ಕೊಡಗಿನ ಅರಸರ ಹಿಟ್ಟಿನ ಅರಮನೆ

ಕೊಡಗಿನ ಅರಸರ ದಾಖಲೆಗಳು

“ನಾವು ರಾಜಮನೆತನದವರು ಎಂದು ಗೊತ್ತಾಗುವ ಮೊದಲು ಹಿಟ್ಟು ಬೀಸುತ್ತಾ ಹಿಟ್ಟು ಮಾರುತ್ತಾ ಒಟ್ಟಿನಲ್ಲಿ ಅಜ್ಞಾತವಾಸದಲ್ಲಿದ್ದ ಪಾಂಡವರ ಹಾಗೆ ಕಾಲತಳ್ಳುತ್ತಿದ್ದೆವು” ಎಂದು ಕೊಡಗು ಸಿಂಹಾಸನಾಧೀಶ್ವರ ಹಾಲೇರಿ ದೊಡ್ಡವೀರರಾಜ ಒಡೆಯರ್ ರವರ ಮಗಳು ದೇವಮ್ಮಾಜಿ ಹಾಗೂ ಅಳಿಯ ಪಟೇಲಮಲ್ಲಪ್ಪನವರ ಮರಿಮಗನಾದ ಹಾಲೇರಿ ಸಿ. ನಾಗರಾಜು ಒಡೆಯರ್ ಅವರು ಮೈಸೂರಿನ ಶಿವರಾಂ ಪೇಟೆಯಲ್ಲಿರುವ ತಮ್ಮ ಸದಾನಂದ ಹಿಟ್ಟಿನ ಅಂಗಡಿಯ ಒಳಕೋಣೆಯೊಂದರಲ್ಲಿ ಕುಳಿತು ವಿವರಿಸುತ್ತಿದ್ದರು.

ನಾನು ಕಣ್ಣು ಪಿಳಿಪಿಳಿ ಬಿಟ್ಟುಕೊಂಡು ಅವರನ್ನು ಪರೀಕ್ಷಕ ದೃಷ್ಟಿಯಿಂದ ನೋಡುತ್ಥಾ ಪಾಟೀಸವಾಲು ಹಾಕುತ್ತಾ ಹಿಟ್ಟಿನ ಗಿರಣಿಯ ರಂಧ್ರರಂಧ್ರಗಳಿಂದ ಹೊರಬರಲು ಚಡಪಡಿಸುತಿದ್ದ ಅಕ್ಕಿಹಿಟ್ಟು, ರಾಗಿಹಿಟ್ಟು, ಮೆಂತ್ಯಹಿಟ್ಟು, ಸಕ್ಕರೆಪುಡಿ, ಹುರಿದ ಜೀರಿಗೆ, ಸಾಂಬಾರ ಪುಡಿ, ಅಚ್ಚಖಾರದ ಪುಡಿಗಳ ಕಲಸು ಮೇಲೋಗರ ಪರಿಮಳದಲ್ಲಿ ತೇಲಿಮುಳುಗುತ್ತಾ ಆಗಾಗ ನುಗ್ಗಿ ಬರುತ್ತಿದ್ದ ಕೆಮ್ಮು ಸೀನುಗಳನ್ನು ಅದುಮಿ ಹಿಡಿಯುತ್ತಾ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ.

ಕೊಡಗಿನ ಅರಸ ಹಾಲೇರಿ ದೊಡ್ಡ ವೀರರಾಜನ ಮಗಳು ದೇವಮ್ಮಾಜಿ, ಆಕೆಯನ್ನು ವರಿಸಿದ್ದು ಹಳ್ಳಿ ಮಲ್ಲಪ್ಪ ಅಲಿಯಾಸ್ ಮಲ್ಲಪ್ಪಗೌಡ. ಆ ಮಲ್ಲಪ್ಪಗೌಡರ ಮಗ ಹಳ್ಳಿಮಲ್ಲಣ್ಣ, ಮಲ್ಲಣ್ಣನವರ ಮಗ ಚಿನ್ನಣ್ಣ-ಚಿನ್ನಣ್ಣನವರ ಮಗ ನಾನು- ನಾಗರಾಜ. ನನ್ನ ಮುತ್ತಜ್ಜಿ ದೇವಮ್ಮಾಜಿ ಈಸ್ಟ್ ಇಂಡಿಯಾ ಕಂಪೆನಿಗೆ ಆ ಕಾಲದಲ್ಲಿ ಸುಮಾರು ಅರವತ್ತೈದು ಸಾವಿರ ರೂಪಾಯಿಗಳನ್ನು ಶೇಕಡಾ ಆರರ ಬಡ್ಡಿಯ ಮೇರೆಗೆ ಸಾಲ ಕೊಟ್ಟಿದ್ದರು. ಆ ಸಾಲಕ್ಕೆ ಬಡ್ಡಿ ಬೆಳೆದು ಆ ಬಡ್ಡಿಗೆ ಚಕ್ರಬಡ್ಡಿ ಬೆಳೆದು ಈಗ ಒಟ್ಟು ಒಂದು ಲಕ್ಷದ ಐವತ್ತೈದು ಸಾವಿರ ಕೋಟಿ ನಮಗೆ ಬರಬೇಕಾಗಿದೆ. ಮುಳುಗಿಹೋದ ಈಸ್ಟ್ ಇಂಡಿಯಾ ಕಂಪೆನಿಯ ವಾರಸುದಾರರಾದ ಬ್ರಿಟಿಷ್ ಮಹಾರಾಣಿಯು ಈ ಮೊತ್ತವನ್ನು ನಮಗೆ ಸಂದಾಯಮಾಡಬೇಕಾಗಿದೆ. ಅದೂ ಅಲ್ಲದೆ ಪಿರಿಯಾಪಟ್ಟಣದಿಂದ ಹಿಡಿದು ಅಮರ ಸುಳ್ಯದ ತನಕ ಇರುವ ಸಮಸ್ತ ಕೊಡಗನ್ನು ನನ್ನ ಹಿರೀಕರು ರಾಜ್ಯಭಾರ ಮಾಡಿದ್ದರಿಂದ ಆ ಜಾಗವೆಲ್ಲವೂ ನನಗೆ ಸೇರಬೇಕಾಗಿದೆ. ಒಂದು ವೇಳೆ ಅದು ಆಗದಿದ್ದಲ್ಲಿ ಸಾಂಕೇತಿಕವಾಗಿ ಕೊಡಗಿನ ರಾಜಾಸೀಟು, ಗದ್ದುಗೆ, ಕೋಟೆ, ಅರಮನೆ, ಕಾಫಿತೋಟ ಇವೆಲ್ಲವೂ ನನಗೆ ಸೇರಬೇಕಾಗಿದೆ ಎಂದು ಸದಾನಂದ ಹಿಟ್ಟಿನ ಗಿರಣಿಯ ಮಾಲೀಕರಾದ ನಾಗರಾಜ ಒಡೆಯರ್ ಅವರು ಯಾವುದೇ ಮುಲಾಜಿಲ್ಲದೆ ನಿಸ್ಸಂದೇಹವಾಗಿ ನನಗೆ ವಿವರಿಸುತ್ತಿದ್ದರು.

ಒಂದು ಕಾಲದಲ್ಲಿ ಕೊಡಗಿನ ನಮಗೆಲ್ಲರಿಗೂ ಮಹಾರಾಜರಾಗಿದ್ದ ಹಾಲೇರಿ ಅರಸರ ವಂಶದ ಕುಡಿಯೊಡನೆ ವಾದಕೊಡಗಿನ ಅರಸರ ಕುಡಿ ಮಾಡುತ್ತಿರುವ ನನ್ನ ಉದ್ಧಟತನಕ್ಕೆ ನನಗೇ ನಗುಬಂದು ಆ ನಗುವನ್ನು ತೋರಿಸಿಕೊಳ್ಳದೆ ನಾಗರಾಜ ಒಡೆಯರು ಖಾಲಿ ಹಿಟ್ಟಿನ ಚೀಲದೊಳಗೆ ಜತನದಲ್ಲಿ ಇಟ್ಟುಕೊಂಡಿದ್ದ ರಾಜಮನೆತನಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲಾತಿಗಳನ್ನೂ, ಐತಿಹಾಸಿಕ ಕಾಗದ ಪತ್ರಗಳನ್ನೂ ಎತ್ತಿಕೊಂಡು ಅವುಗಳ ಮೇಲೆ ಹರಡಿದ್ದ ನಾನಾ ಹಿಟ್ಟುಗಳ ಧೂಳುಗಳನ್ನು ಜೋಪಾನವಾಗಿ ಕೊಡವಿ ನೋಡತೊಡಗಿದೆ.

ಅದರಲ್ಲಿರುವ ಒಂದು ಪತ್ರ ಇಂಗ್ಲೆಂಡಿನ ಸಾಮ್ರಾಜ್ಞಿ, ಎಲಿಜಬೆತ್ ಮಹಾರಾಣಿಯ ಖಾಸಗೀ ಕಾರ್ಯದರ್ಶಿಯವರು ಬಕಿಂಗ್ ಹ್ಯಾಂ ಅರಮನೆಯಿಂದ ಬರೆದ ಪತ್ರ. ತಮಗೆ ಬ್ರಿಟೀಷ್ ಸರಕಾರ ಮರುಪಾವತಿಸಬೇಕಾದ ಸಾಲದ ಕುರಿತು ನಾಗರಾಜ ಒಡೆಯರ್ ರವರು ಮಹಾರಾಣಿಯವರಿಗೆ ಬರೆದ ಪತ್ರಕ್ಕೆ ಬಂದ ಉತ್ತರವದು. ಆ ಪತ್ರದಲ್ಲಿ ಮಹಾರಾಣಿಯವರು ನಾಗರಾಜ ಒಡೆಯರ್ ಅವರ ಪತ್ರದ ಒಕ್ಕಣೆಯನ್ನು ಗಮನಿಸಿರುವುದಾಗಿಯೂ ಈ ಕುರಿತ ಮುಂದಿನ ಕ್ರಮಕ್ಕಾಗಿ ಆ ಪತ್ರವನ್ನು ವಿದೇಶಾಂಗ ಹಾಗೂ ಕಾಮನ್ವೆಲ್ತ್ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ ರವಾನಿಸಿರುವುದಾಗಿಯೂ ಬರೆಯಲಾಗಿತ್ತು. ಈ ಪತ್ರವನ್ನು ನಾಗರಾಜ ಒಡೆಯರ್ ಅವರು ತಮ್ಮ ಹಿಟ್ಟಿನ ಅಂಗಡಿಯ ದೊಡ್ಡ ದೊಡ್ಡ ಚೀಲಗಳ ನಡುವೆ ಇರುವ ಹಳೆಯಕಂಬಕ್ಕೆ ಕಟ್ಟು ಹಾಕಿಸಿ ತೂಗಿ ಹಾಕಿದ್ದಾರೆ.

ಇನ್ನೊಂದು ಪತ್ರ ಈಸ್ಟ್ ಇಂಡಿಯಾ ಕಂಪೆನಿಯ ಉಳಿದಿರುಬಹುದಾದ ವಾರಸುದಾರರಿಗೆ ಸಾಲದ ವಿಚಾರವಾಗಿ ನಾಗರಾಜ ಒಡೆಯರ್ ಅವರು ಬರೆದ ಪತ್ರಕ್ಕೆ ಬಂದ ಉತ್ತರ. ಆ ಉತ್ತರವನ್ನು ಮುಳುಗಿ ಹೋದ ಕಂಪೆನಿಗಳ ಕುರಿತ ಇಲಾಖೆಯ ಮುಖ್ಯಸ್ಥರು ಬರೆದಿದ್ದರು. ಒಂದು ವೇಳೆ ದೇವಮ್ಮಾಜಯವರು ಈಸ್ಟ್ ಇಂಡಿಯಾ ಕಂಪೆನಿಗೆ ಸಾಲ ಕೊಟ್ಟಿರುವುದು ನಿಜವಾಗಿದ್ದರೂ, ದೇವಮ್ಮಾಜಿಯವರು ಮಲ್ಲಪ್ಪಗೌಡರನ್ನು ವಿವಾಹವಾಗಿರುವುದು ನಿಜವಾಗಿದ್ದರೂ, ಈಗ ಬದುಕಿರುವ ನಾಗರಾಜ ಒಡೆಯರ್ ಅವರು ಆವಂಶದ ವಾರಸುದಾರನಾಗಿರುವುದು ನಿಜವಾಗಿದ್ದರೂ ಸಾಲ ಇಸಕೊಂಡ ಈಸ್ಟ್ಇಂಡಿಯಾ ಕಂಪೆನಿ ಮುಳುಗಿ ಹೋಗಿರುವುದರಿಂದ ಮುಳುಗಿ ಹೋಗಿರುವ ಕಂಪೆನಿಯ ಬಾದ್ಯತೆಗಳಿಗೆ ಬ್ರಿಟಿಷ್ ಸರಕಾರ ಹೊಣೆಯಲ್ಲದಿರುವುದರಿಂದ ಈ ಕುರಿತ ಪತ್ರವ್ಯವಹಾರ ಇಲ್ಲಿಗೇ ಕೊನೆಯಾಗಿರುವುದು ಎಂದು ಬರೆದಿತ್ತು.

ಇನ್ನೊಂದು ಪತ್ರ ಬ್ರಿಟನ್ನಿನ ಪ್ರಧಾನಿಯ ಕಛೇರಿಯಿಂದ ಬಂದಿರುವ ಪತ್ರ. ಅದರಲ್ಲೂ ಇದೇರೀತಿಯ ಒಕ್ಕಣೆಯಿತ್ತು.
ಉಳಿದ ದಾಖಲೆಗಳೆಲ್ಲವೂ ಕೊಡಗಿನಲ್ಲಿ ಬ್ರಿಟಿಷ್ರಿಗೆ ಸೆರೆಸಿಕ್ಕು ಇಂಗ್ಲೆಂಡು, ಬರ್ಮಾ ಇತ್ಯಾದಿ ಕಡೆಗಳಲ್ಲಿ ಸೆರೆಯಾಳಾಗಿ ಜೀವಾವಧಿ ಶಿಕ್ಷೆ ಮುಗಿಸಿ ಪಿರಿಯಾಪಟ್ಟಣಕ್ಕೆ ಮರಳಿ ಬಂದು ಪ್ಲೇಗಿಗೆ ಸಿಕ್ಕಿಹಾಕಿಕೊಂಡು ಸತ್ತುಹೋದ ಮಲ್ಲಪ್ಪಗೌಡನ ಪೂರ್ವಾಪರಗಳ ಕುರಿತು ನಾಗರಾಜು ಒಡೆಯರ್ ಅವರು ಇಂಗ್ಲೆಂಡಿನ ಇತಿಹಾಸ ಸಂಶೋದಕಿಯೊಬ್ಬಳ ಜೊತೆ ನಡೆಸಿದ ಪತ್ರವ್ಯವಹಾರಗಳ ಕುರಿತಾಗಿದೆ.

ಲಂಡನ್ನಿನ ನಾನಾ ಪತ್ರಾಗಾರಗಳಲ್ಲಿ ತಾನು ನಡೆಸಿದ ಶೋಧಗಳು ಅದು ಹೇಗೆ ರೋಮಾಂಚನಕಾರಿಯಾಗಿತ್ತೆಂದೂ, ಕೈಗೆ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಅದು ಹೇಗೆ ಮಲ್ಲಪ್ಪನ ವಿವರಗಳಿದ್ದ ಕಡತಗಳು ಕ್ರಿಮಿ ಕೀಟಗಳ ಹಾವಳಿಗೆ ಸಿಕ್ಕಿ ಹಾಳಾಗಿ ಹೋಗುತ್ತಿದ್ದವೆಂದೂ ಆಕೆ ವಾರಕ್ಕೊಂದು ಸಲ ಬರೆಯುತ್ತಿದ್ದಳು. ನಡುನಡುವಲ್ಲಿ ಒಡೆಯರ್ ಅವರು ಕಳುಸಹಿಸುತ್ತಿರುವ ಹಣದ ಕುರಿತು ಕೃತಜ್ಞತೆಯನ್ನು ತೋರಿಸಿದ್ದಳು. ಒಂದು ಪತ್ರದಲ್ಲಿ ತನ್ನ ಹಳೆಯದಾದ ರೆಪ್ರಿಜಿರೇಟರ್ ಹಾಳಾಗಿದೆಯೆಂದೂ ಅದನ್ನು ಸರಿಪಡಿಸದೆ ತನ್ನ ಸಂಶೋಧನೆ ಮುಂದೆ ಸಾಗದೆಂದೂ ನಾಗರಾಜ ಒಡೆಯರ್ ಅವರು ಸ್ವಲ್ಪ ಕಾಲ ಕಾಯಬೇಕಾಗುತ್ತದೆಂದೂ ಬರೆದಿದ್ದಳು.

ನಾನು ಈ ಎಲ್ಲ ಕಾಗದ ಪತ್ರಗಳ ಮೇಲೆ ಹಸಿದ ಗೆದ್ದಲಿನಂತೆ ಕಣ್ಣಾಡಿಸುತ್ತಾ ಹಿಟ್ಟಿನ ಅಂಗಡಿಯ ಮಸಾಲೆಯ ಧೂಳಿಗೆ ಸೀನುತ್ತಾ ನಾಗರಾಜ ಒಡೆಯರ ಜೊತೆ ಮಾತನಾಡುತ್ತಿದ್ದೆ. ನೂರಾರು ವರ್ಷಗಳಿಂದ ಒಂದೇ ಸಮನೆ ತಿರುಗುತ್ತಿರುವ ಗಿರಣಿಯ ಮಿಷಿನ್ ಸಣ್ಣದಾಗಿ ಸದ್ದು ಮಾಡುತ್ತಾ ಗೊಣಗುತ್ತಾ ತನ್ನ ಕೆಲಸವನ್ನು ತಾನು ಮಾಡುತ್ತಿತ್ತು. ನಾಗರಾಜ ಒಡೆಯರ್ ಅವರ ಕಿರಿಯ ಇಬ್ಬರು ಗಂಡುಮಕ್ಕಳು ಯುವರಾಜರುಗಳಂತೆ ನನ್ನನ್ನು ತದೇಕಚಿತ್ತದಿಂದ ನೋಡುತ್ತಾ ನಡುನಡುವಲ್ಲಿ ಹೀಗೆ ಆಗುಂತಕನಂತೆ ಬಂದು ತಮ್ಮ ತಂದೆ ಹಾಲೇರಿ ಸಿ. ನಾಗರಾಜು ಒಡೆಯರ್ ಅವರನ್ನು ಪಾಟೀಸವಾಲಿಗೊಳಪಡಿಸುತ್ತಿರುವ ನನ್ನನ್ನು ಈಸ್ಟ್ ಇಂಡಿಯಾ ಕಂಪನಿಯ ಬೇಹುಗಾರನಿರಬೇಕೆಂದು ಸಂಶಯಿಸುತ್ತಾ ಕುಳಿತಿದ್ದರು.

ದೇವಮ್ಮಾಜಿ ಮತ್ತು ಮಲ್ಲಪ್ಪ ಪಿರಿಯಾಪಟ್ಟಣದಲ್ಲಿ ಪ್ಲೇಗು ಬಂದು ತೀರಿಕೊಂಡರಂತೆ, ತೀರಿಹೋಗುವ ಮೊದಲು ಮಲ್ಲಪ್ಪ ಅಲ್ಲಿ ಸಂತೆವ್ಯಾಪಾರ ಮಾಡುತ್ತಿದ್ದರಂತೆ. ಅವರ ಕಾಲಾನಂತರ ಅವರ ಮಗ ಮಲ್ಲಣ್ಣನವರು ತನ್ನ ಮಗ ಚಿನ್ನಣ್ಣನವರೊಡನೆ ಮೈಸೂರಿಗೆ ಬಂದು ಹಳ್ಳಿಯವರಿಂದ ‘ಅಕ್ಕಿರಾಗಿಕಾಳು ಕೊಂಡು ಬೀಸಿಕೊಟ್ಟು ಜೀವನಸಾಗಿಸುತ್ತಿದ್ದರಂತೆ ಅಷ್ಟುಹೊತ್ತಿಗೆ ಮೈಸೂರಿನ ಮಹಾರಾಜರು ಇಂಗ್ಲೆಂಡಿನಿಂದ ತಂದ ಹಿಟ್ಟುಮಾಡುವ ಯಂತ್ರವನ್ನು ಸಾರ್ವಜನಿಕರ ಪ್ರದರ್ಶನಕ್ಕಾಗಿ ದೊಡ್ಡಕೆರೆ ಮೈದಾನದಲ್ಲಿ ಇಟ್ಟಿದ್ದರಂತೆ. ಎರಡಸಾವಿರ ಕೊಟ್ಟು ಮಹಾರಾಜರಿಂದ ಅದನ್ನು ಖರೀದಿಸಿ ಮಹಾರಾಜರ ಬಳಿಯಿಂದ ಎರಡು ಹಾಲೆಸ್ಟೀನ್ ಹಸುಗಳನ್ನೂ ಖರೀದಿಸಿ ಹಿಟ್ಟಿಗೆ ಹಿಟ್ಟು ಮಾರಿ ಹಾಲಿಗೆ ಹಾಲುಮಾರಿ ಈ ಸ್ಥಿತಿಗೆ ಬಂದೆವು ಆದರೆ ನಾವು ಕೊಡಗಿನ ಮಹಾರಾಜರ ವಾರಸುದಾರರು ಎಂದು ಅರಿವಾದ ಮೇಲೆ ಏನೋ ಒಂದು ಕಳಕೊಂಡಂತಾಗಿದೆ. ನನ್ನ ಮುತ್ತಜ್ಜಿಯ ಸಾಲವನ್ನು ಬ್ರಿಟಿಷ್ ಸರಕಾರ ಮರುಪಾವತಿಸಿದರೆ ನಾನು ಕೊಡಗಿನ ಬಡಪ್ರಜೆಗಳಿಗಾಗಿ ಒಂದು ಅತ್ಯಾಧುನಿಕ ಹೃದಯ ಆಸ್ಪತ್ರೆಯನ್ನು ಕಟ್ಟಿಕೊಡುತ್ತೇನೆ. ಕೊಡಗಿನಲ್ಲಿ ಇನ್ನಷ್ಟು ಕಾಡು ಬೆಳೆಸುತ್ತೇನೆ ಎಂದು ನಾಗರಾಜ ಒಡೆಯರು ಕಣ್ಣಿನಲ್ಲಿ ಕನಸು ತುಂಬಿಕೊಂಡು ಹೇಳುತ್ತಿದ್ದರು.

ಅಷ್ಟರಲ್ಲಿ ನಾಗರಾಜು ಒಡೆಯರ್ ಅವರ ಕಿರಿಯಪುತ್ರ ನನ್ನ ಕೈಯಲ್ಲಿದ್ದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಅಪ್ಪನನ್ನು ಒತ್ತಾಯದಲ್ಲಿ ಎಬ್ಬಿಸಿಕೊಂಡು ವಕೀಲರ ಬಳಿ ಹೊರಟ. ಬಹುಶಃ ಬ್ರಿಟಿಷ್ ಸರಕಾರದ ವಿರುದ್ದ ನಡೆಸುತ್ತಿರುವ ಕಾನೂನು ಸಮರದ ಮುಂದಿನ ರೂಪುರೇಷೆಗಳನ್ನು ಚರ್ಚಿಸಲು ಇರಬಹುದು. ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಕ್ಕೆ ಕ್ಷಮೆ ಇರಲಿ ಎಂದು ಕೇಳಿಕೊಳ್ಳುವಂತೆ ಮುಖಮಾಡಿಕೊಂಡು ಹಾಲೇರಿ ನಾಗರಾಜ ಒಡೆಯರು ಮಗನ ಹಿಂದೆ ನಡೆಯುತ್ತಿದ್ದರು. ಅವರ ಮುಖದ ಮೇಲೆಲ್ಲಾ ಅಲ್ಲಲ್ಲಿ ಕ್ಷೀಣವಾಗಿ ನಾನಾ ಬಣ್ಣಗಳ ಹಿಟ್ಟಿನ ಹುಡಿಗಳು ಪೌಡರಿನಂತೆ ಲೇಪಿತವಾಗಿದ್ದವು.

ಮೈಸೂರಿನ ಅತೀ ಪ್ರಸಿದ್ಧ ಹಿಟ್ಟಿನ ಅಂಗಡಿಯ ಮುಂದೆ ಎಂದಿನಂತೆ ಜನಸೇರಿದ್ದರು. ಇದು ಯಾವುದಕ್ಕೂ ಸಂಬಂಧ ಇಲ್ಲವೆಂಬಂತೆ ಹಾಲೇರಿ ನಾಗರಾಜ ಒಡೆಯರ್ ಅವರ ಹಿರಿಯ ಮಗ ಹಿಟ್ಟಿನಲ್ಲಿ ಒಂದಾಗಿ ಬಣ್ಣದ ವೇಷದವನಂತೆ ವ್ಯಾಪಾರ ನಡೆಸುತ್ತಿದ್ದ. ಆತನ ಮುಖದಲ್ಲಂತೂ ರಾಜಕಳೆ ಖಂಡಿತಾ ಎದ್ದು ಕಾಣುತ್ತಿತ್ತು. ನಾನು ಮನಸ್ಸಿನಲ್ಲೇ ಆತನಿಗೆ ವಂದಿಸಿ ಹೊರಟು ಬಂದೆ.

Advertisements