ಮಾರ್ಕ್ವೆಜ್ ಬದುಕಿ ಉಳಿಯಲಿ ದೇವರೇ…

having a drink

ಗಲೂ ಬರೆಯಲಿಕ್ಕಾಗಿಯೇ ಬದುಕಿರುವ ಈ ಶತಮಾನದ ಅದ್ಭುತ ಕಥೆಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್.ಇನ್ನೂ ಉಳಿದಿರುವ ಕಥೆಗಳನ್ನು ಹೇಳಿ ಮುಗಿಸಲಿಕ್ಕಾಗಿಯೇ ಬದುಕಿ ಉಳಿದಿದ್ದಾನೆ. ಆತನ ಆತ್ಮ ಚರಿತ್ರೆಯ ಉಳಿದಿರುವ ಎರಡು ಸಂಪುಟಗಳನ್ನು ಬರೆದ ನಂತರವೂ ಆತ ಬದುಕಿರಲಿ ಎಂದು ನಾನೂ ಪ್ರಾರ್ಥಿಸುತ್ತಿದ್ದೇನೆ.

ಈ ಮಾರ್ಕ್ವೆಜ್ ಸಣ್ಣದಿರುವಾಗ ತುಂಬ ಕುಡುಮಿ ಹುಡುಗ. ಹೆಂಗಸರ ನೆರಳಲ್ಲೆ ಓಡಾಡಿಕೊಂಡು ದೆವ್ವಗಳಿಗೂ ಶಕುನಗಳಿಗೂ ಹೆದರಿಕೊಂಡು ತಾನು ಏನಕ್ಕೂ ಬಾರದವನು ಅಂದುಕೊಂಡು ಶಾಲೆಯಲ್ಲೂ ಎಲ್ಲರಿಂದ ಮುದುಕ ಎಂದು ತಮಾಷೆ ಮಾಡಿಸಿಕೊಂಡು ಹಾಡು ಹೇಳುತ್ತ ಚಿತ್ರ ಬರೆಯುತ್ತ ಇದ್ದವನು. ತಾನು ಶತದಡ್ಡ ಎಂದು ತಿಳಿದು ಕೊಂಡಿದ್ದವನು.ಆದರೆ ತರಗತಿಯಲ್ಲಿ ಯಾವಾಗಲೂ ಮೊದಲು ಬರುತ್ತಿದ್ದವನು. ಈತನ ಜೊತೆಗಿದ್ದ ಅಣ್ಣನಾದರೋ ಮಹಾ ತಿರುಗು. ಅಪ್ಪ ಸಾಲಕ್ಕೆ ಇಲಾಜು ಮಾಡಿಸಿಕೊಂಡಿದ್ದ ಯಾವುದೋ ರೋಗಿಯೊಬ್ಬನಿಂದ ಹಣ ಇಸಕೊಂಡು ಬಾ ಎಂದು ಕಳಿಸಿದರೆ ಆತ ಹಣ ಇಸಕೊಂಡು ಅದನ್ನು ಅಪ್ಪನಲ್ಲಿ ಹೇಳದೆ ಆ ಹಣದಲ್ಲಿ ಗಿಟಾರೊಂದನ್ನು ಕೊಂಡು ಹುಡುಗಿಯರನ್ನು ಮೆಚ್ಚಿಸಲೆಂದು ಅದನ್ನು ನುಡಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದವನು.

ಇಂತಹ ಅಣ್ಣನ ನೆರಳಲ್ಲಿ ಬೆಳೆದಿದ್ದ ಮಾರ್ಕ್ವೆಜ್ ಹುಡುಗಿಯರನ್ನು ಮೆಚ್ಚಿಸಲು ತಾನೂ ಏನಾದರೂggm_parents.jpg ಮಾಡಬೇಕೆಂದಿರುವಾಗಲೇ ಅಪ್ಪ ಅಣ್ಣನನ್ನು ರಿಪೇರಿಮಾಡಲು ರಿಮಾಂಡ್‌ಹೋಂಗೆ ಸೇರಿಸಿದ್ದ. ಅಣ್ಣ ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಾ ರಿಮಾಂಡ್ ಸೇರಿದ್ದ. ಅಣ್ಣನಿಲ್ಲದ ಮನೆ ಮನೆ ಅಂತ ಅನಿಸುತ್ತಿರಲಿಲ್ಲ.

ಇಂತಹ ಹೊತ್ತಿನಲ್ಲೇ ಮಾರ್ಕ್ವೆಜ್ ಗೆ ಆಕೆಯ ಪರಿಚಯವಾಗಿದ್ದು.ಹಾಗೆ ನೋಡಿದರೆ ಮಾರ್ಕ್ವೆಜ್ ಕಳ್ಳಸನ್ನೆ ಮಾಡಿದ್ದು ಆಕೆಗೇನೂ ಆಗಿರಲಿಲ್ಲ.ಆಕೆ ಆ ಸನ್ನೆಯನ್ನು ಆಕೆಗೆಂದು ತಪ್ಪು ತಿಳಿದು ‘ಈ ರಾತ್ರಿ ಬೇಡ,ಗಂಡ ಮನೆಯಲ್ಲಿದ್ದಾನೆ.ಎರಡು ರಾತ್ರಿ ಕಳೆದು ಬಾ.ಮುಂಬಾಗಿಲಿನ ಚಿಲಕ ತೆಗೆದು ಇಟ್ಟಿರುತ್ತೇನೆ.ಬಾಗಿಲು ಸದ್ದು ಮಾಡದೆ ಒಳಗೆ ಬಾ’ ಅಂತ ಸಂಕೇತ ಕಳಿಸಿದ್ದಳು.

ಮಾರ್ಕ್ವೆಜ್ ಗೆ ಆಕೆಯ ಹೆಸರು ಈಗಲೂ ನೆನಪಿದೆ ಆದರೆ ಹೇಳುವುದಿಲ್ಲ.ಆಕೆ ಹೇಗಿದ್ದಳು,ಹೇಗೆ ಕಾಮಿಸುತ್ತಿದ್ದಳು ಎನ್ನುವುದನ್ನು ತನ್ನ ಆತ್ಮ ಕತೆಯಲ್ಲಿ ವಿವರಿಸುತ್ತಾನೆ. ಅವಳ ಉತ್ಕಟ ಆಕ್ರಂದನವನ್ನ ವರ್ಣಿಸುತ್ತಾನೆ.ಆಕೆಯ ಉನ್ಮಾದ ಮನುಷ್ಯ ಜೀವಿಯ ಹಾಗಿರಲಿಲ್ಲ,ಭೋರ್ಗರೆವ ನದಿಯ ಹಾಗಿತ್ತು ಅನ್ನುತ್ತಾನೆ.ಅವಳನ್ನು ಕೂಡಿದೊಡನೆ ಹುಚ್ಚು ಹಿಡಿದಂತಾಗುತ್ತಿತ್ತು ಅನ್ನುತ್ತಾನೆ.

ಆಕೆಯ ಗಂಡ ಒಬ್ಬ ಭಯಂಕರ ಗಾತ್ರದ ಗಂಡಸು. ಆದರೆ ಆತನ ಧ್ವನಿ ಎಳೆ ಬಾಲಕಿಯ ಹಾಗೆ ಇತ್ತಂತೆ. ಆತ ದೂರ ಎಲ್ಲೋ ಗಡಿಯಲ್ಲಿ ಪೋಲೀಸ್ ಆಫೀಸರಾಗಿದ್ದ.ತನ್ನ ಬಂದೂಕಿನ ಗುರಿಯನ್ನ ನಿಖರ ಗೊಳಿಸಲು ಜನರಿಗೆ ಗುಂಡಿಕ್ಕುತ್ತಿದ್ದನಂತೆ. ಅವರ ಮನೆಗೆ ಎರಡು ಬಾಗಿಲು. ಒಂದು ಬೀದಿಯ ಕಡೆ ತೆರೆದು ಕೊಂಡಿದ್ದರೆ ಇನ್ನೊಂದು ಸ್ಮಶಾನದ ಕಡೆ. ಆಕೆ ಕಾಮಿಸುವ ಕೂಗು ಒಂದು ಕಡೆಯಿಂದ ಬೀದಿಯಲ್ಲಿ ಹೋಗುವವರ ಶಾಂತಿಯನ್ನ ಕೆಡಿಸಿದರೆ ಇನ್ನೊಂದು ಕಡೆ ಸ್ಮಶಾನದ ಹೆಣಗಳ ಆತ್ಮಕ್ಕೆ ಶಾಂತಿಕೊಡುವ ಹಾಗಿತ್ತು ಎಂದು ಮಾರ್ಕ್ವೆಜ್ ವಯಸ್ಸಾದ ಮೇಲೆ ನೆನಪು ಮಾಡಿಕೊಂಡು ಬರೆಯುತ್ತಾನೆ.

marquez2.jpgಆಕೆಯ ವಯಸ್ಸು ಇಪ್ಪತ್ತು. ಮಾರ್ಕ್ವೆಜ್ ಇನ್ನೂ ತುಂಬಾ ಸಣ್ಣವನು. ಅವರಿಬ್ಬರು ಗುಟ್ಟಲ್ಲಿ ಕೂಡಲು ತೊಡಗಿದ ಮೊದಲ ವಾರದಲ್ಲಿ ಆತ ಎರಡು ಮೂರು ಬಾರಿ ನಡು ರಾತ್ರಿಯಲ್ಲೇ ಓಡಿ ಬರಬೇಕಾಯ್ತಂತೆ. ಏಕೆಂದರೆ ಪೋಲೀಸ್ ಆಫೀಸರ್ ಏಕಾಏಕಿ ಹೇಳದೆ ಕೇಳದೆ ಡ್ಯೂಟಿ ಮುಗಿಸಿ ಬಂದು ಬಿಡುತ್ತಿದ್ದನಂತೆ.

ಒಮ್ಮೆಯಂತೂ ಹಿಂದಿನ ಸ್ಮಶಾನದ ಬಾಗಿಲಿಂದ ಓಡಿ ಹೋಗುತ್ತಿದ್ದ ಮಾರ್ಕ್ವೆಜ್ ನನ್ನು ಆ ದಡೂತಿ ಗಾತ್ರದ ಗಂಡ ತಡೆದು ನಿಲ್ಲಿಸಿ ನಮಸ್ಕಾರ ಹೇಳಿ ಸಿಗರೇಟು ಹಚ್ಚಲು ಬೆಂಕಿಪೆಟ್ಟಿಗೆ ಕೇಳಿದನಂತೆ. ಮಾರ್ಕ್ವೆಜ್ ಆ ಗಾಳಿಯಲ್ಲಿ ಕಡ್ಡಿ ಆರಿಹೋಗದ ಹಾಗೆ ಆತನಿಗೆ ಅಂಟಿಕೊಂಡು ಸಿಗರೇಟು ಹಚ್ಚಿಕೊಟ್ಟನಂತೆ. ಅಷ್ಟು ಹತ್ತಿರ ಬಂದವನನ್ನು ದುರುಗುಟ್ಟಿ ನೋಡಿದ ಪೋಲೀಸ್ ಆಫೀಸರ್ ‘ಥೂ ನಿನ್ನ ಮೈಯಿಂದ ಯಾರೋ ಹಾದರಗಿತ್ತಿಯ ಮೈವಾಸನೆ ಹೊಡೆಯುತ್ತಿದೆ’ ಎಂದು ಬೈದು ಹೋದನಂತೆ.

ನಂತರ ಇನ್ನೊಂದು ಬುಧವಾರ ಇರುಳು ಮಾರ್ಕ್ವೆಜ್ ಆಕೆಯ ಮೈಮೇಲೆ ನಿದ್ದೆ ತೂಗುತ್ತಾ ಕನಸು ಕಾಣುತ್ತಿರುವಾಗ ಏನೋ ಸದ್ದಾಗಿ ಕಣ್ಣು ತೆರೆದು ನೋಡಿದರೆ ಪೋಲೀಸ್ ಆಫೀಸರ್ ಬೆತ್ತಲೆಯಾಗಿದ್ದ ತನ್ನ ಸುಂದರಿ ಮಡದಿಯನ್ನೂ ಆಕೆಯ ಮೇಲೆ ನಿದ್ದೆ ತೂಗುತ್ತಾ ಕನಸು ಕಾಣುತ್ತಿರುವ ತನ್ನನ್ನೂ ರಿವಾಲ್ವರ್ ನಿಂದ ಗುರಿಯಿಟ್ಟು ಕೂತಿರುವುದನ್ನು ಕಂಡ. ಹೆಂಡತಿ ಅಡಗಿಕೊಳ್ಳಲು ನೋಡಿದರೆ ರಿವಾಲ್ವರ್ ನಳಿಕೆಯಿಂದ ಆಕೆಯನ್ನ ಬದಿಗೆ ತಳ್ಳಿ ನಮ್ಮ ಪ್ರೀತಿಯ ಲೇಖಕನ ತಲೆಗೆ ಗುರಿಯಿಟ್ಟು ‘ಹಾದರಕ್ಕೆ ಬಂದೂಕು ಉತ್ತರ’ ಎಂದು ಉತ್ತರಿಸಿದ. ಹಾಗೆ ಅಂದವನು ಇವರಿದ್ದ ಹಾಸಿಗೆಯಲ್ಲೇ ಕುಳಿತು ರಂ ಬಾಟಲಿನ ಮುಚ್ಚಳ ತೆಗೆದ ರಿವಾಲ್ವರ್ ಕೆಳಗಿಟ್ಟ.

ಮಾರ್ಕ್ವೆಜ್ ಮತ್ತು ಪೋಲೀಸ್ ಆಫೀಸರ್ ಇಬ್ಬರೂ ಕುಡಿಯಲು ಕುಳಿತರು. ಕುಡಿಯುತ್ತ ಕುಡಿಯುತ್ತ ಆತ ಕೊಲ್ಲಬೇಕಿಂದಿದ್ದರೆ ಸುಮ್ಮನೇ ಕೊಲ್ಲಬಹುದಿತ್ತಲ್ಲ ಈ ಕುಡಿಯುವ ನಾಟಕ ಯಾತಕ್ಕೆ ಅನಿಸಲು ತೊಡಗಿತ್ತು. ಕುಡಿದು ಒಂದು ಬಾಟಲು ಮುಗಿದು ಇಬ್ಬರೂ ಒಂದು ಹಂತಕ್ಕೆ ಬಂದು ಬಿರುಗಾಳಿ ಬೀಸಲು ತೊಡಗಿ ಪೋಲೀಸ್ ಆಫೀಸರ್ ರಿವಾಲ್ವರ್ ತನ್ನ ಹಣೆಗಿಟ್ಟುಕೊಂಡು ಟ್ರಿಗ್ಗರ್ ಎಳೆದ. ಅದು ಕ್ಲಿಕ್ ಸದ್ದು ಮಾಡಿ ಸುಮ್ಮಗಾಯಿತು. ಪೋಲೀಸ್ ಆಫೀಸರ್ ಬೆವರಿಬಿಟ್ಟಿದ್ದ.

ನಂತರದ ಸುತ್ತಿನ ಸರದಿ ಮಾರ್ಕ್ವೆಜ್ ನದ್ದು. ಆತ ಅದೇ ಮೊದಲ ಬಾರಿ ಜೀವನದಲ್ಲಿ ಬಂದೂಕು ಮುಟ್ಟುತ್ತಿರುವುದು. ಅದು ಎಷ್ಟು ಭಾರವಿದೆ ಬೆಚ್ಚಗಿದೆ ಅನ್ನಿಸಿತು. ಆತ ಈಗ ಅದನ್ನು ತನ್ನ ಹಣೆಗೆ ಹೊತ್ತಿ ಟ್ರಿಗ್ಗರ್ ಎಳೆಯಬೇಕಿತ್ತು.ಏನು ಮಾಡುವುದು ಗೊತ್ತಾಗದೆ ಸುಮ್ಮನೇ ಅದನ್ನ್ನ ಪೋಲೀಸ್ ಆಫೀಸರ್‌ಗೆ ಹಿಂತಿರುಗಿಸಿದ. ಪೋಲೀಸ್ ಆಫೀಸರ್ ಹೆಣ್ಣುದನಿಯಲ್ಲಿ ಗಹಗಹಿಸಿದ. ಚಡ್ಡಿಯಲ್ಲಿ ಮಾಡಿಕೊಂಡೆಯಾ ಅಂತ ತಮಾಷೆ ಮಾಡಿದ. ಅದಕ್ಕೇ ಅಲ್ವಾ ನನ್ನ ಹೆಂಡತಿಯ ಹತ್ತಿರ ಬಂದದ್ದು ಎಂದು ಗಹಗಹಿಸಿದ.

ggm_with_family.jpg

ಎಂತೆಂತಹ ಪೈಲ್ವಾನರೇ ಚಡ್ಡಿಯಲ್ಲಿ ಮಾಡಿಕೊಳ್ಳುತ್ತಾರೆ ಎಂದು ಹೇಳಬೇಕೆನಿಸಿತು. ಆದರೆ ಅಂತಹ ಮಾರಣಾಂತಿಕ ತಮಾಷೆಗೆ ಇದು ಹೊತ್ತಲ್ಲ ಅನ್ನಿಸಿ ಸುಮ್ಮಗಾದ. ಪೋಲೀಸ್ ಆಫೀಸರ್ ರಿವಾಲ್ವರ್‌ನ ಸಿಲಿಂಡರ್ ಬಿಚ್ಚಿದ. ಅದು ಖಾಲಿ ಇತ್ತು. ರಿವಾಲ್ವರ್ ನಲ್ಲಿ ಗುಂಡು ತುಂಬಿಸಿಯೇ ಇರಲಿಲ್ಲ. ಮಾರ್ಕ್ವೆಜ್ ಗೆ ಅವಮಾನದಲ್ಲಿ ಆಗ ಸಾಯಬೇಕೆನಿಸಿತಂತೆ.

ಬೆಳಗೆ ನಾಲ್ಕರ ಹೊತ್ತಿಗೆ ಬಿರುಗಾಳಿ ನಿಂತಿತಂತೆ. ಇಬ್ಬರಿಗೂ ಸುಸ್ತಾಗಿ ನಿದ್ದೆ ತೂಗುತ್ತಿತ್ತಂತೆ. ಆತ ಬಟ್ಟೆ ತೊಟ್ಟುಕೊಳ್ಳಲು ಹೇಳಿದನಂತೆ. ಮಾರ್ಕ್ವೆಜ್ ವಿದೇಯ ಹುಡುಗನಂತೆ ತೊಟ್ಟುಕೊಂಡನಂತೆ. ಅದೇನು ಅನ್ನಿಸಿತೋ ಪೋಲೀಸ್ ಆಫೀಸರ್ ಅಳಲು ತೊಡಗಿದನಂತೆ. ಕಣ್ಣೀರು ಒರಸಿಕೊಂಡನಂತೆ. ಕರ್ಚೀಫಿನಿಂದ ಮೂಗು ಸೀಟಿದನಂತೆ.living-to-tell-the-tale.jpg

‘ನಿನ್ನ ಅಪ್ಪ ಡಾಕ್ಟರ್ ಅದೇನೋ ಹೆಸರಿಲ್ಲದ ಕಾಯಿಲೆಯಿಂದ ನನ್ನನ್ನು ಉಳಿಸಿದ್ದ.ಅದಕ್ಕಾಗಿ ನಾನು ನಿನ್ನನ್ನು ಉಳಿಸಿರುವೆ.ಈಗ ಹೋಗು’ ಎಂದು ಕಳಿಸಿದನಂತೆ.

ಇದನ್ನೆಲ್ಲ ಮಾರ್ಕ್ವೆಜ್ ಬರೆಯುತ್ತಾ ಹೋಗುತ್ತಾನೆ. ಆಮೇಲೆ ಆಕೆ ಪುನಃ ಚಿಲಕ ತೆರೆದಿಟ್ಟುಕರೆಯುತ್ತಿದ್ದುದು.ಆತ ಹೋಗದೆ ತಪ್ಪಿಸಿಕೊಳ್ಳುತ್ತಿದ್ದುದು.ಪೋಲೀಸ್ ಆಫೀಸರ್ ಕುಡಿದು ಚಿತ್ತಾಗಿ ತನ್ನನ್ನು ಕುಡಿಯಲು ಆಹ್ವಾನಿಸುತ್ತಿದ್ದು.ತಾನು ಕೆಲವೊಮ್ಮೆ ಆಹ್ವಾನ ತಿರಸ್ಕರಿಸಲಾಗದೇ ಜೊತೆ ಕೊಡುತ್ತಿದ್ದುದು.ಕೊನೆ ಕೊನೆಗೆ ಆತ ರಗಳೆಯಂತೆ ಅನ್ನಿಸುತ್ತಿದ್ದುದು..

ಮಾರ್ಕ್ವೆಜ್ ನ ಆತ್ಮ ಚರಿತ್ರೆಯ ಒಂದು ಸಂಪುಟ ಇಂಗ್ಲಿಷ್ ನಲ್ಲಿ ಬಂದಿದೆ.ಇನ್ನು ಎರಡನ್ನು ಆತ ತನ್ನ ಸ್ಪಾನಿಷ್ ಭಾಷೆಯಲ್ಲಿ ಇನ್ನೂ ಬರೆದು ಮುಗಿಸಿಲ್ಲ.ಅದಕ್ಕಾಗಿ ನಾವೆಲ್ಲಗೆಳೆಯರು ಕಾಯುತ್ತಿದ್ದೇವೆ..

Advertisements