ಟಿಪ್ಪೂವಿನ ಮೇಲಿದ್ದ ಅವರ ಪ್ರೀತಿ ರಕ್ತಗತವಾಗಿ ಆ ಹುಡುಗನ ಕಡೆಗೂ ಹರಿದಿತ್ತು.
‘ಅದೆಲ್ಲ ಸರಿ ನೀವು ಕನ್ನಡ ಕಲಿತು ಕನ್ನಡದ ಪ್ರೊಪೆಸರ್ ಹೇಗೆ ಆದಿರಿ ಹೇಳಲೇ ಇಲ್ಲ’ ಎಂದು ನಡುವಿನಲ್ಲಿ ನಾನು ಕೇಳಿದೆ. ಅದೆಲ್ಲಾ ಕುವೆಂಪು ಮತ್ತು ಮಿಲ್ಟನ್ನನ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯದ ದೆಸೆಯಿಂದ ಎಂದು ಆ ಕತೆಯನ್ನೂ ಅವರು ಹೇಳಿದರು.
ಕರೀಮುದ್ದಿನ್ ಅವರು ಒಂದನೇ ತರಗತಿಗೆ ಉದರ್ುಶಾಲೆಗೆ ಸೇರಿದ್ದರಂತೆ. ಅಲ್ಲಿ ಒಂದರಿಂದ ನಾಲ್ಕರವರೆಗೆ ಎಲ್ಲಾ ಕ್ಲಾಸಿನ ಮಕ್ಕಳೂ ಒಂದೇ ಕೋಣೆಯಲ್ಲಿ ಕೂತಿರಬೇಕಿತ್ತಂತೆ. ಒಂದು ದಿನ ನಾಲ್ಕನೇ ತರಗತಿಯವರಿಗೆ ಕೇಳಿದ ಪ್ರಶ್ನೆಗೆ ಒಂದನೇ ತರಗತಿಯ ಕರೀಮುದ್ದೀನ್ ಉತ್ತರ ಹೇಳಿದ್ದಕ್ಕೆ ಕೆಂಡಾಮಂಡಲವಾದ ಉರ್ದು ಶಾಲೆಯ ಮೌಲ್ವಿ ಕಂಡಾಬಟ್ಟೆ ಬಾರಿಸಿದನಂತೆ. ಆಗ ಕರೀಮುದ್ದೀನರ ಮನೆಯಲ್ಲಿ ಬಟ್ಟೆ ಒಗೆಯಲು ಬರುತ್ತಿದ್ದ ಅಗಸರ ಎಂಕಟಮ್ಮನ ಮಗ ಜವರಯ್ಯ ಪಕ್ಕದ ಕನ್ನಡ ಶಾಲೆಯಲ್ಲಿ ಮೇಷ್ಟ್ರರಾಗಿದ್ದರಂತೆ. ಅವರು ಅಳುತ್ತಿದ್ದ ಬಾಲಕನನ್ನು ಎತ್ತಿಕೊಂಡು ಹೋಗಿ ಕನ್ನಡ ಶಾಲೆಗೆ ಸೇರಿಸಿದರಂತೆ.
ಆದರೂ ಕನ್ನಡ ಕಲಿಯಬೇಕೆಂದು ಕರೀಮುದ್ದೀನರಿಗೆ ಆಸೆಯೇನೂ ಇರಲಿಲ್ಲ. ಅವರು ಇಂಗ್ಲಿಷ್ ಕಲಿಯಬೇಕೆಂದು
ಮಹಾರಾಜಾ ಕಾಲೇಜಿಗೆ ಸೇರಿದರೆ ಅಲ್ಲಿ ಕ್ಯಾಪ್ಟನ್ ರಾಮಸ್ವಾಮಿಯವರು ಮಿಲ್ಟನ್ನನ್ನ ಪಾರಡೈಸ್ ಲಾಸ್ಟ್ ಕಾವ್ಯವನ್ನು ಸಾಯಂಕಾಲ ಕೊನೇ ಪೀರಿಯಡ್ನಲ್ಲಿ ಕಲಿಸುತ್ತಿದ್ದರಂತೆ. ಆದರೆ ಆ ಕಾವ್ಯದಲ್ಲಿ ಪ್ರತಿಮೆಗಳೂ ಉಪಮೆಗಳೂ, ಗ್ರೀಕ್ ಹಾಗು ಲ್ಯಾಟಿನ್ ಪದಗಳೂ ಎಲ್ಲಾ ಸೇರಿ ಕೊನೆಯ ಪೀರಿಯಡ್ನಲ್ಲಿ ವಿದ್ಯಾರ್ಥಿಗಳ ತಲೆಗೆ ಅದು ಹತ್ತದೆ, ಕ್ಯಾಪ್ಟನ್ ರಾಮಸ್ವಾಮಿಯವರು ಬೆಳಗೆ ಒಂಬತ್ತೂವರೆಗೇ ‘ಪ್ಯಾರಡೈಸ್ ಲಾಸ್ಟ್’ ಶುರುಮಾಡುತ್ತಿದ್ದರಂತೆ ಆದರೆ ಕರೀಮುದ್ದೀನರ ಮದ್ದೂರುಶಟಲ್ ಮೈಸೂರು ತಲುಪುತ್ತಿದ್ದುದು ಹತ್ತೂವರೆಗೆ.
ಕರೀಮುದ್ದೀನರಿಗೆ ರೋಸಿ ಹೋಗಿ ದೂರು ಹೇಳು ಹೋದರೆ ಪ್ರಿನ್ಸಿಪಾಲರಾಗಿದ್ದವರು ಕನ್ನಡದ ರಸಋಷಿ ಕುವೆಂಪು. ಅವರು ಇವರ ಮಾತುಗಳನ್ನು ಕೇಳಿ ‘ಮಹಮದೀಯನನಾದರೂ ಈತ ಸಾಬಿ ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾನೆ’ ಎಂದು ಅಚ್ಚರಿಗೊಂಡು ಅವರನ್ನ ಕನ್ನಡ ಆನರ್ಸ ಗೆ ಸೇರಿಸಿದರಂತೆ. ಪಾಠ ಮಾಡುತ್ತಾ ಮಾಡುತ್ತಾ ಕುವೆಂಪುರವರು ಇದ್ದಕ್ಕಿದ್ದಂತೆ ನಿಮಿಷಗಟ್ಟಲೆ ಸೈಲಂಟ್ ಆಗಿಬಿಡುತ್ತಿದ್ದುದ್ದನ್ನು ಕರೀಮುದ್ದೀನ್ ಈಗಲೂ ನೆನಪಿಸಿಕೊಂಡು ನಗುತ್ತಾರೆ.
ಮಾತಿನ ನಡುವಲ್ಲಿ ಕರೀಮುದ್ದೀನರು ಹೆರಾಕ್ಲಿಟಸ್ ಎಂಬ ತತ್ವಜ್ಞಾನಿಯ ಮಾತುಗಳನ್ನು ಹೇಳಿದರು. ಏಸುಕ್ರಿಸ್ತನೂ ಸಣ್ಣವನಿರುವಾಗ ಹಿಲಾಕ್ಲಿಟಸ್ನ ತತ್ವಗಳನ್ನು ಶಾಲೆಯಲ್ಲಿ ಓದಿದ್ದನಂತೆ. ಹಿರಾಕ್ಲಿಟಸ್ನನ ಪ್ರಕಾರ ದೇವರು ಬೆಳಕಲ್ಲು, ಕತ್ತಲೆ ದೇವರು. ಬೆಳಕಿಗಿಂತ ಮೊದಲೂ ಬೆಳಕು ಹೋದ ಮೇಲೂ ಕತ್ತಲೆ ಇರುತ್ತದೆ. ಅದೇ ಸರ್ವವ್ಯಾಪಿ. ಹಾಗಾಗಿ ನಾನು ಬೆಳಕು ಎಂದು ದೇವರು ಹೇಳುವುದಿಲ್ಲ ಎಂದು ಅವರು ಹೇಳುತ್ತಾರೆ.
ನಾನು ಬೆಳಕಿಲ್ಲದ ಆ ಆಕಾಶದಲ್ಲಿ ಬಿದಿಗೆಯ ಚಂದ್ರ ಮತ್ತು ಅದರ ಪಕ್ಕದಲ್ಲಿರುವ ಸಣ್ಣ ನಕ್ಷತ್ರವನ್ನು ನೋಡುತ್ತಾ ನೂರಾರು ಜನರು ತೀರಿಹೋಗಿರುವ ಶ್ರೀರಂಗಪಟ್ಟಣದ ಯುದ್ಧಭೂಮಿಯಲ್ಲಿ ಗೋರಿಯ ಕಲ್ಲುಗಳ ನಡುವಲ್ಲಿ ಹೆದರುತ್ತಾ ಬೈಕುಓಡಿಸುತ್ತಾ ಬಂದು ಈಗಲೂ ಸುಮ್ಮಗೆ ಕೂತಿದ್ದೇನೆ.